‘ಮಾಹಿತಿ ತಂತ್ರಜ್ಞಾನದ ಮೂಲೋದ್ದೇಶವೇ ಸಂವಹನ’

ಕನ್ನಡ ಕಟ್ಟುವ ಕೆಲಸಕ್ಕೆ ತಂತ್ರಜ್ಞಾನವನ್ನು ಬಳಸಿಕೊಂಡರೆ, ಕನ್ನಡದ ಯುವಕರು ಇತರ ಭಾಷೆಗಳನ್ನು ಕಲಿತರೆ ಕನ್ನಡದ ಭವಿಷ್ಯ ಉಜ್ವಲವಾಗಿಯೇ ಇದೆ ಎಂಬ ಆಶಾವಾದ ಉದ್ಯಮಿ ಗುರುರಾಜ ದೇಶಪಾಂಡೆ ಅವರದು. ಕನ್ನಡಿಗರು ಭೇಟಿಯಾದರೆ ಅವರೊಳಗಿನ ಅಪ್ಪಟ ಧಾರವಾಡ ಶೈಲಿಯ ಕನ್ನಡ ನಿರರ್ಗಳವಾಗಿ ಹೊರಹೊಮ್ಮುತ್ತದೆ. ಇಲ್ಲಿದೆ ಅವರೊಂದಿಗಿನ ಮಾತುಕತೆಯ ಸಾರ.

ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಇಂಗ್ಲಿಷ್‍ನಿಂದ ಕನ್ನಡ ಭಾಷೆಗೆ ಅಪಾಯ ಇದೆಯೇ?

ಖಂಡಿತ ಇಲ್ಲ. ಐಟಿಯ ಮುಖ್ಯ ಉದ್ದೇಶವೇ ಎಲ್ಲರೊಂದಿಗೆ ಸಂವಹನ ನಡೆಸುವುದು. ಹಾಗಾಗಿ ಇದು ಎಲ್ಲ ಭಾಷಿಕರನ್ನು ಬೆಸೆಯುವ ಸಾಧನವೇ ಹೊರತು, ಯಾವ ಭಾಷೆಗೂ ಅಪಾಯ ತರದು. ಇನ್ನು ಇಂಗ್ಲಿಷ್ ಭಾಷೆಯ ಬಗ್ಗೆ ಹೇಳುವುದಾದರೆ, ನಾವು ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಪರಿಣತಿ ಹೊಂದಿದರೂ ಎಣಿಸುವ ವಿಷಯ ಬಂದಾಗ ನಾವು ಮನಸ್ಸಿನಲ್ಲಿ ಕನ್ನಡದಲ್ಲೇ ಎಣಿಸುತ್ತೇವೆ. ನಾನು ದಶಕಗಳಿಂದ ಹೊರದೇಶದಲ್ಲಿ ನೆಲೆಸಿರುವುದರಿಂದ ತಾಂತ್ರಿಕ ವಿಷಯಗಳನ್ನು ಇಂಗ್ಲಿಷ್‍ನಲ್ಲಿ ಯೋಚಿಸುತ್ತೇನಾದರೂ ನನ್ನ ಎಣಿಕೆಯೂ ಅಂದರೆ ಮೂಲ ಬೌದ್ಧಿಕ ಕ್ರಿಯೆ ನನ್ನ ಮಾತೃಭಾಷೆಯಲ್ಲೇ ಇರುತ್ತದೆ. ಅಂದರೆ ಇತರ ಯಾವುದೇ ಭಾಷೆಯ ಕಲಿಕೆ ನಮ್ಮ ಮಾತೃಭಾಷೆಗೆ ಅಪಾಯವಾಗಲಾರದು ಅಂತ ನನ್ನ ಅಭಿಪ್ರಾಯ.

ಐಟಿಯಲ್ಲಿ ಕನ್ನಡ ಭಾಷೆಯ ಬಳಕೆ ಇನ್ನೂ ತುಂಬಾ ಸೀಮಿತವಾಗಿದೆ ಎಂಬ ಆರೋಪ ಇದೆಯಲ್ಲ?

