ಮಿಲ್ಲರ್ ವರದಿಗೆ 100 ವರ್ಷ

ಇಂದು ಮುಂದೆ ಬಂದಿರುವ ಜನಾಂಗ, ತಮ್ಮವರ ಹಿಂದಿನ ದುರಂತಮಯ ಮಟ್ಟವನ್ನು ತಿಳಿದುಕೊಳ್ಳಲು ಸರ್ ಲೆಸ್ಲಿ ಮಿಲ್ಲರ್ ವರದಿಯನ್ನು ಓದುವುದು ಸೂಕ್ತ. ಹೀಗೆ ಓದುವುದರಿಂದ ತಮ್ಮ ಹಿಂದಿನ ಜನಾಂಗದ ಅವಸ್ಥೆ ಅರ್ಥವಾಗುತ್ತದೆ. ಕೊನೆಯ ಪಕ್ಷ ಇಂದು ಮೀಸಲಾತಿ ಇಲ್ಲದವರನ್ನು ಕಂಡಾಗ ಅವರ ಬಗ್ಗೆ ಇರಿಸಿಕೊಂಡಿರುವ ಧಿಮಾಕಿನ ಪ್ರಮಾಣ ಕಡಿಮೆ ಆದರೂ ಆಗುತ್ತದೆ.

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದವರ ಏಳ್ಗೆಗೆ ರಚಿಸಿದ್ದ ಜಸ್ಟೀಸ್ ಲೆಸ್ಲಿ ಮಿಲ್ಲರ್ ಸಮಿತಿ ವರದಿ ಸಲ್ಲಿಸಿ (1919) ನೂರು ವರ್ಷಗಳಾಗುತ್ತಿವೆ. ಮೈಸೂರು ಮಹಾರಾಜರು ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿಯೇ ಶೂದ್ರ ಹಾಗೂ ಪಂಚಮರ ಸ್ಥಿತಿಗತಿಗಳನ್ನು ಚೆನ್ನಾಗಿ ಅರಿತಿದ್ದರು. ರಾಜ್ಯದಲ್ಲಿ ಶೇ.2.7 ರಷ್ಟಿದ್ದ ಬ್ರಾಹ್ಮಣರು ಉನ್ನತ ಹುದ್ದೆಗಳನ್ನು ಹೇಗೆಂದರೆ ಹಾಗೆ ಆಕ್ರಮಿಸಿಕೊಂಡು ಬಹುವಾಗಿ ಮುಂದೆ ಬಂದಿದ್ದರು. ಉಳಿದ ಜನಾಂಗದವರ ಒಟ್ಟು ಜನಸಂಖ್ಯೆ ಶೇ.97ರಷ್ಟಿದ್ದರೂ ಅವರ ಸ್ಥಿತಿ ಅತ್ಯಂತ ಹೀನಾಯವಾಗಿತ್ತು. ಸೂಕ್ಷ್ಮಮತಿಗಳೂ, ಚಿಂತಕರೂ, ಬುದ್ಧಿವಂತಿಕೆಗಿಂತ ಹೃದಯ ಸಂಪತ್ತನ್ನು ಬಹುವಾಗಿ ಹೊಂದಿದ್ದ ಒಡೆಯರ್ ಅವಕಾಶ ವಂಚಿತರತ್ತ ತಮ್ಮ ಗಮನವನ್ನು ಹರಿಸಿದರು.

