ಮುಖ್ಯಚರ್ಚೆಗೆ-ಪ್ರವೇಶ

ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಾಧ್ಯವೇ..?

ಬೆಂಗಳೂರಿನ ಸಂಚಾರ ದಟ್ಟಣೆಯ ನಿವಾರಣೆಗೆ ಯಾವುದೇ ಬಾಹ್ಯಾಕಾಶ ತಂತ್ರಜ್ಞಾನದ ಅಗತ್ಯವಿಲ್ಲ. ಚಂದ್ರಯಾನದಲ್ಲಿಯೇ ಬಹುತೇಕ ಸಫಲತೆ ಕಂಡಿರುವ ನಮ್ಮ ಬೆಂಗಳೂರಿನ ತಂತ್ರಜ್ಞಾನಿಗಳು ಸಂಚಾರ ದಟ್ಟಣೆಗೆ ಪರಿಹಾರ ಕಂಡುಹಿಡಿಯಬಲ್ಲರು. ಸಂಚಾರ ದಟ್ಟಣೆಗೆ ಸಮಗ್ರ ಯೋಜನೆ ಸುಲಭಸಾಧ್ಯವಲ್ಲವಾದರೂ ಇದು ಅಸಾಧ್ಯವೇನಲ್ಲ. ಅದಕ್ಕೆ ಬೇಕಿರುವುದು ರಾಜ್ಯದ ಮುಖ್ಯಮಂತ್ರಿಯ ಬದ್ಧತೆ ಮತ್ತವರ ಆಡಳಿತ ಕ್ಷಮತೆ. ಜೊತೆಗೆ ಇದಕ್ಕೆ ಬೇಕಿರುವ ತಂಡದ ರಚನೆ.

– ಮೋಹನದಾಸ್

ಮುಂದಿನ ಮೂರೂವರೆ ವರ್ಷಗಳಲ್ಲಿ ಯಡಿಯೂರಪ್ಪನವರು ಈ ಸಮಸ್ಯೆಯನ್ನು ಇತಿಹಾಸದ ಪುಟಗಳಿಗೆ ಸೇರಿಸುತ್ತಾರೆಂದು ಬಯಸೋಣ. ಇಲ್ಲದೇ ಹೋದರೆ ಯಡಿಯೂರಪ್ಪನವರ ಮೇಲೆ ನಾವೆಲ್ಲ ಸೇರಿ ಇತಿಹಾಸದ ಪುಟಗಳಲ್ಲಿ ಮಸಿ ಬಳಿಯೋಣ.

ಬೆಂಗಳೂರಿನಲ್ಲಿ ಸಂಚರಿಸುವುದು ಅಕ್ಷರಶಃ ನರಕಯಾತನೆಯಾಗಿದೆ ಎಂಬುದು ನಿಮಗೆ ಗೊತ್ತಿರುವ ವಿಷಯ. ನೀವು ಖಾಸಗಿ ವಾಹನದಲ್ಲಿ ಓಡಾಡಬಹುದು ಅಥವಾ ಬಸ್ಸು ರೈಲುಗಳಲ್ಲಿ ಓಡಾಡುತ್ತಿರಬಹುದು. ಇಲ್ಲವೆ ಎರಡು ಚಕ್ರದ ವಾಹನದಲ್ಲಿ ಶೀಘ್ರವಾಗಿ ನಿಮ್ಮ ಮನೆ-ಕೆಲಸದ ಸ್ಥಾನಗಳನ್ನು ತಲುಪುವ ಹವಣಿಕೆಯಲ್ಲಿರಬಹುದು. ಆದರೆ ಬೆಂಗಳೂರಿನ ಸಂಚಾರದ ದಟ್ಟಣೆ, ಹೊಗೆ, ಧೂಳು ಮತ್ತು ಅವ್ಯವಸ್ಥೆಯ ಕಿರಿಕಿರಿಗಳು ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನೇ ಕೆಡಿಸುವ ಮಟ್ಟದಲ್ಲಿವೆ. ಈ ಸಂಚಾರ ದಟ್ಟಣೆಯ ಸಮಸ್ಯೆಯ ಕೆಲವು ಆಯಾಮಗಳು ಹೀಗಿವೆ.

• ಸಂಚಾರ ದಟ್ಟಣೆಯಿಂದ ಬೆಂಗಳೂರು ಹಾಗೂ ಕರ್ನಾಟಕದ ಆರ್ಥಿಕತೆಗೆ ಆಗುತ್ತಿರುವ ನಷ್ಟದ ಅಂದಾಜು ನಮ್ಮ ಅರಿವಿಗೇ ಬಂದಿಲ್ಲ. ಈ ನಿಟ್ಟಿನಲ್ಲಿ ಯಾವುದೇ ವೈಜ್ಞಾನಿಕ ಅಧ್ಯಯನವೂ ಆಗಿಲ್ಲ. ಸ್ಥೂಲವಾಗಿ ಮತ್ತು ಅಂದಾಜು ಮಾಡಿ ಹೇಳುವುದಾದರೆ ಬೆಂಗಳೂರಿನ ಆರ್ಥಿಕ ಜಿಡಿಪಿಗೆ ಸರಿಸುಮಾರು 1.5 ರಿಂದ 2% ರವರೆಗೆ ಸಂಚಾರ ದಟ್ಟಣೆಯಿಂದ ಹಾನಿಯಾಗುತ್ತಿದೆ. ಉತ್ತಮ ಮತ್ತು ದಕ್ಷ ಸಂಚಾರ ವ್ಯವಸ್ಥೆಯಲ್ಲಿ ಬೆಂಗಳೂರಿನ ವಹಿವಾಟನ್ನು ಶೇಕಡಾ 20 ರಿಂದ 25 ರವರೆಗೆ ಹೆಚ್ಚಿಸಬಹುದು. ಬೆಂಗಳೂರಿನ ದುಡಿಯುವ ಸಾಮಥ್ರ್ಯವೂ ಹೆಚ್ಚಾಗಿ ಈಗಿನ ತಲಾ ಆದಾಯವೂ ಶೇಕಡಾ 10 ರಿಂದ 15 ರವರೆಗೆ ಹೆಚ್ಚಾಗಬಹುದು. ಇದು ಒಂದು ಸ್ಥೂಲ ಅಂದಾಜು ಮಾತ್ರ. ಈ ನಿಟ್ಟಿನಲ್ಲಿ ನಡೆಯುವ ಯಾವುದೇ ಅಧ್ಯಯನಗಳು ಈ ಅಂದಾಜನ್ನು ಮೀರಿ ಆರ್ಥಿಕತೆಯ ಮೇಲೆ ಸಂಚಾರ ದಟ್ಟಣೆಯ ಪ್ರಭಾವವನ್ನು ನಿಮಗೆ ತೋರಿಸಬಹುದು. ಸರ್ಕಾರ ಮಾತ್ರ ಕೈಗೊಳ್ಳಬಹುದಾದ ಹತ್ತಾರು ಕೋಟಿ ರೂಗಳ ಈ ಅಧ್ಯಯನ ಈ ಸಂಚಾರ ದಟ್ಟಣೆಯ ತೀವ್ರತೆಯನ್ನು ಅರಿಯಲು ಅಗತ್ಯವಾಗಿದೆ.

