ಮುಕ್ಕಾದ ಮಂತ್ರದಂಡ ಹಿಡಿದ ಮಾಂತ್ರಿಕ

ಮಣಿರತ್ನಂ ಒಬ್ಬ ಮಾಸ್ಟರ್; ಚಿತ್ರಗಳ ವ್ಯಾಕರಣ, ವಾಕ್ಯಜೋಡಣೆ, ಕಥೆ, ದೃಶ್ಯ, ನೋಟ ಎಲ್ಲಕ್ಕೂ ಹೊಸತನ ತಂದವರು. ಈ ಪುಸ್ತಕದಲ್ಲಿ ಅವರ ಎಲ್ಲಾ ಚಿತ್ರಗಳ ಬಗ್ಗೆ ಚರ್ಚೆ ಇದೆ, ಕಥೆ, ಸ್ಕ್ರೀನ್ ಪ್ಲೇ, ಸೌಂಡ್, ದೃಶ್ಯ ಜೋಡಣೆ, ಛಾಯಾಗ್ರಹಣ, ಬೆಳಕು, ಎಡಿಟಿಂಗ್ ಎಲ್ಲದರ ಬಗ್ಗೆ ಮಾತುಕತೆ ಇದೆ. ಈ ಪುಸ್ತಕದಲ್ಲಿರುವುದು ಮಣಿರತ್ನಂ ಜೀವನಚರಿತ್ರೆ ಅಲ್ಲ, ಅವರ ಚಿತ್ರಗಳ ಕಥೆ. ಕೃತಿಗೆ ರೆಹಮಾನ್ ಅವರ ಮುನ್ನುಡಿ ಇದೆ.

-ಎನ್.ಸಂಧ್ಯಾರಾಣಿ

 

 

 

 

 

 

 

Conversations with Mani Ratnam

By Bharadwaj Rangan

Penguin Publication

Price: Rs.499

ಮಣಿರತ್ನಂ 80ನೆಯ ದಶಕದಲ್ಲಿ ಬೀಸಿದ ಹೊಸಗಾಳಿ. ಯಾವುದೇ ಸಿನಿಮಾ ಶಾಲೆಯಲ್ಲಿ ಓದದ, ಯಾವುದೇ `ಶೈಲಿ’ಯಲ್ಲಿ ಅಧ್ಯಯನ ನಡೆಸದ ಮಣಿರತ್ನಂಗೆ ಆ ಕಲಿಯದಿರುವಿಕೆಯೇ ವರವಾಗಿತ್ತು, ಆತ ಕೊಡವಿಕೊಳ್ಳಬೇಕಾದ ಯಾವುದೇ ಪಾಠಗಳು ಆತನ ಹೆಗಲ ಮೇಲಿರಲಿಲ್ಲ. ಚಿತ್ರಕ್ಕೆ ಹಣ ಹೂಡಿಕೆ ಮಾಡುವವರ ಮನೆಯಿಂದ ಬಂದರೂ ತಾಂತ್ರಿಕವಾಗಿ ಚಿತ್ರ ನಿರ್ಮಾಣದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲದ ಮಣಿರತ್ನಂ ಕೆಲಸ ಕಲಿತದ್ದು ಸಮಾನಮನಸ್ಕರೊಂದಿಗೆ ನಡೆಸಿದ ಚರ್ಚೆಗಳಲ್ಲಿ, ಸ್ಟುಡಿಯೋ ಅಂಗಳದಲ್ಲಿ.

