`ಮೀ ಟೂ’ ಪ್ರಕರಣ ಮಹಿಳೆಯ ಘನತೆ ಎತ್ತಿಹಿಡಿದ ನ್ಯಾಯಾಲಯ

-ಮಾಲತಿ ಭಟ್

`ಮೀ ಟೂ’ ಪ್ರಕರಣದಲ್ಲಿ ತಮ್ಮನ್ನು ಹೆಸರಿಸಿದ್ದಕ್ಕಾಗಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಪ್ರಿಯಾ ಅವರನ್ನು ಖುಲಾಸೆಗೊಳಿಸಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮಹಿಳಾ ಸಬಲೀಕರಣಕ್ಕೆ, ಮಹಿಳಾ ಚಳವಳಿಗೆ ದೊಡ್ಡ ಶಕ್ತಿ ಒದಗಿಸಿವೆ.

ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ವರ್ಸಸ್ ಪತ್ರಕರ್ತೆ ಪ್ರಿಯಾ ರಮಣಿ ಪ್ರಕರಣದಲ್ಲಿ ಫೆಬ್ರುವರಿ 17ರಂದು ದೆಹಲಿಯ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ನೀಡಿದ ಆದೇಶ, ಮಾರನೇ ದಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಲೀಡ್ ಸುದ್ದಿಯಾಗಿ ಪ್ರಕಟಗೊಂಡಿತು. ಟ್ವಿಟರ್, ಫೇಸ್‍ಬುಕ್‍ನಂತಹ ಸೋಷಿಯಲ್ ಮೀಡಿಯಾಗಳಲ್ಲಿ ಸಾವಿರಾರು ಹೇಳಿಕೆ, ಪ್ರತಿಹೇಳಿಕೆ ಹರಿದಾಡಿದವು. ಅದೇ ದಿನ ರಾತ್ರಿ ರಾಷ್ಟ್ರೀಯ ಚಾನೆಲ್‍ಗಳು ಪ್ರೈಂಟೈಮ್‍ನಲ್ಲಿ ಈ ಪ್ರಕರಣದ ಬಗ್ಗೆ ಚರ್ಚೆ ನಡೆಸಿದವು.

ಎರಡು ವರ್ಷಗಳ ಕಾಲ ನಡೆದ ಮಾನನಷ್ಟ ಪ್ರಕರಣದಲ್ಲಿ ಪ್ರಿಯಾ ರಮಣಿ ಅವರನ್ನು ಖುಲಾಸೆಗೊಳಿಸುವಾಗ ನ್ಯಾಯಾಧೀಶರು ವ್ಯಕ್ತಪಡಿಸಿರುವ ಅಭಿಪ್ರಾಯ ಹಾಗೂ ರಮಣಿ ವಿರುದ್ಧ ಪ್ರಕರಣ ದಾಖಲಾದ ಸಂದರ್ಭ ಮತ್ತು ಹಿನ್ನೆಲೆ ಈ ಪ್ರಕರಣವನ್ನು ಇತ್ತೀಚಿನ ವರ್ಷಗಳಲ್ಲಿ ಮಹಿಳೆಯ ಖಾಸಗಿತನ, ಘನತೆ ಹಾಗೂ ಹಕ್ಕಿನ ವಿಚಾರಕ್ಕೆ ಸಂಬಂಧಿಸಿದ ಮಹತ್ವದ ಮೈಲುಗಲ್ಲಾಗಿಸಿದೆ. 

ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುವಾಗ ಎಂ.ಜೆ.ಅಕ್ಬರ್ ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಬಿಜೆಪಿಯ ವಕ್ತಾರರಾಗಿಯೂ ಕೆಲಸ ಮಾಡಿದ್ದ ಅವರು ಕೇಂದ್ರ ಮಂತ್ರಿ ಮಂಡಲದ ಬುದ್ಧಿಜೀವಿ ಮುಖಗಳ ಪೈಕಿ ಒಬ್ಬರಾಗಿದ್ದರು. ಹಲವು ಪತ್ರಿಕೆಗಳ ಸಂಪಾದಕರಾಗಿ ಮಿಂಚಿ, ದೇಶದ ಪತ್ರಿಕೋದ್ಯಮ ಕ್ಷೇತ್ರದಲ್ಲಿ `ಸ್ಟಾರ್’ ಎನಿಸಿಕೊಂಡವರು. ಮೊದಲ ಪ್ರಧಾನಿ ನೆಹರೂ ಬಗ್ಗೆ, ಕಾಶ್ಮೀರದ ಬಗ್ಗೆ, ಭಾರತ-ಪಾಕಿಸ್ತಾನದ ಸಂಬಂಧದ ಬಗ್ಗೆ, ಇಸ್ಲಾಂ ಬಗ್ಗೆ ಪುಸ್ತಕಗಳನ್ನು ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿದ್ದವರು. ಅದ್ಭುತವಾದ ಭಾಷಾ ಪ್ರೌಢಿಮೆ, ವ್ಯಂಗ್ಯ ಮತ್ತು ಒಳಾರ್ಥಗಳಿಂದ ಕೂಡಿದ ಅವರ ರಾಜಕೀಯ ವಿಶ್ಲೇಷಣೆಗಳನ್ನು ಜನ ಕಾದು ಓದುತ್ತಿದ್ದರು. ಅಕ್ಬರ್ ಅವರ ಪ್ರಭಾವಳಿಗೆ ಹೋಲಿಸಿದಲ್ಲಿ ಪ್ರಿಯಾ ರಮಣಿ ಚಿಕ್ಕ ಪತ್ರಕರ್ತೆ. 90ರ ದಶಕದಲ್ಲಿ ಅಕ್ಬರ್ ಅವರು `ಏಷ್ಯನ್ ಏಜ್’ ಪತ್ರಿಕೆ ಹುಟ್ಟುಹಾಕಿದಾಗ ಅಲ್ಲಿಗೆ ಕೆಲಸಕ್ಕೆ ಸೇರಿಕೊಂಡು, ಆನಂತರ ಪತ್ರಿಕೋದ್ಯಮದಲ್ಲಿ ಬೆಳೆದವರು. `ಮೀ ಟೂ’ ಅಭಿಯಾನ ಕಾವು ಪಡೆದಾಗ, `1993ರಲ್ಲಿ ತಾವು ಕಿರಿಯ ಪತ್ರಕರ್ತೆಯಾಗಿದ್ದಾಗ ಸಂಪಾದಕರಾಗಿದ್ದ ಅಕ್ಬರ್ ಲೈಂಗಿಕವಾಗಿ ಶೋಷಣೆ ಮಾಡಿದ್ದರು’ ಎಂದು ಆರೋಪಿಸಿದ್ದರು.

ವ್ಯಾಪಿಸಿದ `ಮೀ ಟೂ’ ಘಾಟು

ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠರಾಗಿರುವ ಪುರುಷರು ತಮ್ಮ ಜೊತೆ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದರ ವಿರುದ್ಧ 2017ರ ಅಕ್ಟೋಬರ್‍ನಲ್ಲಿ ಅಮೆರಿಕದಲ್ಲಿ ಆರಂಭವಾದ `ಮೀ ಟೂ’ ಅಭಿಯಾನದ ಘಾಟು, ಅಂತರ್ಜಾಲ ಕ್ರಾಂತಿಯ ಪರಿಣಾಮ ಎಲ್ಲ ದೇಶಗಳಿಗೂ ಬಹುಬೇಗ ವ್ಯಾಪಿಸಿತು. ಹೋರಾಟಗಾರ್ತಿ ತರಾನಾ ಬರ್ಕ್ 2006ರಲ್ಲಿ ಈ ಚಳವಳಿ ಆರಂಭಿಸಿದ್ದರೂ 2017ರಲ್ಲಿ ಹಾಲಿವುಡ್ ನಟಿ ಅಲಿಸ್ಸಾ ಮಿಲಾನೊ, ಪ್ರಭಾವಿ ನಿರ್ದೇಶಕ ಹಾರ್ವೆ ವಿನ್‍ಸ್ಟೈನ್ ವಿರುದ್ಧ ಮಾಡಿದ ಆರೋಪ, ಅಭಿಯಾನಕ್ಕೆ ಬಲ ಒದಗಿಸಿತು. ಲೈಂಗಿಕ ಕಿರುಕುಳದ ಸರಣಿ ಆರೋಪ ಎದುರಿಸಿದ ವಿನ್‍ಸ್ಟೈನ್ ಈಗ ಕಂಬಿ ಎಣಿಸುತ್ತಿದ್ದಾರೆ.

