ಮಾರ್ಚ್ ಸಂಚಿಕೆಯ ಮುಖ್ಯಚರ್ಚೆ ವೈಚಾರಿಕ ಪ್ರಾಮಾಣಿಕತೆಯ ಪರೀಕ್ಷೆ

ಆರೆಸ್ಸೆಸ್ ಮಾಡುತ್ತಿರುವ ತಪ್ಪುಗಳೇನು ಎಂದು ಸಮಾಜಮುಖಿ ಪತ್ರಿಕೆಯು ಮುಖ್ಯಚರ್ಚೆ ಘೋಷಿಸಿದಾಗ ಬಹುತೇಕರು ಈ ಚರ್ಚೆ ಆರೆಸ್ಸೆಸ್ಸಿನ ಮೂಲಸಿದ್ಧಾಂತಗಳನ್ನು ಟೀಕಿಸುವ-ಹೀಯಾಳಿಸುವ ಚರ್ಚೆಯೆಂದೇ ಭಾವಿಸಿದ್ದಿರಬೇಕು. ಆರೆಸ್ಸೆಸ್ ಒಂದು ದೇಶ ವಿಭಜಕ ಮತೀಯ ಶಕ್ತಿ ಹಾಗೂ ಮನುವಾದಿ-ಬ್ರಾಹ್ಮಣವಾದಿ ಸಂಘಟನೆಯೆಂದು ಜರಿಯುವ ಚರ್ಚೆಯೆಂದು ಅಂದುಕೊಂಡಿದ್ದಿರಬೇಕು. ಆದರೆ ಈ ಚರ್ಚೆಯಲ್ಲಿ ಆರೆಸ್ಸೆಸ್ಸಿನ ತತ್ವ-ಸಿದ್ಧಾಂತಗಳನ್ನು ಚರ್ಚಿಸುವುದು ಪತ್ರಿಕೆಯ ಉದ್ದೇಶವಾಗಿರಲಿಲ್ಲ. ಇದನ್ನು ಮಾಡುವ ಚರ್ಚೆಗಳು ಈಗಾಗಲೇ ಬಹಳಷ್ಟು ನಡೆಯುತ್ತಲೇ ಇವೆ. ಈ ಚರ್ಚೆಗಳನ್ನು ಕುರಿತು ಬೇಕು-ಬೇಡವೆಂದು ಹೇಳುವ ಪ್ರಯತ್ನವೂ ಇದಲ್ಲ.

ಪ್ರತಿಯೊಂದು ಸಂಘಟನೆಗೂ ತನ್ನ ನಂಬಿಕೆಯನ್ನು ಪ್ರಚುರಪಡಿಸುವ ಹಾಗೂ ತನ್ನ ಘೋಷಿತ ಸಿದ್ಧಾಂತಗಳನ್ನು ಪ್ರತಿಪಾದಿಸುವ ಹಕ್ಕಿದೆ. ಎಡಪಂಥೀಯ ಪಕ್ಷಗಳು ತಮ್ಮ ಕಮ್ಯುನಿಸ್ಟ್ ಸಿದ್ಧಾಂತವನ್ನು ದೇಶದಲ್ಲಿ ಪ್ರತಿಪಾದಿಸುತ್ತಲೇ ಬಂದಿವೆ. ಹಾಗೆಂದ ಮಾತ್ರಕ್ಕೆ ಈ ವಾಮವಾದಿ ಪಕ್ಷಗಳು ತಮ್ಮ ಸಿದ್ಧಾಂತದಲ್ಲಿ ಬದಲಾವಣೆ ಮಾಡಿಕೊಂಡಿಲ್ಲ ಎಂದೇನೂ ಅಲ್ಲ. ಈ ಪಕ್ಷಗಳು ತಮ್ಮ ತತ್ವಗಳೊಡನೆ ರಾಜಿ ಮಾಡಿಕೊಂಡಿಲ್ಲ ಅಥವಾ ಹಲವು ಮೂಲ ಸಿದ್ಧಾಂತಗಳಿಗೆ ತಿಲಾಂಜಲಿ ನೀಡಿಲ್ಲ ಎಂದೇನೂ ಅಲ್ಲ. ಅದೇ ರೀತಿಯಲ್ಲಿ ಬಲಪಂಥೀಯ ಆರೆಸ್ಸೆಸ್ ಕೂಡಾ ತನ್ನ ಸಿದ್ಧಾಂತದಲ್ಲಿ ರಾಜಿ-ಬದಲಾವಣೆ ಮಾಡಿಕೊಂಡಿದ್ದಿರಬಹುದು. ನಿಧಾನಗತಿಯಲ್ಲಿ ಸಾಗುವ ಈ ರಾಜಿ-ಬದಲಾವಣೆ ನೀತಿ ನಿರೂಪಣೆಯಲ್ಲಿ ಆಗದೆ ನಿಲುವು-ನಿಷ್ಠೆಯಲ್ಲಿ ಆಗುತ್ತದೆಯೆನ್ನುವುದೂ ಸತ್ಯ ಸಂಗತಿ.

