ಮುಂಬರುವ ಬೃಹತ್ ವಲಸೆ

ಇಲ್ಲಿ ಅನುವಾದಿಸಿ ನೀಡಲಾಗಿರುವ ಅಧ್ಯಾಯವನ್ನು ಸೋನಿಯಾ ಶಾ ಅವರ ‘ದಿ ನೆಕ್ಸ್ಟ್ ಮೈಗ್ರೇಶನ್’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಸೋನಿಯಾ ಶಾ ಅವರು ಭಾರತ ಮೂಲದ ಅಮೆರಿಕದ ಪತ್ರಕರ್ತೆ. ಸೋನಿಯಾರವರ ತಂದೆತಾಯಿ ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿ ಭಾರತದಿಂದ ವಲಸೆ ಹೊರಟು ಅಮೆರಿಕದಲ್ಲಿ ನೆಲೆಸಿದವರು. 1969ರಲ್ಲಿ ಜನಿಸಿದ ಸೋನಿಯಾ ಪತ್ರಿಕೋದ್ಯಮದಲ್ಲಿ ಪದವಿ ಪಡೆದರೂ ನಂತರದಲ್ಲಿ ತತ್ವಶಾಸ್ತ್ರದಿಂದ ಮಾನಸಿಕ ವಿಜ್ಞಾನದವರೆಗೂ ವೈವಿಧ್ಯಪೂರ್ಣ ಓದು ಮುಗಿಸಿದವರು. ತಮ್ಮ ಕೂಲಂಕಷ ಸಂಶೋಧನೆ ಹಾಗೂ ಹರಿತ ಬರವಣಿಗೆಯ ಶೈಲಿಯಿಂದ ತಾವು ಕೈಗೆತ್ತಿಕೊಂಡ ಯಾವುದೇ ವಿಷಯವಸ್ತುವಿಗೆ ನ್ಯಾಯ ಒದಗಿಸಬಲ್ಲವರು. ಅಮೆರಿಕದ ಹಲವಾರು ಖ್ಯಾತ ಪತ್ರಿಕೆಗಳಿಗೆ ಕೆಲಸ ಮಾಡಿದ ಜೊತೆಗೆ ದೇಶದೆಲ್ಲೆಡೆಯ ರೇಡಿಯೋ, ಟೆಲಿವಿಶನ್ ಹಾಗೂ ವಿವಿಗಳಲ್ಲಿ ಪ್ರವಚನ ಮತ್ತು ಸಂದರ್ಶನ ನೀಡಿದವರು.

 – ಸೋನಿಯಾ ಶಾ

ಅನುವಾದ: ಟಿ.ಎಸ್.ವೇಣುಗೋಪಾಲ್

 ಲೇಖಕಿ ಸೋನಿಯಾ ಶಾ ಅವರ ಐದು ಪುಸ್ತಕಗಳು

ಕ್ರೂಡ್: ದಿ ಸ್ಟೋರಿ ಆಫ್ ಆಯಿಲ್ (2004)

ಕಚ್ಚಾತೈಲ ಅಥವಾ ಕಲ್ಲೆಣ್ಣೆ ಎಂದು ನಾವು ಕರೆಯಬಹುದಾದ ಕರಿಬಂಗಾರದ ಕತೆಯೇ ‘ಕ್ರೂಡ್’. ತಾಯಿಯ ಗರ್ಭದಿಂದ ಹೊರಬರುವಾಗಿನ ಡಾಕ್ಟರ್ ಕೈಗವಚಗಳಿಂದ ಹಿಡಿದು ಈಗಿನ ಕೋವಿಡ್ ಸಾಂಕ್ರಾಮಿಕದಲ್ಲಿ ಸತ್ತ ರೋಗಿಗಳನ್ನು ಕಟ್ಟಿ ಇಡುವ ‘ಬಾಡಿಬ್ಯಾಗ್’ಗಳವರೆಗೆ ಹಾಗೂ ನಾವು ಅಭಿವೃದ್ಧಿಯೆಂದು ಕರೆಯುವ ಡಾಂಬರು ರಸ್ತೆಗಳಿಂದ ಹಿಡಿದು ಚಂದ್ರಯಾನ ಮಾಡಲು ರಾಕೆಟ್‌ಗೆ ಬಳಸುವ ಉರುವಲು ಎಣ್ಣೆಯವರೆಗೆ ಕಲ್ಲೆಣ್ಣೆ ನಮ್ಮ ಇಡೀ ಜೀವನವನ್ನು ಆಕ್ರಮಿಸಿದೆ. ಈ ಕಚ್ಚಾತೈಲದ ಉಗಮ ಹಾಗೂ ಹೇಗೆ ಈ ಕಲ್ಲೆಣ್ಣೆ ನಮ್ಮ ಜೀವನವನ್ನು ಸಂಪೂರ್ಣವಾಗಿ ಅತಿಕ್ರಮಿಸಿರುವ ಮಟ್ಟಕ್ಕೆ ಬೆಳೆದಿದೆ ಎಂದು ಹೇಳುವ ಕಥೆ ಈ ಪುಸ್ತಕದಲ್ಲಿದೆ. ಈ ತೈಲಕ್ಕಾಗಿ ಕ್ರಾಂತಿ ಕಂಡಿರುವ ದೇಶಗಳ ಇತಿಹಾಸಗಳ ಜೊತೆಗೆ ಈ ಕಲ್ಲೆಣ್ಣೆಯ ಜೊತೆ ಆಳವಾಗಿ ಗುರುತಿಸಿಕೊಂಡಿರುವ ಮಹಾನುಭಾವರ ಚಿತ್ರಣಗಳೂ ಈ ಪುಸ್ತಕದಲ್ಲಿದೆ. ಜೀವನ ಸಾಗಿಸಲು ಅನಿವಾರ್ಯವಾಗಿರುವ ಈ ತೈಲದ ಹೊರತು ಮುಂದಿನ ದಶಕಗಳಲ್ಲಿ ನಾವು ಜೀವನ ಮಾಡಲು ಕಲಿಯಬೇಕಾದ ಪಾಠಗಳೂ ಈ ಪುಸ್ತಕದಲ್ಲಿದೆ.

 

 

 

ದಿ ಬಾಡಿ ಹಂಟರ್ಸ್ (2006)

ಕಳೆದ ನಾಲ್ಕೈದು ತಿಂಗಳುಗಳಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ ಔಷಧಿ ಹಾಗೂ ಲಸಿಕೆ ಕಂಡುಹಿಡಿಯಲು ಮಾಡಲಾಗಿರುವ ಪರೀಕ್ಷೆಗಳನ್ನು ನಾವು ಓದಿದ್ದೇವೆ. ಸಾಂಕ್ರಾಮಿಕದ ವಿಷಮತೆ ಮತ್ತು ತುರ್ತುಪರಿಸ್ಥಿತಿಯಲ್ಲಿ ಈ ಔಷಧಿ ಹಾಗೂ ಲಸಿಕೆಗಳ ಪ್ರಯೋಗಗಳು ಜಗತ್ತಿನ ಮುಂದುವರೆದ ದೇಶಗಳಲ್ಲಿಯೂ ನಡೆದಿರುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲಿಯವರೆಗೆ ನಮ್ಮ ಔಷಧಿ ಕಂಪನಿಗಳು ಹೊರತಂದಿರುವ ಲಕ್ಷಾಂತರ ಔಷಧಿ-ಲಸಿಕೆಗಳು ಹೇಗೆ ದೇಹದ ಮೇಲೆ ಪ್ರಯೋಗಿತವಾಗಿವೆ ಎಂದು ನೀವು ಬಲ್ಲಿರೇನು..?

ಇದನ್ನು ತಿಳಿಯಬೇಕೆಂದರೆ ಸೋನಿಯಾರವರ ಈ ಪುಸ್ತಕ ಓದಲೇಬೇಕು. ಹೇಗೆ ಅಮೆರಿಕ ಮತ್ತು ಐರೋಪ್ಯ ಔಷಧಿ ಕಂಪನಿಗಳು ಬಡರಾಷ್ಟ್ರಗಳ ಅಮಾಯಕ ರೋಗಿಗಳನ್ನು ತಮ್ಮ ಔಷಧಿಗಳ ಪ್ರಯೋಗಶಾಲೆಯಾಗಿ ಬಳಸಿದ್ದಾರೆ ಎಂದು ಅರಿಯಲು ಈ ಪುಸ್ತಕ ಅಗತ್ಯವಾಗಿದೆ. ಯಾವುದೇ ಕಾನೂನು ನಿಯಂತ್ರಣಗಳಿಲ್ಲದ ಈ ಬಡದೇಶದ ಜನರು ಪಂಜರದೊಳಗೆ ಇಟ್ಟ ಇಲಿಗಳಂತೆ ಪ್ರಯೋಗಪಶುಗಳಾಗಿದ್ದಾರೆ ಎಂದು ಈ ಪುಸ್ತಕ ಸವಿವರ ಚಿತ್ರಿಸಿದೆ.

 

 

 

ದಿ ಫಿವರ್ (2010)

ಮಲೇರಿಯಾ ನಮಗೆ ಹೊಸತೇನಲ್ಲ. ಆದರೆ ಈ ಮಲೇರಿಯಾ ರೋಗವು ಪ್ರತಿವರ್ಷ 20 ಕೋಟಿ ಜನರಿಗೆ ಹಬ್ಬುತ್ತಿದೆ ಹಾಗೂ ಪ್ರತಿವರ್ಷ ಹತ್ತುಲಕ್ಷ ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ನೀವು ಬಲ್ಲಿರೇನು..? ಹವಾಮಾನ ಬದಲಾವಣೆಯಿಂದ ಈ ಮಲೇರಿಯಾ ರೋಗ ಹೊಸಹೊಸ ದೇಶಗಳನ್ನು ಹುಡುಕಿ ಹೊರಟಿದೆ ಹಾಗೂ ಆಫ್ರಿಕಾದ ದೇಶಗಳನ್ನು ಹೇಗೆ ಕಾಡುತ್ತಿದೆ ಎಂದು ನಿಮಗೆ ತಿಳಿದಿದೆಯೇ..? ಇದರ ಜೊತೆಗೆ ಮಲೇರಿಯಾ ಜನಕ ಸೊಳ್ಳೆಗಳ ಜೀವನವೃತ್ತಾಂತ ಹಾಗೂ ಈ ಸೊಳ್ಳೆಗಳು ಮಾನವಜಾತಿಯೊಡನೆ ಸಾಧಿಸಿರುವ ಅಮೂಲ್ಯ ಸಂಬಂಧವನ್ನು ಈ ಪುಸ್ತಕದಲ್ಲಿ ಹೇಳಲಾಗಿದೆ. ಮಲೇರಿಯಾದೊಂದಿಗೆ ಮಾನವಜಾತಿಯ ಐದು ಲಕ್ಷ ವರ್ಷಗಳ ಇತಿಹಾಸವನ್ನೂ ಲೇಖಕಿ ಸೋನಿಯಾ ಶಾ ತಿಳಿಹೇಳುತ್ತಾರೆ.

 

 

 

 

ಪ್ಯಾಂಡೆಮಿಕ್: ಟ್ರ್ಯಾಕಿಂಗ್ ಕಂಟೇಜಿಯನ್ಸ್ (2016)

2012ರಲ್ಲಿ ಬಿಡುಗಡೆಯಾದ ‘ಕಂಟೇಜಿಯನ್’ ಚಲನಚಿತ್ರ ನೀವು ನೋಡಿರಬಹುದು. ಅದೇ ರೀತಿಯಲ್ಲಿ 2016ರಲ್ಲಿ ಪ್ರಕಟಿತವಾದ ಸೋನಿಯಾ ಶಾ ಅವರ ಈ ಪುಸ್ತಕ ಮುಂದಿನ ಕೆಲವೇ ವರ್ಷಗಳಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸುವ ಮಹಾಮಾರಿಯೊಂದು ಅಪ್ಪಳಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಈ ಭವಿಷ್ಯ ಮುಂದಿನ ಮೂರೇ ವರ್ಷಗಳಲ್ಲಿ ನಿಜವಾಗುವುದೆಂದು ಯಾರು ಅರಿತಿದ್ದರು..?

ಕಳೆದ ಐವತ್ತು ವರ್ಷಗಳಲ್ಲಿ ನಮ್ಮನ್ನು ಕಾಡಿದ ಮುನ್ನೂರಕ್ಕೂ ಹೆಚ್ಚಿನ ಸಾಂಕ್ರಾಮಿಕ ರೋಗಗಳ ಪರಿಚಯ ಈ ಪುಸ್ತಕದಲ್ಲಿದೆ. ಕಾಲರಾದಿಂದ ಹಿಡಿದು ಸಾರ್ಸ್, ಮೇರ್ಸ್, ಎಬೋಲಾಗಳವರೆಗೆ ಹೇಗೆ ಸಾಂಕ್ರಾಮಿಕ ರೋಗಗಳು ನಮ್ಮನ್ನು ಕಾಡಿವೆ ಎಂಬುದರ ಚಿತ್ರಣ ಇಲ್ಲಿದೆ. ತಮ್ಮ ವಿದೇಶ ಪರ್ಯಟನ, ವೈಯಕ್ತಿಕ ಅನುಭವ ಮತ್ತು ದೀರ್ಘ ಸಂಶೊಧನೆಯಲ್ಲಿ ಸೋನಿಯಾರವರು ಸಾಂಕ್ರಾಮಿಕದ ಮೂಲ ಹುಡುಕುವ ಜಾಡು ಹಿಡಿದಿದ್ದಾರೆ. ವುಹಾನ್‌ನ ವನ್ಯಪ್ರಾಣಿ ಶೈತ್ಯಾಗಾರಗಳಿಂದ ಹಿಡಿದು ಆಫ್ರಿಕಾದ ಮಾರುಕಟ್ಟೆಗಳವರೆಗೆ ಸೋನಿಯಾ ಜಾಲಾಡಿದ್ದಾರೆ. ಅವರ ಸಂಶೋಧನೆಯ ಫಲಶೃತಿ ಹಾಗೂ ಸಾರಾಂಶವನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದರೆ ಮುಂದಿನ ಮೂರು ವರ್ಷಗಳಲ್ಲಿ ನಮಗೆ ಬಂದು ಕಾಡಲಿರುವ ಕೋವಿಡ್ ಸಾಂಕ್ರಾಮಿಕಕ್ಕೆ ನಾವು ಇನ್ನಷ್ಟು ತಯಾರಿ ಮಾಡಿಕೊಳ್ಳಬಹುದಿತ್ತೇನೋ..?