ಭಾರತದಲ್ಲಿ ಅದರ ಪರಿಣಾಮ ಮೊದಲು ಕಂಡಿದ್ದು ಮನರಂಜನಾ ಕ್ಷೇತ್ರದಲ್ಲಿ. ವಾತ್ಸಲ್ಯಮಯಿ ಅಪ್ಪನ ಪಾತ್ರದಲ್ಲಿ ಆಪ್ತವಾಗಿ ಅಭಿನಯಿಸುತ್ತಿದ್ದ ಅಲೋಕ್‍ನಾಥ್ ವಿರುದ್ಧ ಲೈಂಗಿಕ ಕಿರುಕುಳುದ ಆರೋಪ ಕೇಳಿಬಂದಾಗ ನಂಬುವುದು ಅಸಾಧ್ಯ ಎನಿಸಿತ್ತು. ಖಡಕ್ ಸಂಭಾಷಣೆ, ಉರಿಯುವ ಕಣ್ಣುಗಳಿಂದಾಗಿ ದಮನಿತರ ದನಿಯಂತಿದ್ದ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಈ ಆರೋಪ ಮಾಡಿದಾಗಲೂ ಚಿತ್ರರಂಗ, ಸಿನಿಪ್ರೇಮಿಗಳು ಹುಬ್ಬೇರಿಸಿದ್ದರು. ಕನ್ನಡದ ಪತ್ರಿಭಾವಂತ ನಟಿ ಶ್ರುತಿ ಹರಿಹರನ್ ಅವರು `ಬಲಿಷ್ಠ’ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಶೋಷಣೆಯ ಆರೋಪ ಮಾಡಿದಾಗ, ಆಕೆಯ ವಿರುದ್ಧದೇ ಬಹಿಷ್ಕಾರ ಹಾಕಬೇಕು ಎನ್ನುವವರೆಗೆ ಚಿತ್ರೋದ್ಯಮ ಬಂದುನಿಂತಿತು. ನಾನಾ ಪಾಟೇಕರ್ ವಿರುದ್ಧ ತನುಶ್ರೀ ದಾಖಲಿಸಿದ ಪ್ರಕರಣ ಸಾಕ್ಷ್ಯಾಧಾರಗಳ ಕೊರತೆಯಿಂದ ಬಿದ್ದುಹೋಯಿತು.

