ಮಾಸ್ಕ್ ಮರೆಯ ಮಂದಹಾಸವೇ ಒಂದು ಶಕ್ತಿ

-ಅನುಷಾ ಎನ್.ಪಾಟೀಲ

ಪ್ರತಿಯೊಂದು ಹೊಸ ಆರಂಭವೂ ಹೊಸ ಆಕಾಂಕ್ಷೆಗಳು, ಆಲೋಚನೆಗಳು, ಚಿಂತನೆಗಳು ನಿರೀಕ್ಷೆಗಳೊಂದಿಗೆ ಗರಿಗೆದರಿಕೊಳ್ಳುತ್ತವೆ. 2020ಕ್ಕಿಂತ ಭಿನ್ನವಾಗಿ 2021ನೇ ವರ್ಷ ಇರಲೆಂಬ ಆಶಯ, ನಿರೀಕ್ಷೆ, ಒಲವು ಎಲ್ಲರದು. 2021 ನಿಜವಾಗಿ ನಿರೀಕ್ಷೆ, ಆಶಯಗಳ ಪಟ್ಟಿಯನ್ನು ಹೆಚ್ಚಿಸಿದೆ. ಪ್ರತಿ ವರ್ಷದ ಆರಂಭದಲ್ಲಿ ಯಾವುದಾದರೂ ಅಪೂರ್ವ ಸಾಧನೆ ಈ ಬಾರಿ ಆಗಬೇಕೆಂಬ ಯೋಜನೆ ಮನದಲ್ಲಿ ಗರಿಗೆದರುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ಸರಳತೆ, ಸಾಮಾನ್ಯವಾದುದರ ಕಡೆ ಎಲ್ಲರ ಚಿಂತನೆ ಹರಿದಿದೆ. ದೊಡ್ಡ ಮಟ್ಟಕ್ಕಿಂತಲೂ ಈ ಸಲ ಆರೋಗ್ಯ, ಆರ್ಥಿಕ ಚೈತನ್ಯ, ಬದುಕಿನ ಬಂಡಿ ಸಾಗಿಸುವುದರ ಕಡೆಗೆ ಮನಸ್ಸು ನೆಟ್ಟಿದೆ. ಸಮರ್ಥ ಲಸಿಕೆಯೊಂದಿಗೆ ಕೊರೊನಾ ನಿರ್ನಾಮ, ಕಳೆದ ವರ್ಷ ಹಿನ್ನಡೆ ಕಂಡ ಆರ್ಥಿಕ ಸಂಕಷ್ಟ ನಿವಾರಣೆಗೆ ಸಿಗಬಹುದಾದ ಭರವಸೆಯ ಅಲೆಗಳು, ಆ ಮೂಲಕ ಬದುಕಿನಲ್ಲಿ ಸದೃಢ ಹೆಜ್ಜೆಯನ್ನಿಡುವ ಮಾರ್ಗಗಳ ಹುಡುಕಾಟ ಆರಂಭವಾಗಿದೆ. 

‘ಮನೆಯಲ್ಲೇ ಇರಿ, ಆರಾಮವಾಗಿರಿ’ ಎಂಬುದಕ್ಕಿಂತ ಸೂರ್ಯ ಕಿರಣಗಳ ಬಿಸಿಯಲ್ಲಿ ಕಿರಾಣಿ ಅಂಗಡಿಯಿಂದ ಹಿಂತಿರುವಾಗ ಮೂರು ಲೇಯರ್ ಮಾಸ್ಕ್ ಹಿಂದಿನ ನಮ್ಮ ನೆರೆಯವರ ಮಂದಹಾಸ ನೋಡಲು ಇಚ್ಛಿಸುತ್ತಿದ್ದೇವೆ. ಅದೂ ನಮಗೆ ನಿಜವಾಗಲೂ ಶಕ್ತಿ ನೀಡುತ್ತದೆ. ಕೊರೊನಾ ವೈರಾಣುವಿನಿಂದ ಅಷ್ಟರಮಟ್ಟಿಗೆ ದೂರ ಸರಿದಿದ್ದೇವೆ ಎಂಬ ಭಾವವಿತ್ತು. ಈ ದಿನಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಸಾವಿನ ಸಂಖ್ಯೆಯೂ ಅತ್ಪಲ್ಪ ಪ್ರಮಾಣಕ್ಕೆ ಇಳಿಯುತ್ತಿದೆ. ಹೀಗಾಗಿ ಭರವಸೆಯ ಅಲೆಗಳು ನಮ್ಮ ಮುಂದಿವೆ. ಎಚ್ಚರ ತಪ್ಪಿದರೆ ವರ್ಷಾರಂಭದಲ್ಲಿ ಎರಡನೆಯ ಅಲೆ ಅಥವಾ ರೂಪಾಂತರಿತ ವೈರಾಣುವಿನ ದಾಳಿ ಬಂದೀತು!

