ಮೀಸಲಾತಿಯ ಸುತ್ತ ಬಲಿಷ್ಠ ಜಾತಿಗಳ ಹುತ್ತ!

-ಸಿ.ಎಸ್.ದ್ವಾರಕಾನಾಥ್

ಒಟ್ಟಾರೆ ಕರ್ನಾಟಕದಲ್ಲಿ ಮೀಸಲಾತಿಯ ಅಬ್ಬರ ವಿಪರೀತವಾಗಿದೆ. ಸರ್ಕಾರ ಹೆದರುವಂತೆ ಕಾಣುತ್ತಿರುವುದರಿಂದ ಬಲಿಷ್ಟರೆಲ್ಲಾ ಸರ್ಕಾರವನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಇದರ ಹಿಂದೆ ಒಂದು ದೊಡ್ಡ ರಾಜಕಾರಣವೂ ಇದೆ, ಮೀಸಲಾತಿಯನ್ನು ಗೊಂದಲಗೊಳಿಸುವ ಹುನ್ನಾರಗಳೂ ಇವೆ.

ಮಠಗಳು, ಮಠಾಧಿಪತಿಗಳು ಮೊದಮೊದಲು ಪರೋಕ್ಷವಾಗಿ ರಾಜಕಾರಣ ಮಾಡುತ್ತಾ ಅಧಿಕಾರದಲ್ಲಿ ಮೂಗು ತೂರಿಸುತ್ತಿದ್ದವರು ಈಚೆಗೆ ನೇರ ರಾಜಕಾರಣ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ!

ಇದೀಗ ಮೂರು ಪ್ರಮುಖ ಜಾತಿಗಳು ತಮ್ಮ `ಜಗದ್’ಗುರುಗಳ ನೇತೃತ್ವದಲ್ಲಿ ಮೀಸಲಾತಿಯ ಸಾಂವಿಧಾನಿಕ ನೀತಿಗೇ ಕೈಹಾಕಿವೆ. ಮೊದಲನೆಯದಾಗಿ ಪರಿಶಿಷ್ಟ ಪಂಗಡ (ಎಸ್.ಟಿ) ದಲ್ಲಿರುವ ನಾಯಕ ಸಮಾಜ ತಮ್ಮ ಪ್ರವರ್ಗಕ್ಕಿರುವ ಮೀಸಲಾತಿಯನ್ನು ಶೇ.3 ರಿಂದ ಶೇ.7.5ಕ್ಕೆ ಏರಿಸುವಂತೆ ಒತ್ತಾಯಿಸುತ್ತಿದೆ. ಒಂದು ಕಡೆ ಹಿಂದುಳಿದ ವರ್ಗದ ಪ್ರವರ್ಗ 3(ಎ) ನಲ್ಲಿರುವ ಕುರುಬ ಸಮುದಾಯ ತಮ್ಮನ್ನು ಎಸ್.ಟಿ.ಗೆ ಸೇರಿಸಬೇಕೆಂದು ಒತ್ತಾಯಿಸುತ್ತಿದೆ. ಮತ್ತೊಂದು ಕಡೆ ಪ್ರವರ್ಗ 3(ಬಿ) ನಲ್ಲಿರುವ ವೀರಶೈವ ಪಂಚಮಸಾಲಿ ಸಮುದಾಯ ತಮ್ಮನ್ನು ಪ್ರವರ್ಗ 2(ಎ) ಸೇರಿಸಬೇಕೆಂದು ಪಟ್ಟು ಹಿಡಿದಿದೆ.

ಸಂಖ್ಯಾದೃಷ್ಟಿಯಿಂದಲೂ ರಾಜಕೀಯ ಹಿನ್ನೆಲೆಯಿಂದಲೂ ಮತ್ತು ಮಠಗಳ ಪ್ರಭಾವದಿಂದಲೂ ಈ ಮೇಲಿನ ಮೂರೂ ಸಮುದಾಯಗಳು ಅತ್ಯಂತ ಬಲಿಷ್ಠವಾದವು. ಈ ಕಾರಣಕ್ಕೆ ಇಡೀ ಜನಾದೇಶದಿಂದ ಅಧಿಕಾರಕ್ಕೆ ಬಂದ ರಾಜ್ಯಾಧಿಕಾರ ಸದರಿ ಮಠಗಳ ಪಾದಕ್ಕೆ ಬಿದ್ದು ಹೊರಲಾಡುತ್ತಿದೆ!

