ಮಾರುವೇಷದಲ್ಲಿ ಮಹಾರಾಜರು

ರಾಜ್ಯಲಕ್ಷ್ಮಿಯ ದುಃಖ ಶಮನಕ್ಕಾಗಿ ರಾಜಕಾರಣಿಗಳ ಶ್ರೀಮುಖಗಳಿಂದ ಹೊರಬಂದ ಅಮೃತವಾಣಿಗಳನ್ನು ಬಿತ್ತರಿಸಲು ನಿರ್ಧರಿಸಿದರು. ‘ನಾನು ಈ ಪರಿಸ್ಥಿತಿಯ ಸಾಂದರ್ಭಿಕ ಶಿಶು ಅಷ್ಟೇ’ ಎಂಬ ಮಹಾ ಹಾಸ್ಯಾಸ್ಪದ ರಾಜಾವಾಣಿಯಿಂದ ಆರಂಭವಾದ ಕಾರ್ಯಕ್ರಮ ‘ನಮ್ಮ ಕುಟುಂಬಕ್ಕೆ ಅಧಿಕಾರದ ಮೇಲೆ ಆಸೆ ಇಲ್ಲ’ ಎಂಬ ದೊಡ್ಡಗೌಡರ ಹೇಳಿಕೆಯೊಂದಿಗೆ ಮುಂದುವರಿಯಿತು. ಕೊನೆಗೆ ರಾಜ್ಯಲಕ್ಷ್ಮಿ ಇತ್ತ ವರಗಳು ಎಂಥವು?

ಪ್ರಜಾಜನ ಮಂದಾರ ಎಂದೇ ಹೆಸರಾದ ರಾಜರು ಒಮ್ಮೆ ಮಾರುವೇಷ ತೊಟ್ಟು ರಾಜ್ಯದ ಪರ್ಯಟನೆಗೆ ಹೊರಟರು. ಎಲ್ಲೆಲ್ಲೂ ಸುಭಿಕ್ಷೆ ತಾಂಡವವಾಡುತ್ತಿತ್ತು. ಎತ್ತ ನೋಡಿದರತ್ತ ಜನರು ಅಗ್ಗದ ಮದ್ಯ ಕುಡಿದು ಅದಕ್ಕಿಂತ ಅಗ್ಗವಾದ ಟೀವಿ ಸುದ್ದಿ ಚಾನಲ್‍ಗಳನ್ನು ವೀಕ್ಷಿಸುತ್ತಾ ಸಂಭ್ರಮದಿಂದ ಈ ಬಾಳನ್ನು ಕೊಂಡಾಡುತ್ತಿದ್ದರು. ಕಣ್ಣು ಹಾಯಿಸಿದ ಕಡೆಯೆಲ್ಲಾ ಉತ್ಸವದ ವಾತಾವರಣ ಕಾಣುತ್ತಿತ್ತು. ಕಿವಿಗೊಟ್ಟು ಕೇಳಿದ ಕಡೆಯೆಲ್ಲಾ ಪ್ರಜಾಜನರ ಆನಂದೋದ್ಗಾರದ ಕೇಕೆಗಳು ಕೇಳಿಬರುತ್ತಿತ್ತು.

ತೃಪ್ತಿಯಿಂದ ತಲೆದೂಗಿದ ಅರಸರು ಪಕ್ಕಕ್ಕೆ ತಿರುಗಿ ತಮ್ಮ ಜೊತೆ ಬಂದಿದ್ದ ಆಪ್ತಸಹಾಯಕನ್ನು ಸಂಬೋಧಿಸಿ ಹೇಳಿದರು, ‘ಎಲೈ, ನೋಡಿದೆಯಾ ನಮ್ಮ ಆಡಳಿತ ಚಾತುರ್ಯವನ್ನು? ಕಂಡೆಯಾ ನಮ್ಮ ಪ್ರಜೆಗಳ ಸೊಬಗನ್ನು? ಇಂಥಾ ಸುಭಿಕ್ಷವಾದ ಆಡಳಿತ ಬೇರೆ ಎಲ್ಲಾದರೂ ಉಂಟೇ?’