• ಬೆಂಗಳೂರಿನ ಮಾನಸಿಕ ಆರೋಗ್ಯದ ಮೇಲೆ ಸಂಚಾರ ದಟ್ಟಣೆ ಅತೀವ ಪರಿಣಾಮ ಬೀರಿದೆ. ಅವ್ಯವಸ್ಥೆಯ ಆಗರದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಏಗುವ ಪ್ರಯಾಣಿಕರು ರಕ್ತದೊತ್ತಡ, ಮಾನಸಿಕ ಕಿರಿಕಿರಿ ಹಾಗೂ ಕೋಪ-ತಾಪಗಳಿಗೆ ಬಲಿಯಾಗತ್ತಿದ್ದಾರೆ. ಧೂಳು ಮತ್ತು ಹೊಗೆಯಿಂದ ಪ್ರಯಾಣಿಕರ ಜೊತೆಗೆ ಸಾಮಾನ್ಯ ಬೆಂಗಳೂರು ನಗರದ ವಾಸಿಗಳ ಒಟ್ಟಾರೆ ಆರೋಗ್ಯದ ಮೇಲೆ ಕೂಡಾ ವ್ಯತಿರಿಕ್ತ ಪರಿಣಾಮವಾಗಿದೆ. ಇದರ ಕೂಲಂಕಶ ಅಧ್ಯಯನದ ಅಗತ್ಯವೂ ಇದೆ.

• ಬೆಂಗಳೂರು ಕನ್ನಡಿಗರ ರಾಜಧಾನಿ. ಸಹಜವಾಗಿ ಕನ್ನಡದ ಅತಿಹೆಚ್ಚು ಸಾಂಸ್ಕøತಿಕ ಕಾರ್ಯಕ್ರಮಗಳು ಬೆಂಗಳೂರಿನಲ್ಲಿಯೇ ಆಗುತ್ತವೆ. ಆದರೆ ಸಂಚಾರ ದಟ್ಟಣೆಯ ಸಮಸ್ಯೆಯಲ್ಲಿ ಬೆಂಗಳೂರಿಗರು ಈ ಯಾವುದೇ ಮನಮುದಗೊಳಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗುತ್ತಿಲ್ಲ. ಕೆಲಸ ಮುಗಿಸಿ ಮನೆ ತಲುಪಿದರೇ ಸಾಕು ಎನ್ನುವ ಪರಿಸ್ಥಿತಿಯಲ್ಲಿ ಬಿಡುವು ಮಾಡಿಕೊಂಡು ಯಾವುದೇ ಸಮಾರಂಭಗಳಿಗೆ ಹೋಗಲು ಆಗುತ್ತಿಲ್ಲ. ಹೋಗಲೇಬೇಕಾದ ಮದುವೆ-ಸಾವುಗಳಿಗೆ ಹಾಜರಿ ನೀಡುವಂತಾದರೆ ಸಾಕು ಎನ್ನುವಂತಾಗಿದೆ.

ಸಂಚಾರ ದಟ್ಟಣೆಯ ಇನ್ನೂ ಹಲವು ಆಯಮಗಳನ್ನು ಗುರುತಿಸಬಹುದು. ಆದರೆ ಈ ದಟ್ಟಣೆ ಬೆಂಗಳೂರನ್ನು ಕಾಡುತ್ತಿರುವ ಅತಿಮುಖ್ಯ ಸಮಸ್ಯೆಯೆಂದು ಎಲ್ಲರೂ ಒಪ್ಪುತ್ತಾರೆ. ಬಡವರನ್ನು ಕಾಡುವಂತೆ ಈ ದಟ್ಟಣೆಯ ಸಮಸ್ಯೆ ಶ್ರೀಮಂತರನ್ನು, ರಾಜಕಾರಣಿಗಳನ್ನು, ನ್ಯಾಯಾಧೀಶರನ್ನು ಹಾಗು ಪತ್ರಕರ್ತರನ್ನೂ ಕಾಡಿದೆ.ದಟ್ಟಣೆಯ ಈ ಸಮಸ್ಯೆ ನಿಧಾನ ವಿಶಪ್ರಾಶನವಾಗಿದೆ. ಬೆಂಗಳೂರಿನ ಘನತ್ಯಾಜ್ಯ ವಿಲೇವಾರಿಯ ವಿಷಯದಲ್ಲಿ ನಮ್ಮ ಘನಸರ್ಕಾರಗಳು ತಲೆಕೆಡಿಸಿಕೊಂಡಷ್ಟು ಸಂಚಾರ ದಟ್ಟಣೆಯ ವಿಷಯದಲ್ಲಿ ತಲೆ ಕೆಡಿಸಿಕೊಂಡಿಲ್ಲ. ಸಂಚಾರ ದಟ್ಟಣೆಯನ್ನು ಪರಿಹರಿಸದಿದ್ದರೆ ಯಾರೂ ನಿಮ್ಮನ್ನು ದೂರುವುದಿಲ್ಲ. ಪರಿಹರಿಸಿದರೆ ಯಾರೂ ನಿಮ್ಮ ಬೆನ್ನು ತಟ್ಟುವ ಕಾರ್ಯವನ್ನು ಮಾಡುತ್ತಿಲ್ಲ. ಒಟ್ಟಾರೆಯಾಗಿ ಈ ಸಂಚಾರ ದಟ್ಟಣೆ ನಮ್ಮ ಜೀವನದ ಹಾಸುಹೊಕ್ಕಾಗಿ ನಮ್ಮ ದೈನಂದಿನ ಬವಣೆಗಳ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ.