ಈ ಪಕ್ಷಗಳನ್ನು ಹಾಗೂ ಪಕ್ಷೇತರ ಸಂಘಟನೆಗಳನ್ನು ಗಂಭೀರವಾಗಿ ಹಾಗೂ ಅಕ್ಯಾಡೆಮಿಕ್ ಆಗಿ ಗಮನಿಸುವ ಚಿಂತಕರು ಈ ರಾಜಿ ಬದಲಾವಣೆಗಳನ್ನು ಗುರುತಿಸುವ ಕೆಲಸ ಮಾಡಬೇಕಾಗುತ್ತದೆ. ಇವುಗಳನ್ನು ಬಿಡಿಸಿ ಹೇಳುವ ಹಾಗೂ ನಿದರ್ಶನ ಸಮೇತ ತಿಳಿಹೇಳುವ ಪ್ರಯತ್ನ ಮಾಡಬೇಕಾಗುತ್ತದೆ. ಮೇಲಾಗಿ ಈ ರಾಜಿ-ಬದಲಾವಣೆಗಳು ಈ ಪಕ್ಷಗಳ ಒಳಗಿರುವ ಭಕ್ತಗಣಕ್ಕೆ ಸುಲಭವಾಗಿ ವೇದ್ಯವಾಗದೇ ಇರಬಹುದು. ಇವರಲ್ಲಿ ಬಹುತೇಕರು ಈ ಬದಲಾವಣೆಗಳನ್ನು ಸುಲಭವಾಗಿ ಒಪ್ಪದೇ ಇರಬಹುದು ಮತ್ತು ಉಗ್ರವಾಗಿ ಪ್ರತಿಭಟಿಸಲೂಬಹುದು. ಆದರೆ ಈ ಬದಲಾವಣೆಗಳನ್ನು ಗುರುತಿಸುವ ಕೆಲಸದ ಬಗ್ಗೆ ಶ್ರದ್ಧೆ ಹಾಗೂ ನಿಷ್ಠೆಯಿಂದ ಸಮಾಜಶಾಸ್ತ್ರ ಚಿಂತಕರು ತಮ್ಮ ನಿಷ್ಪಕ್ಷಪಾತ ಬದ್ಧತೆಯನ್ನು ತೋರಬೇಕಾಗುತ್ತದೆ. ಈ ವಿಷಯದ ಮೇಲಿನ ಚರ್ಚೆಯಲ್ಲಿ ನಿರ್ದಾಕ್ಷಿಣ್ಯತೆ ತೋರುವಲ್ಲಿ ಈ ಸಮಾಜಶಾಸ್ತ್ರಜ್ಞರ ವೈಚಾರಿಕ ಪ್ರಾಮಾಣಿಕತೆಯೂ ಪರೀಕ್ಷೆಗೆ ಒಳಪಡುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ಮುಖ್ಯಚರ್ಚೆಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಆರೆಸ್ಸೆಸ್ ಸಂಘಟನೆಯೆಂದೂ ತನ್ನ ತತ್ವಸಿದ್ಧಾಂತದಲ್ಲಿ ಬದಲಾವಣೆಯಾಗಿದೆಯೆಂದು ಹೇಳಿಕೊಂಡಿಲ್ಲ. ಹಿಂದೂ ಅಸ್ಮಿತೆಯ ಜಾಗರಣೆ ಮತ್ತು ಬಲಿಷ್ಠ ಹಿಂದೂ ರಾಷ್ಟ್ರ ಸ್ಥಾಪನೆ ಇಂದಿಗೂ ಸಂಘದ ಧ್ಯೇಯಗಳಾಗಿದೆ. ಆದರೆ ವಿಚಾರದಲ್ಲಿ ಬದಲಾಗದ ಆರೆಸ್ಸಿಸ್ಸಿನ ಆದರ್ಶಗಳು ಆಚಾರದಲ್ಲಿ ಬದಲಾಗಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ತನ್ನ ನಿಲುವು-ನಿಷ್ಠೆಗಳಲ್ಲಿ ಆರೆಸ್ಸೆಸ್ ತನ್ನ ಘೋಷಿತ ತತ್ವ-ಸಿದ್ಧಾಂತಗಳಿಂದ ದೂರ ಸರಿದಿದೆಯೇ ಎಂಬುದು ನಾವು ಕೇಳುತ್ತಿರುವ ಪ್ರಶ್ನೆ.

