ಮಿಲೇನಿಯಂ ಮಕ್ಕಳನ್ನು ಬೆಳೆಸುವ ನೋವು-ನಲಿವು

ಮಕ್ಕಳನ್ನು ಬೆಳೆಸುವ ಬಗೆಗಿನ ಈ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ ಒಬ್ಬ ಮನೋವೈದ್ಯೆಯಾಗಿ, ಒಬ್ಬ ಶಿಕ್ಷಕಿಯಾಗಿ, ಮತ್ತು ಎರಡು ಮಕ್ಕಳ ತಾಯಿಯಾಗಿ ನನಗೆ ಹಲವು ಅಂಶಗಳು ಕಾಣುತ್ತವೆ. ಮಕ್ಕಳ ಫೋಷಣೆ-ಪಾಲನೆ-ಬೆಳೆಸುವಿಕೆ ಇವು ಯಾವ ಕಾಲದಲ್ಲಿಯೂ `ಸುಲಭ’ ಎಂದು ಪರಿಗಣಿಸಲ್ಪಟ್ಟಿರಲಿಲ್ಲ!

ಒಬ್ಬ ತಾಯಿ ಬಂದು ಕೇಳಿದರು, “ಡಾಕ್ಟ್ರೇ, ನನ್ನ ಮಕ್ಕಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದೆ. ಈಗ ದೊಡ್ಡವರಾದ ಮೇಲೆ ಅವರು ನಮ್ಮೊಡನೆ ನಡೆದುಕೊಳ್ಳುವ ರೀತಿಯನ್ನು ನೋಡಿದ್ರೆ ಒಮ್ಮೊಮ್ಮೆ ಅನ್ನಿಸುತ್ತೆ… ಮಕ್ಕಳು ಮಕ್ಕಳು ಅಂತ ನಾವು ಯಾಕೆ ಇಷ್ಟು ಕಷ್ಟಪಡ್ತೀವಿ? ನಮ್ಮ ಬದುಕಿಗೆ ಅವರಿಂದ ಮಾತ್ರ ಅರ್ಥ ಬರುತ್ತೆ ಅಂತ ಯಾಕೆ ಅಂದುಕೊಳ್ತೀವಿ?”

ಇನ್ನೂ ಆಗಷ್ಟೇ ಮದುವೆಯಾಗಿ ಒಂದು ವರ್ಷ ಕಳೆದಿದ್ದ ಯುವ ದಂಪತಿ ಎದುರು ಕುಳಿತಿದ್ದರು. ಅವರ ತಂದೆ-ತಾಯಿ ಇವರನ್ನು ಕರೆದುಕೊಂಡು ಬಂದಿದ್ದು ಏಕೆ? ಅವರು `ಮಕ್ಕಳು ಬೇಡ’ ಎಂದಿದ್ದಕ್ಕೆ! ಅವರ ವಾದ ಏನು? `ನಮಗೆ ಲೈಫ್ ಎಂಜಾಯ್ ಮಾಡಬೇಕು. ನಾವು ಇಬ್ಬರೂ ದುಡೀತೀವಿ. ಮಕ್ಕಳನ್ನು ಮಾಡಿಕೊಳ್ಳೋದು ನಮಗೆ ಒಂದು `ಡಿಸ್ಟರ್ಬೆನ್ಸ್’. ಅದರ ಮೇಲೆ ಆ ಮಕ್ಕಳಿಗೂ ನಾವು ಸಮಯ ಕೊಡಲು ಸಾಧ್ಯವಾಗದೆ ಇದ್ದರೆ ಕಷ್ಟವೇ ಅಲ್ವೇ! ನಾವು ದುಡೀತೀವಿ, ನಮ್ಮನ್ನು ಮುಂದೆ ಯಾರೂ ನೋಡ್ಕೋಬೇಕೂಂತ ಇಲ್ಲ. ನಮಗೆ ಮಕ್ಕಳು ಯಾಕೆ ಬೇಕು?’

ಇನ್ನೊಬ್ಬರು ತಂದೆ ಬೇಸರದಿಂದ ಬಂದು ಕೇಳಿದರು- “ಡಾಕ್ಟ್ರೇ ನನ್ನ ಮಗ ಮೊನ್ನೆ ಬಂದು ಮೊಬೈಲ್ ಕೊಡಿಸಿ ಅಂತ ಜಗಳ ಮಾಡಿದ. ನಾನೆಂದೆ `ಈಗಲೇ ಕೊಡೋಕ್ಕಾಗಲ್ಲ’. ಅದಕ್ಕೆ ಅವನು ಕೇಳಿದ `ನಮ್ಮನ್ನು ಯಾಕೆ ಹುಟ್ಟಿಸಿದ್ರಿ?’ ಮಕ್ಕಳು ಅಪ್ಪ-ಅಮ್ಮನ್ನ ಈ ತರಹ ಕೇಳ್ಬಹುದಾ ಡಾಕ್ಟ್ರೇ?”.

ಮಕ್ಕಳಿಲ್ಲದ ದಂಪತಿಗಳು ದುಃಖದಿಂದ ಅಲವತ್ತುಗೊಳ್ಳುವಾಗ ಸಾಮಾನ್ಯವಾಗಿ ಮನೋವೈದ್ಯರು ಅವರಿಗೆ ನೀಡುವ ಸಮಾಧಾನದ ಸಲಹೆಗಳಲ್ಲಿ ಒಂದು, “ಮಕ್ಕಳಿಲ್ಲವೆಂದು ಕೊರಗಬೇಡಿ. ಮಕ್ಕಳಿದ್ದವರಿಗೆ ನೂರಾರು ಚಿಂತೆ, ಮಕ್ಕಳಿಲ್ಲದ್ದಿವರಿಗೆ ಒಂದೇ ಚಿಂತೆ!”

`ಬೆಳೆಯ ಸಿರಿ ಮೊಳಕೆಯಲ್ಲಿ’, `ಮುದ್ದೂ ಬೇಕು, ಗುದ್ದೂ ಬೇಕು’ ಮುಂತಾದ ಗಾದೆಗಳು ಸಮಾಜ ಮಕ್ಕಳನ್ನು ಕುತೂಹಲ-ಕಾಳಜಿಗಳಿಂದ ಗಮನಿಸಿರುವ ಗುರುತುಗಳೇ.

ಮಿಲೆನಿಯಮ್‍ನಲ್ಲಿ ಮಕ್ಕಳನ್ನು ಬೆಳೆಸುವ ಬಗೆಗಿನ ಈ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ ಒಬ್ಬ ಮನೋವೈದ್ಯೆಯಾಗಿ, ಒಬ್ಬ ಶಿಕ್ಷಕಿಯಾಗಿ, ಮತ್ತು ಎರಡು ಮಕ್ಕಳ ತಾಯಿಯಾಗಿ ನನಗೆ ಹಲವು ಅಂಶಗಳು ಕಾಣುತ್ತವೆ. ಮಕ್ಕಳ ಪೂಷಣೆ-ಪಾಲನೆ-ಬೆಳೆಸುವಿಕೆ ಇವು ಯಾವ ಕಾಲದಲ್ಲಿಯೂ `ಸುಲಭ’ ಎಂದು ಪರಿಗಣಿಸಲ್ಪಟ್ಟಿರಲಿಲ್ಲ! ಇಲ್ಲದಿದ್ದರೆ It takes a village to raise a child (ಒಂದು ಮಗುವನ್ನು ಬೆಳೆಸಲು ಒಂದು ಹಳ್ಳಿಯೇ ಬೇಕು) ಎಂಬ ಗಾದೆ ಹುಟ್ಟಿಕೊಳ್ಳುತ್ತಲೇ ಇರಲಿಲ್ಲ. ಮಕ್ಕಳ ಬೆಳವಣಿಗೆಗೆ ಸಂಬಂಧಪಟ್ಟ `ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?’, `ಬೆಳೆಯ ಸಿರಿ ಮೊಳಕೆಯಲ್ಲಿ’, `ಮುದ್ದೂ ಬೇಕು, ಗುದ್ದೂ ಬೇಕು’ ಮುಂತಾದ ಗಾದೆಗಳು ಸಮಾಜ ಮಕ್ಕಳನ್ನು ಕುತೂಹಲ-ಕಾಳಜಿಗಳಿಂದ ಗಮನಿಸಿರುವ ಗುರುತುಗಳೇ. ಹಾಗಾಗಿ ಎಂದಿನಿಂದಲೂ ಸಮಾಜ `ಮಕ್ಕಳನ್ನು ಹೇಗೆ ಬೆಳೆಸಬೇಕು?’ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುತ್ತಲೇ ಇದೆ ಎನ್ನುವುದನ್ನು ಧಾರಾಳವಾಗಿ ಒಪ್ಪಬಹುದು.

