ಮಾಧ್ಯಮ ಸ್ವಾತಂತ್ರ್ಯ ಮಂಜಿನ ಪರದೆಯ ಹಿಂದೆ

ಇತ್ತೀಚೆಗೆ ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ (ಆರ್ ಸ್‍ ಎಫ್) ಸಂಸ್ಥೆ ಬಿಡುಗಡೆ ಮಾಡಿದ 2020ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 142ನೆಯ ಸ್ಥಾನ ಗಳಿಸಿದೆ! ಇದು ದೇಶದಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಸ್ಥಿತಿಗತಿಗೆ ದ್ಯೋತಕ ಮತ್ತು ಮಹತ್ವದ ಮಾಪಕ.

-ನಾ ದಿವಾಕರ

2021ರ ಏಪ್ರಿಲ್ ಕೊನೆಯ ವಾರದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆಂತರಿಕವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಮುಜುಗರವನ್ನು ಎದುರಿಸಬೇಕಾಗಿತ್ತು. ಕೋವಿಡ್-19 ಎರಡನೆಯ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಜಾಗತಿಕ ಮಾಧ್ಯಮಗಳಲ್ಲೂ ಸಹ ಚರ್ಚೆಗೊಳಗಾಗಿದ್ದು, ಭಾರತದಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟ್ವಿಟರ್, ಫೇಸ್‍ಬುಕ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ತಾಣಗಳಲ್ಲಿ ಸರ್ಕಾರ ವಿರುದ್ಧ ಕೇಳಿಬಂದ ಆರೋಪಗಳನ್ನು ಎದುರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಈ ಮಾಧ್ಯಮಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಲೂ ಆರಂಭಿಸಿತ್ತು. ಭಾರತದ ಉನ್ನತ ರಾಯಭಾರಿ ಕಚೇರಿಯಿಂದ ದ ಆಸ್ಟ್ರೇಲಿಯನ್ ಪತ್ರಿಕೆಯ ಸಂಪಾದಕರಿಗೆ ಪತ್ರ ಬರೆಯಲಾಗಿತ್ತು. ಟ್ವಿಟರ್‍ನಿಂದ 50ಕ್ಕೂ ಹೆಚ್ಚು ಆಕ್ಷೇಪಾರ್ಹ ಪೋಸ್ಟ್‍ಗಳನ್ನು ತೆಗೆದುಹಾಕಲು ನೋಟಿಸ್ ಜಾರಿ ಮಾಡಲಾಗಿತ್ತು.

ನ್ಯೂಯಾರ್ಕ್ ಟೈಂಸ್‍ನಲ್ಲಿ ಪ್ರಕಟವಾಗಿದ್ದ ವರದಿಯೊಂದರಲ್ಲಿ, “ಭಾರತದ ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್‍ಗೆ ಒಳಪಡಿಸುವ ಮೂಲಕ ದೇಶವನ್ನು ವಿನಾಶದ ಅಂಚಿಗೆ ಕೊಂಡೊಯ್ದಿದ್ದರು, ಉನ್ಮತ್ತ ರಾಷ್ಟ್ರೀಯತೆ, ಅಧಿಕಾರಶಾಹಿಯ ಅದಕ್ಷತೆ ಮತ್ತು ಅಧಿಕಾರ ದರ್ಪದ ಪರಿಣಾಮ ಭಾರತದಲ್ಲಿ ತೀವ್ರವಾದ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಗಿತ್ತು. ಈ ಸನ್ನಿವೇಶದಲ್ಲಿ ಭಾರತದ ಪ್ರಜೆಗಳ ಜೀವನ ಉಸಿರುಗಟ್ಟುತ್ತಿರುವಾಗಲೇ ದೇಶದ ಪ್ರಧಾನಮಂತ್ರಿಗಳು ತಮ್ಮ ಅಧಿಕಾರದಲ್ಲಿ ಮೆರೆಯುತ್ತಿದ್ದರು” ಎಂದು ಹೇಳಲಾಗಿತ್ತು. ಇದೇ ವರದಿಯನ್ನು ‘ದ ಆಸ್ಟೇಲಿಯನ್’ ಪತ್ರಿಕೆಯಲ್ಲೂ ಪ್ರಕಟಿಸಲಾಗಿತ್ತು. ಈ ರೀತಿಯ ಆಧಾರರಹಿತ, ಅವಮಾನಕಾರಿ ವರದಿಯನ್ನು ಪ್ರಕಟಿಸಿದ್ದಕ್ಕಾಗಿ ಭಾರತದ ಹೈಕಮೀಷನರ್ ಕಚೇರಿಯಿಂದ ಆಕ್ಷೇಪಣೆಯನ್ನು ಸಲ್ಲಿಸಲಾಗಿತ್ತು.

