ಮಾನವ-ವನ್ಯಜೀವಿ ಸಂಘರ್ಷ ಜಾಗತಿಕ ನೋಟ

ಮಾನವ-ವನ್ಯಜೀವಿ ಸಂಘರ್ಷ ಮನುಷ್ಯನ ನಾಗರಿಕತೆಯಷ್ಟೇ ಹಳೆಯದಾದದ್ದು. ಇಂದು ಅಭಿವೃದ್ಧಿಶೀಲ ಪ್ರದೇಶಗಳಾದ ದಕ್ಷಿಣ ಏಷಿಯಾ ಹಾಗೂ ಆಗ್ನೇಯ ಏಷಿಯಾದಲ್ಲಿರುವ ಕೆಲವು ದೇಶಗಳಲ್ಲಿ ಈ ಸಮಸ್ಯೆ ಉಲ್ಬಣವಾಗುತ್ತಿದೆ.

ಎಂ.ಕೆ.ಆನಂದರಾಜೇ ಅರಸ್

ವರ್ಲ್ಡ್ ವೈಲ್ಡ್ ಲೈಫ್ ಸಂಸ್ಥೆಯ ಒಂದು ಜಾಹೀರಾತು ಹೀಗಿದೆ. ವಿನ್ಯಾಸದಲ್ಲಿ ಎರಡು ಆಯತಗಳಿದ್ದು, ಒಂದು ಆಯತದಲ್ಲಿ ಹಾವನ್ನು ತೋರಿಸಿ ಅದರ ಕೆಳಗೆ ಟೆರಿಫೈಯಿಂಗ್ (ಹೆದರಿಕೆ ಹುಟ್ಟಿಸುವಂತಹದ್ದು) ಎಂಬ ಶೀರ್ಷಿಕೆಯನ್ನು ನೀಡಿದ್ದರೆ, ಇನ್ನೊಂದು ಆಯತವನ್ನು ಸಂಪೂರ್ಣ ಖಾಲಿ ಬಿಟ್ಟು ಅದರ ಕೆಳಗೆ ಮೋರ್ ಟೆರಿಫೈಯಿಂಗ್ (ಇನ್ನೂ ಹೆಚ್ಚು ಭಯ ಹುಟ್ಟಿಸುವಂತಹದ್ದು) ಎಂಬ ಶೀರ್ಷಿಕೆ ನೀಡಲಾಗಿದೆ. ಹುಲಿ, ಸಿಂಹ, ಆನೆ, ಕರಡಿ, ಹಾವುಗಳೆಂಬ ಭೀತಿ ಹುಟ್ಟಿಸುವ ಪ್ರಾಣಿಗಳು ನಮ್ಮ ಕಾಡುಗಳಲ್ಲಿದ್ದರೆ, ನಮ್ಮ ಪರಿಸರದಲ್ಲಿದ್ದರೆ ಅದು ಟೆರಿಫೈಯಿಂಗ್ ಆಗಿರುತ್ತದೆ. ಅವುಗಳು ಇಲ್ಲದಿದ್ದರೆ ಅದರಿಂದ ಇನ್ನೂ ಹೆಚ್ಚಿನ ಟೆರಿಫೈಯಿಂಗ್ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಮಾನವ-ವನ್ಯಜೀವಿ ಸಂಘರ್ಷವೆಂದರೆ ನಮ್ಮ ಕಣ್ಮುಂದೆ ಆನೆಗಳ ಹಿಂಡೊಂದು ರೈತನ ಬೆಳೆ ಹಾಳು ಮಾಡುತ್ತಿರುವುದು ಅಥವಾ ಚಿರತೆ ಎಳೆಗರುವೊಂದನ್ನು ಎತ್ತಿಕೊಂಡು ಹೋಗುವ ದೃಶ್ಯಗಳು ಬರುತ್ತವೆ. ಆದರೆ ಮಾನವ-ವನ್ಯಜೀವಿ ಸಂಘರ್ಷದ ವ್ಯಾಪ್ತಿಗೆ ಇದಕ್ಕಿಂತ ದೊಡ್ಡ ಚಿತ್ರವಿರುವುದು ಸಾಮಾನ್ಯರ ಕಲ್ಪನೆಗೆ ಬಂದಿರುವುದಿಲ್ಲ. ಮನುಷ್ಯ ತನ್ನ ಜನಸಂಖ್ಯೆ ಹಾಗೂ ಅಗತ್ಯಗಳು ಬೆಳೆದಂತೆಲ್ಲಾ ಪ್ರಾಣಿಗಳ ಆವಾಸಸ್ಥಾನವನ್ನು ನಾಶಮಾಡಿ ಅವುಗಳ ಸಂಖ್ಯೆಯ ಇಳಿಮುಖಕ್ಕೆ ಅಥವಾ ಕಣ್ಮರೆಗೆ ಕಾರಣವಾಗುವುದು ಸಹ ಮಾನವ-ವನ್ಯಜೀವಿ ಸಂಘರ್ಷದ ಇನ್ನೊಂದು ಮಜಲಾಗಿರುತ್ತದೆ.

