ಮೀಸಲಾತಿ ಮತ್ತು ಮುಖ್ಯಮಂತ್ರಿ

-ಬಾಲಚಂದ್ರ ಬಿ.ಎನ್.

ಮೀಸಲಾತಿಗಾಗಿ ಹೋರಾಡುವವರ ಹಿಂಡಿನ ನಡುವೆ ತೂರಿಕೊಂಡು ಬಂದ ತಂಡ ಮುಖ್ಯಮಂತ್ರಿಗೆ ವಿಚಿತ್ರ ಮನವಿ ಸಲ್ಲಿಸಿತು. ಆ ಮನವಿ ಕೇಳಿದ ಮುಖ್ಯಮಂತ್ರಿ ಮತ್ತು ಅವರ ಸುಪುತ್ರ ಆಘಾತಕ್ಕೊಳಗಾದರು!

ಮುಖ್ಯಮಂತ್ರಿಗಳು ತೂಕಡಿಸುತ್ತಾ ಕುಳಿತಿರುವಾಗ ಇದ್ದಕ್ಕಿದ್ದಂತೆಯೇ ಸುಪುತ್ರ ಬಂದು ಎಬ್ಬಿಸಿದ. ಕಣ್ಣೊರೆಸಿಕೊಂಡು ಎದ್ದ ಮುಖ್ಯಮಂತ್ರಿಗಳು ಕಣ್ಣ ಮುಂದಿದ್ದ ಫೈಲುಗಳ ರಾಶಿಯತ್ತೊಮ್ಮೆ ದುರಾಶಾಪೂರಿತ ದೃಷ್ಟಿಯನ್ನು ಹಾಯಿಸಿ, ‘ಯಾವ ಏರಿಯಾ ಮಗನೇ?’ ಎಂದು ಪ್ರಶ್ನಿಸಿದರು.

‘ಏರಿಯಾ? ಅಪ್ಪಾ ಇನ್ನೂ ಎಲ್ಲಿದ್ದೀರಾ?’ ಎಂದು ಮಗ ಕರುಣಾಜನಕವಾಗಿ ಪ್ರಶ್ನಿಸಿದ.

ಇತ್ತೀಚಿಗೆ ಅರಳುಮರುಳಾಗಿ ವರ್ತಿಸುತ್ತಿದ್ದ ಮುಖ್ಯಮಂತ್ರಿಗಳೊಮ್ಮೆ ಕೆಕರುಮಕರಾಗಿ ನೋಡಿದರು.

‘ಅಪ್ಪಾ… ಮೀಸಲಾತಿ ಕೇಳಲು…’

ಮೀಸಲಾತಿ ಎಂದೊಡನೆ ಮೈಯೆಲ್ಲಾ ಬಚ್ಚಲು ಮನೆಯ ಜಿರಳೆಗಳು ಹರಿದಾಡಿದಂತಾಗಿ ಮುಖ್ಯಮಂತ್ರಿಗಳು ಸಂಪೂರ್ಣವಾಗಿ ಎಚ್ಚರಗೊಂಡರು.

‘ಮೀಸಲಾತಿ, ಈಗ್ಯಾರು ಬಂದಿದಾರೆ?’

‘ಅಪ್ಪಾ… ಸುಮಾರು ಜನ ಹೊರಗಿದ್ದಾರೆ. ಒಬ್ಬೊಬ್ಬರನ್ನೇ ಒಳಗೆ ಕರೆಯುತ್ತೇನೆ. ನೀವೇ ಮಾತನಾಡಿ, ಮಾತಿನ ಮೇಲೆ ಸ್ವಲ್ಪ ನಿಗಾ ಇರಲಿ. ತುಂಬಾ ಸೂಕ್ಷ್ಮವಾದ ಮ್ಯಾಟರು. ಗೊತ್ತಿದೆ ತಾನೇ?’

