ಮಾಧ್ಯಮ ಸ್ವಾತಂತ್ರ್ಯ ಕಸಿದುಕೊಂಡವರಾರು?

ವ್ಯವಸ್ಥೆಗೆ ಮತ್ತು ಮಾಧ್ಯಮಕ್ಕೆ ನಂಟು ಹೆಚ್ಚಾಗುತ್ತಿದ್ದು, ಮಾಧ್ಯಮದ ಪಾರದರ್ಶಕತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ, ಸಾಹಿತಿ ಮಾರ್ಕ್ ಟ್ವೈನ್ ಹೇಳಿದಂತೆ, `ಇಂದು ಪತ್ರಿಕೆಗಳನ್ನು ಓದದವರು ಮಾಹಿತಿ ವಂಚಿತರಾದರೆ, ಓದುವವರು ತಪ್ಪು ಮಾಹಿತಿ ಮಾತ್ರ ಪಡೆಯುತ್ತಾರೆ.’

-ಡಾ.ಜ್ಯೋತಿ

ಪ್ರಾಸ್ತಾವಿಕವಾಗಿ, ಅಮೆರಿಕಾದ ಮಾಜಿ ಅಧ್ಯಕ್ಷ ಮತ್ತು ತತ್ವಶಾಸ್ತ್ರಜ್ಞ ಥಾಮಸ್ ಜೆಫರ್ಸನ್ ಹಿಂದೊಮ್ಮೆ ಹೇಳಿದ ಮಾತು- `ನಾನು ಪತ್ರಿಕೆಗಳನ್ನು ಬಿಟ್ಟು ಪುಸ್ತಕಗಳನ್ನು ಓದುವುದನ್ನು ಆರಂಭಿಸಿದಂದಿನಿಂದ ಹೆಚ್ಚು ಸಂತೋಷವಾಗಿದ್ದೇನೆ’, ಬಹುಶಃ, ವರ್ತಮಾನದ ಮಾಧ್ಯಮಗಳಿಗೆ ಹೆಚ್ಚು ಅನ್ವಯಿಸಬಹುದೆಂದು ಕಾಣಿಸುತ್ತದೆ. ಯಾಕೆಂದರೆ, ಇಂದಿನ ಬಹುತೇಕ ಸುದ್ದಿ ಮಾಧ್ಯಮಗಳು ತಮ್ಮ ಪ್ರಾಥಮಿಕ ಜವಾಬ್ದಾರಿಯಾದ, ಸಾಮಾಜಿಕ ಕಳಕಳಿಯ ವಿಚಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ವಿವಿಧ ಆಯಾಮಗಳಿಂದ ಚರ್ಚಿಸಿ, ಹೊಸ ಸಾಧ್ಯತೆಗಳನ್ನು ಪರಿಚಯಿಸುವುದರ ಬದಲಾಗಿ, ಜನರನ್ನು ಕಿಂಚಿತ್ತೂ ಆಲೋಚನೆಗೆ ಹಚ್ಚದ ಮನೋರಂಜನಾ `ಉದ್ಯಮ’ವಾಗಿ ಮಾರ್ಪಟ್ಟಿರುವುದು ದುರಾದೃಷ್ಟಕರ.

ಇನ್ನು ನೇರವಾಗಿ ಮಾಧ್ಯಮ ಸ್ವಾತಂತ್ರ್ಯದ ವಿಚಾರಕ್ಕೆ ಬಂದರೆ, ಇದೇ ಏಪ್ರಿಲ್ ನಲ್ಲಿ ಪ್ರಕಟವಾದ `2021ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ ವರದಿ’ಯ ಪ್ರಕಾರ ಒಟ್ಟು 180 ದೇಶಗಳ ಪಟ್ಟಿಯಲ್ಲಿ ಭಾರತ 142ನೇ ಸ್ಥಾನದಲ್ಲಿದೆ. ಇದರರ್ಥ, ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಬಹಳ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ವಾರ್ಷಿಕ ವರದಿಯನ್ನು, ಪ್ಯಾರಿಸ್ ಮೂಲದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಸಂಸ್ಥೆ, 2002ರಿಂದ ಪ್ರಕಟಿಸುತ್ತಾ ಬಂದಿದೆ. ಇಲ್ಲಿ ಶ್ರೇಯಾಂಕ ನಿರ್ಧರಿಸಲು ಪರಿಗಣಿಸಲ್ಪಡುವ ಮುಖ್ಯ ಅಂಶಗಳೆಂದರೆ, ಪತ್ರಕರ್ತರಿಗೆ ನಿರ್ಭೀತಿಯಿಂದ ವರದಿಮಾಡಲು ಆಯಾಯ ಪ್ರದೇಶದಲ್ಲಿರುವ ಪೂರಕ ಬಹುಸಂಸ್ಕೃತಿ, ಪಾರದರ್ಶಕ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳ ಲಭ್ಯತೆ.