ಪ್ರತಿ ವರ್ಷ ಮಾನವ-ವನ್ಯಜೀವಿ ಸಂಘರ್ಷ ಹಾಗೂ ಪರಿಸರದಲ್ಲಾಗುತ್ತಿರುವ ಮಾನವ ನಿರ್ಮಿತ ಬದಲಾವಣೆಗಳಿಂದ ಸುಮಾರು ಒಂದು ಸಾವಿರ ಪ್ರಾಣಿ ಪ್ರಭೇದಗಳು ಕಣ್ಮರೆಯಾಗುತ್ತಿವೆ. ಆನೆಗಳು ಕಬ್ಬಿನ ಗದ್ದೆಗಳನ್ನು ದಾಳಿ ಮಾಡುವುದು, ಕೆಲವೊಮ್ಮೆ ರೊಚ್ಚಿಗೆದ್ದ ಸಲಗವು ತನ್ನ ಹಾದಿಯಲ್ಲಿ ಸಿಕ್ಕ ನರಮಾನವನನ್ನು ಹೊಸಕಿಹಾಕುವುದು ನಮ್ಮ ಕಣ್ಣಿಗೆ ಕಾಣುವ, ರೋಚಕವಾಗಿ ವಿವರಿಸಬಹುದಾದ ದೊಡ್ಡ ಸುದ್ದಿಯಾಗುತ್ತದೆ. ಆದರೆ ಪ್ರತಿ ನಿತ್ಯ ಮಾನವ-ವನ್ಯಜೀವಿ ಸಂಘರ್ಷದಿಂದ, ಮಾನವ ನಿರ್ಮಿತ ವಿಪತ್ತುಗಳಿಂದ ಕಣ್ಮರೆಯಾಗುವ ಸಾವಿರಾರು ಪ್ರಾಣಿ ಪ್ರಭೇದಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇತಿಹಾಸದುದ್ದಕ್ಕೂ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಗೆಲುವು ಸಾಧಿಸಿರುವುದು ಮನುಷ್ಯನೇ ಹೊರತು ವನ್ಯಜೀವಿಗಳಲ್ಲ. ಆದರೆ ಈ ಸಂಘರ್ಷದ ಅಂತ್ಯದಲ್ಲಿ ಇಡೀ ಜಗತ್ತು ಸೋತಿರುತ್ತದೆ.

ಮಾನವ-ವನ್ಯಜೀವಿ ಸಂಘರ್ಷ ಹಾಗೂ ಜೀವವೈವಿಧ್ಯ ಕಡಿಮೆಯಾಗುತ್ತಿರುವುದು ಎರಡು ಒಂದಕ್ಕೊಂದು ಬೆಸೆದುಕೊಂಡಿರುವ ವಿಷಯಗಳು ಹಾಗೂ ಅತ್ಯಂತ ತುರ್ತಾಗಿ ಗಮನಹರಿಸಬೇಕಾದ ಬಿಕ್ಕಟ್ಟುಗಳಾಗಿವೆ. ಜಾಗತಿಕವಾಗಿ ಒಂದು ದಶಲಕ್ಷದಷ್ಟು ವಿವಿಧ ಪ್ರಾಣಿ ಪಕ್ಷಿ ಪ್ರಭೇದಗಳು ಕಣ್ಮರೆಯಾಗುವ ತೊಂದರೆಯಲ್ಲಿವೆ. ಈ ಜೀವವೈವಿಧ್ಯ ಕಡಿಮೆಯಾದಂತೆಲ್ಲಾ ಆಹಾರ ಪೂರೈಕೆಗಳು ಕೀಟ ಹಾಗೂ ರೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತವೆ. ಹಲವಾರು ಅಧ್ಯಯನಗಳು ಹೆಚ್ಚು ಪ್ರಭೇದಗಳಿದ್ದಷ್ಟು ಕಡಿಮೆ ರೋಗರುಜಿನಗಳಿರುತ್ತವೆ ಎಂದು ಹೇಳಿವೆ.

ವರ್ಲ್ಡ್ ವೈಲ್ಡ್ಲೈಫ್ ಫಂಡ್ ಸೆಪ್ಟೆಂಬರ್ 2020ರಲ್ಲಿ ಬಿಡುಗಡೆ ಮಾಡಿದ ವರದಿಯ ಪ್ರಕಾರ ವನ್ಯಜೀವಿ ಸಂಖ್ಯೆ ಕಳೆದ ನಾಲ್ಕು ದಶಕಗಳಲ್ಲಿ ಶೇ.68ರಷ್ಟು ಕಡಿಮೆಯಾಗಿದೆ. 1970ರಿಂದ 2016ರವರೆಗೆ 4,392 ಸಸ್ತನಿಗಳು, ಪಕ್ಷಿಗಳು, ಮೀನು, ಸರೀಸೃಪಗಳು ಹಾಗೂ ಉಭಯಚರಗಳ ಮೇಲೆ ನಡೆಸಿದಂತಹ ಅಧ್ಯಯನಗಳಿಂದ ಈ ಅಂಶ ಬೆಳಕಿಗೆ ಬಂದಿದೆ. ಈ ನಾಲ್ಕು ದಶಕಗಳಲ್ಲಿ ಆಗಿರುವ ವನ್ಯಜೀವಿ ಸಂಖ್ಯೆಯಲ್ಲಿನ ಇಳಿಕೆ ಪ್ರಮಾಣ ಎಷ್ಟಿದೆಯೆಂದರೆ, ಕಳೆದ ದಶಲಕ್ಷ ವರ್ಷಗಳಗಿಂತಲೂ ಅಧಿಕ. ಇದು ಮುಂದಿನ ದಿನಗಳಲ್ಲಿ ನಾವು ಎದುರಿಸುವ ಆತಂಕಕಾರಿ ಸನ್ನಿವೇಶಕ್ಕೆ ಮುನ್ಸೂಚನೆಯಾಗಿದೆ.

