‘ಮಾನವೀಯತೆಯೇ ನಮ್ಮ ಲಾಂಛನ’

1250 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸರಕಾರಿ ಹೃದ್ರೋಗ ಚಿಕಿತ್ಸಾ ಸಂಸ್ಥೆ ಎಂಬುದು ಹೆಮ್ಮೆಯ ವಿಚಾರ. ಸ್ವತಃ ಹೃದಯರೋಗ ತಜ್ಞರಾಗಿರುವ ಡಾ.ಸಿ.ಎನ್.ಮಂಜುನಾಥ ಅವರು ಈ ಸಂಸ್ಥೆಯನ್ನು ಖಾಸಗಿ ಪಂಚತಾರಾ ಆಸ್ಪತ್ರೆಗಳಿಗಿಂತಲೂ ಉತ್ತಮವಾಗಿ ಮುನ್ನೆಡೆಸುತ್ತಿದ್ದಾರೆ. ಸರಕಾರಿ ವೈದ್ಯ ಸಂಸ್ಥೆಯೊಂದರ ನಿರ್ವಹಣೆಯಲ್ಲಿ ಎದುರಾಗುವ ಸವಾಲುಗಳು, ವೈದ್ಯಕೀಯ ವ್ಯವಸ್ಥೆಯನ್ನು ಸುಧಾರಿಸಲು ಸರಕಾರ ಮಾಡಬೇಕಾದ ಕೆಲಸಗಳನ್ನು ಕುರಿತ ಡಾ.ಮಂಜುನಾಥ ಅವರ ಅನುಭವದ ನುಡಿಗಳು ಇಲ್ಲಿವೆ.

ಸರಕಾರಿ ಆಸ್ಪತ್ರೆಗಳನ್ನು ಮುನ್ನೆಡೆಸುವ ನಿಮ್ಮ ಒಂದು ದಶಕದ ಅನುಭವ ಹೇಗಿದೆ. ಬಾಣಲೆಯಿಂದ ಬೆಂಕಿಗೆ ಹಾಕಿದ ಪರಿಸ್ಥಿತಿಯಿದೆಯೇ?

ನಾನು 2006ರಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ ಇಲ್ಲಿನ ಪರಿಸ್ಥಿತಿ ಅಧೋಗತಿಯಲ್ಲಿತ್ತು. ಮಾಮೂಲಿ ಸರಕಾರಿ ಆಸ್ಪತ್ರೆಯಂತಿತ್ತು. ಏಳು ಮಹಡಿಯಲ್ಲಿ ನಾಲ್ಕು ಮಹಡಿ ಖಾಲಿಯಿದ್ದವು. ಲಿಫ್ಟ್ ಗಳು ಕೆಲಸ ಮಾಡುತ್ತಿರಲಿಲ್ಲ. ವೈದ್ಯರು ರೋಗಿಗಳಿಗೆ ಶಿರಿಂಜ್‍ಗಳನ್ನು ತರಲು ಬರೆದುಕೊಡುತ್ತಿದ್ದರು. ಇಲ್ಲಿಗೆ ಬಂದರೆ ಗುಣವಾಗುವ ಬಗ್ಗೆ ಜನರಿಗೆ ವಿಶ್ವಾಸವಿರಲಿಲ್ಲ. ವೈದ್ಯರು ಮತ್ತು ಅರೆವೈದ್ಯ ಸಿಬ್ಬಂದಿ ಕೋರ್ಟಿನಲ್ಲಿ ಮೊಕದ್ದಮೆಗಳನ್ನು ಹೂಡಿದ್ದರು.ಅಂಥ ಸ್ಥಿತಿಯಲ್ಲಿ ನಾನು ಸಂಸ್ಥೆಯ ನಿರ್ದೇಶಕನಾದೆ. ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸುಧಾರಿಸಿದೆ. ನಂತರ ಹಂತಹಂತವಾಗಿ ಚಿಕಿತ್ಸಾ ವ್ಯವಸ್ಥೆಯನ್ನು ಉತ್ತಮಪಡಿಸಲಾಯಿತು. ಸರಕಾರದ ಈ ಸಂಸ್ಥೆಯನ್ನು ಖಾಸಗಿ ಪಂಚತಾರಾ ಆಸ್ಪತ್ರೆಯ ಮಟ್ಟಕ್ಕೆ ಬೆಳೆಸಬೇಕೆಂಬ ಗುರಿ ಇತ್ತು. ಈಗ ಆ ಗುರಿಯನ್ನು ಸಾಧಿಸಿದ ತೃಪ್ತಿಯಿದೆ.