ಇದೇ ವೇಳೆಯಲ್ಲೇ ತಮಿಳುನಾಡಿನಲ್ಲಿ ಬ್ರಾಹ್ಮಣೇತರರ ಚಳವಳಿ ಅವರಲ್ಲಿ ದಿಗಿಲನ್ನು ಹುಟ್ಟಿಸಿ, ಹಿಂದುಳಿದವರ ಶೋಷಣೆಯ ಸ್ಥಿತಿಗತಿಗಳನ್ನು ಚೆನ್ನಾಗಿ ಅರಿಯತೊಡಗಿದರು. ಇಂತಹ ಶೋಷಣೆಯನ್ನು ತಪ್ಪಿಸಲು ಅವರು ಮುಂದೆ ಬಂದಿದ್ದು ಯಾವುದೇ ತರಹದ ಸ್ವಾರ್ಥದಿಂದಲ್ಲ. ಅಥವ ಮುಂದಿನ ಚುನಾವಣೆಗೆ ಹೇಗೆ ಜನರನ್ನು ಸನ್ನದ್ಧಗೊಳಿಸಿ ತನ್ನತ್ತ ಸೆಳೆದುಕೊಳ್ಳಬೇಕೆನ್ನುವ ಯಾವುದೇ ತರಹದ ವ್ಯಾಮೋಹದಿಂದಲ್ಲ. ಅವರು ಜನರ ಯಾತನೆಯನ್ನು ಬರೀ ಮನಸ್ಸಿನಲ್ಲಿ ಯೋಚಿಸದೆ ಹೃದಯದ ಮಿಡಿತದಿಂದ ಅವಲೋಕಿಸಿ ನ್ಯಾಯಮೂರ್ತಿ ಲೆಸ್ಲಿ ಮಿಲ್ಲರ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿದರು. ಈ ಸಮಿತಿಯ ಮೂಲ ಉದ್ದೇಶ ರಾಜ್ಯದ ಯಾವ್ಯಾವ ಜಾತಿಯ ಜನ ಸರಕಾರದಲ್ಲಿ ಎಷ್ಟೆಷ್ಟು ಸ್ಥಾನಗಳನ್ನು ಹೊಂದಿದ್ದಾರೆ ಎನ್ನುವುದನ್ನು ಸಮೀಕ್ಷೆ ಮಾಡಿ ಒಂದು ವರದಿಯನ್ನು ಕೊಡುವುದು.

ಈ ಸಮಿತಿ ಅಸ್ತಿತ್ವಕ್ಕೆ ಬಂದದ್ದು 23.8.1918ರಲ್ಲಿ. ಈ ಸಮಿತಿಯಲ್ಲಿ ಇಬ್ಬರು ಬ್ರಾಹ್ಮಣರು-ಎಂ.ಸಿ.ರಂಗ ಅಯ್ಯರ್ ಮತ್ತು ದಿವಾನ್ ಶ್ರೀಕಂಠೇಶ್ವರ ಅಯ್ಯರ್, ಒಬ್ಬ ಮುಸ್ಲಿಂ-ಗುಲಾಮ್ ಮಹಮ್ಮದ್ ಖಲಾಮಿ, ಒಬ್ಬ ಒಕ್ಕಲಿಗ-ಎಂ.ಎಚ್.ಚನ್ನಯ್ಯ, ಒಬ್ಬ ಲಿಂಗಾಯಿತ-ಎಂ.ಬಸವಯ್ಯ ಹಾಗೂ ಒಬ್ಬ ಕೂರ್ಗಿ-ಎಂ.ಮುತ್ತಣ್ಣನವರಿದ್ದರು.

ಸಾರ್ವಜನಿಕ ಸೇವೆಯಲ್ಲಿ ಹೊಸ ರಿಕ್ರೂಟ್‍ಮೆಂಟ್ ಮಾಡಿಕೊಳ್ಳಲು ಈಗಿರುವ ನಿಯಮಗಳನ್ನು ಬದಲಾಯಿಸುವುದು. ಈ ಪರಿಣಾಮದ ಅನ್ವಯ ಶೋಧನೆ ನಡೆಸಿ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದ ಜಾತಿಗಳನ್ನು ಪ್ರೋತ್ಸಾಯಿಸಲು ಸಾರ್ವಜನಿಕ ಉದ್ಯಮಗಳಲ್ಲಿ ಸ್ಥಾನ ದೊರಕಿಸಿಕೊಡುವುದಕ್ಕೆ ತೆಗೆದುಕೊಳ್ಳಬಹುದಾದಂತಹ ಕ್ರಮಗಳ ಕುರಿತು ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿತ್ತು. ಮಹಾರಾಜರ ಹೆಬ್ಬಯಕೆ ಏನಾಗಿತ್ತೆಂದರೆ ಬೇರೆ ಜನಾಂಗದವರಿಗೂ ಅವಕಾಶ ಕೊಡುತ್ತಾ ಹಿಂದುಳಿದ ಜಾತಿಯವರಿಗೆ ಒಳ್ಳೆಯ ಸ್ಥಾನಗಳನ್ನು ದೊರಕಿಸಿಕೊಡುವುದಕ್ಕೆ ಉನ್ನತ ಶಿಕ್ಷಣದಲ್ಲಿ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ವಿಶೇಷ ಸವಲತ್ತನ್ನು ದೊರಕಿಸಿಕೊಟ್ಟು ಪ್ರೋತ್ಸಾಹಿಸುವುದಾಗಿತ್ತು.