ಈ ವರದಿ ಗಮನಿಸಿದಂತೆ, ಸದ್ಯ ಭಾರತದಲ್ಲಿ ಪತ್ರಕರ್ತರಿಗೆ ತಮ್ಮ ಕೆಲಸವನ್ನು ನಿಷ್ಪಕ್ಷವಾಗಿ ಹಾಗೂ ಪ್ರಾಮಾಣಿಕವಾಗಿ ಮಾಡಲು ಅನುಕೂಲಕರ  ವಾತಾವರಣವಿಲ್ಲ. ಇಲ್ಲಿ, ವ್ಯವಸ್ಥೆಯನ್ನು ಪ್ರಶ್ನಿಸುವ ಪತ್ರಕರ್ತರನ್ನು ರಾಷ್ಟ್ರ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ ಹಾಗು ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ. ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲೆ ಸಂಘಟಿತ ದ್ವೇಷ ಅಭಿಯಾನ ಆರಂಭವಾಗುತ್ತದೆ. ಇನ್ನು, ಮಹಿಳಾ ಪತ್ರಕರ್ತರಿಗೆ ಲೈಂಗಿಕ ದೌರ್ಜನ್ಯದ ಬೆದರಿಕೆಗಳೂ ಬರುತ್ತವೆ.

ಹಾಗಿದ್ದಲ್ಲಿ, ಭಾರತದ ವ್ಯವಸ್ಥೆಯಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಭದ್ರತೆಯಿಲ್ಲವೇ? ಖಂಡಿತವಾಗಿ, ಲಿಖಿತರೂಪದಲ್ಲಿದೆ ಎನ್ನಬಹುದು. ಮೂಲತಃ, ಭಾರತದ ಸಂವಿಧಾನದ 19ನೇ ಪರಿಚ್ಛೇದವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತ್ರಿಗೊಳಿಸುತ್ತದೆ. ಆದರೆ, ಕಾನೂನು ವ್ಯವಸ್ಥೆಯಲ್ಲಿ ಮಾತ್ರ ಮಾಧ್ಯಮ ಸ್ವಾತಂತ್ರ್ಯಕ್ಕೆ ಸ್ಪಷ್ಟವಾದ ರಕ್ಷಣೆಯಿಲ್ಲ. ಅದರಲ್ಲಿರುವ ಲೋಪದೋಷಗಳಿಂದಾಗಿಯೇ, ನಿರ್ಭೀತ ಪತ್ರಕರ್ತರು ವ್ಯವಸ್ಥೆಯ ಕಬಂಧ ಬಾಹುಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈ ಮೂಲಕ, ವ್ಯವಸ್ಥೆಯು ಪತ್ರಕರ್ತರನ್ನು ದೇಶದ ಭದ್ರತೆ, ಸಾರ್ವಭೌಮತೆ, ಮಾನಹಾನಿ ಅಥವಾ ಅಪರಾಧಕ್ಕೆ ಪ್ರಚೋದನೆಯ ಆಪಾದನೆಯಲ್ಲಿ ನಿರ್ಬಂಧಗಳನ್ನು ವಿಧಿಸುತ್ತದೆ. 

ಈ ನಡುವೆ, ವಿಶ್ವ ಮಾಧ್ಯಮ ಸ್ವಾತಂತ್ರ್ಯದ ಶ್ರೇಯಾಂಕದ ಕುರಿತಂತೆ ಸರ್ಕಾರದ ಅಧಿಕೃತ ಪ್ರತಿಕ್ರಿಯೆ ಹೀಗಿದೆ- `ಇದೊಂದು ಪಾಶ್ಚಾತ್ಯ ಮನಃಸ್ಥಿತಿಯ ಪಕ್ಷಪಾತ ಧೋರಣೆ ಹಾಗು ನಮ್ಮ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆಯಿಲ್ಲ, ಅಲ್ಲದೆ, ಸರ್ಕಾರದ ಸಾಕಷ್ಟು ಪಾರದರ್ಶಕ ಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಿಯಾಗಿ ಪ್ರಚಾರ ಪಡೆದಿಲ್ಲ.’

ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದೆಯೆನ್ನುವ ವಾಸ್ತವವನ್ನು ಒಪ್ಪಿಕೊಂಡು ಈ ಕುರಿತು ಒಂದಿಷ್ಟು ಪರಾಮರ್ಶೆ ಮಾಡಿದರೆ, ನಮ್ಮ ಮುಂದೆ ಸಾಕಷ್ಟು ಪ್ರಶ್ನೆಗಳು ಎದುರಾಗುತ್ತವೆ- ಇಂದು ಮಾಧ್ಯಮವೆನ್ನುವುದು `ಉದ್ಯಮ’ವಾಗಿರುವುದರಿಂದ ಈ ಸಮಸ್ಯೆ ಉದ್ಬವಿಸಿದೆಯೇ? ಪ್ರಸಕ್ತ, ಮಾಧ್ಯಮ ಮತ್ತು ವ್ಯವಸ್ಥೆಗೆ ಎಂತಹ ಸಂಬಂಧವಿದೆ? ಸಿದ್ಧಾಂತಕ್ಕೂ ಮತ್ತು ಮಾಧ್ಯಮಕ್ಕೂ ಇರುವ ನಂಟೇನು? ಮಾಧ್ಯಮ ಸ್ವಾತಂತ್ರ್ಯ ಮತ್ತು ಜಾಹೀರಾತುಗಳ ನಡುವಿನ   ಕೊಂಡಿಯೇನು?  ಈ ಸಮಸ್ಯೆಗಳಿಗೆ ಪತ್ರಕರ್ತರ ಸ್ಪಂದನೆಯೇನು? ಇಂತಹ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದರೆ, ವರ್ತಮಾನ ಕಾಲದ ಮಾಧ್ಯಮಗಳ ಸಂದಿಗ್ಧತೆ ಮತ್ತು ವಸ್ತುಸ್ಥಿತಿ ಅರ್ಥವಾಗುತ್ತದೆ.