ಲ್ಯಾಟಿನ್ ಅಮೆರಿಕಾ ಹಾಗೂ ಕೆರಿಬಿಯನ್ ದ್ವೀಪಗಳಲ್ಲಿ ವನ್ಯಜೀವಿ ಸಂಖ್ಯೆ ಶೇಕಡ 94ರಷ್ಟು ಕಡಿಮೆಯಾಗಿರುವುದು ಅಘಾತಕಾರಿಯಾದ ಅಂಶವಾಗಿದೆ. ಹಿಮಮುಕ್ತ ಭೂಪ್ರದೇಶದ ಶೇ.75ರಷ್ಟು ಭಾಗವನ್ನು ಮಾನವ ತನಗೆ ಬೇಕಾದಂತೆ ಬದಲಿಸಿಕೊಂಡಿರುವುದು ಗಮನಾರ್ಹ ಅಂಶವಾಗಿದೆ. ತಜ್ಞರ ಪ್ರಕಾರ ಸಿಹಿನೀರು ಜೀವವೈವಿಧ್ಯ ಅತ್ಯಂತ ವೇಗವಾಗಿ ಕಡಿಮೆಯಾಗುತ್ತಿದೆ. ಪ್ರಪಂಚದ ಶೇಕಡ 85ರಷ್ಟು ಜೌಗು ಭೂಮಿಯನ್ನು ನಾವು ಈಗಾಗಲೇ ಕಳೆದುಕೊಂಡಿದ್ದೇವೆ. ಸಿಹಿನೀರಿನ ಸಸ್ತನಿಗಳು, ಪಕ್ಷಿಗಳು, ಉಭಯಚರಗಳು, ಸರೀಸೃಪಗಳು, ಮೀನುಗಳು 1970 ರಿಂದ ಪ್ರತಿ ವರ್ಷ ಶೇ.4ರಷ್ಟು ಕಡಿಮೆಯಾಗುತ್ತಿವೆ. ವರ್ಲ್ಡ್ ವೈಲ್ಡ್ ಲೈಫ್ ಪ್ರಕಾರ ಜೈವಿಕವ್ಯವಸ್ಥೆಯ ನಾಶವು ಮುಂದಿನ ಕೆಲವು ದಶಕಗಳು ಹಾಗೂ ಶತಮಾನಗಳಲ್ಲಿ 5,00,000 ಪ್ರಾಣಿಗಳು ಹಾಗೂ 5,00,000 ಕೀಟಗಳು ಒಳಗೊಂಡಂತೆ ಸುಮಾರು 1 ದಶಲಕ್ಷ ಪ್ರಭೇದಗಳು ಕಣ್ಮರೆಯಾಗಲಿವೆ. ಮಾನವ-ವನ್ಯಜೀವಿ ಸಂಘರ್ಷವನ್ನು ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಅವಲೋಕಿಸಬೇಕಾಗಿದೆ.

ಪ್ರಾಣಿಗಳನ್ನು ಕಾಡಿನಲ್ಲಿ ಕೂಡಿ ಹಾಕಬಹುದೇ? ಒಂದು ಲಕ್ಷ್ಮಣರೇಖೆ ಎಳೆದು, ಇದಷ್ಟೇ ನಿನ್ನ ಪ್ರದೇಶ, ಇದರಿಂದ ನೀನು ಆಚೆ ಬರುವಂತಿಲ್ಲ ಎಂದು ಅವುಗಳಿಗೆ ಹೇಳಲಿಕ್ಕೆ ಸಾಧ್ಯವೇ? ಪ್ರಾಣಿಗಳು ತಮ್ಮ ಆವಾಸಸ್ಥಾನವನ್ನು ಬಿಟ್ಟು ಹೊರಬರಲು ಹಲವಾರು ಕಾರಣಗಳಿರುತ್ತವೆ. ಅತೀ ಹೆಚ್ಚಿನ ದುರಾಸೆಯ, ಕಿಡಿಗೇಡಿ ಬುದ್ಧಿಯ, ಎಲ್ಲವೂ ತನಗಾಗಿಯೇ ಮೀಸಲು, ತನಗೇ ಬೇಕೆಂದುಕೊಂಡಿರುವ ಮನುಷ್ಯನೆಂಬ ಪ್ರಾಣಿ ಈಗ 800 ಕೋಟಿ ಸಂಖ್ಯೆ ತಲುಪುತ್ತಿದ್ದಾನೆ. ಇಡೀ ಪ್ರಪಂಚದಲ್ಲಿ ಆಫ್ರಿಕನ್ ಆನೆಗಳ ಸಂಖ್ಯೆ ಸುಮಾರು 5 ಲಕ್ಷವಿದೆ. ಏಷಿಯನ್ ಆನೆಗಳ ಸಂಖ್ಯೆ ಸುಮಾರು 50 ಸಾವಿರವಿದೆ. ಇಡೀ ಪ್ರಪಂಚವೆಲ್ಲಾ ಹುಡುಕಾಡಿ, ತಡಕಾಡಿದರೂ 4000 ಹುಲಿಗಳು ಕಾಡಿನಲ್ಲಿ ಸಿಗುವುದಿಲ್ಲ. ಮನುಷ್ಯರ ನಡುವಿನ ಸಂಘರ್ಷಕ್ಕಿಂತ ಇದೊಂದು ದೊಡ್ಡ ಸಂಘರ್ಷವೇ ಎಂದು ಹುಬ್ಬು ಹಾರಿಸಿ ಈ ವಿಷಯವನ್ನು ಪಕ್ಕಕ್ಕೆ ತಳ್ಳಿಬಿಡಬಹುದೇ?