ನಾಯಕರ ಡಿಮ್ಯಾಂಡ್

ನಾಯಕ ಸಮುದಾಯ ರಾಜಕೀಯವಾಗಿ ಸಂಘಟಿತ ಸಮುದಾಯ, ಇವರಿಗೆ ಮೂರು ಪರ್ಸೆಂಟ್ ಮೀಸಲಾತಿಯಿದ್ದರೂ ಲಭ್ಯ ಅಂಕಿಅಂಶಗಳ ಪ್ರಕಾರ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ ಮ್ಯಾಸಬ್ಯಾಡ, ಸೋಲಿಗರು, ಯರವರು, ಕಾಡುಕುರುಬ, ಜೇನುಕುರುಬ, ಗೊಂಡರೇ ಮುಂತಾದ ತಬ್ಬಲಿ ಸಮುದಾಯಗಳ ನಡುವೆ ಅತಿ ಹೆಚ್ಚು ಮೀಸಲಾತಿ ಪಡೆದವರು ಊರ ನಾಯಕರು. ಕೇಂದ್ರದ ಪಟ್ಟಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಈಗಾಗಲೇ 7.5% ಮೀಸಲಾತಿ ಇದೆ. ಇದನ್ನು ರಾಜ್ಯಕ್ಕೂ ಅನ್ವಯಿಸಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಈ ಸಮಸ್ಯೆಯ ಕುರಿತು ಕೂಲಂಕಷ ವರದಿ ನೀಡುವಂತೆ ಸದರಿ ಸರ್ಕಾರ ನ್ಯಾ.ನಾಗಮೋಹನದಾಸ್ ನೇತೃತ್ವದ ಸಮಿತಿಯನ್ನು ಮಾಡಿ ಈಗಾಗಲೇ ವರದಿಯನ್ನೂ ತರಿಸಿಕೊಂಡಿದೆ. ಈ ವರದಿಯಂತೆ ನ್ಯಾಯಮೂರ್ತಿಯವರ ಸಮಿತಿ ಪ.ಪಂಗಡಕ್ಕೆ 3% ರಿಂದ 7.5% ಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ವರದಿ ನೀಡಿದೆಯಂತೆ (ಈ ವರದಿ ಇನ್ನೂ ಸಾರ್ವಜನಿಕರಿಗೆ ಲಭ್ಯವಿಲ್ಲ). ಈ ಹಿನ್ನೆಲೆಯಲ್ಲಿ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸುವಂತೆ ನಾಯಕ ಸಮುದಾಯ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದೆ.

ಇಲ್ಲಿ ಪ್ರಶ್ನೆ ಇರುವುದು ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನಂತೆ (ಇಂದ್ರಾ ಸಾಹ್ನಿ vs ಯೂನಿಯನ್ ಆಫ್ ಇಂಡಿಯಾ) ಮೀಸಲಾತಿ ಪ್ರಮಾಣ 50% ಮಿತಿಯನ್ನು ಮೀರುವಂತಿಲ್ಲ. ಈಗಾಗಲೇ ಕರ್ನಾಟಕದಲ್ಲಿ ಪ.ಜಾತಿಗೆ 15%, ಪ.ಪಂ.ಕ್ಕೆ 3%, ಹಿಂದುಳಿದ ವರ್ಗಗಳ ಪ್ರವರ್ಗ ಒಂದಕ್ಕೆ 4%, ಪ್ರವರ್ಗ 2(ಎ)ಗೆ 15%, 2(ಬಿ)ಗೆ 4%, 3(ಎ)ಗೆ 4%, ಮತ್ತು 3(ಬಿ)ಗೆ 5% ನೀಡಲಾಗಿ, ಒಟ್ಟಾರೆ ಮಿತಿ 50% ನೀಡಿಯಾಗಿದೆ. ಹೀಗಿರುವಾಗ ಪ.ಪಂಗಡಕ್ಕೆ 4.5% ಹೆಚ್ಚಳವನ್ನು ಎಲ್ಲಿಂದ, ಯಾರಿಂದ, ಯಾವ ಪಂಗಡ ಅಥವಾ ಪ್ರವರ್ಗ ದಿಂದ ಕಿತ್ತುಕೊಡಲು ಸಾಧ್ಯ?