ಸರಕಾರಿ ಸಂಸ್ಥೆಯನ್ನು ಮುನ್ನೆಡೆಸಲು ಹಲವಾರು ಸವಾಲುಗಳಿರುತ್ತವೆ. ಮೊದಲನೆಯದಾಗಿ ಮೂಲಭೂತ ಸೌಲಭ್ಯಗಳಿರುವುದಿಲ್ಲ. ಎರಡನೆಯದಾಗಿ ತಜ್ಞವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇರತ್ತದೆ. ಮೂರನೆಯದು ಕೆಲಸ ಮಾಡುವ ಉತ್ತಮ ವಾತಾವರಣ ಇರಬೇಕಾಗುತ್ತದೆ. ನಾಲ್ಕನೆಯದಾಗಿ ಅಗತ್ಯ ವೈದ್ಯಕೀಯ ಉಪಕರಣಗಳು ಇರಬೇಕು. ಐದನೆಯದಾಗಿ ಸರಕಾರದ ಕಡೆಯಿಂದ ಆಡಳಿತಾತ್ಮಕವಾಗಿ ಸಹಕಾರ ಸಿಗಬೇಕು. ಈ ಸಹಕಾರ ಮತ್ತು ನೆರವು ತ್ವರಿತವಾಗಿ ಸಿಗಬೇಕು.

ಈ ವಿಚಾರದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಯಾವ ಕೊರತೆಯೂ ಇದುವರೆಗೆ ನಮಗೆ ಕಾಡಿಲ್ಲ. ಮೂಲಭೂತ ಸೌಲಭ್ಯ, ಸಿಬ್ಬಂದಿ, ಅಗತ್ಯ ಉಪಕರಣಗಳು ಯಾವುದರ ಕೊರತೆಯೂ ಇಲ್ಲ. ಕೆಲಸ ಮಾಡಲು ಉತ್ತಮ ವಾತಾವರಣವನ್ನೂ ನಾವು ಇಲ್ಲಿ ಸೃಷ್ಟಿಸಿದ್ದೇವೆ. ಇಲ್ಲಿನ ಸಿಬ್ಬಂದಿ ಸಂಸ್ಥೆಯನ್ನು ತಮ್ಮದೆಂದು ಭಾವಿಸಿದ್ದಾರೆ. ಹಾಗಾಗಿ ಜಯದೇವ ಹೃದ್ರೋಗ ಸಂಸ್ಥೆ ಕಳೆದ ಒಂದು ದಶಕದಲ್ಲಿ ಶೇ 500ರಷ್ಟು ಪ್ರಗತಿ ಸಾಧಿಸಿದೆ. ಒಂದು ದಶಕದ ಹಿಂದೆ 250 ಹಾಸಿಗೆ ಸಾಮರ್ಥ್ಯ ಹೊಂದಿದ್ದ ಆಸ್ಪತ್ರೆ ಇಂದು 1250 ಹಾಸಿಗೆಗೆ ಏರಿಕೆಯಾಗಿದೆ.