ಆ ಕಾಲಘಟ್ಟದಲ್ಲಿ ಸಾರಾಸಗಟಾಗಿ ಎಲ್ಲ ಚಿತ್ರಗಳನ್ನೂ ನೋಡುತ್ತಿದ್ದ ನಮಗೆ ಮಣಿರತ್ನಂ ಚಿತ್ರಗಳು ಹೊಸತೆನಿಸಿದ್ದವು. ಮೊದಲ ನೋಟಕ್ಕೆ ಕಥೆಯಲ್ಲಿನ ರೋಮ್ಯಾಂಟಿಕ್ ಗುಣಕ್ಕಾಗಿ ಅವು ಇಷ್ಟವಾಗಿದ್ದರೂ ಅದಕ್ಕೆ ಮೀರಿದ್ದೇನೋ ಆ ಚಿತ್ರಗಳಲ್ಲಿ ಇತ್ತು ಎನ್ನುವುದು ನಿಧಾನಕ್ಕೆ ಅರ್ಥವಾಯಿತು. ಆ ಮಾಂತ್ರಿಕನ ಕುರಿತಾದ ಈ ಪುಸ್ತಕವನ್ನು ಇಷ್ಟಪಟ್ಟು ತರಿಸಿಕೊಂಡು ಕೂಡಲೇ ಓದಲು ಪ್ರಾರಂಭಿಸಿದೆ. ಜೀವನಚರಿತ್ರೆ ಮತ್ತು ಆತ್ಮಚರಿತ್ರೆಗಳು ನನಗೆ ಇಷ್ಟವಾದ ಪ್ರಕಾರಗಳು. ಆದರೆ ಈ ಪುಸ್ತಕದಲ್ಲಿದ್ದದ್ದು ಮಣಿರತ್ನಂ ಜೀವನಚರಿತ್ರೆ ಅಲ್ಲ, ಅವರ ಚಿತ್ರಗಳ ಕಥೆ. ಆ ಚಿತ್ರಗಳು ಹುಟ್ಟಿದ, ಅಂಬೆಗಾಲಿಟ್ಟ, ನಡೆದ, ಮುನ್ನುಗ್ಗಿದ, ಹೊಸಹಾದಿ ಹುಡುಕಿಕೊಂಡ, ಮತ್ತು ಹೇಗೋ ಹಾದಿ ತಪ್ಪಿಸಿಕೊಂಡ ಕಥೆ.

ತಮಿಳು ಚಿತ್ರಗಳ ಬಗ್ಗೆ ಸ್ವಲ್ಪ ಅತಿ ಎನ್ನುವಷ್ಟು ವ್ಯಾಮೋಹ ಇರುವ ಭಾರದ್ವಾಜ್ ರಂಗನ್ ಮಣಿರತ್ನಂ ಬಗ್ಗೆ ಆರಾಧನಾ ಭಾವವನ್ನು ಇಟ್ಟುಕೊಂಡವರು. ಮಣಿರತ್ನಂ ಚಿತ್ರಗಳ ಬಗ್ಗೆ ಒಂದು ಪುಸ್ತಕ ಬರೆಯಬೇಕೆಂದುಕೊಳ್ಳುವ ಅವರು ಅದಕ್ಕೆ ಮೊದಲು ಒಮ್ಮೆ ಮಣಿರತ್ನಂ ಅವರೊಂದಿಗೆ ಮಾತನಾಡುವುದು ಒಳ್ಳೆಯದೆಂದು ಸಮಯ ನಿಗದಿಪಡಿಸಿಕೊಂಡು ಅಲ್ಲಿಗೆ ಹೋಗುತ್ತಾರೆ. ಜಸ್ಟ್ ಮಾತ್ ಮಾತಲ್ಲಿ ಮಣಿರತ್ನಂ `ನಿಮಗೆ ಬಿಡುವಾದಾಗಲೆಲ್ಲಾ ಬನ್ನಿ. ಚಿತ್ರಗಳ ಬಗ್ಗೆ ಚರ್ಚೆ ಮಾಡೋಣ, ನಿಮ್ಮ ಬರವಣಿಗೆಗೆ ಅದು ನೆರವಾದೀತು’ ಎನ್ನುತ್ತಾರೆ. ಒಪ್ಪಿಕೊಳ್ಳುವ ರಂಗನ್ ಮತ್ತೊಮ್ಮೆ ಮಣಿರತ್ನಂ ಚಿತ್ರಗಳನ್ನು ನೋಡಿ, ಅದರ ಬಗ್ಗೆ ಪ್ರಶ್ನೆಗಳು, ಅನಿಸಿಕೆ, ಅಭಿಪ್ರಾಯಗಳನ್ನು ನೋಟ್ ಮಾಡಿಕೊಂಡು ಹೋಗುತ್ತಾರೆ.

