ಮೀಸಲಾತಿಯ ಆಶಯ ಅಪ್ರಸ್ತುತಗೊಳಿಸುವ ಪರಿಭಾಷೆ

-ಡಾ.ಕಿರಣ್ ಎಂ. ಗಾಜನೂರು

ಕರ್ನಾಟಕದ ‘ಮಧ್ಯಮ ಜಾತಿಗಳು ಮುಂದಿಡುತ್ತಿರುವ ಮೀಸಲಾತಿಯ ಬೇಡಿಕೆ ಮತ್ತು ತರ್ಕದ ಹಿಂದೆ ಸಾಂವಿಧಾನಿಕ ಆಶಯವಾದ ‘ಸಾಮಾಜಿಕ ನ್ಯಾಯದ ಪರಿಭಾಷೆಯನ್ನು ಸಂಕುಚಿತಗೊಳಿಸುವ ಎಲ್ಲಾ ಗುಣಲಕ್ಷಣಗಳು ಕಾಣುತ್ತಿವೆ.

“ಆಧುನಿಕತೆ ಮತ್ತು ಉದಾರೀಕರಣದ ಪರಿಣಾಮ ಭಾರತದ ಸಾಮಾಜಿಕ ರಚನೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ, ಮುಖ್ಯವಾಗಿ ಇಲ್ಲಿನ ಜಾತಿಗಳ ಶ್ರೇಣಿಕೃತ ರಚನೆಯಲ್ಲಿ ಇದರ ಸ್ಪಷ್ಟ ಪ್ರಭಾವವನ್ನು ನಾವು ಕಾಣಬಹುದು, ಸಾರ್ವಜನಿಕವಾಗಿ ಇಂದು ಎಲ್ಲರೂ ಸಹಜವಾಗಿ ಬೆರೆಯುತ್ತಿದ್ದಾರೆ, ಜಾಗತೀಕರಣ ಒಪ್ಪಿಕೊಂಡ ಭಾರತ ಜಾತಿರಹಿತ ಸಾಮಾಜಿಕ ಸ್ಥಿತಿಯ ಕಡೆ ಚಲಿಸುತ್ತಿದೆ. ಹೀಗಿರುವಾಗ ಮೀಸಲಾತಿಯ ಅಗತ್ಯವೇನು”

“ಸಂವಿಧಾನದ 14ನೇ ವಿಧಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಘೋಷಿಸಿರುವಾಗ ಸ್ವತಃ ಕಾನೂನೇ ಜಾತಿ ಆಧಾರದಲ್ಲಿ ತಾರತಮ್ಯ ಮಾಡುವುದು ಒಂದು ರೀತಿ “ಅಸಮಾನ ನೀತಿಗಳ ಸಹಾಯದಿಂದ ಅಸಮಾನತೆಯನ್ನು ಹೊಗಲಾಡಿಸುವ” ಪ್ರಯತ್ನದಂತೆ ಕಾಣುತ್ತಿದೆ ಈ ದೃಷ್ಟಿಕೋನವನ್ನು ಹೊಂದಿರುವ ಮೀಸಲು ನೀತಿ ತಾರ್ಕಿಕವಾದುದಲ್ಲ”

ಮಂಡಲ್ ವರದಿಯ ಪೂರ್ವ ಮತ್ತು ನಂತರದ ಕಾಲದಿಂದ ಇತ್ತೀಚಿನ ದಿನದವರೆಗೂ ಭಾರತದ ದಲಿತ/ದಮನಿತರ ಮೀಸಲು ನೀತಿಯನ್ನು ಅಪ್ರಸ್ತುತಗೊಳಿಸಲು ಈ ದೇಶದ ಜಾತಿಮನಸ್ಸುಗಳು ಬಳಸುತ್ತಿದ್ದ ಪ್ರಮುಖ ತರ್ಕಗಳು ಇವು. ಆದರೆ ನಮ್ಮ ಶಾಸನಸಭೆ ಮೇಲ್ಜಾತಿಯಲ್ಲಿನ ಬಡವರ (ಆರ್ಥಿಕವಾಗಿ ಹಿಂದುಳಿದ) ಏಳಿಗೆಗಾಗಿ ಉದ್ಯೋಗ ಮತ್ತು ಶಿಕ್ಷಣದ ಅವಕಾಶದಲ್ಲಿ ಶೇಕಡಾ ಹತ್ತರಷ್ಟು ಮೀಸಲು ನೀತಿಯನ್ನು ಜಾರಿಗೊಳಿಸುವ 103ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸಿದ ನಂತರ ಮೇಲಿನ ಮೀಸಲಾತಿ ವಿರೋಧಿ ನಿಲುವಿನ ಸ್ವರೂಪ ಬದಲಾದಂತೆ ಕಾಣುತ್ತಿದೆ.