ಮಿಲ್ಲರ್ ಪರಿಗಣಿಸಿಕೊಂಡ ಕೋಷ್ಟಕದಲ್ಲಿ ಬ್ರಾಹ್ಮಣರು ಸರಕಾರಿ ಉದ್ಯೋಗದಲ್ಲಿ ಶೇ.69.64 ಸ್ಥಾನಗಳನ್ನು ಪಡೆದುಕೊಂಡಿದ್ದರೆ ಕ್ಷತ್ರಿಯರು ಶೇ.1.58, ಒಕ್ಕಲಿಗರು ಶೇ.2.42, ಲಿಂಗಾಯಿತರು ಶೇ.3.6 ಮುಸ್ಲೀಮರು ಶೇ.7.37, ಹಿಂದುಳಿದಿರದ ಬೇರೆ ಹಿಂದುಗಳು ಶೇ.7.18, ಹಿಂದುಳಿದ ಮತ್ತು ಡಿಪ್ರೆಸ್ಡ್ ವರ್ಗಗಳು ಶೇ.1.18, ಹಾಗೂ ಕ್ರಿಶ್ಚಿಯನ್ನರು ಶೇ.2.83 ರಷ್ಟು ಸ್ಥಾನಗಳನ್ನು ಪಡೆದುಕೊಂಡಿದ್ದರು.

ಈ ಸೂಚನೆ ಮೇರಗೆ ಮಿಲ್ಲರ್ ಸಲ್ಲಿಸಿದ ವರದಿ ಭಯಾನಕವಾಗಿದೆ. ಈ ಶೋಧನೆ ನಡೆಸಿ ಸಲ್ಲಿಸಿದ ವರದಿ ಅನೇಕ ಜಾತಿಗಳ ನೈಜ ಚಿತ್ರಣ ಮೈಸೂರು ಪ್ರಾಂತೀಯ ರಾಜ್ಯದಲ್ಲಿ ಹೇಗಿತ್ತು ಎನ್ನುವುದರ ಮೇಲೆ ಬೆಳಕನ್ನು ಬೀರುತ್ತದೆ. ಮಿಲ್ಲರ್ ಜಾತಿಗಳ ಮಟ್ಟವನ್ನು ಗ್ರಹಿಸಿಕೊಳ್ಳುವಲ್ಲಿ ಅಳವಡಿಸಿಕೊಂಡ ಅಂಶಗಳಲ್ಲಿ ಜಾತಿ ಒಂದೇ ಮಾನದಂಡವಾಗಿರಲಿಲ್ಲ. ಬದಲಿಗೆ ಇಂಗ್ಲಿಷ್ ಭಾಷೆ, ಶಿಕ್ಷಣ, ಉದ್ಯೋಗದಲ್ಲಿನ ಅಸಮಾನತೆ ಮಾನದಂಡವಾದವು. ಮಿಲ್ಲರ್ ಪರಿಗಣಿಸಿಕೊಂಡ ಕೋಷ್ಟಕದಲ್ಲಿ ಬ್ರಾಹ್ಮಣರು ಸರಕಾರಿ ಉದ್ಯೋಗದಲ್ಲಿ ಶೇ.69.64 ಸ್ಥಾನಗಳನ್ನು ಪಡೆದುಕೊಂಡಿದ್ದರೆ ಕ್ಷತ್ರಿಯರು ಶೇ.1.58, ಒಕ್ಕಲಿಗರು ಶೇ.2.42, ಲಿಂಗಾಯಿತರು ಶೇ.3.6 ಮುಸ್ಲೀಮರು ಶೇ.7.37, ಹಿಂದುಳಿದಿರದ ಬೇರೆ ಹಿಂದುಗಳು ಶೇ.7.18, ಹಿಂದುಳಿದ ಮತ್ತು ಡಿಪ್ರೆಸ್ಡ್ ವರ್ಗಗಳು ಶೇ.1.18, ಹಾಗೂ ಕ್ರಿಶ್ಚಿಯನ್ನರು ಶೇ.2.83 ರಷ್ಟು ಸ್ಥಾನಗಳನ್ನು ಪಡೆದುಕೊಂಡಿದ್ದರು.

