ಮುಂಬರುವುದು ಪರಿವರ್ತನೆಯ ಪರ್ವಕಾಲ

ಇತ್ತೀಚೆಗೆ ನಡೆದ ಸರ್ವೇಕ್ಷಣೆಯೊಂದರಲ್ಲಿ ‘ಕೊರೊನೋತ್ತರ ಬದುಕು ಸುಧಾರಿಸಬಲ್ಲದೇ’ ಎಂಬ ಪ್ರಶ್ನೆಗೆ ಸುಮಾರು 83% ಜನರು ‘ಹೌದು’ ಎಂದು ಉತ್ತರಿಸಿದ್ದಾರೆ!

ಕೊರೊನಾ ತರಹದ ಕರಾಳ ದಿನಗಳು ಪ್ರತಿ ನೂರು ವರ್ಷಕ್ಕೊಮ್ಮೆ ಮರುಕಳಿಸುತ್ತಿವೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 1720ರಲ್ಲಿ ಜರುಗಿದ ಸಿಡುಬು ರೋಗ, 1820ರಲ್ಲಿ ಬಂದು ಹೋದ ವಾಂತಿ-ಬೇಧಿ ರೋಗ (ಮಾರಿ ರೋಗವೆಂತಲೂ ಕರೆಯುತ್ತಾರೆ), 1920ರಲ್ಲಿ ಸಂಭವಿಸಿದ ಸ್ಪಾನಿಷ್ ಫ್ಲೂ, ಈಗ 2020ರಲ್ಲಿ ಒಮ್ಮಲೇ ಅಪ್ಪಳಿಸಿರುವ ಕೊರೊನಾ ಪಿಡುಗು.

ಇಂಥ ಸಂಕಷ್ಟ ಕಾಲ ನಿಭಾಯಿಸಲು ಸಾಕಷ್ಟು ಪ್ರಮಾಣದಲ್ಲಿ ಸಂಪನ್ಮೂಲಗಳು ಬೇಕಾಗುತ್ತವೆ. ಸರ್ಕಾರಗಳು ಮತ್ತು ಜನಸಾಮಾನ್ಯರು ತಮ್ಮ ತಲೆಯ ಮೇಲೆ- ಮಾನಸಿಕ, ಆರ್ಥಿಕ, ಸಾಮಾಜಿಕ ಮತ್ತು ನೈತಿಕವಾದ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದಷ್ಟೇ ಅಲ್ಲ ಅದನ್ನು ನಾಜೂಕಾಗಿ ನಿರ್ವಹಿಸಬೇಕಾಗುತ್ತದೆ.

ಕೊರೊನಾ ಪರಿಸ್ಥಿತಿಗೆ ಪ್ರತಿಯೊಂದು ವ್ಯವಸ್ಥೆಯೂ ಅಲ್ಲೋಲಕಲ್ಲೋಲವಾಗಿದ್ದಂತು ಸತ್ಯ. ಲಾಕ್‌ಡೌನ್ ಶುರುವಾದಾಗಿನಿಂದ ಜನರು ಮನೆಯೊಳಗೇ ಇರಬೇಕಾದದ್ದು ಅತ್ಯವಶ್ಯವಾಯಿತು. ಅಂಗಡಿ ಮುಂಗಟ್ಟುಗಳು, ದೊಡ್ಡ ದೊಡ್ಡ ವ್ಯಾಪಾರ- ವಾಣಿಜ್ಯ ಮಳಿಗೆಗಳು, ಶೈಕ್ಷಣಿಕ ಸಂಸ್ಥೆಗಳು, ಕಚೇರಿಗಳು, ಪ್ರವಾಸಿ ಸ್ಥಾನಗಳು, ದೇವಾಲಯಗಳು, ಸಾರಿಗೆ ಮಾರ್ಗಗಳು, ಒಕ್ಕಲುತನ ಚಟುವಟಿಕೆಗಳು, ಹೋಟೆಲ್‌ಗಳು, ಮತ್ತು ಕೈಗಾರಿಕೆ ಕೇಂದ್ರಗಳು ಮುಚ್ಚಿದವು.

ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದರೂ, ಪ್ರಜೆಗಳ ಪ್ರಾಣ ಅತ್ಯಂತ ಅಮೂಲ್ಯವಾದುದು. ಈ ದೆಶೆಯಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ “ಮನೆಯಿಂದಲೇ ಕೆಲಸಮಾಡುವ” (Woಡಿಞ ಈಡಿom ಊome) ವ್ಯವಸ್ಥೆ ಜಾರಿಗೆ ತರಲಾಯಿತು. ಕೊರೊನವನ್ನು ಆರಂಭ ಹಂತದಲ್ಲೇ ಮಟ್ಟ ಹಾಕುವಲ್ಲಿ ‘ದೈಹಿಕ ಅಂತರ’ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಕೆಲಸವಾಗಿದ್ದರಿಂದ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ “ಮನೆಯಿಂದಲೇ ಕೆಲಸ ಮಾಡುವ” ಅವಕಾಶವನ್ನು ಕೊಟ್ಟವು.

ಒಟ್ಟಿನಲ್ಲಿ ಬವಣೆ ಹಾಗು ಭರವಸೆಗಳಲ್ಲಿ ಬದುಕು ಬೆಸೆದುಹೋಗಿದೆ. ಕೆಲಸವಿಲ್ಲದ ದಿನಗೂಲಿ ಗಳಿಕೆದಾರರು ಬೆಂದು ಬಳಲಿದ್ದಾರೆ. ಉದ್ದಿಮೆಯಲ್ಲಿ ಕೆಲಸ ಮಾಡುವವರು ತಮ್ಮ ಈಗಿನ ಕೆಲಸವಿರುವುದೋ ಇಲ್ಲವೋ ಎಂಬ ಸಂದಿಗ್ಧತೆಯಲ್ಲಿದ್ದಾರೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಯಲ್ಲೂ ಇದೇ ಕಥೆ. ಸರ್ಕಾರಿ ನೌಕರರು ಮತ್ತು ಸ್ವಂತ ಉದ್ಯೋಗದವರು ಆರೋಗ್ಯ ಸರಿಯಿಟ್ಟುಕೊಂಡಿದ್ದರೆ ಕೊಂಚ ನಿರಾಳರಾಗಿರಬಹುದು. ಜೊತೆಗೆ ಎಲ್ಲರಲ್ಲೂ ಮುಂದೇನು ಎಂಬ ಚಿಂತೆ ಶುರುವಾಗಿದೆ.

ಕೊರೊನೋತ್ತರ ಬದುಕು

ಈ ವಿಷಯದ ಮೇಲೆ ಆಯಾ ಕ್ಷೇತ್ರದ ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಅಭಿಪ್ರಾಯಗಳು ಹಾಗು ವರದಿಗಳು ಸಕಾರಾತ್ಮಕವೆನಿಸಿದರೆ ಇನ್ನು ಕೆಲವು ಸ್ಫೂರ್ತಿದಾಯಕವಾಗಿ ಅಥವಾ ಆಶಾದಾಯಕವಾಗಿ ಕಾಣದಿರಬಹುದು. ಇತ್ತೀಚೆಗೆ ನಡೆದ ಸರ್ವೇಕ್ಷಣೆಯೊಂದರಲ್ಲಿ “ಕೊರೊನೋತ್ತರ ಬದುಕು ಸುಧಾರಿಸಬಲ್ಲುದೇ” ಎಂಬ ಪ್ರಶ್ನೆಗೆ ಸುಮಾರು 83% ಜನರು “ಹೌದು” ಎಂದು ಉತ್ತರಿಸಿದ್ದಾರೆ.