ಮೊದಲ ಭೇಟಿಯನ್ನು ಅವರು ವಿವರಿಸುವುದು ಹೀಗೆ, `ಮಣಿರತ್ನಂ ನನ್ನ ಜೊತೆ ಮಾತನಾಡುತ್ತಿದ್ದರು, ನಾನು ಅವರ ಟೇಬಲ್ ಅಂಚಿನ ಜೊತೆ ಮಾತನಾಡುತ್ತಿದ್ದೆ!’ ಮುಂದೊಮ್ಮೆ ಗೌತಮ್ ಮೆನನ್ ಅವರೊಂದಿಗೆ ಮಾತನಾಡುವಾಗ ರಂಗನ್ ಇದನ್ನು ಹೇಳಿದಾಗ ಅವರು ಥಟ್ಟನೆ ತಲೆಯಾಡಿಸಿ ಅದನ್ನು ಅನುಮೋದಿಸಿ, `ಅದೇ ಮತ್ತೆ, `ನಾಯಕನ್’ ಚಿತ್ರ ಮಾಡಿದವರ ಕಣ್ಣಿಗೆ ಕಣ್ಣು ಸೇರಿಸಿ ಮಾತನಾಡುವುದು ಹೇಗೆ?!’ ಎಂದು ಸೇರಿಸುತ್ತಾರೆ.

ಮಣಿರತ್ನಂ ಒಬ್ಬ ಮಾಸ್ಟರ್; ಚಿತ್ರಗಳ ವ್ಯಾಕರಣ, ವಾಕ್ಯಜೋಡಣೆ, ಕಥೆ, ದೃಶ್ಯ, ನೋಟ ಎಲ್ಲಕ್ಕೂ ಹೊಸತನ ತಂದವರು. ಈ ಪುಸ್ತಕದಲ್ಲಿ ಅವರ ಎಲ್ಲಾ ಚಿತ್ರಗಳ ಬಗ್ಗೆ ಚರ್ಚೆ ಇದೆ, ಕಥೆ, ಸ್ಕ್ರೀನ್ ಪ್ಲೇ, ಸೌಂಡ್, ದೃಶ್ಯ ಜೋಡಣೆ, ಛಾಯಾಗ್ರಹಣ, ಬೆಳಕು, ಎಡಿಟಿಂಗ್ ಎಲ್ಲದರ ಬಗ್ಗೆ ಮಾತುಕತೆ ಇದೆ. ಚರ್ಚೆ ಎಲ್ಲಾ ಮುಗಿಸಿ, ಕಣ್ಣೆದುರಿಗೆ ರೆಕಾರ್ಡಿಂಗ್ ರಾಶಿ ಇಟ್ಟುಕೊಂಡು ಕೂತಾಗ ರಂಗನ್ ಅವರಿಗೆ ಇದನ್ನು ಹೇಗೆ ಪುಸ್ತಕವಾಗಿಸುವುದು ಎನ್ನುವುದು ಸವಾಲಿನ ಕೆಲಸವಾಗುತ್ತದೆ, ಕಡೆಗೆ ಚರ್ಚೆಯ ರೂಪದಲ್ಲೇ ಅದನ್ನು ಉಳಿಸಿಕೊಳ್ಳುತ್ತಾರೆ. ಕೃತಿಗೆ ರೆಹಮಾನ್ ಅವರ ಮುನ್ನುಡಿ ಇದೆ.

