ಮುಕ್ತ ಸಮಾಜದಲ್ಲಿ ಪ್ರತಿಭಟಿಸುವ ಹಕ್ಕು

ಯಾವುದೇ ದೇಶದ ಸಂವಿಧಾನವು ಅದರ ಶಬ್ದಾರ್ಥದಿಂದ ತನ್ನ ಕಸುವನ್ನು ಪಡೆದುಕೊಳ್ಳುವುದಿಲ್ಲ.  ಅದು ಚಾರಿತ್ರಿಕ ಅನುಭವಗಳ ಮೂಸೆಯಿಂದ ಬಸಿದ ಭಾವಾರ್ಥಗಳಿಂದ ಪಡೆಯುತ್ತದೆ.

– ರಾಜೀವ ಭಾರ್ಗವ

ನಾವೀಗ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಸಾರ್ವಜನಿಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ನಾಗರಿಕ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಬಗ್ಗೆ ಮರುಚಿಂತಿಸಬೇಕೆಂದು ಒತ್ತಾಯಿಸಿ ಸಾವಿರಾರು ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅಂತಹ ಸಾರ್ವಜನಿಕ ಪ್ರತಿಭಟನೆಗಳು ಒಂದು ಮುಕ್ತವಾದ ಮತ್ತು ಪ್ರಜಾತಂತ್ರೀಯ ಸಮಾಜದ ಹೆಗ್ಗುರುತುಗಳು. ಅಂತಹ ಸಮಾಜವು ಅಧಿಕಾರಸ್ಥರು ಜನರ ಕೂಗನ್ನು ಆಲಿಸಿ ಸೂಕ್ತ ಚರ್ಚೆ ಮತ್ತು ಸಮಾಲೋಚನೆಗಳ ನಂತರ ನಿರ್ಧಾರವೊಂದಕ್ಕೆ ಬರಬೇಕೆಂದು ಬಯಸುತ್ತದೆ.

ಇದಕ್ಕಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಘಟನೆ ಮತ್ತು ಶಾಂತಿಯುತ ಸಭೆ ಸೇರುವ ಸ್ವಾತಂತ್ರ್ಯದ ಹಕ್ಕುಗಳು ಅವಶ್ಯಕ. ಇಂಥ ಹಕ್ಕುಗಳನ್ನು ಆಚರಿಸುವವರ ವಿರುದ್ಧ ಹಾಕುವ ಯಾವುದೇ ಅಂಕುಶವು -ಉದಾಹರಣೆಗೆ ಸೆಕ್ಷನ್ 144 ಜಾರಿ- ಸರ್ಕಾರಕ್ಕೆ ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳಲು ಅಶಕ್ತವಾಗಿರುವುದರ ದ್ಯೋತಕ. ಪ್ರತಿಭಟನೆಯು ಜನರ ದಂಗೆಯೇಳುವ ಸ್ವಭಾವವನ್ನು ತೋರಿಸುವುದಿಲ್ಲ. ಬದಲು ಪ್ರತಿಭಟನೆಯನ್ನು ಹತ್ತಿಕ್ಕುವುದು ಸಮಸ್ಯೆಯನ್ನು ಆಲಿಸುವ, ಚರ್ಚಿಸಿ ವಿಮರ್ಶೆಗೊಳಪಡಿಸುವ ಬಗೆಗೆ ಸರ್ಕಾರಕ್ಕಿರುವ ಅಸಾಮರ್ಥ್ಯವನ್ನು ಬಿಂಬಿಸುತ್ತದೆ. ಒಂದು ನಿರ್ದಿಷ್ಟ ಅವಧಿಗೆ ಅಧಿಕಾರ ನಡೆಸಲು ಅವಕಾಶ ಕೊಟ್ಟವರು ಜನತೆ. ಆದರೆ ಪ್ರತಿಭಟನೆಗೆ ಮಿತಿ ಹೇರುವುದು ಯಾರು ಸರ್ಕಾರ ನಡೆಸಲು ಅವಕಾಶ ಕಲ್ಪಿಸಿದರೋ ಅವರನ್ನೇ ಅವಹೇಳನ ಮಾಡಿದಂತೆಯೇ ಸರಿ!

