ಮಾಸ್ತಿ -ಮೆಂಡೆಗಾರ-ಕಾರ್ನಾಡ ನಾಟಕಗಳು

-ಮಹೇಶ ತಿಪ್ಪಶೆಟ್ಟಿ

ವಿಜಯನಗರ ಸಾಮ್ರಾಜ್ಯದ ವಿರುದ್ಧ ನಡೆದ ಐತಿಹಾಸಿಕ ಕದನವನ್ನು ಕುರಿತು ಮಾಸ್ತಿ, ಮೆಂಡೆಗಾರ ಮತ್ತು ಕಾರ್ನಾಡರು ವಿವಿಧ ಕಾಲಘಟ್ಟಗಳಲ್ಲಿ ರಚಿಸಿದ ಮೂರು ನಾಟಕಗಳನ್ನು ತೌಲನಿಕವಾಗಿ ನೋಡುವ ಪ್ರಯತ್ನ ಇಲ್ಲಿದೆ.

 

ವಿಜಯನಗರ ಸಮರ ಕುರಿತ ಮೂರು ನಾಟಕಗಳು

ವಿಜಯನಗರ ಕನ್ನಡಿಗರ ಅಭಿಮಾನದ ಸಾಮ್ರಾಜ್ಯ. ಇಲ್ಲಿ ನಡೆದ ಕದನ ತಾಳಿಕೋಟೆ ಅಥವಾ ರಕ್ಕಸಗಿ ತಂಗಡಗಿ ಯುದ್ಧ ಎಂದೇ ಇತಿಹಾಸದಲ್ಲಿ ದಾಖಲಾಗಿದೆ. ಈ ಯುದ್ಧ ಹಲವು ಸೃಜನಶೀಲ ಮನಸ್ಸುಗಳನ್ನು ಆಕರ್ಷಿಸಿದೆ. ಎಚ್ಚಮನಾಯಕ ನಾಟಕ, ವಿಜಯ ನಗರದ ವೀರಪುತ್ರ ಚಲನಚಿತ್ರ ವಿಶೇಷ ಆಕರ್ಷಣೆಗೆ ಕಾರಣವಾಗಿದ್ದವು. ಈ ಸಂದರ್ಭ ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರ್ [1929] ಕೆ.ಎಸ್.ಮೆಂಡೆಗಾರ [1994] ಗಿರೀಶ ಕಾರ್ನಾಡ [2018] ಅನುಕ್ರಮವಾಗಿ ತಾಳಿಕೋಟಿ, ಪತನ ಹಾಗೂ ರಾಕ್ಷಸ-ತಂಗಡಿ ನಾಟಕ ರಚಿಸಿದ್ದಾರೆ. ಇವು ಹಲವು ಪ್ರದರ್ಶನ ಕಂಡಿವೆ. ಈ ಮೂರು ನಾಟಕಗಳ ಲೇಖಕರು ಬಹುಭಾಷೆ ಬಲ್ಲವರು. ಈ ನಾಟಕಗಳ ವಿಶ್ಲೇಷಣೆಗೆ ತುಸು ಹಿನ್ನೆಲೆ ಅಗತ್ಯ.

ಭಾರತ ಪಾಕಿಸ್ತಾನ ವಿಭಜನೆ, ಬಂಗ್ಲಾ ಉದಯ, ತ್ರಿವಳಿ ತಲ್ಲಾಖ ರದ್ದತಿ, ನಾಗರಿಕ ತಿದ್ದುಪಡಿ ಕಾನೂನು, ಪೌರತ್ವ ನೋಂದಣಿ ವಿರೋಧ, ಅಲ್ಪಸಂಖ್ಯಾತರ ಬಗ್ಗೆ ಪ್ರಜಾಪ್ರತಿನಿಧಿಗಳ ವಿಕ್ಷಿಪ್ತ ಹೇಳಿಕೆ, ಎಕರೂಪ ಸಂಸ್ಕøತಿ ತರುವ ಸರಕಾರದ ಹುನ್ನಾರ, ಕರೋನಾ ಹರಡುವಿಕೆಯಲ್ಲಿ ತಬ್ಲಿಘಿಗಳ ಮೇಲೆ ಆರೋಪ, ಮುಸ್ಲಿಂಮರ ತುಷ್ಟೀಕರಣ, ‘ನಿಮ್ಮೊಳಗಿದ್ದೂ ನಿಮ್ಮಂತಾಗದ’ ನಿಸಾರ ಕವಿಯ ಕೊರಗು, ಜಾತ್ಯತೀತ ಭಾರತ ಎಂಬ ಹಣೆಪಟ್ಟಿ ಮುಂತಾದವುಗಳ ಹಿನ್ನೆಲೆಯಲ್ಲಿ ಈ ನಾಟಕಗಳನ್ನು ಗಮನಿಸಬೇಕಾಗಿದೆ.

