ಮುಖ್ಯಚರ್ಚೆಗೆ-ಪ್ರವೇಶ

ಕನ್ನಡ ಕಟ್ಟುವ ಕಾಯಕದ ಕಾರ್ಮಿಕರು ಬದಲಾದರೇ..?

‘ಕನ್ನಡ ಕಟ್ಟುವ’ ಕೆಲಸ 20ನೇ ಶತಮಾನದ ಮೊದಲ ದಶಕಗಳಿಂದಲೂ ಅವ್ಯಾಹತವಾಗಿ ನಡೆದುಬಂದರೂ ಕನ್ನಡದ ಕಟ್ಟಡ ಅಪೂರ್ಣವಾಗಿಯೇ ಉಳಿದಿದೆ. ಬಿಎಂಶ್ರೀ., ತೀನಂಶ್ರೀ, ಆಲೂರು ವೆಂಕಟರಾಯರ ಪೀಳಿಗೆಯ ನಂತರದಲ್ಲಿ ಕುವೆಂಪು ಕಾರಂತರ ಪೀಳಿಗೆ ಈ ಕಟ್ಟಡ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು. ಎಪ್ಪತ್ತು ಎಂಬತ್ತರ ದಶಕದಲ್ಲಿ ಕನ್ನಡದ ಬಹುತೇಕ ಸಾಹಿತಿ-ಚಿಂತಕರು ಸಂಪೂರ್ಣವಾಗಿ ತಮ್ಮನ್ನು ತಾವು ಈ ಕಾಯಕಕ್ಕೆ ತೊಡಗಿಸಿಕೊಂಡಿದ್ದರು.

ನಂತರದಲ್ಲಿ ಚಳವಳಿಗಾರರು, ಹುಟ್ಟು ಹೋರಾಟಗಾರರು, ಸಂಘಟಕರು, ಬಂಡಾಯದವರು, ದಲಿತರು, ರೈತ ನಾಯಕರು ಮತ್ತಿತರರು ಕನ್ನಡ ಬಾವುಟ ಹಾರಿಸುವಲ್ಲಿ ಹೆಸರು ಗಳಿಸಿದರು. ಕನ್ನಡ ಕಟ್ಟುವ ಕೆಲಸವು ಸಹಸ್ರಾರು ಮಂದಿಗೆ ಜೀವನೋಪಾಯವೂ ಸಂಪನ್ಮೂಲವೂ ಆಯಿತು. ಮೊದಲು ಸಾಹಿತಿ ಚಿಂತಕರ ಮುಂಚೂಣಿಯಲ್ಲಿ ಶುರುವಾದ ಈ ಜಾಥಾ ನಂತರದಲ್ಲಿ ಹೋರಾಟಗಾರರ ಘೋಷಣೆಗಳಲ್ಲಿ ‘ಕಳೆ’ ತುಂಬಿಕೊಂಡಿತು. ಆದರೂ ಕನ್ನಡದ ಕನಸಿನ ಸೌಧ ಕಟ್ಟಿ ಮುಗಿಸುವ ಕಾಲ ಬಂದಂತೆ ಕಾಣಲಿಲ್ಲ. ಆದರೆ 21ನೇ ಶತಮಾನದ ಕಳೆದೆರೆಡು ದಶಕಗಳಲ್ಲಿ ಈ ಕನ್ನಡ ಕಟ್ಟುವ ಕಾಯಕದಲ್ಲಿ ಸಾಹಿತಿ-ಚಿಂತಕರ ಪಾತ್ರ ಕಡಿಮೆಯಾಗಿದೆ. ಹುಟ್ಟು ಹೋರಾಟಗಾರರು ಕನ್ನಡದ ರಕ್ಷಣೆಯನ್ನೇ ಉದ್ಯೋಗ ಮಾಡಿಕೊಂಡಿದ್ದರೂ ಭಾಷೆಯ ಉಳಿವಿಗೆ ಕೊಡುಗೆಯೇನನ್ನೂ ನೀಡಲಾಗದವರಾಗಿದ್ದಾರೆ.

ಇಂದು ಕನ್ನಡ ಕಟ್ಟುವ ಕೆಲಸದಲ್ಲಿ ಸಾಹಿತಿ-ಹೋರಾಟಗಾರರ ಏಕಸ್ವಾಮ್ಯ ಉಳಿದಿಲ್ಲ. ಈ ಹಳೆಯ ಪೀಳಿಗೆಯ ಹಳೆಯ ಚಿಂತನೆಗಳೂ ಇಂದು ಪ್ರಸ್ತುತತೆ ಉಳಿಸಿಕೊಂಡಿಲ್ಲ. ಇಂಗ್ಲಿಷ್-ಕನ್ನಡ ಮೇಷ್ಟರುಗಳು ಇಂದು ತಮ್ಮ ಆಕರ್ಷಣೆ ಉಳಿಸಿಕೊಂಡಿಲ್ಲ. ಬದಲಿಗೆ ಕನ್ನಡ ಕಟ್ಟುವ ಕಾಯಕದಲ್ಲಿ ಯಾವುದೇ ಪ್ರತಿಫಲಾಕ್ಷೆ ಬಯಸದೆ ಕೇವಲ ತಮ್ಮ ಭಾಷಾಪ್ರೇಮಕ್ಕೆ ಬದ್ಧರಾಗಿ ಕಾರ್ಯನಿರತವಾದ ಹೊಸತಲೆಮಾರಿನ ಪಡೆಯೇ ಸಿದ್ಧವಾಗಿದೆ. ಈ ಆಧುನಿಕ ಕನ್ನಡ ಕಟ್ಟಾಳುಗಳ ಸಾಧನೆ-ಕೊಡುಗೆಯನ್ನು ಗುರುತಿಸುವುದು ಮತ್ತು ಕನ್ನಡ ಭವನ ಕಟ್ಟುವವರ ಬೆನ್ನು ತಟ್ಟುವುದು ಈ ಸಂಚಿಕೆಯ ಮುಖ್ಯಚರ್ಚೆಯ ಮೂಲೋದ್ದೇಶ.

Leave a Reply

Your email address will not be published.