ದಿ ನೆಕ್ಸ್ಟ್ ಗ್ರೇಟ್ ಮೈಗ್ರೇಶನ್ (2019)

ವಲಸೆ ಹೋಗುವ ಪ್ರಕ್ರಿಯೆಯನ್ನು ಆಧುನಿಕ ಸಮಾಜ ಹತಾಶೆಯ ಹಾಗೂ ಬಡತನ-ನಿರುದ್ಯೋಗಗಳಿಗೆ ಅಂಟಿದ ಶಾಪವೆಂದೇ ಪರಿಗಣಿಸಿದೆ. ಆದರೆ ಕಳೆದ ಹತ್ತು ಸಾವಿರಕ್ಕೂ ಮಿಗಿಲು ವರ್ಷಗಳಲ್ಲಿ ಈ ವಲಸೆಯ ಕಾರಣದಿಂದಲೇ ಭೂಮಿಯು ಮಾನವರಿಂದ ವಸತಿಗೆ ಒಳಪಟ್ಟಿದೆ ಹಾಗೂ ಆಫ್ರಿಕಾದಿಂದ ಹೊರಟ ಒಂದೆರೆಡು ಸಾವಿರ ಜನರು ಕೆಲವೇ ಸಾವಿರ ವರ್ಷಗಳಲ್ಲಿ ಇಡೀ ಭೂಮಂಡಲವನ್ನು ಆಕ್ರಮಿಸಿಕೊಳ್ಳುವ ಈ ಪ್ರಕ್ರಿಯೆ ಹೇಗೆ ಗುಣಾತ್ಮಕ ಹಾಗೂ ಆರೋಗ್ಯಕರ ಎಂದು ಸೋನಿಯಾ ಶಾ ಹೇಳುತ್ತಾರೆ.

ಮನುಕುಲದ ವಲಸೆಯ ಜೊತೆಗೆ ಪ್ರಾಣಿಗಳ, ಪಕ್ಷಿಗಳ, ಚಿಟ್ಟೆಗಳ, ಗಿಡ-ಮರಗಳ ನಿಧಾನ ವಲಸೆಯ ಬಗ್ಗೆಯೂ ಸೋನಿಯಾ ಹೇಳುತ್ತಾರೆ. ಹೇಗೆ ನಾವು ಉಸಿರಾಡುವುದು ಸಹಜ ದೈಹಿಕ ಕ್ರಿಯೆಯೋ ಅದೇ ರೀತಿಯಲ್ಲಿ ಉತ್ತಮ ಪರಿಸರ-ಜೀವನಕ್ಕಾಗಿ ವಲಸೆಯೂ ಆರೋಗ್ಯಕರ ಜೀವನಕ್ರಮವೆಂದು ಪ್ರತಿಪಾದಿಸುತ್ತಾರೆ. 18ನೇ ಶತಮಾನದಿಂದಲೂ ಎಲ್ಲ ವಿದ್ವಾಂಸರ ಅವಹೇಳನೆಗೆ ಪಾತ್ರವಾಗಿರುವ ಈ ವಲಸೆ ಕಾರ್ಯ ಮುಂದಿನ ವರ್ಷಗಳಲ್ಲಿ ಭಯೋತ್ಪಾದನೆಗೆ ಕಾರಣವಾಗದೆ ಆಶಾವಾದಕ್ಕೆ ಕಾರಣವಾಗಬೇಕಿದೆ ಎಂದೂ ಲೇಖಕಿ ವಾದಿಸುತ್ತಾರೆ.

-ಮೋಹನದಾಸ್

 

 

ಮುಂಬರುವ ಬೃಹತ್ ವಲಸೆ

ನಾನು ನೋಡಬೇಕು ಅಂತ ಹುಡುಕಿಕೊಂಡು ಬಂದ ಚೆಕ್ಕರ್ ಸ್ಪಾಟ್ ಚಿಟ್ಟೆ-ಚೌಕಿ ಚುಕ್ಕೆಯ ಚಿಟ್ಟೆ ತುಂಬಾ ಪುಟ್ಟದು. ಕಣ್ಣಿಗೆ ಬೀಳೋದು ಸ್ವಲ್ಪ ಕಷ್ಟ. ಚಿಟ್ಟೆ ಮಾತ್ರವಲ್ಲ, ಅದು ತಿಂದು ಬದುಕುವ ಪುಟ್ಟ ಪ್ಲಾಂಟಗೋ ಗಿಡ ಕೂಡ ಅಷ್ಟೇ. ಯಾರ ಕಣ್ಣಿಗೂ ಸಲೀಸಾಗಿ ಬೀಳೋದಿಲ್ಲ. ಒಂದೆರಡು ಇಂಚು ಎತ್ತರ ಇರುತ್ತದೆ ಅಷ್ಟೆ. ನೀವು ಗಮನಿಸದೇ ಹೋದರೆ ಕಾಲಡಿಗೆ ಸಿಕ್ಕಿ ಜಜ್ಜಿ ಹೋಗುತ್ತದೆ. ನಾನು ಒಂದೆರಡನ್ನು ತುಳಿದುಬಿಟ್ಟಿದ್ದೇನೆ. ನನಗೆ ಚೌಕಿ ಚಿಟ್ಟೆಯ ದರ್ಶನ ಮಾಡಿಸೋಕೆ ಅಂತ ನನ್ನ ಜೊತೆಗೆ ಬಂದ ಸ್ಪ್ರಿಂಗ್ ಸ್ಟ್ರಾಮ್ ಹೇಳೋ ಹಾಗೆ “ಅದನ್ನು ನೋಡೋದು ಅಂದರೆ ಯುನಿಕಾರ್ನ್ ನೋಡಿದ ಹಾಗೆ”. ಹುಡುಕಿ ಹುಡುಕಿ ಸುಸ್ತಾಗಿ ಬೇರೆ ಕಡೆ ಹುಡುಕೋಣ ಅಂದುಕೊಳ್ಳುತ್ತಿದ್ದಾಗ ಸ್ಟ್ರಾಮ್ ಹಾಗೆ ನಿಂತುಬಿಟ್ಟಳು. ಬಗ್ಗಿ ನೋಡಿದೆ. ಅವಳ ಪಾದದ ಸುತ್ತ ಚಿಟ್ಟೆಗಳು ಗುಂಪಾಗಿ ಸುತ್ತುತ್ತಿದ್ದವು.

ನಾನು ಚೌಕಿ ಚುಕ್ಕೆ ಚಿಟ್ಟೆಯನ್ನು ಹುಡುಕಿಕೊಂಡು ಬಂದದ್ದು ಕೆಮಿಲ್ಲ್ ಪರಮೇಸಾನ್‌ಳಿಂದಾಗಿ. ಅವಳಿಗೆ ಚಿಟ್ಟೆಗಳನ್ನು ಕಂಡರೆ ತುಂಬಾ ಇಷ್ಟ. ಚಿಟ್ಟೆಗಳು ಅವುಗಳ ಸ್ವಾಭಾವಿಕ ಪರಿಸರದಲ್ಲಿ ಸಲೀಸಾಗಿ ಸಿಗುತ್ತವೆ. ಅವನ್ನು ಸುಲಭವಾಗಿ ಗಮನಿಸಬಹುದು. ಹಾಗಾಗಿ ಅದನ್ನೇ ಅವಳ ಅಧ್ಯಯನಕ್ಕೆ ಆರಿಸಿಕೊಂಡಿದ್ದಳು. ಅವು ಒಂದು ಕಾಲದಲ್ಲಿ ಯಥೇಚ್ಛವಾಗಿ ಸಿಗುತ್ತಿತ್ತು. ಒಬ್ಬ ಚಿಟ್ಟೆ ಸಂಗ್ರಾಹಕ ಕೈಯಲ್ಲಿ ಬಲೆ ಹಿಡಿದುಕೊಂಡು ಮೋಟರ್ ಬೈಕ್ ಮೇಲೆ ಕೂತು ಸ್ವಲ್ಪ ದೂರ ಹೋಗುವಷ್ಟರಲ್ಲಿ ನೂರಾರು ಚಿಟ್ಟೆಗಳು ಸಿಕ್ಕಬಿದ್ದಿದ್ದವಂತೆ.

ಈಗ ಅವುಗಳ ಸಂಖ್ಯೆ ಕಡಿಮೆಯಾಗಿದೆ. ಹೆಚ್ಚಿನ ಪರಿಸರವಾದಿಗಳಿಗೆ ಇದಕ್ಕೆ ಕಾರಣ ಸ್ಪಷ್ಟ. ಚೌಕಿ ಚುಕ್ಕೆಯ ಚಿಟ್ಟೆ ಹೆಚ್ಚು ದೂರ ಹಾರೋ ಜೀವಿಯಲ್ಲ. ಮೊಟ್ಟೆಯಿಂದ ಹೊರಬಂದ ಮೇಲೆ ಕೆಲವು ಅಡಿಗಳು ಹೋದರೆ ಹೆಚ್ಚು. ಎತ್ತರಕ್ಕೂ ಹಾರೋದಿಲ್ಲ. ಮಳೆ ಗಾಳಿ ಬಂದರೆ ಪುಟ್ಟ ಪ್ಲಾಂಟಿಗೋ ಗಿಡವನ್ನು ಆಶ್ರಯಿಸುತ್ತದೆ. ಎಲ್ಲೂ ಹೋಗದೇ ‘ಮನೆಗೆ ಅಂಟಿಕೊಂಡೇ’ ಬದುಕೋ ಜೀವಿ ಅಂತಲೇ ಅದನ್ನು ಕರೆಯೋದು.

ಇಂಗಾಲದ ಬಳಕೆ ಹೆಚ್ಚಾದಂತೆ ವಾತಾವರಣದ ಬಿಸಿ ಹೆಚ್ಚಾಯಿತು. ದಕ್ಷಿಣದ ಭಾಗದಲ್ಲಿ ಕುಬ್ಜ ಪ್ಲಾಂಟಗೋ ಗಿಡಗಳು ಕಮ್ಮಿಯಾಗ ತೊಡಗಿದವು. ಚಿಟ್ಟೆಗೆ ಆಹಾರ ಕಡಿಮೆಯಾಗತೊಡಗಿತು. ಹಾಗೆಯೇ ಲಾಸ್ ಅಂಜೆಲ್ಸ್ ಮತ್ತು ಸಾನ್ ಫ್ರಾನ್ಸಿಸ್ಕೊ ಅಂತಹ ಪಟ್ಟಣಗಳು ಬೆಳೆಯುತ್ತಾ ಹೋದಂತೆ ಉತ್ತರದ ಭಾಗದ ಇಳಿಜಾರು ಪ್ರದೇಶಗಳನ್ನು ಆಕ್ರಮಿಸಿಕೊಳ್ಳತೊಡಗಿದವು. ಅವು ವಾಸಿಸುತ್ತಿದ್ದುದು ಆ ಜಾಗದಲ್ಲೇ. ಒಂದು ಕಡೆ ಹವಮಾನ ಬದಲಾವಣೆ ಮತ್ತೊಂದು ಕಡೆ ನಗರಗಳ ಬೆಳವಣಿಗೆ. ಎರಡರ ಹೊಡೆತದಿಂದ ಚೌಕಿ ಚುಕ್ಕೆಯ ಚಿಟ್ಟೆಗಳು ನಶಿಸತೊಡಗಿದವು.  ಬಹುಪಾಲು ಪರಿಣತರು ಹೇಳೋದು ಇದನ್ನೇ.

ಇದೊಂದು ತೀರಾ ಸರಳವಾದ ಕಥೆ. ಇದನ್ನು ಹಲವು ಬದಲಾವಣೆಗಳೊಂದಿಗೆ ಜಗತ್ತಿನಾದ್ಯಂತ ಕೇಳಬಹುದು. ಪರಮೇಸಾನ್ ಇದನ್ನು ಒಪ್ಪಿಕೊಂಡಿದ್ದಳು. ಸತ್ಯ ಇದಕ್ಕಿಂತ ಭಿನ್ನವಾಗಿರಬಹುದು ಅಂತ ಅವಳಿಗೂ ಅನ್ನಿಸಿರಲಿಲ್ಲ. ಚಿಟ್ಟೆಗಳು ಒತ್ತಡಕ್ಕೆ ಹೇಗೆ ಸ್ಪಂದಿಸುತ್ತವೆ ಅನ್ನೋ ನಿರ್ದಿಷ್ಟ ಕ್ರಮವನ್ನು ತನ್ನ ಅಧ್ಯಯನ ದಾಖಲು ಮಾಡಬಹುದು. ಅದು ಪ್ರೌಢಪ್ರಬಂಧಕ್ಕೆ ಸಾಕು ಅಂದುಕೊಂಡಿದ್ದಳು. ಅವಳ ಸಂಶೋಧನೆ ಒಂದು ರೀತಿ ಈ ಚಿಟ್ಟೆಗಳು ಮರಣ ಯಾತನೆಯ ವಿವರವಾದ ದಾಖಲೆಯಾಗಬಹುದಿತ್ತು. ಜೀವಿಗಳ ಈ ಸಾಮೂಹಿಕ ಅವನತಿಯ ಯುಗದಲ್ಲಿ ಹೆಚ್ಚಿನ ಪರಿಸರ ವಿಜ್ಞಾನ ಇದೇ ಕೆಲಸ ಮಾಡುತ್ತಿರುವುದು.