ಮಾನವ-ವನ್ಯಜೀವಿ ಸಂಘರ್ಷ ಮನುಷ್ಯನ ನಾಗರಿಕತೆಯಷ್ಟೇ ಹಳೆಯದಾದದ್ದು. ಇಂದು ಅಭಿವೃದ್ಧಿಶೀಲ ಪ್ರದೇಶಗಳಾದ ದಕ್ಷಿಣ ಏಷಿಯಾ ಹಾಗೂ ಆಗ್ನೇಯ ಏಷಿಯಾದಲ್ಲಿರುವ ಕೆಲವು ದೇಶಗಳಲ್ಲಿ ಈ ಸಮಸ್ಯೆ ಉಲ್ಬಣವಾಗುತ್ತಿದೆ. ಈ ಸಂಘರ್ಷಕ್ಕೆ ಇರುವ ಕಾರಣಗಳು ಬಹುಮುಖಿಯಾಗಿವೆ. ವನ್ಯಜೀವಿ ಆವಾಸಸ್ಥಾನಕ್ಕೆ ಮಾನವ ಚಟುವಟಿಕೆಗಳನ್ನು ವಿಸ್ತರಿಸುತ್ತಿರುವುದು, ಕೆಲವು ವನ್ಯಜೀವಿಗಳ ಸಂತತಿಯನ್ನು ಹೆಚ್ಚಿಸುತ್ತಿರುವುದು, ಬೃಹತ್ ಪ್ರಮಾಣದಲ್ಲಿ ಪರಿಸರದಲ್ಲಿ ಬದಲಾವಣೆಯಾಗುತ್ತಿರುವುದು ಆ ಪೈಕಿ ಕೆಲವಾಗಿವೆ.

ಈ ಹಿಂದೆ ಮಾನವ-ವನ್ಯಜೀವಿ ಸಂಘರ್ಷವನ್ನು ಕಾಡಿಗೆ ಹೊಂದಿಕೊಂಡು ಜೀವಿಸುತ್ತಿರುವ ಮಾನವ ಜನಸಂಖ್ಯೆಗೆ ಸಂಬಂಧಿಸಿದ ಗ್ರಾಮೀಣ ಅಥವಾ ಕೃಷಿ ಸಮಸ್ಯೆಯೆಂದು ಪರಿಗಣಿಸಲಾಗುತಿತ್ತು. ಆದರೆ ಇಂದು ಈ ಸಂಘರ್ಷವು ನಗರ ಪ್ರದೇಶಗಳಲ್ಲಿ ಸಹ ಸಾಮಾನ್ಯವಾಗುತ್ತಿದೆ. ಇದು ಮಾನವ ಹಾಗೂ ವನ್ಯಜೀವಿಗಳೆರಡರ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಇದರ ಪರಿಣಾಮಗಳ ಬಗ್ಗೆ ಈಗ ಹೆಚ್ಚಿನ ಮಟ್ಟದಲ್ಲಿ ಪರಿಸರ ತಜ್ಞರು ಹಾಗೂ ವನ್ಯಜೀವಿ ಜೀವಶಾಸ್ತ್ರಜ್ಞರು ಗಮನ ಹರಿಸುತ್ತಿದ್ದಾರೆ.

ಕೀನ್ಯಾದ ಅಧ್ಯಯನ

ಜನಸಂಖ್ಯೆ, ಜಾನುವಾರುಗಳು ಹಾಗೂ ವನ್ಯಜೀವಿಗಳ ಸಾಂದ್ರತೆಯಲ್ಲಿ ಹೆಚ್ಚಳ, ಭೂಮಿ ಬಳಕೆಯಲ್ಲಿ ಬದಲಾವಣೆ ಹಾಗೂ ಜಾಗತಿಕ ತಾಪಮಾನದಲ್ಲಿ ಏರಿಕೆ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗುವ ಕೆಲವು ಪ್ರಮುಖ ಅಂಶಗಳಾಗಿವೆ. ಕೀನ್ಯಾ ವರ್ಲ್ಡ್ ಲೈಫ್ ಸರ್ವೀಸ್ ನರೊಕ್ ಕೌಂಟಿಯಲ್ಲಿ 2001-2007ರ ನಡುವೆ ಸಂಗ್ರಹಿಸಿದ ಅಂಕಿ-ಅಂಶಗಳ ಪ್ರಕಾರ ಕೇವಲ ಆರು ಪ್ರಾಣಿಗಳು ಹಾಗೂ ಮನುಷ್ಯೇತರ ಸಸ್ತನಿಗಳು ಅಲ್ಲಿನ ಶೇಕಡ 90ರಷ್ಟು ಮಾನವ-ವನ್ಯಜೀವಿ ಸಂಘರ್ಷಗಳಿಗೆ ಕಾರಣವಾದ ಅಂಶ ಅಧ್ಯಯನದಲ್ಲಿ ಬೆಳಕಿಗೆ ಬರುತ್ತದೆ.

