ಮಿತಿ ಮೀರಿದ ವ್ಯಾಪಾರೀಕರಣವೇ ಕಾರಣ!

ಸಂಗೀತದ ಸ್ವರಗಳನ್ನು, ರಾಗಗಳನ್ನು, ಮಟ್ಟುಗಳನ್ನು ಮೂಟೆಯಲ್ಲಿ ಕಟ್ಟಿ ತಮ್ಮ ಸ್ಟೋರ್ ರೂಮಲ್ಲಿ ಬಂಧಿಸಿಡುವ ಗುರುಪರಂಪರೆ ಈಗಿನದು.

-ಬಿ.ವಿ.ಶ್ರೀನಿವಾಸ್

ನಮ್ಮಲ್ಲಿ ಹಿಂದೆ ಪಂ.ಭೀಮಸೇನ ಜೋಷಿ, ಡಾ.ಬಾಲಮುರಳಿ ಕೃಷ್ಣ, ವಿದೂಷಿ ಎಂ.ಎಸ್.ಸುಬ್ಬಲಕ್ಷ್ಮೀ… ಹೀಗೆ ಮಹಾನ್ ಸಾಧಕರ ದಂಡು ನಮ್ಮ ಸಂಗೀತವನ್ನು ಜನರ ಹೃದಯ ಹೃದಯದಲ್ಲೂ ಬಿತ್ತಿ ಮುಗಿಲೆತ್ತರದ ಸ್ಥಾನದಲ್ಲಿ ಕೂಡಿಸಿದ್ದರು. ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಆ ಥರದ ದೈವದತ್ತವಾದ ಸಾಧಕರು ಏಕೇ ಬರ್ತಿಲ್ಲ! ಅದಕ್ಕೆ ಏನು ಕೊರತೆ?

ಅದಕ್ಕೆ ಕಾರಣ ಸಂಗೀತದ ಮಿತಿಮೀರಿದ ವ್ಯಾಪಾರೀಕರಣ. ನೀ ಕೊಟ್ಟಷ್ಟು ದುಡ್ಡಿಗೆ ಸಂಗೀತ ಎನ್ನುತ್ತ ಸಂಗೀತದ ಸ್ವರಗಳನ್ನು, ರಾಗಗಳನ್ನು, ಮಟ್ಟುಗಳನ್ನು ಮೂಟೆಯಲ್ಲಿ ಕಟ್ಟಿ ತಮ್ಮ ಸ್ಟೋರ್ ರೂಮಲ್ಲಿ ಬಂಧಿಸುವಂಥಾ ಗುರುಪರಂಪರೆ ಈಗಿನದು. ಶಿಷ್ಯರ ಸಂಖ್ಯೆಯ ಏರುವಿಕೆಯಲ್ಲಿರುವಂಥ ತುಡಿತ ಅವರಲ್ಲಿ ಸಂಗೀತ ಸ್ವರಗಳನ್ನು ಬಿತ್ತುವಲ್ಲಿ ಸಿಗುವ ಆನಂದದ ಕಡೆ ಇಲ್ಲದಿರುವುದು ಮತ್ತೊಂದು ಕಾರಣ.

ಹಿಂದೆ ಸಂಗೀತದ ತುಡಿತ ಬಿತ್ತುವಲ್ಲಿ ನಮ್ಮಲ್ಲಿಯ ನೂರಾರು ಭಜನಾ ಮಂದಿರಗಳ ಪಾಲು ಹೆಚ್ಚು. ಸಂಗೀತಕ್ಕೆ ಸೆಳೆಯುವ ಭಜನಾ ಮಂದಿರಗಳು ಬೆಂಗಳೂರಿನ ಎಲ್ಲಾ ಗಲ್ಲಿಗಳಲ್ಲೂ ಇದ್ದವು. ಹಳ್ಳಿಯಲ್ಲಿಯೂ ಕೂಡ ಭಜನಾ ಮಂದಿರವೇ ಜನರನ್ನು ಒಟ್ಟುಗೂಡಿಸುತ್ತಿದ್ದ ಕೇಂದ್ರವಾಗಿದ್ದವು. ಆ ರಾಗಗಳ ಮಾಹಾಗುಂಗಿಗೆ ಮರುಳಾಗಿ ಮಿಕ್ಕೆಲ್ಲವೂ ನಶ್ವರ, ಅನ್ನ ವಸ್ತ್ರಾದಿಗಳೆಲ್ಲವೂ, ಹಸಿವು ನಿದ್ರೆ ಎಲ್ಲವೂ ಸಂಗೀತವೇ ಎಂದು ತಿಳಿದು ಆ ಪರವಶತೆಯಲ್ಲಿ ತೇಲಾಡಿ ತಮ್ಮನ್ನೇ ಅರ್ಪಿಸಿಕೊಂಡ ಮಹಾಮಹಿಮರು ಅದೆಷ್ಟೋ! ಆ ಥರದ ಸಂಗೀತದ ಮೊಳಕೆಯನ್ನು ಬಿತ್ತುವಂಥ ಭಜನೆಗಳು ಮರೆಯಾದವು. ಇದೂ ಈಗಿನ ಪೀಳಿಗೆಯ ಸಾಧಕರ ಕೊರತೆಗೆ ಕಾರಣವೆಂದು ನನ್ನ ಭಾವನೆ. ಈಗ ಸಂಗೀತ ಕಲಿಯುವುದೊಂದು ಫ್ಯಾಷನ್ ಆಗಿದೆ. ಟೈಮ್‍ಪಾಸ್‍ಗೋಸ್ಕರ ನಮಗೆ ಸಂಗೀತ ಹೇಳಿಕೊಡಿ ಎನ್ನುವ ಅರೆಬರೆ ಆಸಕ್ತಿಯ ಮಂದಿಯೇ ಹೆಚ್ಚು.