ಚಿಟ್ಟೆಗಳು ವಸಂತ ಕಾಲದಲ್ಲಿ ಮೊಟ್ಟೆ ಹಾಕುತ್ತವೆ. ಬೆಳಗ್ಗೆ 10ರವರೆಗೆ ಏಳುವುದಿಲ್ಲ. ಅಂತಹ ಗಾಳಿಯಿಲ್ಲದೆ ಹೋದರೆ ಬೆಳಕಿನಲ್ಲಿ ಅವುಗಳನ್ನು ಸಲೀಸಾಗಿ ಹುಡುಕಬಹುದು.  ಪರಮೆಸಾನ್ ಪಶ್ಚಿಮ ಕರಾವಳಿಯಲ್ಲಿ ನಾಲ್ಕು ವರ್ಷಗಳ ಕಾಲ ಪ್ರತಿ ದಿನ ಬೆಳಗ್ಗೆ ಚಿಟ್ಟೆಗಾಗಿ ಹುಡುಕಾಡುತ್ತಾ ರಾತ್ರಿ ಹೊತ್ತು ಬೆಟ್ಟದಲ್ಲಿ ತಂಗುತ್ತಾ ಕಳೆದರು. ಏನೋ ದೊಡ್ಡದು ಪತ್ತೆ ಹಚ್ಚಿ ಬಿಡುತ್ತೇನೆ ಅಂತ ಅವಳಿಗೆ ಅನಿಸಿರಲಿಲ್ಲ. ಏನೂ ಆಗದೇ ಹೋಗಬಹುದು ಅನಿಸಿತ್ತು. ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸುವುದಕ್ಕೆ ಪ್ರಾರಂಭಿಸಿದಳು. ಚಿಟ್ಟೆಗಳ ಸಂಖ್ಯೆ ಕಡಿಮೆಯಾಗಿತ್ತು. ಅದರಲ್ಲಿ ಆಶ್ವರ್ಯವಿಲ್ಲ. ಅದನ್ನು ಅವಳು ನಿರೀಕ್ಷಿಸಿದ್ದಳು. ಆದರೆ ಅವಳ ಅಂಕಿಅಂಶ ಇನ್ನೇನನ್ನೋ ಹೇಳಿತು. ಅದು ಅವಳನ್ನು ಪ್ರಖ್ಯಾತಳನ್ನಾಗಿಸಿತು. ಜಗತ್ತಿನಾದ್ಯಂತ ನನ್ನಂತೆ ಪತ್ರಕರ್ತರು ಅವಳನ್ನು ಹುಡುಕಿಕೊಂಡು ಹೋಗುವಂತೆ ಮಾಡಿತು. “ನಾನು ಏನಾಗುತ್ತಿದೆ ಅನ್ನೋದನ್ನು ಗಮನಿಸತೊಡಗಿದೆ. ದಕ್ಷಿಣದಲ್ಲಿ ಅವು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗುತ್ತಿದ್ದವು. ಉತ್ತರದಲ್ಲಿ ಬೆಟ್ಟಗಳಲ್ಲಿ ಅಷ್ಟಾಗಿ ಸಾಯುತ್ತಿರಲಿಲ್ಲ. ಒಂದು ಸಂಕೀರ್ಣವಾದ ವಿನ್ಯಾಸಕ್ಕಾಗಿ ನೋಡುತ್ತಿದ್ದೆ. ವಾಯುಗುಣ ಬದಲಾದಾಗ ಚಿಟ್ಟಿಗಳು ಕೂಡ ಕಾಡುಪ್ರಾಣಿಗಳ ರೀತಿಯಲ್ಲೇ ಸ್ಪಂದಿಸುತ್ತಿದ್ದವು.”

ಅವು ಚಲಿಸಿದ್ದವು

ಚಿಟ್ಟೆಗಳು ಉತ್ತರದ ಕಡೆಗೆ ಮತ್ತು ಎತ್ತರದ ಪ್ರದೇಶಕ್ಕೆ ಚಲಿಸಿದ್ದವು. ಅದನ್ನು ಗಮನಿಸಿ ಅವಳು ಬೆರಗಾಗಿ ಬಿಟ್ಟಿದ್ದಳು. ಇಂದೂ ಆ ಅನ್ವೇಷಣೆಯನ್ನು ನೆನಸಿಕೊಂಡು ಆಶ್ಚರ್ಯ ಚಕಿತಳಾಗುತ್ತಾಳೆ. ತಲೆಯ ಕೂದಲನ್ನು ಒಟ್ಟುಮಾಡಿಕೊಂಡು ಹಿಂದಕ್ಕೆ ಎಸೆದುಕೊಳ್ಳುತ್ತಾ “ದೇವರೇ” ಅಂತ ಉದ್ಗರಿಸುತ್ತಾಳೆ. ಅದು ಅವಳ ಬದುಕನ್ನೇ ಬದಲಿಸಿಬಿಟ್ಟಿತು. ಅವಳ ಅಧ್ಯಯನ ಪ್ರಖ್ಯಾತ ‘ನೇಚರ್’ ಪತ್ರಿಕೆಯಲ್ಲಿ ಪ್ರಕಟವಾಯಿತು. ಸಂಯುಕ್ತ ರಾಷ್ಟ್ರಗಳ ಹವಾಮಾನ ಬದಲಾವಣೆಯ ಅಂತರ್‌ಸರ್ಕಾರ ಸಮಿತಿಯ ಸದಸ್ಯಳಾದಳು. ಅವಳು ಕಂಡುಕೊಂಡ ಸತ್ಯ ಒಂದು ಅಪವಾದವೇನಾಗಿರಲಿಲ್ಲ. ಯೂರೋಪಿನಲ್ಲಿ 57 ಜಾತಿಯ ಚಿಟ್ಟೆಗಳೂ ಕೂಡ ಹಾಗೆ ಚಲಿಸಿದ್ದವು. ಹಾಗೆಯೇ ಸಮುದ್ರ ಜೀವಿಗಳಲ್ಲೂ ಅದೇ ಪ್ರವೃತ್ತಿಯನ್ನು ಗಮನಿಸಲಾಯಿತು. ಪಕ್ಷಿಗಳೂ ಹಾಗೇ ಚಲಿಸಿದ್ದವು.

ಇದನ್ನು ಕಂಡು ವಿಜ್ಞಾನಿಗಳು ತಮ್ಮ ಅಧ್ಯಯನ ಮತ್ತೆ ಪರಿಶೀಲಿಸಿದರು. ತಾವೀಗಾಗಲೇ ಅಧ್ಯಯನ ಮಾಡಿದ್ದ ಜೀವಿಗಳನ್ನು ಮತ್ತೆ ಗಮನಿಸಿದರು. ಸಮುದ್ರದಲ್ಲಿ ಸರೋವರಗಳಲ್ಲಿ ತೇಲುವ ಪ್ಲವಕದಂತಹ ಜೀವಿಯಿಂದ ಹಿಡಿದು ಕಪ್ಪೆಯವರೆಗೆ ಎಲ್ಲಾ ಜೀವಿಗಳನ್ನು ಇನ್ನೊಮ್ಮೆ ಪರೀಕ್ಷಿಸಿ ನೋಡಿದರು. ಹವಮಾನ ಬದಲಾವಣೆಯಾದಂತೆ ಶೇಕಡ 40ರಿಂದ 70ರಷ್ಟು ಜೀವಿಗಳು ಹೆಚ್ಚು ತಣ್ಣಗಿನ ಪ್ರದೇಶಗಳಿಗೆ ಚಲಿಸಿದ್ದು ಕಂಡುಬಂತು. ಸಮುದ್ರ ಜೀವಿಗಳಲ್ಲಿ ಈ ಚಲನೆ ಇನ್ನಷ್ಟು ವೇಗವಾಗಿ ನಡೆದಿತ್ತು. ಅವುಗಳು ಪ್ರತಿ ಹತ್ತು ವರ್ಷಗಳಲ್ಲಿ ಸರಸರಿ 70 ಕಿಲೋ ಮೀಟರಿನಷ್ಟು ದೂರಕ್ಕೆ ವಲಸೆ ಹೋಗಿದ್ದವು. ಚಲಿಸುವುದೇ ಇಲ್ಲ ಇದ್ದ ಸ್ಥಳಕ್ಕೆ ಅಂಟಿಕೊಂಡೇ ಬದುಕುತ್ತವೆ ಅಂದುಕೊಂಡಿದ್ದ ಕೆಲವು ಪ್ರಾಣಿಗಳೂ ಕೂಡ ಚಲಿಸಿದ್ದವು. ಕಲ್ಲಿನ ಗೋಡೆಗಳು ಅಂತ ಭಾವಿಸಿದ್ದ ಕೋರಲ್ ಹವಳದ ಹುಳ ಕೂಡ ಮುಂದಕ್ಕೆ ಹೋಗಿತ್ತು. ‘ಚಿಟ್ಟೆಗಳ ರೆಕ್ಕೆ ಬಡಿತ ವಾತವರಣವನ್ನು ಸಣ್ಣದಾಗಿ ಕದಡುತ್ತದೆ. ಅದರಿಂದ ಹಲವು ಅಂಶಗಳು ಒಂದಕ್ಕೊಂದು ತಕ್ಕೆಹಾಕಿಕೊಂಡು, ಪರಸ್ಪರ ಸಂಕೀರ್ಣವಾಗಿ ಪ್ರಭಾವಿಸುತ್ತಾ, ದೂರದ ಚಂಡಮಾರುತದ ದಾರಿಯನ್ನೇ ಬದಲಿಸಬಲ್ಲದು’ ಅಂತ ಎಡ್ವರ್ಡ್ ಲೊರಾನ್ಜ್ ಹೇಳಿದ್ದ. ಆ ಮಾತು ತುಂಬಾ ಪ್ರಸಿದ್ಧಿ ಪಡೆದುಕೊಂಡಿತು. ಅವನು ಹಾಗೆ ಹೇಳುವಾಗ ಅವನ ಮನಸ್ಸಿನಲ್ಲಿ ಈ ಪುಟ್ಟ ಚೌಕಿ ಚುಕ್ಕೆಯ ಚಿಟ್ಟೆ ಇದ್ದಿರುವುದಕ್ಕ್ಕೆ ಸಾಧ್ಯವಿಲ್ಲ.         ಅಂತಹ ಚಿಟ್ಟೆಗಳನ್ನು ಹಲವು ಬಾರಿ ಗಮನಿಸಿದ್ದೇನೆ. ತುಂಬಾ ನಿಧಾನವಾಗಿ ಚಲಿಸುವ, ನೆಲದೆತ್ತರದಲ್ಲಿ ಹಾರುವ ಈ ಚಿಟ್ಟೆಗಳ ರೆಕ್ಕೆಯ ಬಡಿತ ಅಂತಹ ದೊಡ್ಡ ಅಲೆಯನ್ನು ಸೃಷ್ಟಿಸುವುದಿರಲಿ ಒಂದು ಸಣ್ಣ ತಂಗಾಳಿಯನ್ನು ಪ್ರಭಾವಿಸುವುದಕ್ಕೂ ಸಾಧ್ಯವಿಲ್ಲ. ಆದರೂ ಈ ಚಿಟ್ಟೆಗಳ ಚಲನೆ ಒಂದು ದೊಡ್ಡ ಜಾಗತಿಕ ಫೆನಾಮಿನಾವನ್ನು ಸೃಷ್ಟಿಸಿತು. ಅಲಾಸ್ಕಾದ ವಾಯುವ್ಯ ತೀರದ ಉನಾಲಕೀಟ್ ಪ್ರದೇಶದಲ್ಲಿ ಬೇಟೆಗಾರರಿಗೆ ತಾವು ಹಿಡಿದ ಕಾಡು ಪಕ್ಷಿಗಳ ರೆಕ್ಕೆಯಲ್ಲಿ 950 ಮೈಲಿಗಳಿಗೂ ಆಚೆಯ ಬ್ರಿಟಿಷ್ ಕೊಲಂಬಿಯಾದ ಆಗ್ನೇಯ ಪ್ರದೇಶದ ಪರಾವಲಂಬಿ ಜೀವಿಗಳು ಕಂಡಿವೆ.

ಒಂದು ದೊಡ್ಡ ವಲಸೆ ಪ್ರಾರಂಭವಾಗಿದೆ. ಪ್ರತಿಯೊಂದು ಭೂಖಂಡದಲ್ಲೂ, ಪ್ರತಿಯೊಂದು ಸರೋವರದಲ್ಲೂ ಅದು ನಡೆಯುತ್ತಿದೆ.

ದೌಲದರ್ ಎತ್ತರದ ಪರ್ವತಶ್ರೇಣಿ. ಸುತ್ತ ಹದಿನೆಂಟು ಸಾವಿರ ಅಡಿ ಎತ್ತರದ ಬೆಟ್ಟಗಳು. ಅದರ ನಡುವೆ ಮೆಕ್ಲಿಯಡ್‌ಗಂಜ್ ಹಳ್ಳಿ. ಹನ್ನೆರಡು ಗಂಟೆಗಳ ಭಯಂಕರ ಟ್ಯಾಕ್ಸಿ ಪ್ರಯಾಣ ಮಾಡಿಕೊಂಡು ಅಲ್ಲಿಗೆ ಬಂದೆ. ಕರೆದುಕೊಂಡ ಬಂದ ಚಾಲಕ ಹೊಟೇಲಿಗಿಂತ ತುಂಬಾ ದೂರದಲ್ಲೇ ನಿಲ್ಲಿಸಿ, ನನ್ನ ಲಗೇಜನ್ನು ಹೊರಕ್ಕೆ ತೆಗೆದಿರಿಸಿ, ಹೋಗಿಬಿಟ್ಟ. ಆರು ತಿಂಗಳಿಗೆ ಸಾಕಾಗುವಷ್ಟು ಲಗೇಜನ್ನು ನಾನು ತೆಗೆದುಕೊಂಡು ಬಂದಿದ್ದೆ. ಚಾಲಕನದ್ದು ಅಕ್ಷಮ್ಯ ಅಪರಾಧ ಅನ್ನಿಸಿತು. ತೃಪ್ತಿಯಾಗುವಷ್ಟು ಶಪಿಸಿದೆ. ಆದರೆ ಬೆಳಗಾಗುತ್ತಿದ್ದಂತೆ ಸುತ್ತಲ ಪ್ರದೇಶವನ್ನು ನೋಡಿದಾಗ ಕೋಪ ಸ್ವಲ್ಪ ತಣ್ಣಗಾಯಿತು. ತುಂಬಾ ಕಡಿದಾದು ಇಳಿಜಾರು ಪ್ರದೇಶ. ತುಂಬಾ ಇಕ್ಕಟ್ಟು ರಸ್ತೆ. ದೆಹಲಿಯ ಆ ನರಪೇತಲ ಚಾಲಕನಿಂದ ಈಗವನು ಮಾಡಿದ್ದಕ್ಕಿಂತ ಹೆಚ್ಚಿನದೇನನ್ನೂ ನಾನು ನಿರೀಕ್ಷಿಸುವುದಕ್ಕೆ ಸಾಧ್ಯವಿರಲಿಲ್ಲ.

ಆರು ತಿಂಗಳು ಉಳಿಯುವುದಕ್ಕೆ ಸಿದ್ದಳಾಗಿಯೇ ಬಂದಿದ್ದೆ. ನೈಲಾನ್ ಜ್ಯಾಕೆಟ್, ನೀರು ಹೋಗದ ಗಟ್ಟುಮುಟ್ಟಾದ ಹೈಕಿಂಗ್ ಬೂಟುಗಳು ಹೀಗೆ ಅಲ್ಲಿಗೆ ಬೇಕು ಅನ್ನಿಸಿದ್ದನ್ನೆಲ್ಲಾ ಕೊಂಡುತಂದಿದ್ದೆ. ಎಲ್ಲವನ್ನು ಅವುಗಳನ್ನೇ ಮಾರುವ ಪರಿಣತನ ಅಂಗಡಿಯಿಂದ ದುಬಾರಿ ಬೆಲೆ ತೆತ್ತು ತಂದಿದ್ದೆ. ಆದರೆ ಇಲ್ಲಿಯ ಪರಿಸ್ಥಿತಿಗೆ ಅದೂ ಸಾಲದು ಅನ್ನಿಸುವಂತಿತ್ತು. ಕಾಳೆಲೆದುಕೊಂಡು ಮೇಲುಸಿರು ಬಿಡುತ್ತಾ ಊರಿನ ದಾರಿಯಲ್ಲಿ ನಡೆದೆ. ದಾರಿಯುದ್ದಕ್ಕೂ ರೀಸಸ್ ಕೋತಿಗಳು ನನ್ನ ಸಂಕಟಕ್ಕೆ ಸಾಕ್ಷಿಯಾಗಿ ಓಡಾಡುತ್ತಿದ್ದವು. ಸ್ಥಳೀಯ ನಾಯಿಗಳು ತಾಳ್ಮೆಯಿಂದ ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದವು.