ಹಕ್ಕುಗಳ ಬಗ್ಗೆ ಎರಡು ವ್ಯಾಖ್ಯಾನಗಳು

ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕೆಂದು ಪುನರುಚ್ಛರಿಸಿದ ನ್ಯಾಯಾಲಯಗಳಿಗೆ ಜನರು ಋಣಿಯಾಗಿರಬೇಕು. ಸಂವಿಧಾನವನ್ನು ಅಕ್ಷರಶಃ ಓದಿ ಅರ್ಥಮಾಡಿಕೊಳ್ಳುವ ಒಬ್ಬ ಸಾಮಾನ್ಯ ವಿದ್ಯಾರ್ಥಿ ಸಂವಿಧಾನದಲ್ಲಿ `ಪ್ರತಿಭಟನೆ’ ಎಂಬ ಪದ ಗೈರಾಗಿರುವುದನ್ನು ಕಾಣಬಹುದು. ಇದಕ್ಕೆ ಸಂಬAಧಿಸಿದ ಸಂವಿಧಾನದ ಪರಿಚ್ಛೇದಗಳನ್ನು ವಿಶೇಷವಾಗಿ 19ನೇ ಪರಿಚ್ಛೇದವನ್ನು ರಾಜಕೀಯಕ್ಕೆ ಹೊರತಾದ ದೃಷ್ಟಿಕೋನದಿಂದ ಓದಬಹುದು. ವಾಕ್ ಸ್ವಾತಂತ್ರ್ಯ ಅಭಿವ್ಯಕ್ತಿಯ ಹಕ್ಕನ್ನು ಆತ ಪ್ರತಿಯೊಬ್ಬರಿಗೂ ತನಗನಿಸಿದ ವೈಯಕ್ತಿಕ ಅಭಿಪ್ರಾಯಗಳನ್ನು ಹೇಳಲು ನೀಡಿರುವ ಹಕ್ಕೆಂದು ಭಾವಿಸಬಹುದು.

ಉದಾಹರಣೆಗೆ ಒಂದು ಸಿನಿಮಾ ಬಗ್ಗೆ ಅಥವಾ ತಾನು ವಾಸಿಸುವ ನಗರದ ಪರಿಸ್ಥಿತಿ ಬಗ್ಗೆ ಹೇಳುವ ಮಾತುಗಳು. ಸಂಘಟನೆಯ ಹಕ್ಕು ಎಂದರೆ, ಸ್ವಯಂ ನಿರ್ವಹಣೆಯ ಕ್ಲಬ್ ಅಥವಾ ಕೂಟಗಳನ್ನು ವೃತ್ತಿಪರ ಕೂಟಗಳು ಅಥವಾ ಸಂಘಗಳನ್ನು ಸ್ಥಾಪಿಸುವ ಹಕ್ಕು ಎಂದು ಪರಿಭಾವಿಸಬಹುದು. ಶಾಂತಿಯುತವಾಗಿ ನೆರೆಯುವ ಹಕ್ಕನ್ನು ಉದ್ಯಾನದಲ್ಲಿ ಪಿಕ್ನಿಕ್ ಆಚರಿಸುವ ಅಥವಾ ಕುಂಭ ಮೇಳದಂಥ ಧಾರ್ಮಿಕ ಮೇಳದಲ್ಲಿ ಭಾಗವಹಿಸಲು ನೀಡಿರುವ ಹಕ್ಕೆಂದು ತಿಳಿಯಬಹುದು. ಸರ್ವಾಧಿಕಾರವಿರುವ ರಾಷ್ಟçಗಳಲ್ಲಿ ಇಂಥ ಹಕ್ಕುಗಳಿಗೂ ಅವಕಾಶವಿಲ್ಲದಂಥ ಸನ್ನಿವೇಶಗಳಲ್ಲಿ ಮೇಲೆ ತಿಳಿಸಿದಂತಹ ಹಕ್ಕುಗಳೂ ಮಹತ್ವವೆಂದು ಅನಿಸಬಹುದು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂಥ ಹಕ್ಕುಗಳು ಸಂಕುಚಿತ ಸ್ವರೂಪದವು.