ಈ ವರದಿ ಬಗ್ಗೆ ರಂಗ ಅಯ್ಯರ್, ಈ ಮೀಸಲಾತಿಯನ್ನು ವಿರೋಧಿಸುವ ಒಂದು ನೋಟನ್ನು ಬರೆಯುತ್ತಾರೆ. ಮತ್ತೊಬ್ಬ ಸದಸ್ಯ ಶ್ರೀಕಂಠ ಅಯ್ಯರ್ ವರದಿಯ ಕೆಲವು ಭಾಗಗಳನ್ನು ಸಮ್ಮತಿಸಿ ಮತ್ತೆ ಕೆಲವು ಭಾಗಗಳನ್ನು ತಿರಸ್ಕರಿಸುತ್ತಾರೆ. ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರು ಈ ವರದಿಯನ್ನು ಜಾರಿಗೊಳಿಸಿದರೆ ಆಗಬಹುದಾದ ಅನಾಹುತಗಳನ್ನು ಮಹಾರಾಜರಿಗೆ ತಿಳಿಸಿ ಅವರ ಮನಸ್ಸಿನಲ್ಲಿ ಗೊಂದಲ ಸೃಷ್ಟಿ ಮಾಡುತ್ತಾರೆ. ಈ ವರದಿಯನ್ನು 1919ರಲ್ಲಿ ಮಂಡಿಸಿದ್ದರೂ, ಇದರ ವಿರುದ್ಧ ಬ್ರಾಹ್ಮಣರು ದಂಗೆ ಏಳುತ್ತಾರೆ ಎನ್ನುವ ಭಯದಿಂದ 1921ರವರೆಗೆ ಮಹಾರಾಜರು ತಡೆಹಿಡಿದು ನಂತರ ಜಾರಿಗೊಳಿಸುತ್ತಾರೆ.

ಈ ಎರಡು ವರ್ಷಗಳ ಅಂತರದಲ್ಲಿ ಮಹಾರಾಜರು ತಮ್ಮ ದೃಢ ನಿರ್ಧಾರವನ್ನು ಬಿಡದೆ ಸೊಗಸಾದ ಬುನಾದಿಯನ್ನು ಸಿದ್ಧಪಡಿಸಿಕೊಂಡು ಈ ವರದಿಯನ್ನು ಜಾರಿಗೊಳಿಸುವ ತೀರ್ಮಾನಕ್ಕೆ ಬಂದೇಬಿಡುತ್ತಾರೆ. ರಾಜರ ಇಂತಹ ದೃಢ ತೀರ್ಮಾನದ ಹಿಂದೆ ಕೆಲಸ ಮಾಡಿದ ಶಕ್ತಿಗಳೆಂದರೆ ಯುವರಾಜ ನರಸಿಂಹರಾಜ ಒಡೆಯರ್, ಬಸವಯ್ಯ ಮತ್ತು ಕೆ.ಹೆಚ್.ರಾಮಯ್ಯ. ಇವರೆಲ್ಲರ ಅಭಿಪ್ರಾಯ ಏನಾಗಿತ್ತೆಂದರೆ ಜೈಪುರದಿಂದ ಮಿರ್ಜಿಯವರನ್ನು ಮೈಸೂರಿಗೆ ಕರೆದುಕೊಂಡು ಬಂದು ದಿವಾನರಿಗೆ ತಿಳಿಸದಂತೆ ಅವರನ್ನು ಹುಜೂರ್ ಟ್ರೆಜರಿಗೆ ಕಾರ್ಯದರ್ಶಿಯನ್ನಾಗಿ ಮಾಡುವುದು. ಈ ಸಂಚನ್ನು ತಿಳಿದ ವಿಶ್ವೇಶ್ವರಯ್ಯನವರು ಕೋಪದಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ. ರಾಜೀನಾಮೆಯನ್ನು ಸ್ವೀಕರಿಸಿದ ರಾಜರು ಆನಂದರಾವ್ ಅವರನ್ನು ದಿವಾನರನ್ನಾಗಿ ಮಾಡಿ ಮಿಲ್ಲರ್ ವರದಿಯನ್ನು ಅನುಷ್ಠಾನಗೊಳಿಸುತ್ತಾರೆ.