ಮೀಸಲಾತಿಯ 50% ಮಿತಿಯನ್ನು ಪಕ್ಕದ ತಮಿಳುನಾಡು ಮೀರಿ ಅಲ್ಲಿ 69% ಮೀಸಲಾತಿ ನೀಡಿದೆ ನಿಜ. ತಮಿಳುನಾಡು ಈ ಇಷ್ಯೂವನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ಹಾಕಿಕೊಂಡು ಲೋಕಸಭೆಯಲ್ಲಿ ಅಂಗೀಕಾರ ಪಡೆಯಿತು. ಇದಕ್ಕೆ ತಮಿಳು ನಾಡಿನ ದ್ರಾವಿಡ ರಾಜಕಾರಣದ `ಪವರ್’ ಇತ್ತು! ಆದ್ದರಿಂದ ಇದು ಯಶಸ್ವಿಯಾಯಿತು. ಆದರೆ ಈಗಿನ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕದಿಂದ ಇದು ಸಾಧ್ಯವೆ? ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ ಇರುವುದು ನಿಜ, 26 ಮಂದಿ ಆಡಳಿತ ಪಕ್ಷದ ಲೋಕಸಭಾ ಸದಸ್ಯರಿರುವುದೂ ನಿಜ. ಆದರೆ ನಮ್ಮ ಎಂ.ಪಿ.ಗಳಿಗೆ ಈ ಮಟ್ಟದ ಇಚ್ಛಾಶಕ್ತಿ, ಧೈರ್ಯ, ಕಾಳಜಿಗಳಿವೆಯೇ?

ಆದಿವಾಸಿಗಳಾಗಿ ಕುರುಬರು

ಹಿಂದುಳಿದ ವರ್ಗಗಳ ಪ್ರವರ್ಗ 2(ಎ) ನಲ್ಲಿ 102 ಜಾತಿಗಳಿವೆ. ಕುರುಬ, ಈಡಿಗ, ವಿಶ್ವಕರ್ಮ, ದೇವಾಂಗ, ತಿಗಳ, ಸವಿತ, ನೇಯ್ಗೆ, ಮಡಿವಾಳ, ಕುಂಬಾರ, ಕಮ್ಮಾರ, ಗಾಣಿಗರಂತಹ ಅನೇಕ ಜಾತಿಗಳಿವೆ. ಇವುಗಳೊಂದಿಗೆ ದೊಂಬಿದಾಸ, ಘಿದಾಡಿ, ಗೆಜ್ಜೆಗಾರರಂತಹ ಅತಿ ಸೂಕ್ಷ್ಮ ಜಾತಿಗಳೂ ಇವೆ. ಪ್ರವರ್ಗ 2(ಬಿ)ನಲ್ಲಿ 15% ಮೀಸಲಾತಿ ಇದ್ದು ಕಳೆದ ಮೂರು ದಶಕಗಳಲ್ಲಿ ಈ ಪ್ರವರ್ಗದಲ್ಲಿ ಅತಿಹೆಚ್ಚು ಮೀಸಲಾತಿ ಪಡೆದವರು ಕುರುಬರು ಮತ್ತು ಸ್ವಲ್ಪ ಪ್ರಮಾಣದಲ್ಲಿ ಈಡಿಗರು. ಇದಕ್ಕೆ ಕಾರಣ ಈ ಸಮುದಾಯಗಳು ಸಂಖ್ಯಾಬಲ, ಸಂಘಟನೆ ಮತ್ತು ರಾಜಕೀಯ ಅಧಿಕಾರದ ಹಿನ್ನೆಲೆಯಿಂದಾಗಿ ಹೆಚ್ಚು ಪಾಲು ಪಡೆದಿರಬಹುದು. ಮಿಕ್ಕಂತೆ ಸಣ್ಣಪುಟ್ಟ ಸಮುದಾಯಗಳು ಪಡೆದ ಪಾಲು ನಗಣ್ಯ.