ಕೊರೊನಾ ಕಾಲದಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳು, ಆತಂಕಗಳು, ಅನಾನುಕೂಲಗಳು ಹಾಗು ಅಡಚಣೆಗಳು ಅಲ್ಪಾವಧಿಯವು. ಆದರೆ, ದೀರ್ಫಕಾಲೀನ ಪರಿಣಾಮಗಳನ್ನು ಒಮ್ಮೆ ಗಮನಿಸಿದರೆ ಭಯವೂ ಆಗಬಹುದು. ಆದರೆ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಇಂಥ ಯಾವುದೇ ಅನಾಹುತಕಾರಿ ಸಂದರ್ಭಗಳು ಬಂದುಹೋದ ನಂತರದ ದಿನಗಳು ಸುಂದರವಷ್ಟೆ ಅಲ್ಲ, ಮಾನವಕುಲಕ್ಕೆ ಅವು ಸಮೃದ್ಧಿಯನ್ನು ಸ್ಫುರಿಸುವ ಪರಿವರ್ತನೆಯ ಪರ್ವಕಾಲವಾಗಿ ಪರಿಣಮಿಸಿವೆ.

ಮುಖ್ಯವಾಗಿ ಮನುಷ್ಯ ಹೊಸಕಾಲಕ್ಕೆ ಹೊಂದಿಕೊಳ್ಳಲು ಶುರುಮಾಡುತ್ತಾನೆ. ದೈನಂದಿನ ಕೆಲಸ ಮಾಡಲು ನವನವೀನ ವಿಧಾನಗಳನ್ನು ಅಳವಡಿಸಿಕೊಳ್ಳಲಾರಂಭಿಸುತ್ತಾನೆ. ಉದಾಹರಣೆಗೆ, ಮನೆಯಿಂದಲೇ ಕೆಲಸ ಮಾಡುವದು ಸರ್ವೇಸಾಮಾನ್ಯ ಮಾರ್ಗವಾಗಿ, ಕಚೇರಿಗೆ ಹೋಗಿಯೇ ಕೆಲಸಮಾಡಬೇಕೆಂಬ ಮನೋಪ್ರವೃತ್ತಿ ಬದಲಾಗುತ್ತದೆ. ಮನೆಯಿಂದಲೇ ಕೆಲಸಮಾಡುವದರಿಂದ ಕಚೇರಿಗೆ ಪ್ರಯಾಣಿಸಬಹುದಾದ ಸಮಯ ಉಳಿಯುತ್ತದೆ. ಇಂಧನದ ಬಳಕೆ ಇರುವುದಿಲ್ಲ. ರಸ್ತೆಯಲ್ಲಿ ಸಾರಿಗೆ ದಟ್ಟಣೆಯಲ್ಲಿ ಸಿಕ್ಕು ಒದ್ದಾಡುವ ಮನೋಕ್ಷೋಭೆಯೂ ಕಡಿಮೆಯಾಗುತ್ತದೆ. ಮನೆಯವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬಹುದು. ಹಾಗಾಗಿ ನೂತನ ವ್ಯವಸ್ಥೆಯು ಕಂಪನಿ ಕೆಲಸಗಾರರಿಗೆ ಸಹ್ಯವೂ, ಸಾಧುವು ಅನಿಸಲಾರಂಭಿಸುತ್ತದೆ.

ಈ ತರಹದ ವ್ಯವಸ್ಥೆಯಿಂದ ಕಂಪನಿಗಳಿಗೂ ಲಾಭವಾಗಲಿದೆ. ಅವು ಈ ಮಾರ್ಗವನ್ನು ಉತ್ತಮವಾಗಿ ಬಳಸಿಕೊಳ್ಳಬಹುದು. ಇದರಿಂದಾಗಿ ಅವರು ಕಂಪನಿ ಉದ್ಯೋಗಿಗಳ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಎತ್ತಿಹಿಡಿದಂತಾಗುತ್ತದೆ ಮತ್ತು ಕೆಲಸಗಾರರ ಉತ್ಪಾದನಾ ಸಮಯವೂ ಹೆಚ್ಚುತ್ತದೆ. ಒಂದು ಸಂಶೋಧನಾ ವರದಿಯ ಪ್ರಕಾರ ಆಫೀಸಿನಲ್ಲಿ ಶೇಕಡಾ 33 ಜನರು ಮಾತ್ರ ಕೆಲಸಕ್ಕೆ ಬಂದರೆ ಸಾಕು. ಉಳಿದ ಉದ್ಯೋಗಿಗಳು ಮನೆಯಲ್ಲಿಯೇ ಇಂಟರ್‌ನೆಟ್ ಬಳಸಿಕೊಂಡು ಆಫೀಸಿನ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದಂತೆ.