`ಉದ್ಯಮವಾಗಿರುವ ಮಾಧ್ಯಮ

ವಾಸ್ತವಿಕ ಕಟುಸತ್ಯವೆಂದರೆ, ಮಾಧ್ಯಮವಿಂದು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿ ಉಳಿದಿಲ್ಲ. ಅದು, ಮೊದಲ ಮೂರು ಆಧಾರಸ್ತಂಭಗಳಂತೆ, `ಪ್ರಭು’ಗಳಿಗೆ ವಿಧೇಯರಾಗಿವೆಯೇ ಹೊರತು `ಪ್ರಜೆ’ಗಳಿಗಲ್ಲ. ಇಂದು ಮಾಧ್ಯಮವೆನ್ನುವುದು ವ್ಯವಸ್ಥೆಯ ಲೋಪದೋಷಗಳ ಕಣ್ಗಾವಲಿನ ಸಮಾಜಸೇವೆಯಾಗಿರದೆ, ಅಕ್ಷರಶಃ `ಉದ್ಯಮ’ವಾಗಿರುವುದರಿಂದ, ಉದ್ಯಮದ ಎಲ್ಲಾ ಅವಲಕ್ಷಣಗಳನ್ನು ನಾವಿಲ್ಲಿ ನೋಡಬಹುದು.

ಯಾವುದೇ ಉದ್ಯಮ ಬೆಳೆಯಲು, ಮಾರುಕಟ್ಟೆ ಪೈಪೋಟಿ ಎದುರಿಸಲು ಮತ್ತು ಏಕಸ್ವಾಮ್ಯ ಸ್ಥಾಪಿಸಲು ರಾಜಾಶ್ರಯ ಅಗತ್ಯ. ಅದಕ್ಕಾಗಿ, ಉದ್ಯಮದ ಹಿತದೃಷ್ಟಿಯಿಂದ ಆಳುವವರನ್ನು ಎದುರು ಹಾಕಿಕೊಳ್ಳದೆ ಸದಾ ಖುಷಿಯಲ್ಲಿಡಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ವಿಶೇಷ ಮಾಹಿತಿಗಳು, ಸಂದರ್ಶನಗಳು, ಆದ್ಯತೆಗಳು, ಸೌಲಭ್ಯಗಳು ಮತ್ತು ಜಾಹೀರಾತುಗಳು ಸಿಗುತ್ತವೆ. ಎದುರು ಹಾಕಿಕೊಂಡರೆ, ಆರ್ಥಿಕ ನಷ್ಟ ಮಾತ್ರವಲ್ಲ, ಆದಾಯ ತೆರಿಗೆ ದಾಳಿಗಳು ಅಥವಾ ಹಳೆಯ ಕೇಸುಗಳು ಪುನರ್ಜೀವ ಪಡೆಯುತ್ತವೆ. ಹಾಗಾಗಿ, ವರ್ತಮಾನದ ಹೆಚ್ಚಿನ ಮಾಧ್ಯಮಗಳು ರಿಸ್ಕ್ ತೆಗೆದುಕೊಳ್ಳದೆ, ವ್ಯವಸ್ಥೆಗೆ ತಲೆಬಾಗುತ್ತವೆಯೇ ಹೊರತು, ಜನರಿಗೆ ನಿಷ್ಠರಾಗುವ ಗೋಜಿಗೆ ಹೋಗುವುದಿಲ್ಲ.

ಕಳೆದ ಹಲವಾರು ವರ್ಷಗಳಿಂದ ವಿಶೇಷವಾಗಿ ಹೆಚ್ಚಾಗುತ್ತಿರುವ ಇನ್ನೊಂದು ಟ್ರೆಂಡ್ ಎಂದರೆ, ಪತ್ರಿಕೋದ್ಯಮಿಗಳೇ ನೇರವಾಗಿ ರಾಜಕೀಯ ಸೇರುತ್ತಿದ್ದಾರೆ ಅಥವಾ ರಾಜಕಾರಣಿಗಳೇ ಮಾಧ್ಯಮದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಇದರಿಂದಾಗಿ, ವ್ಯವಸ್ಥೆಗೂ ಮತ್ತು ಮಾಧ್ಯಮಕ್ಕೂ ನಂಟು ಹೆಚ್ಚಾಗುತ್ತಿದ್ದು, ಮಾಧ್ಯಮದ ಪಾರದರ್ಶಕತೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವಾಗಿ, ಸಾಹಿತಿ ಮಾರ್ಕ್ ಟ್ವೈನ್ ಹೇಳಿದಂತೆ, `ಇಂದು ಪತ್ರಿಕೆಗಳನ್ನು ಓದದವರು ಮಾಹಿತಿ ವಂಚಿತರಾದರೆ, ಓದುವವರು ತಪ್ಪು ಮಾಹಿತಿ ಮಾತ್ರ ಪಡೆಯುತ್ತಾರೆ.’