ಮುಖ್ಯಚರ್ಚೆ ವಿಷಯ ಮತ್ತು ಮಾರ್ಚ್ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನಗಳು ಟೀಕೆಗಿಂತ ಶ್ಲಾಘನೆಗೇ ಒಳಗಾಗಿವೆ. ಆರೆಸ್ಸೆಸ್ಸಿನ ಹಳಬರು ಮತ್ತು ಹಿತೈಷಿಗಳು ಹಲವು ಮಾಧ್ಯಮಗಳ ಮುಖಾಂತರ ಈ ಚರ್ಚೆಯ ವಿಷಯದ ಪ್ರಸ್ತುತತೆಯನ್ನು ಮೆಚ್ಚಿದ್ದಾರೆ. ಸಂಘದ ಇತ್ತೀಚಿನ ನಿಲುವುಗಳು ಸಂಘದಲ್ಲಿ ಹತ್ತಾರು ವರ್ಷಗಳಿಂದ ತೊಡಗಿಸಿಕೊಂಡಿರುವವರಿಗೆ ಉಸಿರುಗಟ್ಟುವ ಹಾಗೂ ಮೂಗುಮುಚ್ಚಿಕೊಳ್ಳುವ ಸನ್ನಿವೇಶವನ್ನು ಸೃಷ್ಟಿಸುವ ಕೆಲಸ ಮಾಡುತ್ತಿವೆಯೆಂದು ಇವರು ಹೇಳಿಕೊಂಡಿದ್ದಾರೆ. ಯಾರೂ ಹೇಳದ ಸಾರ್ವಜನಿಕ ಸತ್ಯವನ್ನು ದಾಖಲಿಸುವ ದಾಷ್ಟ್ರ್ಯವನ್ನು ಸಮಾಜಮುಖಿ ತೋರಿದೆಯೆಂದು ಸಹಾ ಇವರು ಹೇಳಿದ್ದಾರೆ.

ಈ ಚರ್ಚೆಯ ಗಂಭೀರತೆಯನ್ನು ಮತ್ತೊಮ್ಮೆ ಮನನ ಮಾಡಿಕೊಂಡು ವಿಷಯವನ್ನು ವೈಚಾರಿಕ ಹಾಗೂ ಶಾಸ್ತ್ರೀಯ ಅಧ್ಯಯನದ ಚೌಕಟ್ಟಿನಲ್ಲಿ ಸಂಕ್ಷೇಪವಾಗಿ ಈ ಕೆಳಕಂಡಂತೆ ಇಡಲಾಗಿದೆ.

  1. ದೇಶದ ಅಖಂಡತೆಯ ಬಗ್ಗೆ:

ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನೆಲ್ಲಾ ವೇದಿಕೆಗಳಲ್ಲಿ ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತದೆ. ಆದರೆ ಈ ಅಖಂಡತೆಯ ಕಲ್ಪನೆ ಕೇವಲ ದೇಶದ ಗಡಿಗಳನ್ನು ಕುರಿತಾಗಿ ಮಾತ್ರವಲ್ಲ; ದೇಶದ ಜನರು ದೇಶದ ಅಖಂಡತೆ ಹಾಗೂ ರಾಷ್ಟ್ರೀಯತೆಯ ಬಗ್ಗೆ ಅವಿಚ್ಛಿನ್ನ ಭಾವನೆ ಹೊಂದಿರಬೇಕು. ಆದರೆ ಜಾತೀಯ ಮತ್ತು ಪ್ರಾದೇಶಿಕ ಬೇಡಿಕೆಗಳು ಈ ಅಖಂಡತೆಯನ್ನು ಪದೇಪದೇ ಪರೀಕ್ಷೆಗೆ ಒಳಪಡಿಸುತ್ತಿವೆ. ದೇಶದೆಲ್ಲೆಡೆ ಹಲವು ರಾಜ್ಯಗಳು ಸ್ಥಳೀಯರಿಗೆ ಮಾತ್ರ ಶೇಕಡಾ 75 ರಷ್ಟು ಮೀಸಲಾತಿ ನೀಡುವ ಘೋಷಣೆ ಮತ್ತು ಹೊರರಾಜ್ಯದವರು ತಾತ್ಕಾಲಿಕ ವಲಸೆಗಾರರು ಎಂಬ ತರ್ಕವನ್ನು ಮುಂದಿಟ್ಟಿವೆ. ಈ ವಾದ ಆರೆಸ್ಸಿಸ್ಸಿನ ದೇಶೀಯ ಅಖಂಡತೆ ಹಾಗೂ ಏಕ್ ಭಾರತ್ ಶ್ರೇಷ್ಠ ಭಾರತ್ ಎಂಬ ನಂಬಿಕೆಗೆ ವಿರುದ್ಧವಾಗಿದೆ. ಒಂದು ರಾಜ್ಯದ ನಾಗರಿಕರು ಬೇರೊಂದು ರಾಜ್ಯದಲ್ಲಿ ವಸತಿ, ನೌಕರಿ ಹಾಗೂ ಶಿಕ್ಷಣ ಪಡೆಯಲು ಅನರ್ಹರೆಂದು ಬಿರುದಾಂಕಿತರಾಗಿದ್ದಾರೆ. ಅರಿತೋ ಅರಿಯದೆಯೋ ಆರೆಸ್ಸೆಸ್ ಈ ವಾದವನ್ನು ತಿರಸ್ಕರಿಸುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ.

ಇದಕ್ಕಿಂತ ಘನಘೋರವಾದ ಅಪವಾದ ಜಾತೀಯತೆ ಕುರಿತಾದದ್ದು. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ಸಿನ ಅಂಗಸಂಸ್ಥೆಗಳು ಪ್ರತ್ಯಕ್ಷವಾಗಿ ಜಾತೀಯ ಸಂಘಟನೆಗಳೊಂದಿಗೆ ಆಪ್ತ ಒಡನಾಟ ಹೊಂದಿವೆ ಹಾಗೂ ಜಾತೀಯ ಬೇಡಿಕೆಗಳಿಗೆ ಮನ್ನಣೆ ನೀಡಿವೆ. ಮೀಸಲಾತಿ, ಅನುದಾನ, ಪ್ರಾಧಿಕಾರ ರಚನೆ, ಪ್ರತ್ಯೇಕ ಸಭೆ-ಸಮಾರಂಭಗಳ ಆಯೋಜನೆ ಸೇರಿದಂತೆ ಹತ್ತಾರು ರೀತಿಯಲ್ಲಿ ಕರ್ನಾಟಕದ ಬಿಜೆಪಿ ರಾಜಾರೋಷವಾಗಿ ತನ್ನ ಜಾತೀಯ ಚಟುವಟಿಕೆಗಳನ್ನು ಮುಂದುವರೆಸಿದೆ. ಈ ವಿಭಜಕ ಹಾಗೂ ಕ್ಷುಲ್ಲಕ ಬೇಡಿಕೆಗಳಿಗೆ ಪ್ರಚ್ಛನ್ನವಾಗಿ ಆರೆಸ್ಸೆಸ್ ಬೆಂಬಲ ನೀಡಿದಂತೆ ಕಾಣುತ್ತಿದೆ. ಇದು ಆರೆಸ್ಸೆಸ್ ಮೂಲಸಿದ್ಧಾಂತಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಕರ್ನಾಟಕದಲ್ಲಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕಾದ ಪ್ರಮೇಯ ಬಂದರೆ ಹಿಂದೂ ಧರ್ಮವಾದಿ ಚಿಂತನೆಗಳಿಗೆ ಬೆಲೆಯೆಲ್ಲಿ..? ಈ ರೀತಿಯ ನಿಲುವುಗಳು ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಆರೆಸ್ಸೆಸ್ಸಿನ ಮೂಲ ನಂಬಿಕೆಗಳಿಗೇ ಕೊಡಲಿಪೆಟ್ಟು ನೀಡಲಿವೆ. ಇದನ್ನು ಅರಿತೂ ಅರಿಯದಂತೆ ನಟಿಸುತ್ತಿರುವ ಆರೆಸ್ಸೆಸ್ಸಿನ ಪ್ರಮುಖರು ಆರೆಸ್ಸೆಸ್ ತತ್ವಸಿದ್ಧಾಂತಕ್ಕೆ ಮಾರಣಾಂತಿಕ ಘಾತ ನೀಡುತ್ತಿದ್ದಾರೆ.