ಇದೀಗ ಕುರುಬ ಸಮುದಾಯ ಪ್ರವರ್ಗ 2(ಎ) ಯಿಂದ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಹೋಗಲು ಹೋರಾಟ ಮಾಡುತ್ತಿದೆ. ತಾವು ಮೂಲತಃ ಬುಡಕಟ್ಟುಗಳು ಎಂಬುದು ಕುರುಬ ಸಮುದಾಯದ ವಾದ.

ಕುರುಬ ಸಮುದಾಯ ಈಗ ತಮ್ಮವರೆಂದು ಅಪ್ಪಿಕೊಳ್ಳಲು ಹೊರಟಿರುವ ಕಾಡುಕುರುಬ, ಜೇನುಕುರುಬ, ಗೊಂಡ, ರಾಜಗೊಂಡ ಎಂಬ ಬುಡಕಟ್ಟು ಸಮುದಾಯಗಳು ಪರಿಶಿಷ್ಟ ಪಂಗಡದಲ್ಲಿ ಈಗಾಗಲೇ ಇವೆ. ಆದರೆ ಈ ಸಮುದಾಯಗಳಿಗೆ ಮೀಸಲಾತಿಯಾಗಲಿ, ಸರ್ಕಾರದ ನೆರವು, ಅನುದಾನ, ಸವಲತ್ತಾಗಲಿ ಏನೂ ತಲುಪಿಲ್ಲ ಎನ್ನುವುದನ್ನು ಇವರ ಬದುಕನ್ನು ಹತ್ತಿರದಿಂದ ನೋಡಿದವರಿಗಷ್ಟೇ ತಿಳಿಯುತ್ತದೆ.

ಕುರುಬರಲ್ಲಿ ಕುರಿಗಾಹಿ ಮತ್ತು ಅಲೆಮಾರಿ ಕುರುಬರೂ ಇದ್ದಾರೆ. ಅಂಕಿ ಅಂಶಗಳ ಪ್ರಕಾರ ಈಗ ಇರುವವರಲ್ಲಿ ಅತಿಹೆಚ್ಚು ಸವಲತ್ತು ಪಡೆದವರು ಊರು ಕುರುಬರು. ಇವರೇ ಕಾಡುಕುರುಬ, ಜೇನುಕುರುಬ ಎಂಬ ಜಾತಿ ಪ್ರಮಾಣಪತ್ರ ಪಡೆದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆದ ಸಹಸ್ರಾರು ಉದಾಹರಣೆಗಳಿವೆ. ಈ ಕುರಿತ ಅನೇಕ ಮೊಕದ್ದಮೆಗಳೂ ಇವೆ.

ಈಗ ಊರ ಕುರುಬರು ಈ ಆದಿವಾಸಿ ಬುಡಕಟ್ಟುಗಳೊಂದಿಗೆ ಬೆರಕೆಯಾದರೆ ಈ ಅಡವಿ ನಿವಾಸಿಗಳ ಅಸ್ಮಿತೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಈಗಾಗಲೇ ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಇವರ ಸ್ಥಿತಿ ಇವರನ್ನು ಊರುಕುರುಬರೊಂದಿಗೆ ಸೇರಿಸಿದಾಗ ಏನಾಗುತ್ತದೆ ಎಂಬುದನ್ನು ಕಲ್ಪಿಸಿಕೊಂಡರೆ ಸತ್ಯದರ್ಶನವಾಗಬಹುದು!

ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬುಡಕಟ್ಟಿನ ಮೂಲಭೂತ ಗುಣಗಳು (ಣಡಿibಚಿಟ ಛಿhಚಿಡಿಚಿಛಿಣeಡಿisಣiಛಿs) ಇರಬೇಕು. ಕುರುಬರ ಕುಲಶಾಸ್ತ್ರೀಯ ಅಧ್ಯಯನದಲ್ಲಿ ಈ ಮಾನದಂಡಗಳು ಬರುತ್ತವೆಯೇ ಎಂಬ ಪ್ರಶ್ನೆಯ ಮೇಲೆ ಇಡೀ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೋ, ಬಿಡಬೇಕೋ ಎಂಬ ಗೊಂದಲಕ್ಕೆ ಸ್ಪಷ್ಟತೆ ಬರುತ್ತದೆ.

ಈಗ ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಕ್ಕೆ ಕೇವಲ ಮೂರು ಪರ್ಸೆಂಟ್ ಮೀಸಲಾತಿ ಇದ್ದು ಇಲ್ಲಿ ಈಗಾಗಲೇ ಸುಮಾರು 53 ಆದಿವಾಸಿ ಸಮುದಾಯಗಳಿವೆ. ಇಲ್ಲಿಗೆ ಕುರುಬ ಸಮುದಾಯ ಬರಲು ಹೋರಾಡುತ್ತಿದೆ. ಇಲ್ಲಿ ಈಗಾಗಲೇ ಇರುವ ನಾಯಕ ಸಮುದಾಯದ ಬೇಡಿಕೆಯಂತೆ ಇಲ್ಲಿರುವ 3% ಅನ್ನು 7.5% ಗೆ ಏರಿಸಿದರೂ ಕುರುಬ ಸಮುದಾಯ ತನಗೆ 2(ಎ) ನಲ್ಲಿ ಈಗಿರುವ 15% ಮೀಸಲಾತಿಯಿಂದ ವಂಚಿತವಾಗಿ, ಪರಿಶಿಷ್ಟ ಪಂಗಡದಲ್ಲಿ 7.5% ಅರ್ಥಾತ್ ಅರ್ಧಕ್ಕೆ ಸಂತೋಷ ಪಡಬೇಕಾಗುತ್ತದೆ! ಅಂತೆಯೇ ಪರಿಶಿಷ್ಟ ಪಂಗಡದಲ್ಲಿರುವ ಕಾಡುಕುರುಬ, ಜೇನುಕುರುಬ, ಗೊಂಡ, ರಾಜಗೊಂಡ ಸಮುದಾಯಗಳಂತಹ ತಬ್ಬಲಿ ಸಮುದಾಯಗಳ ಅನ್ನಕ್ಕೂ ಅಡ್ಡಿಯಾದಂತಾಗುತ್ತದೆ.