ಈ ಹಿಂದೆ ಒಟ್ಟು ಮೀಸಲು ನೀತಿಯನ್ನೆ ವಿರೋಧಿಸುತ್ತಿದ್ದ ವರ್ಗಗಳು ತಮ್ಮ ನಿಲುವನ್ನು ಮಾರ್ಪಡಿಸಿಕೊಂಡು ಇಂದು ಸಾಂವಿಧಾನಿಕವಾಗಿ ನೀಡಲ್ಪಟ್ಟ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಲಿಂಗಾಧಾರಿತ ಮೀಸಲಾತಿಯನ್ನು ಸಾರ್ವಜನಿಕವಾಗಿ ಅಪ್ರಸ್ತುತಗೊಳಿಸುವ ಮತ್ತು ಅಪಹಾಸ್ಯಕ್ಕೆ ಈಡುಮಾಡುವ ಪರಿಭಾಷೆಯೊಂದನ್ನು ರೂಪಿಸುತ್ತಿವೆ. ಈ ರಾಜಕಾರಣದ ಭಾಗವಾಗಿಯೇ ನಾವು ಕರ್ನಾಟಕದಲ್ಲಿ ನಡೆಯುತ್ತಿರುವ ‘ಹೊಸಮಾದರಿಯ’ ಮೀಸಲು ಹೋರಾಟವನ್ನು ಗಮನಿಸಬೇಕಿದೆ.

ಇಂದು ಕರ್ನಾಟಕದ ‘ಮಧ್ಯಮ ಜಾತಿಗಳು’ ಮುಂದಿಡುತ್ತಿರುವ ಮೀಸಲಾತಿಯ ಬೇಡಿಕೆ ಮತ್ತು ತರ್ಕದ ಹಿಂದೆ ಸಾಂವಿಧಾನಿಕ ಆಶಯವಾದ ‘ಸಾಮಾಜಿಕ ನ್ಯಾಯದ’ ಪರಿಭಾಷೆಯನ್ನು ಸಂಕುಚಿತಗೊಳಿಸುವ ಎಲ್ಲಾ ಗುಣಲಕ್ಷಣಗಳು ಕಾಣುತ್ತಿವೆ. ಆ ಕಾರಣಕ್ಕೆ ಇದನ್ನು ನಾವು ಜನ ಹೋರಾಟದ ಭಾಗವಾಗಿ ಹುಟ್ಟಿದ ಸಾಮಾಜಿಕ ಚಳವಳಿ ಎಂದು ಕರೆಯುವುದಕ್ಕಿಂದ ವರ್ತಮಾನದ ರಾಜಕೀಯ ಅಗತ್ಯಕ್ಕಾಗಿ ಹುಟ್ಟಿಕೊಂಡ ರಾಜಕೀಯ ಚಳವಳಿ ಎಂದು ಕರೆಯಬಹುದು.

ಏಕೆಂದರೆ ಸಂವಿಧಾನದ 16(4)ನೇ ವಿಧಿಯ ಮೂಲಭೂತ ಆಶಯ, ಜಾತಿಯ ಕಾರಣಕ್ಕೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯಲ್ಪಟ್ಟು,  ತಮ್ಮ ಅಸ್ತಿತ್ವ  ಮತ್ತು  ಧ್ವನಿಯನ್ನು ಕಳೆದುಕೊಂಡ ಗುಂಪುಗಳಿಗೆ ಮೀಸಲು ನೀತಿಯ ಮುಖೇನ ‘ಸಾಮಾಜಿಕನ ನ್ಯಾಯ’ ಒದಗಿಸುವ, ಆ ಮೂಲಕ ಸಮಾಜದಲ್ಲಿ ಜಾತಿಪ್ರಜ್ಞೆಯನ್ನು ಹೋಗಲಾಡಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿತ್ತು. ಇದನ್ನೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ‘ನಿಜವಾದ ಸ್ವರಾಜ್ಯ ಜಾತಿರಹಿತ ಸಮಾಜ ನಿರ್ಮಾಣದಿಂದ ಮಾತ್ರ ಸಾಧ್ಯ’ ಎಂದಿದ್ದರು.