  1. ನಾಯಕರ ಶೀಲ ಹಾಗೂ ಚಾರಿತ್ರ್ಯದ ಬಗ್ಗೆ:

ಆರೆಸ್ಸೆಸ್ ಹಾಗೂ ಅದರ ಅಂಗಸಂಸ್ಥೆಗಳು ತಮ್ಮ ಕಾರ್ಯಕರ್ತರ ಮತ್ತು ಮುಖಂಡರ ಶೀಲ ಹಾಗೂ ಚಾರಿತ್ರ್ಯದ ಬಗ್ಗೆ ದೊಡ್ಡಮಾತುಗಳನ್ನು ಆಡುತ್ತವೆ. ಎಬಿವಿಪಿಯ ಧ್ಯೇಯವಾಕ್ಯ ಜ್ಞಾನ-ಶೀಲ-ಏಕತಾ-ಪರಿಷತ್ತಿನ ವಿಶೇಷತಾ ಎಂದಾಗಿದೆ. ಆದಾಗ್ಯೂ ಬಿಜೆಪಿಯ ಸದಸ್ಯರು ಮತ್ತು ಮುಖಂಡರ ಎಗ್ಗಿಲ್ಲದ ಭ್ರಷ್ಟಾಚಾರ ಮತ್ತು ಅನೈತಿಕತೆಯನ್ನು ಆರೆಸ್ಸೆಸ್ ಖಂಡಿಸದೆ ಹೋಗಿದೆ. ಯಡಿಯೂರಪ್ಪ ಸರ್ಕಾರದ ಮಂತ್ರಿಗಳ ಅಂಕೆಯಿಲ್ಲದ ಭ್ರಷ್ಟಾಚಾರ ಹಾಗೂ ಅನೈತಿಕ ವ್ಯವಹಾರಗಳನ್ನು ಕಣ್ಮುಚ್ಚಿ ಒಪ್ಪಿಕೊಂಡಂತೆ ಆಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಕರ್ನಾಟಕದ ಬಿಜೆಪಿಯ ಅಥವಾ ಯಾವುದೇ ಮಂತ್ರಿ ಶಾಸಕರ ಅನೈತಿಕ ಮತ್ತು ಭ್ರಷ್ಟ ವ್ಯವಹಾರಗಳಿಗೆ ಆರೆಸ್ಸೆಸ್ ಯಾವುದೇ ಕಡಿವಾಣ ಹಾಕಿದಂತೆ ತೋರುವುದಿಲ್ಲ. ಇದನ್ನು ನೋಡಿದವರು ‘ಬೆಕ್ಕು ಕಣ್ಮುಚ್ಚಿ ಹಾಲು ಕುಡಿದಂತೆ’ ವರ್ತಿಸುವುದರಿಂದ ಆರೆಸ್ಸೆಸ್ಸಿನ ವರ್ಚಸ್ಸು ಯಾವುದೇ ರೀತಿಯಲ್ಲೂ ಹೆಚ್ಚುವುದಿಲ್ಲವೆಂದು ಸತ್ಯ ನುಡಿಯುತ್ತಿದ್ದಾರೆ. ಹಲವೊಮ್ಮೆ ಆರೆಸ್ಸೆಸ್ಸಿನ ಪದಾಧಿಕಾರಿಗಳು ಕೂಡಾ ಇದೇ ಭ್ರಷ್ಟ ವ್ಯವಸ್ಥೆಯೊಳಗೆ ಫಲಾನುಭವಿಗಳಾಗಿದ್ದಾರೆಂಬ ಗುಸುಗುಸು ಕೂಡಾ ಕೇಳಿಬರುತ್ತಿದೆ.