ಅರಸರ ತಾಂಬೂಲದ ಉಗುಳನ್ನು ಸ್ವೀಕರಿಸಲು ಚಿನ್ನದ ಪೀಕದಾನಿಯನ್ನು ಹಿಡಿದು ಹಿಂಬಾಲಿಸುತ್ತಿದ್ದ ಸಹಾಯಕರು ‘ಎಲ್ಲಾದರೂ ಉಂಟೆ ಪ್ರಭೂ… ಎಲ್ಲಾದರೂ ಉಂಟೇ’ ಎಂದು ಮಾರ್ನುಡಿದರು.

ಅತಿಶಯವಾದ ಆನಂದೋದ್ರೇಕದಿಂದ ಉಲ್ಲಸಿತರಾದ ಭೂಪಾಲರು ಎಲ್ಲಾ ಸ್ಲಮ್ಮುಗಳನ್ನು ದೂರವಿರಸಿ, ರಾಜಕಾಲುವೆಗಳನ್ನು ಬಳಸಿ, ಕಿಷ್ಕಿಂದಾ ಸಮಾನವಾದ ಗಲ್ಲಿಗಳಿಂದ ಹರದಾರಿ ಹಾಯ್ದು, ವೈತರಣೀ ಸಮಾನವಾದ ಮೋರಿಗಳ ಬಳಿಗೂ ಸುಳಿಯದೇ ತಮ್ಮ ಸಂಚಾರವನ್ನು ಮುಂದುವರೆಸಿದರು.

ದೂರದಲ್ಲೆಲ್ಲೋ ಯಾರೋ ಎದೆ ಬಿರಿಯುವಂತೆ ರೋದಿಸುತ್ತಿರುವ ಸದ್ದು ಕೇಳಲಾಗಿ ಅರಸರು ಬೆಚ್ಚಿ ಬಿದ್ದರು. ಹೃದಯ ವಿದ್ರಾವಕವಾದ ಆ ರೋಧನವು ಕಿವಿಯಲ್ಲಿ ಪರಿಘಾಯುಧವನ್ನು ತೂರಿಸಿದಂತೆ ಕರ್ಣ ಕಠೋರವಾಗಿತ್ತು. ನಮ್ಮ ನಾಡಿನಲ್ಲಿ ಅಳುವವರೂ ಇದ್ದಾರೆಯೇ ಎಂದು ಸಖೇದಾಶ್ಚರ್ಯದಿಂದ ದೊರೆಗಳು ತಮ್ಮ ಹಿಂಬಾಲಕ ಮುಖವನ್ನು ಪ್ರಶ್ನಾರ್ಥಕವಾಗಿ ವೀಕ್ಷಿಸಿದರೂ ಉತ್ತರ ದೊರೆಯಲಿಲ್ಲ. ಯಾರೋ ಪಾಪ! ಕುಡಿಯಲು ಮದಿರೆಯಿಲ್ಲದೆ ಚಿಂತಾಜನಕ ಸ್ಥಿತಿಯಲ್ಲಿರಬೇಕು ಎಂದು ಭಾವಿಸಿ ಎಂ.ಜಿ.ರೋಡು ಬ್ರಿಗೇಡು ರೋಡುಗಳಾದಿಯನ್ನು ಸುತ್ತಿದರೂ ಯಾರೂ ಕಾಣಲಿಲ್ಲ. ಯಾರೋ ಪ್ರಶಸ್ತಿಗಾಗಿ ಬರಗೆಟ್ಟ ಸಾಹಿತಿಗಳಿರಬೇಕು ಎಂದು ಊಹಿಸಿ ಟೌನ್ ಹಾಲಿನ ಮೆಟ್ಟಿಲುಗಳ ಮೇಲೆ ನೋಡಿದರೂ ಯಾರದೂ ಸುಳಿವಿಲ್ಲ. ಸರಿಯಾಗಿ ಲಂಚ ಸಿಗದೇ ಒದ್ದಾಡುತ್ತಿರುವ ಯಾವುದೊ ಅಧಿಕಾರಿಯಿರಬೇಕೆಂದು ಬಗೆದು ವಿಧಾನಸೌಧದ ಕೋಣೆಗಳಲ್ಲಿ ಹುಡುಕಿದರೂ ಸಹ ಸಿಗಲಿಲ್ಲ.