ಪ್ರತಿಯೊಂದು ಹಕ್ಕು ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಕುರಿತದ್ದಾಗಿದೆಯೇ ಹೊರತು ನಿಷ್ಕ್ರಿಯ ಪಾಲುದಾರಿಕೆಯಲ್ಲ. ಈ ಹಕ್ಕುಗಳು ನಮ್ಮ ರಾಜಕೀಯ ಸ್ವಾತಂತ್ರ್ಯ ಅಂಶಗಳಾಗಿವೆ. ಸಂಘಟನೆಯ ಹಕ್ಕು ಎನ್ನುವುದು ರಾಜಕೀಯ ಉದ್ದೇಶಗಳಿಗಾಗಿ ಸಂಘಟಿತವಾಗುವ ಹಕ್ಕುಗಳೆನಿಸುತ್ತವೆ. ಉದಾಹರಣೆಗೆ ಸರ್ಕಾರದ ನಿರ್ಧಾರಗಳನ್ನು ಸಾಮೂಹಿಕವಾಗಿ ಪ್ರಶ್ನಿಸುವುದಕ್ಕೆ ಹಕ್ಕುಗಳು ಅಗತ್ಯ. ಅಷ್ಟೇ ಅಲ್ಲ ಸರ್ಕಾರದ ಅಧಿಕಾರ ದುರುಪಯೋಗವನ್ನು ತಡೆಯುವುದು ಮಾತ್ರವಲ್ಲ, ಅಧಿಕಾರವನ್ನು ಕಿತ್ತೊಗೆಯಲು ಅಥವಾ ಶಾಂತಿಯುತವಾಗಿ, ಕಾನೂನಾತ್ಮಕವಾಗಿ ಬೇರೊಂದು ಸರ್ಕಾರವನ್ನು ಸ್ಥಾಪಿಸುವ ಉದ್ದೇಶಕ್ಕೂ ಈ ಹಕ್ಕುಗಳು ನೆರವಾಗುತ್ತವೆ. ಬಹುಪಕ್ಷೀಯ ರಾಜಕೀಯ ವ್ಯವಸ್ಥೆಗೆ ಇದೇ ಆಧಾರ.

ಇಲ್ಲಿ ವಿರೋಧಪಕ್ಷಗಳು ಮೌಲ್ಯಯುತವಾದ ಎದುರಾಳಿಯೇ ಹೊರತು ಶತ್ರುವಲ್ಲ. ಅವು ರಾಜಕೀಯ ಅಧಿಕಾರಕ್ಕಾಗಿ ಆರೋಗ್ಯಪೂರ್ಣವಾಗಿ ಸ್ಪರ್ಧಿಸುತ್ತವೆ. ಅಂತಿಮವಾಗಿ ಶಾಂತಿಯುತವಾಗಿ ಸಭೆ ಸೇರುವ ಹಕ್ಕು, ರಾಜಕೀಯ ಪಕ್ಷಗಳ, ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದAತಹ ನಾಗರಿಕ ಸಂಘಟನೆಗಳಿಗೆ, ಸರ್ಕಾರದ ಕಾರ್ಯಗಳನ್ನು ಪ್ರಶ್ನಿಸಲು ಮತ್ತು ತಡೆಯೊಡ್ಡಲು ಪ್ರತಿಭಟನೆ, ಹರತಾಳ, ಸಾರ್ವಜನಿಕ ಪ್ರತಿಭಟನೆ ಮೂಲಕ ನಿರಂತರವಾಗಿ ಪ್ರತಿಭಟನಾ ಆಂದೋಲನಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇಂಥ ಪ್ರತಿಯೊಂದು ಹಕ್ಕುಗಳು ಎರಡು ಬಗೆಯ ವ್ಯಾಖ್ಯಾನಕ್ಕೊಳಪಡುತ್ತವೆ. ಮೊದಲನೆಯದಾಗಿ ಸರ್ಕಾರದ ಹಸ್ತಕ್ಷೇಪದಿಂದ ಮುಕ್ತವಾದ ಒಂದು ಉದಾರವಾದ, ರಾಜಕೀಯೇತರ ಸಾರ್ವಜನಿಕ ಕ್ಷೇತ್ರದಲ್ಲಿ ಖಾಸಗಿ ಉದ್ದೇಶಗಳಿಗಾಗಿ ಜನರು ಈ ಹಕ್ಕುಗಳನ್ನು ಚಲಾಯಿಸುತ್ತಾರೆ. ಎರಡನೆಯದಾಗಿ, ಈ ಹಕ್ಕುಗಳನ್ನು ಅಧಿಕಾರದ ಮೇಲೆ ಪ್ರಭಾವ ಬೀರಲು ಅಥವಾ ಅಧಿಕಾರವನ್ನು ಪಡೆಯಲು ಚಲಾಯಿಸುವುದರಿಂದ ಅವು ಹೆಚ್ಚು ಸಾಂಘಿಕವಾಗಿ ಹಾಗೂ ಪ್ರಬಲವಾಗಿರುತ್ತವೆ. ಆದುದರಿಂದ ಅವು ಪ್ರಜಾಸತ್ತಾತ್ಮಕ ಸಮಾಜಕ್ಕೆ ಆಧಾರವೆನಿಸಿದ ಮೂಲಭೂತ ರಾಜಕೀಯ ಹಕ್ಕುಗಳೆನಿಸುತ್ತವೆ.