ಇದನ್ನು ಸೀಮಿತ ಎಂದು ಹೇಳುವುದಕ್ಕಿಂತ ದಿನೇದಿನೇ ವಿಸ್ತಾರಗೊಳ್ಳುತ್ತಿದೆ ಎಂದು ಹೇಳುವುದು ಸೂಕ್ತ. ಐಟಿ ಕ್ಷೇತ್ರದಲ್ಲಿ ಕನ್ನಡದ ಯುವಕರು ಕೈಗೊಂಡಿರುವ ಪ್ರಯೋಗಗಳಿಂದ ಇವತ್ತು ಸಾಕಷ್ಟು ಪ್ರಮಾಣದ ಕನ್ನಡದ ಬಳಕೆ ಈ ಕ್ಷೇತ್ರದಲ್ಲಿ ವೃದ್ಧಿಸಿದೆ. ಈ ದಿಸೆಯಲ್ಲಿ ಕೃತಕ ಜ್ಞಾನವೂ (ಆರ್ಟಿಫಿಷಿಯಲ್ ನಾಲೇಜ್) ಕೂಡ ನೆರವಾಗುತ್ತಿದೆ. ಯಾವುದಾದರೂ ಒಂದು ವಿಡಿಯೊದಲ್ಲಿ ಬರುವ ವಿಷಯಗಳನ್ನು ಈ ಕೃತಕ ಜ್ಞಾನ ಕೂಡಲೇ ಕನ್ನಡಕ್ಕೆ ತರ್ಜುಮೆಗೊಳಿಸಿ ನೀಡುತ್ತಿದೆ. ಈ ಜ್ಞಾನದ ಬಳಕೆ ಹೆಚ್ಚಿದಂತೆ ಅದು ತಾನೇತಾನಾಗಿ ಸುಧಾರಿಸುತ್ತ ಮುನ್ನಡೆಯುತ್ತದೆ. ಮೊದಲು ಐಟಿಯಲ್ಲಿ ಕನ್ನಡವೇ ಬೇರೆ, ಇಂಗ್ಲಿಷೇ ಬೇರೆ ಎಂಬ ವಾತಾವರಣ ಇತ್ತು. ಈಗ ಇವರೆಡು ಭಾಷೆಗಳಷ್ಟೇ ಅಲ್ಲ, ಪ್ರಪಂಚದ ಹಲವಾರು ಭಾಷೆಗಳು ಪರಸ್ಪರ ಸಂಪರ್ಕ ಸಾಧಿಸುತ್ತಿವೆ.

ಕನ್ನಡ ಸಂದರ್ಭಕ್ಕೆ ಈ ಸಂಪರ್ಕ ಸಾಧ್ಯತೆಯನ್ನು ವಿಶ್ಲೇಷಿಸಿ.

ನಾವು ಒಂದೇ ಭಾಷೆಯನ್ನು ಕಲಿತಿದ್ದರೆ ದೇಶದ ಆರ್ಥಿಕತೆಯ ಭಾಗವಾಗುವುದು ಕಷ್ಟವಾಗುತ್ತದೆ. ಕರ್ನಾಟಕದಲ್ಲಿ ಕನ್ನಡಿಗರು ಕನ್ನಡವನ್ನು ಸಹಜವಾಗಿಯೇ ಕಲಿತರೆ, ಹೊರಗಿನಿಂದ ಬಂದವರು ತಂತ್ರಜ್ಞಾನದ ನೆರವಿನಿಂದ ಕನ್ನಡ ಕಲಿಯುತ್ತಾರೆ. ಅಂಥವರು ಕವಿತೆ-ಕತೆ ಬರೆಯುವಷ್ಟು ಬೇಕಾದ ಕನ್ನಡವನ್ನು ಕಲಿಯಲು ಸಾಧ್ಯವಾಗದಿರಬಹುದು. ಅವರಲ್ಲಿ ಆಸಕ್ತಿ ಇದ್ದರೆ ಸೃಜನಶೀಲತೆಯಿಂದ ಆ ಕನ್ನಡವನ್ನೂ ತಮ್ಮದಾಗಿಸಿಕೊಳ್ಳಲು ಸಾಧ್ಯ ಇದೆ. ಇದರರ್ಥ ಇಷ್ಟೇ… ಇಂಥ ಕೊಡು-ತೊಗೊಳ್ಳುವ ವ್ಯವಹಾರದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ವಿಸ್ತಾರಗೊಳ್ಳುತ್ತ ಹೋಗುತ್ತದೆ. ಇನ್ನೊಂದೆಡೆ ತಂತ್ರಜ್ಞಾನದಿಂದ ಕನ್ನಡ ಸಾಹಿತ್ಯ, ಭಾಷೆಗೆ ಸಂಬಂಧಿಸಿದ ವಿಷಯಗಳ ದಾಖಲೀಕರಣ ಸಾಧ್ಯವಾಗುತ್ತಿದೆ. ತಂತ್ರಜ್ಞಾನದಿಂದ ಏಕರೂಪತೆ (ಹೊಮೊನೈಜ್) ಆಗಲ್ಲ, ನಮಗೆ ಬೇಕಾದಂತೆ ಒಗ್ಗಸಿಕೊಳ್ಳುವ (ಕಸ್ಟಮೈಸ್) ಕ್ರಿಯೆ ನಡೆಯುತ್ತಿದೆ. ಇಂಥ ಪ್ರಕ್ರಿಯೆಗಳಿಂದ ಆಯಾ ಭಾಷೆಯ ಮೌಲ್ಯ, ಆಯುಸ್ಸು ಖಂಡಿತ ವೃದ್ಧಿಸುತ್ತದೆ. ಅಂತೆಯೇ ಕೊಂಕಣಿಯಂಥ ಭಾಷೆಗಳೂ ಇವತ್ತು ತಂತ್ರಜ್ಞಾನದಿಂದ ಪುನಶ್ಚೇತನಗೊಳ್ಳುತ್ತಿವೆ.