ದಟ್ಟಣೆಯ ಈ ಸಂಚಾರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ನಾವು ಹತಾಶರಾಗಿದ್ದೇವೆ. ರೈತರ ಸಾಲಮನ್ನಾಗೆ ರೂ.50,000 ಕೋಟಿ ನೀಡುತ್ತೇವೆ. ಹಲವು ಜಾತಿಗಳನ್ನು ಮೀಸಲಾತಿ ವರ್ಗಗಳಿಗೆ ಸೇರಿಸುವ ಕೆಲಸವನ್ನೂ ಮಾಡುತ್ತೇವೆ. ಅಮೂಲ್ಯ ಸರ್ಕಾರಿ ಖಜಾನೆಯನ್ನು ಪೋಲು ಮಾಡುವ ಇನ್ನಿತರ ಕೆಲಸವನ್ನೂ ಮಾಡುತ್ತೇವೆ. ಈ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸುವ ಗೋಜಿಗೆ ಹೋಗುತ್ತಿಲ್ಲ.
ಸರ್ಕಾರಗಳು ಸಮಗ್ರವಾಗಿ ಅಲ್ಲವಾಗಿಯಾದರೂ ಅಲ್ಲಲ್ಲಿ ಮತ್ತು ಬಿಡಿಬಿಡಿಯಾಗಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಿವೆ.

– ಆಗಾಗ ಪರ್ಯಾಯ ರಸ್ತೆಗಳನ್ನು ಒಮ್ಮುಖ ರಸ್ತೆಗಳಾಗಿ ಘೋಷಿಸಿವೆ.

– ಮ್ಯಾಜಿಕ್ ಬಾಕ್ಸ್ ತಂತ್ರಜ್ಞಾನದಲ್ಲಿ ಕೆಲವು ಮೇಲ್-ರಸ್ತೆ ನಿರ್ಮಿಸಿವೆ.

– ಹಲವೆಡೆ ಸಂಚಾರ ದಟ್ಟಣೆಯ ಚೌಕಗಳಲ್ಲಿ ಮೇಲ್-ರಸ್ತೆ, ಕೆಳರಸ್ತೆಗಳನ್ನು ನಿರ್ಮಿಸಿ ಹೊರವರ್ತುಲ ರಸ್ತೆಯ ಸಂಚಾರ ಸುಗಮಗೊಳಿಸಿವೆ.

– 20 ವರ್ಷಗಳ ಹಿಂದೆ ಗೊರಗುಂಟೆ ಪಾಳ್ಯ, ಹೆಬ್ಬಾಳ, ಕೆ.ಆರ್.ಪುರಂ ನಡುವೆ ಹಾಗೂ ಗೊರಗುಂಟೆ ಪಾಳ್ಯ, ಮೈಸೂರು ರಸ್ತೆ, ಜೆಪಿ ನಗರ, ಹೊಸೂರು ರಸ್ತೆಗಳ ನಡುವೆ ಹೊರವರ್ತುಲ ರಸ್ತೆ ನಿರ್ಮಿಸಿವೆ.

– ಕೆಲವು ರಸ್ತೆಗಳ ವಿಸ್ತರಣೆ, ಟೆಂಡರ್ ಶ್ಯೂರ್ ಮಾದರಿಯಲ್ಲಿ ಹಲವು ರಸ್ತೆಗಳ ಅಭಿವೃದ್ಧಿ ಹಾಗೂ ವೈಟ್ ಟಾಪಿಂಗ್ ಹೆಸರಿನಲ್ಲಿ ಕಾಂಕ್ರೀಟೀಕರಣ ಮಾಡಿವೆ.

– ಎಲೆವೇಟೆಡ್ ಕಾರಿಡಾರ್ ಎಂಬ ಗಗನ ಕುಸುಮ ತೋರಿಸಿವೆ.

ಹೀಗೆ ಹಲವಾರು ಕ್ವಿಕ್‍ಫಿಕ್ಸ್ ಯೋಜನೆಗಳನ್ನು ರಾಜ್ಯ ಸರ್ಕಾರ ಬೆಂಗಳೂರಿಗೆ ಕೊಡುಗೆಯಾಗಿ ನೀಡಿದೆ. ಆದರೆ ಸಮಗ್ರವಾಗಿ ಬೆಂಗಳೂರಿನ ಸಂಚಾರ ದಟ್ಟಣೆಗೆ ದೂರದರ್ಶಿಯಾದ ಯಾವುದೇ ಪರಿಹಾರ ಕಂಡು ಹಿಡಿಯುವ ಗೋಜಿಗೆ ಹೋಗಿಲ್ಲ.

ಸಂಚಾರ ದಟ್ಟಣೆಯ ಈ ಸಮಸ್ಯೆ ಕೇವಲ ಬೆಂಗಳೂರಿಗೆ ಮಾತ್ರ ವಕ್ರಿಸಿದ ಸಮಸ್ಯೆಯಲ್ಲ. ಜಗತ್ತಿನ ಹಲವಾರು ನಗರಗಳು ಈ ಸಮಸ್ಯೆಗೆ ಸಿಲುಕಿ ಹೊರಬಂದಿವೆ. ಜಪಾನಿನ ಟೋಕಿಯೋ, ಯೂರೋಪಿನ ಲಂಡನ್ ಮತ್ತು ಪ್ಯಾರಿಸ್, ಅಮೆರಿಕದ ನ್ಯೂಯಾರ್ಕ್, ವಾಶಿಂಗ್ಟನ್, ಶಿಕಾಗೋ, ಸ್ಯಾನ್‍ಫ್ರಾನ್ಸಿಸ್ಕೋ ಮತ್ತಿತರ ನಗರಗಳು ಇದೇ ಸಮಸ್ಯೆಯನ್ನು ಎದುರಿಸಿ ಗೆದ್ದಿವೆ. ಇತ್ತೀಚೆಗೆ ಚೀನಾದ ಶಾಂಘೈ ನಗರವಂತೂ ದಟ್ಟಣೆಯ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ದಾರಿಯಲ್ಲಿ ದಾಖಲೆಯ ಪ್ರಗತಿ ಸಾಧಿಸಿದೆ. ಈ ಎಲ್ಲಾ ನಗರಗಳ ಯೋಜನೆಗಳಿಂದ ಬೆಂಗಳೂರು ಕೂಡಾ ಕಲಿಯುವ ಅಗತ್ಯವಿದೆ. ಈ ನಗರಗಳು ಅಳವಡಿಸಿಕೊಂಡ ಸಂಚಾರಿ ಸೌಲಭ್ಯಗಳನ್ನು ನಾವೂ ಅನುಕರಿಸಬಹುದು. ಹಾಗೂ ನಮ್ಮ ವಿಶಿಷ್ಟ ಪರಿಸರಕ್ಕೆ ಆಗುವಂತೆ ಪರಿಷ್ಕರಣೆ ಮಾಡಿಕೊಳ್ಳಬಹುದು.