1921ರಲ್ಲಿ ಜಾರಿಗೊಂಡ ವರದಿಯಲ್ಲಿ ಎಲ್ಲಾ ಶೂದ್ರ, ಪಂಚಮ, ಮುಸ್ಲೀಂ, ಇಂಡೋಕ್ರಿಶ್ಚಿಯನ್ ಸೇರಿಕೊಂಡಿರುತ್ತಾರೆ. ಇದರಲ್ಲಿ ಬ್ರಾಹ್ಮಣರು, ಯುರೋಪಿಯನ್ನರು ಸೇರಿಕೊಂಡಿರುವುದಿಲ್ಲ. ಈ ಮೀಸಲಾತಿ ಹೊರಬಿದ್ದ ನಂತರ ಶೂದ್ರ ಜನಾಂಗದಲ್ಲಿ ಮುಂಚೂಣಿಯಲ್ಲಿದ್ದ ಲಿಂಗಾಯತರು ಹಾಗೂ ಒಕ್ಕಲಿಗರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಸರಕಾರದಲ್ಲಿ ಉದ್ಯೋಗ ಪಡೆದು ಮತ್ತಷ್ಟು ಪ್ರಬಲರಾಗಿ ತಮ್ಮ ಸಾಮಾಜಿಕ ಸ್ಥಾನಗಳಿಗೆ ಮೆರಗು ಕೊಡುತ್ತ 1947ರ ನಂತರ ತಾವೇ ಅಧಿಕಾರದ ಗದ್ದುಗೆ ಹಿಡಿಯತೊಡಗಿದರು.

ಹಳೆ ಮೈಸೂರು ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಒಕ್ಕಲಿಗರು ಆಳ್ವಿಕೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. 1947ರಿಂದ 1956ರವರೆಗೆ ರಾಜ್ಯ ಪುನರ್ ವಿಂಗಡಣೆ ಆಗುವವರೆಗೆ ಆಡಳಿತ ಒಕ್ಕಲಿಗರದೇ ಅಗಿತ್ತು. ಮೊದಲನೇ ಮುಖ್ಯಮಂತ್ರಿ ಚೆಂಗಲ್ ರೆಡ್ಡಿ, ನಂತರ ಕೆಂಗಲ್ ಹನುಮಂತಯ್ಯ, ಬಳಿಕ ಕಡಿದಾಳು ಮಂಜಪ್ಪ. ಇದರ ಜೊತೆಗೆ ಲೋಕಸೇವಾ ಆಯೋಗವು ಕೂಡ ಈ ಜನಾಂಗಗಳ ಕೈಯಲ್ಲೇ ಇತ್ತು. ರಾಜಕೀಯದಲ್ಲಿ ಹಾಗೂ ಲೋಕಸೇವಾ ಆಯೋಗದಲ್ಲಿ ಅವರು ಪ್ರಬಲರಾದ ಕಾರಣದಿಂದ ಆ ಜಾತಿಗಳ ಬಹಳಷ್ಟು ಜನ ಪರಿಷತ್ ಮತ್ತು ಇತರೆ ಪ್ರತಿಷ್ಠಿತ ಸರಕಾರಿ ಹುದ್ದೆಗಳಿಗೆ ಸೇರ್ಪಡೆಯಾದರು. 1956ರಲ್ಲಿ ರಾಜ್ಯ ಪುನರ್ ವಿಂಗಡಣೆ ಆದ ನಂತರ ರಾಜ್ಯ ಎರಡರಷ್ಟಾಯಿತು. ಜನಸಂಖ್ಯೆ ಇಮ್ಮಡಿಗೊಂಡಿತು. ಪುನರ್ ವಿಂಗಡಣೆ ನಂತರ ಲಿಂಗಾಯತರು ಬಹಸಂಖ್ಯಾತರಾಗಿ ರಾಜಕೀಯದಲ್ಲಿ ಪ್ರತಿಷ್ಠರಾದರು. ಈ ಕಾರಣದಿಂದ ರಾಜ್ಯದ ರಾಜಕೀಯ ಆಳ್ವಿಕೆ ಲಿಂಗಾಯತರತ್ತ ವಾಲಿತು. ತದನಂತರ ಈ ಜನಾಂಗದವರೇ ಒಬ್ಬರನಂತರ ಮತ್ತೊಬ್ಬರು 16 ವರ್ಷಗಳ ಕಾಲ ಮುಖ್ಯಮಂತ್ರಿಗಳಾದರು.