ದೂರದ ದೇಶದಲ್ಲಿರುವವರು ಹಿಂದೆ ಅಪ್ಪ, ಅಮ್ಮ, ಅಣ್ಣ, ತಮ್ಮ, ತಂಗಿ, ಅಕ್ಕನ ಜತೆಗೆ ಮಾತನಾಡಲು ಪುರುಸೊತ್ತು ಇಲ್ಲದವರಂತೆ ಇರುತ್ತಿದ್ದರು. ಆದರೀಗ ಸಂಬಂಧಗಳು ಹತ್ತಿರವಾಗಿವೆ. ಸಂಬಂಧಿಕರೊಂದಿಗೆ ವಿಡಿಯೋ ಕರೆ ಮಾಡಿ ಮಾತನಾಡಲು ಮನಸ್ಸು ಹೊಂಚುಹಾಕುತ್ತಿರುತ್ತದೆ. ಎಷ್ಟರ ಮಟ್ಟಿಗೆ ಆ ಸಂದರ್ಭ ಆಪ್ಯಾಯಮಾನವಾಗುತ್ತದೆ ಎಂದರೆ ವಿಡಿಯೋದಲ್ಲಿ ಕಂಡವರ ಸಾಮೀಪ್ಯವನ್ನು ಇನ್ನಷ್ಟು ಅನುಭವಿಸಲು ಮೊಬೈಲ್ ಫೋನ್‍ನ ಗಾಜು ಒಡೆದು ಹಾಕುವಷ್ಟು. ಹತ್ತಿರದ ಸಂಬಂಧಿಗಳ ಒಡನಾಡಿಗಳ ಮಾತು, ಸ್ಪರ್ಶ, ಬೆಚ್ಚಗಿನ ಅನುಭವದ ಮೌಲ್ಯ ಈಗ ಎಲ್ಲರಿಗೂ ಉಂಟಾಗಿದೆ. ಮೊಬೈಲ್ ಫೋನ್‍ಗಳಲ್ಲಿ ಜೋಕ್‍ಗಳು ಹರಿದಾಡುತ್ತಿಲ್ಲ, ಬದಲಿಗೆ ಪ್ರೀತಿಪಾತ್ರರ ನಡುವಿನ ಮಾತುಕತೆ, ಸಂದೇಶಗಳು ಸದಾ ಬೆಚ್ಚಗಿರುಸುತ್ತವೆ.

ಹಿಂದೆ ತರಗತಿಗಳಲ್ಲಿ ಗಂಭೀರ ವದನದೊಂದಿಗೆ ಅತ್ತಿತ್ತ ಅಲುಗಾಡದೇ ಕುಳಿತುಕೊಳ್ಳುತ್ತಿದ್ದೆವು. ಈಗ ಹಾಗಿಲ್ಲ, ಪಕ್ಕದಲ್ಲಿ ಕುಳಿತ ಸ್ನೇಹಿತನ ಜತೆ ಪಿಸುಗುಟ್ಟಿ ಮಾತನಾಡಲು ಮನಸ್ಸು ತವಕಿಸುತ್ತದೆ. ಹಾಗೆ ಮಾತನಾಡಿ ಶಿಕ್ಷಕರ ಬಳಿ ಸಿಕ್ಕಿಹಾಕಿಕೊಂಡರೂ ಪರವಾಗಿಲ್ಲ. ಹಾಗೆ ಸಿಕ್ಕಿಹಾಕಿಕೊಂಡು, ಶಿಕ್ಷೆ ಅನುಭವಿಸಿ ಆಮೇಲೆ ಮನೆಯತ್ತ ಹೊರಟಾಗಿ ಆ ಘಟನೆಯನ್ನು ಮತ್ತೆ ಮತ್ತೆ ಹೇಳಿಕೊಂಡು ನಕ್ಕು ನಲಿಯುವ ಕ್ಷಣಗಳು ಮುದ ನೀಡುತ್ತವೆ.

ಕ್ಯಾಮರಾ ಮತ್ತು ಫೋನ್‍ಗಳನ್ನು ಸ್ವಿಚ್ ಆಫ್ ಮಾಡುವ ಸೌಕರ್ಯವನ್ನು ಆನ್‍ಲೈನ್ ತರಗತಿಗಳು ನೀಡಿವೆಯಾದರೂ ಈ ಸೌಕರ್ಯಗಳಲ್ಲಿ ಎಲ್ಲವೂ ಸರಿಯಾಗಿಲ್ಲ. ಮನಸ್ಸು ಇನ್ನಷ್ಟು ಹತ್ತಿರವಾಗಲು ತವಕಿಸುತ್ತದೆ. ದೈಹಿಕ ಉಪಸ್ಥಿತಿ ಬಯಸುತ್ತದೆ.

ಕೆಲವರು 2020ನೇ ವರ್ಷವನ್ನು ಕೆಟ್ಟ ವರ್ಷ ಎಂದು ಶಾಪ ಹಾಕಿದರು. ಯಾವ ವಿಷಯಗಳನ್ನು ನಾವು ಸಣ್ಣದು ಎಂದು ನಿರ್ಲಕ್ಷ್ಯ ಮಾಡುತ್ತಿದ್ದೆವೋ, ಮಾನವೀಯತೆಯ ಮೌಲ್ಯವನ್ನು ಮರೆತಿದ್ದೆವೋ ಅದನ್ನು ನೆನಪಿಸಿಕೊಟ್ಟದ್ದು, ಅದರ ಮೌಲ್ಯವನ್ನು ಎತ್ತಿ ತೋರಿಸಿದ್ದು 2020ನೇ ವರ್ಷ. ನಮಗೆ ಅರಿವು ಮೂಡಿಸಿದ ವರ್ಷ ಇದು. ನನ್ನ ಸಂಬಂಧಿಕರು, ಒಡನಾಡಿಗಳು, ಸ್ನೇಹಿತರು ಮತ್ತು ನನ್ನಲ್ಲಿನ ವಸ್ತುಗಳ ಮೌಲ್ಯದ ಕುರಿತು ತಿಳಿವಳಿಕೆ ನೀಡಿದ ವರ್ಷವಿದು. ಅದಕ್ಕಾಗಿ 2020ಕ್ಕೆ ನಾನು ಆಭಾರಿ.

Leave a Reply

Your email address will not be published.