ಅಳಿಯ ರಾಮರಾಯನ ವ್ಯಕ್ತಿತ್ವ ಇತಿಹಾಸದಲ್ಲಿ ವಿಭಿನ್ನವಾಗಿ ಚಿತ್ರಿತವಾಗಿದೆ. ಬರಗೂರು ರಾಮಚಂದ್ರಪ್ಪ ವಿಜಯನಗರದ ವೈಭವವನ್ನು ಬೇರೆಯಾಗಿ ನೋಡಿದ್ದಾರೆ. ಪಾಟೀಲ ಪುಟ್ಟಪ್ಪನವರು ರಕ್ಕಸಗಿ ತಂಗಡಗಿ ಯುದ್ಧದಲ್ಲಿ ವಿಜಯನಗರದ ಇಬ್ಬರು ಮುಸ್ಲಿಂ ದಳಪತಿಗಳು ಶತ್ರುಪಾಳೆಯ ಸೇರಿದರು, ಒಂದು ಮದೋನ್ಮತ್ತ ಆನೆಗೆ ಹೆದರಿ ರಾಮರಾಯನ ಅಂಗರಕ್ಷಕರು ಪಲಾಯನಗೈದರು, ರಾಮರಾಯ ವೈರಿಪಡೆಯ ಕೈಗೆ ಸಿಕ್ಕಾಗ ಆತನ ರುಂಡ ಕತ್ತರಿಸಿದರು, ರಾಮರಾಯನ ಸೋದರರು ರಾಜಧಾನಿಗೆ ಮರಳಿ ಎಲ್ಲ ಸಂಪತ್ತಿನೊಂದಿಗೆ ಚಂದ್ರಗಿರಿಗೆ ತೆರಳಿದರು ಎಂದು ಹೇಳಲಾಗಿದೆ. ಹಂಪಿ ಹಾಳಾದದ್ದು ಮುಸ್ಲಿಂರಿಂದಲ್ಲ ಎಂಬ ಚಿಂತನೆಯೂ ಇದೆ.

ತಾಳಿಕೋಟಿ (1929)

ಮಾಸ್ತಿಯವರು ನಾಲ್ಕು ಐತಿಹಾಸಿಕ ನಾಟಕ ಬರೆದಿದ್ದಾರೆ. ತಾಳಿಕೋಟಿ ಮೊದಲನೆಯದು. ವಿಜಯನಗರದಲ್ಲಿ ಹಿಂದೂ ಮುಸ್ಲಿಂ ಸಂಬಂಧಗಳು ಸಹಜವಾಗಿಲ್ಲ ಎಂಬ ಹಿನ್ನೆಲೆ ಇಲ್ಲಿ ಇದೆ. ಆಯಿಷಾ ಎಂಬ ಮುಸ್ಲಿಂ ಯುವತಿಯೊಂದಿಗೆ ರಾಮರಾಯನ ಸಂಬಂಧ ಇದೆ. ವಿವಾಹವಾಗಲು ಅವಳು ಒತ್ತಾಯಿಸುತ್ತಾಳೆ. ರಾಮರಾಯ ಮುಂದೂಡುತ್ತಾನೆ. ಮಕ್ಕಳಿಲ್ಲದ ರಾಮರಾಯನಿಗೆ ಪತ್ನಿ ತಿರುಮಲಾಂಬೆ ತನ್ನ ಚಿಕ್ಕಪ್ಪನ ಮಗಳನ್ನು ವಿವಾಹವಾಗಲು ಒತ್ತಾಯಿಸುತ್ತಾಳೆ. ಮಾಜಿ ಪ್ರೇಮಿ ಆಯಿಷಾ ನಾಲ್ಕು ವರ್ಷದ ಮಗನೊಂದಿಗೆ ಅರಮನೆಗೆ ಬಂದು ಮಗನನ್ನು ರಕ್ಷಿಸಲು ಹೇಳಿ ಹೋಗುತ್ತಾಳೆ. ಆಯಿಷಾಳ ಮಗ ರುಸ್ತುಂ ದಳಪತಿಯಾಗುತ್ತಾನೆ. ಆಯಿಷಾಳನ್ನು ವಿವಾಹವಾಗಲು ಇಚ್ಛಿಸಿದ ಭಗ್ನ ಪ್ರೇಮಿ ಉಸ್ಮಾನಖಾನ ರುಸ್ತುಂನಿಗೆ ರಾಮರಾಯನ ಹೀನಗುಣಗಳ ಬಗ್ಗೆ ಚಾಡಿ ಹೇಳುತ್ತಾನೆ.

ಸುಂದರಿ ಎಂಬ ಮುಸ್ಲಿಂ ಯುವತಿ ವಿಜಯಪುರ ಸುಲ್ತಾನನ ಮಗಳು. ರಾಮರಾಯನನ್ನು ಕೊಲ್ಲದಿದ್ದರೆ ವಿಷ ಸೇವಿಸುವುದಾಗಿ ಹೇಳುತ್ತಾಳೆ. ಉಸ್ಮಾನ ಹಾಗೂ ಸುಂದರಿ ದೃಷ್ಟಿಯಲ್ಲಿ ರಾಮರಾಯ ಮುಸ್ಲಿಂರಲ್ಲಿ ಆಂತರಿಕ ಕಲಹ ಸೃಷ್ಟಿಸಿ ರಾಜ್ಯವಾಳುತ್ತಿದ್ದಾನೆ. ಇದು ಅವರ ಆರೋಪಿಸುತ್ತಾರೆ. ತಾಳಿಕೋಟಿ ಯುದ್ಧದಲ್ಲಿ ರಾಮರಾಯ ಆನೆಯ ಮೇಲೆ ಇದ್ದಾನೆ. ರುಸ್ತುಂನನ್ನು ಅಂಬಾರಿ ಎರಿ ಬರಲು ಹೇಳುತ್ತಾನೆ. ಆಗ ರುಸ್ತುಂ ರಾಮರಾಯನನ್ನು ಕೊಲ್ಲುತ್ತಾನೆ.

