ಮಾಧ್ಯಮ ವಿವೇಕಕ್ಕೂ ಎನ್‍ಕೌಂಟರ್!

ತೆಲಂಗಾಣ ಪ್ರಕರಣ

ಕನ್ನಡ ಪತ್ರಿಕೆಗಳು ಈ ಘಟನೆಯನ್ನು ನಿರ್ವಹಿಸಿದ ರೀತಿ ದಿಗ್ಭ್ರಮೆಗೆ ಈಡು ಮಾಡುವಂಥದು ಮತ್ತು ವೃತ್ತಿಪರವಲ್ಲದ್ದು. ದುರಂತ ಎಂದರೆ, ಎರಡು ಪತ್ರಿಕೆಗಳನ್ನು ಬಿಟ್ಟರೆ ಎಲ್ಲ ಪತ್ರಿಕೆಗಳೂ ಶಂಕಿತರ ಹತ್ಯೆಯನ್ನು ಸಂಭ್ರಮಿಸಿದುವು. ಆದರೆ ಯಾವ ಇಂಗ್ಲಿಷ್ ಪತ್ರಿಕೆಯೂ ಕನ್ನಡ ಪತ್ರಿಕೆಗಳ ಹಾಗೆ ನಡೆದುಕೊಳ್ಳಲಿಲ್ಲ. ಅವು ಅತ್ಯಂತ ವೃತ್ತಿಪರವಾಗಿ ಈ ವಿದ್ಯಮಾನವನ್ನು ನಿಭಾಯಿಸಿದುವು.

– ಪದ್ಮರಾಜ ದಂಡಾವತಿ

ಸಮೂಹ ಸನ್ನಿ ಎಂದರೆ ಇದೇ ಇರಬೇಕು. ಅಲ್ಲಿ ವಿವೇಕ ಕೈ ಕೊಟ್ಟಿರುತ್ತದೆ ಅಥವಾ ಸುಷುಪ್ತಿಗೆ ಜಾರಿರುತ್ತದೆ. ಅಲ್ಲಿ ಎಲ್ಲರೂ ಒಂದೇ ರೀತಿ ಆಲೋಚಿಸುತ್ತ ಇರುತ್ತಾರೆ. ಭಿನ್ನವಾಗಿ ಯೋಚಿಸುವವರು ಅಲ್ಲಿ ಇರುವುದಿಲ್ಲ ಎಂದಲ್ಲ. ಅವರ ಧ್ವನಿಯನ್ನು ಬಗ್ಗು ಬಡಿಯುವಷ್ಟು ಆಕ್ರಮಣಕಾರಿಯಾಗಿ ಬಹುಸಂಖ್ಯಾತರು ಯೋಚಿಸುತ್ತ ಇರುತ್ತಾರೆ ಅಥವಾ ವರ್ತಿಸುತ್ತ ಇರುತ್ತಾರೆ. ಒಂದು ಚಿಕ್ಕ ಭಿನ್ನಾಭಿಪ್ರಾಯವನ್ನೂ ಅವರು ಸಹಿಸುವುದಿಲ್ಲ. ಆದರೆ, ಆ ಚಿಕ್ಕ ಭಿನ್ನಾಭಿಪ್ರಾಯವೇ ಸತ್ಯವನ್ನು ಉಸುರುತ್ತ ಇರುತ್ತದೆ.

ಇತ್ತೀಚೆಗೆ ಹೈದರಾಬಾದಿನಲ್ಲಿ ನಮ್ಮ “ವೀರ ಕನ್ನಡಿಗ” ಪೊಲೀಸ್ ಅಧಿಕಾರಿ ವಿ.ಎಸ್.ಸಜ್ಜನರ್ ಅವರ ನೇತೃತ್ವದ ಹತ್ತು ಜನರ ಪೊಲೀಸ್ ತಂಡ ನಾಲ್ವರು ಅತ್ಯಾಚಾರಿ ಆರೋಪಿಗಳನ್ನು ಗುಂಡಿಟ್ಟು ಹೊಡೆದು ಉರುಳಿಸಿದಾಗ, “ಪೊಲೀಸರು ಎಷ್ಟು ಬೇಗ, ಯಾವ ಕಷ್ಟವೂ ಇಲ್ಲದೇ ನ್ಯಾಯ ನಿರ್ಣಯ ಮಾಡಿಬಿಟ್ಟರಲ್ಲ” ಎಂದು ಆಶ್ಚರ್ಯವಾಯಿತು. ಅವರ ಕೃತ್ಯವನ್ನು ಸಾಮಾನ್ಯ ಜನರು ಮಾತ್ರವಲ್ಲ, ಶಾಸನಕರ್ತರಾದ ಸಂಸದರೂ ಶ್ಲಾಘಿಸಿದಾಗ ಕಳವಳವೂ ಆಯಿತು.

