ಮುಖ್ಯಚರ್ಚೆಗೆ-ಪ್ರವೇಶ

‘ಕೊರೊನಾ ನಂತರ’ ಯುಗದ ಗುಣಲಕ್ಷಣಗಳೇನು..?

ಇದುವರೆಗೆ ನಾವು ಬಲ್ಲೆವೆಂದು ತಿಳಿದಿದ್ದ ನಮ್ಮ ಪ್ರಪಂಚ ಅಚಾನಾಕ್ಕಾಗಿ ತಲೆಕೆಳಗಾಗಿದೆ. ವ್ಯವಸ್ಥೆ, ಸುರಕ್ಷತೆ ಹಾಗೂ ಆರೋಗ್ಯಗಳ ಬಗ್ಗೆ ನಮ್ಮ ಕಲ್ಪನೆ ನುಚ್ಚುನೂರಾದರೆ ವಾಣಿಜ್ಯ, ಉದ್ದಿಮೆ, ಹೂಡಿಕೆ ಮತ್ತು ಉದ್ಯೋಗಗಳ ಬಗೆಗಿನ ನಮ್ಮ ತಿಳಿವಳಿಕೆ ಬುಡಮೇಲಾಗಿದೆ. ಜಾಗತೀಕರಣ ಹಾಗೂ ವ್ಯಕ್ತಿವಾದಗಳು ಬೆದರಿವೆ. ತಂತ್ರಜ್ಞಾನ ಮತ್ತು ಉದ್ಯೋಗೀಕರಣಗಳಿಗೆ ಹಿನ್ನೆಡೆಯಾದರೂ ಅದೇ ವಿಜ್ಞಾನ ಮತ್ತು ಡಿಜಿಟಲೀಕರಣಗಳು ನಮ್ಮ ರಕ್ಷಣೆಗೆ ಬರಬೇಕೆನ್ನುವ ಅರಿವೂ ಆಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಚೀನಾದ ಮಧ್ಯಭಾಗದ ಪ್ರಾಂತ್ಯವೊಂದರಲ್ಲಿ ಮ್ಯುಟೇಷನ್‌ಗೆ ಒಳಗಾಗಿ ಪ್ರವಾಸ ಹೊರಟ ಒಂದು ಕೊರೊನಾ ವೈರಸ್ ಕೇವಲ ಆರು ತಿಂಗಳಲ್ಲೇ ಪ್ರಪಂಚದ ಚಿತ್ರಣವನ್ನೇ ಬದಲಾಯಿಸಿ ಮನುಕುಲದ ಇತಿಹಾಸದಲ್ಲಿ ಹೊಸ ಯುಗವೊಂದಕ್ಕೆ ನಾಂದಿಯಿಟ್ಟಿದೆ.

ಈ ‘ಕೊರೊನಾ ನಂತರ’ದ ಯುಗ ಹೇಗಿರುತ್ತದೆ..? ಇದರ ಕಲ್ಪನೆ ಹಾಗೂ ಪರಿಚಯ ನಮಗಿದೆಯೇ..? ಈ ಹೊಸಯುಗದಲ್ಲಿ ನಮ್ಮ ಅಸ್ತಿತ್ವ ಉಳಿವಿಗೆ ಬೇಕಿರುವ ಅಸ್ತಗಳೇನು..? ಈ ಹೊಸಯುಗದಲ್ಲಿ ಸೋತು ಅಳಿಯುವ ವಾಣಿಜ್ಯ-ಉದ್ಯೋಗಗಳು ಯಾವುವು ಹಾಗೂ ನಮ್ಮ ಉಪಯೋಗಕ್ಕೆ ಬರುವ ಕುಶಲತೆ ಮತ್ತು ಜೀವನಕ್ರಮಗಳಾವುವು..? ಸಾರ್ವಜನಿಕ ಸಾರಿಗೆ ಕ್ಷೀಣವಾಗಿ ಖಾಸಗಿ ಪ್ರಯಾಣವೇ ರೂಢಿಯಾಗುತ್ತದೆಯೇ..? ವಾಣಿಜ್ಯ ಕಟ್ಟಡಗಳಿಗೆ ಬೇಡಿಕೆ ಕಡಿಮೆಯಾಗಿ ಡಿಜಿಟಲ್-ಆನ್‌ಲೈನ್ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತದೆಯೇ..? ಸಾರ್ವಜನಿಕ ಸ್ವಾಸ್ಥö್ಯದ ಜೊತೆಗೆ ಜನರ ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಕಾಳಜಿ ಹೆಚ್ಚಲಿದೆಯೇ..? ಅಂತರರಾಜ್ಯ-ರಾಷ್ಟ ಪ್ರಯಾಣ ಕಡಿಮೆಯಾಗಿ ಜಾಗತೀಕರಣದ ಪ್ರಭಾವ ಕುಗ್ಗಲಿದೆಯೇ..?

ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮ ಮುಂದಿವೆ. ಉತ್ತರಗಳು ಅಸ್ಪಷ್ಟವಾದರೂ ಹುಡುಕಬೇಕಾದ ಅನಿವಾರ್ಯತೆಯೂ ನಮಗಿದೆ. ‘ಕೊರೊನಾ ನಂತರ’ ಯುಗದ ರೂಪ-ರೇಶೆಗಳ ಬಗ್ಗೆ ನಾವು ಚಿಂತೆ-ಚಿಂತನೆ ಮಾಡಲೇಬೇಕಿದೆ. ಈ ನಿಟ್ಟಿನ ಸಮಾಜಮುಖಿ ಪ್ರಯತ್ನವೊಂದು ನಿಮ್ಮ ಮುಂದಿದೆ, ಓದಿ ಪ್ರತಿಕ್ರಿಯಿಸಿ.

Leave a Reply

Your email address will not be published.