ಅರಸರ ಬಳಗವು ಹೀಗೆ ಹುಡುಕುತ್ತಾ ಹುಡುಕುತ್ತಾ ಸಪ್ತ ಸಿಗ್ನಲುಗಳನ್ನು ದಾಟಿ, ಸಪ್ತ ಕೊಚ್ಚೆಕಾಲುವೆಗಳನ್ನು ಹಾದು ಬೆಂಗಳೂರಿನಿಂದ ಯೋಜನ ದೂರದಲ್ಲಿರುವ ಕೆಂಗೇರಿ ಮೋರಿಯನ್ನು ತಲುಪಿದರು. ದೇಶದ ಪಾಪವನ್ನು ಕರಗಿಸಿ ಭಟ್ಟಿ ಇಳಿಸಿದಂತಿದ್ದ, ಪೂರ್ವಾಶ್ರಮದಲ್ಲಿ ವೃಷಭಾವತಿ ಎಂಬ ದಿವ್ಯನಾಮವನ್ನು ಧರಿಸಿದ್ದ, ತನ್ನ ಬಳಿಸಾರಿದವರ ನಾಸಿಕಕ್ಕೆ ಆಸಿಡ್ ಸುರಿದಂತಹ ಅಘ್ರಾಣಾನುಭವ ನೀಡುತ್ತಾ ಆಚ್ಚೊದ ಸರೋವರದಂತೆ ಕಂಗೊಳಿಸುತ್ತಿದ್ದ ಮೋರಿಯ ದಡದಲ್ಲಿ ದಿವ್ಯಕನ್ಯೆ ಒಬ್ಬಾಕೆ ಕುಳಿತು ರೋದಿಸುತ್ತಿದ್ದಳು.

