ಮುಖ್ಯಚರ್ಚೆಗೆ ಪ್ರವೇಶ

ನಮ್ಮ ಹಿಂದುಳಿದಿರುವಿಕೆಗೆ ಕಾರಣವಾಗಿರುವ

ಭಾರತೀಯ ಸಂಸ್ಕೃತಿಯ ಬದಲಾವಣೆಗೆ

ಸಾವಿರ ವರ್ಷಗಳಾದರೂ ಬೇಕೆ..?

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಡಿನ ಅಗ್ರಗಣ್ಯ ಉದ್ಯಮಿ ಎನ್.ಆರ್.ನಾರಾಯಣಮೂರ್ತಿ ಅವರು ಭಾರತೀಯ ಸಂಸ್ಕೃತಿಯು ಅರ್ಹತೆ, ಪ್ರಾಮಾಣಿಕತೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಸೋತಿದೆ ಹಾಗೂ ಈ ಕಾರಣದಿಂದ ದೇಶದಲ್ಲಿನ ವೈಜ್ಞಾನಿಕ ಸಂಶೋಧನೆಯು ಶೈಶವಾವಸ್ಥೆಯಲ್ಲಿದೆ ಎಂದು ಹೇಳಿದ್ದಾರೆ. ತನ್ನ ಅತ್ಯುತ್ತಮ ಮೇಧಾವಿಗಳನ್ನು ದೇಶದಲ್ಲಿಯೇ ಉಳಿಸಿಕೊಳ್ಳಲು ಆಗದಿರುವ ಕಾರಣಕ್ಕೆ ನಾರಾಯಣಮೂರ್ತಿಯವರು ಸಂಶೋಧನೆಗೆ ಪೂರಕ ವಾತಾವರಣ ಇಲ್ಲದಿರುವುದು ಹಾಗೂ ಸಂಶೋಧನೆಗೆ ಬೇಕಿರುವ ಸರ್ಕಾರಿ ಸವಲತ್ತಿನ ವಿಳಂಬವನ್ನು ಗುರುತಿಸಿದ್ದಾರೆ. ಯಾವ ದೇಶಗಳು ವೈಜ್ಞಾನಿಕ ಸಂಶೋಧನೆಯಲ್ಲಿ ಮುಂದೆ ಇರುವವೋ ಆ ದೇಶಗಳಲ್ಲಿ ಒಂದು ರೀತಿಯ ಸಂಸ್ಕೃತಿಯಿದ್ದರೆ ಯಾವ ದೇಶಗಳಲ್ಲಿ ಸಂಶೋಧನೆ ಹಿಂದುಳಿದಿದೆಯೋ ಆ ದೇಶಗಳಲ್ಲಿ ಬೇರೊಂದು ರೀತಿಯ ಸಂಸ್ಕೃತಿ ಇರುವುದೆಂದು ಹೇಳಿದ್ದಾರೆ.

ಪ್ರಾಮಾಣಿಕತೆ, ಅರ್ಹತೆ ಆಧಾರದ ಆಯ್ಕೆ, ದೇಶದ ಬಗ್ಗೆ ಹೆಮ್ಮೆ, ಸ್ಪರ್ಧಾತ್ಮಕ ಮನೋಭಾವ ಹಾಗೂ ಚುರುಕುತನಗಳು ಅಭಿವೃದ್ಧಿ ಹೊಂದಿದ ದೇಶಗಳ ಗುಣಗಳಾಗಿವೆ. ಆದರೆ ಅಪ್ರಾಮಾಣಿಕತೆ, ಅಸಡ್ಡೆ, ಇನ್ನೊಬ್ಬರ ವಿಚಾರಗಳನ್ನು ಕದಿಯುವುದು ಹಾಗೂ ದೇಶದ ಬಗ್ಗೆ ನಿರ್ಲಕ್ಷ್ಯವು ಪ್ರಗತಿ ಕಾಣದ ದೇಶಗಳ ಗುಣಲಕ್ಷಣಗಳಾಗಿವೆ ಎಂದೂ ನಾರಾಯಣಮೂರ್ತಿ ಹೇಳಿದ್ದಾರೆ. ಈ ಅವಲಕ್ಷಣಗಳು ಬದಲಾಗಲು 1,000 ರಿಂದ 3,000 ವರ್ಷಗಳು ಬೇಕಾಗಬಹುದು. ಏಕೆಂದರೆ ಬದಲಾವಣೆ ಸುಲಭಸಾಧ್ಯವಲ್ಲ. ದೇಶದ ಸಂಸ್ಕೃತಿಯ ಅವಲಕ್ಷಣಗಳು ಕಳೆದ 2,000 ದಿಂದ 3,000 ವರ್ಷಗಳಿಂದಲೂ ಮನೆಮಾಡಿಕೊಂಡಿವೆಯೆಂದೂ ಅವರು ಹೇಳಿದ್ದಾರೆ.  

ನಾರಾಯಣಮೂರ್ತಿಯವರು ಅತ್ಯಂತ ಗಹನವಾಗಿ ಆಲೋಚನೆ ಮಾಡದೆ ಈ ತೆರನಾದ ಹೇಳಿಕೆ ನೀಡಿರಲಿಕ್ಕಿಲ್ಲ. ಅವರ ಹೇಳಿಕೆಯು ಅತ್ಯಂತ ಗಂಭೀರ ಹಾಗೂ ತೀಕ್ಷ್ಣ ಚರ್ಚೆಗೆ ಅರ್ಹವಾಗಿದೆ. ಅವರ ಮಾತುಗಳನ್ನು ಯಾರೂ ಒಪ್ಪಬೇಕಿಲ್ಲ ಅಥವಾ ಧಿಕ್ಕರಿಸಬೇಕಿಲ್ಲ. ಆದರೆ ಅವರು ಆಡಿರುವ ಮಾತುಗಳಲ್ಲಿ ಸ್ವಲ್ಪವಾದರೂ ಸತ್ಯವಿದ್ದರೆ ಅದು ನಮ್ಮನ್ನು ಬಡಿದೇಳಿಸಬೇಕು. ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯ ಹಾಗೂ ಆಳ-ಅಗಲಗಳ ಬಗ್ಗೆ ನಾವು ಹೆಮ್ಮೆ ಹೊಂದಿರಬಹುದು. ಆದರೆ ಅದೇ ಸಂಸ್ಕೃತಿಯ ನ್ಯೂನತೆ-ಅನಿಷ್ಟಗಳ ಬಗ್ಗೆಯೂ ನಾವು ಚಿಂತನೆ ಮಾಡಲೇಬೇಕು. ಸಮಸ್ಯೆಯೊಂದನ್ನು ಪರಿಹರಿಸುವ ಮೊದಲು ಸಮಸ್ಯೆಯ ಇರುವಿಕೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿಯೇ ಪರಿಹಾರ ಹುಡುಕುವ ಹಾದಿಯೂ ಕಾಣಬಹುದು ಮತ್ತು ಚಿಕಿತ್ಸೆಗೆ ಅಗತ್ಯ ಮದ್ದು ಕಾಣಸಿಗಬಹುದು.

ಈ ಆಶಯ ಹೊತ್ತ ಚರ್ಚೆಯನ್ನು ಇಗೋ ನಿಮ್ಮ ಮುಂದಿರಿಸಿದ್ದೇವೆ.

Leave a Reply

Your email address will not be published.