ಬೆಂಗಳೂರಿಗೆ ಸೀಮಿತವಾಗಬಾರದೆಂದು ಮೈಸೂರಿನಲ್ಲಿ 400 ಹಾಸಿಗೆ ಸಾಮರ್ಥ್ಯದ ಆತ್ಯಾಧುನಿಕ ತಂತ್ರಜ್ಞಾನ ಹೊಂದಿದ ಆಸ್ಪತ್ರೆಯನ್ನು ತೆರೆಯಲಾಗಿದೆ. ಅಲ್ಲದೇ ಹೈದ್ರಬಾದ್‍ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಗುಲ್ಬರ್ಗಾದಲ್ಲಿ ಒಂದು ಅತ್ಯಾಧುನಿಕ ಆಸ್ಪತ್ರೆ ಬೇಕೆಂಬ ಕೂಗು ಕಳೆದ ಇಪ್ಪತ್ತು ವರ್ಷಗಳಿಂದ ಕೇಳಿಬರುತ್ತಿತ್ತು. ಅಲ್ಲೂಕೂಡ 125 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ತೆರೆಯಲಾಗಿದ್ದು ಅದು ಉತ್ತಮವಾಗಿ ನಡೆಯುತ್ತಿದೆ. ಅಲ್ಲೂ ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಬಳಿಕ ಬೆಂಗಳೂರಿನ ಇಎಸ್‍ಐ ಆಸ್ಪತ್ರೆಯಲ್ಲೊಂದು ಘಟಕ ತೆರೆಯಲಾಗಿದೆ.ಒಟ್ಟಿನಲ್ಲಿ ಭಾರತದಲ್ಲಿ ಮಾತ್ರವಲ್ಲದೇ ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಏಕಮೇವ ಹೃದ್ರೋಗ ಸಂಸ್ಥೆ ಇದಾಗಿದೆ.

ಕಳೆದ ಹತ್ತು ವರ್ಷಗಳಲ್ಲಿ 50 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 5 ಲಕ್ಷ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಮ್ಮಆಸ್ಪತ್ರೆಗೆ ಸಚಿವರು, ಶಾಸಕರು ಹಾಗೂ ಉದ್ಯಮಿಗಳು ವಿಐಪಿಗಳಲ್ಲ. ಕಡುಬಡವ ರೋಗಿಗಳೇ ನಮ್ಮ ವಿಐಪಿಗಳು. ಮಾನವೀಯತೆಯೇ ನಮ್ಮ ಲಾಂಛನ.

ಸರಕಾರಿ ವ್ಯವಸ್ಥೆಯ ಒಳಗೆ ಕೆಲಸ ಮಾಡಬೆಕೆಂದು ಬಯಸುವ ವೈದ್ಯರು, ಪರಿಣತರುಯಾವ ಮಾನಸಿಕತೆ ಹೊಂದಿರಬೇಕು? ಅಥವಾಯಾವ ಮಾನಸಿಕತೆಗೆ ಒಗ್ಗಿಕೊಳ್ಳಬೇಕು?

ಸರಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಕೆಲಸ ಮಾಡುವ ಉತ್ಸಾಹ ಇರಬೇಕು. ನಾವು ಮಾಡುವ ವೃತ್ತಿಯನ್ನು ಗೌರವಿಸಬೇಕು ಮತ್ತು ಪ್ರೀತಿಸಬೇಕು. ಮಾನವೀಯತೆ ಗುಣವಿರಬೇಕು. ಹಾಗೆಯೇ ಜಾಣ್ಮೆ ಇದ್ದರೆ ಸಾಲದು ತಾಳ್ಮೆಯಿರಬೇಕು. ಸರಕಾರಿ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಕಿರುಕುಳ ಆಗಬಹುದು. ಅದನ್ನು ತಾಳಿಕೊಳ್ಳಬೇಕು. ವಿದೇಶಿಯರು ನಮ್ಮ ವೈದ್ಯಕೀಯ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಮಾಡುತ್ತಾರೆ. ಅಮೆರಿಕ, ಲಂಡನ್ ಮುಂತಾದ ದೇಶಗಳಲ್ಲಿ ಒಂದು ಇ.ಸಿ.ಜಿ, ಎಕೋ ಪರೀಕ್ಷೆ ಮಾಡಿಸಬೇಕಾದರೆ ಹದಿನೈದು ದಿನಗಟ್ಟಲೇ ಕಾಯಬೇಕಾಗುತ್ತದೆ. ಆದರೆ ನಮ್ಮ ಜನರಿಗೆ ಒಂದೇ ದಿನದಲ್ಲಿ ಆದರೂ ತಾಳ್ಮೆಯಿಲ್ಲ. ಒಂದು ಸರಕಾರಿ ವ್ಯವಸ್ಥೆ ಸರಿಯಾಗಿ ನಡೆಯಬೇಕಾದರೆ ಜನರೂ ಸಹಕರಿಸಬೇಕು.ಇವತ್ತು ಹಳ್ಳಿಗಳಲ್ಲಿ, ಹೋಬಳಿ ಮತ್ತು ತಾಲ್ಲೂಕುಗಳಲ್ಲಿ ಸರಕಾರಿ ಆಸ್ಪತ್ರೆಗಳಿಗೆ ಹೋಗಲು ವೈದ್ಯರು ಭಯಪಡುತ್ತಾರೆ.

ಕೆಲವೊಮ್ಮೆ ಉತ್ತಮಚಿಕಿತ್ಸೆ ನೀಡಿದರೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಜನರು ವೈದ್ಯರ ಮೇಲೆ ಹಲ್ಲೆ ಮಾಡುವುದಿದೆ. ಅಂಥ ಸಂದರ್ಭದಲ್ಲಿ ಬೇಸರವಾಗುತ್ತದೆ. ಅಂತ ಸ್ಥಿತಿಯಲ್ಲಿ ರೋಗಿಗಳಿಗೆ ಪರಿಸ್ಥಿತಿಯ ನೈಜತೆಯನ್ನು ತಿಳಿಸಬೇಕು, ಕೆಲವು ಕಾಯಿಲೆಗಳನ್ನು ಗುಣಪಡಿಸಬಹುದು, ಕೆಲವನ್ನು ಗುಣಪಡಿಸಲಾಗದು. ಆ ಬಗ್ಗೆ ರೋಗಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಡಬೇಕು. ಒಂದುರೀತಿಯಲ್ಲಿ ವೈದ್ಯಕೀಯರಂಗ ಯುದ್ಧರಂಗವಾಗಿದೆ. ವೈದ್ಯರ ಮೇಲೆ ಇವತ್ತು ಮಾನಸಿಕವಾಗಿ ಹಾಗೂ ದೈಹಿಕವಾಗಿ ಒತ್ತಡವಿದೆ.ಇದರ ಜೊತೆಗೆ ವೈದ್ಯವೃತ್ತಿ ವ್ಯಾಪಾರವೂ ಆಗಿದೆ.

ಸರಕಾರಿ ಆಸ್ಪತ್ರೆಗಳಿಗೆ ನಿಜಕ್ಕೂ ಭವಿಷ್ಯವಿದೆಯೇ?