ಹಿಮಾಲಯ ನೋಡಿದ ತಕ್ಷಣ ಎಂತವನಿಗೂ ದಾಟುವುದಕ್ಕೆ ಸಾಧ್ಯವಿಲ್ಲ ಅನ್ನಿಸಿಬಿಡುತ್ತದೆ. ವಲಸೆಗೆ ಯಾವುದಾದರೂ ಭೌಗೋಳಿಕ ಲಕ್ಷಣ ಅಡ್ಡಿಮಾಡಬಹುದು ಅಂದರೆ ಹಿಮಾಲಯ. ಅದೊಂದು ದಾಟಲಾಗದ ಗೋಡೆ. ಜೊತೆಗೆ ಅಲ್ಲಿಯ ಗಾಳಿ. ಅಷ್ಟು ಸಾಲದು ಎಂಬಂತೆ ಮಾನ್ಸೂನ್ ಮೋಡ ಅದಕ್ಕೆ ಡಿಕ್ಕಿ ಹೊಡಿದು ಈಗಷ್ಟೇ ತೆರದ ತೂಬಿನಿಂದ ಬರುವ ನೀರಿನಂತೆ ಜೋರಾಗಿ ಹರಿದು ಬರುತ್ತದೆ.

ಆದರೆ ಇಲ್ಲಿ ಕೂಡ ಜೀವಿಗಳು ಆ ಬೃಹದಾಕಾರದ ಗೋಡೆಯನ್ನು ದಾಟಿಕೊಂಡು ತೆವಲುತ್ತಾ, ಸರಿಯುತ್ತಾ ಏರುತ್ತಾ ಸಾಗುತ್ತಿವೆ. ಪ್ರತಿ ವರ್ಷ ಎಳೆಯ ಸಸಿಗಳು ಕಾಡಿನಲ್ಲಿ ಸ್ವಲ್ಪ ಸ್ವಲ್ಪವೇ ಮೇಲಕ್ಕೆ ಚಲಿಸುತ್ತಿವೆ. ಆಸಕ್ತ ವಿಜ್ಞಾನಿಗಳು ಹಾದಿಗುಂಟ ಮರದ ವಯಸ್ಸನ್ನು ಲೆಕ್ಕ ಹಾಕಿ ನೋಡಿ ಏನಾಗುತ್ತಿದೆ ಅನ್ನೋದನ್ನು ಕಂಡುಕೊಂಡಿದ್ದಾರೆ. 1880ರಿಂದ ಕಾಡು ನಿರಂತರವಾಗಿ ಬೆಟ್ಟದ ಹಾದಿಯಲ್ಲಿ ಮೇಲೆ ಮೇಲೆ ಹೋಗುತ್ತಿದೆ. ಪ್ರತಿ ದಶಕ ವರ್ಷ 19 ಮೀಟರ್ ಚಲಿಸುತ್ತಿದೆ. ಅವುಗಳೊಂದಿಗೆ ರೋಡೊಡೆಂಡ್ರಾನ್ ಮತ್ತು ಸೇಬಿನ ಮರಗಳು ಚಲಿಸಿವೆ. ಹಾಗೆ ಹೋಗುವಾಗ ತಮ್ಮನ್ನು ಆಶ್ರಯಿಸಿದ ಕೀಟಗಳನ್ನೂ ಜೊತೆಗೆ ಕರೆದುಕೊಂಡು ಹೋಗಿವೆ. ಹಿಮಾಲಯದ ಉತ್ತರದ ಭಾಗದ ತುಂಡ್ರಾದಲ್ಲಿ ಮೊದಲ ಬಾರಿಗೆ ಜನಕ್ಕೆ ಸೊಳ್ಳೆ ಕಡಿತದಿಂದ ವಿಚಿತ್ರವಾದ ತುರಿಕೆಯ ಅನುಭವವಾಗಿದೆ. ಅಲ್ಲಿ ಜನ ಕೂಡ ಸ್ವಲ್ಪ ಸ್ವಲ್ಪವೇ ಮುಂದಕ್ಕೆ ಹೋಗುತ್ತಿದ್ದಾರೆ. ಅವರು ಬೆಟ್ಟದ ಬುಡದ ಸುತ್ತ ಎತ್ತರದ ಹಿಮಾಲಯದ ಆಲ್ಫೈನ್ ಕಣಿವೆಯಲ್ಲಿ ಸಾಗುತ್ತಿದ್ದಾರೆ. ಲಕ್ಷಕ್ಕೂ ಹೆಚ್ಚು ಜನ ಟಿಬೆಟಿನ ಕಣಿವೆಯಿಂದ 500 ಮೈಲು ದೂರದಲ್ಲಿದ್ದ ಮ್ಯಾಕ್ ಲಿಯೊಡ್ ಗಂಜ್‌ಗೆ ವಲಸೆ ಬಂದಿದ್ದಾರೆ. ಚೀನಾ ಸರ್ಕಾರದ ಹಿಂಸೆಯನ್ನು ತಾಳಲಾರದೆ ಅವರು ಓಡಿ ಬಂದಿದ್ದಾರೆ. 14ನೇ ದಲೈಲಾಮನನ್ನು ಹಿಂಬಾಲಿಸಿಕೊಂಡು ಹಲವಾರು ಬೌದ್ಧ ಭಿಕ್ಕುಗಳು ಅಲ್ಲಿಗೆ 1959ರಲ್ಲಿ ಬಂದಿದ್ದರು. ಅವರೆಲ್ಲಾ ನನ್ನ ಹಾಗೆ ಏರೋಪ್ಲೇನಿನಲ್ಲಿ ಹಾರಿಕೊಂಡು ಬಂದವರಲ್ಲ. ಕಡಿದಾದ ಕಲ್ಲು ದಾರಿಯಲ್ಲಿ ಸರಳವಾದ ಚಪ್ಪಲಿಗಳನ್ನು ಹಾಕಿಕೊಂಡು ಉಣ್ಣೆ ಶಾಲುಗಳನ್ನು ಹೊದ್ದು ಹಲವು ತಿಂಗಳು ನಡೆದುಕೊಂಡು ಇಲ್ಲಿಗೆ ಬಂದಿದ್ದರು.

ಜನ ವಲಸೆ ಹೋಗುತ್ತಿದ್ದಾರೆ ಅನ್ನೋದು ಇಂದಿನ ದೊಡ್ಡ ಸುದ್ದಿ. ಅದು ಯಾವುದೇ ದಿನದ ಸುದ್ದಿಯೂ ಹೌದು. ಆಫ್ರಿಕಾದ ವಲಸಿಗರು ಹಸಿವು ಹಾಗೂ ಹಿಂಸೆಯನ್ನು ತಾಳಲಾರದೆ ಮುರುಕು ದೋಣಿಯಲ್ಲಿ ಹಿಡಿಸಲಾರದಷ್ಟು ಜನ ಇರುಕಿಕೊಂಡು ಮೆಡಿಟೇರಿಯೆನ್ ದಾಟುತ್ತಿದ್ದಾರೆ. ಚಿಂದಿಯಾದ ಕ್ಯಾಂಪುಗಳಲ್ಲಿ ನೆಲೆ ನಿಂತು ಸೊರಗಿ ಸೋತುಹೋಗಿ, ಅಲ್ಲಿಂದ ತಪ್ಪಿಸಿಕೊಂಡು ಹೋದ ಆಫ್ಘನ್ನರು ಮತ್ತು ಸಿರಿಯನ್ನರನ್ನು ಮತ್ತೆ ಕರೆತಂದು ಬಾಂಬು ಹಾಕಿ, ತಲೆಕತ್ತರಿಸಿ ಕೊಲ್ಲಲಾಗುತ್ತಿದೆ. ಸೊಂಟದಲ್ಲಿ ಮಕ್ಕಳನ್ನು ಎತ್ತಿಕೊಂಡು ಹೆಂಗಸರು ಹೊಂಡುರಾಸ್ ಮತ್ತು ಗ್ವಾಟೆಮಾಲದಿಂದ ನೂರಾರು ಮೈಲಿ ನಡೆದುಕೊಂಡು ಅಮೇರಿಕೆಯ ಬಾರ್ಡರನ್ನು ತಲಪುತ್ತಿದ್ದಾರೆ. ಈ ಪುಸ್ತಕ ಬರೆಯುತ್ತಿರುವ ಹೊತ್ತಿನಲ್ಲಿ ಟಿವಿಗಳಲ್ಲಿ ಒಂದು ಬ್ರೇಕಿಂಗ್ ನ್ಯೂಸ್ ಬರುತ್ತಿದೆ. ಫ್ಲೋರಿಡಾದ ಗವರ್ನರ್ ಮಿಲಿಯನ್ನಿಗೂ ಹೆಚ್ಚು ಫ್ಲೋರಿಡಾದ ನಿವಾಸಿಗಳನ್ನು ಖಾಲಿ ಮಾಡಿಸಲು ಆಜ್ಞೆ ಹೊರಡಿಸಿದ್ದಾನೆ. ವಿಚಿತ್ರವಾದ ದೊಡ್ಡ ಚಂಡಮಾರುತ ಅಪ್ಪಳಿಸಲಿದೆಯಂತೆ. ದೊಡ್ಡ ದುರಂತವಾಗಬಹುದು ಅನ್ನುವ ಆತಂಕದಲ್ಲಿ ಅವರಿದ್ದಾರೆ. ಫ್ಲೋರಿಡಾ ಪರ್ಯಾಯ ದ್ವೀಪದ ರಸ್ತೆಗಳು ಸಧ್ಯದಲ್ಲೇ ಎತ್ತರದ ಪ್ರದೇಶಗಳನ್ನು ಹುಡುಕಿಕೊಂಡು ಹೊರಡಲಿರುವ ಕುಟುಂಬಗಳಿಂದ ತುಂಬಿ ಹೋಗಲಿವೆ.

ವನ್ಯ ಜೀವಿಗಳ ವಲಸೆ ತಮ್ಮ ಸ್ವಂತದ ಜೈವಿಕ ಸಾಮರ್ಥ್ಯ, ದಾರಿಯಲ್ಲಿ ಎದುರಾಗುವ ನಿರ್ದಿಷ್ಟ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿದೆ. ಪರ್ವತ ಶ್ರೇಣಿಗಳ ಇಳಿಜಾರು, ಸರೋವರದ ಅಲೆಗಳ ವೇಗ, ಅದರ ಲವಣಾಂಶ ಇತ್ಯಾದಿ ಅಂಶಗಳು ವನ್ಯ ಜೀವಿಗಳ ವಲಸೆಯನ್ನು ಪ್ರಭಾವಿಸುತ್ತವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಮಾನವರ ವಲಸೆಯನ್ನು ಮುಖ್ಯವಾಗಿ ಹಲವು ಅಮೂರ್ತ ಅಂಶಗಳು ನಿರ್ಧರಿಸುತ್ತವೆ. ದೂರದ ರಾಜಕೀಯ ನಾಯಕರು ರಾಜಕೀಯ ಹಾಗೂ ಆರ್ಥಿಕ ಕಾಳಜಿಗಳನ್ನು ಆಧರಿಸಿ ರೂಪಿಸಿದ ಕಾನೂನುಗಳು ಜನರ ವಲಸೆಯನ್ನು ನಿರ್ಧರಿಸುತ್ತವೆ. ಕೆಲವರಿಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಕೆಲವರನ್ನು ಹೊರಗಿಡಲಾಗುತ್ತದೆ. ಸಾರಿಗೆ ಕಂಪೆನಿಗಳು ಕೆಲವು ದಾರಿಯಲ್ಲಿ ವಲಸಿಗರನ್ನು ಕರೆದುಕೊಂಡು ಹೋಗುತ್ತವೆ. ಕೆಲವು ದಾರಿಯಲ್ಲಿ ಕರೆದೊಯ್ಯುವುದಿಲ್ಲ. ಗಾಳಿಯನ್ನೋ, ಹವಾಮಾನವನ್ನೋ ಆಧರಿಸಿ ಅವರು ಹೀಗೆ ಮಾಡುತ್ತಿಲ್ಲ. ಯಾವುದರಿಂದ ಹೆಚ್ಚು ಲಾಭ ಬರುತ್ತದೋ ಆ ಕಡೆ ಹೋಗುತ್ತಾರೆ.

ಏನೇ ಇರಲಿ ನಾವು ವಲಸೆ ಹೋಗುತ್ತಿದ್ದೇವೆ. ಎಂದಿಗಿಂತ ಇಂದು ಜನ ತಾವು ಹುಟ್ಟಿದ ದೇಶಕ್ಕಿಂತ ಬೇರೆ ಕಡೆ ಹೆಚ್ಚು ಇದ್ದಾರೆ. ಕಾರಣ ಬೇರೆ ಬೇರೆ ಇರುತ್ತದೆ. 2008 ಹಾಗೂ 2014ರ ನಡುವೆ ಪ್ರವಾಹ, ಭೂಕಂಪ ಇತ್ಯಾದಿಗಳಿಂದ ಪ್ರತಿ ವರ್ಷ 26 ಮಿಲಿಯನ್ ಜನ ವಲಸೆ ಹೋಗಿದ್ದಾರೆ. ಆಸ್ಥಿರತೆ ಕಾಡುತ್ತಿರುವ ಕೆಲವು ಸಮಾಜಗಳಲ್ಲಿ ಹಿಂಸೆ ಹಾಗೂ ಕಿರುಕುಳ ತಾಳಲಾರದೆ ಜನ ವಲಸೆ ಹೋಗಿದ್ದಾರೆ. 2015ರಲ್ಲಿ 15 ಮಿಲಿಯನ್ ಜನ ತಮ್ಮ ದೇಶದಿಂದ ಹೊರಗೆ ಹೋಗಿದ್ದಾರೆ. ಎರಡನೇ ಮಹಾ ಯುದ್ಧದ ನಂತರ ಇಷ್ಟೊಂದು ಜನ ಎಂದೂ ವಲಸೆ ಹೋಗಿರಲಿಲ್ಲ. ಇದರ 25 ಪಟ್ಟು ಜನ ವಲಸೆಗೆ ಹೋಗಲು ತಯಾರಿದ್ದಾರೆ. ಇವೆಲ್ಲಾ ಒಂದು ಸಾಮಾನ್ಯ ಅಂಶವನ್ನು ತಿಳಿಸುತ್ತದೆ. ಜನ ಹಳ್ಳಿಗಳಿಂದ ಜಗತ್ತಿನ ನಗರಗಳ ಕಡೆ ವಲಸೆ ಹೋಗುತ್ತಿದ್ದಾರೆ. 2030ರ ವೇಳೆಗೆ ಮೊದಲ ಬಾರಿಗೆ ನಮ್ಮಲ್ಲಿ ಬಹುಸಂಖ್ಯಾತರು ನಗರವಾಸಿಗಳಾಗುತ್ತಾರೆ. ಬರುವ ವರ್ಷಗಳಲ್ಲಿ ನಮ್ಮ ವಲಸೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.  2045ರ ವೇಳೆಗೆ ಆಫ್ರ‍್ರಿಕೆಯ ಸಹಾರಾ ಮರುಭೂಮಿ ವಿಸ್ತಾರಗೊಳ್ಳಲಿದ್ದು 60 ಮಿಲಿಯನ್ ಜನ ವಲಸೆ ಹೋಗುವ ಸಾಧ್ಯತೆಯಿದೆ. 2100ರ ವೇಳೆಗೆ ಸಮುದ್ರದ ನೀರಿನ ಮಟ್ಟ ಏರಿ ಇನ್ನೂ 180 ಮಿಲಿಯನ್ ಜನ ಆ ವಲಸಿಗರ ಗುಂಪಿಗೆ ಸೇರಿಲಿದ್ದಾರೆ.