ಪುಸ್ತಕದಲ್ಲಿ ಒಟ್ಟು 18 ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಮಣಿರತ್ನಂ ಅವರ ಮೊದಲಿನ ನಾಲ್ಕು ಚಿತ್ರಗಳಾದ `ಪಲ್ಲವಿ ಅನುಪಲ್ಲವಿ’, `ಉನರು’, `ಪಗಲ್ ನಿಲವು’ ಮತ್ತು `ಇದಯಕೋಯಿಲ್’ ಚಿತ್ರಗಳನ್ನು ಕುರಿತಾದ ವಿವರ ಮತ್ತು ಚರ್ಚೆಗಳಿದ್ದರೆ, ಮಿಕ್ಕಂತೆ ಪ್ರತಿ ಅಧ್ಯಾಯದಲ್ಲೂ ಪ್ರಧಾನವಾಗಿ ಒಂದೊಂದು ಚಿತ್ರವನ್ನು ಕುರಿತಾದ ಚರ್ಚೆ ಇದ್ದು, ಅದಕ್ಕೆ ಪೂರಕವಾಗಿ ಬೇರೆ ಚಿತ್ರಗಳನ್ನು ಕುರಿತಾಗಿಯೂ ಮಾತುಕತೆ ಇದೆ.

ಈ ಚಿತ್ರಗಳ ಕಥೆ ಹುಟ್ಟಿ ಬೆಳೆದ ಬಗ್ಗೆ, ದೃಶ್ಯರೂಪ ತೆಗೆದುಕೊಂಡ ಬಗ್ಗೆ, ಅದಕ್ಕೆ ಸಂಗೀತ ಜೊತೆಯಾಗಿದ್ದು, ನಟ ನಟಿಯರು, ಎಡಿಟಿಂಗ್ ಎಲ್ಲದರ ಬಗ್ಗೆ ಚರ್ಚೆಯಾಗಿದೆ. ಈ ಚರ್ಚೆ ಚಿತ್ರಗಳ ಉದಾಹರಣೆಗಳೊಂದಿಗೆ ನಡೆಯುವುದರಿಂದ ನಾವು ಆ ಚಿತ್ರಗಳ ದೃಶ್ಯಗಳನ್ನು ಮತ್ತೆ ನೋಡಿ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಬಹುದು. ಆ ಮಟ್ಟಿಗೆ ಇದೊಂದು ಪಠ್ಯಪುಸ್ತಕವೇ ಸರಿ. ಮಣಿರತ್ನಂ ಚಿತ್ರಗಳನ್ನು ಮತ್ತೆಮತ್ತೆ ನೋಡುತ್ತಾ ಬೆಳೆದವರು ನಾವು. ವೀಸೀಆರ್ ಇದ್ದಾಗ ಬಾಡಿಗೆಗೆ ತಂದು ಪದೇಪದೇ ನೋಡಿ `ಗೀತಾಂಜಲಿ’ ಚಿತ್ರದ ಟೇಪ್ ಸವೆದುಹೋಗಿತ್ತು, ಮುಕ್ಕಾಲು ಸಂಭಾಷಣೆ ಬಾಯಿಪಾಠ ಆಗಿತ್ತು. ಕೆಲವು ಸನ್ನಿವೇಶಗಳು, ಅದರಲ್ಲೂ ಪ್ರೇಮಿಗಳ ನಡುವಿನ ಸನ್ನಿವೇಶಗಳು ಪಲ್ಲವಿ ಅನುಪಲ್ಲವಿ, ಮೌನರಾಗಂ, ಅಗ್ನಿ ನಚ್ಚತ್ತಿರಂ ಮುಂತಾದ ಚಿತ್ರಗಳಲ್ಲಿ ಮತ್ತೆಮತ್ತೆ ಬಂದು, ಅವರು ಇಬ್ಬರು ಪ್ರೇಮಿಗಳ ಕಥೆಯನ್ನು ಬೇರೆಬೇರೆ ಚಿತ್ರಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹೇಳಲು ಪ್ರಯತ್ನಿಸುತ್ತಿದ್ದಾರೆ ಅನ್ನಿಸಿತ್ತು.