ಬಲಾಢ್ಯ ಪುರುಷರ ದಾಷ್ಟ್ರ್ಯ

ಘಟನೆ ನಡೆದಾಗ ಬಾಯಿಬಿಡದವರು ವರ್ಷಗಳ ನಂತರ ಅದನ್ನು ಬಹಿರಂಗಪಡಿಸಿದ್ದೇಕೆ..? `ಖ್ಯಾತನಾಮರ ಪ್ರಸಿದ್ಧಿಗೆ ಮಸಿ ಬಳಿಯುವ ಹುನ್ನಾರ ಇದು. ಅವರಿಂದ ಹಣ ಕೀಳಲು, ದಿಢೀರ್ ಖ್ಯಾತಿ ಗಳಿಸಲು ಹೆಣ್ಣುಮಕ್ಕಳು ಮಾಡಿದ ಸಂಚು ಇದು’ ಎಂದು ಆರೋಪ ಮಾಡಿದವರನ್ನೇ ಕಂಗೆಡಿಸುವ ಅಭಿಪ್ರಾಯಗಳು ಕೇಳಿಬಂದಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಈ ಹೆಣ್ಣುಮಕ್ಕಳನ್ನೇ `ಟ್ರೋಲ್’ ಮಾಡಲಾಯಿತು. ಇಂತಹ ಪ್ರತಿಕ್ರಿಯೆಗಳು ಪುರುಷಪ್ರಧಾನ ಮೌಲ್ಯವನ್ನು ಎತ್ತಿಹಿಡಿದರೆ, ಎಂ.ಜೆ.ಅಕ್ಬರ್ ಇನ್ನೂ ಮುಂದೆ ಹೋದರು. 2018ರ ಅಕ್ಟೋಬರ್ 14ರಂದು ಪ್ರಿಯಾ ರಮಣಿ ಅವರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದಾಗ, ಅಕ್ಬರ್ ಮೊದಲು ತಮ್ಮನ್ನು ಸಮರ್ಥಿಕೊಳ್ಳುವ ಮಾತನಾಡಿದರು. ಈ ಆರೋಪ ಆಧಾರರಹಿತ ಮತ್ತು ತಮ್ಮ ಘನತೆಗೆ ಮಸಿ ಬಳಿಯುವಂತಹದ್ದು ಎನ್ನುತ್ತ ಪ್ರಿಯಾ ವಿರುದ್ಧದೇ ದೆಹಲಿ ಕೋರ್ಟ್‍ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಈ ಪ್ರಕರಣ ದಾಖಲಿಸುವಾಗ ಅಕ್ಬರ್ ಅವರಲ್ಲಿ ಒಂದು ರೀತಿಯ ದಾಷ್ಟ್ರ್ಯವಿತ್ತು. ವಕೀಲರ ಹಿಂಡು ಕಟ್ಟಿಕೊಂಡು ನ್ಯಾಯಾಲಯಕ್ಕೆ ಬರುತ್ತಿದ್ದರು. 25 ವರ್ಷಗಳ ಹಿಂದೆ ನಡೆದ ಪ್ರಕರಣವಿದು. ಆಗಲೇ ದೂರು ಸಲ್ಲಿಸಬೇಕಿತ್ತು. ಇದು ತಮ್ಮ ಕಕ್ಷಿದಾರರ ಕೀರ್ತಿಗೆ ಮಸಿ ಬಳಿಯಲು ಮಾಡಿದ ಆರೋಪ ಎಂದು ಅವರ ಪರ ವಕೀಲರು ವಾದಿಸಿದ್ದರು.

ಕುರಿಯನ್ನು ಹೊಂಚು ಹಾಕಿ ತಿನ್ನುವ ತೋಳವೇ ಕುರಿಯಿಂದ ತನಗೆ ಅನ್ಯಾಯವಾಯಿತು ಎಂದು ಹೇಳುವಂತಹ ಸನ್ನಿವೇಶ ಇದು. ಆದರೆ, ಪ್ರಿಯಾ ರಮಣಿಯ ಹಲವು ಸಹೋದ್ಯೋಗಿಗಳು ಅವರ ಪರ ನಿಂತರು. ಅಕ್ಬರ್ ಕೆಳಗೆ ಕೆಲಸ ಮಾಡಿದ 20ಕ್ಕೂ ಹೆಚ್ಚು ಪತ್ರಕರ್ತೆಯರು ತಮಗೂ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದರು. ಎಲ್ಲರೂ ಸಹಿ ಮಾಡಿದ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ರಾಷ್ಟ್ರಮಟ್ಟದಲ್ಲಿ ಈ ಪ್ರಕರಣ ದೊಡ್ಡ ಚರ್ಚೆ ಹುಟ್ಟುಹಾಕಿದಾಗ ಅಕ್ಟೋಬರ್ 17ರಂದು ಅಕ್ಬರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 