ಬೆಳೆ ದಾಳಿ (ಶೇ.50), ಮನುಷ್ಯರ ಮೇಲೆ ದಾಳಿ (ಶೇ.27.3) ಹಾಗೂ ಜಾನುವಾರುಗಳ ಮೇಲೆ ದಾಳಿ (ಶೇ.18.6) ಕೆಲವು ಪ್ರಮುಖ ಸಂಘರ್ಷಗಳಾಗಿರುತ್ತದೆ. ಮಾಂಸಾಹಾರಿ ಪ್ರಾಣಿಗಳು ತಮ್ಮ ದೇಹದ ಗಾತ್ರಕ್ಕೆ ಸಮ ಇರುವಂತಹ ಪ್ರಾಣಿಗಳ ಮೇಲೆ ಆಕ್ರಮಣ ಮಾಡುತ್ತಿದ್ದವು. ಅದರಂತೆ ಚಿರತೆ ಹಾಗೂ ಸ್ಪಾಟೆಡ್ ಹೈನಾಗಳು ಹೆಚ್ಚು ಸಂಖ್ಯೆಯಲ್ಲಿ ಕುರಿ, ಆಡುಗಳನ್ನು ಕೊಂದರೆ, ಸಿಂಹಗಳು ದನ-ಕರುಗಳನ್ನು ಕೊಲ್ಲುತ್ತವೆ. ಈ ಸಮೀಕ್ಷೆಯ ಪ್ರಕಾರ ಈ ದಾಳಿಗಳಲ್ಲಿ ಋತುಮಾನ ಆಧಾರಿತವಾದ ಅಂತರ್‌ವಾರ್ಷಿಕ ಏರಿಳಿತಗಳನ್ನು ಕಾಣಬಹುದಾಗಿತ್ತು. 2008-09ರಲ್ಲಿ ಮಳೆ ಕಡಿಮೆಯಾಗಿದ್ದಾಗ ವನ್ಯಜೀವಿ-ಮಾನವ ಸಂಘರ್ಷ ಹೆಚ್ಚಿನ ಸಂಖ್ಯೆಯಲ್ಲಿರುತಿತ್ತು.

ಅದೇ ರೀತಿ ಬೆಳೆ ಮೇಲಿನ ದಾಳಿ ಬೆಳೆಗಳು ಪ್ರಾಯಕ್ಕೆ ಬರುವ ತಡ ಆರ್ದ್ರ ಋತುಮಾನದ ಸಂದರ್ಭದಲ್ಲಿ ಹೆಚ್ಚಾಗಿರುತ್ತಿದ್ದವು. ಜಾನುವಾರುಗಳ ಮೇಲಿನ ದಾಳಿಗಳು ಆರ್ದ್ರ ಋತುಮಾನದ ಸ್ವಾಭಾವಿಕ ಬೇಟೆಗಳ ಸಾಂದ್ರತೆ ಕಡಿಮೆಯಾಗಿದ್ದಾಗ ಅಧಿಕವಾಗುತ್ತಿದ್ದವು. ಕೃಷಿಗಾಗಿ ಭೂ ಪರಿವರ್ತನೆ ಹಾಗೂ ಮನುಷ್ಯರು ಮತ್ತು ಜಾನುವಾರುಗಳ ಸಂಖ್ಯೆಯಲ್ಲಾಗುವ ಏರಿಕೆ ಮಾನವ-ವನ್ಯಜೀವಿಗಳ ಸಂಘರ್ಷಗಳಲ್ಲಿನ ಹೆಚ್ಚಳದ ಜೊತೆ ಸಕಾರಾತ್ಮಕ ಬೆಸುಗೆಯನ್ನು ಹೊಂದಿರುತ್ತದೆ.

ಇದರಿಂದ ಬೆಳಕಿಗೆ ಬರುವ ಅಂಶವೆಂದರೆ, ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆಗೊಳಿಸಬೇಕಾದರೆ ವ್ಯೂಹತಂತ್ರಗಳು ಬಹುಮುಖಿಯಾಗಿದ್ದು ಸಂಘರ್ಷದ ತೀವ್ರತೆಯಲ್ಲಿನ ವ್ಯತ್ಯಾಸ, ವಿವಿಧ ಪ್ರಾಣಿವರ್ಗಗಳ ನಡುವೆ ಮನುಷ್ಯ-ವನ್ಯಜೀವಿಗಳ ನಡುವಿನ ಸಂಘರ್ಷದ ವಿಧ, ಪ್ರದೇಶಗಳು, ಋತುಮಾನಗಳು ಹಾಗೂ ಅವಧಿ, ಇತ್ಯಾದಿ ಅಂಶಗಳನ್ನು ಒಳಪಡಿಸಬೇಕಾಗುತ್ತದೆ. ಇಂತಹ ವ್ಯೂಹತಂತ್ರಗಳು ಆವಾಸಸ್ಥಾನಗಳ ಬದಲಾವಣೆಯನ್ನು ಪ್ರೋತ್ಸಾಹಿಸಬಾರದು. ಜಾನುವಾರಗಳ ಸಾಂದ್ರತೆಯನ್ನು ನಿಯಂತ್ರಿಸಲು ಪ್ರೋತ್ಸಾಹಿಸಬೇಕು. ಜೊತೆಗೆ, ಭೂಮಿ ಬಳಕೆ ಆಧಾರಿತ ವಲಯಗಳನ್ನು ಪ್ರೋತ್ಸಾಹಿಸಿ ಜನರು, ಜಾನುವಾರುಗಳು ಹಾಗೂ ವನ್ಯಜೀವಿಗಳ ನಡುವಿನ ಸಂಪರ್ಕವನ್ನು ಕಡಿಮೆಗೊಳಿಸಬೇಕು. ಅಧ್ಯಯನ ಹೊರಹಾಕಿದ ಅಂಶಗಳ ಆಧಾರದ ಮೇಲೆ ಈ ಕ್ರಮಗಳನ್ನು ಚರ್ಚಿಸಲಾಗುತ್ತದೆ. ಜೊತೆಗೆ ಜಾನುವಾರುಗಳ ಹರ್ಡಿಂಗ್ ವಿಧಾನಗಳು, ಜಾನುವಾರುಗಳ ಮೇಲಿನ ದಾಳಿಯನ್ನು ಕಡಿಮೆಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಬೆಳೆ ಹಾನಿ ತಡೆಗಟ್ಟಲು ಅಳವಡಿಸಿಕೊಳ್ಳಬೇಕಾದ ತಂತ್ರಗಳನ್ನು ಪರಿಗಣಿಸಲಾಗುತ್ತದೆ.