ಅಪರಿಚಿತರೊಂದಿಗೆ ಮಾತನಾಡಬೇಡ, ಅಪರಿಚಿತ ಗಂಡಿನೊಡನೆ ಒಡನಾಡಬೇಡ, ಗಟ್ಟಿಯಾಗಿ ನಗಬೇಡ ಎಂದು ಹೇಳುತ್ತಾ ಹೆಣ್ಣನ್ನು ಬೆಳೆಸಿ ಕಡೆಗೊಂದು ದಿನ ಅಪರಿಚಿತ ಗಂಡೊಬ್ಬನಿಗೆ ಮದುವೆ ಮಾಡಿ, ಅವನೊಂದಿಗೆ ದೇಹ ಹಂಚಿಕೋ ಎನ್ನುವ ಭಾರತೀಯ ಮನೋತತ್ವವನು ಪ್ರಶ್ನಿಸುವ `ಮೌನರಾಗಂ’ ಬಿಡುಗಡೆಯಾದಾಗ ಹಲವಾರು ಹುಡುಗಿಯರು ಚಿತ್ರದಲ್ಲಿ ತಮ್ಮನ್ನು ತಾವು ಕಂಡಿದ್ದರು. ತಮಾಷೆ ಅಂದರೆ ಮಣಿ ಆ ಕಥೆ ಬರೆದಾಗ ಅದರಲ್ಲಿ ಕಾಡುವ ಪ್ರೇಮಿಯ ಪಾತ್ರವೇ ಇರಲಿಲ್ಲವಂತೆ. ಕಥೆಗೆ ಬಲ ಬರಲು ಸೃಷ್ಟಿಯಾಗಿ ನಂತರ ಐಕಾನ್ ಆದ ಪಾತ್ರ ಅದು.

ಒಂದು ಜೀವನಚರಿತ್ರೆ, ಒಂದು ಸುದ್ದಿಯ ಎಳೆ, ಆ ಕಾಲಘಟ್ಟದ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷಗಳನ್ನು ಕ್ಯಾನ್ವಾಸ್ ಆಗಿಸಿಕೊಂಡ ಚಿತ್ರಗಳು ನಾಯಕನ್, ರೋಜಾ, ಬಾಂಬೆ, ಇರುವರ್, ದಿಲ್ ಸೆ, ಆಯುಧ ಎಳುತ್ತು, ಗುರು ಚಿತ್ರಗಳ ವಸ್ತು. ಕರ್ಣನ ಕಥೆಯನ್ನು ಹೋಲುವ ದಳಪತಿ, ರಾಮಾಯಣವನ್ನು ನೆನಪಿಸುವ ರಾವಣನ್, ಶ್ರೀಲಂಕಾದ ಜನಾಂಗೀಯ ಸಂಘರ್ಷವನ್ನು ಹೇಳುವ ಕಣ್ಣಾತ್ತಿಲ್ ಮುತ್ತಮಿಟ್ಟಾಳ್, ಬೈಬಲ್ ಕಥೆಯೊಂದನ್ನು ಹೋಲುವ ಕಡಲ್ ಇವೆಲ್ಲಾ ಎಳೆಯೊಂದನ್ನು ಎತ್ತಿಕೊಂಡು ಬೆಳೆಸಿದ ಚಿತ್ರಗಳು. ಜೊತೆಗೆ ಭಾವನಾಪ್ರಧಾನ ಚಿತ್ರಗಳಾದ ಗೀತಾಂಜಲಿ, ಅಂಜಲಿ, ಅಲೈಪಾಯುತೆ ಸಹ ಇದ್ದವು. ಗಟ್ಟಿ ಕಥೆ ಇದ್ದ ಅವರ ಮೊದಲ ಚಿತ್ರಗಳ ನಡುವೆ, ಕಥೆಯ ದುರ್ಬಲ ಹಂದರ ಮಾತ್ರ ಇದ್ದ `ತಿರುಡಾ ತಿರುಡಾ’ ತಾಂತ್ರಿಕವಾಗಿ ವಿಭಿನ್ನವಾಗಿದ್ದರೂ ಜನರನ್ನು ಸೆಳೆಯುವಲ್ಲಿ ಸೋತಿತ್ತು. ಈ ಎಲ್ಲಾ ಅಂಶಗಳ ಬಗ್ಗೆ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಜೊತೆಜೊತೆಗೆ ಇಳಯರಾಜಾ ಸಂಗೀತದ ಮಾಂತ್ರಿಕತೆ, ರೆಹಮಾನ್ ಹಾಡುಗಳು, ಶ್ರೀರಾಂ ಸಿನಿಮಾಟೋಗ್ರಫಿ ಇವುಗಳ ಬಗ್ಗೆಯೂ ಅನೇಕ ವಿವರಗಳಿವೆ.