ಕರ್ಣಾಟ ದೇಶದ ದೌರ್ಭಾಗ್ಯಕ್ಕೆ ಬರೆಯಿಟ್ಟಂತೆ ಊಳಿಡುತ್ತಿದ್ದ ಆಕೆಯ ಬಳಿ ಸಾರಿದ ಮುಖ್ಯಮಂತ್ರಿಗಳು ಅಲ್ಲಲ್ಲ ದೊರೆಗಳು ‘ಎಲ್ಲಿ ಮಲಗಿದ್ದೆಯವ್ವಾ ಇಷ್ಟು ದಿನ?’ ಎಂದೇ ಮೊದಲಾದ ಕುಶಲ ಪ್ರಶ್ನೆಗಳನ್ನು ಕೇಳಿದರು. ಅತ್ತೂ ಅತ್ತೂ ಕಣ್ಣೆಲ್ಲಾ ಊದಿಕೊಂಡಿದ್ದ ಆಕೆ ಅರಸರತ್ತ ಒಮ್ಮೆ ದೃಷ್ಟಿ ಬೀರಿ ನಾನು ಕರ್ನಾಟಕದ ರಾಜ್ಯಲಕ್ಷ್ಮಿ ಎಂದು ಪರಿಚಯಿಸಿಕೊಂಡು ಮತ್ತೂ ಜೋರಾಗಿ ಗೋಳಾಡಲಾರಂಭಿಸಿದಳು. ತಪಸ್ವಿನಿಯಂತೆ ತೇಜೋಪೂರ್ಣವಾಗಿ ಹೊಳೆಯುತ್ತಿದ್ದ ಆಕೆಯ ಆಕ್ರಂದನ ಅರಸರ ಕಲ್ಲು ಹೃದಯವನ್ನೂ ಕರಗಿಸಿ ನೀರು ಮಾಡುವಂತಿತ್ತು. ಅದನ್ನು ಕೇಳಲಾರದೇ ತಮ್ಮ ತರ್ಜನೀ ಬೆರಳುಗಳಿಂದ ಕರಣೇಂದ್ರಿಯಗಳನ್ನು ಮುಚ್ಚಿಕೊಂಡ ರಾಜರು ತಕ್ಷಣವೇ ತಮ್ಮ ಹಿಂಬಾಲಕರಾಗಿ ಬಂದಿದ್ದ ಅಧಿಕಾರಿ, ಮಂತ್ರಿ, ವಂದಿಮಾಗಧರೇ ಮೊದಲಾದ ಕೈಯಾಳುಗಳನ್ನು ಕುರಿತು, ‘ಇಂಥಾ ಸುಭಿಕ್ಷವಾದ ನಮ್ಮ ನಾಡಿನಲ್ಲಿ ಒಬ್ಬಾಕೆ ಈ ರೀತಿ ಕುಳಿತು ಅಳುವುದು ಎಂದರೇನು? ಇದು ವಂಶ ಪಾರಂಪಾರ್ಯದಿಂದ ರಾಜರಾದ ನಮಗೆ ಶೋಭೆಯೇ? ಟೀವಿ ಮಾಧ್ಯಮಗಳಿಗೆ ಈ ವಿಷಯ ತಿಳಿದರೆ ಸ್ಪೆಷಲ್ ಎಪಿಸೋಡು ಮಾಡಿ ನಮ್ಮನ್ನು ರುಬ್ಬದೆ ಇರುವರೇ? ಕೂಡಲೇ ಈಕೆಯ ಮನೋವೇದನೆಯ ಕಾರಣವನ್ನು ಅರಿತು ಪರಿಹಾರೋಪಾಯಗಳನ್ನು ಕೈಗೊಳ್ಳಬೇಕೆಂದು ಕಟ್ಟಾಜ್ಞೆಯಿತ್ತರು.

ಕೂಡಲೇ ಅರಸರ ಹಿಂದೆ ಪೀಕುದಾನಿಗಳನ್ನು ಹಿಡಿದು ಸಿದ್ಧರಾಗಿದ್ದ ಪಡೆಯು ಕ್ಷಣಕಾಲ ಪೀಕುದಾನಿಗಳನ್ನು ಕೆಳಗಿಟ್ಟು ‘ರಾಜ್ಯಲಕ್ಷ್ಮಿ ಮಂದಹಾಸ ಯೋಜನೆ’ ಎಂಬ ಹೊಸ ಯೋಜನೆಯೊಂದನ್ನು ತಯಾರಿಸಿ, ಅದಕ್ಕೆ ಮುಂದಿನ ಆಯವ್ಯಯದಲ್ಲಿ 200 ಕೋಟಿಗಳನ್ನು ಮೀಸಲಾಗಿರಿಸಿ ಅದಕ್ಕೆ ರಾಜಾನುಮೋದನೆಯ ಅಂಕಿತವನ್ನು ಪಡೆದರು. ಇದೇ ಕಾರಣವಾಗಿ ಆಯೋಗವೊಂದು ನೇಮಕವಾಗಿ ಹಲವು ಜನ ಅಧಿಕಾರಿಗಳು ಯೋಜಿತವಾದರು. ಎಲ್ಲರೂ ಸೇರಿ ರಾಜ್ಯಾದ್ಯಂತ ಪುಷ್ಪಕವಿಮಾನಗಳಲ್ಲಿ ಪ್ರವಾಸ ಮಾಡಿ, ಪಂಚತಾರಾ ವೈಭವಗಳನ್ನು ಅನುಭವಿಸಿ, ಹಂಸ ತೂಲಿಕಾತಲ್ಪಗಳಲ್ಲಿ ಕುಳಿತು ಅತ್ಯುತ್ಕೃಷ್ಟ ಮದಿರೆಯನ್ನು ಹೀರುತ್ತಾ ವರದಿಯೊಂದನ್ನು ಸಿದ್ಧಪಡಿಸಿದರು.