ವ್ಯಕ್ತಿಗಾದ ಅಪಮಾನವನ್ನು ಸಾರ್ವತ್ರೀಕರಣಗೊಳಿಸಿ ಘರ್ಷಣೆಗೆ ಕಾರಣವಾದ ಸಂದರ್ಭವನ್ನು ತಾಳಿಕೋಟಿ ನಾಟಕದಲ್ಲಿ ಕಾಣಬಹುದು. ಮಾಸ್ತಿಯವರಂತಹ ಧರ್ಮಬೀರು ನಾಟಕದ ಕೊನೆಗೆ ವಿಜಯಪುರ ಸುಲ್ತಾನನಿಂದ ಒಂದು ಕಟು ಸತ್ಯ ದಾಖಲಿಸಿದ್ದಾರೆ, ‘ಅನ್ಯಾಯ ಮಾಡುವದಕ್ಕೆ ಮನುಷ್ಯ ಧರ್ಮವನ್ನು ಕಟ್ಟಿಕೊಂಡಿದ್ದಾನೆ’. ರಾಮರಾಯನ ಸಾವಿನೊಂದಿಗೆ ದುಃಖಾಂತವಾಗಿ ನಾಟಕ ಮುಗಿಯಬಹುದಿತ್ತು. ಕೊನೆಗೆ ತಿರುಮಲಾಂಬೆ ವಿಜಯಪುರದ ಸುಲ್ತಾನನಿಗೆ ವಿಜಯನಗರಕ್ಕೆ ನಿಷ್ಠನಾಗಿರಲು ಪ್ರತಿಜ್ಞೆ ಮಾಡಿಸಿ ಸುಖಾಂತವಾಗಿಸಿದ್ದಾರೆ.

ಮಾಸ್ತಿಯವರ ನಾಟಕದಲ್ಲಿ ಫ್ರಾಯ್ಡನ ಇಡಿಪಸ್ ಸಿದ್ಧಾಂತ ಇಣುಕಿದೆ. ನಾಲ್ವತ್ತನೆ ಪುಟದಲ್ಲಿ ನಾಗರಿಕರು ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ: ‘ರಾಣಿಗೆ ಮಕ್ಕಳಿಲ್ಲ, …ರಾಣಿ ಈ ತುರುಕರ ಹುಡುಗನ ರೂಪನೋಡಿ…’. ಎಪ್ಪತ್ನಾಲ್ಕನೆ ಪುಟದಲ್ಲಿ ಉಸ್ಮಾನಖಾನ ವಿಜಯಪುರದ ಸುಲ್ತಾನನಿಗೆ ಕೇಳುತ್ತಾನೆ: “ರಾಮರಾಯನ ಹೆಂಡತಿ ಅಷ್ಟು ಸುಶೀಲೆಯಾದರೂ ನಿನ್ನಲ್ಲಿ ವ್ಯಾಮೋಹವೇಕೆ?.” ಎಪ್ಪತ್ತೆಂಟನೆ ಪುಟದಲ್ಲಿ ವಿಜಯಪುರದ ಸುಲ್ತಾನ ತಾಯಿಗೆ ತನ್ನ ತಂದೆಯ ಬಗ್ಗೆ ಕೇಳಿದಾಗ, ಹಾರಿಕೆ ಉತ್ತರ ಕೊಡುತ್ತಾಳೆ. ಆಗ ಸುಲ್ತಾನ ‘ಅಪ್ಪ ಯಾರೆಂದು ತಿಳಿಯದಿದ್ದಾಗ, ನಾಳೆ ಯುದ್ಧದಲ್ಲಿ ಒಬ್ಬರನ್ನೊಬ್ಬರು ಕಡಿಯಬಹುದು’. ಸಾಮಾನ್ಯನಿಗೆ ಅರ್ಥವಾಗದ ಕೆಲವು ಶಬ್ದಗಳನ್ನು ಮಾಸ್ತಿಯವರು ಇಲ್ಲಿ ಬಳಸಿದ್ದಾರೆ. ನ್ಯಾಸ, ಬರಗು, ಇಂಗುಲಿ, ಹೌರಿ, ನಾಗಿಲಿ, ಬಂಗರ ಮುಂತಾಗಿ. ಭಗ್ನಪ್ರೇಮಿ ಉಸ್ಮಾನ ರಾಮರಾಯನ ಮೇಲೆ ಸೇಡಿಗಾಗಿ ಧರ್ಮಸಾಧನಮಾಡಿಕೊಂಡನು. ತಾಳಿಕೋಟಿ ನಾಟಕದಲ್ಲಿ ವಿಜಯನಗರದ ಉಜ್ವಲ ಇತಿಹಾಸ ಕಾಣುವುದಿಲ್ಲ. ಮುತ್ತು ರತ್ನಗಳನ್ನು ಧಾನ್ಯಗಳಂತೆ ಮಾರಿದ ಕವಿಕಲ್ಪನೆ ಇಲ್ಲಿ ಎಳ್ಳಷ್ಟು ಇಲ್ಲ.