ಯಾವುದೇ ದೇಶದ ಸಂವಿಧಾನವು ಅದರ ಶಬ್ದಾರ್ಥದಿಂದ ತನ್ನ ಕಸುವನ್ನು ಪಡೆದುಕೊಳ್ಳುವುದಿಲ್ಲ. ಅದು ಚಾರಿತ್ರಿಕ ಅನುಭವಗಳ ಮೂಸೆಯಿಂದ ಬಸಿದ ಭಾವಾರ್ಥಗಳಿಂದ ಪಡೆಯುತ್ತದೆ. ಆದುದರಿಂದ ಎರಡನೇ ವ್ಯಾಖ್ಯಾನವು ನಮ್ಮ ಚರಿತ್ರೆಯಿಂದ ನೇರವಾಗಿ ಹರಿದುಬರುತ್ತದೆ. ಭಾರತದ ಸಂವಿಧಾನವು ನಿಸ್ಸಂದೇಹವಾಗಿ ಅದರ ವಸಾಹತು ವಿರೋಧಿ ಆಂದೋಲನದಿಂದ ರಚನೆಯಾಗಿದೆ. ಈ ಆಂದೋಲನದಲ್ಲಿ ಸಾರ್ವಜನಿಕರ ರಾಜಕೀಯ ಪ್ರಜ್ಞೆ ಮತ್ತು ಪ್ರಜಾತಾಂತ್ರಿಕ ಸಂವಿಧಾನದ ಆಶಯದ ಬೀಜಗಳನ್ನು ಬಿತ್ತಲಾಗಿತ್ತು.

ವಸಾಹತು ಆಳ್ವಿಕೆಯ ನೀತಿಗಳು ಮತ್ತು ಕಾನೂನುಗಳ ಬಗೆಗೆ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ವಸಾಹತು ನೀತಿ ಮತ್ತು ಕಾಯ್ದೆಗಳನ್ನು ವಿರೋಧಿಸಲು, ಅವುಗಳ ವಿರುದ್ಧ ಜನಾಭಿಪ್ರಾಯ ರೂಪಿಸಲು ಜನರನ್ನು ಜಾಗೃತಗೊಳಿಸಲು, ಸರ್ಕಾರದ ವಿರುದ್ಧ ಮಾತನಾಡಲು ಮತ್ತು ಪ್ರಶ್ನಿಸಲು ಭಾರತೀಯರು ದೀರ್ಘಕಾಲ ಹೋರಾಟ ನಡೆಸಿದರು. ಜನರು ಕೇವಲ ಮನವಿಪತ್ರ ಮಾತ್ರ ನೀಡಲಿಲ್ಲ. ಧರಣಿ ನಡೆಸಿದರು. ಬೃಹತ್ ಸಭೆ ಸೇರಿ ಶಾಂತಿಯುತವಾಗಿ ಪ್ರತಿಭಟಿಸಿದರು. ಗಾಂಧಿಯವರ ಸತ್ಯಾಗ್ರಹವು ನಾಗರಿಕ ಅಸಹಕಾರ ಚಳವಳಿಯನ್ನು ಹುಟ್ಟುಹಾಕಿತು. ಈ ಯಾವುವೂ ಸಂವಿಧಾನದ ಪರಿಚ್ಛೇದಗಳಲ್ಲಿ ಉಲ್ಲೇಖಗೊಂಡಿಲ್ಲ. ಆದರೆ ಸಂವಿಧಾನದ ಭಾವದಲ್ಲಿ ಅವು ಅಡಕಗೊಂಡಿವೆ. ಹಾಗಾಗಿಯೇ ಅದರ ಪೀಠಿಕೆಯಲ್ಲಿ ಭಾರತ ಒಂದು ಪ್ರಜಾಸತ್ತಾತ್ಮಕ ಗಣರಾಜ್ಯ ಎಂದಿರುವುದು.

