ಮುಖ್ಯಚರ್ಚೆಗೆ-ಪ್ರವೇಶ

ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ..?

ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಅಶಕ್ತರೂ ಅಸಫಲರೂ ಆಗುತ್ತಿದ್ದೇವೆಂಬ ಹೆದರಿಕೆ ನಮ್ಮನ್ನು ಕಾಡುತ್ತಿದೆ. ಈ ಮಿಲೆನಿಯಮ್ ಮಕ್ಕಳು ತಂದೆ-ತಾಯಂದಿರ ಹಾಗೂ ಗುರು-ಹಿರಿಯರ ಮಾತಿಗಿಂತಲೂ ನಾವು ಕೇಳರಿಯದ ಯಾವುದೋ ಇಂಟರ್‍ನೆಟ್ ಸೆನ್ಸೇಶನ್ ಪ್ರಭಾವಕ್ಕೆ ಒಳಗಾಗಿರುವಂತೆ ತೋರುತ್ತಿದೆ. ಮನೆಯವರೊಡನೆ ಕಡಿಮೆ ಸಂಗಡ ಹಾಗು ಹಿರಿಯರ ಮಾತಿಗೆ ಇಲ್ಲದ ಮನ್ನಣೆಯ ಜೊತೆಗೆ ದಿನದ ಇಪ್ಪತ್ತುನಾಲ್ಕು ಗಂಟೆಯೂ ಮೊಬೈಲ್ ಫೋನಿನಲ್ಲಿ ಮಗ್ನರಾಗಿರುವಂತೆ ತೋರುತ್ತಿದೆ.

ಕಳೆದ ಹತ್ತು ವರ್ಷಗಳಲ್ಲಿ ಅಗಾಧ ಮಾಹಿತಿ ಸ್ಫೋಟವಾಗಿದೆ. ಅಂತರ್ಜಾಲದ ಪ್ರಸರಣದಲ್ಲಿ ಅಂಗೈಯಲ್ಲಿಯೇ ವಿಶ್ವ ತೆರೆದುಕೊಂಡಿರುವ ಜೊತೆಗೆ ಸಮೂಹ ಮಾಧ್ಯಮಗಳ ಹಾಗೂ ಡಿಜಿಟಲ್ ಮಿತ್ರವಲಯದ ಹೊಸ ಲೋಕವೇ ಸೃಷ್ಟಿಯಾಗಿದೆ. ಫೇಸ್‍ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್, ಸ್ನಾಪ್‍ಚಾಟ್ ಮತ್ತಿತರ ತಾಣಗಳ ಮುಖಾಂತರ ನಮ್ಮ ಮಕ್ಕಳ ಸ್ನೇಹ ವಲಯವೇ ಬದಲಾಗಿ ಅಗೋಚರ ಪ್ರಭಾವಕ್ಕೆ ಒಳಗಾದಂತೆ ತೋರುತ್ತಿದೆ. ಯಾವುದೋ ಪ್ರಪಂಚದ ಯಾರೋ ಸಮೂಹಸನ್ನಿ ಮಾಂತ್ರಿಕರು ನಮ್ಮ ಮಕ್ಕಳ ಮೇಲೆ ದಟ್ಟ ಪ್ರಭಾವ ಬೀರಿದಂತೆ ಕಾಣುತ್ತಿದೆ. ನಮ್ಮ ಗಮನಕ್ಕೆ ಬಾರದೆಯೇ ನಮ್ಮ ಮಕ್ಕಳು ಬೇರೊಂದು ದೇಶದ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ನಾವು ಎಚ್ಚೆತ್ತು ನೋಡುವ ಹೊತ್ತಿಗೆ ನಮ್ಮ ಮಕ್ಕಳು ಮಾನಸಿಕವಾಗಿ ಬೇರೆಲ್ಲಿಯೋ ವಲಸೆ ಹೋದಂತೆ ಕಾಣುತ್ತಿದೆ.

ಇದು ಅನಿವಾರ್ಯವೇ..? ಅಥವಾ ಮಕ್ಕಳನ್ನು ನಾವು ರೂಪಿಸುವಲ್ಲಿ ಎಡವುತ್ತಿದ್ದೇವೆಯೇ..? ‘ರೂಪಿಸುವ’ ಕೈಂಕರ್ಯವನ್ನೇ ನಾವು ಬಿಟ್ಟುಬಿಡಬೇಕೇ..? ರೂಪಿಸುವುದಾದರೆ ಹೇಗೆ..?

ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಆರಂಭಿಕ ಹೆಜ್ಜೆಯೇ ಈ ಸಂಚಿಕೆಯ ಮುಖ್ಯಚರ್ಚೆ; ಹಲವಾರು ತಜ್ಞರು ವಿಷಯ ವಿಶ್ಲೇಷಿಸಿದ್ದಾರೆ, ಪರಿಹಾರದ ಹಾದಿಗೆ ಬೆಳಕು ಚೆಲ್ಲಿದ್ದಾರೆ.

Leave a Reply

Your email address will not be published.