ಪತನ (1994)

ರಾಮರಾಯನ ಮಗ ಕೃಷ್ಣ ನಿಧನ ಹೊಂದಿದಾಗ ಸಾಂತ್ವನ ಹೇಳಲು ವಿಜಯಪುರದ ಸುಲ್ತಾನ ಅಲಿ ಆದಿಲ್ ಶಾಹಿ ಬಂದಿರುತ್ತಾನೆ. ಸತ್ತ ಕೃಷ್ಣನ ಹೋಲಿಕೆ ಆತನಲ್ಲಿರುತ್ತದೆ. ಸದಾಶಿವರಾಯ ಅರಸನಾಗಿದ್ದರೂ ಆಡಳಿತಸೂತ್ರ ರಾಮರಾಯನ ನಿಯಂತ್ರಣದಲ್ಲಿವೆ. ರಾಮರಾಯನ ಬಗ್ಗೆ ಸುಲ್ತಾನರಲ್ಲಿ ಸದಭಿಪ್ರಾಯ ಇಲ್ಲ. ಅಹಮದಾಬಾದಿಗೆ ಹೊರಟ ಮುಸ್ಲಿಂ ಯುವತಿ ಮಮತಾಜ್‍ಳನ್ನು ವಿಜಯನಗರದ ಅರಮನೆಯಲ್ಲಿ ಬಂಧಿಯಾಗಿರಿಸಲಾಗುತ್ತದೆ. ಮುದಗಲ್ಲಿನಲ್ಲಿ ಹುಲಿಯ ಕಾಟ ಹೆಚ್ಚಾದಾಗ ಮೆಹರುನ್ನಿಸಾ ಎಂಬ ಯುವತಿಯನ್ನು ರಾಮರಾಯ ರಕ್ಷಿಸುತ್ತಾನೆ. ಹಾಗೂ ಅವಳಲ್ಲಿ ಅನುರಕ್ತನಾಗುತ್ತಾನೆ. ರಾಮರಾಯನೊಂದಿಗೆ ವಿವಾಹ ಸಾಧ್ಯವಾಗದಿದ್ದಾಗ ರಾಮರಾಯನನ್ನು ನಾಶಮಾಡಲು ನಿರ್ಧರಿಸುತ್ತಾಳೆ. ಮೆಹರುನ್ನಿಸಾಳ ಮಗ ಮುಕದಂಖಾನ ಮುಕುಂದ ನಾಯಕನಾಗಿ ವಿಜಯನಗರ ಸೈನ್ಯ ಸೇರುತ್ತಾನೆ. ಖಾಜಾಖಾನ ಮೆಹರುನ್ನಿಸಾಳ ಪ್ರೀತಿಸಿದ ಭಗ್ನ ಪ್ರೇಮಿ.

ಎಲ್ಲ ಸುಲ್ತಾನರು ಆಪ್ತಾಲೋಚನೆ ಮಾಡಿ ರಾಮರಾಯನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ವಿಜಯಪುರ ಸುಲ್ತಾನನ ಒಪ್ಪಿಸಲು ನಿರ್ಧರಿಸುತ್ತಾರೆ. ಧರ್ಮರಕ್ಷಣೆಗಾಗಿ ಕಾಫಿರ್ ಜೊತೆಗೆ ಯುದ್ಧ ಎಂಬ ನೆಪ. ಭಗ್ನಪ್ರೇಮಿ ಖಾಜಾಖಾನ ಯುದ್ಧಕ್ಕೆ ಧರ್ಮದ ಲೇಪನ ಕೊಡುತ್ತಾನೆ. ವಿಜಯನಗರದ ಸೈನ್ಯ ಹಿಮ್ಮೆಟ್ಟಿದಾಗ ರಾಮರಾಯ ಕುದುರೆ ಎರಿ ಬಂದು ನಗ-ನಾಣ್ಯ ತೂರಿ ಸೈನಿಕರನ್ನು ಹುರಿದುಂಬಿಸುತ್ತಾನೆ. ಯುದ್ಧದಲ್ಲಿ ಮಮತಾಜ ಮುಂಕುಂದನ ಸಾವು ಆಗುತ್ತದೆ. ರಾಮರಾಯನ ಕೃತ್ರಿಮ ರುಂಡ ಪ್ರದರ್ಶನ ಮಾಡುತ್ತಾರೆ. ಸಹೋದರ ತಿರುಮಲನಿಂದ ರಾಮರಾಯನಿಗೆ ಸಂಸ್ಕಾರ ಜರಗುತ್ತದೆ.