‘ಸಂತೋಷವಿಲ್ಲದೆ ಇರುವುದೇ ಕರ್ನಾಟಕ ರಾಜ್ಯಲಕ್ಷ್ಮಿಯ ದುಃಖಕ್ಕೆ ಕಾರಣ’ ಎಂಬಂತಹ ಒಂದುಸಾಲಿನ ಅಪೂರ್ವ ವರದಿಯನ್ನು ಓದಿದ ದೊರೆಗಳು ಸಂತುಷ್ಟರಾಗಿ ಆಯೋಗದವರಿಗೆ ಯಥೋಚಿತ ಬಹುಮಾನಾದಿಗಳಿಂದ ಸಂತೃಪ್ತಿ ಪಡಿಸಿದರು. ನಂತರ ರಾಜ್ಯಲಕ್ಷ್ಮಿಯ ಮನಸ್ಸಂತೋಷಪಡಿಸುವ ಮಾರ್ಗೋಪಾಯಗಳನ್ನು ಕುರಿತಾಗಿ ಚರ್ಚಿಸಿದರು. ನಾಲಿಗೆಯ ತುದಿಯಲ್ಲಿ ಉತ್ತರವನ್ನು ಸಿದ್ಧಪಡಿಸಿಕೊಂಡಿದ್ದ ಆಯೋಗವು, ‘ಪ್ರಭೂ, ಡೊಂಬರು, ಗಾರುಡಿಯವರು, ಶಿಳ್ಳೆಕ್ಯಾತರು, ಬುಡುಬುಡುಕೆಯವರು, ಹಾಲಕ್ಕಿಶಕುನ, ಸುಡುಗಾಡುಸಿದ್ಧರು ಇವೇ ಮೊದಲಾದ ನಿರ್ಲಕ್ಷಿತ ಜನಾಂಗಗಳು ಮನೋರಂಜನಾತ್ಮಕ ಕಲೆಗಳಲ್ಲಿ ಪ್ರವೀಣರೆಂಬುದೇನೋ ನಿಜ. ಆದರೆ ಇವರೆಲ್ಲಾ ಇತ್ತೀಚೆಗಿನ ಟಿವಿ ನ್ಯೂಸ್ ಚಾನಲ್ಲುಗಳಿಗೆ ಸರಿಸಾಟಿಯಾಗಲು ಸಾಧ್ಯವೇ ಇಲ್ಲ. ಅವರ ತಾಳಕ್ಕೆ ತಕ್ಕ ಮೇಳದಂತೆ ಕುಣಿಯುವ ನಮ್ಮ ರಾಜಕಾರಣಿಗಳು ಹಾಸ್ಯ ತುಂಬಿದ ಹೇಳಿಕೆಗಳಲ್ಲಿ ನಿಸ್ಸೀಮರು. ನಮ್ಮ ಟಿವಿ ನ್ಯೂಸ್ ಚಾನೆಲ್ ಗಳ ಕೆಲ ಜನರನ್ನು ಕರೆಸಿ ಇತ್ತೀಚೆಗಿನ ರಾಜಕಾರಣಿಗಳ ಶ್ರೀಮುಖಗಳಿಂದ ಹೊರಬಂದ ಅಮೃತವಾಣಿಗಳ ಪ್ರಮುಖ ಸುದ್ದಿಗಳನ್ನು ಬಿತ್ತರಿಸುವಂತೆ ಅಪ್ಪಣೆ ಮಾಡಿದರೆ ಗೋಳಾಡಿ ಗೋಳಾಡಿ ಕಣ್ಣೀರು ಬಸಿಯುತ್ತಿರುವ ರಾಜ್ಯಲಕ್ಷ್ಮಿ ಹೊಟ್ಟೆ ನಕ್ಕೂನಕ್ಕೂ ಹುಣ್ಣಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಬಿನ್ನಹಿಸಿಕೊಂಡರು.