ಇದರ ಅರ್ಥ ಸಾಂವಿಧಾನಿಕವಾಗಿ ನೀಡಲ್ಪಟ್ಟ ಮೀಸಲು ವ್ಯವಸ್ಥೆ ಜಾತಿಪ್ರಜ್ಞೆಯನ್ನು ಹೋಗಲಾಡಿಸಿ, ಸಮಾಜದಲ್ಲಿ ಜಾತಿಯ ಪ್ರಭಾವವನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ವರ್ತಮಾನದ ‘ಮಧ್ಯಮ ಜಾತಿಗಳ’ ರಾಜಕೀಯ ಮೀಸಲು ಹೋರಾಟದ ಮೂಲ ಆಶಯವೇ ಜಾತಿಪ್ರಜ್ಞೆಯನ್ನು ಬಡಿದೆಬ್ಬಿಸಿ ಸಮುದಾಯಗಳ ಜಾತಿ ಅಸ್ಮಿತೆಯನ್ನು ಗಟ್ಟಿಗೊಳಿಸಿ ಮಧ್ಯಮ ಜಾತಿಗಳನ್ನು ರಾಜಕೀಯ ಪಕ್ಷಗಳ ಮತಬ್ಯಾಂಕ್ ರಾಜಕಾರಣದ ಭಾಗವಾಗಿಸುವ ಗುಣಲಕ್ಷಣವನ್ನು ಹೊಂದಿರುವಂತೆ ಕಾಣುತ್ತಿದೆ. ಜಾತಿ ಅಸ್ಮಿತೆಗಳನ್ನೆ ಗಾಢವಾಗಿ ಬಿಂಬಿಸುವ, ಅವುಗಳ ಆಧಾರದಲ್ಲಿಯೇ ಚಳವಳಿಯನ್ನು ನಿರ್ವಹಿಸುವ ಈ ಮಾದರಿಯ ಹೋರಾಟಗಳನ್ನು ನಾವು ಗುಜರಾತಿನ ಪಟೇಲ್, ಮಹಾರಾಷ್ಟ್ರದ ಮರಾಠ ಮತ್ತು ಹರಿಯಾಣಾದ ಜಾಟ್ ಸಮುದಾಯಗಳು ನಿರ್ವಹಿಸಿದ ಹೋರಾಟಗಳಲ್ಲಿ ಗುರುತಿಸಬಹುದಾಗಿತ್ತು. ಇಂದು ಕರ್ನಾಟಕ ರಾಜಕೀಯವಾಗಿ ಆ ದಿಕ್ಕಿನಲ್ಲಿ ಚಲಿಸುತ್ತಿರುವಂತೆ ಕಾಣುತ್ತಿದೆ.