ಪತನ ನಾಟಕದ ಲೇಖಕರು ವಿಜಯಪುರದವರು. ಅಲ್ಲಿಯ ಇತಿಹಾಸದ ಪಳೆಯುಳಿಕೆ ನೋಡಿದ್ದಾರೆ. ಇದೊಂದು ಧೀರೋದ್ದಾತ ದುರಂತ ನಾಟಕ. ಹಿಂದೂ ಮುಸ್ಲಿಂ ಸಂಬಂಧಗಳನ್ನು ಬೆಸೆಯುವ ಎಳೆಯನ್ನು ಇಲ್ಲಿ ಕಾಣಬಹುದು. ಇಡಿಪಸ್ ಸಿದ್ಧಾಂತವನ್ನು ಲೇಖಕರು ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಮೆಹರುನ್ನಿಸಾಳೊಂದಿಗಿನ ಪ್ರೇಮ, ಮಮತಾಜ ಎಂಬವಳು ಧರ್ಮದ ನೆಪದಲ್ಲಿ ಮಾಡುವ ವಿರೋಧ ಮುಂತಾದವು ರಾಮರಾಯನ ವ್ಯಕ್ತಿತ್ವಕ್ಕೆ ಕುಂದು ತಂದಿವೆ. ಸುಲ್ತಾನರ ದೃಷ್ಟಿಯಲ್ಲಿ ರಾಮರಾಯ ಧೂರ್ತ, ದುರಭಿಮಾನಿ ಮಹತ್ವಾಕಾಂಕ್ಷಿಯಾಗಿದ್ದಾನೆ.

ಹುನಗುಂದದಲ್ಲಿ ಇದು ರಂಗ ಪ್ರಯೋಗÀವಾದಾಗ ರಾಮರಾಯನ ಪಾತ್ರ ನಿರ್ವಹಿಸಿದವರ ಪ್ರಕಾರ ಸಂಭಾಷಣೆಗಳಲ್ಲಿ ಸತ್ವ ಇಲ್ಲ ಎಂಬ ಅಭಿಪ್ರಾಯವಿದ್ದಿತು. ನಿರ್ದೇಶಕ ಧ್ರುವರಾಜ ದೇಶಪಾಂಡೆ ಹೆಚ್ಚು ಬದಲಾವಣೆ ಮಾಡಿಕೊಂಡಿದ್ದರು. ಮುದಗಲ್ಲ ಗುಡ್ಡದ ಮೇಲೆ ರಾಮರಾಯ ಮೇಹರುನ್ನೀಸಾರ ಪ್ರೇಮದ ಪ್ರತೀಕವಾಗಿ ಪುಷ್ಕರಣಿ ಇದೆಯಂತೆ. ತಾಳಿಕೋಟಿಯಲ್ಲಿ ರಾಮರಾಯ ಯುದ್ಧದಲ್ಲಿ ಬಳಸಿದ ಹಾತಿಹಜಾರ ಇದೆಯಂತೆ. ಹೆಣ್ಣಿನ ಕಣ್ಣೀರು ಎಂತಹ ದುರಂತ ಸೃಷ್ಟಿಸುತ್ತದೆ ಎಂಬುದಕ್ಕೆ ವಿಜಯನಗರ ಹಾಗೂ ಸುಲ್ತಾನರ ನಡುವಿನ ಯುದ್ಧವೆ ಸಾಕ್ಷಿ. ವಿಜಯ ಸಾಸನೂರ, ಡಿ.ವಿ.ಗುರುಪ್ರಸಾದ ಪೊಲೀಸ್ ಇಲಾಖೆಯಲ್ಲಿದ್ದರೂ ಸಾಹಿತಿಗಳಾಗಿದ್ದಾರೆ. ಅವರ ಸಾಲಿನಲ್ಲಿ ಮೆಂಡೆಗಾರ ಇದ್ದಾರೆ.

ರಾಕ್ಷಸ-ತಂಗಡಿ (1918)

ರಾಮರಾಯನ ಮಗನ ಸಾವಿಗೆ ಸಾಂತ್ವನ ಹೇಳಲು ವಿಜಯಪುರದ ಅಲಿಆದಿಲ್ ವಿಜಯನಗರಕ್ಕೆ ಬಂದಾಗ ಕೃಷ್ಣಾನದಿ ನಮಗೆ ಇನ್ನು ಅಡ್ಡಬರಲಾರದು ಎಂದು ರಾಮರಾಯ ಹೇಳುತ್ತಾನೆ. ಆಗ ಅಲಿಆದಿಲ್ ತನ್ನನ್ನು ಮಗನಾಗಿ ಸ್ವೀಕರಿಸಿ ಎಂದು ವಿನಂತಿಸುತ್ತಾನೆ. ನಿಜಾಮಶಹನ ಆಡಳಿತದಲ್ಲಿದ್ದ ಕಲ್ಯಾಣಕೋಟಿಯನ್ನು ಮತ್ತೆ ತನ್ನ ವಶಕ್ಕೆ ಪಡೆದು ಅಲಿಆದಿಲ್‍ನಿಗೆ ಕೊಡುತ್ತಾನೆ. ಅಹಮದನಗರ ಸುಲ್ತಾನ ತನ್ನ ಅನಾರೋಗ್ಯದಲ್ಲಿಯೂ ಯುದ್ಧಕ್ಕೆ ಸಿದ್ಧರಾಗಲು ಸೈನಿಕರಿಗೆ ಹೇಳುತ್ತಾನೆ. ನಿಜಾಮಶಹನ ಹೆಂಡತಿ, ತನ್ನ ಹೆಣ್ಣು ಮಕ್ಕಳನ್ನು ವಿಜಯಪುರ ಹಾಗೂ ಗೋಲ್ಕಂಡದ ಸುಲ್ತಾನರಿಗೆ ಕೊಡಬೇಕು ಎಂದಾಗ ನಿಜಾಮಶಹಾ ನಿರಾಕರಿಸುತ್ತಾನೆ.