ಕ್ಷೀಣಿಸುತ್ತಿರುವ ಕ್ವಾಲಾ ಕರಡಿಗಳು

ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ನಗರಪ್ರದೇಶಗಳಲ್ಲೊಂದಾಗಿದೆ. ಅಲ್ಲಿನ ಜನಸಂಖ್ಯೆ ಹೆಚ್ಚು ಹೆಚ್ಚಾಗಿ ಬುಶ್‌ಲ್ಯಾಂಡ್‌ನ ಒಳಹೊಕ್ಕು ತಮಗೆ ಬೇಕಾದಂತೆ ಆವಾಸಸ್ಥಾನವನ್ನು ಸೃಷ್ಟಿಮಾಡಿಕೊಂಡಂತೆಲ್ಲಾ ಅಲ್ಲಿನ ವಿಶಿಷ್ಟ ವನ್ಯಜೀವಿ ನಾಶವಾಗುತ್ತಿದೆ. ಆ ಭೌಗೋಳಿಕ ಪ್ರದೇಶದ ಪ್ರಮುಖ ಪ್ರಾಣಿಗಲ್ಲಿ ಒಂದಾದ ಕ್ವಾಲಾಗೆ ದುರದೃಷ್ಟಕರವಾಗಿ ಪರಿಗಣಿಸಿದ ಅಂಶವೆಂದರೆ, ಕ್ವಾಲಾಗೆ ಯಾವ ಆವಾಸಸ್ಥಾನ ಸೂಕ್ತವಾಗಿರುತ್ತದೆಯೋ, ಅದೇ ಆವಾಸಸ್ಥಾನವು ಮಾನವರಿಗೆ ಸಹ ಸೂಕ್ತವಾದುದಾಗಿರುತ್ತದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಅಲ್ಲಿನ ಕ್ವಾಲಾಗಳ ಸಂಖ್ಯೆ ಮೂರನೇ ಎರಡರಷ್ಟು ಭಾಗ ಕಡಿಮೆಯಾಗಿದೆ. ತಮ್ಮ ಆವಾಸಸ್ಥಾನವನ್ನು ಮನುಷ್ಯರಿಗೆ ಬಿಡಬೇಕಾಗಿ ಬಂದು ನಿರಾಶ್ರಿತವಾದ ಕ್ವಾಲಾಗಳ ಸಂಖ್ಯೆ ಬ್ರಿಸ್ಬೇನ್ ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗುತ್ತಿವೆ. ಅವು ರಾತ್ರಿ ಹೊತ್ತು ಅಪಘಾತಗಳಲ್ಲಿ ಸಾಯುತ್ತವೆ. ರಸ್ತೆಯಲ್ಲಿ ವಾಹನ ಚಾಲನೆ ಮಾಡುತ್ತಿರುವಾಗ ಅವು ಅಡ್ಡ ಬಂದರೆ ಅವುಗಳನ್ನು ಕಾಣುವುದು ಕಷ್ಟ ಎಂದು ಅಲ್ಲಿನ ಚಾಲಕರು ಹೇಳುತ್ತಾರೆ.

ಈಗ ಬ್ರಿಸ್ಬೇನ್‌ನ ನಿವಾಸಿಗಳು ಕ್ವಾಲಾಗಳನ್ನು ಉಳಿಸಲು ಮರಗಳನ್ನು ನೆಡುವುದು, ಥರ್ಮ್ಲ್ ಡ್ರೋನ್‌ಗಳನ್ನು ಉಪಯೋಗಿಸುವುದು, ಇತ್ಯಾದಿ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಹುಲಿ ರಕ್ಷಿಸುವವರು ಯಾರು?

ಬಾಂಗ್ಲಾದೇಶದ ಸುಂದರ್‌ಬನ್ಸ್ ಮ್ಯಾನ್‌ಗ್ರೋವ್ ಅರಣ್ಯದಲ್ಲಿ ಸುಮಾರು ನೂರು ಹುಲಿಗಳಿವೆ. ಈ ಅರಣ್ಯದ ಸುತ್ತ ಆವರಿಸಿಕೊಂಡಿರುವ ಜನಸಂಖ್ಯೆ ಸುಮಾರು 10 ಲಕ್ಷವಿದೆ. ಕಳೆದ 40 ವರ್ಷಗಳಲ್ಲಿ ಈ ಜನಸಂಖ್ಯೆ ದ್ವಿಗುಣಗೊಂಡಿದೆ. ಅಳಿದುಳಿರುವ ಈ ನೂರು ಹುಲಿಗಳನ್ನು ರಕ್ಷಿಸಿಕೊಳ್ಳುವುದು ನಿಜಕ್ಕೂ ಒಂದು ದೊಡ್ಡ ಸವಾಲಾಗಿದೆ. ಹುಲಿಗಳ ಜೊತೆಗಿನ ಇಲ್ಲಿನ ಸ್ಥಳೀಯರ ಸಂಬಂಧ ದ್ವೇಷಪೂರಿತವಾದದ್ದಾಗಿದೆ. ಹುಲಿಗಳು ಯಾವುದಾದರೂ ಗ್ರಾಮಸ್ಥರನ್ನು ಕೊಂದರೆ ಅಥವಾ ಊನಗೊಳಿಸಿದರೆ, ಗ್ರಾಮಸ್ಥರು ಆ ಹುಲಿಗಳ ಬೇಟೆಗಿಳಿಯುತ್ತಾರೆ. ಇದೊಂದು ವಿಷಪೂರಿತ ವರ್ತುಲವಾಗಿದೆ.