ಖಂಡಿತವಾಗಿ ಭವಿಷ್ಯವಿದೆ. ಇವತ್ತು ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ ಎಲ್ಲಾ ಆಸ್ಪತ್ರೆಗಳಲ್ಲೂ ಸಾಕಷ್ಟು ಜನಸಂದಣಿ ಇದೆ. ಆದರೆಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಆ ದಿಕ್ಕಿನಲ್ಲೂ ಸರಿಪಡಿಸಲು ಸರಕಾರ ಈಗ ಕ್ರಮ ಕೈಗೊಳ್ಳುತ್ತಿದೆ. ಅಧಿಕಾರ ವಿಕೇಂದ್ರೀಕರಣ ಮಾಡುವ ಮೂಲಕ ಎಲ್ಲಾ ಭಾಗದ ಆಸ್ಪತ್ರೆಗಳನ್ನು ಬಲಪಡಿಸಲು ಮುಂದಾಗಿದೆ.ಆರ್ಥಿಕ ವಿಚಾರವಾಗಿ ಕೂಡ ಸ್ಥಳೀಯವಾಗಿ ನಿರ್ಧಾರ ಕೈಗೊಳ್ಳಲು ಅಧಿಕಾರ ಕೊಡಲಾಗುತ್ತಿದೆ. ಉತ್ತಮ ಕೆಲಸ ಮಾಡಿದಾಗಲೂ ಸರಕಾರಿ ಆಸ್ಪತ್ರೆಗಳಿಗೆ ಪ್ರಚಾರ ಸಿಗುತ್ತಿಲ್ಲ. ಯಾವುದೋ ಒಂದು ನಿರ್ಲಕ್ಷ್ಯವಾಗಿದ್ದರೆ ಅದನ್ನೇ ದೊಡ್ಡದು ಮಾಡಲಾಗುತ್ತಿದೆ. ಜನರಿಗೆ ತಾಳ್ಮೆಯಿಲ್ಲ. ನಮ್ಮ ಸ್ಥಳೀಯ ಜನಪ್ರತಿನಿಧಿಗಳಿಗೆ ವೈದ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತಿಳಿದಿಲ್ಲ.

ಖಾಸಗಿ ಆಸ್ಪತ್ರೆಗಳ ಅತಿಯಾದ ಲಾಭಕೋರತನದಿಂದ ಬಡ ರೋಗಿಗಳನ್ನು ರಕ್ಷಿಸುವುದು ಸಾಧ್ಯವೇ? ಸಾಧ್ಯವಿದ್ದರೆ ಹೇಗೆ?

ಸರಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಿಜನರಲ್ಲಿ ವಿಶ್ವಾಸ ಮೂಡಿಸಿದರೆ ಖಾಸಗಿ ಆಸ್ಪತ್ರೆಗಳು ತಾವಾಗಿಯೇ ಕಡಿಮೆದರದಲ್ಲಿ ಉತ್ತಮಚಿಕಿತ್ಸೆ ನೀಡುತ್ತವೆ. ಈಗ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿರುವ ಖಾಸಗಿ ಆಸ್ಪತ್ರೆಗಳು ಅಷ್ಟೇನೂ ಹೊರೆಯಲ್ಲದ ದರದಲ್ಲಿ ಚಿಕಿತ್ಸೆ ನೀಡುತ್ತಿವೆ. ವೈದ್ಯವೃತ್ತಿಗೆ, ವೈದ್ಯರ ಸಮೂಹಕ್ಕೆ ಕೆಟ್ಟ ಹೆಸರು ಬರತ್ತಿರುವುದು ಪಂಚಾತಾರಾ ಖಾಸಗಿ ಆಸ್ಪತ್ರೆಗಳಿಂದ. ಇಲ್ಲೂ ವೈದ್ಯರ ಸಮಸ್ಯೆಯಿಲ್ಲ, ಆಸ್ಪತ್ರೆಯನ್ನು ನಡೆಸುವ ಸಂಸ್ಥೆ ಇಲ್ಲದ ಪರೀಕ್ಷೆಗಳನ್ನು ನಡೆಸಲು ಒತ್ತಾಯಿಸುತ್ತದೆ. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ವ್ಯಾಪಾರಿ ಸಂಸ್ಥೆಗಳು ಬಂದ ಮೇಲೆ ಈ ಎಲ್ಲಾ ಸಮಸ್ಯೆಗಳು ಆರಂಭವಾಗಿವೆ.