ಬದಲಾವಣೆ ಎನ್ನುವುದು ಜಗದ ನಿಯಮವಷ್ಟೆ. ಹಾಗಾಗಿ ಇಂದಿನ ಕಾಲ ಬದಲಾಗಿದೆ ಎನ್ನುವುದು ಅಚ್ಚರಿ ಪಡಬೇಕಾದ ಸಂಗತಿ ಎಂದು ನನಗನ್ನಿಸುವುದಿಲ್ಲ. ಹಾಗೆಯೇ ಅದು ವಿಷಾದ ತರುವ ಸಂಗತಿಯೂ ಆಗಬಾರದು! “ನಮ್ಮ ಕಾಲದಲ್ಲಿ ಹಾಗಿತ್ತು, ಓದಲು ಅಷ್ಟು ಕಷ್ಟಪಡಬೇಕಿತ್ತು, ಎಷ್ಟೋ ದೂರ ನಡೆಯಬೇಕಿತ್ತು” ಎಂದು ನನ್ನ ಅಪ್ಪ ನನಗೆ ಹೇಳಿದ ಮಾತುಗಳನ್ನೇ ಸ್ವಲ್ಪ ಬದಲಾಯಿಸಿ ನಡೆಯುವುದರ ಬದಲು `ಸೈಕಲ್ ಹೊಡೆದು’ ಎಂದು ಹಾಕಿ, ನಾನೂ ನನ್ನ ಮಕ್ಕಳಿಗೆ ಹೇಳುತ್ತೇನೆ! ಒಟ್ಟಿನಲ್ಲಿ ಹೆಚ್ಚಿನ ಹಿರಿಯರ ಪ್ರಕಾರ `ಅವರ ಕಾಲದಲ್ಲಿ ಇದ್ದ ಕಷ್ಟಗಳ ನಡುವೆಯೂ ಅವರು ಓದಿದರು/ಓದಲಿಲ್ಲ. ಇಂದಿನ ಮಕ್ಕಳಿಗೆ ಎಲ್ಲಾ ಸೌಲಭ್ಯಗಳಿದ್ದೂ, ಅವರು ಬೇಕೆಂದೇ ಪ್ರಯತ್ನಿಸುತ್ತಿಲ್ಲ, ಒಳ್ಳೆಯ ಗುಣಗಳನ್ನು ರೂಢಿಸಿಕೊಳ್ಳುತ್ತಿಲ್ಲ!’.

ಜಗತ್ತಿನಾದ್ಯಂತ ವಂಶಾಭಿವೃದ್ಧಿಯ ಅನುಪಾತ- Fertility rate ಇಳಿಯುತ್ತಿದೆ. ಭಾರತದ ಪಟ್ಟಣಗಳಂತೂ ಅಮೆರಿಕ, ಆಸ್ಟ್ರೇಲಿಯಾಗಳ ಜೊತೆಗೆ ಸ್ಪರ್ಧಿಸುತ್ತಿವೆ. ವಯಸ್ಸಿಗೆ ಬಂದ ತಕ್ಷಣ ಮದುವೆ, ಮದುವೆಯಾದ ವರುಷದಲ್ಲಿ ಮಗು, ಒಂದು ಮಗುವಿನ ನಂತರ ಮತ್ತೊಂದು, ಹೀಗೆ ಮೊದಲು `ಇದು ಏಕೆ?’ ಎಂಬ ಪ್ರಶ್ನೆಯಿಲ್ಲದೆ ನಡೆಯುತ್ತಿದ್ದ, ನಾವು ಬದುಕಿಗೆ ಅನಿವಾರ್ಯ ಎಂದುಕೊಳ್ಳುತ್ತಿದ್ದ ಪ್ರಕ್ರಿಯೆಗಳು ಈಗ `ಅನಿವಾರ್ಯ’ದಿಂದ `ಆಯ್ಕೆ’ಯ ಪ್ರಶ್ನೆಯಾಗಿ ಬದಲಾಗಿವೆ.

ಉದ್ಯೋಗಾವಕಾಶಗಳು ಸೀಮಿತವಾಗಿದ್ದವು. ಮತ್ತೊಂದು ಊರಿಗೆ-ದೇಶಕ್ಕೆ ವಲಸೆ ಹೋಗುವುದು, ಅಲ್ಲಿಯೇ ನೆಲೆಸುವುದು ಕಡಿಮೆಯಾಗಿತ್ತು. ಹಾಗೊಮ್ಮೆ ಹೋದರೂ ಮಕ್ಕಳಲ್ಲಿ ಒಬ್ಬರಾದರೂ ತಂದೆ-ತಾಯಿಗಳ ಜೊತೆ ನೆಲೆ ನಿಲ್ಲುತ್ತಿದ್ದರು. ಹೀಗಾಗಿ `ಮಕ್ಕಳು ಏಕೆ ಬೇಕು?’ ಎಂಬ ಪ್ರಶ್ನೆಗೆ `ನಮಗೆ ವಯಸ್ಸಾದಾಗ ನಮ್ಮನ್ನು ನೋಡಿಕೊಳ್ಳಲು,

ಯುರೋಪಿಯನ್ ದೇಶಗಳಲ್ಲಿ ವಂಶಾಭಿವೃದ್ಧಿಯ ಅನುಪಾತ ವೇಗವಾಗಿ ಇಳಿಯುತ್ತಿದೆ. ಉದಾಹರಣೆಗೆ ಇಟಲಿಯಲ್ಲಿ ವಂಶಾಭಿವೃದ್ಧಿಯ ಅನುಪಾತ ಒಂದು ಮಹಿಳೆಗೆ 1.33 ಮಕ್ಕಳು ಅಂದರೆ 2050ರ ವೇಳೆಗೆ 14 ಮಿಲಿಯನ್ ಇಟಾಲಿಯನ್ನರು ಕಡಿಮೆ ಇರುತ್ತಾರೆ. ಫ್ರಾನ್ಸ್‍ನಲ್ಲಿ ಮದುವೆಯಾಗುವ ಅನುಪಾತವೇ ಹಿಂದಿನ ತಲೆಮಾರಿಗಿಂತ ಸುಮಾರು 30% ರಷ್ಟು ಇಳಿದುಬಿಟ್ಟಿದೆ. ಜಪಾನ್‍ನಲ್ಲಿ ದಾಖಲೆಯ ಶಿಶುಜನನದ ಇಳಿತ 1,037,101ರಷ್ಟು ದಾಖಲಾಗಿದೆ. ಈ ಉದಾಹರಣೆಗಳು ಜಗತ್ತಿನ ಎಲ್ಲಾ ದೇಶಗಳಲ್ಲಿಯೂ ಹೆಚ್ಚು ಕಡಿಮೆ ಇದೇ ರೀತಿ ಕಂಡುಬರುತ್ತವೆ ಎಂಬುದು ಗಮನಾರ್ಹ.