ಸುಲ್ತಾನರು ಒಂದುಗೂಡಿ ರಾಮರಾಯನನ್ನು ಎದುರಿಸಲು ಆಪ್ತಾಲೋಚನೆ ಮಾಡುತ್ತಾರೆ. ಯುದ್ಧದ ಸಿದ್ಧತೆ ಮಾಡಿಕೊಂಡು ಅಲಿಆದಿಲ್ ರಾಮರಾಯನನ್ನು ಎದುರಿಸಲು ಸಿದ್ಧನಿಲ್ಲದಿದ್ದರೂ ಒಪ್ಪಿಸುತ್ತಾರೆ. ವಿಜಯನಗರದ ಸೈನ್ಯದಲ್ಲಿ ಆನೆ ಕುದುರೆ ಸೈನಿಕರಿದ್ದರೆ ಸುಲ್ತಾನರಲ್ಲಿ ತೋಪು, ಫಿರಂಗಿಗಳಿವೆ. ಯುದ್ಧದಲ್ಲಿ ಸುಲ್ತಾನರ ತೋಪಿನಿಂದ ತಾಮ್ರದ ನಾಣ್ಯಗಳು ಹಾರಿಬಂದು ಸೈನಿಕರ ಮೈಕೊರೆದು ಹೋಗುತ್ತಿವೆ. ತಿರುಮಲನ ಕಣ್ಣಿಗೆ ಬಾಣಬಡಿದು ರಣರಂಗಬಿಟ್ಟು ಹೋಗಿದ್ದಾನೆ. ರಾಮರಾಯ ಪಲ್ಲಕ್ಕಿಯಲ್ಲಿ ಕುಳಿತು ಭಕ್ಷೀಸು ತುಂಬಿಕೊಂಡು ಸೈನಿಕರನ್ನು ಹುರಿದುಂಬಿಸುತ್ತಿದ್ದಾನೆ. ತಾನು ಕಲ್ಯಾಣ ಚಾಲುಕ್ಯರ ತಿಲೋತ್ತಮ ಎಂದು ಘೋಷಿಸುತ್ತಿದ್ದಾನೆ.

ರೂಮಿಖಾನ, ಅಲಿಆದಿಲ್ ಆನೆ ಎರಿ ಬರುತ್ತಿದ್ದಾಗ ಪಲ್ಲಕ್ಕಿ ಹೊತ್ತ ಬೋವಿಗಳು ಮದೋನ್ಮತ್ತ ಆನೆಗೆ ಹೆದರಿ ಪಲಾಯನ ಮಾಡುತ್ತಾರೆ. ಆಗ ಒಬ್ಬ ಬ್ರಾಹ್ಮಣ ಅವರನ್ನು ಮುಟ್ಟಬೇಡಿರಿ, ಅವರು ವಿಜಯನಗರದ ಅರಸರು ಎಂದು ಕೂಗಿಕೊಂಡಾಗ, ಝಿಯಾ ಎಂಬ ದಳಪತಿ ರಾಮರಾಯನನ್ನು ಸೆರೆ ಹಿಡಿದು ಸುಲ್ತಾನರ ಡೇರೆಗೆ ತರುತ್ತಾನೆ. ಅಲ್ಲಿ ಪರಸ್ಪರ ಹಂಗಿಸುವ ಮಾತುಕತೆ ಜರಗುತ್ತವೆ. ನಿಜಾಮಶಹನ ಸಂಕೇತದಿಂದ ರೂಮಿಖಾನ ರಾಮರಾಯನ ಶಿರಚ್ಛೇದ ಮಾಡುತ್ತಾನೆ. ಅಲಿಆದಿಲ್ ದೇವರೆ ನಾನು ತಪ್ಪು ಮಾಡಿದ್ದರೆ ಕ್ಷಮಿಸು ಎಂದು ಪ್ರಾರ್ಥಿಸುತ್ತಾನೆ ಹಾಗೂ ದಕ್ಷಿಣ ಭಾರತದ ಒಡೆತನ ಪಡೆಯುತ್ತಾನೆ. ನಾಟಕದ ಪ್ರಾರಂಭದಲ್ಲಿ ಯುದ್ಧದಲ್ಲಿ ಪರಾಭವದ ಹಿನ್ನೆಲೆಯಲ್ಲಿ ರಾಮರಾಯನ ಪತ್ನಿ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತಿರುಮಲ ಸಂಪತ್ತಿನೊಂದಿಗೆ ಪೆನಗುಂಡಿಗೆ ಹೋಗುತ್ತಾನೆ.