ಭಾರತ ಸರ್ಕಾರ ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಲಸಿಕೆ ಅಭಿಯಾನ, ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳು, ವೈದ್ಯಕೀಯ ಸೇವೆಗಳ ವಿಸ್ತರಣೆ ಮತ್ತು ಆರು ಕೋಟಿಗೂ ಹೆಚ್ಚು ಲಸಿಕೆಯ ಉತ್ಪಾದನೆ ಇವೇ ಮುಂತಾದವನ್ನು ಉಲ್ಲೇಖಿಸಿ, ಕೋವಿಡ್ ಎರಡನೆಯ ಅಲೆಯಲ್ಲಿ ಉಂಟಾಗುತ್ತಿರುವ ಹೆಚ್ಚಿನ ಸೋಂಕು, ಸಾವು ನೋವುಗಳಿಗೂ, ಐದು ರಾಜ್ಯಗಳ ಚುನಾವಣಾ ರ್ಯಾಲಿಗಳು ಮತ್ತು ಉತ್ತರಖಂಡದಲ್ಲಿ ನಡೆದ ಕುಂಭಮೇಳ ಧಾರ್ಮಿಕ ಆಚರಣೆಗಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಪಾದಿಸಿದೆ. ಉತ್ತರಖಂಡದಲ್ಲಿ ನಡೆದ ಕುಂಭಮೇಳ ಮತ್ತು ಚುನಾವಣಾ ರ್ಯಾಲಿಗಳಲ್ಲಿ ಲಕ್ಷಾಂತರ ಜನರು ನೆರೆದಿದ್ದುದೇ ಕೊರೋನಾ ಹೆಚ್ಚಳಕ್ಕೆ ಕಾರಣ ಎನ್ನುವ ಆರೋಪವನ್ನು ಭಾರತ ಸರ್ಕಾರ ತನ್ನ ಪತ್ರದಲ್ಲಿ ನಿರಾಕರಿಸಿದೆ. ಈ ಪತ್ರಿಕೆಗಳಿಗೆ ಆಕ್ಷೇಪಣಾ ಪತ್ರವನ್ನು ಬರೆಯುತ್ತಲೇ ಕೇಂದ್ರ ಸರ್ಕಾರ, ಇದೇ ವಿಚಾರದಲ್ಲಿ ಟ್ವಿಟರ್‍ನಲ್ಲಿ ಪೋಸ್ಟ್ ಮಾಡಲಾಗಿದ್ದ ಐವತ್ತಕ್ಕೂ ಹೆಚ್ಚು ಟ್ವೀಟ್‍ಗಳನ್ನು ಅಳಿಸಿಹಾಕುವಂತೆ ಟ್ವಿಟರ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು.

ಈ ಟ್ವೀಟ್‍ಗಳನ್ನು ಮಾಡಿದವರ ಪೈಕಿ ಹಲವು ವಿರೋಧ ಪಕ್ಷದ ನಾಯಕರನ್ನೂ ಒಳಗೊಂಡಂತೆ ಭಾರತದ ಪ್ರಸಿದ್ಧ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಚಿಂತಕರೂ ಸೇರಿದ್ದಾರೆ. ಚಿತ್ರನಟ ಅವಿನಾಶ್ ದಾಸ್, ಚಿತ್ರ ನಿರ್ಮಾಪಕ ವಿನೀತ್ ಕುಮಾರ್ ಸಿಂಗ್, ನಿರ್ಮಾಪಕ ವಿನೋದ್ ಕಾಪ್ರಿ, ಪತ್ರಕರ್ತ ಪಂಕಜ್ ಝಾ ಮುಂತಾದವರೂ ಇದ್ದಾರೆ. ಇಡೀ ವಿಶ್ವದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಭಾರತದ ಪ್ರಧಾನಿ ಮೋದಿಯನ್ನು ಜಾಗತಿಕ ನಾಯಕರೂ ಸಹ ಪ್ರಶಂಸಿಸುತ್ತಿರುವ ಸಂದರ್ಭದಲ್ಲಿ ಇಂತಹ ಟ್ವೀಟ್‍ಗಳನ್ನು ಮಾಡುವುದರ ಮೂಲಕ ಭಾರತದ ಮತ್ತು ಭಾರತದ ಪ್ರಧಾನಿಗಳ ವರ್ಚಸ್ಸನ್ನು ಕುಂದಿಸುವ ಪಿತೂರಿ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಪ್ರಧಾನಿ ಮೋದಿಯ ಜನಪ್ರಿಯತೆ ಆಂತರಿಕವಾಗಿ ಕುಸಿಯುತ್ತಿರುವುದೇ ಅಲ್ಲದೆ ಜಾಗತಿಕ ಮಟ್ಟದಲ್ಲೂ ಭಾರತದ ಜನಪ್ರಿಯತೆ ಮತ್ತು ಮೋದಿಯ ವರ್ಚಸ್ಸು ಕುಂದುತ್ತಿರುವುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಇತ್ತೀಚೆಗೆ ರಿಪೋರ್ಟರ್ಸ್ ಸ್ಯಾನ್ಸ್ ಫ್ರಾಂಟಿಯರ್ಸ್ (ಆರ್‍ಎಸ್‍ಎಫ್) ಸಂಸ್ಥೆ ಬಿಡುಗಡೆ ಮಾಡಿದ 2020ರ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ದೇಶಗಳ ಪೈಕಿ 142ನೆಯ ಸ್ಥಾನ ಗಳಿಸಿದೆ. ಇದು ಕೇಂದ್ರ ಬಿಜೆಪಿ ಸರ್ಕಾರವನ್ನು ಚಿಂತೆಗೀಡುಮಾಡಿದೆ. 2020ರಲ್ಲೇ ತನ್ನ ಶ್ರೇಣಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಫಲಕಾರಿಯಾಗಿಲ್ಲ. ಮೋದಿ ಮಾಧ್ಯಮಗಳ ಮೇಲೆ ತಮ್ಮ ನಿಯಂತ್ರಣವನ್ನು ಬಿಗಿಗೊಳಿಸಿದ್ದಾರೆ ಎಂಬ ಹೆಡ್‍ಲೈನ್‍ಗಳು ಅಂತರರಾಷ್ಟ್ರೀಯ ಸುದ್ದಿ ಪತ್ರಿಕೆಗಳಲ್ಲಿ ಹರಿದಾಡಲಾರಂಭಿಸಿವೆ.