ಮಕ್ಕಳನ್ನು ಬೆಳೆಸುವಲ್ಲಿ ಗೊಂದಲಗಳು, ಕಷ್ಟಗಳು, ಬೆಳೆಸಿದ ಮೇಲೆ ಅವರು ಒಳ್ಳೆಯ ಜಿವನವನ್ನೇ ಮಾಡುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ. ಹಾಗಿದ್ದರೆ ನಮ್ಮ ಅಜ್ಜ, ಅಜ್ಜಿ, ಮುತ್ತಜ್ಜ, ಮುತ್ತಜ್ಜಿಯರಿಗೆ ಇವ್ಯಾವ ಪ್ರಶ್ನೆಗಳೂ ಕಾಡುತ್ತಿರಲಿಲ್ಲವೆ? ಅವರಿಗೆ ನಮ್ಮ ಇಂದಿನ ಸಮಾಜದ ಸಮಸ್ಯೆಗಳು ಇದ್ದಿರಲಿಲ್ಲ ಎಂಬುದು ಸುಸ್ಪಷ್ಟ. ಆದರೆ ಹಾಗೆಂದು ಆಗಲೂ ಮಕ್ಕಳನ್ನು ಬೆಳೆಸುವಲ್ಲಿ ಕಷ್ಟಗಳು, ಗೊಂದಲಗಳು ಇರಲಿಲ್ಲವೆಂದಲ್ಲ. ಆದರೆ ಉದ್ಯೋಗಾವಕಾಶಗಳು ಸೀಮಿತವಾಗಿದ್ದವು. ಮತ್ತೊಂದು ಊರಿಗೆ-ದೇಶಕ್ಕೆ ವಲಸೆ ಹೋಗುವುದು, ಅಲ್ಲಿಯೇ ನೆಲೆಸುವುದು ಕಡಿಮೆಯಾಗಿತ್ತು. ಹಾಗೊಮ್ಮೆ ಹೋದರೂ ಮಕ್ಕಳಲ್ಲಿ ಒಬ್ಬರಾದರೂ ತಂದೆ-ತಾಯಿಗಳ ಜೊತೆ ನೆಲೆ ನಿಲ್ಲುತ್ತಿದ್ದರು. ಹೀಗಾಗಿ `ಮಕ್ಕಳು ಏಕೆ ಬೇಕು?’ ಎಂಬ ಪ್ರಶ್ನೆಗೆ `ನಮಗೆ ವಯಸ್ಸಾದಾಗ ನಮ್ಮನ್ನು ನೋಡಿಕೊಳ್ಳಲು, ನಮ್ಮ ನಂತರ ನಮ್ಮ ಮನೆಯನ್ನು ಮುಂದುವರೆಸಲು’ ಎಂಬ ಉತ್ತರ ಸಹಜವಾಗಿ ಕೇಳಿದವರು ಒಪ್ಪುವಂತೆ ಬರುತ್ತಿತ್ತು. ಆದರೆ ಈಗ?!

ಸಮಯ ಬಹು ವೇಗವಾಗಿ ಸಾಗುತ್ತದೆ. ಸಮಯವನ್ನು ಹಿಡಿದು ನಿಲ್ಲಿಸಲು ಸಾಧ್ಯವಿಲ್ಲವಷ್ಟೆ. ದಂಪತಿಗಳು ಕೆಲಸವನ್ನೂ ಮಾಡಬೇಕು. ಸಂಸಾರವನ್ನೂ ಸಾಗಿಸಬೇಕು. ಕೆಲಸ-ಮನೆ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎನ್ನುವುದು ಕೇವಲ ಉದ್ಯೋಗಕ್ಕೆ ಹೋಗುವ ಮಹಿಳೆಯರಷ್ಟೇ ಅಲ್ಲ, ಪುರುಷರನ್ನೂ ಕಾಡುವ ಸಂಗತಿಯೇ. ಬೆಂಗಳೂರಿನಂತಹ ನಗರಗಳಲ್ಲಿ ಬೆಳಿಗ್ಗೆ 7ಕ್ಕೆ ಅಥವಾ ಅದಕ್ಕಿಂತ ಮೊದಲು ಮನೆ ಬಿಟ್ಟರೆ ಮತ್ತೆ ಮರಳುವುದು ರಾತ್ರಿಯೇ. ಮಕ್ಕಳಿಗೆ ಅಪ್ಪ-ಅಮ್ಮ `ವೀಕೆಂಡ್ ಅಪ್ಪ-ಅಮ್ಮ’ ಅಷ್ಟೇ. ಅಥವಾ ಅಪ್ಪ-ಅಮ್ಮ ಎಂದರೆ ಅವರು ಬರುವ-ಹೋಗುವ ಸಮಯದಲ್ಲಿ ಹಾಸಿಗೆಯಲ್ಲಿ ಮಲಗಿರುವ ಮಕ್ಕಳಿಗೆ ಅವರ `ಚಪ್ಪಲಿ’ ಶಬ್ದವಷ್ಟೇ!

ಮೊಬೈಲ್, ಮೊಬೈಲ್‍ನಂತ ತಂತ್ರ ಜ್ಞಾನಗಳಿಂದ ನಾವು ಹಿಂದೆ ಸಾಧ್ಯವಾಗದ ಅಥವಾ ನಿಧಾನವಾಗಿ ಸಾಧ್ಯವಾಗಬಹುದಾದ ಎಷ್ಟೋ ಕೆಲಸಗಳನ್ನು ಇಂದು ಮಾಡುತ್ತಿದ್ದೇವೆ ಎಂಬುದು ಎಲ್ಲರೂ ಒಪ್ಪುವ ಮಾತು.

ಮಕ್ಕಳನ್ನು ಬೆಳೆಸುವಾಗ ನಾವು ಮತ್ತೆ ಮತ್ತೆ ಮಾತಾಡುವುದು ಜೀವನ ಮೌಲ್ಯಗಳ ಬಗ್ಗೆ. ಮೌಲ್ಯಗಳು ‘ಸ್ಕ್ರೀನ್’ ಗಳಿಂದ ಹಾಳಾಗುತ್ತಿವೆ ಎಂಬುದು ಬಹುದೊಡ್ಡ ಕೂಗು. ಆದರೆ ಸ್ವಲ್ಪ ಯೋಚಿಸಿ ನೋಡಿ. ಈ ಲೇಖನವನ್ನೇ ನೀವು ಮೊಬೈಲ್‍ನಲ್ಲಿಯೇ ಓದುತ್ತಿರಬಹುದು! ಅಥವಾ ಮಧ್ಯೆ ಮಧ್ಯೆ ನಿಮ್ಮ ಮೊಬೈಲ್ `ಚೆಕ್’ ಮಾಡುತ್ತಾ ಪೇಪರ್ ಓದುತ್ತಿರಬಹುದು. ಅಥವಾ ಕಂಪ್ಯೂಟರ್‍ನಲ್ಲಿ ಪೇಪರ್ ಓದುತ್ತಿರಬಹುದು. ನೀವು ಹಾಸಿಗೆಯಿಂದ ಎದ್ದ ತಕ್ಷಣ ಮೊದಲು ನೋಡುವುದು ಏನನ್ನು? ಪಕ್ಕದಲ್ಲಿ ಛಾರ್ಜಿಗೆ ಹಾಕಿರುವ ಮೊಬೈಲ್ ಪೂನ್‍ನ್ನು! ಆ ಮೇಲೆ ಮತ್ತೆ ದಿನವಿಡೀ ಕನಿಷ್ಟ 50 ಸಲ ನಿಮ್ಮ ಮೊಬೈಲನ್ನು ಉಪಯೋಗಿಸುತ್ತೀರಿ. ಅಂದರೆ ನಮಗೆ ದೊಡ್ಡವರಿಗೆ `ಮೊಬೈಲ್-ಕಂಪ್ಯೂಟರ್’ ಈಗ `ಲಕ್ಷುರಿ’ ಯ ಬದಲು `ಅವಶ್ಯಕತೆ’! ಮೊಬೈಲನ್ನು ಪಕ್ಕಕ್ಕಿಡಿ ಎಂದರೆ ಹಾಗೆ ಪಕ್ಕಕ್ಕಿಡುವುದರಿಂದ ಆಗುವ ತೊಂದರೆಗಳ ದೊಡ್ಡ ಪಟ್ಟಿಯನ್ನೇ ನಾವು ಎದುರಿಗೆ ಇಡುತ್ತೇವೆ. ಮೊಬೈಲ್, ಮೊಬೈಲ್‍ನಂತ ತಂತ್ರ ಜ್ಞಾನಗಳಿಂದ ನಾವು ಹಿಂದೆ ಸಾಧ್ಯವಾಗದ ಅಥವಾ ನಿಧಾನವಾಗಿ ಸಾಧ್ಯವಾಗಬಹುದಾದ ಎಷ್ಟೋ ಕೆಲಸಗಳನ್ನು ಇಂದು ಮಾಡುತ್ತಿದ್ದೇವೆ ಎಂಬುದು ಎಲ್ಲರೂ ಒಪ್ಪುವ ಮಾತು.