ರಾಕ್ಷಸ-ತಂಗಡಿ ಕಾರ್ನಾಡರು ಬರೆದ ನಾಲ್ಕು ಐತಿಹಾಸಿಕ ನಾಟಕಗಳಲ್ಲಿ ಕೊನೆಯದು. ‘ರಕ್ಕಸಗಿ-ತಂಗಡಗಿ ಯುದ್ಧ’ ಎಂಬುದು ವಾಡಿಕೆಯ ಹೆಸರು. ಕಾರ್ನಾಡರೆ ಹೇಳಿಕೊಂಡಂತೆ ‘ರಾಮರಾಯನ ಬಖೈರು’ ಎಂಬ ಪುಸ್ತಕದಿಂದ ಪ್ರಭಾವಿತರಾಗಿ ರಾಕ್ಷಸ ಹೆಸರು ಬಳಸಿದ್ದಾರಂತೆ. ಉರ್ದು ಮೂಲ ಹೊಂದಿದ ತಂಗಡಿ ಎಂದರೆ ಕಾಲಿನ ಮಾಂಸಖಂಡ, ಒಂದು ಜಾತಿಯ ಹೂ ಎಂಬ ಅರ್ಥ ಇದೆಯಂತೆ. ಜಾನಪದ ನಂಬಿಕೆ ಪ್ರಕಾರ ತಂಗಿ ಅಡಗಿದ ಊರು ತಂಗಡಗಿ ಆಗಿದೆ.

ವಿಜಯಪುರದ ಸುಲ್ತಾನ ರಾಮರಾಯನ ಮಗನ ಸಾವಿಗಾಗಿ ಸಾಂತ್ವನ ಹೇಳಲು ವಿಜಯನಗರಕ್ಕೆ ಬಂದಾಗ ಮಾತಿನ ನಡುವೆ ನನ್ನನ್ನು ಮಗನೆಂದು ಸ್ವೀಕರಿಸಿರಿ ಎಂದಾಗ ರಾಮರಾಯನ ಪತ್ನಿ ಸತ್ಯಭಾಮಾ ಒಮ್ಮೆಲೆ ಒಪ್ಪುತ್ತಾಳೆ. ವಿಜಯಪುರದ ಸುಲ್ತಾನನ ತಂದೆ ರಾಮರಾಯ ಎಂಬ ಸಂಶಯದ ಎಳೆ ಇಲ್ಲಿ ಇಣುಕುತ್ತದೆ. ಜೊತೆಗೆ ಅಳಿಯ ರಾಮರಾಯ ಹುಚ್ಚಿಯ ಕತೆ ಹೇಳಿ ವಿಜಯನಗರದಲ್ಲಿ ತನ್ನ ಸ್ಥಾನ ವ್ಯಾಖ್ಯಾನಿಸಿಕೊಳ್ಳುತ್ತಾನೆ. ರಾಮರಾಯ ಯುದ್ಧ ಮಾಡುವುದು ತನ್ನ ಅರವೀಡು ವಂಶದ ರಕ್ಷಣೆಗಾಗಿ ಎಂದು ಹೇಳುತ್ತಾನೆ. ವಿಜಯನಗರ ಅರಸರು ತುಳು ವಂಶಕ್ಕೆ ಸೇರಿದವರು. ಕಾರ್ನಾಡರ ಸಂಭಾಷಣೆಯಲ್ಲಿ ‘ತುರುಕರು’ ಎಂಬ ಶಬ್ದ ಹೆಚ್ಚು ಬಳಕೆಯಾಗಿದೆ. ಯುದ್ಧದಲ್ಲಿ ರಾಮರಾಯನ ಪಲ್ಲಕ್ಕಿ ಹೊತ್ತವರು ಪಲಾಯನ ಮಾಡಿದಾಗ ಇವರು ವಿಜಯನಗರದ ಅರಸರು ಎಂದು ಕೂಗಿದಾಗ ಬ್ರಾಹ್ಮಣ ಬುದ್ಧಿಯ ಬಗ್ಗೆ ಸಂಶಯ ಬರುತ್ತದೆ. ರಾಮರಾಯನನ್ನು ಸೆರೆಹಿಡಿದು ನಿಜಾಮಶಹನ ಡೇರೆಗೆ ತಂದಾಗಿನ ಸಂಭಾಷಣೆ ಶಕ್ತಿಶಾಲಿಯಾಗಿದೆ. ನಿಜಾಮಶಹಾನ ಸಂಕೇತದಿಂದ ರಾಮರಾಯನ ಶಿರಚ್ಛೇದವಾಗುತ್ತದೆ. ಸಂಭಾಷಣೆಯಲ್ಲಿ ಸಾಮಾನ್ಯ ಜನರು ಕೂಡಾ ಬ್ರಾಹ್ಮಣ ಭಾಷೆ ಬಳಸುತ್ತಾರೆ. ಬೆಲ್ಲ ತಿಂದು ರಾಮರಾಯನ ಪತ್ನಿ ತಾಯಿ ಸಾಯುತ್ತಾರೆ. ಬೆಲ್ಲ ಎಂದರೆ ವಿಷ ಇರಬೇಕು.