“ಪತ್ರಕರ್ತರಿಗೆ ಮತ್ತು ಪತ್ರಿಕಾ ಮಾಧ್ಯಮದವರಿಗೆ ನಿರ್ಭೀತಿಯಿಂದ ತಮ್ಮ ಕಾರ್ಯ ನಿರ್ವಹಿಸಲು ಭಾರತ ಅತಿ ಹೆಚ್ಚು ಅಪಾಯಕಾರಿ ರಾಷ್ಟ್ರವಾಗಿದೆ. ಪತ್ರಕರ್ತರು ಎಲ್ಲ ರೀತಿಯ ದಾಳಿಗಳಿಗೂ ಒಳಗಾಗುತ್ತಿದ್ದಾರೆ. ಪತ್ರಕರ್ತರ ವಿರುದ್ಧ ಪೊಲೀಸರು ಹಿಂಸಾತ್ಮಕ ದಾಳಿ ನಡೆಸುವುದು, ರಾಜಕೀಯ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸುವುದು, ಕ್ರಿಮಿನಲ್ ಗುಂಪುಗಳು ಮತ್ತು ಭ್ರಷ್ಟ ಸ್ಥಳೀಯ ನಾಯಕರು ಪ್ರಾಮಾಣಿಕ ಪತ್ರಕರ್ತರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ” ಎಂದು ಹೇಳಿರುವ ವರದಿಯಲ್ಲಿ, “2019ರಲ್ಲಿ ಪ್ರಧಾನಿ ಮೋದಿ ಪುನರಾಯ್ಕೆಯಾದ ನಂತರದಲ್ಲಿ ಮಾಧ್ಯಮಗಳೆಲ್ಲವೂ ಸರ್ಕಾರದ ಪರವಾಗಿಯೇ ಕಾರ್ಯನಿರ್ವಹಿಸುವ ಒತ್ತಡ ಹೆಚ್ಚಾಗಿದೆ, ಹಿಂದುತ್ವವಾದಿಗಳ ವಿರುದ್ಧ ವರದಿ ಮಾಡುವ ಪತ್ರಕರ್ತರ ಮೇಲೆ ದ್ವೇಷಪೂರಿತ ಪ್ರಚಾರವನ್ನು ಕೈಗೊಳ್ಳಲಾಗುತ್ತಿದೆ, ಇಂತಹ ಮಾಧ್ಯಮಗಳ ವಿರುದ್ಧ ಮತ್ತು ಸಾಮಾಜಿಕ ತಾಣಗಳ ವಿರುದ್ಧ ಹಿಂದುತ್ವ ಗುಂಪುಗಳು ದ್ವೇಷ ರಾಜಕಾರಣ ಮಾಡುವ ಮೂಲಕ ಅಡ್ಡಿಯುಂಟುಮಾಡುತ್ತಿವೆ” ಎಂದೂ ಉಲ್ಲೇಖಿಸಲಾಗಿದೆ.

ಈ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡ ಭಾರತ ಸರ್ಕಾರ ಮಾಧ್ಯಮ ಕ್ಷೇತ್ರಗಳ ನಿರ್ವಹಣೆ, ನಿಯಂತ್ರಣ ಮತ್ತು ನಿರ್ಬಂಧಗಳ ಬಗ್ಗೆ ಕೆಲವು ಸುಧಾರಣೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ 2020ರಲ್ಲೇ “ಸೂಚ್ಯಂಕ ಮೇಲ್ವಿಚಾರಣಾ ಕೇಂದ್ರ (ಐಎಂಸಿ)” ಸ್ಥಾಪಿಸಿತ್ತು. ಜಾಗತಿಕ ಸೂಚ್ಯಂಕದಲ್ಲಿ ಸುಧಾರಣೆ ತರುವ ಉದ್ದೇಶದಿಂದ ರಚಿಸಲಾಗಿದ್ದ ಈ ಸಮಿತಿಯನ್ನು ಸಂಪುಟ ಕಾರ್ಯದರ್ಶಿಯ ಮೇಲ್ವಿಚಾರಣೆಯಲ್ಲೇ ರಚಿಸಲಾಗಿತ್ತು. ಆದರೆ ಐಎಂಸಿ ರಚನೆಯ ಹಿಂದೆ ಇದ್ದ ಸದುದ್ದೇಶಕ್ಕೆ ಪೂರಕವಾಗಿ ಈ ಕೇಂದ್ರದ ಸ್ವರೂಪದಲ್ಲಿ ಆರಂಭದಿಂದಲೇ ಕಂಡಿರಲಿಲ್ಲ. 13 ಜನರ ಈ ಸಮಿತಿಯಲ್ಲಿ ಕೇವಲ ಪತ್ರಿಕಾ ರಂಗದಿಂದ ಕೇವಲ ಇಬ್ಬರೇ ಪ್ರತಿನಿಧಿಗಳು ಇದ್ದುದು ಇದಕ್ಕೆ ಸಾಕ್ಷಿ. ಉಳಿದಂತೆ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಈ ಸಮಿತಿಯ ಸದಸ್ಯರಲ್ಲೊಬ್ಬರಾಗಿದ್ದಾರೆ.