ಈ ಕೊರೊನಾ ಠಾವಿನಲ್ಲಿ ಜಗತ್ತಿನಲ್ಲಿಯೇ ಅತ್ಯಂತ ತೊಂದರೆಯಾಗಿರುವುದು ಅಮೇರಿಕಾಕ್ಕೆ. ಹಾಗೆಯೆ ನಂತರದ ಸ್ಥಾನದಲ್ಲಿ ಘೋರತೆಯನ್ನು ಅನುಭವಿಸುತ್ತಿರುವ ದೇಶಗಳೆಂದರೆ ಯುರೋಪಿನ ರಾಷ್ಟçಗಳು. ಇಂದಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸೇವೆಯನ್ನು ಪಡೆಯಲು ಕೋಟ್ಯಾಂತರ ಡಾಲರುಗಳನ್ನು ವಿನಿಯೋಗಿಸಿರುವ ದೇಶಗಳಿವು. ಈಗ ಈ ದೇಶಗಳಿಗೇ ಹೆಚ್ಚಿನ ಆರ್ಥಿಕ ಆಘಾತವಾಗಿದೆ. ಅಲ್ಲಿನ ಭವಿಷ್ಯಕ್ಕೆ ಕಾರ್ಮೋಡಗಳು ಕವಿದಿವೆ. ಅವುಗಳ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (GDP)ವೂ ಜರ್ರನೆ ಜಾರಿದೆ. ಇಂಥ ಸಂದರ್ಭದಲ್ಲಿ ಆ ದೇಶಗಳು ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿಗಳಿಗೆ ಕೊಟ್ಟ ಗುತ್ತಿಗೆ ಕೆಲಸಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಅವು ಮುಂದಿನ 8-10 ತಿಂಗಳ ಕಾಲ ಕೂಲಂಕಷವಾಗಿ ಯೋಚಿಸದೆ, ಯೋಜಿಸದೆ ಆರ್ಥಿಕ ವಿನಿಯೋಗವನ್ನು ಮಾಡದಿರಬಹುದು. ಇದರಿಂದ ಮಾಹಿತಿ ತಂತ್ರಜ್ಞಾನ ರಂಗದಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ನೌಕರಿಯಲ್ಲಿ ಸಂಕಟ ಎದುರಾಗುವ ಸಾಧ್ಯತೆಯಿದೆ.