ವ್ಯವಸ್ಥೆಯೊಂದಿಗಿನ ಸಖ್ಯ

ಮಾಧ್ಯಮ ಮತ್ತು ವ್ಯವಸ್ಥೆಗೆ ಇರುವ ಸಂಬಂಧದ ಇತಿಹಾಸದತ್ತ ಇಣುಕುನೋಟ ಬೀರಿದರೆ, ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಗಾಂಧಿ ತನ್ನ ವಿಚಾರಧಾರೆಗಳನ್ನು, ಸ್ವಾತಂತ್ರ್ಯ ಪ್ರಜ್ಞೆಯನ್ನು ಮತ್ತು ವ್ಯವಸ್ಥೆಯನ್ನು ವಿರೋಧಿಸಬೇಕಾದ ಅಗತ್ಯವನ್ನು ತನ್ನ ಪತ್ರಿಕೆಗಳ ಮೂಲಕ ಜನರಿಗೆ ತಲುಪಿಸುತ್ತಿದ್ದರು. ಹಾಗೆಯೇ, ಅಂಬೇಡ್ಕರ್ ಕೂಡ ದಲಿತ ಸಮುದಾಯದಲ್ಲಿ ಮಾನವ ಹಕ್ಕುಗಳ ಜಾಗೃತಿ ಮೂಡಿಸಿ, ಸಾಮಾಜಿಕ ಚಳವಳಿ ಸಂಘಟಿಸಿದ್ದು ಕೂಡ ಪತ್ರಿಕೆಗಳ ಸಹಾಯದಿಂದ. ಈ ರೀತಿಯಲ್ಲಿ ಆಯಾಯ ಪತ್ರಿಕೆಗಳ ನಿಲುವು ಮತ್ತು ಸಿದ್ಧಾಂತಗಳಿಗೆ ಚಂದಾದಾರರು ಬದ್ಧರಾಗಿದ್ದರು, ಅವುಗಳನ್ನು ಸತತವಾಗಿ ಖರೀದಿಸಿ ಬೆಂಬಲಿಸುತ್ತಿದ್ದರು ಹಾಗು ವ್ಯವಸ್ಥೆಯನ್ನು ಸಾಮೂಹಿಕವಾಗಿ ಪ್ರಶ್ನಿಸುತ್ತಿದ್ದರು. ಹಾಗೆಯೇ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೂಡ, ಸರಕಾರಗಳು ಪತ್ರಿಕೆಗಳಿಗೆ ಹೆದರುತ್ತಿದ್ದ ಕಾಲವಿತ್ತು. ಆದರೆ, ದೃಶ್ಯ ಮಾಧ್ಯಮ ತನ್ನ ಆರಂಭಿಕ ದಿನಗಳಲ್ಲಿ ವ್ಯವಸ್ಥೆಯ ಸ್ವತ್ತಾಗಿದ್ದರಿಂದ ಸರಕಾರದ ಮುಖವಾಣಿಯಂತೆ ಕೆಲಸಮಾಡಿದ್ದೆ ಹೆಚ್ಚು. ಆದರೆ ಈಗಂತೂ, ಮಾಧ್ಯಮಗಳು ವ್ಯವಸ್ಥೆಯೊಂದಿಗೆ `ಸೆಲ್ಫಿ’ ತೆಗೆದುಕೊಳ್ಳುವ ಕಾಲ ತಲುಪಿದ್ದೇವೆ. 

ಹೀಗೆ, ಕಾಲಾನಂತರ ಮಾಧ್ಯಮಗಳ ಪರಿಕಲ್ಪನೆ ಸಂಪೂರ್ಣ ಬದಲಾಗಿದ್ದು ಜಾಗತೀಕರಣದ ದೆಸೆಯಿಂದ ಎನ್ನಬಹುದು. ಜಾಗತೀ ಕರಣದ ಭಾಗವಾದ ಖಾಸಗೀಕರಣದ ಫಲವಾಗಿ, ನ್ಯೂಸ್ ಚಾನೆಲ್ ಗಳು ಮತ್ತು ಪತ್ರಿಕೆಗಳ ಸಂಖ್ಯೆ ಹೆಚ್ಚಾಗುವುದರೊಂದಿಗೆ, ಸ್ಪರ್ಧಾತ್ಮಕವಾಗಬೇಕಾದ ಅನಿವಾರ್ಯತೆ ಕೂಡ ಕಂಡುಬಂತು. ಈ ಬೃಹತ್ ಪ್ರಮಾಣದ ಖಾಸಗೀಕರಣದಿಂದಾಗಿ ಉದ್ಯಮಿಗಳು ಮಾಧ್ಯಮ ಜಗತ್ತಿಗೆ ಪ್ರವೇಶಿಸುವಂತಾಯಿತು. ಈ ಮೂಲಕ ಸುದ್ದಿಯನ್ನು ನಿಯಂತ್ರಿಸುವ ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ಜನಸಾಮಾನ್ಯರಿಗೆ ನೀಡುವ ತಾಕತ್ತು, ಪಕ್ಕಾ ವ್ಯವಹಾರ ಬುದ್ಧಿಯ ಉದ್ಯಮಿಗಳಿಗೆ ದೊರಕಿತು. ತಮಗಿರುವ ಮಾಹಿತಿ ಮತ್ತು ಜನಾಭಿಪ್ರಾಯ ಸಂಘಟಿಸುವ ಶಕ್ತಿಯನ್ನು ಉಪಯೋಗಿಸಿಕೊಂಡು ಉದ್ಯಮಿಗಳು, ವ್ಯವಸ್ಥೆಯ ಸಖ್ಯ ಬೆಳೆಸಿಕೊಂಡು ತಮ್ಮ ಖಾಸಗಿ ವ್ಯವಹಾರ ಭದ್ರಪಡಿಸಿಕೊಂಡರು.