ಈ ಸಮಿತಿಯ ರಚನೆಯ ನಂತರ ಆರ್‍ಎಸ್‍ಎಫ್‍ನ ಪ್ರಧಾನ ಕಾರ್ಯದರ್ಶಿ ಕ್ರಿಸ್ಟೋಫರ್ ಡೆಲೋಯರ್ ಈ ಕುರಿತು ಚರ್ಚಿಸಲು ಭಾರತದ ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ಮುಖ್ಯಸ್ಥರೊಡನೆ ಮಾತನಾಡುವ ಇಚ್ಚೆಯನ್ನೂ ವ್ಯಕ್ತಪಡಿಸಿದ್ದರು. ಆದರೆ ಭಾರತದ ಪರವಾಗಿ ಈ ಸಭೆಯಲ್ಲಿ ಭಾಗವಹಿಸಿದ್ದು ಪಿಐಬಿ ಪ್ರಧಾನ ಮಹಾ ನಿರ್ದೇಶಕ ಕುಲದೀಪ್ ಸಿಂಗ್ ಧಾತ್ವಾಲಿಯಾ ಅಲ್ಲ, ಬದಲಿಗೆ ಭಾರತದ ಫ್ರಾನ್ಸ್ ರಾಯಭಾರಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಪ್ರಮುಖವಾಗಿ ಐದು ವಿಚಾರಗಳು ಚರ್ಚೆಗೊಳಗಾಗಿದ್ದವು. ಮೊದಲನೆಯದಾಗಿ ಭಾರತದ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾಷಿಕ ವೈವಿಧ್ಯಗಳು. ಎರಡನೆಯದಾಗಿ, ಭಾರತದ ಪತ್ರಿಕೆಗಳಲ್ಲಿ ಟೀಕೆ, ವಿಮರ್ಶೆ ಮತ್ತು ಪ್ರತಿರೋಧಕ್ಕೆ ಇರುವ ಅವಕಾಶಗಳು. ಮೂರನೆಯದಾಗಿ, ಜಮ್ಮು ಕಾಶ್ಮೀರದಲ್ಲಿನ ಮಾಧ್ಯಮ ಸ್ವಾತಂತ್ರ್ಯ. ನಾಲ್ಕನೆಯದಾಗಿ ಸೂಚ್ಯಂಕ ಸಿದ್ಧಪಡಿಸಲು ಆರ್‍ಎಸ್‍ಎಫ್ ಅನುಸರಿಸುವ ನಿಯಮಗಳು ಮತ್ತು ಕೊನೆಯದಾಗಿ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಮತ್ತು ಸಂಬಂಧಪಟ್ಟ ಆಡಳಿತ ನೀತಿಗಳು.

ಈ ಸಭೆಯಲ್ಲಿ ಭಾರತದ ವತಿಯಿಂದ ಜಮ್ಮುಕಾಶ್ಮೀರದಲ್ಲಿನ ಬೆಳವಣಿಗೆಗಳನ್ನು ಬಲವಾಗಿ ಸಮರ್ಥಿಸಿಕೊಳ್ಳಲಾಗಿತ್ತು. ಅಲ್ಲಿನ ಪರಿಸ್ಥಿತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಿನ ಸವಾಲಾಗಿ ಇದ್ದುದು, ದೇಶದ ಏಕತೆ ಮತ್ತು ಅಖಂಡತೆಗೆ ಭಂಗ ತರುವಂತಹ ಸಾಮಾಜಿಕ ಮಾಧ್ಯಮಗಳ ಸಂದೇಶಗಳು, ವಾಟ್ಟ್ಸಾಪ್, ಟ್ವಿಟರ್, ಫೇಸ್‍ಬುಕ್ ಮುಂತಾದ ಸಾಮಾಜಿಕ ತಾಣಗಳಿಂದ ಹರಡುತ್ತಿದ್ದ ಅಪಾಯಕಾರಿ ಸಂದೇಶಗಳು ಎಂದು ಭಾರತದ ರಾಯಭಾರಿಗಳು ಸಭೆಯಲ್ಲಿ ಮಂಡಿಸಿದ್ದರು. ಗಡಿಯಾಚೆಯಿಂದ ದೇಶದಲ್ಲಿ ಆಂತರಿಕ ಭಯೋತ್ಪಾದನೆ ಉತ್ತೇಜಿಸುವ ಚಟುವಟಿಕೆಗಳು ತೀವ್ರವಾಗುತ್ತಿದ್ದುದರಿಂದ ಅಂತರ್ಜಾಲ ಸಂಪರ್ಕವನ್ನು ಒಂದು ವರ್ಷದ ಕಾಲ ಸ್ಥಗಿತಗೊಳಿಸಬೇಕಾಯಿತು ಎಂದು ಭಾರತ ಸರ್ಕಾರ ಸಮರ್ಥಿಸಿಕೊಂಡಿತ್ತು. ಪತ್ರಕರ್ತರ ಮೇಲಿನ ದಾಳಿಗಳು ವ್ಯವಸ್ಥಿತವಾಗಿರದೆ, ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಎಂದೂ ಬಿಂಬಿಸಲಾಗಿತ್ತು.