ದೀರ್ಘವಾಗಿ ಆಕಳಿಸುತ್ತಾ ಮುಖ್ಯಮಂತ್ರಿಗಳು ತಲೆಯಾಡಿಸಿದರು.

ಬೆಲ್ಲು ಹೊಡೆದು ಒಬ್ಬೊಬ್ಬರನ್ನೇ ಒಳಗೆ ಬಿಡುವಂತೆ ಸುಪುತ್ರ ಆಜ್ಞಾಪಿಸಿದ. ಸಣ್ಣ ದೇಹದ, ದೊಡ್ಡ ಮೀಸೆಯ, ಕೆಂಡಗಣ್ಣಿನ ವ್ಯಕ್ತಿಯೊಬ್ಬ ಒಳಗೆ ಬಂದು ದೀರ್ಘದಂಡ ಸಲಾಮು ಹಾಕಿದ. ಕಣ್ಣಲ್ಲೇ ಕುರ್ಚಿ ತೋರಿಸಿದ ಸಿಎಂ ಸಾಯೇಬರು, ‘ಏನಪ್ಪಾ ನಿನ್ನ ಅಹವಾಲು ಎಂದರು?’

‘ಸೋಮಿ. ನಮ್ದು ತುಂಬಾ ಹಿಂದುಳಿದವರ ಪಂಗಡ…’

‘ಯಾರಪ್ಪಾ ನೀನು? ಯಾವುದು ನಿನ್ನ ಪಂಗಡ?’ ಸಾಹೇಬರು ಉಭಯಕುಶಲೋಪರಿ ವಿಚಾರಿಸಿದರು.

‘ಸಾರ್, ನಮ್ಮದು ಮಹಾಭಾರತದ ಕಾಲದಿಂದಲೂ ಚಾಲ್ತಿಯಲ್ಲಿರುವ ಪಂಗಡ. ಪುರಾಣಾದಿ ಇತಿಹಾಸಗಳಲ್ಲೂ ನಮ್ಮ ಬಗ್ಗೆ ಉಲ್ಲೇಕ ಐತೆ ಅಂತ ಪ್ರಾಚೀನ ಸಾಸ್ತ್ರಜ್ಞರು ಹೇಳವರೆ. ನಮ್ಮ ಕುಲಕಸುಬಿನ ಬಗ್ಗೆ ಮೂರ್ನಾಲ್ಕು ಜನ ಮಾಪ್ರಬಂಧ ಬರ್ದು ಪಿಎಚ್‍ಡಿ ಕೂಡ ಮಾಡಿಯವ್ರೆ’.

ಸೀಯೆಂ ಸಾಯೇಬರ ಕುತೂಹಲ ಗರಿಗೆದರಿತು, ‘ಯಾರು ನೀವು?’

‘ನಮ್ದು ಚೋರ ಕುಲ ಸೋಮಿ. ನಮಗೆ ಜಾತಿ ಭೇದ ಇಲ್ಲ. ಬಡವ ಬಲ್ಲಿದ, ವಿದ್ಯಾವಂತ ಅವಿದ್ಯಾವಂತ, ಗಂಡು ಯೆಣ್ಣು ಯಾವ ಭೇದವೂ ಇಲ್ಲದೆ ಎಲ್ಲರ ಮನೆಗೂ ಕನ್ನ ಆಕೋದೆ ನಮ್ಮ ಕೆಲಸ’.

ಅದಕ್ಕೆ… ಸಿಎಂ ನಿಧಾನವಾಗಿ ತಾಳ್ಮೆ ಕಳೆದುಕೊಳ್ಳುತ್ತಿರುವುದು ಅವರ ದನಿಯಿಂದಲೇ ತಿಳಿದುಬರುವಂತಿತ್ತು. ಸಹನೆಯಿಂದಿರುವಂತೆ ಮಗ ಕಣ್ಸನ್ನೆ ಮಾಡಿದ.

