ಮಾನವ ನಿರ್ಮಿತ ಸಂಘರ್ಷ!

ನಿವೃತ್ತ ಅರಣ್ಯಾಧಿಕಾರಿ ಹಾಗೂ ವೈಲ್ಡ್ ಲೈಫ್ ಫಸ್ಟ್ ಸಂಘಟನೆ ರೂವಾರಿ ಕೆ.ಎಂ.ಚಿಣ್ಣಪ್ಪ ಅವರನ್ನು ಈ ಸಂಚಿಕೆಯ ಮುಖ್ಯಚರ್ಚೆ ವಿಷಯದ ಬಗ್ಗೆ ಸಮಾಜಮುಖಿ ಮಾತಿಗೆಳೆದಿದ್ದೇ ತಡ ತಮ್ಮಲ್ಲಿನ ಸಾತ್ವಿಕ ಆಕ್ರೋಶವನ್ನು ನಿರರ್ಗಳವಾಗಿ ಹೊರಹಾಕಿದರು..

ಕೆ.ಎಂ.ಚಿಣ್ಣಪ್ಪ

ವನ್ಯಜೀವಿ ಮಾನವ ಸಂಘರ್ಷ ಸಂಪೂರ್ಣವಾಗಿ ಮನುಕುಲದ ಸೃಷ್ಟಿ. ಮೂರು ದಶಕದಲ್ಲಿ ಇದು ಪರಾಕಾಷ್ಠೆ ತಲುಪಿದೆ. ಯಾಕೆ ಹೀಗೆ ಎಂದು ಸ್ವಲ್ಪ ಹಿಂದಿರುಗಿ ನೋಡಿದರೆ ನಮ್ಮ ತಪ್ಪುಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ.

ವನ್ಯಜೀವಿಗಳು ಸ್ವಚ್ಛಂದವಾಗಿ ಅರಣ್ಯದಲ್ಲಿ ವಿಹರಿಸುತ್ತಿದ್ದವು. ಅವು ದುಷ್ಟ ಮಾನವನಂತೆ ಐಷಾರಾಮಿ ಬದುಕು ಬಯಸುವುದಿಲ್ಲ. ಬದಲಿಗೆ ಸಂತೃಪ್ತಿಯಾಗುವಷ್ಟು ನೀರು ಮತ್ತು ಆಹಾರವನ್ನು ಮಾತ್ರ ಬಯಸುತ್ತವೆ. ಇಂತಹ ಕನಿಷ್ಠ ಜ್ಞಾನ ನಮಗಿಲ್ಲದೆ ಹೋಯಿತಲ್ಲ ಅನ್ನೋ ನೋವು ನನ್ನಂತಹ ಪ್ರಾಣಿಪ್ರೇಮಿಗಳನ್ನು ಸತತವಾಗಿ ಕಾಡುತ್ತಿದೆ.

“ನಾಡಿಗರು ಕಾಡಿಗೆ ಪ್ರವೇಶ ಮಾಡಿದಾಗ ಕಾಡಿಗರು ನಾಡಿಗೆ ಬರಲೇಬೇಕು” -ಇದು ಪ್ರಕೃತಿಯ ಧರ್ಮ. ವನ್ಯಜೀವಿಗಳಿಗೆ ಅಗತ್ಯವಿರುವ ನೀರು ಆಹಾರ ಸಿಗದ ಕಾರಣಕ್ಕಾಗಿ ಅವು ಅನಿವಾರ್ಯವಾಗಿ ನಾಡು ಪ್ರವೇಶ ಮಾಡುತ್ತಿವೆ. ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯೊಂದರಲ್ಲೇ 3 ಲಕ್ಷ ಜಾನುವಾರು ಆಹಾರ ಅರಸಿ ಅರಣ್ಯಕ್ಕೆ ಹೋಗುತ್ತವೆ. ಇನ್ನೂ ಜನಸಂಚಾರ (ಅಕ್ರಮವಾಗಿ) ಹೇಳತೀರದು. ಎಲ್ಲವೂ ಅಡ್ಜೆಸ್ಟಮೆಂಟ್ ಪಾಲಿಸಿ. ಹಾಗಾಗಿ ನಾವು ಮಾಡಿದ ಪಾಪವನ್ನು ಉಣ್ಣಲೇಬೇಕಲ್ವೆ. ಇದು ಏಕಾಏಕಿ ಆರಂಭಗೊಂಡ ಸಂಘರ್ಷ ಅಲ್ಲವೇ ಅಲ್ಲ. ನಾವು ಕೊಟ್ಟಿದ್ದರ ಪ್ರತಿಫಲ ಮಾತ್ರ.