ಈ ಅಂಕಿಅಂಶಗಳು ನಮ್ಮ ಇಂದಿನ ವಲಸೆಯ ಪ್ರಮಾಣ ಮತ್ತು ವೇಗವನ್ನು ಕುರಿತಂತೆ ಭಾಗಶಃ ಚಿತ್ರವನ್ನಷ್ಟೇ ಕೊಡುತ್ತದೆ. ಮನುಷ್ಯರ ವಲಸೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಸಂಗ್ರಹಿಸುವ ಕೇಂದ್ರ ಸಂಸ್ಥೆಗಳ್ಯಾವುವೂ ಇಲ್ಲ. ಅಧಿಕಾರಿಗಳು ವಲಸೆ ಬರುವವರನ್ನು ಮಾತ್ರ ದಾಖಲಿಸುತ್ತಾರೆ. ಹೋಗುವವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅನುಮತಿ ಇಲ್ಲದೇ ವಲಸೆ ಹೋಗುವವರ ಬಗ್ಗೆ ಮಾತ್ರ ಅಂದಾಜು ಸಿಗಬಹುದು. ನಿಜವಾಗಿ ವಲಸೆ ಹೋಗುವವರ ಒಟ್ಟು ಸಂಖ್ಯೆ ತಿಳಿಯುವುದಕ್ಕೆ ಸಾಧ್ಯವಿಲ್ಲ. ಒಂದು ವಿಷಯವಂತೂ ಸ್ಪಷ್ಟ. ಮನುಷ್ಯರು ಕೂಡ ತಮ್ಮ ವನ್ಯಜೀವಿ ಸೋದರರಂತೆ ವಲಸೆ ಹೋಗುತ್ತಾರೆ

ವಲಸೆ ಹೋಗೋದು ಜೀವಶಾಸ್ತ್ರ ಮತ್ತು ಚರಿತ್ರೆಯ ಪ್ರಮುಖ ಅಂಶ ಅನ್ನೊಂದು ನಮಗೆ ಸ್ಪಷ್ಟವಾಗುತ್ತಿದೆ. ಹೊಸ ಜೈವಿಕ ತಂತ್ರಜ್ಞಾನ, ನೇವಿಗೇಷನಲ್ ತಂತ್ರಜ್ಞಾನ ಇವೆಲ್ಲಾ ಮನುಷ್ಯರ ಹಾಗೂ ಪ್ರಾಣಿಗಳ ವಲಸೆ ಎಷ್ಟು ಸಂಕೀರ್ಣವಾದದ್ದು ಎಂದು ತೋರಿಸಿಕೊಟ್ಟಿದೆ.  ಜೈವಿಕ ವೈವಿಧ್ಯತೆಯನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಮಾನವ ಸಮಾಜವನ್ನು ಸ್ಥಿರವಾಗಿಡುವಲ್ಲಿ ವಲಸೆಯ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.

ಮುಂದಿನ ಬೃಹತ್ ವಲಸೆ ನಮ್ಮ ಮುಂದಿದೆ. ಸಮಸ್ಯೆ ಅಂದರೆ ಗಿಡಗಳು, ಪ್ರಾಣಿಗಳು ಮತ್ತು ಜನ ಕೆಲವು ಸ್ಥಳಗಳಿಗೆ ಸೇರಿದವರು ಅಂತ ನಮಗೆ ನಮ್ಮ ಬಾಲ್ಯದಲ್ಲಿ ಕಲಿಸಲಾಗಿತ್ತು. ಅದಕ್ಕೆ ನಾವು ಬಾತನ್ನು ಕೆನಡಾದ ಗೂಸ್, ಮೇಪಲನ್ನು ಜಪಾನಿನ ಮೇಪಲ್ ಅಂತ ಕರೆಯೋದು. ಅದಕ್ಕೆ ಒಂಟೆ ಅಂದರೆ ಮಿಡಲ್ ಈಸ್ಟ್, ಕಾಂಗರೂ ಅಂದರೆ ಆಸ್ಟ್ರೇಲಿಯಾ ಅನ್ನೋದು. ನಮ್ಮ ಚರ್ಮದ ಬಣ್ಣ, ಕೂದಲಿನ ಟೆಕ್‌ಶ್ಚರ್‌ನಿಂದಾಗಿ ನಾವು ಅಮೇರಿಕನ್ನರು, ಆಫ್ರಿಕನ್ನರು ಅಥವಾ ಏಷಿಯನ್ನರು ಅಥವಾ ಯುರೋಪಿಯನ್ನರು ಅಗುತ್ತೇವೆ. ಜನ ಎಲ್ಲೇ ವಾಸಿಸುತ್ತಿರಲಿ ನಾವು ಅವರನ್ನು ಕೆಲವು ಸ್ಥಳಗಳಿಂದ ಬಂದವರು ಅಂತಲೇ ವರ್ಣಿಸುತ್ತೇವೆ.

ಈ ಪ್ರವೃತ್ತಿ 18ನೇ ಶತಮಾನದಲ್ಲಿ ಪ್ರಾರಂಭವಾಯಿತು. ಯರೋಪಿನ ಪ್ರಕೃತಿತಜ್ಞರು ಪ್ರಾಕೃತಿಕ ಜಗತ್ತನ್ನು ವರ್ಗಿಕರಿಸಲು ಪ್ರಾರಂಭಿಸಿದಾಗ ಅವರು ಜನ ಹಾಗೂ ಜೀವಿಗಳು ಚರಿತ್ರೆಯುದ್ದಕ್ಕೂ ಒಂದು ನಿರ್ದಿಷ್ಟ ಸ್ಥಳದಲ್ಲೇ ಉಳಿಯುತ್ತಾರೆ ಅಂತ ಅಂದುಕೊಂಡು ಜನರನ್ನು ಪ್ರಾಣಿಗಳನ್ನು ಆಯಾ ಸ್ಥಳಗಳನ್ನು ಆಧರಿಸಿ ಹೆಸರಿಸಿದರು. ಶತಮಾನದಷ್ಟು ಪುರಾತನವಾದ ಆ ಟ್ಯಾಕ್ಸಾನಮಿಯೇ ಜೀವಶಾಸ್ತ್ರದ ಇತಿಹಾಸವನ್ನು ಕುರಿತ ನಮ್ಮ ಚಿಂತನೆಯ ಬುನಾದಿಯಾಗಿಬಿಟ್ಟಿದೆ.

ಗತವನ್ನು ಕುರಿತಂತೆ ನಮಗಿರುವ ನಂಬಿಕೆ ಅಂದರೆ ಜನ ಮತ್ತು ಜೀವಿಗಳು ಕದಲುವುದಿಲ್ಲ. ಇದ್ದಲ್ಲೇ ಇರುತ್ತಾರೆ. ಅದು ನಮ್ಮ ಚಿಂತನೆಯ ಪ್ರಮುಖ ಭಾಗವಾಗಿದೆ. ಹಾಗಾಗಿಯೇ ವಲಸೆಗಾರರನ್ನು ಮತ್ತು ವಲಸೆಗೆಳನ್ನು ವಿಕೃತಿಯನ್ನಾಗಿಯೋ, ವಿನಾಶಕಾರಿಯಾಗಿಯೋ ಕಾಣುತ್ತೇವೆ. ಹಿಂದಿನ ಪರಿಸರವಾದಿಗಳು ಪರಿಸರದ ದೃಷ್ಟಿಯಿಂದ ವಲಸೆ ಅನ್ನುವುದು ಉಪಯೋಗಕ್ಕೆ ಬಾರದ್ದು ಅಷ್ಟೇ ಅಲ್ಲ ಹಾನಿಕಾರಕವಾದದ್ದು ಎಂದು ತಳ್ಳಿಹಾಕಿಬಿಡುತ್ತಿದ್ದರು. ಪ್ರಾಣಿಗಳನ್ನು ಹಾಗೂ ಮನುಷ್ಯರನ್ನು ವಲಸೆ ಹೋಗಲು ಬಿಡುವುದರಿಂದ ಜೈವಿಕ ದುರಂತ ಉಂಟಾಗುತ್ತದೆ ಅಂತ ಬೇರೆ ಎಚ್ಚರಿಸಿದ್ದರು. ಎರಡು ವಿಭಿನ್ನ ಮೂಲದ ಜನರ ನಡುವೆ ಲೈಂಗಿಕ ಸಂಬಂಧಗಳು ಹಾನಿಕಾರಕ ಎಂದೇ ಪ್ರಮುಖ ವಿಜ್ಞಾನಿಗಳು ಅಂದುಕೊಂಡಿದ್ದರು. ಒಬ್ಬ ವಿಜ್ಞಾನಿಯಂತೂ ವಲಸೆ ಹೋಗಬೇಕೆಂದು ಕೊಂಡವರು “ಗೌರವದಿಂದ ಉಪವಾಸ”ವನ್ನು ಅನುಭವಿಸೋಕೆ ತಯಾರಾಗಬೇಕು. ಇಲ್ಲದೆ ಹೋದರೆ ವಲಸೆ ಹೋಗಿ ನಮ್ಮನ್ನು ನಿರ್ನಾಮ ಮಾಡುತ್ತಾರೆ ಅಂದಿದ್ದ.

ವಲಸೆಯನ್ನು ಒಂದು ರೀತಿಯ ವಿಕೃತಿ ಎಂದು ಕೇವಲ ವಿಜ್ಞಾನಿಗಳು ಮಾತ್ರ ಭಾವಿಸಿಲ್ಲ. ಜನಪ್ರಿಯ ಸಂಸ್ಕೃತಿಯಲ್ಲೂ ಅಂತಹ ಭಾವನೆ ವ್ಯಾಪಕವಾಗಿ ಹರಡಿಕೊಂಡಿದೆ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಅಮೇರಿಕೆಯ ಗಡಿಯನ್ನು ಮುಚ್ಚುವುದಕ್ಕೂ ಇಂತಹ ಯೋಚನೆಯೇ ಪ್ರೇರಣೆ. ಅದೇ ನಾಜಿಗಳ ಫ್ಯಾಸಿಸ್ಟ್ ಕನಸುಗಳಿಗೂ ಕಾರಣ. ಇಂದಿನ ವಲಸೆಯ ವಿರೋಧಿ ಲಾಬಿಗಳಿಗೆ, ನೀತಿಗಳನ್ನು ರೂಪಿಸುವವರಿಗೆ ಸೈದ್ದಾಂತಿಕ ಹತಾರಗಳನ್ನು ಒದಗಿಸಿರುವುದೂ ಆ ನಂಬಿಕೆಯೇ. ಸಂಪ್ರದಾಯವಾದಿಗಳಿಗೆ ವಲಸಿಗರು ‘ಆಕ್ರಮಣಕಾರಿಗಳಾಗಿ’ ಕಾಣುತ್ತಿದ್ದಾರೆ. ವಲಸಿಗ ಜೀವಿಗಳು ತಮ್ಮೊಂದಿಗೆ ವಿದೇಶಿ ಸೂಕ್ಷ್ಮಾಣುಗಳನ್ನು ತಂದು ಪಿಡುಗುಗಳನ್ನು ಹರಡುತ್ತವೆ. ವಲಸೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ಜೈವಿಕ ವೈದ್ಯಕೀಯ ಪರಿಣತರು ಸಾರಿದರು. ವಿದೇಶಿ ನೀತಿ ಪರಿಣತರು ದೇಶದ ಅಸ್ಥಿರತೆ ಮತ್ತು ಹಿಂಸೆಗೆ ಅದರಲ್ಲಿ ಕಾರಣವನ್ನು ಕಂಡುಕೊಂಡರು. ಆರ್ಥಿಕ ದುರಂತಕ್ಕೂ ಅದೇ ಕಾರಣ ಅಂತ ಹೇಳುವವರು ಅಷ್ಟೇ ವ್ಯಾಪಕವಾಗಿದ್ದಾರೆ.