‘ಮತ್ತೇನಿಲ್ಲ ಸೋಮಿ. ನಮ್ಮ ಜೀವಮಾನದ ಅರ್ಧಭಾಗವನ್ನು ಜೈಲಿನಲ್ಲೇ ಕಳೆಯುತ್ತಿರುವ ನಮಗೆ ಮೀಸಲಾತಿ ಕಲ್ಪಿಸಬೇಕು. ನಮ್ಮ ಮಕ್ಕಳಿಗೆ ಉಚಿತ ಸಿಕ್ಷಣ, ಸರ್ಕಾರಿ ಉದ್ಯೋಗ, ರಾಜಕೀಯ ಸ್ಥಾನಮಾನ ಎಲ್ಲವೂ ಸಿಗಬೇಕು’.

‘ಕೊನೆಯದು ನಮಗೇ ಇಲ್ಲ, ನಿಮಗೆಲ್ಲಿಂದ ತರೋಣ’ ಎಂಬ ಮಾತು ಸಿಎಂ ಅಂತರಂಗದಲ್ಲಿ ತೇಲಿಹೋಯ್ತು.

‘ಮತ್ತೆ ನಾವು ಜೈಲಿನಲ್ಲಿರುವಾಗ ನಮ್ಮ ಕುಟುಂಬ ಅನಾಥವಾಗದಂತೆ ಪ್ರತಿತಿಂಗಳೂ ಸಹಾಯಧನ ನೀಡಬೇಕು. ಪ್ರಾಚೀನ ಕುಲಕಸುಬುಗಳ ಪಟ್ಟಿಯಲ್ಲಿ ಚೋರವಿದ್ಯೆಯನ್ನೂ ಸೇರಿಸಿ, ಅದಕ್ಕಾಗಿ ಯೂನಿವರ್ಸಿಟಿ ನಿರ್ಮಿಸಬೇಕು, ಮತ್ತೆ ಮತ್ತೆ…’

‘ಹೇಳಪ್ಪಾ, ಪರವಾಗಿಲ್ಲ…’ ಇಷ್ಟು ಹೊತ್ತಿಗೆ ತಾಳ್ಮೆ ತೆಗೆದುಕೊಂಡಿದ್ದ ಸಿಎಂ ಸಂತೈಸಿದರು.

‘ಮೊದಲು ನಮ್ಮ ಕೆಲಸದಲ್ಲೇ ನಿರತವಾಗಿದ್ದು, ಈಗ ರಾಜಕೀಯ ಸೇರಿರುವ ಹಲವರ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಯುವಂತೆ ಪಠ್ಯಕ್ರಮದಲ್ಲಿ ಸೇರಿಸಬೇಕು. ಮತ್ತೆ ಕೊನೆಯದೊಂದು ಬೇಡಿಕೆ ಸ್ವಾಮಿ. ನಮ್ಮದೊಂದು ಗುರುಪೀಠ ಸ್ಥಾಪಿಸಿ, ಆ ಮಠಕ್ಕೆ ವಾರ್ಷಿಕ ನೂರು ಕೋಟಿ ರೂಪಾಯಿ ದೇಣಿಗೆ ನೀಡಬೇಕು’.

ಮುಖ್ಯಮಂತ್ರಿಗಳು ಚಿಂತಾಕ್ರಾಂತರಾದರು. ಅಷ್ಟರಲ್ಲಿ ಮೇಲೆದ್ದ ಸುಪುತ್ರ ಮಾತನಾಡಿ, ‘ನಿಮ್ಮ ಬೇಡಿಕೆಯನ್ನು ಪರಿಶೀಲಿಸುತ್ತೇವೆ. ಮನವಿ ಪತ್ರ ಕೊಟ್ಟು ಹೋಗಿ’ ಎಂದ. ಆತ ಹೊರಹೋಗುತ್ತಿದ್ದಂತೆಯೇ ಮುಖ್ಯಮಂತ್ರಿಗಳು ತಲೆಯ ಮೇಲೆ ಕೈಹೊತ್ತು ಕುಳಿತರು. ಮನವಿ ಪತ್ರ ಕಸದ ಬುಟ್ಟಿ ಸೇರಿತು.