ಈ ಎಲ್ಲಾ ಪ್ರಬಲ ಮತ್ತು ಮಧ್ಯಮ ಜಾತಿಗಳ ಮೀಸಲು ಹೋರಾಟಗಳ ಹಿಂದೆ ನಾವು ಗಮನಿಸಬೇಕಾದ ಸೂಕ್ಷ್ಮವಾದ ಸಂಗತಿಯೊಂದಿದೆ: ಈ ಹೋರಾಟಗಳು ಮೂಲತಃ ಸಾಂವಿಧಾನಿಕ ಮೀಸಲಾತಿಯನ್ನು ಅವೈಜ್ಞಾನಿಕ, ನಮಗೂ ಮೀಸಲಾತಿಯ ಸೌಲಭ್ಯ ವಿಸ್ತರಿಸಬೇಕು ಅಥವಾ ಹೆಚ್ಚಿಸಬೇಕು ಎನ್ನುವ ಬೇಡಿಕೆಯೊಂದಿಗೆ ಹೋರಾಟಕ್ಕೆ ತಳ್ಳಲ್ಪಡುತ್ತವೆ. ಆ ಮೂಲಕ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಅಸಂಘಟಿತ ತಳ-ಸಮುದಾಯಗಳ ಎದುರು ಪ್ರಬಲ ಮತ್ತು ಮಧ್ಯಮ ಜಾತಿಗಳ ಬಹುಸಂಖ್ಯಾತ ವರ್ಗವೊಂದನ್ನು ಸಂಘಟಿಸುತ್ತವೆ. ಅಂದರೆ ತಾತ್ವಿಕವಾಗಿ ಸಾಮಾಜಿಕನ್ಯಾಯ ಆಧಾರಿತ ಮೀಸಲು ರಾಜಕೀಯ ನಿರೂಪಣೆಗಳ ಎದುರು, ಗಡುಸು ಧೋರಣೆಯ ಪ್ರಬಲ ಜಾತಿಗಳ ಮೀಸಲು ರಾಜಕೀಯದ ಬೇಡಿಕೆಯನ್ನು ಮುಂದಿಡುವ ಮೂಲಕ ಉದಾರವಾದಿ ಪ್ರಜಾಪ್ರಭುತ್ವ ರಾಜಕೀಯ ಸಿದ್ಧಾಂತಕ್ಕೆ ಪೆಟ್ಟನ್ನು ನೀಡುವ ಲಕ್ಷಣಗಳನ್ನು ಈ ಎಲ್ಲಾ ಆಧುನಿಕ ಮೀಸಲು ಹೋರಾಟಗಳು ಹೊಂದಿರುವುದು ಸ್ಪಷ್ಟವಾಗುತ್ತದೆ.

ಈ ಮಾದರಿಯ ಜಾತಿಹೋರಾಟಗಳಿಂದ ಎರಡು ರೀತಿಯ ಪರಿಣಾಮಗಳನ್ನು ನಾವು ಊಹಿಸಬಹುದು:

  1. ಮೇಲ್ನೋಟಕ್ಕೆ ಇದು ಮೀಸಲು ಅವಕಾಶಗಳ ಬೇಡಿಕೆಯ ಹೋರಾಟ ಅನ್ನಿಸಿದರೂ ಆಳದಲ್ಲಿ ಇದು ತಳಸಮುದಾಯಗಳ ಮೀಸಲಾತಿ ವಿರೋಧಿ ಧೋರಣೆಯ ‘ಪ್ರಬಲ ಮತ್ತು ಮಧ್ಯಮ ಜಾತಿಗಳನ್ನು’ ಸಂಘಟಿಸುವ ಮೂಲಕ ಸಾಮಾಜಿಕನ್ಯಾಯ ಆಧಾರಿತ ಮೀಸಲು ನೀತಿಯನ್ನು ಪ್ರತಿರೋಧಿಸುವ ವ್ಯವಸ್ಥಿತ ಸಂಕುಚಿತ ಸಾಮಾಜಿಕ ಇಂಜಿನಿಯರಿಂಗ್ ಪ್ರಯತ್ನದ ಭಾಗವಾಗಿವೆ.
  2. ಇವು ಪ್ರಬಲ ಮತ್ತು ಮಧ್ಯಮ ಜಾತಿಗಳ ಮೀಸಲಾತಿ ಬೇಡಿಕೆಯ ಹೋರಾಟದಂತೆ ಕಂಡರೂ ಆಳದಲ್ಲಿ ಪರಂಪರಾಗತ ‘ಸಾಮಾಜಿಕನ್ಯಾಯ’ ವಿರೋಧಿ ಧಾರ್ಮಿಕ ರಚನೆ ಕೆಲಸ ಮಾಡುತ್ತಿರುವುದು ಈ ಮಾದರಿಯ ಹೋರಾಟ ಮಹಾರಾಷ್ಟ್ರ, ಹರಿಯಾಣ ಮತ್ತು ಗುಜರಾತಿನ ಮತಬ್ಯಾಂಕ್ ರಾಜಕೀಯದಲ್ಲಿ ಯಾವ ವರ್ಗಕ್ಕೆ ನೆರವಾಯಿತು ಎನ್ನುವ ಮೂಲಕ ಸ್ಪಷ್ಟವಾಗುತ್ತದೆ.