ವಲಸೆ ವಿಚ್ಛಿದ್ರಕಾರಿ ಅನ್ನುವ ಯೋಚನೆ ಪತ್ರಕರ್ತಳಾಗಿ ನನ್ನನ್ನೂ ಪ್ರಭಾವಿಸಿದೆ. ಹಲವು ವರ್ಷಗಳು ಜೀವಿಗಳು ವಲಸೆಯಿಂದ ಆಗುವ ಹಾನಿಗಳ ಬಗ್ಗೆ ವರದಿ ಮಾಡಿದ್ದೆ. ಕಾಲರ ಬ್ಯಾಕ್ಟಿರಿಯಾಗಳು ವ್ಯಾಪಾರಿಗಳ ಹಾಗೂ ಪ್ರಯಾಣಿಕರ ದೇಹದ ಮೂಲಕ ಜಗತ್ತಿನಾದ್ಯಂದ ಸಂಚರಿಸಿ ಪಿಡುಗನ್ನು ಹರಡಿ ಜಾಗತಿಕ ಆರ್ಥಿಕತೆಯನ್ನು ಮರುರೂಪಿಸುತ್ತದೆ ಎಂದು ಬರೆದಿದ್ದೆ. ಈಗ ನನಗೂ ಈ ವಲಸೆಯನ್ನು ಕುರಿತು ಅಧ್ಯಯನ ಮಾಡಬೇಕು, ಅದನ್ನು ವಿವರಿಸಬೇಕು ಅನ್ನಿಸಿತು. ನನ್ನ ಕುಟುಂಬ ಕೂಡ ಹೀಗೆ ವಲಸೆ ಬಂದ ಕುಟುಂಬವೇ. ಆದರೆ ನನಗೆ ಅದರಲ್ಲಿ ಯಾವುದೇ ಅಸಂಗತತೆಯೂ ಕಂಡಿರಲಿಲ್ಲ. ಈ ಪ್ರವೃತ್ತಿಯನ್ನು ಅರ್ಥಮಾಡಿಕೊಳ್ಳಬೇಕು. ನನ್ನ ಹಿಂದಿನವರು ಗುಜರಾತಿನ ಎರಡು ಹಳ್ಳಿಗಳಲ್ಲಿ ವಾಸಿಸುತ್ತಿದ್ದವರು. ಅವು ಮೀನುಗಾರಿಕೆ ಮಾಡಿಕೊಂಡು ಬಂದಿದ್ದ ಗ್ರಾಮಗಳು. ಪಕ್ಕದಲ್ಲೇ ಅರೇಬಿಯನ್ ಸಮುದ್ರ. ಅಲ್ಲೇ ಮೊದಲು ಐರೋಪ್ಯರು, ಅಗ್ನೇಯ ಏಷಿಯಾದಿಂದ, ಆಫ್ರಿಕೆಯಿಂದ ಬಂದ ವಲಸಿಗರು ನೆಲೆ ನಿಂತದ್ದು. ನನ್ನ ಪೂರ್ವಿಕರು ಈ ಹಳ್ಳಿಗಳಲ್ಲೇ ಬೆಳೆದದ್ದು. ನನ್ನ ಹಿರಿಯರೊಬ್ಬರು ಬೆನ್ನ ಮೇಲೆ ಸೀರೆಯನ್ನು ಹೊತ್ತು ಮಾರುತ್ತಿದ್ದರು. ಇನ್ನೊಬ್ಬರು ಅಡಿಗೆ ಪಾತ್ರೆಗಳನ್ನು ಮಾರುವ ಒಂದು ಪುಟ್ಟ ಅಂಗಡಿಯನ್ನು ಇಟ್ಟುಕೊಂಡಿದ್ದರು.

ವಲಸೆಯ ಅಲೆಯನ್ನು ವಿರೋಧಿಸುವುದಕ್ಕೆ ಒಂದಿಷ್ಟು ಸಂಪ್ರದಾಯಗಳು ಹುಟ್ಟಿಕೊಂಡಿದ್ದವು. ಅವುಗಳ ನಡುವೆಯೇ ಅವರಿಬ್ಬರೂ ಬೆಳೆದರು. ಅದನ್ನು ಪಾಲಿಸಿಕೊಂಡು ಬಂದರು. ಉದಾಹರಣೆಗೆ ತಮ್ಮ ಜೀನ ಪಂಥಕ್ಕೆ ಸೇರಿದವರನ್ನಷ್ಟೆ ಮದುವೆಯಾಗುತ್ತಿದ್ದರು. ಅದೂ ಹೆಚ್ಚೆಂದರೆ ಪಕ್ಕದ ಹಳ್ಳಿಯವರೊಂದಿಗೆ ಸಂಬಂಧ ಬೆಳಸಬಹುದಿತ್ತು. ಅವರ ಮಕ್ಕಳು ಅಂದರೆ ನನ್ನ ಮುತ್ತಜ್ಜಂದಿರು ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದರು. ತಮ್ಮದೇ ಗ್ರಾಮದ ಶ್ರೀಮಂತ ಕುಟುಂಬದ ಹೆಣ್ಣು ಮಕ್ಕಳನ್ನು ಮದುವೆಯಾದರು. ಆದರೆ ತಮ್ಮ ಜನ ನಗರಗಳಿಗೆ ವ¯ಸೆ ಹೋಗುವುದನ್ನು ಅವರು ತಡೆಯಲಿಲ್ಲ. ಒಬ್ಬರು ತನ್ನ ಮಕ್ಕಳೊಂದಿಗೆ ಮುಂಬೈಗೆ ಹೋದರು. ಅಲ್ಲಿ ಹಾಗೆ ವಲಸೆ ಬಂದ ಕೆಲಸಗಾರರಿಗೇ ನಿರ್ಮಿಸಿದ್ದ ಕಟ್ಟಡದಲ್ಲಿ ಉಳಿದುಕೊಂಡರು. ಮತ್ತೊಬ್ಬರು ತಮಿಳು ಮಾತನಾಡುವ ಕೊಯಂಬತ್ತೂರಿಗೆ ಹೋದರು. ಈ ಎರಡು ಕುಟುಂಬಗಳು ದುಡಿದು ತಮ್ಮ ಮಕ್ಕಳನ್ನು ಓದಿಸಿದರು. ಹಾಗೆ ನನ್ನ ತಂದೆ ತಾಯಿ ವೈದ್ಯಕೀಯ ಶಿಕ್ಷಣ ಮುಗಿಸಿದರು.

ಅವರ ಓದು ಮುಗಿಯುತ್ತಿದ್ದಂತೆಯೇ ವಲಸೆಯ ಒಂದು ಹೊಸ ಹಾದಿ ತೆರೆದುಕೊಂಡಿತ್ತು. 20ನೇ ಶತಮಾನದ ಪ್ರಾರಂಭದಿಂದ ಅಮೇರಿಕೆಯ ಗಡಿಯನ್ನು ಮುಚ್ಚಲಾಗಿತ್ತು. ಆದರೆ ಸರ್ಕಾರದ ಮೆಡಿಕೇರ್ ಇತ್ಯಾದಿ ಕಾರ್ಯಕ್ರಮಗಳಿಗೆ ವೈದ್ಯರ ಅವಶ್ಯಕತೆ ತುಂಬಾ ಇತ್ತು. ಕಾನೂನು ಬದಲಾಯಿತು. ನುರಿತ ಕಾರ್ಮಿಕರಿಗೆ ಅಮೇರಿಕೆಯ ಬಾಗಿಲು ತೆರೆದುಕೊಂಡಿತು. ನಮ್ಮ ತಂದೆ ತಾಯಿಗೆ ಹಲವು ಕರೆಗಳು ಬಂದವು. ಉಳಿಯುವುದಕ್ಕೆ ಸ್ಥಳ ಇದೆಯೇ, ಅಂತಹ ಮನೆಯಲ್ಲಿ ಬಾಲ್ಕನಿ ಇದೆಯೇ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ತೂಗಿ ನೋಡಿ ಅವರು ಕೆಲಸವನ್ನು ಆಯ್ಕೆ ಮಾಡಿಕೊಂಡರು.

ನಮ್ಮ ತಂದೆ ತಾಯಿ ಅಮೇರಿಕೆಗೆ ಹೊರಟ ಮೊದಲ ವಲಸಿಗರು. ಆ ಹೊಸ ಅಲೆಯಲ್ಲಿ ನಾಲ್ಕು ಸಾವಿರ ಜನ ಅವರೊಂದಿಗೆ ವಲಸೆ ಹೋಗಿದ್ದರು. ಅವರು ನ್ಯೂಯಾರ್ಕ್ ನಗರಕ್ಕೆ ಹೋದ ಕೆಲವು ವರ್ಷಗಳ ನಂತರ ನಾನು ಹುಟ್ಟಿದೆ. ಹಾಗೆ ಅಮೇರಿಕೆಗೆ ವಲಸೆ ಹೋದವರಲ್ಲಿ ಜನಿಸಿದ ನಾಲ್ಕು ಮಿಲಿಯನ್ನಿಗೂ ಹೆಚ್ಚು ಮಕ್ಕಳಲ್ಲಿ ನಾನೂ ಒಬ್ಬಳು. ನನ್ನ ಹಿರಿಯರ ಗತದಿಂದ ನಾನು ಕಳಚಿಕೊಂಡಿದ್ದೆ. ಅದಕ್ಕೆ ನನಗೆ ಸಂತೋಷವಾಗಿತ್ತು. ಸಮುದ್ರ ದಾಟಿಕೊಂಡು ಬಂದಿದ್ದೆವು. ಹಿಂದಿನ ಕಟ್ಟುಪಾಡುಗಳಿಂದ ನಾವಿಬ್ಬರು ಮುಕ್ತರಾಗಿದ್ದೆವು. ಮಂತ್ರ‍್ರಗಳನ್ನು ಬಾಯಿಪಾಠ ಮಾಡಬೇಕಾಗಿರಲಿಲ್ಲ. ಹಿರಿಯರ ಕಾಲಿಗೆ ಬೀಳುವ ಅವಶ್ಯಕತೆ ಇರಲಿಲ್ಲ. ನಮ್ಮ ಅಪ್ಪ ಅಮ್ಮ ಗೊತ್ತು ಮಾಡಿದ ಯಾವುದೋ ಸಂಬಂಧಿಕನನ್ನು ಮದುವೆಯಾಗುವ ಒತ್ತಾಯವಿರಲಿಲ್ಲ. ನಮ್ಮ ಅಪ್ಪ ಅಮ್ಮ ಮುಂಬೈನಲ್ಲಿ ಒಂದು ದೊಡ್ಡ ಆಪಾರ್ಟಮೆಂಟ್ ಕೊಂಡಿದ್ದರು. ಅದರಲ್ಲಿ ನಾವು ಚಿಕ್ಕವರಿದ್ದಾಗ ಓಡಾಡಿದ್ದು ಈಗಲೂ ನನಗೆ ನೆನಪಿದೆ. ಅಮೇರಿಕೆಯಲ್ಲಿ ಕೆಲವು ವರ್ಷ ಕಳೆದು ನಂತರ ಮುಂಬಾಯಿಗೆ ಮರಳುವ ಯೋಚನೆ ಅವರಿಗಿತ್ತು. ಆದರೆ ಅವರು ಹಾಗೆ ಮರಳುವ ಯೋಚನೆಯನ್ನು ಕೈಬಿಟ್ಟಾಗ ನಾನು ಮರಣದಂಡನೆಯಿಂದ ತಪ್ಪಿಸಿಕೊಂಡಂತೆ ಸಂಭ್ರಮಿಸಿದ್ದೇನೆ. ಅದರೂ ಅವರ ವಲಸೆಯಿಂದ ನನ್ನಲ್ಲಿ ಪರಕೀಯತೆಯ ಭಾವನೆ ಕಾಡುತ್ತಿದೆ. ಐದು ದಶಕಗಳ ಹಿಂದೆ ಆಗಿದ ಘಟನೆಯಿಂದ ಹೊರಬರಲಾಗಿಲ್ಲ. ಇಲ್ಲಿ ಬೇರೆ ಮಕ್ಕಳು ಹಾತೊರೆಯುವ ಅಮೇರಿಕೆಯ ಚಾಕೊಲೇಟಿಗಿಂತ ಸ್ಟ್ರಾಬರಿ ಐಸ್‌ಕ್ರೀಂ ಇಷ್ಟ ಆಗುತ್ತದೆ. ಹಾಗೆಯೇ ಭಾರತಕ್ಕೆ ಹೋದಾಗ ಮಸಾಲೆಯನ್ನು ಹೆಚ್ಚು ಹಾಕಿ ತಯಾರಿಸಿರುವ ಪದಾರ್ಥಗಳು ಇಷ್ಟ ಆಗೋದಿಲ್ಲ. ಪ್ರತಿಯೊಬ್ಬರಿಗೂ ನಾನು ಅವರಲ್ಲಿ ಒಬ್ಬಳು ಅನ್ನಿಸುವುದಿಲ್ಲ. ಅದನ್ನು ಹೇಳುವುದಕ್ಕೂ ಅವರು ಹಿಂದೇಟು ಹಾಕುವುದಿಲ್ಲ. ಅಮೇರಿಕೆಯಲ್ಲಿ ನನ್ನ ಕರಿ ಕೂದಲು ನನ್ನ ಕಂದು ಬಣ್ಣ ನೋಡಿ ಅವರಿಗೆ ನಾನು ಅಮೇರಿಕೆಯ ಯಾವುದೋ ನಗರಕ್ಕೆ ಸೇರಿದವಳು ಅನ್ನಿಸುವುದಿಲ್ಲ. ‘ನಿಜವಾಗಿ’ ನೀನು ಎಲ್ಲಿಯವಳು ಅಂತ ಕೇಳುತ್ತಾರೆ. ನಾನು ಅಲ್ಲೇ ಹುಟ್ಟಿ ನನ್ನ ಮಕ್ಕಳು ಅಲ್ಲೇ ಇದ್ದರೂ ನಾನು ಅಲ್ಲಿಯವಳಲ್ಲ. ನಾನು ಅಲ್ಲಿಯ ಮುಖ್ಯವಾಹಿನಿಗೆ ಸೇರಿದವಳಲ್ಲ. ಅಂಚಿಗೆ ಸರಿದಿದ್ದೇನೆ. ನಾನು ಅಲ್ಲೇ ದಶಕಗಳಿಂದ ಬದುಕಿದ್ದರೂ ನಾನು ಬಾಲ್ಟಿಮೋರ್‌ನಿಂದ ಬಂದವಳು ಅಂತ ಈಗಲೂ ಹೇಳಿಕೊಳ್ಳುವುದಿಲ್ಲ.

ವಲಸೆಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಜಗತ್ತಿನ ಸುತ್ತ ವಲಸಿಗರು ಹಾದು ಹೋದ ದಾರಿಯನ್ನು ಹುಡುಕಿಕೊಂಡು ಹೊರಟೆ.

ಗುಲಾಂ ಹ್ಯಾಕ್ಯಾರ್ ನೋಡೋದಕ್ಕೆ ಹಾಲಿವುಡ್ ನಟ ಇದ್ದ ಹಾಗೆ ಇದ್ದ. ಆಫ್ಘಾನಿಸ್ತಾನದ ಹೆರತ್ ಪ್ರಾಂತ್ಯದಲ್ಲಿ ಒಂದು ಅಂತರರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಒಳ್ಳೆಯ ಸಂಬಳ ಬರುತ್ತಿತ್ತು.  ಹೆಂಡತಿ ಮಕ್ಕಳ ಜೊತೆ ಹೆರತ್‌ನಲ್ಲಿ ಸಂತೋಷವಾಗಿ ಬದುಕಿದ್ದ. ಅವನಿಗೆ ಜರ್ಮನಿಗೆ ಹೋಗಿ ನೆಲಸುವ ಆಸೆ ಇತ್ತು. ನಾನು ಅವನನ್ನು ಕೆಲವು ವರ್ಷಗಳ ಹಿಂದೆ ಬೇಟಿಯಾದಾಗ ಅವನು ಮತ್ತು ಅವರ ಮಗ ಇಬ್ಬರೂ ಜರ್ಮನಿ ಕಲಿಯುತ್ತಿದ್ದರು. ಅದರಿಂದ ಮುಂದೆ ಅನುಕೂಲವಾಗುತ್ತದೆ ಅಂತ ಭಾವಿಸಿದ್ದರು.