ಆರ್‍ಎಸ್‍ಎಫ್ ಸಿದ್ಧಪಡಿಸುವ ವರದಿಯಲ್ಲಿ ಭಾರತ ಇನ್ನೂ ಸುಧಾರಿತ ಸೂಚ್ಯಂಕವನ್ನು ಗಳಿಸುವುದು ಒಂದೆಡೆಯಾದರೆ, ಕೋವಿಡ್ 19 ಎರಡನೆಯ ಅಲೆಯಲ್ಲಿ ಸಂಭವಿಸುತ್ತಿರುವ ಸಾವುನೋವುಗಳು ಮತ್ತು ಗಂಗಾ ನದಿಯಲ್ಲಿ ತೇಲಿ ಬರುತ್ತಿರುವ ನೂರಾರು ಅನಾಥ ಶವಗಳು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ  ಬಿಂಬಿಸಲ್ಪಟ್ಟಿರುವ ಹಿನ್ನೆಲೆಯಲ್ಲೂ ಕೇಂದ್ರ ಸರ್ಕಾರಕ್ಕೆ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಪುನರಾಲೋಚನೆ ಮಾಡುವುದು ಅನಿವಾರ್ಯವಾಗಿಸಿದೆ. ಆದರೆ ಈ ಉದ್ದೇಶದಿಂದಲೇ ಸ್ಥಾಪಿಸಲಾದ ಐಎಂಸಿ, ಡಿಸೆಂಬರ್ 2020ರ ನಂತರ ಒಮ್ಮೆಯೂ ಸಭೆ ಸೇರದಿರುವುದು ಸರ್ಕಾರದ ದ್ವಂದ್ವ ನೀತಿಯನ್ನೂ ಬಿಂಬಿಸುತ್ತದೆ. ಡಿಸೆಂಬರ್ 18ರ ನಂತರದಲ್ಲಿ ಈ ಸಮಿತಿಯ ಸದಸ್ಯರ ನಡುವೆಯೂ ಯಾವುದೇ ರೀತಿಯ ಸಂವಾದ, ಸಮಾಲೋಚನೆ ನಡೆದಿಲ್ಲ. ಇದಕ್ಕೆ ಮೂಲ ಕಾರಣ, ಸಮಿತಿಯ ಸದಸ್ಯರಲ್ಲೊಬ್ಬರಾದ ಪಿ.ಸಾಯಿನಾಥ್ ಸಲ್ಲಿಸಿರುವ ಆಕ್ಷೇಪಗಳು.

ಪಿ.ಸಾಯಿನಾಥ್ ಆಕ್ಷೇಪಗಳು ಮತ್ತು ಶಿಫಾರಸುಗಳು

ತಾವು ಸಲ್ಲಿಸಿರುವ ಆಕ್ಷೇಪಣಾ ಟಿಪ್ಪಣಿಯನ್ನು ಸ್ವತಂತ್ರ ಟಿಪ್ಪಣಿಯಾಗಿ ಪ್ರಕಟಿಸುವಂತೆ ಸಾಯಿನಾಥ್ ಕೋರಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ತಮ್ಮ ಟಿಪ್ಪಣಿಯನ್ನು ನಿರ್ಲಕ್ಷಿಸಿ ಅಥವಾ ಕಡೆಗಣಿಸಿ ಪಿಐಬಿ ಆಗಲೀ ಮಾಹಿತಿ ಮತ್ತು ಪ್ರಸರಣ ಸಚಿವಾಲಯವಾಗಲೀ ವರದಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗದು ಎಂದೂ ಹೇಳಿದ್ದಾರೆ. ತಮ್ಮ ಆಕ್ಷೇಪಣಾ ಟಿಪ್ಪಣಿಗಳಲ್ಲಿ ಸಾಯಿನಾಥ್ ಸರ್ಕಾರದ ಎಲ್ಲ ಸುಳ್ಳು ವರದಿಗಳನ್ನು ತಳ್ಳಿಹಾಕಿರುವುದೇ ಅಲ್ಲದೆ ಒಂದು ವೇಳೆ ಈ ವರದಿಯನ್ನೇ ಆರ್‍ಎಸ್‍ಎಫ್‍ಗೆ ಸಲ್ಲಿಸಿದರೆ ಭಾರತದ ಶ್ರೇಣಿ ಈಗಿರುವ 142ನೆಯ ಸ್ಥಾನಕ್ಕಿಂತಲೂ ಕೆಳಕ್ಕೆ ಕುಸಿಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಐಎಂಸಿ ತನ್ನ ಕಾರ್ಯಾಚರಣೆಯಲ್ಲಿ ಉದ್ದೇಶಿತ ಧ್ಯೇಯಗಳನ್ನೇ ಮರೆತು ಸಮೀಕ್ಷೆ ನಡೆಸಿದೆ ಎಂದು ಆರೋಪಿಸಿರುವ ಸಾಯಿನಾಥ್, ಮಾಧ್ಯಮ ಕ್ಷೇತ್ರವನ್ನು ಅವಶ್ಯ ಸೇವಾ ಕ್ಷೇತ್ರವೆಂದು ಖುದ್ದು ಪ್ರಧಾನಿಗಳೇ ಘೋಷಿಸಿದ್ದರೂ ದೇಶದೆಲ್ಲೆಡೆ ಪತ್ರಕರ್ತರ ಮೇಲೆ ಹಲ್ಲೆ, ದಾಳಿ, ಕೊಲೆ ಪ್ರಯತ್ನಗಳು ಮತ್ತು ಅನಗತ್ಯ ಬಂಧನಗಳು ನಡೆಯುತ್ತಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದೆಡೆ ಆಡಳಿತಾರೂಢ ಪಕ್ಷಗಳ ಬೆಂಬಲಿಗರಿಂದ ದಾಳಿಗೊಳಗಾಗಿರುವ ಪತ್ರಕರ್ತರು ಮತ್ತೊಂದೆಡೆ ಸರ್ಕಾರಗಳ ಅವಕೃಪೆಗೂ ಪಾತ್ರರಾಗಬೇಕಿದ್ದು ಪತ್ರಕರ್ತರನ್ನು ಚಿತ್ರಹಿಂಸೆಗೊಳಪಡಿಸಲು ಕಾನೂನು ನಿಯಮಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಸಾಯಿನಾಥ್ ಆರೋಪಿಸಿದ್ದಾರೆ. ಭಾರತದ ಮಾಧ್ಯಮಗಳನ್ನು ನಿಯಂತ್ರಿಸುವ ಒಟ್ಟು 52 ಕಾನೂನುಗಳನ್ನು ತಮ್ಮ ಟಿಪ್ಪಣಿಯ ಅನುಬಂಧದಲ್ಲಿ ಸಾಯಿನಾಥ್ ಒದಗಿಸಿದ್ದು, ಇವುಗಳಲ್ಲಿ ವಸಾಹತು ಕಾಲದ ಶಾಸನಗಳೂ ಸಹ ಇದ್ದು ಪತ್ರಕರ್ತರ ಸ್ವತಂತ್ರ ಕಾರ್ಯಾಚರಣೆಗೆ ಮಾರಕವಾಗಿದೆ ಎಂದು ಆಕ್ಷೇಪಿಸಿದ್ದಾರೆ. ತಮ್ಮ ಪ್ರತಿಯೊಂದು ಟೀಕೆ ಟಿಪ್ಪಣಿಗಳಿಗೂ ಸಾಕಷ್ಟು ಆಧಾರ, ಆಕರಗಳನ್ನು ಒದಗಿಸಿರುವ ಸಾಯಿಯಾಥ್, ಪೊಲೀಸರ ಉತ್ತರದಾಯಿತ್ವವನ್ನು ನಿಗದಿಪಡಿಸುವ ಕಾನೂನು ಜಾರಿಗೊಳಿಸುವಂತೆಯೂ, ಸುಳ್ಳು ಮೊಕದ್ದಮೆಗಳ ಮೂಲಕ ಮತ್ತೊಬ್ಬರನ್ನು ಬಂಧಿಸುವಂತೆ ಮಾಡುವವರಿಗೆ ಶಿಕ್ಷೆ ವಿಧಿಸುವಂತಹ ಶಾಸನವನ್ನು ಜಾರಿಗೊಳಿಸುವಂತೆಯೂ ಆಗ್ರಹಿಸಿದ್ದಾರೆ.