ಅಷ್ಟರಲ್ಲಿ ಮತ್ತೊಬ್ಬ ಒಳಗೆ ಬಂದ. ತಲೆಯ ತುಂಬಾ ಘಮಘಮ ಎಣ್ಣೆ ಹಚ್ಚಿ, ನೀಟಾಗಿ ತಲೆ ಬಾಚಿಕೊಂಡು ಬೆಳ್ಳಗಿನ ಬಟ್ಟೆ ಹಾಕಿದ್ದ ಆತನನ್ನು ನೋಡಿದ ಸಿಎಂ ಯಾರೋ ನಮ್ಮವನೇ ಇರಬೇಕೆಂದು ಎದ್ದು ನಿಂತು ಕೈಮುಗಿದರು.

‘ಸಾರ್, ನನ್ನ ಹೆಸರು ನಾಜೂಕಯ್ಯ ಅಂತಾ…’

ಯಾಕೋ ಸಿಎಂ ಸಾಹೇಬರಿಗೆ ಅನುಮಾನ ಕಾಡಲು ಶುರುವಾಯ್ತು.

‘ಅಖಿಲ ಕರ್ನಾಟಕ ತಲೆಹಿಡುಕರ ಸಂಘದ ಅಧ್ಯಕ್ಷ’.

ಸಿಎಂ ಅವರ ಅನುಮಾನ ಬಹುತೇಕ ನಿಜವಾದರೂ, ಗೊಂದಲ ಮಾತ್ರ ಮುಂದುವರೆಯಿತು.

‘ಇಲ್ಲಪ್ಪ, ನನಗೇನೂ ಅಂತಾ ಅಭ್ಯಾಸ…’ ಎನ್ನುವಷ್ಟರಲ್ಲಿ ಸುಪುತ್ರ ಅಪ್ಪನ ಮಾತನ್ನು ಅರ್ಧದಲ್ಲೇ ತಡೆದು, ‘ಈಗ ತಾವು ದಯಮಾಡಿಸಿದ ಕಾರಣ?’ ಎಂದು ಪ್ರಶ್ನಿಸಿದ

‘ಸಾರ್, ನಿಮಗ್ಗೊತ್ತಲ್ಲಾ ಸಾರ್, ಜನರ ಸುಖಕ್ಕಾಗಿ ನಮ್ಮ ಮಾನಮರ್ಯಾದೆಯನ್ನೆ ಬಿಟ್ಟಿರುವ ಜನ ನಾವು. ಗಿರಾಕಿಗಳಿಗೆ ಸುಖ, ವೇಶ್ಯೆಯರಿಗೆ ಹಣ ಸಿಕ್ಕಿದರೆ ನಮಗೆ ಸಿಗೋದು ಪೊಲೀಸರ ಲಾಠಿಯೇಟು ಮತ್ತು ಜೈಲುವಾಸದ ಅನುಭವ ಮಾತ್ರ’.

‘ಅದಕ್ಕೇನೀಗ? ನನ್ನೇನು ಮಾಡೂಂತೀರಿ?’

‘ಯಾರ್ಯಾರಿಗೋ ಮೀಸಲಾತಿ ಕೊಡತಾ ಇದೀರಂತೆ. ಪ್ರತಿಯೊಂದು ವೃತ್ತಿಯೂ ಒಂದು ಜಾತಿಯಾಗಿರುವ ಹಾಗೆ ನಮ್ಮದೂ ಒಂದು ನಾಜೂಕು ಪಂಗಡ ಅಂತ ಮಾಡ್ಕೊಂಡಿದ್ದೀವಿ. ನಮಗೂ ಸಹ ಮೀಸಲಾತಿ ಕಲ್ಪಿಸಬೇಕು ಎಂಬುದು ನಮ್ಮ ಹಕ್ಕೊತ್ತಾಯ’.