ಹೀಗಿದ್ದೂ ಮಕ್ಕಳ `ಸ್ಕ್ರೀನ್ ಟೈಂ’ಗೆ ಬಂದಾಗ ಮಾತ್ರ ನಮ್ಮನ್ನು ಅತ್ಯಂತ ಎಚ್ಚರಿಕೆ, ಅಪಾರ ಕಾಳಜಿ ಕಾಡತೊಡಗುತ್ತದೆ. ಕಂಪ್ಯೂಟರ್-ಮೊಬೈಲ್‍ಗಳಿಂದ ಮಕ್ಕಳು ಕೆಟ್ಟೇ ಹೋಗುತ್ತಾರೆ ಎಂದೇ ದೃಢವಾಗಿ ನಂಬುತ್ತೇವೆ. ಅವರ ಸಾಮಾಜಿಕ ಬೆಳವಣಿಗೆ ನಿಂತೇ ಹೋಗುತ್ತದೆ ಎಂದು ಹೆದರುತ್ತೇವೆ. ಅವರು ಆಟ ಆಡುವುದಿಲ್ಲ, ಅವರ ಬಾಲ್ಯ ಹಾಳಾಗುತ್ತದೆ ಎಂದು ಭಾವಿಸುತ್ತೇವೆ. ಅಪ್ಪ, ಅಮ್ಮ, ಅಜ್ಜ, ಅಜ್ಜಿಯರಿಂದ ಅವರು ದೂರವಾಗುವುದೇ ಮೊಬೈಲ್ ಇತ್ಯಾದಿಗಳಿಂದ ಎಂದುಬಿಡುತ್ತೇವೆ!

ಇಂಥ ಗೊಂದಲಗಳನ್ನು ನಮ್ಮ ಹಿಂದಿನ ತಲೆಮಾರು ಅಂದರೆ ನಮ್ಮ ಅಪ್ಪ ಅಮ್ಮಂದಿರೂ ಅನುಭವಿಸಿದ್ದಾರೆ. ಟಿ.ವಿ. ಎಂಬ ಪೆಟ್ಟಿಗೆ ಮಕ್ಕಳ ಬಾಲ್ಯಕ್ಕೆ ತರಬಹುದಾದ ಅಪಾಯಗಳ ಬಗೆಗೆ ಎಷ್ಟು ಚರ್ಚೆಗಳಾಗಿದ್ದವು ಎಂಬುದಕ್ಕೆ ಲೆಕ್ಕವೇ ಇಲ್ಲ. ಆದರೂ ಕ್ರಮೇಣ ನಾವು ಬೆಳೆಯುತ್ತ `ಟಿ.ವಿ’ ಯನ್ನು ಒಂದು ವಿದ್ಯಾಭ್ಯಾಸದ ಸಾಧನವಾಗಿ ಕಂಡುಕೊಳ್ಳಲು ಸಾಧ್ಯವಾಯಿತು ಎಂದು ನಾವು ಒಪ್ಪಬೇಕು.

ಅಚ್ಚರಿಯೆಂದರೆ ಕಂಪ್ಯೂಟರ್ `ಆಫ್’ ಮಾಡಿದ ಮೇಲೂ ಮಕ್ಕಳ ಹಾಡು-ಕುಣಿತ ಬಾವಲಿಯ ಬಗ್ಗೆ ಮುಂದುವರಿದೇ ಇತ್ತು! ಅಷ್ಟೇ ಅಲ್ಲ ಮಕ್ಕಳನ್ನು ಮಾತನಾಡಿಸಿದಾಗ ಅವರಲ್ಲಿ ಹಲವರು ಹಕ್ಕಿಗಿಂತ ಬಾವಲಿ ಹೇಗೆ ಭಿನ್ನವಾಗಿ ಹಾರಾಡುತ್ತದೆ, ಬಾವಲಿ ಹೇಗೆ ನೇತಾಡುತ್ತದೆ ಇವುಗಳ ಬಗ್ಗೆ ಸುಲಭವಾಗಿ ಮಾತನಾಡತೊಡಗಿದ್ದರು. ಅಂದರೆ ತಂತ್ರಜ್ಞಾನ ಇಲ್ಲಿ ಮಕ್ಕಳಲ್ಲಿ ’embodied learning’ ಅನ್ನು ಪ್ರಚೋದಿಸಿತ್ತು.

ಆದರೆ ಇಂದು `ಪೆಟ್ಟಿಗೆ’ ಒಂದೇ ಅಲ್ಲ! ಮಕ್ಕಳ ಸುತ್ತ ಹಲವು ಚಿಕ್ಕ-ಪುಟ್ಟ ಪೆಟ್ಟಿಗೆಗಳು. ಒಬ್ಬ ತಾಯಿಯಾಗಿ ನನಗೂ ಅಪ್ಪ-ಅಮ್ಮಂದಿರ ಆತಂಕಗಳ ಅರಿವಿದೆ. ಆದರೆ ಈ ಚಿಕ್ಕ-ಪುಟ್ಟ ಪೆಟ್ಟಿಗೆಗಳನ್ನು ಮಕ್ಕಳಲ್ಲಿ ಕಲಿಕೆಯ ಸಾಧನಗಳಾಗಿ, ಅವರನ್ನು ಬೆಳೆಸುವ ಸಾಧನಗಳಾಗಿ ಹೇಗೆ ಮಾರ್ಪಡಿಸಬಹುದು ಎಂಬ ಬಗ್ಗೆ ಕುತೂಹಲವೂ ನನ್ನಲ್ಲಿದೆ.