ಪಂಚಮಸಾಲಿಗಳ ಘರ್ಜನೆ

ಹಿಂದುಳಿದ ವರ್ಗಗಳ ಪ್ರವರ್ಗ 3(ಬಿ)ನಲ್ಲಿ 4% ಮೀಸಲಾತಿ ಇದ್ದು, ಈ ಪಟ್ಟಿಯಲ್ಲಿ ವೀರಶೈವ ಲಿಂಗಾಯಿತರು ಮತ್ತು ನಲವತ್ತೆರಡು ಉಪಜಾತಿಗಳಿವೆ (ನಂತರವೂ 19 ಉಪಜಾತಿಗಳನ್ನು ಸೇರಿಸಲಾಯಿತು). ಇಷ್ಟೂ ದಿನ ವೀರಶೈವ ಲಿಂಗಾಯತ ಹೆಸರಿನಡಿ ಮೀಸಲಾತಿ ಪಡೆಯುತ್ತಿದ್ದ ವೀರಶೈವ ‘ಪಂಚಮಸಾಲಿ’ ಸಮುದಾಯ ತಮ್ಮನ್ನು ಪ್ರವರ್ಗ 2(ಎ) ನಲ್ಲಿ ಹಾಕಬೇಕೆಂದು ಪಟ್ಟು ಹಿಡಿದು ಸರ್ಕಾರ ಮತ್ತು ಮುಖ್ಯ ಮಂತ್ರಿಗಳ ಮೇಲೆ ಒತ್ತಡ ತರುತ್ತಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆ, ಜಾತಾ, ಸಮಾವೇಶ ಮುಂತಾಗಿ ಚಳವಳಿ ಮಾಡುತ್ತಿದೆ. ಇದರ ಮುಂದಾಳತ್ವವನ್ನು ಪಂಚಮಸಾಲಿ ಮಠದ ಜಯಮೃತ್ಯುಂಜಯ ಮಠಾಧಿಪತಿಗಳು ವಹಿಸಿದ್ದಾರೆ. ಇವರ ಮನವಿಯ ಪ್ರಕಾರ ಪಂಚಮಸಾಲಿ ಸಮುದಾಯದವರು ಮೂಲತಃ ಕೃಷಿಕರಾಗಿದ್ದು ಈ ಸಮುದಾಯದಲ್ಲಿ ಅತ್ಯಂತ ಬಡವರಿದ್ದಾರೆಂಬುದು ಇವರ ವಾದ.

ಮೂಲಭೂತವಾಗಿ ಮೀಸಲಾತಿ ಎನ್ನುವುದು ಬಡತನ ನಿರ್ಮೂಲನ ಕಾರ್ಯಕ್ರಮವಲ್ಲ. ಮೀಸಲಾತಿ ಎಂದರೆ ಸಮಾನ ಪ್ರಾತಿನಿಧ್ಯ ಮತ್ತು ಸಾಮಾಜಿಕ ನ್ಯಾಯ ವಿತರಣೆ ಎಂದರ್ಥ. ಸಂವಿಧಾನದ ಪರಿಚ್ಛೇದ 15(4) ಮತ್ತು 16(4) ರ ಪ್ರಕಾರ ಮೀಸಲಾತಿಗೆ ಪರಿಗಣಿಸಬೇಕಿರುವುದು ಶೈಕ್ಷಣಿಕ ಹಾಗೂ ಸಾಮಾಜಿಕ ಹಿಂದುಳಿದಿರುವಿಕೆಯೇ ಹೊರತು ಆರ್ಥಿಕ ಹಿಂದುಳಿದಿರುವಿಕೆಯಲ್ಲ (ಈಚೆಗೆ ಕೇಂದ್ರ ಸರ್ಕಾರ ಮೇಲ್ಜಾತಿಯವರಿಗೆ 10% ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದು ನಿಜ. ಅಂತೆಯೇ ಈ ವಿಷಯ ಕುರಿತು ಹೂಡಲಾದ ಅನೇಕ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದ ಮುಂದಿವೆ).

ಇನ್ನು ಹಿಂದುಳಿದ ವರ್ಗಗಳ ಪ್ರವರ್ಗ 2(ಎ) ಪಟ್ಟಿಯಲ್ಲಿರುವ ಬಹುತೇಕ ಜಾತಿಗಳು ಕುಶಲಕರ್ಮಿಗಳು ಮತ್ತು ಭೂಹೀನರು. ಈ ಪಟ್ಟಿಗೆ ಯಾವುದೇ ಸಮುದಾಯವನ್ನು ಹೊಸದಾಗಿ ಸೇರಿಸಬೇಕಿದ್ದಲ್ಲಿ ಈ ಮಾನದಂಡ (iಟಿಜiಛಿಚಿಣoಡಿs) ಇರಬೇಕಾಗುತ್ತದೆ. ಇಂದ್ರಾ ಸಾಹ್ನಿ vs ಯೂನಿಯನ್ ಅಪ್ ಇಂಡಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠ ಕೊಟ್ಟಿರುವ ತೀರ್ಪಿನ ಪ್ರಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಮೇಲೆ ಮಾತ್ರ ಯಾವುದೇ ಜಾತಿ, ಸಮುದಾಯವನ್ನು ಹಿಂದುಳಿದ ಪಟ್ಟಿಗೆ ಸೇರಿಸಬಹುದು ಅಥವಾ ತೆಗೆಯಬಹುದು.