ತಮ್ಮ ಆಕ್ಷೇಪಗಳಲ್ಲಿ ಪಿ.ಸಾಯಿನಾಥ್ ಕೆಲವು ಗಂಭೀರ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ವರದಿಯಲ್ಲಿ ಭಾರತದಲ್ಲಿ ಮಾಧ್ಯಮಗಳ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ಮಾಧ್ಯಮಗಳ ಮೇಲಿನ ಅಲಿಖಿತ ನಿರ್ಬಂಧ ಮತ್ತು ನಿಯಂತ್ರಣಗಳ ಬಗ್ಗೆ ವಸ್ತುನಿಷ್ಠ ವಿವರಣೆ ಇಲ್ಲದಿರುವುದು, ಸರ್ಕಾರಗಳ ಉತ್ತರದಾಯಿತ್ವದ ಬಗ್ಗೆ ಒಂದೇ ಒಂದು ಉಲ್ಲೇಖವೂ ಇಲ್ಲದಿರುವುದು, ಐಎಂಸಿ ಸಮಿತಿ ನಡೆಸುವ ಮಾತುಕತೆಗಳು ಮತ್ತು ಚರ್ಚೆಗಳು ಸಾರ್ವಜನಿಕರಿಗೆ ಲಭ್ಯವಾಗದಿರುವುದು ಅಕ್ಷಮ್ಯ ಎಂದು ಸಾಯಿನಾಥ್ ಹೇಳುತ್ತಾರೆ. ಈ ರೀತಿಯ ರಹಸ್ಯ ವರದಿಗಳಿಂದ ಜನತೆಯ ವಿಶ್ವಾಸ ಗಳಿಸಲಾಗುವುದಿಲ್ಲ ಎಂದು ಎಚ್ಚರಿಸುತ್ತಾರೆ. ತಮಿಳುನಾಡಿನಲ್ಲಿ ಸಿಂಪ್ಲಿಸಿಟಿ ಎಂಬ ಚಾನಲ್‍ನ ಸಂಪಾದಕ ಆಂಡ್ರ್ಯೂ ಸಾಮ್ ರಾಜಾ ಪಾಂಡಿಯನ್ ಅವರನ್ನು, ಸಾಂಕ್ರಾಮಿಕ ರೋಗಗಳ ನಿಯಂತ್ರಣಾ ಕಾಯ್ದೆಯ ಅಡಿ, ಸರ್ಕಾರದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪ್ರಶ್ನಿಸಿರುವುದಕ್ಕಾಗಿ ಬಂಧಿಸಿರುವುದನ್ನೂ ಸಾಯಿನಾಥ್ ಆಕ್ಷೇಪಿಸಿದ್ದಾರೆ. ಇದು ಈ ಕಾನೂನಿನಡಿ ದಾಖಲೆಯಾಗಿರುವ ಪ್ರಪ್ರಥಮ ಮೊಕದ್ದಮೆಯಾಗಿದೆ.