ಗುರುರಾಜ ದೇಶಪಂಡೆ

ಧಾರವಾಡ ಮೂಲದ ಗುರುರಾಜ ದೇಶಪಾಂಡೆ ಅವರು ಕೆನಡಾ, ಅಮೆರಿಕದಲ್ಲಿ ಹೆಸರಾಂತ ಉದ್ಯಮಿ. ಮಧ್ಯಮವರ್ಗದ ಕುಟುಂಬದಿಂದ ಬಂದು ಹಲವು ಐ.ಟಿ. ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿಯಾಗಿ ಮುನ್ನಡೆಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡವರು. ಅಮೆರಿಕದ ಪ್ರತಿಷ್ಠಿತ ಮೆಸಾಚೂಸೆಟ್ಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂ.ಐ.ಟಿ.) ಆಡಳಿತ ಮಂಡಳಿಯ ಕಾಯಂ ಸದಸ್ಯ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರಯೋಗಶೀಲತೆ ಮತ್ತು ಉದ್ಯಮ ವಿಷಯಗಳ ರಾಷ್ಟ್ರೀಯ ಸಲಹಾ ಮಂಡಳಿಯ ಸಹ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು.

ತಮ್ಮೊಳಗೆ ಒಬ್ಬ ಉದ್ಯಮಿಯ ಜೊತೆಗೆ ಉದಾರಿಯನ್ನು ಪೋಷಿಸಿಕೊಂಡಿರುವ ದೇಶಪಾಂಡೆ, ತಮ್ಮದೇ ಹೆಸರಿನ ದೇಶಪಾಂಡೆ ಫೌಂಡೇಶನ್ ಮೂಲಕ ಮೂರು ದಶಕಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಫೌಂಡೇಶನ್‍ನ ವಿಧಾಯಕ ಕಾರ್ಯಕ್ರಮಗಳ ಮೂಲಕ ಸಾವಿರಾರು ಯುವಕರಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿರುವ ಇವರು, ನವೋದ್ಯಮಿ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿ ಅಸಂಖ್ಯ ಗ್ರಾಮೀಣ ಯುವಕರಿಗೆ, ಮಹಿಳೆಯರಿಗೆ ಸ್ವಉದ್ಯೋಗಗಳನ್ನು ರೂಪಿಸಿದ್ದಾರೆ.

ಇಂಥ ಸಂದರ್ಭದಲ್ಲಿ ಇಂಗ್ಲಿಷ್ ಗೊತ್ತಿಲ್ಲದ ಯುವಕರಿಗೆ ಐಟಿ ಕ್ಷೇತ್ರದಲ್ಲಿ ಉದ್ಯೋಗಗಳು ಸಿಗುತ್ತವೆಯೆ?