ಸಿಎಂ ಸಾಯೇಬರ ಕೋಪ ನೆತ್ತಿಗೇರಿದ ಪರಿಣಾಮವಾಗಿ, ನೆತ್ತಿಯಲ್ಲಿದ್ದ ಕೆಲವು ಬಿಳಿ ಕೂದಲು ಸುಟ್ಟು ಕಪ್ಪಗಾಯ್ತು. ಸೂಕ್ಷ್ಮವಾಗಿ ಗಮನಿಸಿದರೆ ಸಾಯೇಬರ ತಲೆಯಿಂದ ಸಣ್ಣಗೆ ಹೊಗೆಯೇಳುತ್ತಿರುವುದು ಕಾಣಬಹುದಾಗಿತ್ತು.

ನಾಜೂಕಯ್ಯ ಮುಂದುವರೆಸಿದ… ‘ಮತಕ್ಕೋಸ್ಕರ ನೀವು ಸಿಕ್ಕಿದೋರಿಗೆಲ್ಲಾ ಮೀಸಲಾತಿ ಕೊಡುತ್ತಿದ್ದೀರಾ ಅಂತ ಗೊತ್ತಾಯಿತು. ನಮ್ಮದೂ ನಿರ್ಲಕ್ಷಿತ ವೃತ್ತಿಯಾಗಿದ್ದರೂ ಸಹ, ರಾಷ್ಟ್ರಾದ್ಯಂತ ನಮ್ಮ ದಂಧೆಯಲ್ಲಿರುವ ಜನಗಳ ದೊಡ್ಡ ಸಂಘವೇ ಇದೆ. ನಮ್ಮ ಅಭಿಸಾರಿಕೆಯರೂ, ಗಿರಾಕಿಗಳೂ ಎಲ್ಲಾ ಸೇರಿದರೆ ಕೋಟ್ಯಂತರ ಜನರಾಗುತ್ತೇವೆ. ನಾವು ಮನಸು ಮಾಡಿದರೆ ಸರ್ಕಾರ ಉರುಳಿಸೋದಕ್ಕೂ ಹಿಂದು ಮುಂದು ನೋಡಲ್ಲ. ನಿಮ್ಮ ಮಂತ್ರಿಗಳೇ ಎಷ್ಟೊಂದು ಜನ ವಿಧಾನಸಭೆಯಲ್ಲಿ ಕೂತು ನಮ್ಮ ಹುಡುಗಿಯರ ಹುಟ್ಟುಡುಗೆಯ ಚಿತ್ರ ನೋಡುತ್ತಿದ್ದುದು ನಮಗೇನು ಗೊತ್ತಿಲ್ವಾ ಸಾರ್?’

ಬೇರೆ ವಿಧಿಯಿಲ್ಲದೇ ಮುಖ್ಯಮಂತ್ರಿಗಳು ಬೀಪಿ ಮಾತ್ರೆ ನುಂಗಿ ನೀರು ಕುಡಿದರು.

‘ನೋಡಿ ಸಾರ್ ಆದಷ್ಟೂ ಬೇಗ, ನಮಗೊಂದು ಮೀಸಲಾತಿ ಕಲ್ಪಿಸಿ ಪುಣ್ಯ ಕಟ್ಟಿಕೋಬೇಕು ತಾವು. ಇಲ್ಲದಿದ್ದರೆ ಗೊತ್ತಲ್ಲಾ, ನಿಮ್ಮ ಶಾಸಕರಲ್ಲಿ ಎಷ್ಟೋ ಮಂದಿ ನಮ್ಮ ರೆಗ್ಯುಲರ್ ಕಸ್ಟಮರ್ಸು…’