ಇಪ್ಪತ್ತನೇ ಶತಮಾನದ ಮೊದಲನೇ ಭಾಗದಲ್ಲಿ ಶೂದ್ರ ಪಂಚಮರ ಸ್ಥಿತಿ ಹೇಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಮಿಲ್ಲರ್ ವರದಿಯನ್ನು ತೆರೆದು ನೋಡಬೇಕು. ದೊಡ್ಡ ಪ್ರಮಾಣದ ಲಿಂಗಾಯತರ ಸ್ಥಿತಿಯೇ ಹೀನಾಯವಾಗಿತ್ತು ಎಂದರೆ ಕೆಳಮಟ್ಟದ ಶೂದ್ರ, ಪಂಚಮರ ಸ್ಥಿತಿ ಅದಿನ್ನೆಷ್ಟು ಚಿಂತಾಜನಕವಾಗಿರಬಹುದು.

ಎಸ್.ನಿಜಲಿಂಗಪ್ಪನವರಿಂದ ಮೊದಲ್ಗೊಂಡು ಕಂಠಿ ನಂತರ ಜತ್ತಿ, ತದನಂತರ ವೀರೇಂದ್ರ ಪಾಟೀಲ ಹೀಗೆ ದೇವರಾಜ ಅರಸು ಮುಖ್ಯಮಂತ್ರಿ ಆಗುವವರೆಗೂ ಅವರೇ ಮುಖ್ಯಮಂತ್ರಿಗಳಾದರು. ಇವರ ಆಳ್ವಿಕೆಯಲ್ಲಿ ಲಿಂಗಾಯತ ಜಾತಿ ಆಮೂಲಾಗ್ರವಾಗಿ ವೃದ್ಧಿಯಾಗತೊಡಗಿತು. ರಾಜಕೀಯದ ಜೊತೆಗೆ ಆರ್ಥಿಕ ವಲಯದಲ್ಲೂ ಮುಂದುವರೆದು ಆಸ್ತಿಪಾಸ್ತಿಯನ್ನು ಸಿಕ್ಕಾಪಟ್ಟೆ ಏರಿಸಿಕೊಂಡರು. ಈ ಶೂದ್ರ ಜನಾಂಗದವರನ್ನು ಪರಿಗಣಿಸಿದರೆ ನಮಗೆ ಗೋಚರಿಸುವುದೇನೆಂದರೆ ಯಾವುದೇ ಶೂದ್ರ ಜನಾಂಗಕ್ಕೆ ಅಥವ ಪಂಚಮರಿಗೆ ಅವಕಾಶ ದೊರೆತರೆ ಅವರು ವಿದ್ಯೆಯನ್ನು ಪಡೆದುಕೊಳ್ಳುವುದರ ಜೊತೆಗೆ ಉನ್ನತ ದರ್ಜೆಯ ಅಧಿಕಾರ, ಸಂಪತ್ತನ್ನು ಬೇರೆಯವರಿಗಿಂತ ಮಿಗಿಲಾಗಿ ಪಡೆದುಕೊಳ್ಳುತ್ತಾರೆ. ಇಂದು ಇಂತಹ ಸವಲತ್ತು ಕುರುಬರಿಗೂ ಸಿಕ್ಕ ಕಾರಣದಿಂದ ಅವರೂ ಕೂಡ ಅಭಿವೃದ್ಧಿಯತ್ತ ಹೆಜ್ಜೆಗಳನ್ನಿಡುತ್ತಿದ್ದಾರೆ. ದುರಾದೃಷ್ಟವೇನೆಂದರೆ ಹಿಂದೆ ಬ್ರಾಹ್ಮಣರು ಏನು ತಪ್ಪುಗಳನ್ನು ಮಾಡಿದ್ದರೋ ಅವುಗಳನ್ನು ತಿದ್ದಿಕೊಳ್ಳದೆ ಮತ್ತೆ ಅಂತಹ ತಪ್ಪುಗಳನ್ನೇ ಮುಂದುವರೆಸುತ್ತಿದ್ದಾರೆ.