ಆದರೆ, ಉದ್ಯೋಗಿಗಳು ಇದ್ಯಾವುದಕ್ಕೂ ಅಧೀರರಾಗದೆ ಹೊಸ ಹೊಸ ವಿಷಯಗಳನ್ನು ಆದಷ್ಟು ಬೇಗ ಕಲಿತು, ಆಳ ಅಧ್ಯಯನ ಮಾಡಿ, ಪ್ರಾಯೋಗಿಕ ಕೌಶಲವನ್ನು ತಮ್ಮದಾಗಿಸಿಕೊಳ್ಳುವದರಿಂದ ಅವರ ಬದುಕು ಸಮೃದ್ಧಿಯ ಪಥದಲ್ಲಿ ಸಾಗಬಹುದು. ಕುಶಲತೆಯನ್ನು ಉಪೇಕ್ಷಿಸುವವರು ಮತ್ತು ಅದನ್ನು ಮನಃಪೂರ್ವಕವಾಗಿ ತಮ್ಮದಾಗಿಸಿಕೊಳ್ಳದವರು ಕಸಿವಿಸಿಗೊಂಡು ಉದ್ಯೋಗಕ್ಕಾಗಿ ಹರಸಾಹಸ ಪಡಬೇಕಾಗಬಹುದು.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಆಧಾರಿತ ಆಟೋಮೇಶನ್ (ಸ್ವಯಂಚಾಲಿತ) ತಂತ್ರಜ್ಞಾನವು ಎಲ್ಲ ರಂಗಗಳಲ್ಲೂ ತನ್ನ ಅವತಾರವನ್ನು ಹೆಚ್ಚು ಹೆಚ್ಚು ತೋರಿಸಲಾರಂಭಿಸುತ್ತದೆ. ಆರ್ಥಿಕ, ವಿಜ್ಞಾನ, ವೈದ್ಯಕೀಯ, ಆರೋಗ್ಯ, ರಕ್ಷಣೆ, ಗೃಹಬಳಕೆ, ಮನರಂಜನೆ, ಕೃಷಿ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಸಂಶೋಧನೆ, ಅಂತರಿಕ್ಷ ವಿಜ್ಞಾನ, ಕೈಗಾರಿಕೆಯಲ್ಲಿ ಈ ಅಟೋಮೇಶನ್‌ನÀ ಅಟ್ಟಹಾಸದಿಂದ ಸಾಮಾನ್ಯ ಕೆಲಸಗಳು ಮಾಯವಾಗಿ, ಕುಶಲ ಕೆಲಸಗಳಿಗಷ್ಟೇ ಬೇಡಿಕೆ ಬರುವಂತಾಗಬಹುದು. ಅದಕ್ಕಾಗಿ, ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರಬೇಕಾಗುತ್ತದೆ. ಬರಿ ಬಾಯಿಪಾಠ ಮಾಡಿ ಪಾಸಾಗುವ ಪ್ರವೃತ್ತಿಗೆ ಹೊಡೆತ ಬೀಳುತ್ತದೆ. ಆಳ ಅಧ್ಯಯನ ಮಾಡಿದವರಷ್ಟೆ ಮಿಂಚುತ್ತಾರೆ.

ಆದ್ದರಿಂದ, ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಸರ್ಕಾರಗಳು ಹೆಚ್ಚಿನ ಮುತುವರ್ಜಿವಹಿಸಿ ಪ್ರಾಯೋಗಿಕವಾಗಿ ತಿಳಿಯುವ ಕಲಿಕಾ ಕ್ರಮವನ್ನು ಜಾರಿಗೆ ತರುವುದಲ್ಲದೆ, ಸಮಸ್ಯೆಯನ್ನು ಪರಿಹರಿಸುವ (Pಡಿobಟem Soಟviಟಿg) ಕುಶಲ ಕಲೆಯನ್ನು ವಿದ್ಯಾರ್ಥಿಗಳ ಸ್ಮತಿಪಟಲದ ಮೇಲೆ ಅಚ್ಚೊತ್ತುವಂತೆ ಪಡಿಮೂಡಿಸಬೇಕಾಗಿ ಬರುತ್ತದೆ. ಅದಕ್ಕಾಗಿ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದರಾಯಿತು ಎಂಬ ಉದಾಸೀನ ಮನೋಭಾವವನ್ನು ತೊಡೆದುಹಾಕಬೇಕಾಗುತ್ತದೆ. ಸಂಕಷ್ಟಕಾಲವನ್ನು ಎದುರಿಸುವ ಧೈರ್ಯವನ್ನು ತುಂಬುವ ಬದುಕಿನ ಕಲೆಯನ್ನು ಕಲಿಸಿಕೊಡಬೇಕಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಸಾಲಿನಲ್ಲಿ ಗೌರವಯುತವಾಗಿ ನಿಂತು, ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯುವ ಮತ್ತು ಪೌರ-ಪ್ರಜ್ಞೆಯನ್ನು ರೂಢಿಸಿಕೊಳ್ಳುವ ಅವಶ್ಯಕತೆಯನ್ನು ಜ್ಞಾನದ ಮೂಲಕ ಧಾರೆಯೆರೆಯಬೇಕಾಗುತ್ತದೆ.