ದಡಕ್ಕನೆ ಎದ್ದು ನಿಂತ ಸುಪುತ್ರ ಕೈಜೋಡಿಸಿ, ‘ನೀವೇನೂ ತಲೆ ಕೆಡಿಸಿಕೊಳ್ಳಬೇಡಿ ನಾಜೂಕಯ್ಯನವರೇ, ಆ ಮನವಿ ಪತ್ರ ಇಲ್ಲಿ ಕೊಡಿ, ಮುಂದಿನದು ನಾವು ನೋಡಿಕೊಳ್ತೇವೆ…’ ಎಂದು ನಾಜೂಕಯ್ಯನ ತಲೆಯನ್ನು ನಾಜೂಕಾಗಿ ಸವರಿ ಸಾಗಹಾಕಿದ. ಯಥಾಪ್ರಕಾರ ಮನವಿ ಪತ್ರ ಕಸದ ಬುಟ್ಟಿ ಸೇರಿತು.

ಆಮೇಲೆ ಒಟ್ಟಾಗಿ ಐದಾರು ಜನ ದಾಂಗುಡಿಯಿಟ್ಟರು. ಎಲ್ಲರೂ ಹರಕಲು ಬಟ್ಟೆ ಹಾಕಿಕೊಂಡು, ಕುರುಚಲು ಶೆಣಬು ಗಡ್ಡ ಬೆಳೆಸಿದ್ದರು. ಅವರೇನಾದರೂ ಅಂಗಿ ಬಿಚ್ಚಿ ನಿಂತಿದ್ದರೆ ಅವರ ಮೈಮೇಲಿನ ಮೂಳೆಗಳನ್ನು ಒಂದೂ ಬಿಡದೆ ಎಣಿಸಿಬಿಡಬಹುದಿತ್ತು. ಎಲ್ಲರೂ ಒಳಗೆ ಬಂದವರೇ ದಯನೀಯವಾಗಿ ಕೈಮುಗಿದು ವಿನಮ್ರವಾಗಿ ನಿಂತರು.

‘ಹೇಳ್ರಪ್ಪಾ… ಯಾರು ನೀವೆಲ್ಲಾ? ನಿಮ್ದೇನು ಅಹವಾಲು?’ ಡಯಟ್ ಕೋಕ್ ಕುಡಿಯುತ್ತಾ ಸಿಎಂ ಸಾಯೇಬರು ಪ್ರಶ್ನಿಸಿದರು.

‘ನಾವೆಲ್ಲಾ ಕಾಡುಕುರುಬ, ಜೇನುಕುರುಬ, ಗೊಂಡ, ತಿಗಳ, ಸವಿತ, ಕುಂಬಾರ, ಕಮ್ಮಾರ, ಗಾಣಿಗ, ದೊಂಬಿದಾಸ, ಗೆಜ್ಜೆಗಾರ, ನೇಕಾರ, ಚಮ್ಮಾರ, ಹಕ್ಕಿಪಿಕ್ಕಿ ಜನಾಂಗದ ಪ್ರತಿನಿಧಿಗಳು…’

‘ಗೊತ್ತಾಯ್ತು ಬಿಡಿ. ನಿಮಗೆಲ್ಲಾ ಪ್ರಾತಿನಿಧ್ಯ ಕಲ್ಪಿಸಬೇಕು. ರಾಜಕೀಯವಾಗಿ ಬೆಳೆಯಬೇಕು. ಮುಖ್ಯವಾಹಿನಿಗೆ ಬರಬೇಕು. ಮೀಸಲಾತಿ ಹೆಚ್ಚಿಸಬೇಕು. ಅಷ್ಟೇ ತಾನೇ? ನಾವಲ್ಲದೆ ನಿಮ್ಮ ಬಗ್ಗೆ ಕಾಳಜಿ ವಹಿಸೋರು ಇನ್ಯಾರಿದಾರೆ ರಾಜ್ಯದಲ್ಲಿ. ನಿಮ್ಮ ಅಮೂಲ್ಯ ವೋಟುಗಳನ್ನು ಕೊಟ್ಟು ನಮ್ಮನ್ನು ಗೆಲ್ಲಿಸಿದ್ದಕ್ಕೆ ನಮಗೆ ಜವಾಬ್ದಾರಿಯಿಲ್ಲವೇ? ನಿಮ್ಮ ಮನವಿ ಪತ್ರ ಕೊಟ್ಟು ಹೋಗಿ…’ ಸುಪುತ್ರ ಅಬ್ಬರಿಸಿದ.