ತಥಾಸ್ತು ಎಂದು ದೊರೆಗಳು ಸಮ್ಮತಿ ಸೂಚಿಸಿದೊಡನೆಯೇ ಅದಕ್ಕೆ ತಕ್ಕಂತಹ ವೇದಿಕೆ ಸಿದ್ಧವಾಗಿ, ರಾಜ್ಯಲಕ್ಷ್ಮಿಯನ್ನು ಸುದ್ದಿಪ್ರಮುಖರ ಎದುರಿನಲ್ಲಿ ಎಳೆತಂದರು.

ರಾಜರ ಗೌರವ ಸೂಚಕವಾಗಿ ಸ್ವತಃ ರಾಜರೇ ಹೇಳಿದ ‘ನಾನು ಈ ಪರಿಸ್ಥಿತಿಯ ಸಾಂದರ್ಭಿಕ ಶಿಶು ಅಷ್ಟೇ’ ಎಂಬ ಮಹಾ ಹಾಸ್ಯಾಸ್ಪದ ರಾಜಾವಾಣಿಯಿಂದ ಕಾರ್ಯಕ್ರಮ ಶುರುವಾಯ್ತು.

ತತ್ ಪರಿಣಾಮವಾಗಿ ರಾಜ್ಯಲಕ್ಷ್ಮಿಯ ರೋದನೆಯ ತೀವ್ರತೆ ತುಸು ಕುಗ್ಗಿತು. ನಂತರ ವಯೋಜ್ಯೇಷ್ಠತೆಯ ಆಧಾರದ ಮೇಲೆ ಪಿತಾಮಹಾರಾದ ದೊಡ್ಡಗೌಡರ ಹೇಳಿಕೆಯನ್ನು ಕೇಳಿಸಲಾಯ್ತು. ‘ನಮ್ಮ ಕುಟುಂಬಕ್ಕೆ ಅಧಿಕಾರದ ಮೇಲೆ ಆಸೆ ಇಲ್ಲ’ ಎಂಬ ಸೂಕ್ತಿಯನ್ನು ಕೇಳಿ ರಾಜ್ಯಲಕ್ಷ್ಮಿಯ ಅಳು ಮತ್ತೂ ಕಡಿಮೆಯಾಯ್ತು.

ತಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ ಸಣ್ಣಪುಟ್ಟ ಮಂತ್ರಿಗಳು ಈ ಸರ್ಕಾರ ಐದು ವರ್ಷಗಳ ಕಾಲ ಸುದೀರ್ಘ ಆಳ್ವಿಕೆ ಮಾಡಲಿದೆ ಎಂದರು. ಅದಕ್ಕೆ ಪ್ರತಿಯಾಗಿ ಈ ಸರ್ಕಾರದ ಆಯಸ್ಸು ಇನ್ನು ಕೆಲವೇ ದಿನ ಎಂದು ಮೂರುಸಾವಿರ ಇನ್ನೂರ ಹನ್ನೆರಡನೇ ಬಾರಿ ಉಚ್ಚರಿಸಿದ ವಿರೋಧ ಪ್ರಮುಖರು, ‘ನಮ್ಮ ಪ್ರಾಮಾಣಿಕತೆಗೆ ಸೋಲಾಗಿದೆ’ ಎಂದು ಹಾಸ್ಯವರ್ಷವನ್ನೇ ಸುರಿಸಿದರು. ಅದನ್ನು ಮೀರಿಸುವಂತೆ ವೃದ್ಧ ಪಿತಾಮಹಾರಾದ ಗೌಡರು, ‘ಇದು ನನ್ನ ಕೊನೆಯ ಚುನಾವಣೆಯಾಗಲಿದೆ’ ಎಂದು ವಿನೋದದ ಉಲ್ಕಾಪಾತ ಮಾಡಿದರು. ಇವೆಲ್ಲಕ್ಕೂ ಕಿರೀಟವಿಟ್ಟಂತೆ ರಾಜರು ಏಳು ನೂರಾ ಹನ್ನೆರಡನೇ ಬಾರಿ ಕಣ್ಣೀರು ಸುರಿಸುತ್ತಾ, ‘ನಾನು ಕೇವಲ ಗುಮಾಸ್ತನಾಗಿದ್ದೇನೆ’ ಎಂದು ನಗೆಯ ಕಾರಂಜಿಯನ್ನೇ ಉಕ್ಕಿಸಿದರು. ಕ್ರಮೇಣ ರಾಜ್ಯಲಕ್ಷ್ಮಿಯ ರೋದನವು ಕಡಿಮೆಯಾಗುತ್ತಾ ಕಡಿಮೆಯಾಗುತ್ತಾ ಮೌನವಾಗಿ ಬದಲಾಯ್ತು.