ಈ ಎಲ್ಲಾ ವಿಶ್ಲೇಷಣೆಗಳ ಮುಖ್ಯ ಕಾರಣ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ವ್ಯವಸ್ಥೆ ಸರ್ಕಾರಿ ವ್ಯವಸ್ಥೆಗೆ ಮಾತ್ರ ಅನ್ವಯಿಸುತ್ತದೆ. ಭಾರತದಲ್ಲಿ ಲಭ್ಯವಿರುವ ಸರ್ಕಾರಿ ಉದ್ಯೋಗಗಳ ಶೇಕಡಾವಾರು ಪ್ರಮಾಣ 3.8% ಮಾತ್ರ. ಮಿಕ್ಕಿಂತೆ ಎಲ್ಲಾ ಉದ್ಯೋಗಗಳು ಖಾಸಗಿ ಮತ್ತು ಅಸಂಘಟಿತ ವಲಯದಲ್ಲಿವೆ. 2015ರ ವಿಶ್ವಬ್ಯಾಂಕಿನ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ ಕೇವಲ 16 ಜನ ಸಾರ್ವಜನಿಕ ವಲಯದ ಉದ್ಯೋದಲ್ಲಿದ್ದಾರೆ. 2021ರಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಮೇಲಾಗಿ ನವ-ಉದಾರವಾದಿ ಆರ್ಥಿಕ ನೀತಿಗಳನ್ನು ಒಪ್ಪಿರುವ ಕಾರಣಕ್ಕೆ ನಾವು ಖಾಸಗೀಕರಣಕ್ಕೆ ಮುಂದಾಗುತ್ತಿದ್ದೇವೆ. ಇದರ ಅರ್ಥ ಸರ್ಕಾರಿ ವಲಯದಲ್ಲಿನ ಉದ್ಯೋಗಗಳ ಪ್ರಮಾಣದಲ್ಲಿ ಖೋತಾ ಆಗುವುದೇ ಆಗಿದೆ.

ಪರಿಸ್ಥಿತಿ ಹೀಗಿರುವಾಗ ವರ್ತಮಾನದ ಯಾವುದೇ ಮೀಸಲಾತಿ ಕುರಿತ ಹೋರಾಟದ ಮೂಲ ಉದ್ದೇಶ ಖಾಸಗಿವಲಯಕ್ಕೂ ಮೀಸಲಾತಿ ವ್ಯವಸ್ಥೆಯನ್ನು ವಿಸ್ತರಿಸುವ ಸಾಂವಿಧಾನಿಕ ತಿದ್ದುಪಡಿಯ ಬೇಡಿಕೆಯನ್ನು ಮುಂದಿಡುವುದಾಗಬೇಕಿತ್ತು. ಆ ಕುರಿತ ಯಾವ ಗುಣಲಕ್ಷಣಗಳು ವರ್ತಮಾನದ ಮೀಸಲು ಹೋರಾಟಕ್ಕೆ ಇಲ್ಲ ಎಂಬುದು ಗಮನಾರ್ಹ.

ಮತ್ತೊಂದು ಕಡೆ ನಮ್ಮ ಎಲ್ಲಾ ಮೀಸಲು ನೀತಿಗಳು ನಿರ್ಧಾರವಾಗುತ್ತಿರುವುದು 1931ರಲ್ಲಿ ನಡೆಸಿದ ಜಾತಿ ಆಧಾರಿತ ಜನಗಣತಿಯ ಅಂಕಿ-ಅಂಶಗಳ ಆಧಾರದಲ್ಲಿ. ಈ ವಿವರಗಳು ವರ್ತಮಾನದ ಸಮುದಾಯಗಳ ಜನಸಂಖ್ಯೆಯನ್ನು ಅವುಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಹೇಗೆ ನಿರ್ಧರಿಸಲು ನೆರವಾಗುತ್ತದೆ ಎಂಬುದು ಮೀಸಲು ಪರವಾದ ಹೋರಾಟದ ಮೂಲಭೂತ ಪ್ರಶ್ನೆಯಾಗಬೇಕಿತ್ತು. ಮೇಲಾಗಿ ಎಂ.ಆರ್.ಬಾಲಾಜಿ ಮತ್ತು ಸ್ಟೇಟ್ ಆಫ್ ಮೈಸೂರು ಪ್ರಕರಣದಲ್ಲಿ ನ್ಯಾಯಾಲಯ ಮೀಸಲಾತಿ ಶೇಕಡಾ 50% ಮೀರಬಾರದು ಎಂಬ ನಿಯಮವನ್ನು ವಿಧಿಸಿದೆ. ಅದನ್ನು ಪ್ರಶ್ನಿಸುವ ಕಾಯ್ದೆ ಮತ್ತು ಸಮುದಾಯಗಳ ಜನಸಂಖ್ಯೆ ಆಧಾರಿತ ಮೀಸಲು ನೀತಿಯ ಪ್ರಸ್ತಾಪ ‘ಮಧ್ಯಮ ಜಾತಿಗಳ’ ಮುಖ್ಯ ಬೇಡಿಕೆಯಾಗಬೇಕಿತ್ತು.