ಆಗ ತಾಲಿಬಾನ್ ಚಳುವಳಿಯ ಮಿಲಿಟೆಂಟುಗಳು ಹ್ಯಾಕ್ಯಾರನ ಸಹುದ್ಯೋಗಿಗಳನ್ನು ಸೆರೆಹಿಡಿದು ಕ್ರೂರವಾಗಿ ಕೊಲೆ ಮಾಡಿದರು. ಮುಂದಿನ ಸರದಿ ತಮ್ಮದು ಅನ್ನೊ ಗಾಬರಿಯಿಂದ ಮನೆಯನ್ನು ಕಾಲು ಬೆಲೆಗೆ ಮಾರಿ, ಜರ್ಮನ್ ಭಾಷೆಯ ಪುಸ್ತಕಗಳು ಸೇರಿದಂತೆ ಒಂದಿಷ್ಟು ಸಾಮಾನುಗಳನ್ನು ಕಟ್ಟಿಕೊಂಡು ಊರು ಬಿಟ್ಟರು. ಬೆಟ್ಟಗಳಲ್ಲಿ ಪ್ರಯಾಣಿಸುತ್ತಾ ಮೊದಲು ಪಾಕಿಸ್ತಾನ ನಂತರ ಇರಾನಿಗೆ ಬಂದರು. ಬೇಕಾದ ಅಧಿಕೃತ ದಾಖಲೆಗಳನ್ನು ಹೊಂದಿಸಿಕೊಳ್ಳಲು ಸಮಯ ಇರಲಿಲ್ಲ. ಪೋಲಿಸರಿಂದ ತಪ್ಪಿಸಿಕೊಂಡು, ಕದ್ದುಮುಚ್ಚಿ ಹೋಗಬೇಕಿತ್ತು. ಒಮ್ಮೆ ಹೆಂಡತಿಯ ಆರೋಗ್ಯ ತಪ್ಪಿ, ಅವಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರಯಾಣ ಮಾಡಿದ್ದೂ ಇದೆ. ಕೊನೆಗೆ ಟರ್ಕಿ ತಲುಪಿದರು. ಏಜಿಯನ್ ಸಮುದ್ರ ದಾಟಿಸುವುದಕ್ಕೆ ಕಳ್ಳ ಸಾಗಣಿಕೆದಾರರು ಇದ್ದಾರೆ. ಆದರೆ ತುಂಬಾ ದುಡ್ಡು ಕೊಡಬೇಕು. ಸಾಮಾನ್ಯವಾಗಿ ಕತ್ತಲಲ್ಲಿ, ಕೆಲವೊಮ್ಮೆ ಡೆಕ್ ಕೆಳಗಡೆ ಕೂರಿಸಿ ಸಾಗಿಸುತ್ತಾರೆ. ಹಾಗೆ ಅವರು ಹೋಗುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಅವರ ಇಂಜಿನ್ ಕೆಟ್ಟಿತು. ಮುಳುಗೇ ಬಿಡುತ್ತೇವೆ ಅಂದುಕೊಂಡಿದ್ದರು. ಹಲವರು ಹಾಗೆ ಸತ್ತಿದ್ದರು. ಅಂತಹ ಘಟನೆಗಳು ಹಲವು ಸಾರಿ ನಡೆದಿದೆ. ಹಕ್ಯಾರ್ ಕುಟುಂಬದ ಅದೃಷ್ಟ ಚೆನ್ನಾಗಿತ್ತು. ಅವರು ಸಮುದ್ರ ದಾಟಿದರು. ಆದರೆ ಅವರ ಬೆಲೆ ಬಾಳುವ ಜರ್ಮನ್ ಪುಸ್ತಕಗಳು ನೀರಿನಲ್ಲಿ ತೋಯ್ದು ನಾಶವಾಗಿದ್ದವು. ಬಳಸುವುದಕ್ಕೆ ಸಾಧ್ಯವಿರಲಿಲ್ಲ. ಅವನ್ನು ಅಲ್ಲೇ ಎಸೆದು ಮುಂದೆ ಸಾಗಿದರು. ಹಾಗೆ ವಲಸಿಗರು ಎಸೆದ ವಸ್ತುಗಳ ಒಂದು ಪರ್ವತವೇ ಅಲ್ಲಿ ಸೃಷ್ಟಿಯಾಗಿತ್ತ್ತು.

ಹಲವರು ಎರಿಟ್ರಿಯಾ ಇಂದ ಗುಲಾಂ ಹ್ಯಾಕ್ಯಾರ್ ಹಿಡಿದ ಕಠಿಣ ಹಾದಿಯಲ್ಲೇ ಯುರೋಪಿನ ಕಡೆ ನಡೆದಿದ್ದರು. ಕೆಲವರು ಉತ್ತರ ಅಮೇರಿಕಾ ತಲುಪುವ ಆಸೆಯಿಂದ ಅಟ್ಲಾಂಟಿಕ್ ದಾಟಿಕೊಂಡು ಬರುವ ಸಾಹಸಕ್ಕೆ ಕೈಹಾಕಿದ್ದರು. ಅಲ್ಲಿಗೆ ಬರಬೇಕಾದರೆ ಮೊದಲು ಜನ ಒಡಾಡದ ನಡು ಅಮೇರಿಕಾದ ಕಾಡನ್ನು ದಾಟಬೇಕಿತ್ತು. ಅಮೇರಿಕಾ ಹಾಗೂ ಕೆನಡಾವನ್ನು ನೇರವಾಗಿ ತಲುಪುವುದು ಕಷ್ಟವಾದ್ದರಿಂದ ಹಲವು ವಲಸೆಗಾರರು ದಕ್ಷಿಣ ಅಮೇರಿಕಾಕ್ಕೆ ವಿಮಾನದಲ್ಲಿ ಬಂದು ಅಲ್ಲಿಂದ ಅಮೇರಿಕೆಯ ಗಡಿಯನ್ನು ತಲುಪುತ್ತಾರೆ. ಮುಂದೆ ಅವರು ಪನಾಮದಲ್ಲಿ ಎರಡು ಖಂಡಗಳು ಸೇರುವ ಸೂಕ್ಷ್ಮ ಜಾಗವನ್ನು ದಾಟಬೇಕಿತ್ತು.

ಹಲವು ವರ್ಷಗಳ ಹಿಂದೆ ಪನಾಮದಲ್ಲಿ ಎಸ್ ಆಕಾರದ ಇಸ್ತಮಸ್ ಎದ್ದ ಮೇಲೆ ಎಲ್ಲಾ ರೀತಿಯ ವಲಸೆಗಾರರಿಗೆ ಅದು ದಾರಿಯಾಗಿಬಿಟ್ಟಿತು. ಅಲೆಗಳಿಂದ ಪ್ರತ್ಯೇಕವಾಗಿದ್ದ ಜೀವಿಗಳಿಗೆ ಅದು ಸೇತುವೆಯಾಯಿತು. ಉತ್ತರದಿಂದ ಜಿಂಕೆ, ಒಂಟೆ ಮೊಲ ಇವೆಲ್ಲಾ ದಕ್ಷಿಣದ ಕಡೆ ಹೊರಟವು. ಹಾಗೆಯೇ ಕೋತಿ, ಅಪ್ಪೊಸಮ್ ಎಲ್ಲಾ ಉತ್ತರದ ಕಡೆ ವಲಸೆ ಹೊರಟವು. ಎರಡು ಕಡೆ ಪರಿಸರ ಬದಲಾಯಿತು.

ಆದರೆ ಪನಾಮಾದ ದೂರದ ಪೂರ್ವದ ತುದಿಯಲ್ಲಿ ಕೊಲಂಬಿಯಾ ಗಡಿಯ ಬಳಿಯಲ್ಲಿ ರಸ್ತೆ ಇದ್ದಕ್ಕಿದ್ದ ಹಾಗೆ ನಿಲ್ಲುತ್ತದೆ. ನೀವು ದಾಟಿ ಹೋಗಬೇಕಾದರೆ ಹಾವು ಚಿರತೆ ಇತ್ಯಾದಿ ತುಂಬಿರುವ ಕಾಡನ್ನು ದಾಟಿ ಹೋಗಬೇಕು. ತುಂಬಾ ದೀರ್ಘವಾದ ಪ್ರಯಾಣ.

ವಾಹನದಲ್ಲಿ ಹೋಗುವುದಕ್ಕೆ ಸಾಧ್ಯವಿಲ್ಲ. ಹೆಚ್ಚು ವೇಗದ ದಾರಿ ಅಂದರೆ ಕಾಲು ನಡಿಗೆ ಹಾಗೂ ದೋಣಿಯಲ್ಲಿ ಸಾಗುವುದು. ಇಂದಿನ ಹೆಚ್ಚಿನ ವಲಸಿಗರು ಡೇರಿಯನ್ ಗ್ಯಾಪ್‌ನ್ನು ದಾಟಿ ಹೋಗುತ್ತಾರೆ. ಎರಿಟ್ರಿಯಾ, ಪಾಕಿಸ್ತಾನ್, ಕ್ಯೂಬಾ ಇತ್ಯಾದಿ ಹಲವು ದೇಶಗಳಿಂದ ವಲಸೆ ಬರುತ್ತಾರೆ. ಹಯಾತಿಯಿಂದ ಬಂದಿದ್ದ ಹಲವರು ನನಗೆ ಸಿಕ್ಕಿದ್ದರು. ಸಾಮಾನು ಸಾಗಿಸುವ ದೋಣಿಯಲ್ಲಿ ಅವರು ಡೇರಿಯನ್ ಕಾಡಿಗೆ ಬರುತ್ತಾರೆ. ಸಾಮಾನ್ಯವಾಗಿ ಹಾಗೆ ಬರುವವರು ಔಷಧಿಗಳು, ಒಳ್ಳೆಯ ಬೂಟು ಇತ್ಯಾದಿ ವ್ಯವಸ್ಥೆಯನ್ನು ಮಾಡಿಕೊಂಡು ಸಿದ್ಧರಾಗಿಯೇ ಬರುತ್ತಾರೆ. ಬೋಟಿನಲ್ಲಿ ದಾಟಿ, ನಂತರ ಕಾಡಿನಲ್ಲಿ ಹೋಗಬೇಕು. ತೀರಾ ಇಕ್ಕಟ್ಟಿನ ಹಾದಿ. ರಾತ್ರಿ ಹಾವು, ಕಾಡು ಪ್ರಾಣಿಗಳ ಭೀತಿ, ಗಾಬರಿಯಿಂದಲೇ ರಾತ್ರಿ ಕಳೆಯುತ್ತಾರೆ. ಕೆಲವರು ದಾರಿಯಲ್ಲಿ ಹರಿಯುವ ನದಿಯ ನೀರನ್ನು ಕುಡಿಯುತ್ತಾರೆ. ಕೆಲವರು ತಮ್ಮ ಉಚ್ಚೆಯನ್ನು ಕುಡಿದು ಬದುಕಿದ್ದೂ ಇದೆ. ಕಾಡು ದಾಟಿ ಬರುವುದಕ್ಕೆ ಆರು ದಿನಗಳು ಬೇಕಾಗುತ್ತದೆ. ಹೆಚ್ಚಿನವರು ದಾರಿಯಲ್ಲೇ ಸತ್ತಿರುತ್ತಾರೆ. “ತೀರಾ ಕಠಿನವಾದ ಪ್ರಯಾಣ” ಅಂತ ನನಗೆ ಸಿಕ್ಕ ಜೀನ್ ಪ್ರಿರ‍್ರಿ ಹೇಳಿದ. ಅವನು ತನ್ನ ಹೆಂಡತಿ ಮಗನೊಂದಿಗೆ ಬಂದಿದ್ದ. ಮಗ ಆ ದಿನಗಳನ್ನು ನೆನಸಿಕೊಂಡರೆ ಈಗಲೂ ಆಳುತ್ತಾನಂತೆ.

ಅವರ ಪ್ರಯಾಣ ಪನಾಮಾದಲ್ಲೇ ಮುಗಿಯುವುದಿಲ್ಲ. ಬಸ್ಸಿನಲ್ಲಿ, ರೈಲಿನಲ್ಲಿ, ನಡೆದುಕೊಂಡು ಹಲವು ದೇಶಗಳನ್ನು ಕೊನೆಯ ಜಾಗಕ್ಕೆ ಬರುತ್ತಾರೆ. ಅದು ಮೆಕ್ಸಿಕೋವನ್ನು ಅಮೆರಿಕೆಯಿಂದ ಪ್ರತ್ಯೇಕ ಮಾಡುವ ರಸ್ತೆ. ಅದು ಜಗತ್ತಿನಲ್ಲೇ ಅತಿ ಹೆಚ್ಚು ಜನ ದಾಟುವ ಅಂತರಾಷ್ಟ್ರೀಯ ಗಡಿ.

ಅಲ್ಲಿ ನನಗೊಬ್ಬರು ಚಿಟ್ಟೆ ಪರಿಣತರು ಸಿಕ್ಕರು. ಅವರು ಅಲ್ಲೇ ಹತ್ತಿರದ ಪ್ರದೇಶದಲ್ಲಿ ಬೆಳೆದವರು. ಅವರು ಹೇಳುವಂತೆ ಮೊದಲು ಜನ ಚಿಟ್ಟೆಯಷ್ಟೇ ಸಲೀಸಾಗಿ ಬಾರ್ಡರನ್ನು ದಾಟಿ ಮತ್ತು ವಾಪಸ್ಸು ಬರುತ್ತಿದ್ದರಂತೆ. ಚಿರತೆಗಳು, ಕುರಿಗಳು, ತೋಳಗಳು ಹೋಗಿ ಬಂದು ಮಾಡುತ್ತಿರುತ್ತವೆ. ಈಗ ಅಧಿಕೃತ ಗಡಿಯನ್ನು ದಾಟುವುದಕ್ಕೆ ಹಲವು ಗಂಟೆಗಳು ಬೇಕಾಗುತ್ತವೆ. ಹಲವು ಗೇಟುಗಳನ್ನು ದಾಟಿಹೋಗಬೇಕು. ನಿಮ್ಮ ದಾಖಲೆಗಳನ್ನು ಪರಿಶೀಲಿಸುವುದಕ್ಕೆ ಅಂತಲೇ ಹಲವು ಬೂತುಗಳಿವೆ. ಪ್ರತಿವರ್ಷ 350 ಮಿಲಿಯನ್ ಜನರನ್ನು ಪರೀಕ್ಷಿಸಲಾಗುತ್ತದೆ. 150ಕ್ಕೂ ಹೆಚ್ಚು ಚೆಕ್‌ಪೋಸ್ಟ್ಟುಗಳು ಅಧಿಕೃತ ಕ್ರಾಸಿಂಗನ್ನು ತಪ್ಪಿಸಿಕೊಂಡು ಬಂದಿರಬಹುದಾದ ವಲಸಿಗರನ್ನು ಹಿಡಿಯಲು ಸ್ಥಾಪಿತವಾಗಿವೆ.