ಈ ರೀತಿ, ಉದ್ಯಮವಾಗಿ ಜನಸಾಮನ್ಯರಿಗೆ ತಲುಪುತ್ತಿರುವ ದೃಶ್ಯ ಮಾಧ್ಯಮ ಮತ್ತು ಪತ್ರಿಕೆಗಳು, ತಾವು ಪ್ಯಾಕೇಜ್ ಮಾಡುವ ಸುದ್ದಿಯಿಂದ ತಮಗಾಗಬಹುದಾದ ಲಾಭ ನಷ್ಟದ ಅಂದಾಜಿನ ಮೇಲೆ, ವ್ಯವಸ್ಥೆಯನ್ನು ಸುಂದರವಾಗಿಯೂ ಚಿತ್ರಿಸಬಲ್ಲವು, ಹಾಗೆಯೇ ಕೆಟ್ಟದಾಗಿಯೂ ಕೂಡ. ಆದ್ದರಿಂದಲೇ, ಜನಸಾಮಾನ್ಯರಿಂದು ಜಾಗರೂಕರಾಗಿರದಿದ್ದರೆ, ಮಾಧ್ಯಮಗಳು, ವ್ಯವಸ್ಥೆಯ ದಬ್ಬಾಳಿಕೆಗೆ ಒಳಗಾದ ಜನರನ್ನು ದ್ವೇಷಿಸುವಂತೆ ಮತ್ತು ದಬ್ಬಾಳಿಕೆ ಮಾಡುವವರನ್ನು ಪ್ರೀತಿಸುವಂತೆ ಮಾಡುತ್ತವೆ. ಒಟ್ಟಿನಲ್ಲಿ, ಮಾಧ್ಯಮಗಳಿಂದು ತತ್ವಶಾಸ್ತ್ರಜ್ಞ ನೀತ್ಸೆ ಮಾತಿನಂತೆ, ರೋಗಗ್ರಸ್ತವಾಗಿದೆ.

ಅದೇ ರೀತಿ, ವ್ಯವಸ್ಥೆಯ ದ್ವಿಮುಖ ನೀತಿಯ ಕುರಿತು ಇನ್ನೊಂದು ಮಾತೆಂದರೆ, ವಿಪಕ್ಷದಲ್ಲಿರುವಾಗ ಮಾಧ್ಯಮ ಸ್ವಾತಂತ್ರ್ಯದ ಕುರಿತು ಯಥೇಚ್ಛವಾಗಿ ಮಾತನಾಡುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದ ತಕ್ಷಣ, ತನ್ನನ್ನು ಪ್ರಶ್ನಿಸುವ ಪತ್ರಕರ್ತರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತವೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಉದಾಹರಣೆಗೆ, ಉತ್ತರ ಪ್ರದೇಶದ ಹತ್ರಾಸ್ ಪ್ರಕರಣ ವರದಿ ಮಾಡಲು ಹೋಗಿದ್ದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಬಂಧನ. ಮಮತಾ ಬ್ಯಾನರ್ಜಿಯ ಕಾರ್ಟೂನನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಜಾಧವಪುರ್ ಯೂನಿವರ್ಸಿಟಿಯ ಪ್ರೋಫೆಸರ್ ಅರೆಸ್ಟ್ ಆಗಿದ್ದರು. ಹಾಗೆಯೇ, ಮಮತಾ ಸರ್ಕಾರದ ವಿರುದ್ಧ ಧ್ವನಿಯೆತ್ತುವ ಪತ್ರಕರ್ತರು ಆ ಪಕ್ಷದ ಕಾರ್ಯಕರ್ತರ ದಾಳಿಗೆ ಗುರಿಯಾಗುತ್ತಿದ್ದಾರೆ. ಅದರಂತೆಯೇ, ಕೇರಳ ಸರಕಾರ ಕೂಡ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸರಕಾರದ ಪಾತ್ರ ಬಯಲಾಗುತ್ತಿದಂತೆ, ಸುಗ್ರೀವಾಜ್ಞೆಯ ಮೂಲಕ ಮಾಧ್ಯಮಗಳ ಮೇಲೆ ನಿಯಂತ್ರಣ ತರುವ ಪ್ರಯತ್ನ ಮಾಡಿತು. ಹೀಗೆ, ಅಧಿಕಾರದಲ್ಲಿರುವವರು ಪಕ್ಷಾತೀತವಾಗಿ, ತಮಗೆ ವಿಧೇಯವಾಗಿರುವ ಮಾಧ್ಯಮವನ್ನು ಪೋಷಿಸುತ್ತಾ, ಪ್ರಶ್ನಿಸುವ ಮಾಧ್ಯಮವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುತ್ತಾರೆ.

ತತ್ವಶಾಸ್ತ್ರಜ್ಞ ನೋಮ್ ಚೋಮ್ಸ್ಕಿ ಗಮನಿಸಿದಂತೆ- ಮುಖ್ಯವಾಹಿನಿಯ ಮಾಧ್ಯಮವಿಂದು ಪ್ರಭಾವಶಾಲಿಗಳ ಸಿದ್ಧಾಂತಕ್ಕೆ ಮಾತ್ರ ಬದ್ಧತೆ ತೋರಿಸುತ್ತಿವೆ. ಹೀಗೆ, ಸಂಪೂರ್ಣವಾಗಿ ವ್ಯವಸ್ಥೆ ಮತ್ತು ಉದ್ಯಮಿಗಳ ಹಿಡಿತದಲ್ಲಿರುವ ಮುಖ್ಯವಾಹಿನಿಯ ಮಾಧ್ಯಮಗಳಿಂದು ಜನಸಾಮಾನ್ಯರ ಸುತ್ತಲೂ ಪಕ್ಕಾ ವ್ಯವಹಾರದ ಒಂದು ಕೃತಕ ಪ್ರಪಂಚವನ್ನು ನಿರ್ಮಿಸಿವೆ.