ಬೆಂಗಳೂರಿನಲ್ಲಿ ಮೆಟ್ರೋ ರೈಲು ಯೋಜನೆಗೆ ಕೇಂದ್ರದಿಂದ ಹಣ ಬಿಡುಗಡೆಗೊಳಿಸಿಕೊಳ್ಳುವ ಏಕೈಕ ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಹಲವು ಬಾರಿ ಈ ಸಮಗ್ರ ಅಧ್ಯಯನಕ್ಕೆ ಆದೇಶ ನೀಡಿತ್ತು.

‘ಸಮಗ್ರ’ವಾಗಿ ಅಲ್ಲವಾದರೂ ಸಮಗ್ರವೆಂದು ಹೆಸರಿಸಿಕೊಂಡ ಹಲವು ಯೋಜನೆಗಳು ಬೆಂಗಳೂರಿನಲ್ಲಯೂ ಬಂದಿವೆ. 2007ರಲ್ಲಿ, 2011 ರಲ್ಲಿ ಮತ್ತು 2015 ರಲ್ಲಿ ಈ ‘ಸಮಗ್ರ’ ಯೋಜನೆಗಳು ಮುದ್ರಣಗೊಂಡಿವೆ. ಈ ಸಮಗ್ರ ಯೋಜನೆಗಳ ಹಿಂದೆ ಕೂಡಾ ರಾಜ್ಯ ಸರ್ಕಾರದ ಸ್ವಂತಿಕೆ ಮತ್ತು ಬದ್ಧತೆ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ಮೆಟ್ರೋ ರೈಲು ಯೋಜನೆಗೆ ಕೇಂದ್ರದಿಂದ ಹಣ ಬಿಡುಗಡೆಗೊಳಿಸಿಕೊಳ್ಳುವ ಏಕೈಕ ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರವು ಹಲವು ಬಾರಿ ಈ ಸಮಗ್ರ ಅಧ್ಯಯನಕ್ಕೆ ಆದೇಶ ನೀಡಿತ್ತು. ಅಂತೆಯೇ 2007 ರಲ್ಲಿ ‘ರೈಟ್ಸ್’ ಸಂಸ್ಥೆಯು ಕಾಂಪ್ರೆಹೆನ್ಸಿವ್ ಟ್ರಾಫಿಕ್ ಅಂಡ್ ಟ್ರಾನ್ಸ್‍ಪೋರ್ಟೇಶನ್ ಪ್ಲಾನ್ ಎಂಬ ಯೋಜನೆ ಸಿದ್ದ ಪಡಿಸಿತ್ತು. ಇದು 2011 ರಲ್ಲಿ ಪರಷ್ಕರಣೆಗೊಂಡು ‘ಸಮಗ್ರ’ ಯೋಜನೆಯಾಗಿತ್ತು. ನಂತರ ಇದನ್ನು 2015 ರಲ್ಲಿ ಮತ್ತೊಮ್ಮೆ ಪರಿಷ್ಕರಿಸಲಾಗಿತ್ತು.

ಈಗ ಬೆಂಗಳೂರು ಮೆಟ್ರೋ ರೈಲು ಕಂಪನಿಯು ಅಧ್ಯಯನವೊಂದನ್ನು ನಡೆಸಿ ಕರಡು ಸಮಗ್ರ ಸಂಚಾರಿ ಯೋಜನೆಯೊಂದನ್ನು 2019 ರ ಡಿಸೆಂಬರ್ ಮಧ್ಯದಲ್ಲಿ ಬಿಡುಗಡೆ ಮಾಡಿದೆ. ಕಾಟಾಚಾರಕ್ಕೆಂಬಂತೆ ಈ ಕರಡಿಗೆ ಜನವರಿ 6 ರೊಳಗೆ ಪ್ರತಿಕ್ರಿಯೆಯನ್ನು ಕಳುಹಿಸಲು ಸೂಚಿಸಿದೆ. ಈ ಕರಡಿನ ಕೆಲವು ಮುಖ್ಯ ಅಂಶಗಳು ಹಾಗೂ ಪ್ರಸ್ತಾವಿತ ಯೋಜನೆಗಳನ್ನು ಈ ಕೆಳಕಂಡಂತೆ ಕೊಡಲಾಗಿದೆ.

• ಈ ಯೋಜನೆಯಂತೆ 2035 ರೊಳಗೆ ಒಟ್ಟು ಸಂಚಾರದಲ್ಲಿ ಶೇಕಡಾ 70 ರಷ್ಟನ್ನು ಸಾರ್ವಜನಿಕ ಸಾರಿಗೆಯ ಮುಖಾಂತರವೇ ಸಾಧಿಸುವುದು. ಇದಕ್ಕೆ ಪೂರಕವಾಗಿ ಬಸ್ಸು-ರೈಲು-ಮೆಟ್ರೋ ಜಾಲಗಳ ಜೋಡು ಪ್ರದೇಶದ ಸಮಗ್ರ ಅಭಿವೃದ್ಧಿ, ಒಂದೇ ಕಾರ್ಡಿನ ಅಡಿ ಎಲ್ಲಾ ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಹಾಗೂ ಮೆಟ್ರೋ-ಲೈಟ್ ಯೋಜನೆಗಳು ಸೇರಿವೆ.

• ಬಿಬಿಎಂಪಿ ಪ್ರದೇಶಗಳಲ್ಲಿ ‘ಪೇ ಅಂಡ್ ಪಾರ್ಕ್’ ಮರುಯೋಜನೆ.

• ಬೆಂಗಳೂರಿನ ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಯಲ್ಲಿ ದಟ್ಟಣೆ ಶುಲ್ಕ ಮತ್ತಿತರ ಯೋಜನೆಗಳಿವೆ.

226 ಪುಟಗಳ ಈ ಕರಡಿನಲ್ಲಿ ಇನ್ನೂ ಹಲವು ಯೋಜನೆಗಳಿಗೆ ಈ ಕೆಳಕಂಡಂತೆ ಹಣ ತೋರಿಸಲಾಗಿದೆ.