ಒಂದು ಎನ್‍ಕೌಂಟರು ಜನರಲ್ಲಿ ಈ ಬಗೆಯ ಸಂಭ್ರಮವನ್ನು, ಹರ್ಷವನ್ನು ಮೂಡಿಸಿದ್ದು ನನಗೆ ನೆನಪು ಇಲ್ಲ. ಜನರು ಸಿಹಿ ಹಂಚಿದ್ದೇನು? ಪೊಲೀಸರ ಮೇಲೆ ಪುಷ್ಪವೃಷ್ಟಿ ಮಾಡಿದ್ದೇನು? ಬೀದಿ ಬೀದಿಗಳಲ್ಲಿ ಕುಣಿದಾಡಿದ್ದೇನು…? ಅವರು ಹಾಗೆ ಮಾಡಲು ಕಾರಣವಿತ್ತು. ಸರಿಯಾಗಿ ಎಂಟು ದಿನಗಳ ಹಿಂದೆ ತೆಲಂಗಾಣದ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪಶುಸದೃಶವಾಗಿತ್ತು. ಏಳು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾಳ ಅತ್ಯಾಚಾರದಲ್ಲಿಯೂ ಇದೇ ರೀತಿ ಕಾಮುಕರು ಅಮಾನುಷವಾಗಿ ವರ್ತಿಸಿದ್ದರು. ಆ ಅಪರಾಧಿಗಳಿಗೆ ಇನ್ನೂ ಗಲ್ಲು ಶಿಕ್ಷೆ ಜಾರಿಯಾಗಿಲ್ಲ ಎಂಬುದೂ ಎನ್‍ಕೌಂಟರ್ ಸಂಭ್ರಮಿಸುವ ಜನರ ಮನಸ್ಸಿನಲ್ಲಿ ಇತ್ತು.

ಆದರೆ, ದಿಶಾಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸಿಕ್ಕವರು ಇನ್ನೂ “ಶಂಕಿತ”ರಾಗಿದ್ದರೇ ಹೊರತು ಅವರು “ಆರೋಪಿ”ಗಳೂ ಆಗಿರಲಿಲ್ಲ. ಅವರನ್ನು ಅತ್ಯಾಚಾರ ನಡೆಯಿತು ಎನ್ನಲಾದ ಸ್ಥಳಕ್ಕೆ, ನಸುಕಿನ ಮೂರು ಗಂಟೆ ಸಮಯದಲ್ಲಿ ಹತ್ತು ಜನ ಪೊಲೀಸರು ಕರೆದುಕೊಂಡು ಹೋಗಿ, ಅಪರಾಧವನ್ನು ಪುನಃ ಸೃಷ್ಟಿ ಮಾಡುವಾಗ, ಅವರ ಕೈಯಲ್ಲಿ ಇದ್ದ ಶಸ್ತ್ರಗಳನ್ನು ಶಂಕಿತರು ಕಿತ್ತುಕೊಂಡು ಕಲ್ಲು ಮತ್ತು ಬಡಿಗೆಯಿಂದ ಹೊಡೆದಾಗ ಪೊಲೀಸರು ಪ್ರತಿಯಾಗಿ ಎನ್‍ಕೌಂಟರ್ ಮಾಡಿದರು ಎಂದು ಪತ್ರಿಕೆಗಳು ವರದಿ ಮಾಡಿವೆ. ನಸುಕಿನ ಮೂರು ಗಂಟೆಯಲ್ಲಿ ಪೊಲೀಸರು ಅಪರಾಧ ಹೇಗೆ ನಡೆಯಿತು ಎಂದು ತಿಳಿಯಲು ಏಕೆ ಹೋದರು ಎಂಬುದನ್ನು ಈಗ ಯಾರೂ ಪ್ರಶ್ನೆ ಮಾಡುತ್ತಿಲ್ಲ. ಅದಕ್ಕೆ ಸೈಬರಾಬಾದ್ ಪೊಲೀಸರು ಕೊಟ್ಟಿರುವ ಸಮಜಾಯಿಷಿ ಹೊಣೆಗೇಡಿತನದ್ದಾಗಿದೆ. ಈ ನಡುವೆ ಎನ್‍ಕೌಂಟರ್‍ಅನ್ನು ಯಾರಾದರೂ ಪ್ರಶ್ನೆ ಮಾಡಿದರೆ ಅವರೇ ದಿಶಾಳ ಮೇಲೆ ಅತ್ಯಾಚಾರ ಮಾಡಿದವರು ಎನ್ನುವಂತೆ ಅವರ ಮೇಲೆ “ದಾಳಿ” ನಡೆಯುತ್ತಿದೆ; ಯಾವ ಲಂಗು ಲಗಾಮೂ ಇಲ್ಲದ ಸಾಮಾಜಿಕ ಮಾಧ್ಯಮಗಳಲ್ಲಿ ಅವರ “ತಿಥಿ” ಆಗುತ್ತಿದೆ.