ಇತ್ತೀಚಿಗೆ, ಮಾಧ್ಯಮಗಳು ಸುದ್ದಿಯನ್ನು ಫಿಕ್ಸ್ ಮಾಡುವುದು ಹಾಗು ಟಿ.ಆರ್.ಪಿ.ಗೋಸ್ಕರ ಸುದ್ದಿಯನ್ನು ವೈಭವೀಕರಿಸುವುದು ಹೆಚ್ಚಾಗುತ್ತಿವೆ. ಜೊತೆಗೆ, ವ್ಯವಸ್ಥೆಗೆ ಬೆಂಬಲವಾಗಿರುವ ಮಾಧ್ಯಮಗಳು, ಸರಕಾರದ ಆಜ್ಞೆಯಂತೆ, ಜನಸಾಮಾನ್ಯರನ್ನು ಸದಾ ಭಯದಲ್ಲಿಡುವುದನ್ನು ಕಾಣುತ್ತೇವೆ. ಈ ಭಯದ ಸ್ವರೂಪಗಳೆಂದರೆ, ರಾಷ್ಟೀಯ ಭದ್ರತೆ, ಭಯೋತ್ಪಾದನೆ, ಜಾತಿ ಅಥವಾ ಧರ್ಮ ರಾಜಕಾರಣ, ಇತ್ಯಾದಿಗಳು. ಯಾಕೆಂದರೆ, ಸರಕಾರಗಳಿಗೆ ಭಯಗೊಂಡ ಜನಸಾಮಾನ್ಯರನ್ನು ನಿಯಂತ್ರಿಸಲು ಸುಲಭ. ತದ್ವಿರುದ್ಧವಾಗಿ, ಜನರು ತನಗೆ ಭಯ ಪಡದಿದ್ದಾಗ ಸರಕಾರ ಆತಂಕಕ್ಕೊಳಗಾಗುತ್ತದೆ. ಅದರಂತೆಯೇ, ವ್ಯವಸ್ಥೆಗೆ ಅನುಕೂಲವಾಗಲೆಂದು ಕೆಲವೊಮ್ಮೆ ಮಾಧ್ಯಮಗಳು, ಅಲ್ಪಮತದ ಅಭಿಪ್ರಾಯಗಳನ್ನು ಒಮ್ಮತದ ಜನಾಭಿಪ್ರಾಯವೆಂದು ಬಿಂಬಿಸಿ ವ್ಯವಸ್ಥೆಗೆ ಸಹಾಯ ಮಾಡುತ್ತವೆ.

ಈ ವಿಷಯವಾಗಿ ಪತ್ರಕರ್ತ ವಾಲ್ಟರ್ ಲಿಪ್ಮನ್ ಹೇಳಿದಂತೆ-ಮಾಧ್ಯಮಗಳಿಂದು ಜನಸಾಮಾನ್ಯರನ್ನು, ಸುತ್ತಲಿನ ಸಮಾಜದ ಬೆಳೆವಣಿಗೆಗಳ ಕುರಿತು ದಿಗ್ಭ್ರಮೆಗೊಂಡ, ಆದರೆ ಸಮಾಜದ ಬೆಳವಣಿಗೆ ಯಲ್ಲಿ ಸಕ್ರಿಯವಾಗಿ ಭಾಗವಹಿಸದ, ನಿಷ್ಕ್ರಿಯ ಪ್ರೇಕ್ಷಕರನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿವೆ. ಈ ಪ್ರಕ್ರಿಯೆಯಿಂದಾಗಿಯೇ, ವ್ಯವಸ್ಥೆಯ ಅನೇಕ ಜಿಡ್ಡುಹಿಡಿದ ಅಂಗಸಂಸ್ಥೆಗಳು, ಸಾರ್ವಜನಿಕ ವಿಮರ್ಶೆಗೊಳಗಾಗದೆ ಇನ್ನೂ ಮುಂದುವರಿಯುತ್ತಿವೆ. 

ಮಾಧ್ಯಮ ಮತ್ತು ಸಿದ್ಧಾಂತ

ನಿಷ್ಠುರ ವ್ಯಾವಹಾರಿಕ ಪ್ರಪಂಚದಲ್ಲಿ ತಮ್ಮ ಅಭಿಪ್ರಾಯ ಸ್ವಾತಂತ್ರ್ಯವನ್ನು ಇನ್ನೂ ಉಳಿಸಿಕೊಂಡಿರುವ ಬೆರಳೆಣಿಕೆಯ ಮಾಧ್ಯಮಗಳಿಂದು ಉಸಿರಾಡುತ್ತಿರುವುದು ಸಿದ್ಧಾಂತವೆಂಬ ಆಮ್ಲಜನಕದ ನೆರವಿನಿಂದ ಮಾತ್ರ. ಇಲ್ಲಿನ ವಿಶಿಷ್ಠತೆಯೆಂದರೆ, ಆಯಾಯ ಸಿದ್ಧಾಂತದಲ್ಲಿ ಅಚಲ ನಂಬಿಕೆ ಇಟ್ಟವರಷ್ಟೇ ಅವುಗಳ ಚಂದಾದಾರರಾಗಿ ಪೋಷಿಸುತ್ತಿದ್ದಾರೆ. ಮುಖ್ಯವಾಹಿನಿಯಿಂದ ಅಂತರ ಕಾಯ್ದುಕೊಂಡ ಇಂತಹ ಪರ್ಯಾಯ ಮಾಧ್ಯಮಸಂಸ್ಥೆಗಳು, ಸಿದ್ಧಾಂತಗಳನ್ನು ಹಾಗು ಸ್ವತಂತ್ರ ಚಿಂತನೆಗಳನ್ನು ಇನ್ನೂ ಜೀವಂತವಾಗಿಟ್ಟಿವೆ.