ಈ ಎಲ್ಲಾ ಕಾರಣಕ್ಕೆ ಸದರಿ ಹೋರಾಟವನ್ನು ಕೇವಲ ಮಧ್ಯಮ ಜಾತಿಗಳ ಮೀಸಲಾತಿ ಪರವಾದ ಹೋರಾಟ ಎಂದು ಗುರುತಿಸುವುದು ಸಂಕುಚಿತವಾದ ಗ್ರಹಿಕೆಯಾಗುತ್ತದೆ. ಮೇಲ್ನೋಟಕ್ಕೆ ಹಾಗೆ ಕಂಡರೂ ಆಳದಲ್ಲಿ ಇದು ‘ಸಾಂವಿಧಾನಿಕ ಮೀಸಲಾತಿಯನ್ನು’ ಅಪ್ರಸ್ತುತಗೊಳಿಸುವ, ಮೀಸಲು ಪಡೆಯುತ್ತಿರುವ ಸಮುದಾಯಗಳ ಎದಿರು ಮಧ್ಯಮ ಮತ್ತು ಪ್ರಬಲ ಜಾತಿಸಂಘಟನೆಗಳನ್ನು ಮುಖಾಮುಖಿಯಾಗಿಸಿ ಹೊಸ ಜಾತಿ ಸಮೀಕರಣದ ಮೂಲಕ ರಾಜಕೀಯ ಲಾಭ ಪಡೆಯುವ ತಂತ್ರಗಾರಿಕೆಯ ಭಾಗ ಎಂದು ಅರ್ಥಮಾಡಿಕೊಳ್ಳುವುದು ಕಾಲದ ಅಗತ್ಯವಾಗಿದೆ.

ಏಕೆಂದರೆ ನಾವು ಆಧುನಿಕತೆ, ಉದಾರೀಕರಣದ ನೀತಿಗಳು ಭಾರತೀಯ ಜಾತಿಯ ಸ್ಥಾನಮಾನಗಳಲ್ಲಿ ಸಾಕಷ್ಟು ಬದಲಾವಣೆ ತಂದಿವೆ ಎಂದು ವಾದಿಸಿದರೂ ವಾಸ್ತವ ಬೇರೆಯೇ ಇದೆ. 2011-12ನೇ ಸಾಲಿನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಗುರುತಿಸುವ ಭಾಗವಾಗಿ 40,000 ಜನರನ್ನು ಸಂದರ್ಶಿಸಿದ್ದು ಆದರಲ್ಲಿ 27,000 ಜನ ತಾವು ಅಸ್ಪøಶ್ಯತೆಯನ್ನು ಪಾಲಿಸುತ್ತೇವೆ ಎನ್ನುವುದನ್ನು ಸ್ವತಃ ಒಪ್ಪಿರುವ ದಾಖಲೆ ಇದೆ.  ಆಶ್ಚರ್ಯ (ಅಸಹ್ಯ) ಎಂದರೆ ಈ ಅಸ್ಪøಶ್ಯತೆ ಆಚರಿಸುವುದನ್ನು ಒಪ್ಪಿಕೊಂಡ ಜನರಲ್ಲಿ ಶೇಕಡಾ 24% ಪದವೀಧರರು ಎಂಬುದು! ನಾವು ಅಂತರಜಾತಿಯ ಮದುವೆಗಳನ್ನು ಜಾತಿವಿನಾಶದ ಸಾಧನ ಎಂದು ಪರಿಗಣಿಸಿದ್ದೇವೆ. ಆದರೆ ಇದೇ ವರದಿಯ ಪ್ರಕಾರ ಇಪ್ಪಂತ್ತೊಂದನೆಯ ಶತಮಾನದಲ್ಲಿ ನಡೆಯುತ್ತಿರುವ ಜಾತಿ ಮೀರಿದ ವಿವಾಹಗಳ ಸಂಖ್ಯೆ ಶೇಕಡಾ 5%.