ಅವರ ಕಡೆಯ ಚಿತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ `ರಾವಣನ್’ ಮತ್ತು `ಕಡಲ್’ ಚಿತ್ರಗಳಲ್ಲಿ ಮಣಿರತ್ನಂ ಮಾಂತ್ರಿಕತೆ ಮುಕ್ಕಾಗಿತ್ತು. `ಕಡಲ್’ ಅರ್ಧ ನೋಡಿ ಎದ್ದು ಬರುವಾಗ ಲಿಫ್ಟಿನಲ್ಲಿ ನಾನು ಮಣಿರತ್ನಂ ಚಿತ್ರದಿಂದ ಎದ್ದು ಬಂದೆ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗಿರಲಿಲ್ಲ. ಈ ಪುಸ್ತಕ ಓದುವಾಗ ಅನ್ನಿಸಿದ್ದು ನಿರ್ದೇಶಕ ತನಗೂ ತನ್ನ ವೀಕ್ಷಕರಿಗೂ ಸಾಧ್ಯವಾಗಿರುವ ಸಂವಹನದ ಅನನ್ಯ ನೆಲೆಗಳಿಂದ ದೂರವಾಗಿ, ತನ್ನ ಕಲೆಯ ಸಾರ್ಥಕತೆಯೇ ಮುಖ್ಯವಾಗಿ, ತನ್ನ ಸಂವಹನವನ್ನು ಅಂತಃಕರಣದ ನೆಲೆಯಿಂದ ಟೆಕ್ನಿಕಲ್ ಪರ್ಫೆಕ್ಷನ್ ಕಡೆಗೆ ಸಾಗಿಸಿದಾಗ ಬಹುಶಃ ಅದು ಅವರಿಬ್ಬರ ನಡುವಿನ ಭಾವನಾತ್ಮಕ ಸೇತುವೆಯನ್ನು ಮುರಿದುಹಾಕುತ್ತದೆ. ಏಕೆಂದರೆ ಮಣಿರತ್ನಂ ಅವರ ನಂತರದ ಅನೇಕ ಚಿತ್ರಗಳು ಅವರ ವಿವರಣೆಯಲ್ಲಿ ಕಂಡಷ್ಟು ಪ್ರಖರವಾಗಿ ತೆರೆಯ ಮೇಲೆ ಕಾಣುವುದಿಲ್ಲ.