ಸಾಮಾಜಿಕ ಮಾಧ್ಯಮಗಳು ವರ್ತಿಸುವುದೇ ಹಾಗೆ. ಆದರೆ, ಕನ್ನಡ ಪತ್ರಿಕೆಗಳು ಈ ಘಟನೆಯನ್ನು ನಿರ್ವಹಿಸಿದ ರೀತಿ ದಿಗ್ಭ್ರಮೆಗೆ ಈಡು ಮಾಡುವಂಥದು ಮತ್ತು ವೃತ್ತಿಪರವಲ್ಲದ್ದು. ದುರಂತ ಎಂದರೆ, ಎರಡು ಪತ್ರಿಕೆಗಳನ್ನು ಬಿಟ್ಟರೆ ಎಲ್ಲ ಪತ್ರಿಕೆಗಳೂ ಶಂಕಿತರ ಹತ್ಯೆಯನ್ನು ಸಂಭ್ರಮಿಸಿದುವು. ಅವರು ಇನ್ನೂ ಶಂಕಿತರು, ಆರೋಪಿಗಳು ಕೂಡ ಆಗಿಲ್ಲ ಎಂಬುದನ್ನು ತಿಳಿಯದೇ ಅಥವಾ ತಿಳಿದೂ ಅವರು “ಕೀಚಕರು”, “ದುರ್ಜನರು” ಎಂದು ತಮ್ಮ ಶೀರ್ಷಿಕೆಗಳಲ್ಲಿ ಬರೆದುವು. ಆದರೆ, ಒಂದು ಸಮಾಧಾನ ಎಂದರೆ ಯಾವ ಇಂಗ್ಲಿಷ್ ಪತ್ರಿಕೆಯೂ ಕನ್ನಡ ಪತ್ರಿಕೆಗಳ ಹಾಗೆ ನಡೆದುಕೊಳ್ಳಲಿಲ್ಲ ಎನ್ನುವುದು. ಅವು ಅತ್ಯಂತ ವೃತ್ತಿಪರವಾಗಿ ಈ ವಿದ್ಯಮಾನವನ್ನು ನಿಭಾಯಿಸಿದುವು ಹಾಗೂ ಎನ್‍ಕೌಂಟರ್ ಅನ್ನು ಅತ್ಯಂತ ಉಗ್ರವಾದ ಭಾಷೆಯಲ್ಲಿ ಖಂಡಿಸಿದುವು.

ದುರ್ಜನರು, ಕೀಚಕರು ಎಂದು ನ್ಯಾಯ ನಿರ್ಣಯ ಮಾಡಿ ಅವರನ್ನು ನೇಣಿಗೆ ಹಾಕುವ ಕೆಲಸವನ್ನೂ ತಾವೇ ವಹಿಸಿಕೊಂಡುವು. ಇದು ಒಂದು ರೀತಿ ಸೈಬರಾಬಾದ್ ಪೊಲೀಸರು ಮಾಡಿದ ಎನ್‍ಕೌಂಟರ್‍ನಂತೆಯೇ ಇತ್ತು. ಅದು ಒಂದು ಬಗೆಯ ಹತ್ಯೆ. ಇದು ಇನ್ನೊಂದು ಬಗೆಯ ಹತ್ಯೆ.

ಕನ್ನಡದಲ್ಲಿ “ವಾರ್ತಾ ಭಾರತಿ” ಪತ್ರಿಕೆಯ ಸಂಪಾದಕೀಯ ಮಾತ್ರ ಇಂಗ್ಲಿಷ್ ಪತ್ರಿಕೆಗಳ ಸಂಪಾದಕೀಯ ಮಟ್ಟವನ್ನು ಮುಟ್ಟುವಂಥದಾಗಿತ್ತು. ಉಳಿದ ಬಹುಪಾಲು ಪತ್ರಿಕೆಗಳಲ್ಲಿ ಒಂದೋ ಎರಡೋ ಸಾಲಿನಲ್ಲಿ ನ್ಯಾಯದಾನದ ವಿಳಂಬದಿಂದಾಗಿ ಇಂಥ ಘಟನೆಗಳು ನಡೆಯುತ್ತಿವೆ ಎಂದು ತೇಲಿಸಲಾಗಿತ್ತು. ಕನ್ನಡದ ಯಾವ ಪತ್ರಿಕೆಯೂ “ಇದೊಂದು ಕಗ್ಗೊಲೆ” ಎಂದು ನಿಷ್ಠುರವಾಗಿ ಬರೆಯಲಿಲ್ಲ. ಆ ವಿವರಕ್ಕೆ ಹೋಗುವ ಮೊದಲು ಕನ್ನಡ ಪತ್ರಿಕೆಗಳು ಈ ಘಟನೆಗೆ ಕೊಟ್ಟ ಶೀರ್ಷಿಕೆಗಳನ್ನು ನೋಡೋಣ:

ಕೀಚಕ ಸಂಹಾರ (ಕನ್ನಡ ಪ್ರಭ), ಕೀಚಕರ ಎನ್‍ಕೌಂಟರ್ (ಉದಯವಾಣಿ), ಕೀಚಕರ ಮಾರಣ ಹೋಮ (ಸಂಯುಕ್ತ ಕರ್ನಾಟಕ), ಸಜ್ಜನರಿಂದ ದುರ್ಜನರ ಸಂಹಾರ (ವಿಜಯವಾಣಿ, ಹೊಸ ದಿಗಂತ ಮತ್ತು ವಿಶ್ವವಾಣಿ), ಎನ್‍ಕೌಂಟರ್ ನ್ಯಾಯ (ವಿಜಯ ಕರ್ನಾಟಕ), ಎನ್‍ಕೌಂಟರ್ “ನ್ಯಾಯ” (ಪ್ರಜಾವಾಣಿ), ಆರೋಪಿಗಳ ಎನ್‍ಕೌಂಟರ್ (ವಾರ್ತಾ ಭಾರತಿ). ಇಲ್ಲಿ ಸಜ್ಜನರು ಯಾರು ಎಂದರೆ ಪೊಲೀಸ್ ಆಯುಕ್ತ ವಿ.ಎಸ್.ಸಜ್ಜನ ಅವರು. ದುರ್ಜನರು ಯಾರು ಎಂದರೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಶಂಕಿತರು. ಶೀರ್ಷಿಕೆಯನ್ನು ಪನ್ ಮಾಡುವುದರಲ್ಲಿ ತಮ್ಮ ಪ್ರತಿಭೆ ತೋರಿಸುತ್ತಿರುವ ಕನ್ನಡ ಪತ್ರಿಕೆಗಳಿಗೆ ಸಜ್ಜನ ಹೆಸರು ಅನಾಯಾಸವಾಗಿ ಸಿಕ್ಕಿತು. ಇನ್ನು ಮೂರು ಪತ್ರಿಕೆಗಳು ಕೀಚಕನ ಮೊರೆ ಹೋದುವು! “ವಾರ್ತಾ ಭಾರತಿ” ಪತ್ರಿಕೆ ಕೊಟ್ಟ ಶೀರ್ಷಿಕೆಯಲ್ಲಿ ಈ ಯಾವ ಕಸರತ್ತೂ ಇರಲಿಲ್ಲ.

“ಪ್ರಜಾವಾಣಿ” ಮತ್ತು “ವಾರ್ತಾ ಭಾರತಿ” ಹೊರತು ಪಡಿಸಿದರೆ ಉಳಿದ ಎಲ್ಲ ಪತ್ರಿಕೆಗಳು ಪೊಲೀಸರ ಹಾಗೆಯೇ “ನ್ಯಾಯ” ತೀರ್ಮಾನ ಮಾಡಿ, ಹತ್ಯೆಯಾದವರು ದುರ್ಜನರು, ಕೀಚಕರು ಎಂದು ಹಣೆಪಟ್ಟಿ ಹಚ್ಚಿಬಿಟ್ಟಿವೆ. ಅವರು ದುರ್ಜನರು, ಕೀಚಕರು ಎಂದು ನ್ಯಾಯ ನಿರ್ಣಯ ಮಾಡಿ ಅವರನ್ನು ನೇಣಿಗೆ ಹಾಕುವ ಕೆಲಸವನ್ನೂ ತಾವೇ ವಹಿಸಿಕೊಂಡುವು. ಇದು ಒಂದು ರೀತಿ ಸೈಬರಾಬಾದ್ ಪೊಲೀಸರು ಮಾಡಿದ ಎನ್‍ಕೌಂಟರ್‍ನಂತೆಯೇ ಇತ್ತು. ಅದು ಒಂದು ಬಗೆಯ ಹತ್ಯೆ. ಇದು ಇನ್ನೊಂದು ಬಗೆಯ ಹತ್ಯೆ.

“ಪ್ರಜಾವಾಣಿ” ಮತ್ತು “ವಾರ್ತಾ ಭಾರತಿ” ಹೊರತು ಪಡಿಸಿ ಉಳಿದ ಎಲ್ಲ ಕನ್ನಡ ಪತ್ರಿಕೆಗಳು, ತೀರ್ಮಾನ ಕೊಡುವ ಟೀವಿ ವಾಹಿನಿಗಳ ಹಾಗೆಯೇ ನಡೆದುಕೊಂಡುವು.

ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡ ಪೊಲೀಸರಿಗೆ ಖಂಡನೆ ಬದಲು ಇಂಥ ಪ್ರಶಂಸೆ ಸಿಗಲು, ಅವರ ಮೇಲೆ ಪುಷ್ಪವೃಷ್ಟಿಯಾಗಲು ಮಾಧ್ಯಮಗಳ ಅತಿರೇಕದ, ವಿವೇಕ ರಹಿತ ಅಟ್ಟಹಾಸವೇ ಕಾರಣವಾಯಿತು. “ಪ್ರಜಾವಾಣಿ” ಪತ್ರಿಕೆಯು ಎನ್‍ಕೌಂಟರ್ “ನ್ಯಾಯ” ಎಂಬ ಶೀರ್ಷಿಕೆ ಕೊಡುವಾಗ ನ್ಯಾಯದ ಮೇಲೆ ಉದ್ಧರಣೆ ಚಿಹ್ನೆ ಹಾಕಿರುವುದು ಅದು ಸರಿಯಾದ ನ್ಯಾಯವಲ್ಲ ಎಂಬುದನ್ನು ಧ್ವನಿಸಿದರೆ, “ವಿಜಯ ಕರ್ನಾಟಕ”ವು ನ್ಯಾಯ ಶಬ್ದಕ್ಕೆ ಉದ್ಧರಣೆ ಚಿಹ್ನೆ ಹಾಕಿಲ್ಲವಾದ್ದರಿಂದ ಎನ್‍ಕೌಂಟರ್ ಅನ್ನುವುದು ಕೂಡ ಒಂದು ನ್ಯಾಯ ಎಂಬುದನ್ನು ಧ್ವನಿಸಿತು. ಅಂದರೆ “ಪ್ರಜಾವಾಣಿ” ಮತ್ತು “ವಾರ್ತಾ ಭಾರತಿ” ಹೊರತು ಪಡಿಸಿ ಉಳಿದ ಎಲ್ಲ ಕನ್ನಡ ಪತ್ರಿಕೆಗಳು, ತೀರ್ಮಾನ ಕೊಡುವ ಟೀವಿ ವಾಹಿನಿಗಳ ಹಾಗೆಯೇ ನಡೆದುಕೊಂಡುವು.

ದೊಡ್ಡ ದೊಡ್ಡ ಅಕ್ಷರಗಳ ಇಂಥ ಶೀರ್ಷಿಕೆಗಳ ಜೊತೆಗೆ ಕೊಟ್ಟ ಉಪ ಶೀರ್ಷಿಕೆಗಳಲ್ಲಿಯೂ, “ರೇಪಿಸ್ಟ್”, “ಹಂತಕರ ಎನ್‍ಕೌಂಟರ್” (ವಿಜಯವಾಣಿ), “ರಕ್ಕಸರ ಕೊಂದ ಆರಕ್ಷಕರಿಗೆ ಬಹುಪರಾಕ್” (ಉದಯವಾಣಿ), “ದಿಶಾ ಅತ್ಯಾಚಾರಿಗಳ ಫಿನಿಶ್” (ವಿಜಯ ಕರ್ನಾಟಕ), “ಘೋರ ಪಾತಕಿಗಳಿಗೆ ನರಕದ ಬಾಗಿಲು ತೋರಿಸಿದ ಪೊಲೀಸರು” (ಸಂಯುಕ್ತ ಕರ್ನಾಟಕ) ಮುಂತಾದ “ನ್ಯಾಯ ನಿರ್ಣಯ”ಗಳೇ ಇವೆ. ಇಂಥ ಶೀರ್ಷಿಕೆ ಕೊಡುವ ಮೂಲಕ ಪತ್ರಿಕೆಗಳು, ಒಂದು ಘಟನೆಯನ್ನು ದೂರ ನಿಂತು, ನಿರ್ಭಾವುಕವಾಗಿ ಪರಾಮರ್ಶಿಸುವ ತಮ್ಮ ವಿವೇಕವನ್ನು ಕಳೆದುಕೊಂಡುವು. ಅದು ಅವುಗಳ ಸಂಪಾದಕೀಯದಲ್ಲಿಯೂ ಧ್ವನಿತವಾಯಿತು.