ವೈಲ್ಡ್ ಟೀಮ್ ಎಂಬ ಸ್ಥಳೀಯ ಸಂಸ್ಥೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಇಲ್ಲಿನ ಗ್ರಾಮಸ್ಥರಿಗೆ ಅರಿವು ಮೂಡಿಸುತ್ತಿದ್ದಾರೆ. ಮಾನವ ಸಮುದಾಯಗಳನ್ನು ಪ್ರವೇಶಿಸುವ ಹುಲಿಗಳನ್ನು ಬೆದರಿಸಿ ಕಳುಹಿಸಲು `ಟೈಗರ್ ರೆಸ್ಪಾನ್ಸ್ ಟೀಮ್’ ಗಳನ್ನು ರಚಿಸಿಕೊಳ್ಳಲು ಸ್ಥಳೀಯರಿಗೆ ತರಬೇತಿ ನೀಡುತ್ತಿದ್ದಾರೆ. ಇದರ ಉದ್ದೇಶ ಹುಲಿಗಳು ಗುಂಪಿನಿಂದ ಸಾವಿಗಳೊಗಾಗದಂತೆ ತಡೆಗಟ್ಟಿ ಅಲ್ಲಿ ಉಳಿದಿರುವ ಬೆರಳೆಣಿಕೆಯಷ್ಟು ಸಂಖ್ಯೆಯ ಹುಲಿಗಳನ್ನು ಉಳಿಸಿಕೊಳ್ಳುವುದಾಗಿದೆ.

ನಾರ್ವೆ ತೋಳಗಳು ಅಸುರಕ್ಷಿತ

2019ರವರೆಗೆ ನಾರ್ವೆ ದೇಶದ ಶೇಕಡ 5ರಷ್ಟು ಭಾಗವನ್ನು ತೋಳಗಳ ವಲಯಗಳನ್ನಾಗಿ ಗುರುತಿಸಲಾಗಿತ್ತು. 2018ರಲ್ಲಿ ನಾರ್ವೆ ದೇಶದಲ್ಲಿ ಒಟ್ಟು ಆರು ತೋಳಗಳ ಪ್ಯಾಕ್‌ಗಳಿತ್ತು. ಒಂದು ಪ್ಯಾಕ್‌ನಲ್ಲಿ ಎರಡರಿಂದ ಏಳು ತೋಳಗಳಿರುತ್ತವೆ. ಈ ಆರು ಪ್ಯಾಕ್‌ಗಳ ಪೈಕಿ ಒಂದು ಪ್ಯಾಕನ್ನು ಸಂಪೂರ್ಣವಾಗಿ ಮುಗಿಸಲು ನಾರ್ವೆ ಸರ್ಕಾರ ನಿರ್ಧರಿಸುತ್ತದೆ. ಬೇಟೆಗಾರರು 2019ರ ಜನವರಿ 7 ರಂದು ಆಲ್ಫಾ ಹೆಣ್ಣ ಹಾಗೂ ಒಂದು ಗಂಡು ತೋಳವನ್ನು ಕೊಲ್ಲುತ್ತಾರೆ. ಇದೇ ಮೊದಲ ಬಾರಿಗೆ ನಾರ್ವೆಯ ತೋಳಗಳ ಸುರಕ್ಷಿತ ವಲಯದಲ್ಲಿ ತೋಳಗಳ ಒಂದು ಸಂಪೂರ್ಣ ಪ್ಯಾಕ್ ಅನ್ನು ಕೊಲ್ಲಲು ಅನುಮತಿ ನೀಡಲಾಯಿತು.