ಮಹಿಳೆಯ ಬದುಕಿನ ಸ್ವಾತಂತ್ರ್ಯ

ಅಂತಿಮವಾಗಿ ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ರವೀಂದ್ರಕುಮಾರ್ ಪಾಂಡೆ ಅವರು ಅಕ್ಬರ್ ಮಾಡಿದ್ದ ಎಲ್ಲ ಆರೋಪಗಳನ್ನು ನಿರಾಕರಿಸಿ ಪ್ರಿಯಾ ಅವರ ಹಕ್ಕನ್ನು ಎತ್ತಿಹಿಡಿದಿದ್ದಾರೆ. `ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಧ್ವನಿ ಎತ್ತಿದಾಗ ಮಾನನಷ್ಟದ ಕಾರಣ ಹೇಳಿ ಆಕೆಯನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿಲ್ಲ. ಅಲ್ಲದೇ ಮಹಿಳೆಯರ ಜೀವಿಸುವ ಹಾಗೂ ಘನತೆಯ ಹಕ್ಕನ್ನು ಬಿಟ್ಟುಕೊಟ್ಟು ವ್ಯಕ್ತಿಯೊಬ್ಬರ ಕೀರ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ. ಈ ಪ್ರಶ್ನೆ ಎದುರಾದಾಗ ಮಹಿಳೆಯ ಬದುಕಿನ ಸ್ವಾತಂತ್ರ್ಯ ಮಹತ್ವದ್ದು ಎಂದು ನ್ಯಾಯಾಲಯ ಪರಿಗಣಿಸುತ್ತದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಅದು ಅವರ ಘನತೆ ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ದೌರ್ಜನ್ಯ ಎಸಗಿದವರ ಮೇಲೆ ದೂರು ಸಲ್ಲಿಸಲು ಅವರಿಗೆ ಹಕ್ಕಿದೆ. ಎಷ್ಟೇ ವರ್ಷ ಕಳೆದ ಮೇಲೂ ಯಾವುದೇ ವೇದಿಕೆಯ ಮೇಲೂ ಆ ವಿಚಾರ ಎತ್ತಬಹುದು. ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ರಚನೆಯಾದ ಈ ದೇಶದಲ್ಲಿ ಹೆಣ್ಣಿನ ಮೇಲೆ ಇಂತಹ ದೌರ್ಜನ್ಯ ನಡೆಯುವುದು ನಾಚಿಕೆಗೇಡು’ ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರ್ಕಾರ ಮತ್ತು ಸುಬ್ರಮಣಿಯನ್ ಸ್ವಾಮಿ ಪ್ರಕರಣದಲ್ಲಿ 2016ರಲ್ಲಿ ಸುಪ್ರೀಂಕೋರ್ಟ್, ‘ವ್ಯಕ್ತಿಯು ಜೀವಿತಾವಧಿಯಲ್ಲಿ ಸಂಪಾದಿಸುವ ಕೀರ್ತಿ ಸಂವಿಧಾನದ 21ನೇ ವಿಧಿಯ ಪ್ರಕಾರ ಆತನ ಜೀವಿಸುವ ಹಕ್ಕಾಗಿರುತ್ತದೆ’ ಎಂದು ಹೇಳಿತ್ತು. ಆದರೆ, ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಈ ಹಕ್ಕನ್ನು ಗುರಾಣಿಯಂತೆ ಬಳಸಿಕೊಳ್ಳಲಾಗದು ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.