  1. ಹಿಂದೂ ಧಾರ್ಮಿಕತೆಯ ಬಗ್ಗೆ:

ಆರೆಸ್ಸೆಸ್ ಹಿಂದೂ ಧರ್ಮದ ಸಾರ್ವತ್ರಿಕ ಸುಧಾರಣೆ ಹಾಗೂ ತಾರತಮ್ಯ ನಿವಾರಣೆಗೆ ಬದ್ಧವಾಗಿದೆ ಎಂದು ಹೇಳಿಕೊಳ್ಳುತ್ತದೆ. ಇದಕ್ಕೆ ಪೂರಕವಾಗಿ ಬ್ರಾಹ್ಮಣ ಸ್ವಾಮೀಜಿಗಳು ದಲಿತ ಕೇರಿಗಳಿಗೆ ಭೇಟಿ ನೀಡುವುದು ಹಾಗೂ ದಲಿತರು ದೇಗುಲ ಪ್ರವೇಶ ಮಾಡುವ ಕಾರ್ಯಕ್ರಮಗಳನ್ನೂ ಆರೆಸ್ಸೆಸ್ ನಡೆಸುತ್ತಿದೆ. ಪಾಶ್ಚಾತ್ಯೀಕರಣ ಹಾಗೂ ಆಧುನಿಕತೆಯ ನಕಲು ಮಾಡುವುದನ್ನೂ ಆರೆಸ್ಸೆಸ್ ಟೀಕಿಸುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮನೆಮಾತಾಗಿರುವ ಕಂದಾಚಾರ, ಜ್ಯೋತಿಷ್ಯ ಹಾಗೂ ಮೂಢನಂಬಿಕೆಗಳ ವಿರುದ್ಧ ಆರೆಸ್ಸೆಸ್ ಎಲ್ಲಿಯೂ ಸೊಲ್ಲೆತ್ತಿರುವುದು ಗಮನಕ್ಕೆ ಬಂದಿಲ್ಲ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹೆಚ್ಚಾಗಿರುವ ಈ ಕಂದಾಚಾರದ ಘಟನೆಗಳು ಹಾಗೂ ಎಲ್ಲೆಡೆ ಹೆಚ್ಚುತ್ತಿರುವ ಧಾರ್ಮಿಕ ಮೂಢನಂಬಿಕೆಗಳ ವಿರುದ್ಧ ಯಾವುದೇ ಸ್ಪಷ್ಟ ನಿಲುವಿಲ್ಲ. ಇದು ಮುಂದುವರಿದು ಹಿಂದೂ ಧಾರ್ಮಿಕತೆಯನ್ನೇ ನುಂಗಿ ಹಾಕುವಷ್ಟರ ಮಟ್ಟಿಗೆ ಬೆಳೆದರೆ ಆಶ್ಚರ್ಯವಿಲ್ಲ. ಈ ಅಪಾಯದ ಬಗ್ಗೆ ಆರೆಸ್ಸೆಸ್ ಮುಖಂಡರು ಅರಿವಿಲ್ಲದಂತೆ ನಟಿಸುತ್ತಿರುವುದು ಕೂಡಾ ದುರದೃಷ್ಟಕರ.

  1. ಸಂಘದ ಪ್ರತ್ಯೇಕತೆವಿಶೇಷತೆಯ ಬಗ್ಗೆ:

ಬಿಜೆಪಿ ಸೇರಿದಂತೆ ಎಲ್ಲಾ ಹಿಂದೂ ಪರ ಸಂಘಟನೆಗಳಲ್ಲಿಯೂ ಸಹಾ ಆರಸ್ಸೆಸ್ ತನ್ನದೇ ಆದ ಪ್ರತ್ಯೇಕತೆ ಮತ್ತು ವಿಶೇಷತೆಯನ್ನು ಪ್ರತಿಪಾದಿಸುತ್ತಿದೆ. ಬೇರೆಲ್ಲಾ ಸಂಘಟನೆಗಳಲ್ಲಿ ವೈಚಾರಿಕ ದೋಷಗಳು ಕಂಡುಬಂದರೂ ಆರೆಸ್ಸೆಸ್ಸಿನ ಮೂಲಶಾಖೆಯಲ್ಲಿ ತತ್ವ-ಸಿದ್ಧಾಂತದ ಪಾವಿತ್ರತೆ ಮತ್ತು ಪರಿಶುದ್ಧತೆಯನ್ನು ಕಾಯ್ದುಕೊಂಡು ಬರಲಾಗುತ್ತಿದೆಯೆಂದು ಹೇಳಲಾಗುತ್ತದೆ. ಆದರೆ ಬಲ್ಲವರು ಇದರ ನೈಜತೆಯನ್ನು ಪರಿಶೀಲಿಸಬೇಕಷ್ಟೆ. ಕಳೆದ ಆರು ವರ್ಷಗಳಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿಯು ಬಲಪಂಥೀಯ ವಿಚಾರಧಾರೆ ಹಾಗೂ ಸಂಘಟನೆಗಳನ್ನು ಸಂಪೂರ್ಣವಾಗಿ ಹೈಜ್ಯಾಕ್ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆರೆಸ್ಸೆಸ್ಸಿನ ಧುರೀಣರು ಇದನ್ನು ಸುಲಭವಾಗಿ ಒಪ್ಪದಿರಬಹುದು. ಆದರೆ ಇದು ಸಾರ್ವತ್ರಿಕ ಸತ್ಯ. ಬಿಜೆಪಿಯ ಯಾವುದೇ ಪ್ರಮುಖ ನಿರ್ಧಾರವನ್ನು ಮೋದಿ-ಶಾ ಅಂತಿಮಗೊಳಿಸುತ್ತಾರೆ. ಈ ಬಗ್ಗೆ ಸಂಘದವರನ್ನು ನಾಮಕಾವಸ್ಥೆಗೆ ಕೇಳಬಹುದು. ಆದರೆ ಎಲ್ಲಾ ಪ್ರಮುಖ ನಿರ್ಣಯ-ನಿಯುಕ್ತಿ-ನಿರ್ದೇಶನಗಳನ್ನು ಮೋದಿ-ಶಾ ಜೋಡಿಯೇ ತೆಗೆದುಕೊಳ್ಳುತ್ತದೆ. ಇದು ಸಂಘದ ಭವಿಷ್ಯಕ್ಕೆ ಖಂಡಿತವಾಗಿಯೂ ಧನಾತ್ಮಕವಲ್ಲ. ಇದನ್ನು ಅರಿತು ಕೂಡಾ ಸಂಘದ ಹಿರಿಯ ಧುರೀಣರು ಮೌನಕ್ಕೆ ಶರಣಾಗಿದ್ದಾರೆ. ಇದು ಸಾಮಾನ್ಯ ಕಾರ್ಯಕರ್ತರನ್ನು ಧೃತಿಗೆಡಿಸಿದೆ. ಮುಂದಿನ ದಿನಗಳಲ್ಲಿ ಈ ಮೋದಿ-ಶಾ ಜೋಡಿ ಮಾಡಬಹುದಾದ ಯಾವುದೇ ಪ್ರಮಾದಗಳು ಸಂಘದ ಗೌರವಕ್ಕೆ ಮತ್ತು ಹೆಸರಿಗೆ ಅಳಿಸಲಾಗದ ಚ್ಯುತಿ ತರಬಹುದು.

ಸಂಘ ಮಾಡುತ್ತಿರುವ ಈ ತಪ್ಪುಗಳು ಯಾರಿಗೂ ತಿಳಿಯದ ರಹಸ್ಯ ಪಠ್ಯವೇನಲ್ಲ. ಆದರೆ ಕಳೆದ ಹಲವಾರು ವರ್ಷಗಳಲ್ಲಿ ಸಂಘದ ನೇತೃತ್ವ ಒಪ್ಪಿಕೊಂಡಿರುವ ರಾಜಿ-ಬದಲಾವಣೆಗಳು ಹೇಗೆ ಸಂಘದ ಆದರ್ಶ ಮತ್ತು ತತ್ವ-ಸಿದ್ಧಾಂತಗಳನ್ನು ನಿರ್ಧರಿಸಬಲ್ಲುವು ಎಂಬುದನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ. ಈ ಕುರಿತ ಪ್ರತಿಕ್ರಿಯೆಗಳಿಗೆ ಸ್ವಾಗತ.

-ಸಂಪಾದಕೀಯ ಬಳಗ

Leave a Reply

Your email address will not be published.