ಅಪ್ಪ-ಅಮ್ಮಂದಿರ `ಸ್ಕ್ರೀನ್’ ಆತಂಕಗಳಲ್ಲಿ ಮೊದಲನೆಯದು, `ಈ ಸಾಧನಗಳು ಮಕ್ಕಳನ್ನು ಕುಳಿತೇ ಇರುವಂತೆ, ದೈಹಿಕ ಚಟುವಟಿಕೆಯೇ ಇರದಂತೆ ಮಾಡಿಬಿಡುತ್ತವೆ’ ಎಂಬುದು. ಇದರ ಬಗ್ಗೆ ಅಧ್ಯಯನಗಳೂ ನಡೆದಿವೆ. ಅಧ್ಯಯನವೊಂದರಲ್ಲಿ ಮಕ್ಕಳಿಗೆ ಬಾವಲಿಯ ರೀತಿ ರೆಕ್ಕೆ ತೊಡಿಸಿ ಓಡಾಡಿಸಿ ರೆಕಾರ್ಡ್ ಮಾಡಲಾಯಿತು. ಅದನ್ನು ಅವರಿಗೆ ತೋರಿಸಲಾಯಿತು. ಸಹಜವಾಗಿ ತಮ್ಮನ್ನು ತಾವು ತೆರೆಯ ಮೇಲೆ ನೋಡಿ ಮಕ್ಕಳು ಸಂತಸಪಟ್ಟರು. ಅಚ್ಚರಿಯೆಂದರೆ ಕಂಪ್ಯೂಟರ್ `ಆಫ್’ ಮಾಡಿದ ಮೇಲೂ ಮಕ್ಕಳ ಹಾಡು-ಕುಣಿತ ಬಾವಲಿಯ ಬಗ್ಗೆ ಮುಂದುವರಿದೇ ಇತ್ತು! ಅಷ್ಟೇ ಅಲ್ಲ ಮಕ್ಕಳನ್ನು ಮಾತನಾಡಿಸಿದಾಗ ಅವರಲ್ಲಿ ಹಲವರು ಹಕ್ಕಿಗಿಂತ ಬಾವಲಿ ಹೇಗೆ ಭಿನ್ನವಾಗಿ ಹಾರಾಡುತ್ತದೆ, ಬಾವಲಿ ಹೇಗೆ ನೇತಾಡುತ್ತದೆ ಇವುಗಳ ಬಗ್ಗೆ ಸುಲಭವಾಗಿ ಮಾತನಾಡತೊಡಗಿದ್ದರು. ಅಂದರೆ ತಂತ್ರಜ್ಞಾನ ಇಲ್ಲಿ ಮಕ್ಕಳಲ್ಲಿ ’embodied learning’ ಅನ್ನು ಪ್ರಚೋದಿಸಿತ್ತು.

ಎರಡನೆಯ ಆತಂಕ, `ತೆರೆಯ ಮೇಲೆ ಆಡುವುದು ಮಕ್ಕಳನ್ನು ಕಲಿಕೆಯಿಂದ ಹೊರಗೆಳೆಯುತ್ತದೆ, ಸಮಯ ವ್ಯರ್ಥ ಮಾಡುತ್ತದೆ, ಅವರು ಓದಿನಲ್ಲಿ ಹಿಂದೆ ಬೀಳುವಂತೆ ಮಾಡುತ್ತದೆ’. ವೀಡಿಯೋ ಗೇಮ್ ರೂಪಿಸುವವರು ಆಟಗಾರರ (ಮಕ್ಕಳ) ಕೌಶಲದ ಬಗೆಗೆ ಹಿಂದಿನ ಮಾಹಿತಿಯಿಂದ ಬಹಳಷ್ಟನ್ನು ಗಮನಿಸುತ್ತಾರೆ. ಆಟಗಾರ ಯಾವಾಗ ನಿಲ್ಲಿಸಿದ, ಸರಿ ಮಾಡುವ ಮೊದಲು ಎಷ್ಟು ಬಾರಿ, ಎಲ್ಲಿ ತಪ್ಪುಗಳನ್ನು ಮಾಡಿದ? ಇತ್ಯಾದಿ. ಅಧ್ಯಯನವೊಂದು ಈ ಮಾಹಿತಿಯಿಂದ ಮಕ್ಕಳು ಗಣಿತದಲ್ಲಿ ಎಷ್ಟು ಗಳಿಸುತ್ತಾರೆ ಎಂಬುದನ್ನು ಊಹಿಸಲು ನೋಡಿತು. ಈ ವೀಡಿಯೋ ಗೇಮ್ ಗಣಿತದ ಅಂಕಗಳನ್ನು ಕರಾರುವಕ್ಕಾಗಿಯೇ ಗುರುತಿಸಿತು. ಅಂದರೆ ಶಾಲಾ ತರಗತಿಗಳಲ್ಲಿ ಗಣಿತದ ಪರೀಕ್ಷೆಯ ಬದಲು ವೀಡಿಯೋ ಗೇಮ್ ನಿಂದಲೇ ಪರೀಕ್ಷೆ ಮಾಡುವುದೂ ಸಾಧ್ಯ ಎಂಬಂತೆ! ತರಗತಿಯಲ್ಲಿ ಪರೀಕ್ಷೆಯ ಸಮಯವೂ ಉಳಿತಾಯವಾದಂತೆ, ಪರೀಕ್ಷೆಯ ಆತಂಕವೂ ಕಡಿಮೆಯಾದಂತೆ!

ಆತನ ಮುಖ ಅರಳುತ್ತದೆ, ಆತ ವಿವರಿಸುತ್ತಾ -ನೀವು ಕೇಳುತ್ತಾ ಇಬ್ಬರೂ ಊಟ ಮುಗಿಸುತ್ತೀರಿ!

ಮೂರನೆಯ ಆತಂಕ, `ನಮ್ಮನ್ನು ನಮ್ಮ ಮಕ್ಕಳಿಂದ ಬೇರ್ಪಡಿಸುವ ಕೆಲಸ ಈ ಸಾಧನಗಳದ್ದು’ ಎಂಬುದು. ಒಂದು ಕ್ಷಣ ಊಹಿಸಿಕೊಳ್ಳಿ. ಊಟಕ್ಕೆ ಸಿದ್ಧ ಮಾಡಲು ನಿಮಗೆ ಅರ್ಧ ಗಂಟೆ ಸಮಯ ಬೇಕು. ಅದಕ್ಕಾಗಿ ನೀವು 3 ವರ್ಷದ ಮಗ ತೊಂದರೆ ಮಾಡದಂತೆ ಆತನಿಗೆ ನಿಮ್ಮ `ಟ್ಯಾಬ್ಲೆಟ್’ ಕೊಟ್ಟು ಆಡಲು ಹೇಳುತ್ತೀರಿ. ಹಾಗೆ ಮಾಡಿದ್ದಕ್ಕೆ ನಿಮಗೆ ಮನಸ್ಸಿನೊಳಗೆ ತುಂಬಾ `ಗಿಲ್ಟ್’ ಕಾಡುತ್ತದೆ. ಈಗ ಕಲ್ಪಿಸಿಕೊಳ್ಳಿ. ಊಟಕ್ಕೆ ಸಿದ್ಧ ಮಾಡಿ ಆದ ಮೇಲೆ ಮಗನನ್ನು ಕರೆದು ಆತ ಆಡಿದ ಆಟದ ಬಗ್ಗೆ, ನೋಡಿದ ಕಾರ್ಟೂನ್ ಬಗ್ಗೆ ವಿವರಿಸಲು ಕೇಳುತ್ತೀರಿ. ಆತನ ಮುಖ ಅರಳುತ್ತದೆ, ಆತ ವಿವರಿಸುತ್ತಾ -ನೀವು ಕೇಳುತ್ತಾ ಇಬ್ಬರೂ ಊಟ ಮುಗಿಸುತ್ತೀರಿ!