ನನಗೆ ಅಧಿಕೃತ ಅಮೇರಿಕೆಯ ಪಾಸ್‌ಪೋರ್ಟ್ ಇದ್ದರೂ ದಾಟುವಾಗ ಎದೆ ಹೊಡೆದುಕೊಳ್ಳುತ್ತಿತ್ತು. ಜಿಯನ್ ಪಿರ‍್ರೆಯ ಮತ್ತು ಅವನ ಕುಟುಂಬದವರು ಪಟ್ಟಿರಬಹುದಾದ ಪಾಡನ್ನು ಊಹಿಸಿಕೊಳ್ಳಬಲ್ಲೆ. ಸರಿಯಾದ ದಾಖಲೆ ಇಲ್ಲದವರು ಬೇರೆ ದಾರಿಯಲ್ಲಿ ಹೋಗುತ್ತಾರೆ. ಅದು ತುಂಬಾ ಕಠಿಣವಾದ ಹಾದಿ. ಸೀಸರ್ ಹಾಗೆ ದಾಟಿ ಬಂದಿದ್ದ. ಅವನು ತುಂಬಾ ಗಟ್ಟಿಮುಟ್ಟಾಗಿದ್ದ ಯುವಕ. ಮರಳುಗಾಡನ್ನು ನಾಲ್ಕು ದಿನ ನಡೆದು ದಾಟಿಕೊಂಡು ಬಂದಿದ್ದ. ನಾಲ್ಕು ಗ್ಯಾಲನ್ ನೀರನ್ನು ಜೊತೆಗೆ ತಂದಿದ್ದ. ಅವನು ಎಷ್ಟು ಪರಿಣತನಿದ್ದನೆಂದರೆ, ಅವನನ್ನು ಸ್ಥಳೀಯ ಕಳ್ಳಸಾಗಣಿಕೆದಾರರು ಗೈಡಾಗಲು ಕೇಳಿಕೊಂಡಿದ್ದರು. ನೀವು ಪ್ರಯಾಣದ ಸಮಯದಲ್ಲಿ ಸಾಕಷ್ಟು ನೀರು ತೆಗೆದುಕೊಂಡು ಹೋಗಿಲ್ಲದೇ ಹೋಗಿದ್ದರೆ, ಅಥವಾ ನಿಮಗೆ ನೆರವಾಗಲು ಯಾರೂ ಸಿಗದೇ ಹೋದರೆ ಕಷ್ಟ. ಎಷ್ಟೋ ಜನ ನೀರು ಇಲ್ಲದೆ ಬಳಲಿ ಸಾಯುತ್ತಾರೆ. ಅವರನ್ನು ಹುಡುಕಿ ಆರೈಕೆ ಮಾಡುವುದು ಕಷ್ಟ. ಕೆಲವು ಸಂಸ್ಥೆಗಳು ಆ ಕೆಲಸ ಮಾಡುತ್ತಿವೆ. ಡಾನ್ ವೈಟ್ ಮೊಟೊರೋಲ ಎಲೆಕ್ಟ್ರಾನಿಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತನಾಗಿದ್ದ. ಈಗ ಅವನು ಅಂತಹವರನ್ನು ಹುಡುಕಿ, ರಕ್ಷಿಸುವ ಪರಿಣತನಾಗಿ ಕೆಲಸ ಮಾಡುತ್ತಿದ್ದ. ವಲಸಿಗರ ಹೆಜ್ಜೆ ಗುರುತು ನೋಡಿಯೇ ಅವರಿಗೆ ಡಿ ಹೈಡ್ರೇಷನ್ ಆಗಿದೆಯೋ ಇಲ್ಲವೊ ಅನ್ನುವುದು ತಿಳಿಯುತ್ತದೆಯಂತೆ. ಡಿ ಹೈಡ್ರೇಷನ್ ಆದವರ ನಡುಗೆಯಲ್ಲಿ ವ್ಯತ್ಯಾಸ ಆಗುತ್ತದೆ ಅಂತ ಅವನು ಹೇಳುತ್ತಿದ್ದ. ಒಮ್ಮ ಹೆಜ್ಜೆ ಗುರುತು ಕಂಡೊಡನೆ ವೈಟ್ ತನ್ನ ಅನುಭವದ ಆಧಾರದ ಮೇಲೆ ಯಾವ ದಾರಿಯಲ್ಲಿ ಸಾಗಬೇಕು ಅಂತ ನಿರ್ಧರಿಸುತ್ತಾನೆ.

ಒಮ್ಮೆ ತನ್ನ ಸಂಬಂಧಿಯನ್ನು ಕಳ್ಳಸಾಗಣಿಕೆದಾರರು ಬಿಟ್ಟು ಹೋಗಿಬಿಟ್ಟಿದ್ದಾರೆ ಅಂತ ಒಂದು ಹೆಂಗಸು ಇವರ ಕಛೇರಿಗೆ ಫೋನ್ ಮಾಡಿದ್ದಳು. ತಾವು ಯಾವುದೋ ಉಪ್ಪು ನೀರಿನ ಕೊಳದ ಬಳಿ ಇದ್ದೇವೆ ಅಂತಷ್ಟೆ ಅವಳಿಗೆ ಗೊತ್ತಿತ್ತು. ಆದರೆ ವೈಟ್ ತಲುಪುವ ವೇಳೆಗೆ ತುಂಬಾ ತಡವಾಗಿತ್ತು. ಅವನು ಸತ್ತು ಹೋಗಿದ್ದ. ಅವನ ಜೋಬಿನಲ್ಲಿ ಬೈಬಲ್ ಹಾಗೆ ಇತ್ತು.

ಕೆಲ ವರ್ಷಗಳ ಹಿಂದೆ ಒಬ್ಬ ರೊಬೋಟಿಕ್ಸ್ ಪ್ರೊಫೆಸರ್ 15ವರ್ಷಗಳ ನಿರಾಶ್ರಿತರ ಚಲನೆಯ ಎನಿಮೇಟೆಡ್ ಮ್ಯಾಪ್ ಮಾಡಿದ್ದ. ಅದನ್ನು ನಿಧಾನವಾಗಿ ಓಡಿಸಿ ನೋಡಬಹುದು. ಆ ನಕ್ಷೆಯಲ್ಲಿ ಪ್ರತಿಯೊಂದು ಕೆಂಪು ಚುಕ್ಕೆಯೂ ಸುಮಾರು ಒಂದು ಡಜನ್ ನಿರಾಶ್ರಿತರನ್ನು ಪ್ರತಿನಿಧಿಸುತ್ತಿತ್ತು. ಮೊದಲಲ್ಲಿ ಕೆಂಪು ಚುಕ್ಕಿಗಳು ಅಲ್ಲಿ ಇಲ್ಲಿ ಹರಡಿಕೊಂಡಂತೆ ಕಾಣುತ್ತಿದ್ದವು. ಚಿತ್ರ ಪ್ರಾರಂಭವಾದಂತೆ ಅವು ಚಲಿಸಲು ಪ್ರಾರಂಭವಾಗುತ್ತವೆ. ಸ್ವಲ್ಪ ಹೊತ್ತಿನಲ್ಲಿ ಕೆಂಪುಚುಕ್ಕಿಗಳು ಸೇರಿಕೊಂಡು ಸಣ್ಣ ಕೆಂಪು ರೇಖೆಗಳಾಗುತ್ತವೆ. ಅವು ನಕ್ಷೆಯ ಒಂದು ಭಾಗದಿಂದ ಇನ್ನೊಂದಕ್ಕೆ ಚಾಚಿಕೊಂಡಿರುತ್ತದೆ. ಹೆಚ್ಚೆಚ್ಚು ಜನ ಪ್ರಯಾಣದಲ್ಲಿ ಸೇರಿಕೊಂಡ ಹಾಗೆ ರೇಖೆಗಳು ದಪ್ಪವಾಗುತ್ತದೆ. ಒಡೆದುಕೊಳ್ಳುತ್ತದೆ, ಹರಡಿಕೊಂಡು ಸಂಕೀರ್ಣವಾದ ಸಮುದ್ರದ ಅಗಲಕ್ಕೂ ಖಂಡಗಳ ನಡುವೆ ಬಲೆಗಳಂತೆ ಹರಡಿಕೊಳ್ಳುತ್ತವೆ.

ಕಳೆದ ಕೆಲವು ವರ್ಷಗಳಲ್ಲಿ 27 ಜನ ಜೀವವಿಜ್ಞಾನಿಗಳು ಮಾಕ್ಸ್ ಪ್ಲಾಂಕ್ ಸೊಸೈಟಿಯಲ್ಲಿ ಅಂತಹುದೇ ಒಂದು ವಿಡಿಯೋವನ್ನು ತಯಾರಿಸಿದ್ದಾರೆ. ಅದಕ್ಕೆ ಅವರು ಎಂಟು ಸಾವಿರ ಪ್ರಾಣಿಗಳ ಚಲನೆಯನ್ನು ಜಿಪಿಎಸ್ ಸಲಕರಣೆಗಳನ್ನು ಅಳವಡಿಸಿ ಪಡೆದ ಮಾಹಿತಿಯನ್ನು ಬಳಸಿಕೊಂಡಿದ್ದಾರೆ.  ಪ್ರಾಣಿಗಳ ಸಾಮೂಹಿಕ ಪ್ರಯಾಣದ ದೃಶ್ಯಗಳ ಪರಿಣಾಮ ಅದ್ಭುತ. ವಲಸಿಗರ ಹಾದಿಗಳು ಮರಳುಗಾಡಿನ ಅಗಲಕ್ಕೂ ಹಾದು ಹೋಗುತ್ತವೆ. ಭೂಖಂಡದ ತೀರಗಳಲ್ಲಿ ಮೇಲೆ ಕೆಳಗೆ ಸಂಚರಿಸುತ್ತವೆ. ಪೆಸಿಫಿಕ್ ಸಾಗರದಲ್ಲಿರುವ ದ್ವೀಪಗಳ ಸುತ್ತ ಸರೋವರಗಳ ಅಗಲಕ್ಕೂ ಹಾದು, ಆರ್ಕ್ಟಿಕ್‌ಗೆ ಸೇರುತ್ತವೆ. ಅವು ಎಲ್ಲಾ ಕಡೆಯೂ ಹರಡಿಕೊಂಡಿವೆ. ಕ್ರಮೇಣ ಪರಸ್ಪರ ಸಂಬಂಧಹೊಂದಿ, ಒಂದರ ಜೊತೆಗೆ ಇನ್ನೊಂದು ತಳುಕಹಾಕಿಕೊಂಡಿರುವ ಇವು ಇಡೀ ಭೂಮಂಡಲವನ್ನು ಒಂದು ಸೂಕ್ಷ್ಮವಾದ, ನವುರಾದ ಬಲೆಯಂತೆ ಸುತ್ತುವರಿಯುತ್ತವೆ.

ಆದರೂ ನಮ್ಮ ಪ್ರತಿದಿನದ ಬದುಕಿನಲ್ಲಿ, ಕಾಂಕ್ರಿಟ್ ಅಡಿಪಾಯದ ಮೇಲೆ ಕಟ್ಟಿದ, ಗಾಳಿಯೂ ಅಡದ ಮನೆಗಳಲ್ಲಿ ಕುಳಿತು ನಾವು ವಾಸಿಸುತ್ತಿರುವ ಭೂಮಿಯಲ್ಲಿ ಎಲ್ಲವೂ ಅಚಲವಾಗಿದೆ ಎಂದು ಅಂದುಕೊಳ್ಳುತ್ತಿದ್ದೇವೆ. ಬೆಳಗಾದರೆ ಅದೇ ಅಂಗಡಿಗಳು, ಅಂಗಡಿಗಳಲ್ಲಿ ಅದೇ ಮುಖಗಳು, ಬಸ್‌ನಿಲ್ದಾಣದಲ್ಲಿ ಮಕ್ಕಳನ್ನು ಶಾಲೆಗೆ ಬಸ್ ಹತ್ತಿಸುತ್ತಿರುವ ಪೋಷಕರ ಅದೇ ಮುಖಗಳು, ಬೇಲಿಯ ಮೇಲಿನ ಅದೇ ಅಳಿಲು, ಮನೆಯ ಮುಂದಿನ ದಾರಿಯಲ್ಲಿನ ಅದೇ ಗಿಡಗಳು ಮುಂತಾದವುಗಳಿಂದ ಹೀಗೆ ಸ್ಥಾವರವಾಗಿ ಜಡವಾಗಿರುವ ಬದುಕಿನಲ್ಲಿ ಎಲ್ಲಿಂದಲೋ ಇಲ್ಲಿಗೆ ಕರೆಯದೇ ಬಂದಿರುವ ಅತಿಥಿಯಾದ ವಲಸಿಗ ಮಾತ್ರ ಅಪವಾದ.

ಆದರೆ ಬದುಕು ನಿರಂತರವಾಗಿ ಚಲಿಸುತ್ತಿದೆ. ವಲಸೆ ಜೀವಲೋಕದ ಸಹಜ ಪ್ರವೃತ್ತಿ. ಆದರೆ ಇದು ಸಹಜ ಪ್ರವೃತ್ತಿ ಎನ್ನುವ ಸತ್ಯವನ್ನು ಶತಶತಮಾನಗಳಿಂದ ಮರೆಮಾಚಿ, ಅದನ್ನು ಭಯಂಕರ ವಿಪತ್ತನ್ನು ತರುವ ರಕ್ಕಸನಂತೆ ಚಿತ್ರಿಸುತ್ತಿದ್ದೇವೆ. ನಮ್ಮ ಗತ, ನಮ್ಮ ದೇಹಗಳು ಮತ್ತು ಪ್ರಾಕೃತಿಕ ಜಗತ್ತಿನಲ್ಲಿ ವಲಸೆ ಅಸಂಗತ ಎನ್ನುವಂತಹ ಕಥೆಗಳನ್ನು ಕಟ್ಟಿಕೊಂಡಿದ್ದೇವೆ. ಇದೊಂದು ಭ್ರಮೆ. ಒಮ್ಮೆ ಈ ಭ್ರಮೆ ಹರಿದೊಡನೆ, ಇಡೀ ಜಗತ್ತು ಚಲಿಸಲಾರಂಭಿಸುತ್ತದೆ.

Leave a Reply

Your email address will not be published.