ನಿರ್ಭಯಾ ಮತ್ತು ದಿಶಾಳಂಥ ಅಮಾಯಕ ಹೆಣ್ಣು ಮಕ್ಕಳ ಮೇಲೆ ಇಂಥ ದಾರುಣ ದೌರ್ಜನ್ಯಗಳು ನಡೆದಾಗ ಜನರು ತಮ್ಮ ಮನೆಯ ಹೆಣ್ಣು ಮಕ್ಕಳ ಸುರಕ್ಷತೆ ಬಗೆಗೆ ಕಳವಳಗೊಂಡು ಬೀದಿಗೆ ಬರುವುದು ಸಹಜ. ಅವರು ಬೀದಿಗೆ ಬಂದು ಪ್ರತಿಭಟಿಸಿದಾಗ ಕಾನೂನು ಪರಿಪಾಲಕರಾದ ಪೊಲೀಸರು ಒತ್ತಡಕ್ಕೆ ಸಿಲುಕುವುದೂ ಸ್ವಾಭಾವಿಕ. ಸಾರ್ವಜನಿಕರ ಆಕ್ರೋಶವನ್ನು ತಣ್ಣಗೆ ಮಾಡಲು ಅವರು ಆರೋಪಿಗಳನ್ನು ಪತ್ತೆ ಮಾಡಲೇಬೇಕಾಗುತ್ತದೆ, ಅಥವಾ “ಪತ್ತೆ ಮಾಡಿದಂತೆ” ತೋರಿಸಬೇಕಾಗುತ್ತದೆ. ದಿಶಾಳ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದವರು ನಿಜವಾಗಿಯೂ ಅಪರಾಧಿಗಳೇ ಅಲ್ಲವೇ ಎಂಬುದು ವಿಚಾರಣೆಯಿಂದ ನಿರ್ಣಯವಾಗಬೇಕಿತ್ತು. ಅದು ಆಗುವ ಮೊದಲೇ ಅವರು ಹತರಾಗಿದ್ದಾರೆ; ಅಂದರೆ ಅವರಿಗೆ “ಶಿಕ್ಷೆ”ಯಾಗಿದೆ. ಅವರಿಗೆ “ಶಿಕ್ಷೆ”ಯಾಗಿದ್ದು ಅವರು ಅತ್ಯಾಚಾರ ಮಾಡಿದ್ದಕ್ಕಾಗಿಯೇ ಅಥವಾ ಓಡಿ ಪರಾರಿಯಾಗಲು ಯತ್ನಿಸಿದ್ದಕ್ಕಾಗಿಯೇ? ಅತ್ಯಾಚಾರಕ್ಕಾಗಿ ಅವರಿಗೆ “ಶಿಕ್ಷೆ”ಯಾಗಿದೆ ಎಂದು ಸಾರ್ವಜನಿಕರು ನಂಬಿರುವುದು ಅಮಾಯಕತನದಿಂದ ಕೂಡಿದೆ.ಯಾರು ಎಂಥ ಅಪರಾಧವನ್ನೇ ಮಾಡಲಿ ಅದನ್ನು ನಿರ್ಣಯಿಸಲು ದೇಶದಲ್ಲಿ ಕಾನೂನುಗಳು ಇವೆ. ಕೋರ್ಟುಗಳು ಇವೆ. ನೂರು ಅಪರಾಧಿಗಳು ಖುಲಾಸೆಯಾದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದು ನಮ್ಮ ಕಾನೂನಿನ ಆಶಯವಾಗಿದೆ. ಸೈಬರಾಬಾದ ಪೊಲೀಸರು ಹತ್ಯೆ ಮಾಡಿದವರು ಅಪರಾಧಿಗಳೇ, ನಿರಪರಾಧಿಗಳೇ? ನಿರ್ಣಯಿಸಬೇಕಾದವರು ಯಾರು? ಪೊಲೀಸರೇ? ಅಲ್ಲವಲ್ಲ!

ಕನ್ನಡದಲ್ಲಿ “ವಾರ್ತಾ ಭಾರತಿ”ಯೂ ಈ ಪ್ರಶ್ನೆಯನ್ನು ಕೇಳಿತು ಎಂಬುದು ಗಮನಾರ್ಹ. “ನ್ಯಾಯಾಂಗ ನಿರ್ಣಯಕ್ಕೆ ಹೊರತಾದ ಯಾವ ಹತ್ಯೆಯೂ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ನ್ಯಾಯವನ್ನು ಕೊಡಲಾರದು.

ಈ ತಿಳಿವಳಿಕೆಯನ್ನು ಇಂಗ್ಲಿಷ್ ಪತ್ರಿಕೆಗಳು ತೋರಿಸಿದುವು. ಅವು ಅತ್ಯಂತ ಜವಾಬ್ದಾರಿಯಿಂದ, ಸಾರ್ವಜನಿಕರ ಆಕ್ರೋಶದಿಂದ ಒಂದಿಷ್ಟೂ ವಿಚಲಿತವಾಗದೇ ಅಥವಾ ಪ್ರಭಾವಿತವಾಗದೇ ಈ ಘಟನೆಯನ್ನು ವರದಿ ಮಾಡಿದುವು. ಅವು ಕೊಟ್ಟ ಶೀರ್ಷಿಕೆಗಳನ್ನು ನೋಡೋಣ:Cops kill four; all women now safe (Bangalore Mirror), Hyderabad rape accused shot dead by police in encounter (Deccan Herald), 4 accused in Disha’s murder killed near Hyderabad (The Hindu), Disha killers “encounter’ justice (Deccan Chronicle), Four accused of raping vet snatched 2 guns from 10 cops shot dead: Police (Times of India), Guns settle Hyderabad vet rape-murder case for good (Indian Express)….. ಹೀಗೆ ಬಹಳ ಎಚ್ಚರದ, ಘಟನೆಯಿಂದ ದೂರ ನಿಂತ, ಪೊಲೀಸ್ ಕ್ರಮವನ್ನು ಬೆಂಬಲಿಸದ, ಆರೋಪಿಗಳ ಬಗೆಗೆ ಯಾವುದೇ ನ್ಯಾಯ ನಿರ್ಣಯಕ್ಕೆ ಬಾರದ ಇಂಗ್ಲಿಷ್ ಪತ್ರಿಕೆಗಳು ತಮ್ಮ ಶೀರ್ಷಿಕೆಗಳಲ್ಲಿ ಮಾತ್ರವಲ್ಲದೇ ತಮ್ಮ ಸಂಪಾದಕೀಯಗಳಲ್ಲಿಯೂ ಅದೇ ಎಚ್ಚರವನ್ನು, ವಿವೇಕವನ್ನು ತೋರಿಸಿದುವು.