ಟೆಕ್ಸಾಸ್‍ನ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ ಪ್ರಕಾರ ಮೊಬೈಲ್, ಟಿ.ವಿ., ಕಂಪ್ಯೂಟರ್ ಶೋಗಳು ಮಕ್ಕಳಲ್ಲಿ ಭಾವನಾತ್ಮಕ ಬೆಳವಣಿಗೆಯನ್ನು ಆರೋಗ್ಯಕರವಾಗಿ ಹೆಚ್ಚಿಸಬಲ್ಲವು. ಆದರೆ ಅದು ಸಾಧ್ಯ ಯಾವಾಗ? ಅಪ್ಪ-ಅಮ್ಮ ಅವುಗಳ ಬಗ್ಗೆ ಮಕ್ಕಳ ಬಳಿ ಮಾತನಾಡಿದಾಗ! ಅಂದರೆ ಅತ್ಯುತ್ತಮ ಬೆಳವಣಿಗೆಗೆ ಬರೀ ಮಾತನಾಡುವುದಾಗಲೀ ಅಥವಾ ಬರೀ ನೋಡುವುದಾಗಲೀ ಸಾಲದು. ಎರಡೂ ಜೊತೆಯಲ್ಲಿದ್ದಾಗ ಅದು ಸುಲಭ ಸಾಧ್ಯ. ಈ ಅಧ್ಯಯನದ ಬಗ್ಗೆ ನೋಡುವಾಗ ನಾನು ಯೋಚಿಸಿದ್ದು `ನಾವು ತಂದೆ-ತಾಯಿಗಳು ನಮ್ಮ ಪುಟ್ಟ ಮಕ್ಕಳ ಹತ್ತಿರ (ಅಂದರೆ 3 ವರ್ಷದೊಳಗಿನ ಮಕ್ಕಳ) ಎಷ್ಟು ಕಡಿಮೆ ಮಾತನಾಡುತ್ತೇವೆ!’ ಎಂಬುದರ ಬಗ್ಗೆ. ಅವರಿಗೆ ಊಟ ಮಾಡಿಸುವ, ಸ್ನಾನ ಮಾಡಿಸುವ ನಮ್ಮ ಜವಾಬ್ದಾರಿ ಬಿಟ್ಟರೆ ಟಿ.ವಿ. ಹಾಕಿ, ಕಂಪ್ಯೂಟರ್ ಹಾಕಿ, ಮೊಬೈಲ್ ಕೈಗಿಟ್ಟರೆ ನಮ್ಮ ತಲೆನೋವು ಮಾಯ ಎಂಬುದು ನಮ್ಮ ಭಾವನೆ ಅಲ್ಲವೇ? ಬದಲು ಮಕ್ಕಳ ಹತ್ತಿರ ಅವರು ಕಂಪ್ಯೂಟರ್‍ನಲ್ಲಿ ಆಡಿದ ಆಟ/ನೋಡಿದ ಕಾರ್ಟೂನ್ ಬಗ್ಗೆ ಒಮ್ಮೆ ಮಾತನಾಡಲು ಪ್ರಯತ್ನಿಸಿ!

ಮಕ್ಕಳು ದೂರದೇಶದಲ್ಲಿದ್ದು, ಅಪ್ಪ ಅಮ್ಮ ಮುದುಕರಾಗಿ ಒದ್ದಾಡುತ್ತಿದ್ದರೂ, ಮಕ್ಕಳನ್ನು ಇತರರು ಆ ಬಗ್ಗೆ ಬೈದರೆ ಅಪ್ಪ-ಅಮ್ಮನಿಗೆ ಇಷ್ಟವಾಗುವುದಿಲ್ಲ! ಕುಡಿಯುವ, ಹೊಡೆಯುವ ಮಕ್ಕಳನ್ನೂ ಅಪ್ಪ-ಅಮ್ಮ ಎಷ್ಟನೆಯ ಸಾರಿಗೋ ಕರೆದುಕೊಂಡು ಬಂದು `ಚಿಕಿತ್ಸೆ ಕೊಟ್ಟು ಸರಿ ಮಾಡಿ’ ಎನ್ನುತ್ತಾರೆಯೇ ಹೊರತು, ಬಿಟ್ಟು ಸುಮ್ಮನಾಗುವುದಿಲ್ಲ! ಇದು ಏಕೆ?

ಹಾಗಿದ್ದರೆ ಡಿಜಿಟಲ್ ಮೀಡಿಯಾ ಮಕ್ಕಳಿಗೆ ತುಂಬಾ ಒಳ್ಳೆಯದೇ? ಉತ್ತರ ಹೌದು, ಅಲ್ಲ ಎರಡೂ. ಸಮತೋಲನದಿಂದ ಅದನ್ನು ಉಪಯೋಗಿಸುವುದನ್ನು ದೊಡ್ಡವರು ತಾವೂ ಕಲಿತು ಮಕ್ಕಳಿಗೂ ಕಲಿಸಬೇಕು. ಡಿಜಿಟಲ್ ಮೀಡಿಯಾ ಅಂದರೆ ಫೇಸ್‍ಬುಕ್-ವಾಟ್ಸ್ ಆ್ಯಪ್‍ಗಳಷ್ಟೇ ಅಲ್ಲ ಎನ್ನುವುದನ್ನು ದೊಡ್ಡವರು ಮೊದಲು ತಿಳಿಯಬೇಕಿದೆ. ಮಕ್ಕಳು ನಾವಿರುವ ಇವತ್ತಿನ ಕಾಲದಲ್ಲಿಯೇ, ಇಂದಿನ ಜಗತ್ತಿನಲ್ಲಿಯೇ ಜೀವಿಸುತ್ತಿದ್ದಾರೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಇದು ಅಪ್ಪ-ಅಮ್ಮ ತಮ್ಮ ಮೊಬೈಲನ್ನು 50 ಬಾರಿ `ಚೆಕ್’ ಮಾಡುವ ಜಗತ್ತು! ಸ್ಕ್ರೀನ್‍ಗಳು ಇಂದಿನ ಮಕ್ಕಳ ಬದುಕಿನ ಒಂದು ಭಾಗ ಎಂಬ ಸತ್ಯವನ್ನು ನಿರಾಕರಿಸುವುದು, ಭಯ ಪಡುವುದು ಉಪಯುಕ್ತವಲ್ಲ. ಬದಲಾಗಿ ಈ ಪರದೆಗಳ ಬಗೆಗಿನ ನಮ್ಮ ನಿರೀಕ್ಷೆಗಳನ್ನು ಏರಿಸಬೇಕಾಗಿದೆ. ಅವುಗಳ ಬಗ್ಗೆ ನಮ್ಮ ಮಕ್ಕಳ ಬಳಿ ಮಾತನಾಡುತ್ತಾ ಈ `ಪರದೆ’ಗಳ ಶಕ್ತಿ-ಸಾಮಥ್ರ್ಯಗಳನ್ನು `ವಾಸ್ತವ’ ಎನಿಸುವಂತೆ ಮಾಡಬೇಕಾಗಿದೆ.

ಈ ಹೊತ್ತಿನ ಪೋಷಕರ ಗೊಂದಲದಲ್ಲಿ, ಮಕ್ಕಳು ಏಕೆ ಬೇಕು ಎಂಬ ಬಗ್ಗೆ ನಮ್ಮನ್ನು ನಾವು ಕೇಳಿಕೊಳ್ಳಬೇಕು. ವಿಚ್ಛೇದನ ಹೊಂದಲು ಸಿದ್ಧರಾಗಿ ನಿಂತಿರುವ ದಂಪತಿಗಳೂ ಮಕ್ಕಳಿಗಾಗಿ ಕೋರ್ಟಿನಲ್ಲಿ ಹೊಡೆದಾಡುತ್ತಾರೆ. ಕಾಯಿಲೆಯಾಗಿರುವ ಮಕ್ಕಳನ್ನು ಕರೆತರುವ ಅಪ್ಪ-ಅಮ್ಮ `ನಮ್ಮ ಒಬ್ಬನೇ ಮಗ/ಮಗಳು, ಹೇಗಾದರೂ ಬದುಕಿಸಿಕೊಡಿ’ ಎಂದು ಗೋಗರೆಯುತ್ತಾರೆ. ವಿಚ್ಛೇದನ ಮಾಡಿಕೊಂಡ ದಂಪತಿಗಳಿಗೆ `ನಿಮ್ಮ ವೈವಾಹಿಕ ಜೀವನದಲ್ಲಿ ನಿಮಗಿಷ್ಟವಾದ ಅಂಶ ಯಾವುದು’ ಎಂದು ಕೇಳಿದರೆ ಶೇಕಡ 80ರಷ್ಟು ಜನ `ಮಕ್ಕಳು’ ಎಂದೇ ಉತ್ತರಿಸುತ್ತಾರೆ. ಮಕ್ಕಳು ದೂರದೇಶದಲ್ಲಿದ್ದು, ಅಪ್ಪ ಅಮ್ಮ ಮುದುಕರಾಗಿ ಒದ್ದಾಡುತ್ತಿದ್ದರೂ, ಮಕ್ಕಳನ್ನು ಇತರರು ಆ ಬಗ್ಗೆ ಬೈದರೆ ಅಪ್ಪ-ಅಮ್ಮನಿಗೆ ಇಷ್ಟವಾಗುವುದಿಲ್ಲ! ಕುಡಿಯುವ, ಹೊಡೆಯುವ ಮಕ್ಕಳನ್ನೂ ಅಪ್ಪ-ಅಮ್ಮ ಎಷ್ಟನೆಯ ಸಾರಿಗೋ ಕರೆದುಕೊಂಡು ಬಂದು `ಚಿಕಿತ್ಸೆ ಕೊಟ್ಟು ಸರಿ ಮಾಡಿ’ ಎನ್ನುತ್ತಾರೆಯೇ ಹೊರತು, ಬಿಟ್ಟು ಸುಮ್ಮನಾಗುವುದಿಲ್ಲ! ಇದು ಏಕೆ?