ಡಿಜಿಟಲೀಕರಣ ಬದುಕಿನ ಅವಿಭಾಜ್ಯ ಅಂಗವಾಗುವ ಕಾಲ ದೂರವಿಲ್ಲ. ಈಗಾಗಲೇ ಜನದ ಕೈಯಲ್ಲಿ ಮೊಬೈಲು ಬಂದು ಕುಳಿತುಕೊಂಡಿದೆ. ಇದರಿಂದ ಜಗತ್ತಿನ ಮೂಲೆ ಮೂಲೆಯಲ್ಲಿ ಜರುಗುವ ಪ್ರತಿ ಘಟನೆಯ ಜ್ಞಾನವನ್ನು ಸಮಯ ಸಮಯಕ್ಕೆ ಪಡೆದು ಪ್ರಜ್ಞಾವಂತರಾಗುತ್ತಿದ್ದಾರೆ. ಕೊರೊನಾ ಎಂಬ ಸಾಂಕ್ರಾಮಿಕ ವೈರಣುವಿನಿಂದಾಗಿ ಜನರು ಚಲಾವಣೆಯ ನೋಟುಗಳನ್ನು ಮುಟ್ಟಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹಿಂದೆ, ಕಸದಲ್ಲಿ ಬಿದ್ದ ಒಂದು ರೂಪಾಯಿಯನ್ನು ಬಿಡದ ಜನ ಈಗ 2000 ರೂಪಾಯಿ ನೋಟುಗಳು ರಸ್ತೆಯಲ್ಲಿ ಬಿದ್ದಿದ್ದರೂ ಎತ್ತಿಕೊಳ್ಳಲು ಹೆದರುತ್ತಿದ್ದಾರೆ.

ಹೀಗಾಗಿ ಯಾವುದೇ ವ್ಯವಹಾರಕ್ಕೂ ಡಿಜಿಟಲ್ ವಿಧಾನವನ್ನು ಬಳಸಲು ಸೂಕ್ತವಾದ ವಾತಾವರಣ ಸೃಷ್ಟಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಡಿಜಿಟಲ್ ವ್ಯವಹಾರ ಆಪ್ತವೂ ಮತ್ತು ಅನನ್ಯವೂ ಆಗಬಲ್ಲದಾದುದರಿಂದ ಡಿಜಿಟಲ್ ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಬರುವುದು. ಅದರ ಸೇವಾ ಕ್ಷೇತ್ರ ವಿಸ್ತರಿಸಿಕೊಳ್ಳುವುದು. ಆದ್ದರಿಂದ ಡಿಜಿಟಲ್ ವಿಷಯದಲ್ಲಿ ಸೂಕ್ತ ವಿದ್ಯೆ, ಬುದ್ಧಿ, ಪರಿಣತಿ ಮತ್ತು ಕುಶಲತೆಯಿದ್ದವರಿಗೆ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರುತ್ತವೆ. ಭಾರತದಲ್ಲಿ, 2019ರಲ್ಲಿ ಅಂದಾಜು 10.8ಶತಕೋಟಿಯಷ್ಟು ಡಿಜಿಟಲ್ ವ್ಯವಹಾರಗಳು ನಡೆದಿವೆ ಎಂಬುದು ಒಂದು ಆರ್ಥಿಕ ಅಂಕಿ ಅಂಶಗಳ ಮೂಲದಿಂದ ಕಂಡುಬAದಿದೆ. ಕೊರೊನಾ ಪ್ರಭಾವದಿಂದ ಇದು ಇನ್ನೂ ಹೆಚ್ಚೆಚ್ಚು ಬೆಳೆಯುತ್ತ ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಇದೇ ವರ್ಷದಲ್ಲಿ ಭಾರತವು 21.4 ಶತಕೋಟಿ ಮೀರಿ ಡಿಜಿಟಲ್ ವ್ಯವಹಾರ ನಡೆಯಬಹುದೆಂದೂ ಅಂದಾಜಿಸಲಾಗಿದೆ.

*ಲೇಖಕರು ಐಟಿ ಉದ್ಯಮದಲ್ಲಿ ಉನ್ನತ ಅಧಿಕಾರಿ; ಸಾಹಿತಿ, ಶಿಕ್ಷಣ ತಜ್ಞ, ತರಬೇತಿದಾರರಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published.