ಕೃಷ್ಣರಾಜ ಒಡೆಯರ್ ಜಾತಿ ರಹಿತ ಸಮಾಜ ಸೃಷ್ಟಿಗೆ ಯಾವ ಪ್ರಯತ್ನ ಮಾಡದಿದ್ದರೂ ಅವರು ಶೂದ್ರ ಮತ್ತು ಪಂಚಮ ಜನಾಂಗದವರಿಗೆ ಕೊಟ್ಟ ಪ್ರೋತ್ಸಾಹ ಅಸಾಧಾರಣವಾದುದು. ಅದರ ಲಾಭ ಪಡೆದವರು ಇಂದು ಗೌರವಾನ್ವಿತರಾಗಿ ಬ್ರಾಹ್ಮಣರ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಒಂದು ಸಾರಿ ಯಾವುದೇ ಜನಾಂಗ ವಿದ್ಯೆ ಪಡೆದುಕೊಂಡು ಉನ್ನತ ಸ್ಥಾನ ಪಡೆದುಕೊಂಡರೆ ಅವರ ಮಕ್ಕಳೆಂದೂ ಮತ್ತೆ ಹಿಂದಿನ ಕಗ್ಗತ್ತಲ ಕಾಲಕ್ಕೆ ತೆರಳುವುದಿಲ್ಲ. ಇಪ್ಪತ್ತನೇ ಶತಮಾನದ ಮೊದಲನೇ ಭಾಗದಲ್ಲಿ ಶೂದ್ರ ಪಂಚಮರ ಸ್ಥಿತಿ ಹೇಗಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಮಿಲ್ಲರ್ ವರದಿಯನ್ನು ತೆರೆದು ನೋಡಬೇಕು. ದೊಡ್ಡ ಪ್ರಮಾಣದ ಲಿಂಗಾಯತರ ಸ್ಥಿತಿಯೇ ಹೀನಾಯವಾಗಿತ್ತು ಎಂದರೆ ಕೆಳಮಟ್ಟದ ಶೂದ್ರ, ಪಂಚಮರ ಸ್ಥಿತಿ ಅದಿನ್ನೆಷ್ಟು ಚಿಂತಾಜನಕವಾಗಿರಬಹುದು.

ಕೃಷ್ಣರಾಜ ಒಡೆಯರ್ ಶೂದ್ರ ಹಾಗೂ ಪಂಚಮ ಜನಾಂಗಕ್ಕೆ ಮೀಸಲಾತಿಯಿಂದ ದೊರಕಿಸಿಕೊಟ್ಟ ಅವಕಾಶ ಒಂದು ಪವಾಡ ಸದೃಶ ರೀತಿಯಲ್ಲಿ ಅವರನ್ನು ಮೇಲಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿ ಆಯಿತು.

*ಲೇಖಕರು ಚಿತ್ರದುರ್ಗ ಜಿಲ್ಲೆ ಸೂರಗೊಂಡನಹಳ್ಳಿಯವರು; ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಪಕರು. ನಾಲ್ಕು ಕಥಾಸಂಕಲನ, ಎಂಟು ಅನುವಾದ ಕೃತಿಗಳು ಹಾಗೂ ಎರಡು ವೈಚಾರಿಕ ಲೇಖನಗಳ ಸಂಕಲನ ಪ್ರಕಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸ.

Leave a Reply

Your email address will not be published.