ಈ ಕಾರಣಕ್ಕೆ ಯಾವುದೇ ಸಮುದಾಯವನ್ನು ಯಾವುದೇ ಪಟ್ಟಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ತಂದರೂ ಸರ್ಕಾರ ಅದನ್ನು ಆಯೋಗಕ್ಕೆ ರವಾನಿಸವಹುದಷ್ಟೇ ಹೊರತು ಅದರ ಮೇಲೆ ನಿರ್ಣಯ ತಗೊಳ್ಳಲು ಸಾದ್ಯವಿಲ್ಲ. ಹಿಂದುಳಿದ ವರ್ಗಗಳ ಆಯೋಗ ಸದರಿ ಸಮುದಾಯದ ವಿವರ ಕಲೆಹಾಕಿ ಸಾರ್ವಜನಿಕ ವಿಚಾರಣೆಗೆ ಕರೆದು ವಿಶ್ಲೇಷಿಸಿ ಸದರಿ ಸಮುದಾಯವನ್ನು ಯಾವುದೇ ಪಟ್ಟಿಗೆ ಸೇರಿಸಲೂಬಹುದು ಅಥವಾ ಬಿಡಲೂಬಹುದು ಎಂಬುದನ್ನು ಸರ್ಕಾರಕ್ಕೆ ಶಿಫಾರಸ್ಸು ನೀಡಬಹುದಷ್ಟೇ. ಆ ಶಿಫಾರಸ್ಸನ್ನು ಸರ್ಕಾರ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ ಕೈಗೊಳ್ಳಬಹುದಷ್ಟೆ.

ಹೀಗಿರುವಾಗ ಪಂಚಮಸಾಲಿ ಸಮುದಾಯ ಸರ್ಕಾರದ ಮೇಲೆ ಒತ್ತಡ ಹಾಕಿದರೆ ಏನು ಪ್ರಯೋಜನ? ಈಗಾಗಲೇ ಪ್ರವರ್ಗ 2(ಎ) ನಲ್ಲಿರುವ ಕಳೆದ ಮೂರು ದಶಕಗಳಿಂದಲೂ ಒಮ್ಮೆಯೂ ಮೀಸಲಾತಿ ಪಡೆಯದ ಸಂಖ್ಯಾ ಬಲವಿಲ್ಲದ, ಅಸಂಘಟಿತ ಮತ್ತು ರಾಜಕಾರಣದ ಹಿನ್ನೆಲೆಯಿಲ್ಲದ ತಬ್ಬಲಿ ಜಾತಿಗಳು ಇಲ್ಲಿನ ಸನ್ನಿವೇಶ ಕಂಡು ಈಗಾಗಲೇ ಮತ್ತಷ್ಟು ಕಂಗಾಲಾಗಿವೆ! ಯಾವುದೇ ಬಲಿಷ್ಠ ಜಾತಿಗಳು ಬಂದು ತಮ್ಮ ಅನ್ನದ ತಟ್ಟೆಗೆ ಕೈ ಹಾಕುವುದನ್ನು ಈ ಅಸಹಾಯಕ ಸಮುದಾಯಗಳು ಹೇಗೆ ಸಹಿಸಿಕೊಂಡಾವು?

*ಲೇಖಕರು ಮೂಲತಃ ಕೋಲಾರದವರು; ವೃತ್ತಿಯಲ್ಲಿ ವಕೀಲರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ  ಮಾಜಿ ಅಧ್ಯಕ್ಷರು.

3 Responses to " ಮೀಸಲಾತಿಯ ಸುತ್ತ ಬಲಿಷ್ಠ ಜಾತಿಗಳ ಹುತ್ತ!

-ಸಿ.ಎಸ್.ದ್ವಾರಕಾನಾಥ್

"

Leave a Reply

Your email address will not be published.