ಮೂಲಸೌಕರ್ಯ ನೆಪದಲ್ಲಿ ಕಾಡಾನೆ ಕಾರಿಡಾರ್‌ಗಳನ್ನು ಮುಚ್ಚಿದ್ದೇವೆ. ರಸ್ತೆ ನಿರ್ಮಾಣಕ್ಕಾಗಿ ಅರಣ್ಯಭೂಮಿ ಒತ್ತುವರಿಯಾಗಿದೆ. ಕಾಡಂಚಿನ ನೆಪದಲ್ಲಿ ಜನವಸತಿ ಅರಣ್ಯ ಪ್ರದೇಶದಲ್ಲಿ ನೆಲೆನಿಂತಿದೆ. ಇವೆಲ್ಲವೂ ಪ್ರಮುಖವಾಗಿ ಕಾಡಾನೆಗಳಿಗೆ ನೆಲೆ ಇಲ್ಲದಂತೆ ಮಾಡಿವೆ. ಅದೃಷ್ಟಕ್ಕೆ ಆನೆಗಳಿಗೇನಾದ್ರೂ ಮಾತು ಬರೋಹಾಗಿದ್ರೆ ನಮಗೆ ಮರಣದಂಡನೆ ಅಗಲಿ ಎಂದು ಆಗ್ರಹಿಸುತ್ತಿದ್ದವೋ ಏನೋ.. ನಮ್ಮ ಪುಣ್ಯ ಅವು ಮೂಖಪ್ರಾಣಿಗಳಾಗಿವೆ.

ವನ್ಯಜೀವಿಗಳಿಂದ ರೈತರು ಅನುಭವಿಸುವ ಬೆಳೆ, ಆಸ್ತಿ, ಇಲ್ಲವೇ ಪ್ರಾಣಹಾನಿಗೆ ನಮ್ಮ ಸರ್ಕಾರ ಕೊಡೋ ಪರಿಹಾರ ‘ಆನೆಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಯಂತೆ. ಸರಕಾರದ ಇಬ್ಬಗೆಯ ನೀತಿಯೂ ಈ ಸಂಘರ್ಷ ಉಲ್ಬಣಿಸಲು ಕಾರಣವಾಗಿದೆ.

ಕಾಡಾನೆ ಹಾವಳಿ ನಿಯಂತ್ರಣ ಹೆಸರಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜೇಬು ತುಂಬಿತೇ ಹೊರತು.. ಫಲ ಶೂನ್ಯ. ಅಲ್ಲ ಸ್ವಾಮಿ.. ಇವರ  ಸೋಲಾರ್ ತಂತಿಬೇಲಿ ಆಗಲೀ, ಕಂದಕ ನಿರ್ಮಾಣ ಆಗಲಿ ರೈಲ್ವೇಕಂಬಿ ಬಳಸಿ ಬೇಲಿ ಕಟ್ಟುವುದು ಸಾಧ್ಯವೇ? ಯಾರು ಇವರಿಗೆ ಐಡಿಯಾ ಕೊಡೋರು. ಎಲ್ಲಿಯಾದರೂ ಇದು ಸಕ್ಸೆಸ್ ಆಗಿದ್ಯಾ ತೋರಿಸಿ. ಬರೇ ದುಡ್ಡು ಹೊಡೆಯುವ ಕಾರ್ಯಕ್ರಮ ಮಾತ್ರ.

ಇನ್ನು, ಸಂಘರ್ಷಕ್ಕೆ ಶಾಶ್ವತವಾದ ಪರಿಹಾರ ಕೇಳಿದ್ರೆ ಖಂಡಿತವಾಗಿ ಇದೆ. ಇದರ ಅನುಷ್ಠಾನದ ಇಚ್ಛಾಶಕ್ತಿ ನಮ್ಮ ಆಳುಗರಿಗೆ ಇದೆಯಾ ಅನ್ನೋದು ನನ್ನ ಮೂಲಪ್ರಶ್ನೆ. ಅರಣ್ಯದಂಚಿನ ಜನವಸತಿ ತೆರವು ಮಾಡಿ. ಅವರಿಗೆ ಪನರ್ವಸತಿಗೆ ಸರ್ಕಾರದಿಂದ ಒಂದು ಸೂರು ಮತ್ತು ಕೃಷಿಗೆ ಒಂದಷ್ಟು ಜಮೀನು ಕೊಡಲಿ (ಬರೇ ನಾಗರಹೊಳೆ ವ್ಯಾಪ್ತಿಯ ಅರಣ್ಯದಂಚಿನ 640 ಚದರ ಕಿಮೀಯಲ್ಲಿ 10 ಸಾವಿರ ಮಂದಿ ನೆಲೆಸಿದ್ದಾರೆ). ತೆರವಾದ ಎಲ್ಲ ಪ್ರದೇಶ ವನ್ಯಜೀವಿಗಳ ಬದುಕಿಗೆ ತೆರೆದುಕೊಳ್ಳುತ್ತದೆ. ಇಷ್ಟು ಸಾಕು. ಜೊತೆಗೆ ಅರಣ್ಯದಲ್ಲಿ ಸಾಕಷ್ಟು ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಆಹಾರವೂ ಸಿಗುವಂತಾಗಬೇಕು. ನಾಗರಹೊಳೆಯಿಂದ ಬನ್ನೇರುಘಟ್ಟದವರೆಗೆ ಸ್ವಚ್ಛಂದ ಓಡಾಟಕ್ಕೆ ಅನುವು ಮಾಡಿಕೊಡಬೇಕು.