ಇದು ಕೆಳ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯ. ಮೇಲಿನ ನ್ಯಾಯಾಲಯಗಳು ಈ ಆದೇಶವನ್ನು ತಳ್ಳಿಹಾಕಿಬಿಡಬಹುದು. ಆದರೆ, ಮಹಿಳಾ ಸಮಾನತೆ, ಮಹಿಳಾ ಸುರಕ್ಷತೆ, ಮಹಿಳಾ ಹಕ್ಕುಗಳ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ತಲೆತಗ್ಗಿಸುವ ಸ್ಥಾನದಲ್ಲಿ ನಿಂತಿರುವ ಭಾರತದಲ್ಲಿ ಇಂತಹ ಆದೇಶ, ಅಭಿಪ್ರಾಯಗಳು ಮಹಿಳಾ ಸಬಲೀಕರಣಕ್ಕೆ, ಮಹಿಳಾ ಚಳವಳಿಗೆ ಟಾನಿಕ್‍ನಂತೆ ಕೆಲಸ ಮಾಡುತ್ತವೆ. ತನ್ನ ಸ್ಥಾನಮಾನ, ಪ್ರಭಾವದ ಕಾರಣಕ್ಕೆ ಬಲಾಢ್ಯ ಪುರುಷನೊಬ್ಬ ತನಗಿಂತ ಆರ್ಥಿಕವಾಗಿ, ಸಾಮಾಜಿಕವಾಗಿ ಕೆಳಮಟ್ಟದಲ್ಲಿ ಇರುವ ಮಹಿಳೆಯನ್ನು ಬೇಕಾದಂತೆ ನಡೆಸಿಕೊಳ್ಳಬಹುದು ಎಂಬ ಭ್ರಮೆಯನ್ನು ಸಹ ಇಂತಹ ಆದೇಶಗಳು ನಿವಾರಿಸುತ್ತವೆ.

1829ರ ಸತಿ ನಿಷೇಧ ಕಾನೂನು, 1929ರ ಬಾಲ್ಯ ವಿವಾಹ ನಿರ್ಬಂಧ ಕಾನೂನು, ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳದ ವಿರುದ್ಧ ರಕ್ಷಣೆ ನೀಡುವ 1997ರ ವಿಶಾಖಾ ಮಾರ್ಗಸೂಚಿ ಹಾಗೂ ಅದನ್ನು ಆಧರಿಸಿದ 2013ರ ಕಾಯ್ದೆ, 2012ರ ನಿರ್ಭಯಾ ಪ್ರಕರಣದ ನಂತರ ಬದಲಾದ `ಅತ್ಯಾಚಾರ ವ್ಯಾಖ್ಯೆ’ ಇವುಗಳ ಸಾಲಿನಲ್ಲಿಯೇ ನಿಲ್ಲಬಹುದಾದ ಮಹತ್ವದ ಆದೇಶವನ್ನು ದೆಹಲಿ ಕೋರ್ಟ್ ನೀಡಿದೆ. `ಮೀ ಟೂ’ ಅಭಿಯಾನಕ್ಕೂ ಬಲ ತುಂಬಿದೆ. ಈ ಕಾರಣಕ್ಕಾಗಿ ಎಂ.ಜೆ.ಅಕ್ಬರ್ ಅವರಂತಹ ಬಲಿಷ್ಠರ ವಿರುದ್ಧ ಹಲ್ಲುಮುಡಿ ಕಚ್ಚಿ ಕಾದಾಡಿದ ಪ್ರಿಯಾ ರಮಣಿ ಮತ್ತು ಆಕೆಯ ಗೆಳತಿಯರನ್ನು ನಾವು ಅಭಿನಂದಿಸಬೇಕಿದೆ.

*ಲೇಖಕರು ಹಿರಿಯ ಪತ್ರಕರ್ತೆ; ಪ್ರಜಾವಾಣಿಯ ಮಾಜಿ ಸುದ್ದಿ ಸಂಪಾದಕ ರು, ಪ್ರಾಫಿಟ್ ಪ್ಲಸ್ ಪತ್ರಿಕೆಯ ಸಂಪಾದಕೀಯ ಸಲಹೆಗಾರರು.

One Response to " `ಮೀ ಟೂ’ ಪ್ರಕರಣ ಮಹಿಳೆಯ ಘನತೆ ಎತ್ತಿಹಿಡಿದ ನ್ಯಾಯಾಲಯ

-ಮಾಲತಿ ಭಟ್

"

Leave a Reply

Your email address will not be published.