ಬೇಕಿಲ್ಲದ ರೋಗಪತ್ತೆ ಪರೀಕ್ಷೆ, ಚಿಕಿತ್ಸೆ ಹಾಗೂ ಔಷಧಿಗಳನ್ನು ರೋಗಿಗಳಿಗೆ ಶಿಫಾರಸು ಮಾಡುವ ವೈದ್ಯರ ಮೇಲೆ ನಿಯಂತ್ರಣಕಾಯ್ದೆ ಹಾಗೂ ನಿಯಂತ್ರಣ ಮಂಡಳಿ ಬೇಕಿದೆಯೇ?

ಎಲ್ಲದಕ್ಕೂ ಕಾನೂನಿಂದಲೇ ಪರಿಹಾರ ಸಾಧ್ಯವಿಲ್ಲ. ಜನರು ಸಾಧ್ಯವಾದಷ್ಟು ಸರಕಾರಿ ಆಸ್ಪತ್ರೆಗಳಿಗೆ ಹೋಗಲು ಮನಸ್ಸು ಮಾಡಬೇಕು. ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗಿ ಬಂದರೆ ಪಂಚಾತಾರಾ ಆಸ್ಪತ್ರೆಗಳ ಬದಲಾಗಿ ಖಾಸಗಿ ವೈದ್ಯಕೀಯಕಾಲೇಜು ಆಸ್ಪತ್ರೆಗಳಿಗೆ ಹೋಗಬೇಕು. ಇಲ್ಲಿ ಇದ್ದು ದರಲ್ಲೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ದೊರೆಯುತ್ತದೆ.ತುರ್ತುನಿಗಾ ಘಟಕಗಳಲ್ಲಿಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿ ಬಂದಾಗ ಹೆಚ್ಚಿನ ಹಣ ವ್ಯಯವಾಗುತ್ತದೆ. ಆದ್ದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಹೆಚ್ಚುಹೆಚ್ಚು ತುರ್ತು ನಿಗಾ ಘಟಕಗಳನ್ನು ಸ್ಥಾಪಿಸಬೇಕಿದೆ.

ಕಾರ್ಪೋರೇಟ್ ವೈದ್ಯ ಸಂಸ್ಥೆಗಳಿಂದ ಹಾಗೂ ಅಲ್ಲಿನ ವೈದ್ಯರಿಂದ ವೈದ್ಯವೃತ್ತಿಗೆ ಆಗುವ ಹಾನಿ ಸರಿಪಡಿಸುವುದು ಹೇಗೆ?

ಕಾರ್ಪೋರೇಟ್ ಆಸ್ಪತ್ರೆಗಳಲ್ಲೂ ವೈದ್ಯರತಪ್ಪಿಲ್ಲ. ಕಾರ್ಪೋರೇಟ್ ಸಂಸ್ಥೆಗಳ ಮಾಲೀಕರು ಮಾಡುವ ತಪ್ಪಿನಿಂದ ವೈದ್ಯರಿಗೆ ಕೆಟ್ಟ ಹೆಸರು ಬರುತ್ತಿದೆ. ಆ ಕೆಟ್ಟ ಹೆಸರು ವೈದ್ಯರಿಗಿಂತ ಕಾರ್ಪೋರೇಟ್ ಸಂಸ್ಥೆಗಳ ಮಾಲೀಕರಿಗೆ ಹೋಗುವಂತೆ ಮಾಡಬೇಕಿದೆ. ಅದಕ್ಕಾಗಿ ಸರಕಾರ ಈಗ ರೋಗಿಯ ಚಾರ್ಟರ್ ಹಾಕಬೇಕು, ಚಿಕಿತ್ಸೆಗಳ ಪ್ಯಾಕೇಜ್‍ಗಳನ್ನು ರೋಗಿಗಳಿಗೆ ಕಾಣುವಂತೆ ಪ್ರದರ್ಶಿಸಬೇಕೆಂದು ನಿಯಮ ಮಾಡಿದೆ.