ಒಂದು ರೀತಿಯಲ್ಲಿ ಲೈಂಗಿಕತೆಯ ಮೂಲಕ ದೈಹಿಕ ಅಗತ್ಯ ಎನಿಸಿದರೆ, ಇನ್ನೊಂದು ರೀತಿಯಲ್ಲಿ ನಮ್ಮ ನಂತರ ನಮ್ಮದೇ ಆದ ಒಂದು ಅಂಶವನ್ನು ಭೂಮಿಯ ಮೇಲೆ ಉಳಿಸುವ ಒಂದು ಮಾನಸಿಕ ಅಗತ್ಯವೂ ಹೌದು.

ಜೀವವಿರುವ ವಸ್ತುಗಳು ಎಂದು ಗುರುತಿಸುವುದು ಹೇಗೆ ಎಂಬ ಪ್ರೈಮರಿ ಶಾಲೆಯ ಪಾಠ ನೆನಪಿಸಿಕೊಳ್ಳಿ. ಜೀವವಿರುವುದಕ್ಕೆ ವಂಶಾಭಿವೃದ್ಧಿ ಮಾಡುವುದೂ ಒಂದು ಮುಖ್ಯ ಅಂಶ. ತನ್ನಂತೆಯೇ ಇರುವ ಇನ್ನೊಂದು ಜೀವವನ್ನು ಭೂಮಿಗೆ ತರುವುದೂ, ತನ್ನ ನಂತರ ಅದರ ಮೂಲಕ ಸಂತತಿಯನ್ನು ಮುಂದುವರಿಸುವುದು ಇವು ಜೀವವಿರುವ ಜೀವಿಗಳಲ್ಲಿ ಕಂಡು ಬರುವ ಒಂದು ಮೂಲ ಪ್ರವೃತ್ತಿ. ಇದು ಪ್ರಕೃತಿ ಸಹಜವಾದದ್ದು, ಆದರೆ ಮಾನವನ ಮಿದುಳು ವಿಕಾಸಗೊಂಡಂತೆ ಈ `ಆದಿಮ’ ಎನ್ನಬಹುದಾದ ಪ್ರವೃತ್ತಿಗಳೆಲ್ಲವೂ ಮಾರ್ಪಾಡುಗೊಂಡವಷ್ಟೆ. ಇದು ಒಂದು ರೀತಿಯಲ್ಲಿ ಲೈಂಗಿಕತೆಯ ಮೂಲಕ ದೈಹಿಕ ಅಗತ್ಯ ಎನಿಸಿದರೆ, ಇನ್ನೊಂದು ರೀತಿಯಲ್ಲಿ ನಮ್ಮ ನಂತರ ನಮ್ಮದೇ ಆದ ಒಂದು ಅಂಶವನ್ನು ಭೂಮಿಯ ಮೇಲೆ ಉಳಿಸುವ ಒಂದು ಮಾನಸಿಕ ಅಗತ್ಯವೂ ಹೌದು.

ಮಕ್ಕಳು ಬೇಕು ಎನ್ನುವುದಕ್ಕೆ ಸಾಮಾನ್ಯವಾಗಿ ಜನರು ನೀಡುವ ಕಾರಣಗಳೇನು? ನಮಗೆ ವಯಸ್ಸಾದಾಗ ಮಕ್ಕಳು ನಮ್ಮನ್ನು ನೋಡಿಕೊಳ್ಳಲು ಬೇಕು ಎನ್ನುವುದು ಈ ಕಾರಣಗಳಲ್ಲಿ ಮೊದಲನೆಯದು. ನಮ್ಮ ವಂಶ ಉಳಿಯಬೇಕು, ಬೆಳೆಯಬೇಕು, ನಮ್ಮ ಹೆಸರು ಉಳಿಯಬೇಕು, ಆಸ್ತಿಯನ್ನು ಬೇರೆಯವರು ಕಬಳಿಸಬಾರದು, ನಾವು ಮಾಡಿದ್ದನ್ನು ಅನುಭವಿಸಲು ಮಕ್ಕಳು ಬೇಕು ಹೀಗೆ ಉತ್ತರಗಳ ಪಟ್ಟಿ ಮುಂದುವರಿಯುತ್ತದೆ.

ಈ ಎಲ್ಲ ಉತ್ತರಗಳೂ ತಪ್ಪೇನಲ್ಲ, ಆದರೆ ಇವೆಲ್ಲವೂ ನಮ್ಮಫೋಷಕತ್ವವನ್ನು ಒತ್ತಡಮಯಗೊಳಿಸುತ್ತವೆ. ಮಕ್ಕಳ ಮೇಲೆ ನಮ್ಮ ನಿರೀಕ್ಷೆಗಳನ್ನು ಹೇರುವಂತೆ ಮಾಡುತ್ತವೆ. ಪೂಷಕರಾಗಿರುವ ಯಾವುದಾದರೂ ಒಂದು ಹಂತದಲ್ಲಿ ನಮ್ಮನ್ನು ನಾವು `ಮಕ್ಕಳೇಕೆ ಬೇಕು?’ ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತವೆ. ಮಕ್ಕಳನ್ನು ಒಂದು `ಬಂಡವಾಳ ಹೂಡಿಕೆ’ (investment) ರೀತಿಯಿಂದ ನೋಡುವ ಪ್ರವೃತ್ತಿಯಿಂದ ಮಕ್ಕಳ ಬಾಲ್ಯ -ಅವರಿಂದ ಹಿರಿಯರು ಹೊಂದಬಹುದಾದ ಎಷ್ಟೋ ಸಂತೋಷಗಳು ಇಲ್ಲವಾಗುತ್ತವೆ.

ಹೀಗೆಂದಾಕ್ಷಣ ಸೌಲಭ್ಯಗಳ ಉದ್ದ ಪಟ್ಟಿಯನ್ನೇ (ಆ ಶಾಲೆಗೆ ಹಾಕಿದ್ದೇವೆ, ಸೈಕಲ್, ಬೈಕ್, ಆಟದ ಸಾಮಾನು, ಮೊಬೈಲ್, ಒಳ್ಳೆಯ ಮನೆ ಇತ್ಯಾದಿಗಳು) ಅಪ್ಪ ಅಮ್ಮ ನಮ್ಮ ಮುಂದಿಡುತ್ತಾರೆ. ಇವ್ಯಾವುದೂ `ಪ್ರೀತಿ’ಯ ಗುರುತುಗಳಲ್ಲ.