ಮಾಧ್ಯಮ ಸ್ವಾತಂತ್ರ್ಯದ ಆಧಾರ ಸ್ತಂಭ ಎಂದರೆ ಜನತೆಯ ಪ್ರತಿರೋಧದ ಹಕ್ಕು. ಈ ಹಕ್ಕು ಸಾಮಾನ್ಯ ಪ್ರಜೆಗಳಿಗೆ ಇರುವಷ್ಟೇ ಪತ್ರಕರ್ತರಿಗೂ ಇರಬೇಕಾದುದು ಪ್ರಜಾತಂತ್ರ ವ್ಯವಸ್ಥೆಯ ಲಕ್ಷಣಗಳಲ್ಲೊಂದು.  ಈ ಕುರಿತು ಸಮಿತಿಯಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಸಾಯಿನಾಥ್ ಆಕ್ಷೇಪಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಅಂತರ್ಜಾಲ ಸಂಪರ್ಕಗಳನ್ನು ಕಡಿತಗೊಳಿಸಿರುವ ವಿಚಾರವನ್ನು ಪ್ರಸ್ತಾಪಿಸಿರುವ ಸಾಯಿನಾಥ್, ಇದು ಊಳಿಗಮಾನ್ಯ ಧೋರಣೆಯಾಗಿದ್ದು, ಕೆಲವೇ ಭಯೋತ್ಪಾದಕರು ಅಥವಾ ಉಗ್ರಗಾಮಿಗಳನ್ನು ನಿಯಂತ್ರಿಸಲು ಸಮಸ್ತ ಜನತೆಯನ್ನೇ ಕತ್ತಲಲ್ಲಿಡುವ ಪ್ರಯತ್ನ ಎಂದು ಬಣ್ಣಿಸಿದ್ದಾರೆ. ಮುನಾವರ್ ಫರೂಖಿ ಎಂಬ ಹಾಸ್ಯ ಕಲಾವಿದನನ್ನು ಬಂಧಿಸಿರುವುದನ್ನೂ ಉಲ್ಲೇಖಿಸಿರುವ ಸಾಯಿನಾಥ್, ಭಾರತದಲ್ಲಿ ಇಂದು ನಿಮ್ಮ ಚಿಂತನೆಗಳಿಗಾಗಿಯೂ ನಿಮ್ಮನ್ನು ಬಂಧಿಸಬಹುದು ಎಂಬ ಎಚ್ಚರಿಕೆಯನ್ನು ಸರ್ಕಾರ ಈ ಮೂಲಕ ಕೊಟ್ಟಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ವತಂತ್ರ ಮಾಧ್ಯಮ ನಿರ್ವಹಣೆಯೇ ದುಸ್ತರವಾಗುವಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದ್ದು, ಕೇಂದ್ರ ಸರ್ಕಾರ ಮಾಧ್ಯಮಗಳ ಮೇಲೆ ಸೆನ್ಸಾರ್ ಹೇರುವುದಿಲ್ಲವಾದರೂ, ಆದಾಯ ತೆರಿಗೆ ಇಲಾಖೆಯ ದಾಳಿಗಳ ಮೂಲಕ, ಜಾರಿ ನಿರ್ದೇಶನಾಲಯದ ದಾಳಿಗಳ ಮೂಲಕ, ಮಾಧ್ಯಮ ಸಮೂಹಗಳಲ್ಲಿ ಭೀತಿ ಸೃಷ್ಟಿಸಲಾಗುತ್ತಿದೆ ಎಂದು ಸಾಯಿನಾಥ್ ಆರೋಪಿಸಿದ್ದಾರೆ. ಮಾನವ ಹಕ್ಕು ಕಾರ್ಯಕರ್ತರು ಮತ್ತು ಸಂಘಟನೆಗಳ ಮೇಲೆ, ಅಮ್ನೆಸ್ಟಿ ಇಂಟರ್ ನ್ಯಾಷನಲ್‍ನಂತಹ ಸಂಸ್ಥೆಗಳ ಮೇಲೆ ನಡೆದ ದಾಳಿಗಳಂತೆಯೇ ಮಾಧ್ಯಮಗಳ ಸಂಪಾದಕರ ನಿವಾಸಗಳ ಮೇಲೆ, ಸ್ಟುಡಿಯೋಗಳ ಮೇಲೆ ದಾಳಿ ನಡೆಸುವ ಮೂಲಕ ಸರ್ಕಾರಗಳು ಪರೋಕ್ಷವಾಗಿ ಸೆನ್ಸಾರ್‍ಷಿಪ್ ಜಾರಿಗೊಳಿಸುತ್ತಿದೆ ಎಂದು ಸಾಯಿನಾಥ್ ಆರೋಪಿಸಿದ್ದಾರೆ.

