ಮುಖ್ಯಚರ್ಚೆಗೆ ಪ್ರವೇಶ

ರಾಷ್ಟ್ರೀಯತೆ ಮತ್ತು ಪೌರತ್ವದ ಹೊಸ ವ್ಯಾಖ್ಯೆಯ ಅಗತ್ಯವಿದೆಯೇ..?

ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಪಟ್ಟಿಯ ವಿಷಯಗಳು ದೇಶಾದ್ಯಂತ ತೀಕ್ಷ್ಣ ಚರ್ಚೆಗೆ ಗ್ರಾಸವಾಗಿವೆ. 371ನೇ ಸಾಂವಿಧಾನಿಕ ವಿಧಿಯನ್ನು ಸಾರಾಸಗಟಾಗಿ ಹಿಂದೆಗೆದು ಕಾಶ್ಮೀರವನ್ನು ವಿಭಜನೆ ಮಾಡಿದ್ದು, ಅಸ್ಸಾಮಿನಲ್ಲಿ ಎನ್‍ಆರ್‍ಸಿ ಪ್ರಕ್ರಿಯೆ ಮುಂದುವರೆಸಿದ್ದು, ಸುಪ್ರೀಮ್ ಕೋರ್ಟಿನಲ್ಲಿ ಅಯೋಧ್ಯೆ ವಿವಾದದ ತೀರ್ಪು ಬಹುಸಂಖ್ಯಾತರ ಪರವಾಗಿದ್ದು ಹಾಗೂ ಇದೀಗ ಪೌರತ್ವ ತಿದ್ದುಪಡಿ ಕರಡನ್ನು ದೇಶದ ಸಂಸತ್ತು ಒಂದೇ ದಿನದ ಚರ್ಚೆಯ ನಂತರ ಅಂಗೀಕರಿಸಿದ್ದು ಮೊದಲಾದ ಘಟನೆಗಳು ಕಾವೇರಿದ ಆರೋಪ- ಪ್ರತ್ಯಾರೋಪಗಳಿಗೆ ಎಡೆಮಾಡಿಕೊಟ್ಟಿವೆ. ಈ ಎಲ್ಲ ಕಾನೂನು ಪ್ರಕ್ರಿಯೆ ಹಾಗೂ ನ್ಯಾಯಿಕ ಚರ್ಚೆಗಳ ಮೂಲದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯೇ ಮೂಲಭೂತವಾಗಿ ಬದಲಾಗುತ್ತಿದೆಯೇನೋ ಎಂಬ ಗ್ರಹಿಕೆಯೂ ಕಾಡುತ್ತಿದೆ.

1947ರ ದೇಶ ವಿಭಜನೆಯ ಕಾಲದಲ್ಲಿ ಆದ ತಪ್ಪುಗಳನ್ನು ಸರಿಪಡಿಸುವ ಇರಾದೆಯಲ್ಲಿ ಆಡಳಿತ ಪಕ್ಷ ತನ್ನ ಘೋಷಿತ ನಿಲುವಿನಂತೆಯೇ ಕಾನೂನುಬದ್ಧವಾಗಿ ಸಾಂಸ್ಥಿಕ ಬದಲಾವಣೆ ತರುತ್ತಿದೆಯೆಂದು ಹೇಳಲಾಗಿದೆ. ಕಾಶ್ಮೀರ-ಅಯೋಧ್ಯೆ ಏಕರೂಪ ನಾಗರಿಕ ಸಂಹಿತೆಯು ಜನಸಂಘದ ಕಾಲದಿಂದಲೂ ತಮ್ಮ ಅತಿಪ್ರಮುಖ ಕಾರ್ಯಸೂಚಿಯಾಗಿದ್ದು ಇದೀಗ ಸಂಸದೀಯ ಬಹುಮತದ ನೆರವಿನಿಂದ ಈ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದೆಯೆಂದು ಬಿಜೆಪಿ ಹೇಳಿಕೊಂಡಿದೆ. ತನ್ನ ‘ಹಿಂದುತ್ವವಾದಿ’ ಬದ್ಧತೆ ಸಾರ್ವಜನಿಕವಾಗಿದ್ದು ಚುನಾವಣೆಗಳ ಫಲಿತಾಂಶಗಳು ತನ್ನ ನಿಲುವುಗಳನ್ನು ಪುಷ್ಟೀಕರಿಸಿವೆಯೆಂದೂ ಬಿಜೆಪಿ ಹೇಳಿಕೊಂಡಿದೆ.