“ಇಂಡಿಯನ್ ಎಕ್ಸ್‍ಪ್ರೆಸ್” ಪತ್ರಿಕೆ ತನ್ನ ಸಂಪಾದಕೀಯದಲ್ಲಿ, “ಹತರಾದ ನಾಲ್ವರು ಕೇವಲ ಶಂಕಿತರು. ಅವರು ಆರೋಪಿತರೂ ಅಲ್ಲ” ಎಂದು ಬರೆದು “ಒಂದು ವೇಳೆ ಈ ನಾಲ್ವರು ಸಮಾಜದ ಕೆಳಸ್ತರದ ವ್ಯಕ್ತಿಗಳಾಗದೇ ಹೋಗಿದ್ದರೆ ಪೊಲೀಸರು ಅವರನ್ನು ಎನ್‍ಕೌಂಟರ್ ಮಾಡುತ್ತಿದ್ದರೇ” ಎಂಬ ಪ್ರಶ್ನೆಯನ್ನೂ ಎತ್ತಿತು. ಕನ್ನಡದಲ್ಲಿ “ವಾರ್ತಾ ಭಾರತಿ”ಯೂ ಈ ಪ್ರಶ್ನೆಯನ್ನು ಕೇಳಿತು ಎಂಬುದು ಗಮನಾರ್ಹ. “ನ್ಯಾಯಾಂಗ ನಿರ್ಣಯಕ್ಕೆ ಹೊರತಾದ ಯಾವ ಹತ್ಯೆಯೂ ಅತ್ಯಾಚಾರಕ್ಕೆ ಒಳಗಾದ ಮಹಿಳೆಗೆ ನ್ಯಾಯವನ್ನು ಕೊಡಲಾರದು. ಇಂಥ ನ್ಯಾಯ ನಿರ್ಣಯ ಕಾನೂನಿನ ಮೇಲೆ ನಡೆದ ಇನ್ನೊಂದು ರೀತಿಯ ಅತ್ಯಾಚಾರ ಹಾಗೂ ಈಗಾಗಲೇ ಅಸಮರ್ಪಕವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗೆ ತನ್ನ ಲೋಪಗಳನ್ನು ಮುಚ್ಚಿಕೊಳ್ಳಲು ತೀರಾ ಆಕರ್ಷಕ ಎನಿಸುವಂಥದು” ಎಂದು ಎಕ್ಸ್‍ಪ್ರೆಸ್ ಬರೆಯಿತು.

“ಡೆಕ್ಕನ್‍ಹೆರಾಲ್ಡ್” ಪತ್ರಿಕೆ, “ಇದು ಒಂದು ನಿರ್ದಯ ಕೊಲೆ (cold blooded murder).. ಈ ಪ್ರಕರಣವನ್ನು ತನಿಖೆ ಮಾಡಬೇಕಿದ್ದ ಪೊಲೀಸರು ಇಲ್ಲಿ ನ್ಯಾಯಾಧೀಶರಂತೆ, ನ್ಯಾಯ ಪರಾಮರ್ಶೆ ಮಾಡುವವರಂತೆ ಹಾಗೂ ನೇಣಿಗೆ ಹಾಕುವವರಂತೆ ನಡೆದುಕೊಂಡಿದ್ದಾರೆ. ಇದು ನಾಗರಿಕ ಸಮಾಜದ ವರ್ತನೆಯಲ್ಲ. ಬದಲಿಗೆ ಅನಾಗರಿಕ ಉದ್ವೇಗ (primitive passaion)” ಎಂದು ಟೀಕಿಸಿತು. “ಡೆಕ್ಕನ್ ಕ್ರಾನಿಕಲ್” ಪತ್ರಿಕೆ ಕೂಡ “ಇದು ನಿರ್ದಯ ಕೊಲೆ (cold blooded murder)” ಎಂದೇ ಅಭಿಪ್ರಾಯ ಪಟ್ಟರೆ, “ಟೈಂಸ್ ಆಫ್ ಇಂಡಿಯಾ” ಪತ್ರಿಕೆ, “ಇದು ಕಾನೂನಿನ ಆಡಳಿತ ಕೊನೆಗೊಂಡುದರ ನಿದರ್ಶನ” ಎಂದು ಖಂಡಿಸಿತು. ಅದೇ ಪತ್ರಿಕೆ, “ಇಂಥ ಎನ್‍ಕೌಂಟರ್‍ಗಳನ್ನು ಜನರು ಸಂಭ್ರಮಿಸಬಾರದು” ಎಂದು ಎಚ್ಚರಿಸಿತು.

ಸಂವಿಧಾನದ ವಾಕ್‍ಸ್ವಾತಂತ್ರ್ಯದ ಪರಿಚ್ಛೇದದ ಅಡಿ ಸಿಕ್ಕ ಪರಮಾಧಿಕಾರ. ಈ ವಿಮರ್ಶೆಯ ಪರಮಾಧಿಕಾರವನ್ನು ಮಾಧ್ಯಮಗಳು ಕಳೆದುಕೊಳ್ಳುತ್ತಿವೆಯೇ ಅಥವಾ ಅವು ಕೂಡ ಸಮೂಹ ಸನ್ನಿಗೆ ಒಳಗಾಗುತ್ತಿವೆಯೇ?