ಒಂಚೂರೂ ಗೊತ್ತಿಲ್ಲ ಎಂದರೆ ಸ್ವಲ್ಪ ಕಷ್ಟವೇ. ಹಾಗಂತ ಬಿ.ಎ., ಬಿ.ಕಾಂ., ಬಿಎಸ್‍ಸಿ ಪದವೀಧರರು ಎದೆಗುಂದಬೇಕಿಲ್ಲ. ಇಂಗ್ಲಿಷ್ ಮತ್ತು ಸಂವಹನ ಕೌಶಲಗಳನ್ನು ಕೇವಲ 4-5 ತಿಂಗಳಲ್ಲಿ ಅಭಿವೃದ್ಧಿಪಡಿಸಿಕೊಳ್ಳಲು ಇವತ್ತು ಎಲ್ಲೆಡೆ ಸಾಕಷ್ಟು ಅವಕಾಶಗಳಿವೆ. ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲವೂ ಇಂಥ ತರಬೇತಿಗಳಲ್ಲಿ ನಡೆಯುತ್ತದೆ. ಯಾರು ಕನ್ನಡ ಭಾಷೆಯನ್ನು ಸರಿಯಾಗಿ ಕಲಿತಿರುತ್ತಾರೆಯೋ ಅವರು ಯಾವುದೇ ಭಾಷೆಯನ್ನು ಬೇಗ ಕಲಿಯಬಲ್ಲರು. ಹೆಚ್ಚಿನ ಭಾಷೆಗಳನ್ನು ಅದು ಕನ್ನಡ, ಮರಾಠಿ, ತಮಿಳು ಯಾವುದೇ ಆಗಿರಬಹುದು, ಕಲಿಯುವುದರಿಂದ ನಮ್ಮಲ್ಲಿ ತಿಳಿವಳಿಕೆಯ ಸಾಮಥ್ರ್ಯ, ಪರಿಕಲ್ಪನೆಯ ಸಾಮಥ್ರ್ಯ ಹೆಚ್ಚುತ್ತದೆ. ಹಾಂ… ಇಲ್ಲಿ ಒಂದು ಮಾತು. ಒಂದು ಭಾಷೆಯನ್ನು ಕಲಿಯುವಾಗ ಇನ್ನೊಂದು ಭಾಷೆಯನ್ನು ದ್ವೇಷಿಸಬೇಕಿಲ್ಲ. ಕೆಲವೊಮ್ಮೆ ಇಂಥ ಅನಾಚಾರಗಳು ನಡೆದುಬಿಡುತ್ತವೆ. ಯಾರೋ ಒಬ್ಬರು ಇಂಗ್ಲಿಷ್ ಬೇಕು ಅಂದುಬಿಟ್ಟರೆ ಅವರನ್ನು ದೇಶದ್ರೋಹಿ ಅದು-ಇದು ಎಂದೆಲ್ಲ ಹೀಯಾಳಿಸಲಾಗುತ್ತಿದೆ. ಇಂಥ ಕೆಲಸಗಳು ನಡೆಯಬಾರದು.

ನೀವು ಹೇಳಿದಂತೆ ಇಷ್ಟೆಲ್ಲ ಅವಕಾಶಗಳಿದ್ದರೂ ಇನ್ನೂ ನಮ್ಮ ಅರೆ-ನಗರ, ಗ್ರಾಮೀಣ ಯುವಕರು ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ನಗರ ಪ್ರದೇಶದವರಿಗಿಂತ ಹಿಂದೆ ಬೀಳುತ್ತಿದ್ದಾರಲ್ಲ?