ಸರ್ಕಾರದ ಕಾವಲು ನಾಯಿಗಳು

ವಾಕ್ ಸ್ವಾತಂತ್ರ, ಸಂಘಟನೆ, ಶಾಂತಿಯುತ ಸಭೆ ಸೇರುವ, ಅಹವಾಲು ಸಲ್ಲಿಸುವ ಮತ್ತು ಪ್ರತಿಭಟಿಸುವ ಈ ಪರಸ್ಪರ ಸಂಬAಧವಿರುವ ರಾಜಕೀಯ ಹಕ್ಕುಗಳ ಗುಚ್ಛವು, ಸರ್ಕಾರವು ಜನರ ಹಿತಾಸಕ್ತಿಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿಯೂ ಸರ್ಕಾರದ ಕಾರ್ಯಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಕಾವಲು ನಾಯಿಗಳಂತೆ ವರ್ತಿಸಲು ಜನತೆಗೆ ಅವಕಾಶ ನೀಡುತ್ತದೆ. ಏಕೆಂದರೆ ಅಂಥ ಸರ್ಕಾರಗಳೂ ತಮ್ಮ ಹಾದಿಯಲ್ಲಿ ಎಡವಬಹುದು. ಆಗ ಅದರ ತಪ್ಪುಗಳನ್ನು ಸಮಾಲೋಚನೆ, ಸಭೆ, ಚರ್ಚೆ ಮೂಲಕ ಗುರುತಿಸಿ ಸರಿಪಡಿಸುವುದು ನಮಗೆ ಬಿಟ್ಟಿದ್ದು.

ಆದರೆ ಇನ್ನೊಂದು ಗಂಭೀರವಾದ ಸನ್ನಿವೇಶವೂ ಎದುರಾಗಬಹುದು. ಒಂದು ಚುನಾಯಿತ ಸರ್ಕಾರ ಸಂವಿಧಾನದ ಮಾರ್ಗ ಬಿಟ್ಟು ಅಡ್ಡದಾರಿ ಹಿಡಿಯಬಹುದು; ಜನರ ಹಿತಾಸಕ್ತಿಗಳ ವಿರುದ್ಧ ಹೋಗಬಹುದು; ಜನರ ಕೂಗನ್ನು ಆಲಿಸದೆ, ಜಡವಾಗಬಹುದು. ಇಲ್ಲಿ ಇನ್ನು ಹೆಚ್ಚಿನ ಶಕ್ತಿಯ ಸಾರ್ವಜನಿಕ ವಿಧಾನಗಳಿಂದ ಸರ್ಕಾರದ ವಿರುದ್ಧ ಒತ್ತಡವನ್ನು ಹೇರಬೇಕಾಗುತ್ತದೆ. ಪ್ರತಿಭಟನೆಗಳು ಬೀದಿಯಲ್ಲಿ ಸಭೆ ಸೇರಿ ಪ್ರತಿಭಟಿಸುವ ರೀತಿಯಲ್ಲಿರಬಹುದು. ಅಥವಾ ಒಂದು ಸಾಂಪ್ರದಾಯಿಕ ರಾಜಕೀಯ ಪ್ರತಿಭಟನೆಯನ್ನು ಕಟ್ಟುವ ಅಥವಾ ನಿರಂತರ ಆಂದೋಲನವನ್ನು ರೂಪಿಸಲು ಪೂರಕವಾದ ಕಾರ್ಯವಾಗಿರಬಹುದು.