“ದಿ ಹಿಂದೂ” ಪತ್ರಿಕೆಯು, “ಇದು ಪ್ರತೀಕಾರದ ನ್ಯಾಯ. ಮತ್ತು ಇಂಥ ನ್ಯಾಯಗಳು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಇನ್ನಷ್ಟು ಕುಸಿಯಲು ಕಾರಣವಾಗುತ್ತವೆ” ಎಂದು ಕಳವಳ ವ್ಯಕ್ತಪಡಿಸಿತು. “ಬೆಂಗಳೂರು ಮಿರರ್” ಪತ್ರಿಕೆಯ ಶೀರ್ಷಿಕೆ ಅತ್ಯಂತ ಧ್ವನಿಪೂರ್ಣವಾಗಿತ್ತು ಮತ್ತು ಪೊಲೀಸರನ್ನು ಹಾಗೂ ಎನ್‍ಕೌಂಟರನ್ನು ಸಂಭ್ರಮಿಸುವವರನ್ನು ಹಂಗಿಸುವಂತೆ ಇತ್ತು:Cops kill four; all women now safe.. ನಾಲ್ವರನ್ನು ಕೊಂದರೆ ಎಲ್ಲ ಮಹಿಳೆಯರು ಸುರಕ್ಷಿತವಾಗಿ ಇರುತ್ತಾರೆಯೇ ಎಂಬ ಪ್ರಶ್ನೆಯೂ ಅಲ್ಲಿ ಇತ್ತು.

ನಮ್ಮ ನ್ಯಾಯದಾನ ವ್ಯವಸ್ಥೆಯಲ್ಲಿ ಅನೇಕ ದೋಷಗಳು ಇವೆ. ಆದರೆ, ನಮ್ಮ ಸಂವಿಧಾನವು ಯಾವ ಅಧಿಕಾರವೂ ಕೇವಲ ಒಂದೇ ಕಡೆ ಕೇಂದ್ರೀಕೃತವಾಗಿರಬಾರದು ಎಂದು ಮೂರು ಸ್ವತಂತ್ರ ಅಂಗಗಳನ್ನು ಸೃಷ್ಟಿಸಿದೆ. ಒಂದು ಇನ್ನೊಂದರ ಪರಾಮರ್ಶೆಗೆ ಒಳಪಡುವ ವ್ಯವಸ್ಥೆಯನ್ನೂ ಅದು ನಿರ್ಮಿಸಿದೆ. ಈ ಎಲ್ಲ ಮೂರು ಅಂಗಗಳ ಕಾರ್ಯವೈಖರಿಯನ್ನು ಒರೆಗೆ ಹಚ್ಚುವ ಅಧಿಕಾರ ಮಾಧ್ಯಮಗಳಿಗೆ ಇದೆ. ಅದು ಸಂವಿಧಾನದ ವಾಕ್‍ಸ್ವಾತಂತ್ರ್ಯದ ಪರಿಚ್ಛೇದದ ಅಡಿ ಸಿಕ್ಕ ಪರಮಾಧಿಕಾರ. ಈ ವಿಮರ್ಶೆಯ ಪರಮಾಧಿಕಾರವನ್ನು ಮಾಧ್ಯಮಗಳು ಕಳೆದುಕೊಳ್ಳುತ್ತಿವೆಯೇ ಅಥವಾ ಅವು ಕೂಡ ಸಮೂಹ ಸನ್ನಿಗೆ ಒಳಗಾಗುತ್ತಿವೆಯೇ? ಆದಿಮ ಉದ್ವೇಗದಲ್ಲಿ ತೇಲಿ ಹೋಗುತ್ತಿವೆಯೇ? ಬಹುತೇಕ ಕನ್ನಡ ಪತ್ರಿಕೆಗಳನ್ನು ಗಮನಿಸಿದರೆ ಹಾಗೆಯೇ ಅನಿಸುತ್ತದೆ. ಇದು ಇನ್ನೊಂದು ವ್ಯವಸ್ಥೆಯ ಕುಸಿತದ ಸೂಚಕವೇ? ಅಲ್ಲ ಎನ್ನಲು ಧೈರ್ಯ ಸಾಲುವುದಿಲ್ಲ.

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯ ನಿರ್ವಾಹಕ ಸಂಪಾದಕರು ಮತ್ತು ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾಲಯದ ಸಂದರ್ಶಕ ಅಧ್ಯಾಪಕರು. ಅವರ ಕೃತಿಗಳು: ನಾಲ್ಕನೇ ಆಯಾಮ (ಆರು ಸಂಪುಟಗಳು), ಅವಲೋಕನ, ಆರಂಭ, ಗೊಮ್ಮಟ, ಚೌಕಟ್ಟಿನಾಚೆ, ಹೆಜ್ಜೆ ಮೂಡಿಸಿದ ಹಾದಿ, ಪತ್ರಿಕಾ ಭಾಷೆ, ರಿಪೋರ್ಟಿಂಗ್, ಸುರಂಗದ ಕತ್ತಲೆ… ಮುಂತಾಗಿ.

Leave a Reply

Your email address will not be published.