2019ರಲ್ಲಿ ಅಕ್ಸಾಫಾಂ ಸಂಸ್ಥೆ ಸಮೀಕ್ಷೆಯೊಂದನ್ನು ನಡೆಸಿ ‘ಯಾರು ನಮ್ಮ ಕಥೆ ಹೇಳುತ್ತಾರೆ’ ಎಂಬ ಶಿರ್ಷಿಕೆಯ ಲೇಖನ ಪ್ರಕಟಿಸಿತ್ತು. ಅದರ ಪ್ರಕಾರ ಭಾರತದ ಎಲ್ಲಾ ಹಿಂದಿ ಸುದ್ದಿವಾಹಿನಿಗಳ ಮುಖ್ಯಸ್ಥರು ಮೇಲ್ಜಾತಿಗೆ ಸೇರಿದವರು. ಕರ್ನಾಟಕದ ಇಂದಿನ ಸುದ್ದಿವಾಹಿನಿಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಕ್ಯಾರವಾನ್ ವರದಿಯ ಪ್ರಕಾರ ಮೀಸಲು ನೀತಿ ಜಾರಿಯಲ್ಲಿ ಇದ್ದಾಗಲೂ ಖರಗ್ಪುರ ಐಐಟಿಯ ಶೇಕಡಾ 96% ಪ್ರಾಧ್ಯಾಪಕರು ಮೇಲ್ಜಾತಿಗೆ ಸೇರಿದವರು! ಹೇಳುತ್ತಾ ಹೋದರೆ ಇಂದಿಗೂ ನಮ್ಮ ನಡುವೆ ಜಾತಿ ಶ್ರೇಣೀಕರಣ ಎಷ್ಟು ದೃಢವಾಗಿದೆ ಎಂಬುದನ್ನು ಸಾಧಿಸುವ ಸಾಕಷ್ಟು ಅಂಕಿ-ಅಂಶಗಳು ಸಿಗುತ್ತವೆ.

ಆ ಕಾರಣಕ್ಕೆ 1975ರಲ್ಲಿಯೇ ಸುಪ್ರಿಂಕೋರ್ಟಿನ ನ್ಯಾಯಾಧೀಶರಾದ ಎನ್.ಎಂಥಾಮಸ್ ಅವರು ‘ಸಂವಿಧಾನದ 16(1)ನೇ ವಿಧಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಜಾತಿ, ಲಿಂಗ ಮತ್ತು ಜನಾಂಗೀಯ ತಾರತಮ್ಯ ಮಾಡಬಾರದು ಎಂದು ಹೇಳಿದ್ದರೂ 16(4) ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡುವ ಅವಕಾಶವನ್ನು ಮಾಡಿಕೊಟ್ಟಿರುವುದು ಅಸಮಾನ ಸಮಾಜದಲ್ಲಿ ನ್ಯಾಯವನ್ನು ಪ್ರತಿಷ್ಟಾಪಿಸುವ ಸಾಧನವಾಗಿ ನೋಡಬೇಕು. ಸಂವಿಧಾನದ 14ನೇ ವಿಧಿಯ ಮೌಲ್ಯವಾದ ಸಮಾನತೆಯ ಹಕ್ಕನ್ನು 16(4) ವಿಧಿ ನ್ಯಾಯಬದ್ಧಗೊಳಿಸಿದೆ’ ಎಂಬ ಅರ್ಥಪೂರ್ಣ ತೀರ್ಪನ್ನು ನೀಡಿದ್ದಾರೆ. ಈ ಎಲ್ಲಾ ಅಂಶಗಳು ನಮ್ಮ ವರ್ತಮಾನದ ಮೀಸಲು ಕುರಿತ ರಾಜಕೀಯ ಹೋರಾಟವನ್ನು ಪ್ರಭಾವಿಸುತ್ತವೆಯೇ ಎಂಬುದು ನಮ್ಮ ನಡುವಿನ ಪ್ರಶ್ನೆ.

*ಲೇಖಕರು ಕಲಬುರಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.