ತೆಲುಗು ಭಾಷಿಕರನ್ನೊಳಗೊಂಡ ಪ್ರತ್ಯೇಕ ಆಂಧ್ರ ರಾಜ್ಯ ಸ್ಥಾಪನೆಗೆ ಮದ್ರಾಸ್ ಸರ್ಕಾರದ ವಿರುದ್ಧ ಆಮರಣಾಂತ ಉಪವಾಸ ಕೈಗೊಂಡ ಪೊಟ್ಟಿ ಶ್ರೀರಾಮುಲು ಅವರ ಪ್ರತಿಭಟನೆಯನ್ನು ಅಥವಾ ಮರದ ವ್ಯಾಪಾರಿಗಳಿಗೆ ಮರಗಳನ್ನು ಕಡಿಯಲು ಉತ್ತರ ಪ್ರದೇಶ ಸರ್ಕಾರವು ಗುತ್ತಿಗೆ ನೀಡುವುದನ್ನು ತಪ್ಪಿಸಲು ಗೌರಾದೇವಿ ಮತ್ತು ಚಾಂಡಿ ಪ್ರಸಾದ್ ಭಟ್ ಮೊದಲಾದವರು ಮರಗಳನ್ನು ಅಪ್ಪಿ ಹಿಡಿದ ಚಳವಳಿಯನ್ನು ನೆನಪಿಸಿಕೊಳ್ಳಿ. ಇಂಥ ಆಂದೋಲನಗಳು ಮುಖ್ಯ ವಾಹಿನಿಯಿಂದ ಆಚೆ ಇರುವ ಅಥವಾ ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತವಾದ ಸಮೂಹಕ್ಕೆ ಬಹಳ ಮುಖ್ಯ. ತಾನೆಷ್ಟೆ ಅಧಿಕಾರವಿಲ್ಲದವನಾದರೂ ಅಥವಾ ಅನಕ್ಷರಸ್ಥನಾದರೂ, ಸಂಕಷ್ಟಕ್ಕೊಳಗಾದ ಯಾವುದೇ ವ್ಯಕ್ತಿ ಘೋಷಣೆಯನ್ನು ಕೂಗಬಹುದು, ಫಲಕವನ್ನು ಹಿಡಿದುಕೊಳ್ಳಬಹುದು. ಮೌನ ಮೆರವಣಿಗೆಯಲ್ಲಿ ಭಾಗವಹಿಸಿ ಸರ್ಕಾರವನ್ನು ವಿರೋಧಿಸಬಹುದು. ಮೇಜಿನ ಸುತ್ತ ನಡೆಯುವ ಸಭೆಯಲ್ಲಿನ ಸಂಖ್ಯೆ ಬೀದಿಯಲ್ಲಿ ಸೇರುವವರ ಸಂಖ್ಯೆಯನ್ನು ಸರಿಗಟ್ಟಲಾರದು. “ಶಾಂತಿಯುತವಾಗಿ ಸಭೆ ಸೇರುವ ಜನರ ಹಕ್ಕು ಕ್ರಾಂತಿಯೊAದರ ಸಾಂವಿಧಾನಿಕ ಪರ್ಯಾಯ” ಎಂದು ಅಬ್ರಹಾಂ ಲಿಂಕನ್ ಹೇಳಿದ್ದು ಸುಮ್ಮನೇ ಅಲ್ಲ.

ಎಲ್ಲಾ ಕಡೆ ಪ್ರಜಾಪ್ರಭುತ್ವ ರೂಪುಗೊಂಡಿರುವುದು ಎರಡು ಪ್ರಧಾನ ರಾಜಕೀಯ ಹಕ್ಕುಗಳ ಮೇಲೆ. ಮೊದಲನೆಯದು ತಮ್ಮ ಸರ್ಕಾರವನ್ನು ತಾವೇ ಚುನಾಯಿಸಿಕೊಳ್ಳಲು ಮತ್ತು ಅದರ ಕಾರ್ಯನಿರ್ವಹಣೆ ಅತೃಪ್ತಿಯೆನಿಸಿದರೆ, ನ್ಯಾಯಸಮ್ಮತವಾಗಿ ನಡೆಯುವ ಚುನಾವಣೆಯಲ್ಲಿ ಅದನ್ನು ಕಿತ್ತೊಗೆಯಲು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಹಕ್ಕು (ಪರಿಚ್ಛೇದ 326). ಒಂದು ಸರ್ಕಾರವನ್ನು ತೆಗೆದುಹಾಕಲು ಇರುವ ಸೂಕ್ತ ಸಾಂವಿಧಾನಿಕ ವಿಧಾನ ಇದೊಂದೆ. ಹಾಗೆ ನೋಡಿದರೆ ಶಾಂತಿಯುತವಾಗಿ ಅಧಿಕಾರ ವರ್ಗಾವಣೆಯಾಗುವುದು ಪ್ರಜಾಪ್ರಭುತ್ವದ ಅತ್ಯಂತ ದೊಡ್ಡ ಶಕ್ತಿ. ಆದರೆ ಚುನಾಯಿತ ಸರ್ಕಾರವನ್ನು ಸ್ಥಾನಪಲ್ಲಟ ಮಾಡುವ ಬದಲು ಸರ್ಕಾರದ ಯಾವುದೇ ಪ್ರಸ್ತಾವನೆ ಅಥವಾ ನಿರ್ಧಾರಗಳನ್ನು ಪ್ರಶ್ನಿಸಲು ಕೈಗೊಳ್ಳುವ ಯಾವುದೇ ಶಾಂತಿಯುತ ಸಾರ್ವಜನಿಕ ವಿಧಾನ ಸಹ ಸಾಂವಿಧಾನಿಕವಾಗಿ ಸಮ್ಮತವಾದದ್ದು. ಇದೇ ಎರಡನೇ ರಾಜಕೀಯ ಹಕ್ಕು. ಇದು ಚುನಾವಣೆಗಳ ಕಾಲದಲ್ಲಿ ಮಾತ್ರವಲ್ಲ ಚುನಾವಣೆಗಳ ನಡುವೆಯೂ ರಾಜಕೀಯವಾಗಿ ಭಾಗವಹಿಸಲು ಇರುವಂತಹ ಹಕ್ಕು.