ಹಿಂದಿನ ನಮ್ಮ ಎಲ್ಲಾ ಹಿರಿಯರ ಸಾಧನೆ ನಡೆದಿದ್ದೆಲ್ಲಾ ಗುರುಗಳ ಜೊತೆಯಲ್ಲೇ. ಹಗಲು ರಾತ್ರಿಯೆನ್ನದೆ ಸದಾಕಾಲ ಗುರುಗಳ ಸೇವೆ ಮಾಡುತ್ತ ಅವರಿಂದ ಕಲಿತದ್ದನ್ನ ಮಹಾಪ್ರಸಾದವೆಂದು ಭಾವಿಸಿ, ಕಠಿಣ ಸಾಧನೆಯ ಮೂಲಕ ಒಂದೊಂದು ಸ್ವರಗಳ, ರಾಗಗಳ ಭಾವವನ್ನು ಮನನ ಮಾಡಿಕೊಂಡು ತಮ್ಮದಾಗಿಸಿ ಭಾಗ್ಯವಂತರಾಗುವ ಮಹಾ ಅವಕಾಶ ಅವರದಾಗಿತ್ತು. ಸಂಗೀತ ಕಲಿಕೆಗಾಗಿ ಮನೆಮಠವನ್ನು ತೊರೆದು, ಬಂಧುಬಾಂಧವರ ಪ್ರೀತಿ ಬಾಂಧವ್ಯಗಳ ಮರೆತು ಸದಾ ಗುರುಸೇವೆ, ಸಂಗೀತದಲ್ಲಿ ತಮ್ಮನ್ನೇ ಅರ್ಪಿಸಿಕೊಂಡು, ಸಂಗೀತ ಸಾಕ್ಷಾತ್ಕಾರವನ್ನು ಪಡೆದು ಅಜರಾಮರರಾದರು.

ಆದರೆ ಈಗ ಆ ಥರದ ಸಂಗೀತ ಶಿಕ್ಷಣ ಎಲ್ಲಿದೆ! ಗುರು ಶಿಷ್ಯರ ಆ ಬಾಂಧವ್ಯಗಳು ಎಲ್ಲಿವೆ! ಗುರುಗಳೊಂದಿಗೆ ಕಳೆಯುವ ಕೆಲವಾರು ಕ್ಷಣಗಳಲ್ಲಿ ಅಂಥಾ ಮಹತ್ತರ ಸಂಗೀತ ಭಂಡಾರದ ಅನುಭವ ಪಡೆಯಲಾಗುವುದೇ? ಹಲವಾರು ಆಕರ್ಷಣೆ, ಆಮಿಷಗಳ ಈ ಕಾಲದಲ್ಲಿ ಚಂಚಲ ಮನಸ್ಸಿನ ಶಿಷ್ಯರು ಅರೆಬೆರೆ ಸಂಗೀತ ಕಲಿತು ಮೇಲೇರಲಾಗದೆ ಜೀವನದಲ್ಲೂ ಸೋತು ತೊಳಲಾಡುತ್ತಿರುವವರೆಷ್ಟೋ. ಜನಪ್ರಿಯತೆಯೇ ಸಂಗೀತವೆಂಬ ಇತ್ತೀಚಿನ ಮಂತ್ರದಲ್ಲಿ ನಿಜವಾದ ಸಾಧನೆಗೆ ಕೂರಲಾಗದ ವಿದ್ಯಾರ್ಥಿಗಳು ಬರೀ ಪ್ರದರ್ಶನದ ವ್ಯಾಮೋಹದಲ್ಲಿ ಬಿದ್ದು ನಿಜವಾದ ಸಂಗೀತ ಸಾಧನೆಯ ಅರ್ಥವನ್ನೇ ಅರಿಯದಂಥವರಾಗಿದ್ದಾರೆ. ಕಂಡವರನ್ನೆಲ್ಲಾ ಗುರುಗಳೆನ್ನುವ ಓಲೈಕೆಯೂ ಕೂಡ ದೊಡ್ಡ ಗುರುದ್ರೋಹ. ಈ ಮಹಾಪಾಪದಲ್ಲಿ ಯಾವುದು ಸತ್ಯ, ಮಿಥ್ಯವೆನ್ನುವುದನ್ನೇ ಅರಿಯಲಾಗದವರಾಗುತ್ತಿದ್ದಾರೆ.