ಭ್ರಷ್ಠಾಚಾರರಹಿತ ಹಾಗೂ ಪಾರದರ್ಶಕ ಸರ್ಕಾರ ರಚನೆಗೆ ದೇಶದ ಜನರು ನೀಡಿದ ಜನಾದೇಶವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳುಗೆಡವಿ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಆಡಳಿತ ಪಕ್ಷ ಕೊಡಲಿಪೆಟ್ಟು ನೀಡುತ್ತಿದೆಯೆಂದು ವಿರೋಧಿಗಳು ದೂರಿದ್ದಾರೆ. ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುವ ಹಿಂದೂ ರಾಷ್ಟ್ರೀಯವಾದ ಸಂವಿಧಾನದ ಅತಿಮುಖ್ಯ ಆದರ್ಶಗಳಿಗೆ ವಿರುದ್ಧವಾಗಿದೆಯೆಂದೂ ಹೇಳಲಾಗಿದೆ. ಎನ್‍ಆರ್‍ಸಿ ಹಾಗೂ ಪೌರತ್ವ ತಿದ್ದುಪಡಿ ಕಾಯಿದೆಗಳು ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ಭಯದ ವಾತಾವರಣ ಸೃಷ್ಟಿಮಾಡಿವೆ ಎಂದೂ ಆಪಾದಿಸಲಾಗಿದೆ.

ಈ ಎರಡೂ ವ್ಯತಿರಿಕ್ತ ನಿಲುವುಗಳು ಅರ್ಧಸತ್ಯವಾಗಿರಬಹುದು ಅಥವಾ ಸತ್ಯವೆಂಬ ಕಲ್ಪನೆಯು ಈ ಎರಡೂ ವಾದಗಳ ನಡುವೆಯೆಲ್ಲೋ ಅಡಗಿರಬಹುದು. ಆದರೆ ಈ ಚರ್ಚೆಯು ದೇಶದ ಬಗೆಗಿನ ನಮ್ಮ ಪರಿಕಲ್ಪನೆಯನ್ನೇ ಬದಲಾಯಿಸುವಂತಿದೆ; ಭಾರತದ ರಾಷ್ಟ್ರೀಯತೆ ಹಾಗೂ ಪೌರತ್ವಗಳ ಬಗ್ಗೆ ಇದುವರೆಗಿನ ನಮ್ಮ ಅರ್ಥೈಸುವಿಕೆಗೆ ಹೊರಗಿನಂತಿದೆ.

ಈ ಚರ್ಚೆಯು ಕೇವಲ ಭಾರತಕ್ಕೆ ಸೀಮಿತವಾಗದೆ ಅಮೆರಿಕ, ಇಂಗ್ಲೆಂಡ್, ರಷ್ಯಾ, ಬ್ರೆಜಿಲ್ ಮತ್ತಿತರ ದೇಶಗಳಲ್ಲಿಯೂ ಪ್ರತಿಧ್ವನಿಸುತ್ತಿದೆ. ಯಾರು ನಮ್ಮವರು ಯಾರು ಪರಕೀಯರು ಎಂಬ ಒಳಗೊಳ್ಳುವಿಕೆ ಹಾಗೂ ಪ್ರತ್ಯೇಕತೆಯ ಕೂಗು ಎಲ್ಲೆಡೆ ಮಾರ್ದನಿಸುತ್ತಿದೆ. ಈ ಚರ್ಚೆಯು ನಮ್ಮ ದೇಶೀಯ ಅಸ್ತಿತ್ವದ ಹಾಗೂ ನಾಗರಿಕ ಹಕ್ಕುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಈ ವಿಷಯವನ್ನು ಈ ಸಂಚಿಕೆಯ ಮುಖ್ಯಚರ್ಚೆಯಾಗಿ ಕೈಗೆತ್ತಿಕೊಂಡಿದ್ದೇವೆ.

Leave a Reply

Your email address will not be published.