ಪ್ರತಿಭಟಿಸುವ ಹಕ್ಕು, ಸರ್ಕಾರವನ್ನು ಸಾರ್ವಜನಿಕವಾಗಿ ಪ್ರಶ್ನಿಸಿ ಅದರಿಂದ ಉತ್ತರ ಪಡೆಯುವುದು ಜನರ ಮೂಲಭೂತ ರಾಜಕೀಯ ಹಕ್ಕು. ಇದು ಸಂವಿಧಾನದ ಪರಿಚ್ಛೇದ 19ನ್ನು ರಾಜಕೀಯವಾಗಿ ವ್ಯಾಖ್ಯಾನಿಸುವುದರ ಮೂಲಕ ವ್ಯಕ್ತವಾಗುತ್ತದೆ. ಹಾಗಿಲ್ಲದಿದ್ದರೆ, ವಿಷಯಾಂತರ ಮಾಡುವ, ಪ್ರಶ್ನೆಗಳನ್ನು ಎದುರಿಸದ ಮತ್ತು ಯಾವುದೇ ಚರ್ಚೆಯ ಪ್ರಯತ್ನವನ್ನು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ಪ್ರಸಕ್ತ ಸರ್ಕಾರದ ವಿಧಾನವು ದಿಕ್ಕು ತೋಚದ ಪರಿಸ್ಥಿತಿ ನಿರ್ಮಿಸುತ್ತದೆ.

ಗೋಪ್ಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಯಾವುದೇ ಸಿದ್ಧತೆ ಮಾಡಿಕೊಳ್ಳದ ಜನತೆಯ ಮೇಲೆ ಅದನ್ನು ಹೇರುವುದು ಮತ್ತು ಅದನ್ನು ಪ್ರಶ್ನಿಸಿದಾಗ ತನ್ನ ಗೊಂದಲದ, ಮಧ್ಯರಾತ್ರಿಯ ನಿರ್ಧಾರಗಳನ್ನು ಸಮರ್ಥಿಸಲು ಪ್ರಚಾರಾಂದೋಲನ ಮಾಡುವುದು ಪ್ರಸಕ್ತ ಸರ್ಕಾರದ ಪ್ರವೃತ್ತಿಯಾಗಿದೆ. “ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಭರವಸೆಯನ್ನು ನೀಡಿದ ಸರ್ಕಾರವು ಪ್ರತಿಯೊಬ್ಬರನ್ನು, ವಿಶೇಷವಾಗಿ ಅದರ ಟೀಕಾಕಾರರ ಮಾತುಗಳನ್ನು ಆಲಿಸಿ ನ್ಯಾಯಪರತೆಯನ್ನು ಎತ್ತಿ ಹಿಡಿಯುವುದೋ ಅಥವಾ ಎಲ್ಲಾ ವಿರೋಧಿಗಳಿಗೆ ದೇಶದ್ರೋಹಿ, ರಾಷ್ಟ್ರವಿರೋಧಿ ಕಳಂಕ ಹಚ್ಚುವುದನ್ನು ಮುಂದುವರಿಸುವುದೋ? ನೋಡಬೇಕು.

*ಲೇಖಕರು ದೆಹಲಿಯ ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರು.

ಕೃಪೆ: ದಿ ಹಿಂದೂ, ಅನುವಾದ: ಕೆ.ಪುಟ್ಟಸ್ವಾಮಿ

Leave a Reply

Your email address will not be published.