‘ಈ ಬಜೆಟ್ಟಿನಲ್ಲಿ ರೈತರ ಸಾಲಮನ್ನಾದ ಮಳೆಯನ್ನೇ ಸುರಿಸುತ್ತೇನೆ’ ಎಂಬ ಅರಸರ ಹೇಳಿಕೆಯೊಂದಿಗೆ, ‘ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದರೇ ಎಲ್ಲ ಅಲ್ಪಸಂಖ್ಯಾತ, ಹಿಂದುಳಿತ, ದಲಿತರನ್ನೂ ಉದ್ದಾರ ಮಾಡಿಬಿಡುತ್ತಿದ್ದೆ’ ಎಂಬ ಮಾಜಿ ಅರಸರ ಹೇಳಿಕೆಯು ಮಿಲನಗೊಂಡು ಬಿಸಿಬೇಳೆಬಾತಿನ ಮೇಲಿನ ಖಾರಾಬೂಂದಿಯಂತೆ ಕಂಗೊಳಿಸಿತು.

ಪಟ್ಟಾಭಿಷಿಕ್ತ ರಾಜರಿಗಿಂತ ನಾವೇನು ಕಡಿಮೆ ಎಂಬಂತೆ ಪೀಠಾಧಿಪತಿಗಳು ಮುಂದೆ ಬಂದು ತಮ್ಮ ಅಭಿಸಾರಿಕೆಯರಂತೆ ತಮ್ಮ ಬೆಡಗು ಬಿನ್ನಾಣಗಳು ತುಂಬಿದ ಹೇಳಿಕೆಯನ್ನಿತ್ತರು. ಈ ಸರ್ಕಾರವನ್ನು ಉರುಳಿಸಿದರೇ ಅದು ದೈವದ್ರೋಹ ಎಂದು ಶ್ರೀಶ್ರೀಶ್ರೀಗಳೊಬ್ಬರು ಮುಕ್ತಾಫಲವನ್ನು ಉದುರಿಸಿದರೆ, ಮತ್ತೊಬ್ಬರು ರಾಜ್ಯದ ಹಲವೆಡೆ ಜಲಪ್ರಳಯವುಂಟಾಗಲು ಮಾಜಿ ಅರಸರು ಸೋತಿದೇ ಕಾರಣ ಎಂದು ಘೋಷಿಸಿದರು.

ಮೌನವಾಗಿ ಕುಳಿತಿದ್ದ ರಾಜ್ಯಲಕ್ಷ್ಮಿಯ ಮುಖಾರವಿಂದದಲ್ಲಿ ತೆಳುವಾದ ಮಂದಹಾಸ ಸ್ಫುರಿಸಿತು.

ಇದರಿಂದ ಉತ್ತೇಜಿತರಾಗಿ ಸಾಲುಸಾಲಾಗಿ ಬಿಸ್ಕೆಟ್ ರೇವಣ್ಣ, ಬಾಟಲ್ ಗಣೇಶ, ಪೆಟ್ರೋಲ್ ಶೇಖರ ಮುಂತಾದ ಗೌರವಾನ್ವಿತರ ಹೇಳಿಕೆಗಳನ್ನು ಬಿತ್ತರಿಸಲಾಯಿತು.