ಚಿತ್ರವನ್ನು ನೋಡುವ ಪ್ರೇಕ್ಷಕರಲ್ಲಿ ತಾಂತ್ರಿಕತೆಗೆ ತಲೆದೂಗುವ ಪ್ರೇಕ್ಷಕರಿಗಿಂತ ಹೆಚ್ಚುಸಂಖ್ಯೆಯ ಜನ ಭಾವನಾತ್ಮಕ ಕಾರಣಗಳಿಗಾಗಿ ಚಿತ್ರವನ್ನು ನೋಡುತ್ತಾರೆ. ನಿರ್ದೇಶಕ ತಾಂತ್ರಿಕತೆಯ ಕಡೆ ಗಮನ ಹರಿಸದ ಅವರನ್ನು ನಿರ್ಲಕ್ಷಿಸಿದಾಗ ಬಹಳಷ್ಟು ಸಲ ಚಿತ್ರ ಸೋಲುತ್ತದೆ. `ಕಡಲ್’ ಬಗ್ಗೆ ಭಾರದ್ವಾಜ್ ರಂಗನ್ ಕೇಳುವ ಪ್ರಶ್ನೆಗಳಿಗೆ ಮಣಿರತ್ನಂ ಅವರ ಉತ್ತರ ಅನೇಕ ಕಡೆ ಡಿಫೆನ್ಸಿವ್ ಅನ್ನಿಸಿಬಿಡುತ್ತದೆ. ಶೂಟ್ ಮಾಡಿ ಜೋಡಿಸದೆ ಎಡಿಟಿಂಗ್ ಟೇಬಲ್ ಮೇಲೆ ಉಳಿಸಿದ ತುಣುಕುಗಳಲ್ಲಿ ಚಿತ್ರದ ಕಥೆ ಉಳಿದುಹೋಗಿಬಿಟ್ಟಿದೆ ಅನ್ನಿಸುತ್ತದೆ. ಬಿಡಿಬಿಡಿಯಾಗಿ ಅದ್ಭುತ ಎನ್ನಿಸುವ ತಾಂತ್ರಿಕ ಸಂಘಟನೆ ಇಡಿಯಾಗಿ ಚಿತ್ರಕ್ಕೆ ಏನನ್ನೂ ಕೊಡದೆ ಹೋದಾಗ ಚಿತ್ರ ಸೊರಗುತ್ತದೆ. ಆದರೆ ಇಲ್ಲೆಲ್ಲೂ ತಾನು ನಂಬಿದ ಪರಿಪೂರ್ಣತೆಯ ಕಡೆಗಿನ ನಿರ್ದೇಶಕನ ಪಯಣವನ್ನು ನಿರ್ಲಕ್ಷಿಸುವಂತಿಲ್ಲ.

ಬಹುಶಃ ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ರೆಹಮಾನ್ ಹೀಗೆ ಬರೆಯುತ್ತಾರೆ, `ಕಲೆಯನ್ನು ಪರಿಶೋಧಿಸುವ ಪಯಣದಲ್ಲಿ, ತನ್ನ ಕೆಲಸದಲ್ಲಿ ಒಮ್ಮೊಮ್ಮೆ ತಪ್ಪು ಮಾಡಲು ಅವಕಾಶ ಕೊಡುವುದು ಸಹ ಮುಖ್ಯವಾಗುತ್ತದೆ. ಇದರಿಂದ ಸೃಜನಶೀಲವಾಗಿ ಅವರು ಇನ್ನಷ್ಟು ಬೆಳೆಯುವುದು ಸಾಧ್ಯವಾಗುತ್ತದೆ. ಇದಕ್ಕೂ ಧೈರ್ಯ ಬೇಕು. ಕೆಲವು ನಿರ್ದೇಶಕರು ಒಂದೇ ರೀತಿಯ ಚಿತ್ರಗಳನ್ನು ಮಾಡುತ್ತಾ, ಯಶಸ್ಸನ್ನು ಗಳಿಸಿದರೂ ದೀರ್ಘಾವಧಿಯಲ್ಲಿ ನಾವು ಅವರನ್ನು ಅಷ್ಟೊಂದು ಗೌರವಿಸುವುದಿಲ್ಲ. ಇಲ್ಲಿ ಈ ಮನುಷ್ಯ ತನ್ನದೇ ಆದ ವಿಶಿಷ್ಟ ಶೈಲಿಯ ಚಿತ್ರಗಳಿಗೆ ಕಮರ್ಷಿಯಲ್ ಯಶಸ್ಸನ್ನು ಬಯಸಿದ ಸಮಯದಲ್ಲಿಯೇ ಒಮ್ಮೊಮ್ಮೆ ಸೋಲು ಎದುರಾದರೂ ಹಿಂಜರಿಯಲಿಲ್ಲ. ಇದೇ ಕಾರಣದಿಂದ ಅವರು ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಲೇ ಬಂದಿದ್ದಾರೆ’.