ನೋಡಿ, ನಮ್ಮಲ್ಲಿ ‘ಯೆಸ್ ಸರ್’ ಸಂಸ್ಕತಿ ಮೊದಲಿನಿಂದಲೂ ಇದೆ. ಯಾವುದೋ ಅಸಾಧ್ಯವಾದ ಕೆಲಸವನ್ನು ನಮ್ಮ ಮೇಲಿನವರು ಹೇಳಿದಾಗ ಅದು ಸಾಧ್ಯವಿಲ್ಲ ಎಂದು ಸಮರ್ಪಕವಾಗಿ ಹೇಳುವ ಕೆಲಸ ನಮ್ಮ ಯುವಕರಿಂದ ಆಗಬೇಕು. ಅದಕ್ಕೇ ಅವರಲ್ಲಿ ಸಂವಹನ ಕೌಶಲ್ಯ ಬೆಳೆಸಬೇಕು ಅನ್ನೋದು. ಗ್ರಾಮೀಣ ಯುವಕರಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲ ಇರುತ್ತದೆ; ಅವರಲ್ಲಿ ಡೊಮೈನ್ ನಾಲೇಜ್ ಕಡಿಮೆ ಇದ್ದರೂ ಕಷ್ಟಸಹಿಷ್ಣುತೆ ಜಾಸ್ತಿ ಇರುತ್ತದೆ; ಅವರಿಗೆ ಸ್ವಲ್ಪ ಕೌಶಲ್ಯ ತರಬೇತಿ ದೊರೆತರೆ ಅವರು ನಗರದ ಯುವಕರನ್ನು ಮೀರಿಸಬಲ್ಲರು. ಅವರಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಷ್ಟೇ. ಭಾರತದಲ್ಲಿ ಪ್ರಮುಖವಾಗಿ ಎರಡು ಆಕಾಂಕ್ಷೆಗಳು ಕಂಡುಬರುತ್ತವೆ. ಒಂದು-ಇಂಗ್ಲಿಷ್, ಎರಡು-ಕಂಪ್ಯೂಟರ್. ಇವೆರಡರಿಂದಲೇ ನಮ್ಮ ಆತ್ಮವಿಶ್ವಾಸ ಇಮ್ಮಡಿಯಾಗಿಬಿಡುತ್ತದೆ. ಇದರ ಅರ್ಥ ಕನ್ನಡ ಬಿಡ್ರಿ, ಇಂಗ್ಲಿಷ್ ಹಿಡೀರಿ ಅಂತ ಅಲ್ಲ. ಹೀಗೆ ಮಾಡಿದಲ್ಲಿ ವಿಜ್ಞಾನ, ಗಣಿತದಂಥ ವಿಷಯಗಳನ್ನೂ ಕನ್ನಡದಲ್ಲಿಯೇ ಕಲಿಯಬಹುದು ಎಂಬ ಧೈರ್ಯ ನಮ್ಮಲ್ಲೇ ಮೂಡುತ್ತದೆ.

ಬಹುರಾಷ್ಟ್ರೀಯ ಕಂಪನಿಗಳು ಕನ್ನಡಿಗ ಉದ್ಯೋಗಾಕಾಂಕ್ಷಿಗಳನ್ನು ಹೇಗೆ ನೋಡುತ್ತವೆ?

ನನಗೆ ತಿಳಿದಂತೆ ಯಾವುದೇ ಎಂ.ಎನ್.ಸಿ.ಗಳು ಯಾವುದೇ ಭಾಷಿಕರನ್ನು ತಾರತಮ್ಯದಿಂದ ನೋಡುವುದಿಲ್ಲ. ಉತ್ತಮ ಸಂವಹನ ಕೌಶಲಗಳನ್ನು, ಸಾಮಥ್ರ್ಯಗಳನ್ನು ಮಾತ್ರ ನೋಡುತ್ತಾರೆ. ಇಂಥ ಮಾನದಂಡದಿಂದಾಗಿಯೆ ಇಂದು ಅನೇಕ ಕನ್ನಡಿಗರು ಕರ್ನಾಟಕ, ಇತರ ರಾಜ್ಯಗಳು, ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಇಂಥ ಕನ್ನಡಿಗರು ವಿಶ್ವದ ಯಾವುದೇ ಭಾಗದಲ್ಲಿದ್ದರೂ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಕನ್ನಡವನ್ನು ಉಳಿಸುತ್ತಿದ್ದಾರೆ. ಇಂಥ ಉದ್ಯೋಗಿಗಳು ಮತ್ತು ಉದ್ಯಮಿಗಳು ತಂತ್ರಜ್ಞಾನ ಇರೋದು ಮನುಕುಲದ ಅಭ್ಯುದಂಕ್ಕೆ ಮತ್ತು ನಮ್ಮ ಭಾಷೆಯ ಉಳಿವಿಗೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಇದೆಲ್ಲ ಪದವಿ ಪಡೆದವರ ಮಾತಾಯಿತು. ಇನ್ನು ಕಡಿಮೆ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶಗಳು, ಉದ್ಯಮಿಯಾಗುವ ಅವಕಾಶಗಳ ಕುರಿತು ನಿಮ್ಮ ಅನಿಸಿಕೆ ಏನು?