ಮಾಧ್ಯಮ ಸ್ವಾತಂತ್ರ್ಯವನ್ನು ಕುರಿತ ಯಾವುದೇ ಚರ್ಚೆಗಳಲ್ಲಿ ಅತ್ಯವಶ್ಯವಾಗಿ ಬಳಕೆಯಾಗಲೇಬೇಕಾದ ಕೆಲವು ಪ್ರಮುಖ ಪದಗಳನ್ನು ಈ ಸಮಿತಿಯ ವರದಿಯಲ್ಲಿ ಎಲ್ಲಿಯೂ ಉಲ್ಲೇಖಿಸದೆ ಇರುವುದು ಆಶ್ಚರ್ಯಕರವಾಗಿದೆ ಎಂದು ಸಾಯಿನಾಥ್ ಆಕ್ಷೇಪಿಸಿದ್ದಾರೆ. ಪ್ರತಿರೋಧದ ಹಕ್ಕು, ಭಿನ್ನಮತದ ಹಕ್ಕು, ದೇಶದ್ರೋಹದ ಆರೋಪ, ಸಂಪಾದಕರನ್ನು ವಜಾ ಮಾಡುವುದು, ಸರ್ಕಾರಿ ಏಜೆನ್ಸಿಗಳ ಬೆದರಿಕೆ ತಂತ್ರಗಳು, ಪತ್ರಕರ್ತರ ವಿರುದ್ಧ ಏಕಪಕ್ಷೀಯ ಕ್ರಮಗಳು, ಬಂಧನ, ವಜಾ ಮಾಡುವುದು, ಅಮಾನತುಗೊಳಿಸುವುದು, ಸೆನ್ಸಾರ್‍ಷಿಪ್, ಉತ್ತರದಾಯಿತ್ವ ಇವೇ ಮುಂತಾದ ಅಂಶಗಳು ಇಡೀ ವರದಿಯಲ್ಲಿ ಕಾಣದಿರುವುದು, ವರದಿಯ ಮೂಲ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂಬುದು ಸಾಯಿನಾಥ್ ಆಕ್ಷೇಪಣೆ.

ತಮ್ಮ ಆಕ್ಷೇಪಗಳ ಹೊರತಾಗಿ ಕೆಲವು ಶಿಫಾರಸುಗಳನ್ನೂ ಮಾಡಿರುವ ಪಿ.ಸಾಯಿನಾಥ್, ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯ ಅಪಾಯದಲ್ಲಿರುವುದನ್ನು ಒಪ್ಪಿಕೊಳ್ಳುವುದೇ ಪ್ರಥಮ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ. ಹಾಗಾದಲ್ಲಿ ಮಾತ್ರ ಈಗ ಭಾರತದ ಮಾಧ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಸಾಧ್ಯ ಎಂದು ಹೇಳಿರುವ ಸಾಯಿನಾಥ್, ಈ ಅಪಾಯ ಇಲ್ಲದೆ ಹೋಗಿದ್ದರೆ ಐಎಂಸಿ ಸ್ಥಾಪಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಸರ್ಕಾರಗಳು ಮತ್ತು ಸರ್ಕಾರಿ ಏಜೆನ್ಸಿಗಳ ಉತ್ತರದಾಯಿತ್ವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು, ದೇಶಾದ್ಯಂತ ಪತ್ರಕರ್ತರ ವಿರುದ್ಧ ಹೂಡಲಾಗಿರುವ ಎಫ್‍ಐಆರ್‍ಗಳನ್ನು ಹಿಂಪಡೆಯಬೇಕು, ಸಿದ್ದಿಕ್ ಕಪ್ಪನ್ ವಿರುದ್ಧ ಯುಎಪಿಎ ಕಾಯ್ದೆಯ ಬಳಕೆ ಮಾಡುತ್ತಿರುವುದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಭಾರತದ ಪತ್ರಕರ್ತರಿಗೆ ಕಾರ್ಯನಿರತ ಪತ್ರಕರ್ತರ ಕಾಯ್ದೆಯಡಿ ಸೂಕ್ತ ರಕ್ಷಣೆ ದೊರೆಯುತ್ತಿದ್ದು, ಈ ಕಾಯ್ದೆಯನ್ನು ಬಲಪಡಿಸುವ ಮೂಲಕ ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರೆಸ್ ಕೌನ್ಸಿಲ್ ಬಲಪಡಿಸುವುದು, ಐಎಂಸಿ ಸ್ಥಾಪಿಸುವುದರೊಂದಿಗೇ ಕೇಂದ್ರ ಸರ್ಕಾರ ಮಾಧ್ಯಮ ಆಯೋಗವನ್ನು ರಚಿಸುವ ಬಗ್ಗೆಯೂ ಯೋಚಿಸುವಂತೆ ಸಾಯಿನಾಥ್ ಒತ್ತಾಯಿಸಿದ್ದಾರೆ.

ಸಾಯಿನಾಥ್ ಅವರ ಈ ಆಕ್ಷೇಪಗಳು ಕೇಂದ್ರ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದ್ದು, ಆರ್‍ಎಸ್‍ಎಫ್ ಮುಂದೆ ಒಂದು ಉತ್ತಮ ಚಿತ್ರಣ ನೀಡುವ ಸರ್ಕಾರದ ಯೋಜನೆಗೆ ಕಡಿವಾಣ ಹಾಕಿದಂತಾಗಿದೆ. ಏತನ್ಮಧ್ಯೆ ದೇಶದಲ್ಲಿ ಮಾಧ್ಯಮಗಳ ವಿರುದ್ಧ ದಾಳಿಯೂ ಅವ್ಯಾಹತವಾಗಿ ಮುಂದುವರೆದಿದೆ.

ಆಧಾರ: ಫ್ರಂಟ್‍ಲೈನ್ ಪತ್ರಿಕೆಯ ವೆಂಕಿಟೇಶ್ ರಾಮಕೃಷ್ಣನ್ ಅವರ ಲೇಖನ.

Leave a Reply

Your email address will not be published.