ಸರಕಾರಿ ವೈದ್ಯರಿಗೆ ಖಾಸಗಿಯಾಗಿ ವೃತ್ತಿಸೇವೆ ಮಾಡಲು ಅವಕಾಶ ನೀಡಬೇಕೇ? ಯಾವ ಪ್ರಮಾಣದಲ್ಲಿ ಮತ್ತು ಯಾವ ನಿಯಂತ್ರಣದಲ್ಲಿ?

ಸರಕಾರಿ ವೈದ್ಯರು ಕಚೇರಿ ಸಮಯ ಮುಗಿದ ಮೇಲೆ ಸಂಜೆ 5 ಗಂಟೆ ನಂತರ ಖಾಸಗಿಯಾಗಿ ವೃತ್ತಿ ಮಾಡಬಹುದು. ಆದರೆ ಅವರು ನರ್ಸಿಂಗ್ ಹೋಮ್‍ ಅಥವಾ ಸ್ವಂತ ಆಸ್ಪತ್ರೆಗಳನ್ನು ತೆರೆಯಬಾರದು. ಸರಕಾರಿ ವೈದ್ಯರು ಖಾಸಗಿಯಾಗಿ ವೃತ್ತಿ ಮಾಡಬಾರದೆಂದು ಸರಕಾರ ಭತ್ಯೆಕೊಡುತ್ತದೆ. ಹೀಗೆ ಸರಕಾರಿ ಭತ್ಯೆ ಪಡೆದವರು ಖಾಸಗಿಯಾಗಿ ವೃತ್ತಿ ಮಾಡಬಾರದು. ಹಾಗೆ ಮಾಡಿದರೆ ಭತ್ಯೆ ಕೊಡುವುದನ್ನು ನಿಲ್ಲಿಸಬೇಕು.

ಸರಕಾರಿ ಆಸ್ಪತ್ರೆಗಳನ್ನು ಪುನರುಜ್ಜೀವನಗೊಳಿಸಲು ಆಗಬೇಕಿರುವ ಐದು ಅತಿ ಆವಶ್ಯಕ ಕ್ರಮಗಳಾವುವು?

  • ಹೊಸ ವೈದ್ಯ ಕಾಲೇಜುಗಳನ್ನು ತೆರೆಯುವುದನ್ನು ನಿಲ್ಲಿಸಿ ಆದೇ ಹಣದಿಂದ ಈಗಿರುವ ವೈದ್ಯ ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ಬಲಪಡಿಸಬೇಕು.

  • ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಐಸಿಯು ಘಟಕಗಳನ್ನು ತೆರೆಯುವ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ಶಕ್ತಿ ತುಂಬಬೇಕು.

  • ಅಧಿಕಾರ ವಿಕೇಂದ್ರೀಕರಣವಾಗಬೇಕು, ಅಂದರೆ ಸ್ಥಳೀಯವಾಗಿ ಅವರಿಗೆ ಬೇಕಾದ ಕೆಲವೊಂದು ಆರ್ಥಿಕ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು.

  • ಸ್ಥಳೀಯ ಜನಪ್ರತಿನಿಧಿಗಳ ಹಸ್ತಕ್ಷೇಪ ನಿಲ್ಲಬೇಕು ಮತ್ತು ವೈದ್ಯರಿಗೆರಕ್ಷಣೆ ನೀಡಬೇಕು.

  • ಶಾಸಕರು ಮತ್ತು ಸಂಸದರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶೇ.10ರಷ್ಟು ಅನುದಾನವನ್ನು ಅವರ ಕ್ಷೇತ್ರದ ಆಸ್ಪತ್ರೆ ಅಭಿವೃದ್ಧಿಗೆ ಕೊಡಬೇಕು. ಇನ್ನೊಂದು ಮುಖ್ಯ ಅಂಶವೆಂದರೆ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವ ಕ್ಲಿನಿಕ್‍ಗಳನ್ನು ಬಲಪಡಿಸಬೇಕು.

 

Leave a Reply

Your email address will not be published.