ಇವತ್ತು ಭಾರತದಲ್ಲಿ 3.20 ಕೋಟಿ ಸಣ್ಣ ಉದ್ಯಮಿಗಳಿದ್ದಾರೆ. ಇವರೆಲ್ಲ ಪ್ರಾಸಂಗಿಕವಾಗಿ ಕರಕುಶಲ, ಚರ್ಮ, ಗಾರ್ಮೆಂಟ್ ಉತ್ಪನ್ನಗಳ ತಯಾರಿಕೆ, ಮಾರಾಟದಲ್ಲಿ ತೊಡಗಿದವರು. ಇವರಿಗೆ ಸ್ಪರ್ಧೆಯೂ ಕಡಿಮೆ. ಇವರಿಗೆ ಒಂಚೂರು ವ್ಯವಹಾರ ಕೌಶಲಗಳಿಗೆ ಸಂಬಂಧಿಸಿದ ಕ್ರೆಡಿಟ್, ಮಾರುಕಟ್ಟೆ ಅವಕಾಶಗಳು, ಲಾಭ-ಹಾನಿ, ಹಣದ ಹರಿವು ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಟ್ಟರೆ ಅವರು ಆದಾಯವನ್ನು ಒಂದೇ ವರ್ಷದಲ್ಲಿ ಹಲವು ಪಟ್ಟು ವೃದ್ಧಿಸಿಕೊಳ್ಳಬಲ್ಲರು. ನಮ್ಮ ದೇಶಪಾಂಡೆ ಫೌಂಡೇಶನ್‍ನ ನವೋದ್ಯಮಿ ಕಾರ್ಯಕ್ರಮದ ಮೂಲಕ ಈ ಪ್ರಯೋಗ ಮಾಡಿ ನೋಡಿದ್ದೇವೆ. ಅನೇಕರ ವಾರ್ಷಿಕ ವಹಿವಾಟು ಶೇ.20-30ರಷ್ಟು ಹೆಚ್ಚಿದೆ.

ನಿಮ್ಮ ನವೋದ್ಯಮಿಯಂಥ ಕಾರ್ಯಕ್ರಮಗಳು ದೇಶದಲ್ಲಿ ಇನ್ನೂ ಹೆಚ್ಚಬೇಕಿದೆ…

ಸಾಕಷ್ಟು ಸಂಸ್ಥೆಗಳು ಈಗಾಗಲೇ ಈ ಕೆಲಸ ಮಾಡುತ್ತಿವೆ. ನನಗೆ ಅನ್ನಿಸೋದು ಇಂಥ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬೇಕಿದೆ. ಈಗ ಒಬ್ಬೊಬ್ಬ ಸಣ್ಣ ಉದ್ಯಮಿಗೆ ಕಾಯಕಲ್ಪ ನೀಡುವುದರ ಜೊತೆಗೆ ಒಂದೇ ಕೆಲಸದ ಹಲವರನ್ನು ಗುರುತಿಸಿ ಅವರಿಗೆ ಕ್ಲಸ್ಟರ್‍ಗಳನ್ನು ಸ್ಥಾಪಿಸಿ, ಸಮೂಹವಾಗಿ ಮುನ್ನಡೆಸಬೇಕಿದೆ. ಅವರ ಉತ್ಪನ್ನಗಳ ಮೌಲ್ಯವರ್ಧನೆಯ ಪ್ರಯತ್ನಗಳು ನಡೆಯಬೇಕಿವೆ. ಇವೆಲ್ಲವೂ ನಡೆದಲ್ಲಿ ಈ ಉದ್ಯಮಿಗಳೂ ಉದ್ಯೋಗಗಳನ್ನು ಸೃಷ್ಟಿಸಲಿದ್ದಾರೆ.

ಮತ್ತೆ ರೈತರನ್ನು ಅಣಿಗೊಳಿಸುವುದು ಹೇಗೆ?

ನಮ್ಮ ಫೌಂಡೇಶನ್‍ನಿಂದ ಈ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ. ರೈತರಿಗೆ ನೀರು ಒಂದಿದ್ದರೆ ಏನು ಬೇಕಾದರೂ ಸಾಧಿಸಬಲ್ಲರು. ಅವರಿಗೆ ಕೃಷಿಹೊಂಡ ನಿರ್ಮಾಣ, ತರಬೇತಿ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿವೆ. ಇವು ವ್ಯಾಪಕವಾಗಬೇಕು ಅಷ್ಟೇ.

ಸಂದರ್ಶನ: ಮೆಣಸಿನಕಾಯಿ

Leave a Reply

Your email address will not be published.