ಚರ್ಚೆಯುದ್ದಕ್ಕೂ ಎಲ್ಲೂ ಮಣಿರತ್ನಂ ತಮ್ಮ ಅಹಂ ತೋರಿಸಿಲ್ಲ, ರಂಗನ್ ಅವರ ಪ್ರಶ್ನೆಗಳೆಲ್ಲಕ್ಕೂ ಉತ್ತರಿಸಿದ್ದಾರೆ. ಕೆಲವೊಮ್ಮೆ ಸಮರ್ಥಿಸಿಕೊಂಡಿದ್ದಾರೆ, ಕೆಲವೊಮ್ಮೆ ಒಪ್ಪಿಕೊಂಡಿದ್ದಾರೆ. ರಂಗನ್ ಅವರೂ ಸಹ, ಟೇಬಲ್ ತುದಿಯೊಂದಿಗೆ ಪ್ರಾರಂಭವಾದ ಮಾತನ್ನು ಮಣಿರತ್ನಂ ಅವರ ಕಣ್ಣುಗಳಲ್ಲಿ ಕಣ್ಣಿಟ್ಟು ಮುಂದುವರೆಸಿದ್ದಾರೆ. ರಂಗನ್ ಮಣಿರತ್ನಂ ಅವರ ಅಭಿಮಾನಿ ಎನ್ನುವ ನೆಲೆಯಿಂದ ಆಚೆಬಂದು ಪ್ರಶ್ನೆಗಳನ್ನು ಕೇಳಿಲ್ಲ ಎನ್ನುವುದು ನಿಜವಾದರೂ, ಚಿತ್ರಗಳ ರಸಗ್ರಹಣದ ಕಾರಣಕ್ಕೆ ಈ ಪುಸ್ತಕ ಮುಖ್ಯವಾಗುತ್ತದೆ. ಸಿನಿಮಾ ಹೇಗೆ ಮತ್ತು ಹೇಗೆಲ್ಲಾ ನೋಡಬೇಕು ಎಂದು ಕಲಿಸುವ ಇಂತಹ ಪುಸ್ತಕಗಳು ನಿರ್ದೇಶಕರ ವಿಷನ್, ಕಲೆ ಮತ್ತು ಕಸುಬುದಾರಿಕೆಯನ್ನು ಕಾಲಕ್ಕೂ ಉಳಿಸಿಡುತ್ತವೆ.

ಪುಸ್ತಕದ ಆರಂಭದಲ್ಲಿ ರಂಗನ್, ಮಣಿರತ್ನಂ ಹೀಗೆ ತಮ್ಮ ಚಿತ್ರಗಳ ಚರ್ಚೆಗೆ ಒಪ್ಪಿಕೊಂಡಿದ್ದೇ ಮಹಾಭಾಗ್ಯ ಎಂದು ಹೇಳುತ್ತಾರೆ. ಆದರೆ ಪುಸ್ತಕ ಮುಗಿಸುವಾಗ ಅನ್ನಿಸುವುದು ಅದೇ ಈ ಪುಸ್ತಕಕ್ಕೆ ಮಿತಿಯೂ ಆಗಿದೆ ಎಂದು. ಏಕೆಂದರೆ ಯಾವುದೇ ವ್ಯಕ್ತಿಯ ಕಲೆಯ ಬಗ್ಗೆ ಬರೆಯುವಾಗ ಬರಹಗಾರ ಆ ವ್ಯಕ್ತಿಯ ಜೊತೆಗೆ ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳುವುದು ಆ ಬರಹದ ದೃಷ್ಟಿಯಿಂದ ಅಗತ್ಯ. ಅದಿಲ್ಲದಾಗ ಕಲೆಯನ್ನು ನಿಕಷಕ್ಕೊಡ್ಡುವ ಕ್ಷಣದಲ್ಲಿ ತಕ್ಕಡಿ ಒಂದು ಕಡೆಗೆ ವಾಲಿಬಿಡುತ್ತದೆ. ಆ ಅಂತರವನ್ನು ಕಾಪಾಡಿಕೊಳ್ಳಲಾರದೆ ಹೋಗಿದ್ದಕ್ಕಾಗಿ ಕೆಲವುಕಡೆ ರಂಗನ್ ಅವರ ವಿಮರ್ಶೆಯ ನೋಟವೂ ಮಂಕಾಗಿರುವಂತೆ ಭಾಸವಾಗುತ್ತದೆ.

Leave a Reply

Your email address will not be published.