 

ಗಮನಾರ್ಹ ಅಂಶಗಳು

 • ರಾಮರಾಯ ಮಾಸ್ತಿಯವರಿಗೆ ಅರಸ, ಮೆಂಡೆಗಾರರಿಗೆ ಸಾಮ್ರಾಟ,

            ಕಾರ್ನಾಡರಿಗೆ ಶಾಸಕನಾಗಿ ಕಂಡಿದ್ದಾನೆ.

 • ರಾಮರಾಯ ಅರವೀಡು ವಂಶದವ, ವಿಜಯನಗರದ ಅರಸರು

            ತುಳು ವಂಶಜರು. ರಾಮರಾಯನಿಗೆ ಚಾಲುಕ್ಯವಂಶಜನೆಂದು

            ಕರೆಸಿಕೊಳ್ಳುವ ಆಶೆ ಇದೆ -ಕಾರ್ನಾಡ ನಾಟಕದಲ್ಲಿ ಮಾತ್ರ.

 • ‘ರಾಮರಾಯನ ರುಂಡ’ ಎಂಬ ಬೇರೆ ಪ್ರಬಂಧದಲ್ಲಿ

            ತಿರುಮಲಾಂಬೆ ರಾಮರಾಯನ ಹೆಂಡತಿ. ಪತನ ಹಾಗೂ

            ತಾಳಿಕೋಟಿಯಲ್ಲಿ ಕೂಡಾ ಹೆಂಡತಿ. ಕಾರ್ನಾಡರಲ್ಲಿ

            ತಿರುಮಲಾಂಬ ತಾಯಿ, ಪತ್ನಿ ಸತ್ಯಭಾಮೆ.

 • ಯುದ್ಧದಲ್ಲಿ ರಾಮರಾಯ ಮೇಣೆ, ಕುದುರೆ, ಆನೆ ಮೇಲಿದ್ದ

            ಎಂಬ ವಿವರಣೆಯಲ್ಲಿ ಖಚಿತತೆ ಇಲ್ಲ.

 • ರಾಮರಾಯ ಯಾರಿಂದ ಕೊಲೆಯಾದ ಎಂಬ ಬಗ್ಗೆ

            ಬಿನ್ನಾಭಿಪ್ರಾಯಗಳಿವೆ.

 • ಸದಾಶಿವರಾಯ ಕಾರ್ನಾಡರ ನಾಟಕದಲ್ಲಿ ತುಂಗಾನದಿ ಹಾರಿ

            ಸಾಯುವುದು ಲೇಸು ಎನ್ನುತ್ತಾನೆ. ಆದರೆ ಅದು ತುಂಗಭದ್ರಾ ಆಗಬೇಕಿತ್ತು.

 • ಕೃಷ್ಣೆಯ ಎಡದಂಡೆಗೆ ರಕ್ಕಸಗಿ-ತಂಗಡಗಿ ಗ್ರಾಮಗಳಿವೆ. ಇವೆರಡರ

            ನಡುವಿನ ಅಂತರ ಒಂಬತ್ತು ಮೈಲು. ಕೃಷ್ಣೆಯ ಉತ್ತರಕ್ಕೆ

            ಸುಲ್ತಾನರ ಆಡಳಿತ ಇದೆ. ದಕ್ಷಿಣಕ್ಕೆ ತುಂಗಭದ್ರಾ ದಂಡೆಗೆ

            ವಿಜಯನಗರ ಇದೆ. ರಾಮರಾಯನ ನಿಧನಾನಂತರ

            ವೆಂಕಟಪತಿರಾಯ ಹಾಗೂ ಹಲವರು ವಿಜಯನಗರದಲ್ಲಿ

            ಆಡಳಿತ ನಡೆಸಿದರೆಂಬ ವಿವರ ಇತಿಹಾಸದಲ್ಲಿದೆ.

 • ಇತಿಹಾಸ ಹಾಗೂ ನಾಟಕಗಳನ್ನು ಗಮನಿಸಿದಾಗ ರಾಮರಾಯ

            ಲಂಪಟ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿದ್ದಾನೆ.

 • ಕಾರ್ನಾಡರ ನಾಟಕದಲ್ಲಿ ರಾಮರಾಯನ ಪತ್ನಿ ಹಾಗೂ ತಾಯಿ

            ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

 • ವಿಜಯನಗರದ ಸೈನ್ಯದಲ್ಲಿ ಆನೆ, ಕುದುರೆ, ಸೈನಿಕರು ಇದ್ದರೆ,

            ಸುಲ್ತಾನರ ಸೈನ್ಯದಲ್ಲಿ ತೋಪು-ಫಿರಂಗಿಗಳಿವೆ.

 • ರಾಮರಾಯನ ರುಂಡ ಅಹಮದನಗರದಲ್ಲಿ ಒಂದುವರೆ

            ಶತಮಾನ ಇತ್ತು ಎಂಬ ವದಂತಿ ಇದೆ.

 • ವಿಜಯನಗರ ಸಾಮ್ರಾಜ್ಯದ ಮೊದಲಿನ ಹೆಸರು

            ವಿದ್ಯಾನಗರವಾಗಿತ್ತಂತೆ; ಇದು ಯಾವ ನಾಟಕದಲ್ಲಿಯೂ

            ಪ್ರಸ್ತಾಪವಾಗಿಲ್ಲ.

Leave a Reply

Your email address will not be published.