ಮುಖ್ಯವಾಗಿ ಈಗಿನ ಈ ರಿಯಾಲಿಟಿ ಷೋಗಳು ತಮಗೆ ವರವೇ ಅಥವಾ ಪ್ರಮಾದವೇ ಎಂಬುದನ್ನು ಅವರೇ ಅರಿಯಬೇಕಾಗಿದೆ. ಅದರಿಂದ ತಾವೆಷ್ಟು ಪ್ರಬುದ್ಧರಾದೆವೆಂದು ಅರಿತರೆ ರಿಯಾಲಿಟಿ ಷೋಗಳು ಕೂಡ ಅವರ ಜೀವನದ ಸಾಧನೆಗೆ ಸಹಕಾರಿಯಾಗುತ್ತವೆ. ಅದಲ್ಲದೆ ಅದರಿಂದ ಸಿಗುವ ತಾತ್ಕಾಲಿಕ ಜನಪ್ರಿಯತೆಯನ್ನೇ, ಹೊಗಳಿಕೆಯನ್ನೇ ಮಹತ್ತರವೆಂದು ಭಾವಿಸಿ ಭ್ರಮೆಯಲ್ಲಿ ತೇಲಾಡಿದರೆ ಅವರ ಸಾಧನೆಯ ಸದವಕಾಶವು ಕೈತಪ್ಪಿ ಶಾಶ್ವತ ಸಂಗೀತದಿಂದ ವಂಚಿತರಾಗುವರು. ಅದಕ್ಕೆ, ಈ ರಿಯಾಲಿಟಿ ಷೋನ ಎಷ್ಟೋ ಪ್ರಥಮರು ಹೊರಗಿನ ಸಂಗೀತದ ಪ್ರಪಂಚದಲ್ಲಿ ಮಧ್ಯಮರಾಗಿ ಪರಿಪೂರ್ಣತೆಯಿಲ್ಲದೆ ತೊಳಲಾಡುತ್ತಿದ್ದಾರೆ. ಮಕ್ಕಳಿಗಿಂತ ಅವರ ಅಭ್ಯುದಯ ಬಯಸುವ ಪೋಷಕರೆ ಈ ಜನಪ್ರಿಯತೆಯ ಆಮಿಷಕ್ಕೆ ಬಲಿಯಾಗಿ ಮಕ್ಕಳ ಭವಿಷ್ಯಕ್ಕೆ ಮಾರಕರಾಗುತ್ತಿದ್ದಾರೆ. ಇನ್ನಾದರೂ ನಮ್ಮ ಪೋಷಕರು ಎಚ್ಚೆತ್ತುಕೊಂಡು ತಮ್ಮ ಮಕ್ಕಳ ಭವಿಷ್ಯಕ್ಕೆ ಉತ್ತಮ ಹಾದಿಯನ್ನು ತೋರುವಂತಾಗಲಿ.

ರಿಯಾಲಿಟಿ ಶೋನ ಹಲವಾರು ಪ್ರತಿಭೆಗಳು ಶಾಸ್ತ್ರೀಯ ಸಂಗೀತದಲ್ಲೂ ಸಾಧನೆ ಮಾಡುತ್ತಿರುವ ಸಂಗತಿ ಸಂತೋಷ ನೀಡಿದೆ. ಇವರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವವರೂ ಇದ್ದಾರೆ. ಅವರಿಗೆ ಉತ್ತಮ ಶಾಸ್ತ್ರೀಯ ವೇದಿಕೆಗಳು ದೊರೆತು, ತಮ್ಮ ಸರಿದಾರಿಯನ್ನು ಕಂಡುಕೊಳ್ಳಲಿ. ಸಂಗೀತ ರಸಿಕರೂ ಹೊಸ ಪ್ರತಿಭೆಗಳನ್ನ ಮುಕ್ತ ಮನಸ್ಸಿನಿಂದ ಹರಸುವ ಹಿರಿತನ ತೋರಬೇಕು.

*ಲೇಖಕರು ಹಿರಿಯ ಸಂಗೀತ ನಿರ್ದೇಶಕರು; ಎಸ್.ಪಿ.ಬಾಲಸುಬ್ರಮಣ್ಯ ಅವರ ಎಲ್ಲ ಕಾರ್ಯಕ್ರಮಗಳ ನಿರ್ವಾಹಕರು, ‘ಎದೆ ತುಂಬಿ ಹಾಡಿದೆನುರಿಯಾಲಿಟಿ ಶೋ ಸ್ಪರ್ಧಾಳುಗಳ ಆಯ್ಕೆ ಸಮಿತಿಯ ಮುಖ್ಯಸ್ಥರು.

Leave a Reply

Your email address will not be published.