‘ಇಲ್ಲ ಸ್ವಾಮಿ, ನಮಗೆ ಮೀಸಲಾತಿ ಬೇಡ ಅಂತ ಹೇಳೋದಿಕ್ಕೆ ಬಂದೆವು’.

ಪಕ್ಕದಲ್ಲೇ ಬಾಂಬು ಸಿಡಿದಂತೆ ಅಪ್ಪ ಮಗ ಬೆಚ್ಚಿಬಿದ್ದರು.

‘ಏನು ಮೀಸಲಾತಿ ಬೇಡ ಅಂತ ಹೇಳೋದಿಕ್ಕೆ ಬಂದಿರಾ? ನಿಮಗೇನು ತಲೆ ಸರಿಯಿಲ್ವಾ?’

ಉಕ್ಕಿ ಬರುತ್ತಿದ್ದ ಆಕ್ರೋಶದೊಡನೆ ಅಪ್ಪಮಗ ಪ್ರಶ್ನಿಸಿದರು.

‘ಹ್ಹೂ ಸ್ವಾಮಿ… ನಾವೆಲ್ಲಾ ಹೊಟ್ಟೆಪಾಡಿಗಾಗಿ ವೃತ್ತಿ ಮಾಡುತ್ತಿದ್ದು, ದೇವರ ದಯದಿಂದ ನಮ್ಮ ರೆಟ್ಟೆ ಬಲದಿಂದಲೇ ಬದುಕುತ್ತಿದ್ದೇವೆ. ನಿಮ್ಮ ದೊಡ್ಡ ಸಾಯೇಬರ ದಯೆಯಿಂದ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕೃಪಾದೃಷ್ಟಿಯಿಂದ ನಮ್ಮ ವೃತ್ತಿಗಳು ಒಂದೊಂದಾಗಿಯೇ ನಶಿಸುತ್ತಿದೆ. ನಮಗೆ ಮೀಸಲಾತಿಯೇನೂ ಬ್ಯಾಡಿ. ನಮ್ಮ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸಿದಿರಿ. ಮುಖ್ಯವಾಹಿನಿಗೆ ತರ್ತೀವಿ, ಮೇಲಕ್ಕೆತ್ತುತ್ತೀವಿ ಅಂತ ಇಷ್ಟು ದಿನ ನೀವು ಹೇಳುತ್ತಾ ಇದ್ದುದ್ದನ್ನ ನಮ್ಮಪ್ಪ, ತಾತ, ಮುತ್ತಾತಂದಿರೂ ನಂಬಿದ್ದೆವು. ನಮ್ಮ ಕಷ್ಟ ನಮ್ಮ ಮಕ್ಕಳಿಗೆ ಬ್ಯಾಡ್ರೀ’.

‘ಮತ್ಯಾಕೆ ಇಲ್ಲಿ ಬಂದಿರಿ?’