ಯೋಜನೆ (ಹಣ: ರೂ ಕೋಟಿಗಳಲ್ಲಿ)                  1 ನೇ ಹಂತ                              2ನೇ ಹಂತ                                   3ನೇ ಹಂತ
ನಮ್ಮ ಮೆಟ್ರೋ                                            15,950                                  8,250                                        20,400
ರಸ್ತೆ ವಿಸ್ತರಣೆ                                                 5,000                                  7,000                                          7,200
ಸಬರ್ಬನ್ ರೈಲು ಜಾಲ                                    3,450                                  8,556                                          8,556
ಪೆರಿಫೆರಲ್ ವರ್ತುಲ ರಸ್ತೆ                                  3,080                                  3,850                                          5,082
ಹೆಚ್ಚುವರಿ ಬಸ್‍ಗಳ ಖರೀದಿ                                3,000                                  5,250                                          4,500
ಬಸ್-ರೈಲು ಜೋಡು ಪ್ರದೇಶ ಅಭಿವೃದ್ಧಿ                     –                                    16,000                                        32,000
ಎಲಿವೇಟೆಡ್ ಕಾರಿಡಾರ್                                       –                                      5,250                                        13,230
ಎಲಿವೇಟೆಡ್ ಮೆಟ್ರೊ ಲೈಟ್                                   –                                      2,340                                        12,240
ಸಿಎನ್‍ಜಿ ಮತ್ತು ವಿದ್ಯುತ್ ವಾಹನಗಳು                      –                                         –                                               9,750
ಬಸ್ ಪಥ ಅಭಿವೃದ್ಧಿ (ಬಿಆರ್‍ಟಿಎಸ್)                           –                                          –                                               5,350

ಈ ಕರಡು ಸಮಗ್ರ ಸಂಚಾರ ಯೋಜನೆಯಲ್ಲಿ ಪ್ರಸ್ತಾವಿತವಾಗಿರುವ ಯೋಜನೆಗಳು ಇಷ್ಟೇ. ಮೆಟ್ರೊ ಜಾಲದ ಮೂರನೇ ಹಂತದಲ್ಲಿ ಹೆಚ್ಚುವರಿ 100 ಕಿಮೀ ಮತ್ತು ಸಬರ್ಬನ್ ರೈಲು ಯೋಜನೆಯಲ್ಲಿ 200 ಕಿಮೀ ಹಳಿಹಾಕುವ ಪ್ರಸ್ತಾವವಿದೆ. ಈ ಎರಡೂ ಯೋಜನೆಗಳು ಸದ್ಯಕ್ಕೆ ನೀಲಿನಕ್ಷೆಯ ಹಂತದಲ್ಲಿಯೇ ಇವೆ. ಇದುವರೆಗಿನ ಮೆಟ್ರೋ 2ಎ ಮತ್ತು 2ಬಿ ಹಂತಗಳ ಟೆಂಡರಿಂಗ್ ಪ್ರಕ್ರಿಯೆಯೇ ಇನ್ನೂ ಮುಗಿದಿಲ್ಲ. ಎಡಲಿವೇಟೆಡ್ ಲೈಟ್ ಮೆಟ್ರೋ ಯೋಜನೆಯ ಚರ್ಚೆಯೂ ಶುರುವಾಗಿಲ್ಲ. ಇನ್ನು ಉಳಿದ ಯೋಜನೆಗಳ ನೀಲಿನಕ್ಷೆ ಇನ್ನೂ ಆಗಬೇಕಿದೆ.

ಆಗಬೇಕಾದ ಕೆಲಸಗಳಿನ್ನೂ ಬೆಟ್ಟದಷ್ಟಿದೆ. ಆದರೆ ಬೆಂಗಳೂರಿನ ವಾಹನಗಳ ಸಂಖ್ಯೆ ಅವ್ಯಾಹತವಾಗಿ ಬೆಳೆಯುತ್ತಲೇ ಸಾಗಿದೆ. ಬೆಂಗಳೂರಿನ 1306 ಚದರ ಕಿಮೀ ಪ್ರದೇಶದಲ್ಲಿನ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)ಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಿನ್ನೂ ಅಂತಿಮಗೊಳಿಸಬೇಕಿದೆ. 2020-35 ವರೆಗಿನ ಈ ಯೋಜನೆಯಲ್ಲಿ ‘ಸಮಗ್ರ ಸಂಚಾರ ಯೋಜನೆ’ಯ ಅಂಶಗಳನ್ನು ಪರಿಗಣಿಸಬೇಕಿದೆ. ಹಾಗೆಯೇ ಬೆಂಗಳೂರು ಮೆಟ್ರೊಪಾಲಿಟನ್ ರೀಜನ್ ಅಭಿವೃದ್ಧಿ ಪ್ರಾಧಿಕಾರವೂ ಬೆಂಗಳೂರಿನ ಸುತ್ತಮುತ್ತಲ 8,005 ಚದರ ಕಿಮೀ ಪ್ರದೇಶದ ಅಭಿವೃದ್ಧಿ ಯೋಜನೆಯನ್ನು ಸಿದ್ದಪಡಿಸಬೇಕಿದೆ. ಈ ಯೋಜನೆಯಲ್ಲಿ ಬೆಂಗಳೂರಿಗೆ ಪ್ರವೇಶ ನೀಡುವ ಎಲ್ಲಾ ರಸ್ತೆಗಳನ್ನು ದಶಪಥದ ರಸ್ತೆಗಳಾಗಿ ಮಾಡುವುದು ಹಾಗೂ ಬೇರೆ ಯೋಜನೆಗಳೊಂದಿಗೆ ಪ್ರಾಧಿಕಾರವು ಬೆಂಗಳೂರಿನ ಸುತ್ತಮುತ್ತ ಸ್ಯಾಟೆಲೈಟ್ ನಗರಗಳನ್ನು ಅಭಿವೃದ್ಧಿ ಪಡಿಸಿ ಬೆಂಗಳೂರಿನ ಮೇಲೆ ಸದ್ಯಕ್ಕೆ ಬೀಳುತ್ತಿರುವ ಒತ್ತಡವನ್ನು ಕಡಿಮೆ ಮಾಡುವ ಚಿಂತನೆಯೂ ಆಗಬೇಕಿದೆ.