ಈಗಾಗಲೇ ಸ್ಕಾಂಡಿನೇವಿಯನ್ ತೋಳಗಳ ಸಂಖ್ಯೆ ಕಡಿಮೆಯಾಗಿದ್ದು, ಅಳಿವಿನಂಚಿನಲ್ಲಿವೆ. ನಾರ್ವೇ ದೇಶದ ಈ ಕ್ರಮದ ವಿರುದ್ಧ ವರ್ಲ್್ಡ ವೈಲ್ಡ್ ಲೈಫ್ ಹಾಗೂ ಇತರ ಸಂಬಂಧಿತ ಸಂಸ್ಥೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ನಾರ್ವೆ ದೇಶದ ಪರಿಸರ ಸಚಿವಾಲಯ ಮಾನವ-ತೋಳಗಳ ನಡುವಿನ ಸಂಘರ್ಷ ಕಡಿಮೆಗೊಳಿಸಲು ತೋಳಗಳ ಬೇಟೆಗೆ ಅನುಮತಿ ನೀಡುತ್ತದೆ. ತೋಳಗಳನ್ನು ಕೊಲ್ಲುವುದು ಹೇಗೆ ಕಾನೂನಿಗೆ ವಿರುದ್ಧವಲ್ಲ ಎಂದು ಅಲ್ಲಿನ ಪರಿಸರ ಸಚಿವರು ಒಂದೆಡೆ ವ್ಯಾಖ್ಯ ನೀಡಿದರೆ, ನಾರ್ವೆಯ ಜನರು ತೋಳಗಳನ್ನು ಸ್ವಾಗತಿಸುತ್ತಾರೆ ಹಾಗೂ ಅವುಗಳು ಕಣ್ಮರೆಯಾಗುವುದನ್ನು ಬಯಸುವುದಿಲ್ಲ. ಕೆಲವರಿಗೆ ಇಷ್ಟವಿಲ್ಲವೆಂದ ಮಾತ್ರಕ್ಕೆ ನಶಿಸುತ್ತಿರುವ ಪ್ರಾಣಿಗಳನ್ನು ಬೇಟೆಯಾಡುವುದಕ್ಕೆ ಅವರಿಗೆ ಯಾವುದೇ ರೀತಿಯ ಕಾನೂನಿನ ಬೆಂಬಲವನ್ನು ವನ್ಯಜೀವಿ ಸಂರಕ್ಷಣೆ ಸಂಸ್ಥೆಗಳು ನೀಡುವುದಿಲ್ಲ.

ಯೂರೋಪ್‌ನಲ್ಲಿ ಕರಡಿ ಕಾಟ

ಯೋರೋಪ್‌ನಲ್ಲಿ ಕರಡಿಗಳು, ಜಾನುವಾರಗಳು, ನೀರಿನ ಕೊಳವೆಗಳು, ಹಣ್ಣಿನ ತೋಟಗಳು, ಕಸದ ಬಿನ್‌ಗಳು ಹಾಗೂ ಆಹಾರ ಸಂಗ್ರಹಣಾ ಕೊಠಡಿಗಳ ಮೇಲೆ ದಾಳಿ ಮಾಡುತ್ತವೆ. ಇದರಿಂದ ಹೆದರಿಕೊಳ್ಳುವ ಜನರ ಮೊದಲ ಪ್ರತಿಕ್ರಿಯೆ ಅವುಗಳನ್ನು ಕೊಲ್ಲುವುದಾಗಿರುತ್ತದೆ. ಆದರೆ ಕರಡಿಗಳಿಂದಾಗುವ ಮಾನವನ ಮೇಲಿನ ದಾಳಿ ಪರಭಕ್ಷಕವಾದುದ್ದಾಗಿರುವುದಿಲ್ಲ. ಆದರೆ ಭೀತಿಗೊಳ್ಳುವ ಜನರ ಮೊದಲ ಪ್ರತಿಕ್ರಿಯೆ ಕರಡಿಗಳನ್ನು ಗುಂಡಿಕ್ಕಿ ಕೊಲ್ಲುವುದಾಗಿರುತ್ತದೆ. ಏಷಿಯಾದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರು ತೊಂದರೆ ಕೊಡುತ್ತಿರುವ ಕರಡಿಯನ್ನು ಹಿಡಿದು ಬೇರೆಡೆ ಸ್ಥಳಾಂತರಿಸುತ್ತಾರೆ. ಸ್ಕಾಂಡಿನೇವಿಯಾ ಹಾಗೂ ನೈರುತ್ಯದ ಕೆಲವು ಭಾಗಗಳಲ್ಲಿ ತೋಳಗಳು, ಲಿಂಕ್ಸ್ ಹಾಗೂ ಗಡ್ಡಧಾರಿ ಪಕ್ಷಿಗಳನ್ನು ಮರುಪರಿಚಯಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಹೀಗೆ ಒಂದೆಡೆ ಅಳಿದುಳಿದ ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸಿಕೊಂಡು ಪರಿಸರದ ಸಮತೋಲವನ್ನು ಸಂರಕ್ಷಿಸಿಕೊಳ್ಳುವುದು ದೊಡ್ಡ ಸವಾಲಾಗಿದ್ದರೆ, ಇನ್ನೊಂದೆಡೆ ಕಾಡಿನಂಚಿನಲ್ಲಿ ಅಥವಾ ಕಾಡಿಗೆ ಸಮೀಪದ ಪ್ರದೇಶಗಳಲ್ಲಿ ಬದುಕುತ್ತಾ ಕಾಡು ಪ್ರಾಣಿಗಳ ದಾಳಿಗೆ ಒಡ್ಡಿಕೊಂಡಿರುವ ರೈತ ಹಾಗೂ ವಿವಿಧ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವ ಸವಾಲಿದೆ. ಸರ್ಕಾರಗಳು ಹಾಗೂ ಸಂಬಂಧಿತ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಆಧಾರಿತವೂ ಆದ, ಜೀವವೈವಿಧ್ಯ ಸಂರಕ್ಷಣೆಯನ್ನು ಪರಿಗಣನೆಯಲ್ಲಿಟ್ಟುಕೊಳ್ಳುವ ಸಮಗ್ರವಾದ ಕ್ರಿಯಾಯೋಜನೆಯನ್ನು ಜಾರಿಗೆ ತರಬೇಕಾದ ತುರ್ತು ಅಗತ್ಯವಿದೆ.

Leave a Reply

Your email address will not be published.