ಮಕ್ಕಳನ್ನು ನಾವು ಹೂಡಿದ ಬಂಡವಾಳ ಎಂದು ನೋಡದೆ, ಅವರು ನಮಗೆ ಮುಂದೆ ಏನು ಮಾಡಬಹುದು ಎಂಬುದನ್ನು ಯೋಚಿಸದೆ, ಅವರಿಗಾಗಿ ನಾವೇನು ಮಾಡುತ್ತೇವೆ ಎಂಬುದನ್ನು ಯೋಚಿಸುವುದು ಅಗತ್ಯ. ಹೀಗೆಂದಾಕ್ಷಣ ಸೌಲಭ್ಯಗಳ ಉದ್ದ ಪಟ್ಟಿಯನ್ನೇ (ಆ ಶಾಲೆಗೆ ಹಾಕಿದ್ದೇವೆ, ಸೈಕಲ್, ಬೈಕ್, ಆಟದ ಸಾಮಾನು, ಮೊಬೈಲ್, ಒಳ್ಳೆಯ ಮನೆ ಇತ್ಯಾದಿಗಳು) ಅಪ್ಪ ಅಮ್ಮ ನಮ್ಮ ಮುಂದಿಡುತ್ತಾರೆ. ಇವ್ಯಾವುದೂ `ಪ್ರೀತಿ’ಯ ಗುರುತುಗಳಲ್ಲ.

ಷರತ್ತುರಹಿತ ಪ್ರೀತಿ ಮಕ್ಕಳೊಡನೆ ನಾವು ಕಳೆಯವ ಸಮಯ, ನಮ್ಮ ನಡವಳಿಕೆಯ ರೀತಿ, ಅವರ ಬಾಲ್ಯವನ್ನು ನಾವೂ ಆನಂದಿಸುವ ರೀತಿಗೆ ಸಂಬಂಧಿಸಿದ್ದು. ಉದಾಹರಣೆಗೆ ಮಕ್ಕಳಿಗೆ ದುಬಾರಿ ಮೊಬೈಲ್, ಡ್ರೆಸ್, ದುಬಾರಿ ಆಟದ ಸಾಮಾನು ಕೊಡಿಸುವ ಬದಲು, ಒಂದು ಚೀಲ ಮರಳಿಗೆ (sand) ದುಡ್ಡು ವ್ಯಯಿಸಿ, ಮಕ್ಕಳೊಡನೆ ನೀವೂ ಮರಳಿನಾಟ (sandplay) ಆಡುವ ರೀತಿ! ಅಥವಾ ಮನೆಯಲ್ಲಿಯೇ ಅಪ್ಪ-ಅಮ್ಮ ಮನೆಕೆಲಸಗಳನ್ನು ಮಾಡುವಾಗ ಸೃಜನಶೀಲವಾಗಿ ಯೋಚಿಸಿ, ಮಕ್ಕಳನ್ನೂ ಒಳಗೊಂಡು ಆ ಕೆಲಸಗಳನ್ನು ಮಾಡುವ ತರಹ -ಮಾತುಗಳಲ್ಲಿ ನಿಮಗಿರುವ ಪ್ರೀತಿ, ಸಂತಸವನ್ನು ಆಗಾಗ್ಗೆ ವ್ಯಕ್ತಪಡಿಸುವುದೂ ಮುಖ್ಯ.

ಸಾಮಾನ್ಯವಾಗಿ `ನಾವು ಮತ್ತು ನಮ್ಮ ಮಕ್ಕಳು ಒಂದೇ’ ಎಂಬಂತೆ ವರ್ತಿಸುವ ನಾವು ಬೈಯ್ಯುತ್ತೇವೆ, ಕೂಗಾಡುತ್ತೇವೆ. ಕೆಟ್ಟ ಶಬ್ದಗಳನ್ನು ಉಪಯೋಗಿಸುತ್ತೇವೆ. ಮಕ್ಕಳನ್ನು ಹೊಗಳುವುದಾಗಲಿ, `ನಿನ್ನ ಕಂಡರೆ ನನಗಿಷ್ಟ’ ಎನ್ನುವುದಾಗಲೀ ಕೇವಲ ಅವರು ನಮಗೆ ಬೇಕಾದ್ದನ್ನು (ಅದೂ ಹೆಚ್ಚಾಗಿ ಇತರರು ಗಮನಿಸುವಂತೆ) ಏನನ್ನಾದರೂ ಮಾಡಿದಾಗ ಮಾತ್ರ. ಈ ಸಂದರ್ಭದಲ್ಲಿ ಖ್ಯಾತ ಪ್ರಬಂಧಕಾರ, ಶತಾಯುಷಿ ಡಾ.ಎ.ಎನ್.ಮೂರ್ತಿರಾಯರು ಹೇಳಿದ ಕೆಲವು ಮಾತುಗಳು ನೆನಪಾಗುತ್ತವೆ. ‘ಮಕ್ಕಳ ಬಾಲ್ಯ, ಅಪ್ಪ-ಅಮ್ಮಂದಿರಿಗೆ ನೀಡುವ ಸಂತಸ ಅಪಾರ. ಮಕ್ಕಳ ತೊದಲು ನುಡಿ, ಅಂಬೆಗಾಲು, ಹೀಗೆ ಒಂದೊಂದು ಬಾಲಲೀಲೆ ನೀಡುವ ಆನಂದದ ಬದಲಾಗಿ ಅವರಿಗೆ ನಾವು ಇಡೀ ಜೀವನವೇ ಋಣಿಗಳಾಗಿದ್ದರೂ ಸಾಲದು. ಅವರಿಂದ ಬೇರೆ ನಿರೀಕ್ಷೆಯೂ ಸಲ್ಲದು!’

ನನ್ನ ಪ್ರಕಾರ ಬದಲಾಗುವುದು ಸಾಧನಗಳಷ್ಟೆ! ಮಕ್ಕಳ ಮುಗ್ಧತೆ, ಕುತೂಹಲ, ಚಿಕ್ಕ ವಿಷಯಗಳಲ್ಲಿ ನಗುವ ಮುಕ್ತ ಮನಸ್ಸು ಯಾವ ಕಾಲದಲ್ಲಿಯೂ ಬದಲಾಗಲು ಸಾಧ್ಯವಿಲ್ಲ. ನಾವು ಪ್ರೀತಿಗೆ ಗಮನ ನೀಡುವುದು, ನಮ್ಮ ಮತ್ತು ಮಕ್ಕಳ ಮನಸ್ಸನ್ನು ಹಣ-ವಸ್ತುಗಳಿಂದ ಹಾಳು ಮಾಡದಿರುವ ಹಾಗೂ ನಿರೀಕ್ಷೆಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವ ಕ್ರಮ ಜೀವನದಲ್ಲಿ ಸಂತೋಷವಾಗಿರುವ, ಸುಖಿಗಳಾಗಿರುವ ಮಕ್ಕಳನ್ನು ರೂಪುಗೊಳಿಸಲು ಸಾಧ್ಯವಿದೆ. ಆಗ ಅವರ ನಡವಳಿಕೆ ಎಂತಹ ತಾಂತ್ರಿಕ ಯುಗದಲ್ಲಿಯೂ ಸರಿಯಾಗಿಯೇ ಇರುತ್ತದೆ. ಇಂತಹ ಚರ್ಚೆಗಳನ್ನು ಅಪ್ರಸ್ತುತ ಎನಿಸುವಂತೆ ಮಾಡಿಬಿಡುತ್ತದೆ!

*ಲೇಖಕರು ಶಿವಮೊಗ್ಗದಲ್ಲಿ ಮನೋರೋಗ ಚಿಕಿತ್ಸಕರು; ಮನೋವೈದ್ಯಶಾಸ್ತ್ರ, ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಜೊತೆಗೆ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯೋಗ, ವೀಣೆ… ಹೀಗೆ ಬಹುಕ್ಷೇತ್ರಗಳಲ್ಲಿ ಆಸಕ್ತಿ ಮತ್ತು ಪರಿಣತಿ ಹೊಂದಿದ್ದಾರೆ.

Leave a Reply

Your email address will not be published.