ಬೆಂಗಳೂರಿನ ಸಮಗ್ರ ಸಂಚಾರಿ ಯೋಜನೆ ಒಂದೆರೆಡು ವರ್ಷಗಳಲ್ಲಿ ಆಗುವ ಸಾಧ್ಯತೆಯಿಲ್ಲ. ಆದರೆ ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ವೈಜ್ಞಾನಿಕವಾಗಿ ಹಾಗು ದೂದರ್ಶಿಯಾಗಿ ನಾವು ಯೋಜನೆ ರೂಪಿಸಬೇಕಿದೆ. ಇದುವರೆಗೆ ಚಿಂತಿಸಲಾಗಿರುವ ಹಾಗೂ ಮುಂದೆ ಆಗಲೇಬೇಕಾದ ಅತಿಮುಖ್ಯ ಯೋಜನೆಗಳ ವಿವರಗಳು ಈ ಕೆಳಗಿನಂತಿವೆ.

1. ಇದುವರೆಗಿನ ಸಂಚಾರ ಯೋಜನೆಗಳಲ್ಲಿ ನಾಗರೀಕರ ಯಾವುದೇ ಪಾತ್ರವಿಲ್ಲ. ಸಮಗ್ರ ಯೋಜನೆಗಳ ಬಗ್ಗೆ ಯಾವುದೇ ವ್ಯಕ್ತಿ ಅಥವಾ ವಸತಿದಾರರ ಸಂಘಟನೆಯೊಂದು ಸಲಹೆ ನೀಡಲಾಗದೇ ಇದ್ದರೂ ತಮ್ಮ ತಮ್ಮ ಸ್ಥಳೀಯ ಸಂಚಾರ ಬಿಕ್ಕಟ್ಟಿನ ಬಗ್ಗೆ ಹಾಗೂ ಅದಕ್ಕೆ ಸೂಕ್ತ ಪರಿಹಾರಗಳನ್ನು ಒದಗಿಸುವಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆಯಬಹುದು. ಮೇಲಾಗಿ ನಮ್ಮ ಹಲವಾರು ಯೋಜನೆಗಳು ಅರ್ಥಮಾಡಿಕೊಳ್ಳಲಾಗದ ಭಾಷೆಯಲ್ಲಿದ್ದು ಸಾಮಾನ್ಯರು ಇವುಗಳ ಬಗ್ಗೆ ಸುಲಭವಾಗಿ ಪ್ರತಿಕ್ರಿಯಿಸಲು ಆಗುವ ರೀತಿಯಲ್ಲಿರಬೇಕು. ಸರ್ಕಾರಿ ಸಂಸ್ಥೆಗಳು ಈ ವಿಷಯದಲ್ಲಿ ಆದಷ್ಟು ಮುಕ್ತ ಮನಸ್ಸಿನಿಂದ ಇರಬೇಕಾದ ಅಗತ್ಯವಿದೆ.

ಕೇವಲ ಮುಖ್ಯಮಂತ್ರ್ರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಸೋತಿದ್ದಾರೆ. ಮೆಟ್ರೋದ ಮೊದಲನೇ ಹಂತದಲ್ಲಿ ಆಸಕ್ತಿ ತೋರಿಸಿದ್ದ ಯಡಿಯೂರಪ್ಪ ಇದೀಗ ಎರಡನೇ ಮತ್ತು ಮೂರನೇ ಹಂತಗಳ ಅನುಷ್ಠಾನದಲ್ಲಿ ಯಾವ ಮುತುವರ್ಜಿ ತೊರಿಸುತ್ತಾರೆಂದು ನೋಡಬೇಕಿದೆ.

2.ಬಿಬಿಎಂಪಿ, ಬಿಡಿಎ, ಬಿಎಂಟಿಸಿ, ಬೆಂಗಳೂರು ಮೆಟ್ರೋ, ಕೆಎಸ್‍ಆರ್‍ಟಿಸಿ, ಬೆಸ್ಕಾಮ್, ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿ, ಬಿಎಮ್‍ಆರ್‍ಡಿಎ ಮತ್ತಿತರ ಸಂಸ್ಥೆಗಳು ಪರಸ್ಪರ ಸಂವಹನದಲ್ಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರಿನ ಈ ಎಲ್ಲಾ ಸಂಸ್ಥೆಗಳನ್ನು ಒಬ್ಬ ಸಚಿವ-ಪ್ರಾಧಿಕಾರದ ಕೆಳಗೆ ತರುವುದೂ ಅಸಾಧ್ಯವಾಗಿದೆ. ಈ ಶಕ್ತಿಕೇಂದ್ರವನ್ನು ಯಾವುದೇ ಮುಖ್ಯಮಂತ್ರಿ ಬಿಟ್ಟುಕೊಡಲೂ ತಯಾರಿಲ್ಲ. ಹೀಗಾಗಿ ಈ ಸಂವಹನದ ಕೊರತೆ ಬೆಂಗಳೂರಿನ ಸಮಗ್ರ ಸಂಚಾರಿ ಯೋಜನೆಯ ಅನಿಷ್ಠಾನಕ್ಕೂ ಅಡ್ಡಿಯಾಗಿದೆ. ಇದನ್ನು ಸರಿಪಡಡಿಸಲು ಮುಖ್ಯಮಂತ್ರಿಯೇ ಪ್ರಯತ್ನ ಮಡಬೇಕಾಗಿದೆ.

3.ಬೆಂಗಳೂರು ಮೆಟ್ರೋನ ಕಾಮಗಾರಿ ಕುಂಠಿತವಾಗಿದೆ. ಇಲ್ಲಿಯವರೆಗೆ ಎರಡನೇ ಹಂತದ ಕಾಮಗಾರಿಗಳು ಮುಗಿದು ಮೂರನೇ ಹಂತದ ಅನುಷ್ಠಾನ ಶುರುವಾಗಬೇಕಿತ್ತು. ಈ ವಿಳಂಬಕ್ಕೆ ಮುಖ್ಯಮಂತ್ರಿ-ಮಂತ್ರಿಗಳ ಅಸಡ್ಡೆಯೇ ಕಾರಣವಾಗಿದೆ. ಮೆಟ್ರೋ ಸಮರ್ಪಕ ಅನುಷ್ಠಾನಕ್ಕೆ ಕೇಂದ್ರ-ರಾಜ್ಯಗಳ ಸಮನ್ವಯತೆ ಹಾಗೂ ರಾಜ್ಯದ ಹಲವು ಇಲಾಖೆಗಳ ಸಮನ್ವಯತೆ ಬೇಕು. ಇದನ್ನು ಕೇವಲ ಮುಖ್ಯಮಂತ್ರ್ರಿ ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಸೋತಿದ್ದಾರೆ. ಮೆಟ್ರೋದ ಮೊದಲನೇ ಹಂತದಲ್ಲಿ ಆಸಕ್ತಿ ತೋರಿಸಿದ್ದ ಯಡಿಯೂರಪ್ಪ ಇದೀಗ ಎರಡನೇ ಮತ್ತು ಮೂರನೇ ಹಂತಗಳ ಅನುಷ್ಠಾನದಲ್ಲಿ ಯಾವ ಮುತುವರ್ಜಿ ತೊರಿಸುತ್ತಾರೆಂದು ನೋಡಬೇಕಿದೆ.