ವನ್ಯಜೀವಿ ಸಂತತಿ ಈಗಾಗಲೇ ಕ್ಷೀಣಿಸುತ್ತಿದೆ. ಮತ್ತೊಂದೆಡೆ ಮನುಕುಲದ ಸಂತತಿ ಬೆಳೆಯುತ್ತಿದೆ. ಸಂತಾಹರಣ ಚಿಕಿತ್ಸೆ ಬೇಕಿರೋದು ಮನುಷ್ಯರಿಗೇ ಹೊರತು ಪ್ರಾಣಿಗಳಿಗಲ್ಲ. ಜಾನುವಾರುಗಳನ್ನು ದೊಡ್ಡಿಯಲ್ಲಿ ಕೂಡಿಹಾಕಬಹುದು, ವನ್ಯಜೀವಿಗಳನ್ನಲ್ಲ. ಅವು ನಿಸರ್ಗದ ಮಕ್ಕಳು. ನಮ್ಮವರೇ ಹಚ್ಚುವ ಕಾಡ್ಗಿಚ್ಚು ಕೂಡಾ ವನ್ಯಜೀವಿಗಳು ನಾಡ ಪ್ರವೇಶಕ್ಕೆ ಕಾರಣವಾಗ್ತಿದೆ.

ಅಲ್ಲಾರೀ.. ಸರ್ಕಾರ ಕಾಡಲ್ಲಿ ಹುಲ್ಲು ಬೆಳೆಸುತ್ತದಂತೆ. ಇದಕ್ಕಿಂತ ಮೂರ್ಖ ಯೋಜನೆ ಇನ್ನೇನಿದೆ..? ಇಷ್ಟು ವರ್ಷಗಳ ಕಾಲ ಪ್ರಕೃತಿದತ್ತ ಹುಲ್ಲು ಇರ್ಲಿಲ್ವಾ? ಇದೊಂಥರಾ ತಮಾಷೆಯಾಗಿದೆ. ಲೂಟಿಗೆ ಇನ್ನೊಂದು ತಂತ್ರವಷ್ಟೇ. ಯೋಜನಾರಹಿತವಾದ ಅಣೆಕಟ್ಟುಗಳೂ ವನ್ಯಜೀವಿ ವಾಸ್ತವ್ಯ ಅಲುಗಾಡುವಂತೆ ಮಾಡಿದೆ.

ಇದಕ್ಕೆ ತ್ವರಿತವಾಗಿ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಆನೆಗಳು ಹೀಗಿದ್ದವು ಎಂದು ಚಿತ್ರಪಟಗಳಲ್ಲಿ ನೋಡುವ ಕಾಲ ಬರುವ ಸಮಯ ದೂರವಿಲ್ಲ…! ಒಟ್ಟಾರೆ ಸರ್ಕಾರ ಮತ್ತು ಆಸಕ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಮಾನವೀಯತೆ ಆಧಾರದಲ್ಲಿ ಸ್ವಲ್ಪ ಚಿಂತನೆ

ಮಾಡಿದರೆ ಭವಿಷ್ಯದಲ್ಲಿ ವನ್ಯಜೀವಿಗಳನ್ನು ಫೋಟೋದಲ್ಲಿ ನೋಡುವುದನ್ನು ತಪ್ಪಿಸಬಹುದು. ಇಲ್ಲವಾದರೆ ವನದೇವಿಯೇ ಮುನಿಸಿ ಮತ್ತೊಂದು ನಿರ್ಣಾಯಕ ಸಂಘರ್ಷಕ್ಕೆ ನಾಂದಿಯಾದರೂ ಅಚ್ಚರಿಪಡಬೇಕಿಲ್ಲ…!

ನಿರೂಪಣೆ: ಕೆ.ವಿ.ಪರಮೇಶ್

Leave a Reply

Your email address will not be published.