ಆದರೆ, ಇಲ್ಲಿರುವ ಮುಖ್ಯ ಸಮಸ್ಯೆಯೆಂದರೆ, ಸಿದ್ಧಾಂತಾಧಾರಿತ ಕೆಲವು ಮಾಧ್ಯಮಗಳು, ತಮ್ಮ ಸಿದ್ಧಾಂತಕ್ಕೆ ಪೂರಕವಾದ ರಾಜಕೀಯಪಕ್ಷ ಅಧಿಕಾರಕ್ಕೆ ಬಂದಾಗ, ವ್ಯವಸ್ಥೆಯ ಲೋಪದೋಷಗಳನ್ನು ನಿಷ್ಠುರವಾಗಿ ಪ್ರಶ್ನಿಸದೆ ದೃತರಾಷ್ಟ್ರನ ಕುರುಡು ಪ್ರೇಮ ತೋರುತ್ತವೆ. ಈ ಮಾತು, ಎಡ ಹಾಗು ಬಲ ಪಂಥೀಯ ಸಿದ್ಧಾಂತದಲ್ಲಿ ನಂಬಿಕೆಯಿಟ್ಟ ಮಾಧ್ಯಮಗಳಿಗೆ ಸಮಾನವಾಗಿ ಅನ್ವಯಿಸುತ್ತದೆ. ಮಾಧ್ಯಮವೆನ್ನುವುದು ಈ ವ್ಯಾಮೋಹ ತೊರೆದು ಯಾವಾಗಲೂ ವಿರೋಧ ಪಕ್ಷದ ಕಾರ್ಯ ನಿರ್ವಹಿಸಿ, ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಪ್ರಜಾಪ್ರಭುತ್ವವಾದಿಯಾದಾಗ ಮಾತ್ರ, ಅದನ್ನು ನಿಜಾರ್ಥದ ಸ್ವತಂತ್ರ ಮಾಧ್ಯಮವೆಂದು ಪರಿಗಣಿಸಬಹುದು.

ಸ್ವತಂತ್ರ ಪತ್ರಕರ್ತರ ಕರ್ತವ್ಯ

ಮಾಧ್ಯಮಗಳಲ್ಲಿ ದುಡಿಯುವ ಸುದ್ದಿಸಂಪಾದಕರು ಮತ್ತು ಪತ್ರಕರ್ತರೇ ಅವುಗಳ ನಂಬಿಕೆಯ ಸಾರ್ವಜನಿಕ ಮುಖ.  ಕೆಲವು ಸಂದರ್ಭಗಳಲ್ಲಿ, ಸುದ್ದಿಯನ್ನು ಯಥಾವತ್ತಾಗಿ ಪ್ರಕಟಿಸುವ ಸಂಪೂರ್ಣ ಅಧಿಕಾರವಿಲ್ಲದಿದ್ದರೂ, ಸಾಮಾಜಿಕ ಜವಾಬ್ದಾರಿಯಂತೂ ಅವರಿಗಿದೆ. ಜನರಿಗೆ ಪ್ರಪಂಚದ ಆಗುಹೋಗುಗಳ ಸತ್ಯದರ್ಶನ ಮಾಡುವ `ಪತ್ರಕರ್ತ’ ವೃತ್ತಿ, ಒಂದು ಶ್ರೇಷ್ಠ ಸಮಾಜ ಸೇವೆ ಹಾಗೂ ಸಾಮಾಜಿಕ ಪರಿವರ್ತನೆ ಮಾಡಬಲ್ಲ ಶಕ್ತಿ ಹೊಂದಿದೆ.

ಹಾಗಾಗಿ, ಪ್ರಸ್ತುತ ಪತ್ರಕರ್ತರು ತಮ್ಮ ವೃತ್ತಿ ನೈತಿಕತೆಯ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಇಲ್ಲಿ, ಪತ್ರಕರ್ತರು ಸೂಕ್ಷ್ಮ ವಿಷಯಗಳನ್ನು ಹೇಗೆ ವರದಿ ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ತತ್ವಶಾಸ್ತ್ರಜ್ಞ ವೋಲ್ಟೇರ್ ಹೇಳಿದಂತೆ-ಜನರು ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸದಿದ್ದಲ್ಲಿ, ಸದಾ ಸಕ್ರಿಯವಾಗಿರುವ ನಿರಂಕುಶ ಪ್ರಭುತ್ವ, ಧರ್ಮ ಅಥವಾ ಇನ್ನಿತರ ಹೆಸರಲ್ಲಿ ದಬ್ಬಾಳಿಕೆ ಮಾಡುತ್ತದೆ. ಇದಾಗದಂತೆ ನೋಡಿಕೊಳ್ಳುವ ಸಾಮಾಜಿಕ ಜವಾಬ್ದಾರಿ ಮಾಧ್ಯಮಕ್ಕಿದೆ. ಹಾಗೆಯೇ, ಸುದ್ದಿಯನ್ನು ಸುದ್ದಿಯಾಗಿಯೇ ಬಿತ್ತರಿಸಬೇಕೇ ಹೊರತು, ಅದಕ್ಕೆ ವೈಯಕ್ತಿಕ ಅಭಿಪ್ರಾಯಗಳ ತಳುಕು ಸೇರಿಸದಂತೆ ಜಾಗ್ರತೆ ವಹಿಸುವುದು ಮುಖ್ಯ.