4.ಮೆಟ್ರೋದ ಮೂರನೇ ಹಂತದ ಜೊತೆಜೊತೆಗೆ ನಾಲ್ಕು ಮತ್ತು ಐದನೇ ಹಂತಗಳ ಯೋಜನೆಯೂ ಪ್ರರಂಭವಾಗಬೇಕಿದೆ. ಒಟ್ಟಾರೆ ಬೆಂಗಳೂರು ನಗರಕ್ಕೆ 800 ರಿಂದ 1000 ಕಿಮೀ ದೂರದ ಮೆಟ್ರೋ ಜಾಲ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡು-ಮೂರು ವರ್ಷಗಳಲ್ಲಿಯೇ ಯೋಜನೆ ಸಿದ್ದವಾಗಬೇಕಿದೆ. ಕೇಂದ್ರ ರಾಜ್ಯಗಳೆರಡರಲ್ಲಿಯೂ ಒಂದೇ ಪಕ್ಷದ ಸರ್ಕಾರ ಇರುವ ಈ ಅಪರೂಪದ ಸಂದರ್ಭದಲ್ಲಿ ಈ ಕೆಲಸವಾಗದೇ ಇದ್ದರೆ ಮುಂದಿನ ವರ್ಷಗಳಲ್ಲಿ ಈ ಕಾರ್ಯ ಕಷ್ಟಸಾಧ್ಯವಾಗಬಹುದು.

5. ರೈಲು ನಿಲ್ದಾಣ, ಬಸ್ ನಿಲ್ದಾಣಗಳು ಮತ್ತು ಮೆಟ್ರೋ ನಿಲ್ದಾಣಗಳ ಬಳಿಯಲ್ಲಿ ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆಯ ಅತ್ಯಗತ್ಯ ಸೌಕರ್ಯ ಬೇಕಿದೆ. ತಮ್ಮ ಮನೆಗಳಿಂದ ಖಾಸಗಿ ವಾಹನಗಳಲ್ಲಿ ಬಂದು ಹತ್ತಿರದ ಸಾರ್ವಜನಿಕ ಸಾರಿಗೆ ನಿಲ್ದಾಣದಿಂದ ಪ್ರಯಾಣಿಕರು ಸಂಚಾರ ಮಾಡಬೇಕು. ಇದಕ್ಕೆ ಪೂರಕವಾಗಿ ನಮ್ಮ ಎಲ್ಲಾ ಮಖ್ಯ ರೈಲು-ಬಸ್ಸು-ಮೆಟ್ರೋ ನಿಲ್ದಾಣಗಳ ಬಳಿಯಲ್ಲಿ 500 ರಿಂದ 1000 ಕಾರು ನಿಲ್ಲಿಸುವ ಪಾರ್ಕಿಂಗ್ ವ್ಯವಸ್ಥೆಯ ಅಗತ್ಯವಿದೆ. ಈ ನಿಲ್ದಾಣಗಳ ಸುತ್ತಮುತ್ತ ಅಗತ್ಯ ಜಾಗವೂ ಇದೆ. ಆದರೆ ಈ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸುವ ಪ್ರಾಧಿಕಾರದ ಅಗತ್ಯವಿದೆ.

ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ‘ಬೆಂಗಳೂರು ಪಬ್ಲಿಕ್ ಪಾರ್ಕಿಂಗ್ ಕಾರ್ಪೊರೇಶನ್’ ಹೆಸರಿನಲ್ಲಿ ಸಕಾರವು ಕಂಪನಿಯೊಂದನ್ನು ಸ್ಥಾಪಿಸಿ ಬೆಂಗಳೂರಿನ ನೂರಾರು ಕಡೆಯಲ್ಲಿ ವಾಹನ ನಿಲುಗಡೆಗೆ ಅನುವು ಮಾಡಿಕೊಡಬೇಕು.

ಈ ಮೊದಲೇ ಪಿಪಿಪಿ ಮಾದರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ರೂಪಿಸಲು ಪ್ರಯತ್ನಿಸಲಾಗಿತ್ತು. ಗರುಡ ಮಾಲ್ ಜಾಗದಲ್ಲಿ ಬಿಬಿಎಂಪಿಗೆ ಸೇರಿದ ಜಾಗದಲ್ಲಿ ಪಾರ್ಕಿಂಗ್ ಸೃಷ್ಟಿಸಲು ಉದಯ್ ಗರುಡಾಚಾರ್ ಎಂಬುವರಿಗೆ ಜಾಗ ಲೀಸ್ ಮಾಡಲಾಗಿತ್ತು. ಅವರು ಅದರಲ್ಲಿ ಮತ್ತೊಂದು ಮಾಲ್ ಕಟ್ಟಿ ಪಾರ್ಕಿಂಗ್ ಶುಲ್ಕವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಅದರ ಬದಲು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ‘ಬೆಂಗಳೂರು ಪಬ್ಲಿಕ್ ಪಾರ್ಕಿಂಗ್ ಕಾರ್ಪೊರೇಶನ್’ ಹೆಸರಿನಲ್ಲಿ ಸಕಾರವು ಕಂಪನಿಯೊಂದನ್ನು ಸ್ಥಾಪಿಸಿ ಬೆಂಗಳೂರಿನ ನೂರಾರು ಕಡೆಯಲ್ಲಿ ವಾಹನ ನಿಲುಗಡೆಗೆ ಅನುವು ಮಾಡಿಕೊಡಬೇಕು. ಈ ಕಂಪನಿಯು ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷ ಕಾರು ಪಾರ್ಕಿಂಗ್ ಮಾಡುವ ಸೌಕರ್ಯ ಒದಗಿಸುವ ಅಗತ್ಯವಿದೆ.