ರಾಜ್ಯಲಕ್ಷ್ಮಿಯ ಕಣ್ಣಿನಿಂದ ಆನಂದ ಬಾಷ್ಪಗಳು ಸ್ಫುರಿಸುತ್ತಾ ಮನತುಂಬಿ ನಗಲಾರಂಭಿಸಿದಳು.

ಕೊನೆಯದಾಗಿ ಸ್ವತಃ ಅರಸರೇ ಮುಂದಾಗಿ, ‘ಈ ಕ್ಷಣವೇ ನಾನು ರಾಜೀನಾಮೆ ಎಸೆದು ಮನೆಗೆ ಹೋಗಲು ಸಿದ್ಧ. ಮುಂದಿನ ಬಾರಿ ಬಹುಮತವಿಲ್ಲದಿದ್ದರೆ ನಾನು ವಿಷ ಕುಡಿದು ಸಾಯುವೆ. ಪ್ರಧಾನಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದ ವಂಶ ನಮ್ಮದು, ಅಧಿಕಾರ ನಮಗೆ ತೃಣ ಸಮಾನ’ ಎಂದು ಹೇಳುತ್ತಿದ್ದಂತೆಯೇ ರಾಜ್ಯಲಕ್ಷ್ಮಿಯ ನಗುವು ಅಟ್ಟಹಾಸವಾಗಿ ಪರಿವರ್ತನೆಯಾಯ್ತು.

ಉಸಿರು ಕಟ್ಟುವಂತೆ ನಗುತ್ತಾ ರಾಜ್ಯಲಕ್ಷ್ಮಿಯು ತಡೆಯಲಾರದೆ ಬಿಕ್ಕಳಿಸಲಾರಂಭಿಸಿದಳು. ನಗುತ್ತಲೇ ನಗುತ್ತಲೇ ಬಾಯಿಂದ ರಕ್ತ ಒಸರಲಾರಂಭಿಸಿತು. ನಗುವಿನ ತೀವ್ರತೆ ಹೆಚ್ಚಾದಂತೆ ರಕ್ತವು ಕಾರಂಜಿಯಂತೆ ಚಿಮ್ಮಿತು. ಮಧ್ಯದಲ್ಲಿ ಉಸಿರೆಳೆದುಕೊಳ್ಳುತ್ತಾ ಸುಧಾರಿಸಿಕೊಳ್ಳುತ್ತಾ ರಾಜ್ಯಲಕ್ಷ್ಮಿಯು, ‘ಮಕ್ಕಳೇ, ನಿಮ್ಮ ಮಾತುಗಳಲ್ಲಿ ಒಂದಾದರೂ ನಿಜವಾಗದೇ ಹೋದರೆ ನಿಮ್ಮ ಭ್ರಷ್ಟ ವಂಶ ನಿರ್ವಂಶವಾಗಲಿ. ನಿಮ್ಮ ಗಾಜಿನ ಚೂರುಗಳಂತಹ ಆಶ್ವಾಸನೆಗಳನ್ನು ಮುಗ್ಧ ಮತದಾರರು ನಂಬುವಂತಹ ಕಾಲ ಬೇಗನೆ ತೀರಿ ಹೋಗಲಿ, ಮುಂದಿನ ಚುನಾವಣೆಯಲ್ಲಿ ನೀವು ಮತ ಭಿಕ್ಷಾಟನೆಗೆಂದು ತೆರಳಿದಾಗ ಪ್ರಜಾಪ್ರಭುವು ನಿಮ್ಮನ್ನು ಕೆರತಾಡನಗಳಿಂದ ಸನ್ಮಾನಿಸಲಿ’ ಎನ್ನುತ್ತಾ ಇವೇ ಮೊದಲಾದ ವರಗಳನ್ನಿತ್ತು ಹರಸಿದಳು.

Leave a Reply

Your email address will not be published.