‘ಸ್ವಾಮಿ, ಈಗ ಟೀವಿಯಲ್ಲಿ ಪೇಪರಲ್ಲಿ ದಿನ ಬೆಳಗಾದರೆ ನಮಗೆ ಮೀಸಲಾತಿ ಕೊಡಿ, ನಮಗೆ ಮೀಸಲಾತಿ ಕೊಡಿ ಅಂತ ದೊಡ್ಡ ದೊಡ್ಡ ಹೊಟ್ಟೆಯ ಕಾವಿಧಾರಿಗಳೆಲ್ಲಾ ಬೀದಿಗಿಳಿದು ಹೋರಾಟ ಮಾಡುತಿರೋದನ್ನಾ ನೋಡಿ ನಮಗೆ ಕರುಳು ಚುರುಕ್ ಅಂತು. ಒಟ್ಟಾರೆ ಮೀಸಲಾತಿ ಶೇ 50ಕ್ಕಿಂತ ಮೀರಬಾರದೂ ಅಂತ ಕಾನೂನು ಐತಂತೆ. ಇಷ್ಟು ದಿನ ಅಷ್ಟು ದೊಡ್ಡ ದೊಡ್ಡ ಮನುಷ್ಯರು ನಾವು ಪಟ್ಟಷ್ಟೇ ಕಷ್ಟ ಪಟ್ಟಿರೋದನ್ನಾ ನೆನಸಿಕೊಂಡು ಕಣ್ಣಾಗೆ ನೀರೇ ಬಂದುಬಿಡ್ತು’.

‘ಅದಕ್ಕೆ…?

‘ಅದಕ್ಕೆ ಸ್ವಾಮಿ… ನಮಗೂ ಒಂದು ಆತ್ಮ ಗೌರವ ಅಂತ ಇರಾಕಿಲ್ವಾ? ನಾವೂ ಕೂಡ ನಿಮ್ಮಂತೆ ಹೊಟ್ಟೆಗೆ ಅನ್ನ ತಿಂಬೋರೆ ಅಲ್ಲವಾ?’

ಅಪ್ಪಮಗ ಮುಖಮುಖ ನೋಡಿಕೊಂಡರು.

‘…ಹೀಗಾಗಿ, ನಮಗೆ ಕೊಟ್ಟಿರೋ ಮೀಸಲಾತಿಯನ್ನು ವಾಪಸ್ ತಕ್ಕೊಂಬಿಡಿ. ಸ್ವಾಭಿಮಾನದಿಂದ ನಮ್ಮ ನಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ?’

‘ಅಲ್ರಯ್ಯಾ, ಸಂವಿಧಾನ ಕೊಟ್ಟಿರೋ ಹಕ್ಕನ್ನೇ ತಿರಸ್ಕರಿಸುತ್ತಾ ಇದೀರಾ… ಹೀಗಾದರೆ ನಿಮ್ಮ ಮುಂದಿನ ಜನಾಂಗದ ಪಾಡೇನು?’ ಮುಖ್ಯಮಂತ್ರಿಗಳು ಬಿಳಿಕೂದಲು ಸವರಿಕೊಳ್ಳುತ್ತಾ ಕೇಳಿದರು.

‘ನೀವು ಎಲ್ಲರ ಮೂಗಿಗೆ ತುಪ್ಪ ಸವರುತ್ತಾ ಇರೋದನ್ನ ನೋಡಿದರೆ ನಮ್ಮ ಮುಂದಿನ ಜನಾಂಗ ಇರೋದೆ ಡೌಟು ಸ್ವಾಮಿ…’ ಕುರುಚಲ ಗಡ್ಡವೊಂದು ಸವಿನಯವಾಗಿ ಕೈಮುಗಿದು ಮನವಿ ಪತ್ರ ನೀಡಿ ಗುಂಪಿನೊಡನೆ ಹೊರಹೋಯಿತು.

ಉಬ್ಬರಿಸಿ ನರಳುತ್ತಿದ್ದ ಕಸದ ಬುಟ್ಟಿ ನಗು ತಾಳಲಾರದೇ ಹೊಟ್ಟೆ ಬಿರಿದ ಪರಿಣಾಮ ಮನವಿ ಪತ್ರಗಳು ಹೊರಚೆಲ್ಲಿದವು.

Leave a Reply

Your email address will not be published.