ಅಂತಿಮವಾಗಿ, ಪ್ರಸಕ್ತ ಕಾಲಘಟ್ಟದಲ್ಲಿ ಮಾಧ್ಯಮಗಳಿಂದ ಸಾಮಾನ್ಯ ನಿರೀಕ್ಷೆಯೇನೆಂದರೆ, ಮಾಧ್ಯಮಗಳು ಸತ್ಯಕ್ಕೆ ನಿಷ್ಠರಾಗಿರಬೇಕೇ ಹೊರತು, ವ್ಯವಸ್ಥೆಗಲ್ಲ. ಇದು ಆದರ್ಶಪ್ರಾಯ, ಆದರೆ, ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ಕಷ್ಟವೆನಿಸಬಹುದು. ವಸ್ತುಶಃ, ಅಸಾಧ್ಯವೇನಲ್ಲ. ಅದೇ ರೀತಿ, ಸಿದ್ಧಾಂತಕ್ಕೆ ತಕ್ಕಂತೆ ಸುದ್ದಿಯನ್ನು ಸಂಸ್ಕರಿಸುವುದು ಕೂಡ ಮಾಧ್ಯಮದ ಲಕ್ಷಣವಲ್ಲ. ಇಂದು, ನಿಜವಾಗಿಯೂ ಆಪತ್ತಿನಲ್ಲಿರುವುದು ಅಭಿಪ್ರಾಯ ಸ್ವಾತಂತ್ರ್ಯವಲ್ಲ, ಬದಲಾಗಿ, ಬುದ್ಧಿಜೀವಿಗಳ ಸ್ವತಂತ್ರ ಅಭಿಪ್ರಾಯಗಳು, ಸಮುದಾಯ ಚಿಂತನೆಯಾಗಿ ಮಾರ್ಪಡದಂತೆ, ವ್ಯವಸ್ಥೆಗಳು ಅಡ್ಡಗೋಡೆ ಹಾಕಿರುವುದು. ಹಾಗಾಗಿ, ಸ್ವತಂತ್ರ ಚಿಂತನೆಗಳನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಮಾಧ್ಯಮಗಳಿಂದು ಮಾಡಬೇಕಿವೆ.

ತತ್ವಶಾಸ್ತ್ರಜ್ಞ ಥೋರೊ ಹೇಳುವಂತೆ- ಒಂದು ವೇಳೆ ವ್ಯವಸ್ಥೆಯ ಆಜ್ಞೆಯು ನಿಮ್ಮಿಂದ ಅನ್ಯಾಯದ ಕೆಲಸ ಮಾಡಿಸುವಂತಿದ್ದರೆ, ನೀವು ಕಾನೂನನ್ನು ಮುರಿಯಲು ಹಿಂದೆಮುಂದೆ ನೋಡಬಾರದು. ಈ ಹೇಳಿಕೆ, ಪತ್ರಕರ್ತರಿಗೆ ಇಂದು ಹೆಚ್ಚು ಅನ್ವಯವಾಗುತ್ತದೆ. ಮೂಲತಃ, ಜನರು ಸತ್ಯದ ಹುಡುಕಾಟದಲ್ಲಿರುತ್ತಾರೆ. ಅದನ್ನು ಪ್ರಾಮಾಣಿಕವಾಗಿ ಒದಗಿಸುವ ಮಾಧ್ಯಮಗಳಿಗೆ ಸಮಾನ ಮನಸ್ಕ ಓದುಗರು/ ವೀಕ್ಷಕರು ತಾವೇ ಮುಂದೆ ಬಂದು, ತನು, ಮನ ಮತ್ತು ಧನ ಸಹಾಯದ ಮೂಲಕ ಬೆಂಬಲಕ್ಕೆ ನಿಲ್ಲುತ್ತಾರೆ. ಇದು ಸ್ವಲ್ಪ ನಿಧಾನಗತಿಯ ಪ್ರಕ್ರಿಯೆಯಂತೆ ಕಾಣಬಹುದು. ಆದರೆ ಮಾಧ್ಯಮಗಳಿಗೆ ಶೋಭೆ ತರುವಂತಹದ್ದು.

ಕಾದಂಬರಿಕಾರ ಸಿ.ಪಿ.ಸ್ನೋ ಹೇಳುವಂತೆ, ಮನುಷ್ಯನ ಸುದೀರ್ಘ ಇತಿಹಾಸವನ್ನು ಅವಲೋಕಿಸಿದಾಗ, ದಂಗೆಗಿಂತ ವಿಧೇಯತೆಯ ಹೆಸರಿನಲ್ಲಿಯೇ ಹೆಚ್ಚು ಭೀಕರ ಅಪರಾಧಗಳು ನಡೆದಿವೆ. ಅದರಂತೆಯೇ, ಮಾಧ್ಯಮಗಳಿಂದು ವ್ಯವಸ್ಥೆಗೆ ತಲೆಬಾಗಿದರೆ, ಸಮಾಜದ ಅವನತಿಗೆ ಮುನ್ನುಡಿಯಂತೆ. ಹೀಗಾಗದಿರುವ ಎಚ್ಚರ ಮಾಧ್ಯಮಗಳಿಗೆ ಇರಬೇಕಾದುದು ವರ್ತಮಾನದ ತುರ್ತು.

Leave a Reply

Your email address will not be published.