6. ಬೆಂಗಳೂರಿನ ಎಲ್ಲಾ ರಸ್ತೆಗಳನ್ನು ಮರು ವಿನ್ಯಾಸ ಮಾಡುವ ಅಗತ್ಯವಿದೆ. ರಸ್ತೆಗಳನ್ನು ಒಮ್ಮುಖ ಮಾಡುವುದು, ಸಿಗ್ನಲ್ ಮುಕ್ತ ಸಂಚಾರಕ್ಕೆ ವ್ಯವಸ್ಥೆ ಮಾಡುವುದು,, ಪ್ರತಿ 200 ಮೀಟರ್ ಒಂದರಂತೆ ಯೂ ಟರ್ನ್ ವ್ಯವಸ್ಥೆ ಮಾಡಿ ಕೂಡು ರಸ್ತೆ ಚೌಕಗಳನ್ನು ಕಿತ್ತುಹಾಕುವ ಅಗತ್ಯವಿದೆ. ಈ ‘ಯೂ ಟರ್ನ್’ಗಳನ್ನು ಫ್ಲೈಓವರ್‍ಗಳಂತೆ ನಿರ್ಮಿಸಿದರೆ ಇವುಗಳಲ್ಲಿ ಬಸ್ ಹಾಗೂ ಲಾರಿಗಳೂ ಸುಗಮವಾಗಿ ಸಂಚರಿಸಬಹುದು.

7. ಈಗ ಬೆಂಗಳೂರಿನಲ್ಲಿ ವಾಹನಗಳು ಗಂಟೆಗೆ 10 ಕಿಮೀ ವೇಗದಲ್ಲಿ ಸಂಚರಿಸಲೂ ಹೆಣಗುತ್ತಿವೆ. ಮುಂದಿನ ಹತ್ತು ವರ್ಷಗಳಲ್ಲಿ ಕನಿಷ್ಠ 25 ಕಿಮೀ ವೇಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡಬೇಕು. ಇದಕ್ಕೆ ಸೂಕ್ತ ರೀತಿಯಲ್ಲಿ ನಮ್ಮ ರಸ್ತೆ, ಕೂಡು ಚೌಕ ಹಾಗೂ ಜಂಕ್ಷನ್‍ಗಳನ್ನು ಮರುವಿನ್ಯಾಸ ಮಾಡುವ ಅಗತ್ಯವಿದೆ. ಇದು ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡಬಹುದಾದ ವ್ಯವಸ್ಥೆಯಾಗಿದೆ.

8. ರೈಲು ನಿಲ್ದಾಣದ ಸುತ್ತಮುತ್ತಲ ಒಂದು ಕಿಮೀ ಪ್ರದೇಶವನ್ನು ಪಾದಚಾರಿಗಳಿಗೆ ಅನುಕೂಲವಾಗುವಂತೆ ನವೀಕರಿಸಬೇಕಿದೆ. ಬೆಂಗಳೂರು ಕೇಂದ್ರ, ದಂಡು, ಯಶವಂತಪುರ ಹಾಗೂ ಕೆ ಆರ್ ಪುರಂ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಧೂಳಿಗೆ ಅನುವು ಮಾಡದಂತೆ ಆಧುನಿಕವಾಗಿ ಸುಗಮ ಸಂಚಾರ ಹಾಗೂ ಸುಗಮ ಪಾದಚಾರಿ ಯಾತಾಯಾತಕ್ಕೆ ಅನುವು ಮಾಡಬೇಕು. ಅದೇ ರೀತಿಯಲ್ಲಿ ಎಲ್ಲಾ ಮೆಟ್ರೊ ನಿಲ್ದಾಣಗಳ ಸುತ್ತಲ 500 ಮೀಟರ್ ಪ್ರದೇಶವನ್ನು ಹಾಗೂ ಎಲ್ಲಾ ಬಸ್ ನಿಲ್ದಾಣಗಳ ಸುತ್ತಲ 100 ಮೀಟರ್ ಪ್ರದೇಶವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಈ ತೆರನಾಗಿ ಪಾದಚಾರಿ ರಸ್ತೆಗಳು ಅಭಿವೃದ್ಧಿಯಾದರೆ ಬೆಂಗಳೂರಿನ ಶೇಕಡಾ 80 ರಷ್ಟು ಪ್ರದೇಶ ಸುಲಭವಾಗಿ ಅಭಿವೃದ್ಧಿಯಾಗುತ್ತದೆ.

ಸಮಾನಾಂತರವಾಗಿ ತುಮಕೂರು ರಸ್ತೆಯಿಂದ ಪೂರ್ವಾಭಿಮುಖವಾಗಿ ಬಳ್ಳಾರಿ ರಸ್ತೆ ಹಳೆ ಮದ್ರಾಸು ರಸ್ತೆ ಹಾಗೂ ಹೊಸೂರು ರಸ್ತೆಯವರೆಗೆ ಪೆರಿಫೆರಲ್ ರಿಂಗ್ ರಸ್ತೆಯ ತುರ್ತು ಅಗತ್ಯವಿದೆ.

9. ಬೆಂಗಳೂರಿನ ಮೂವರು ಮತ್ತು ಚಿಕ್ಕಬಳ್ಳಾಪುರದ ಸಂಸದರು ಈಗಾಗಲೇ ಸಬರ್ಬನ್ ರೈಲು ಯೋಜನೆಗೆ ಕೇಂದ್ರದ ಮಂಜೂರಾತಿ ಪಡೆದು ಬಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಈ ಸಬರ್ಬನ್ ರೈಲು ಯೋಜನೆ ಯಶಸ್ಸು ಕಂಡರೆ ಸಾಮಾನು ಸರಂಜಾಮು ಯಾತಾಯಾತಕ್ಕೂ ಅನುಕೂಲವಾಗುತ್ತದೆ. ಸುಮಾರು 200 ಕಿಮೀಗಳ ಈ ರೈಲು ಜಾಲ ಮೆಟ್ರೋಗೆ ಪೂರಕವಾಗಿ ಸೌಲಭ್ಯ ಕಲ್ಪಿಸಲಿದೆ.

10. ಬೆಂಗಳೂರಿಗೆ ಪಶ್ಚಿಮದಿಕ್ಕಿನಲ್ಲಿ ನೈಸ್ ಕಂಪನಿಯ ರಿಂಗ್ ರಸ್ತೆಯಿದೆ. ಇದಕ್ಕೆ ಸಮಾನಾಂತರವಾಗಿ ತುಮಕೂರು ರಸ್ತೆಯಿಂದ ಪೂರ್ವಾಭಿಮುಖವಾಗಿ ಬಳ್ಳಾರಿ ರಸ್ತೆ ಹಳೆ ಮದ್ರಾಸು ರಸ್ತೆ ಹಾಗೂ ಹೊಸೂರು ರಸ್ತೆಯವರೆಗೆ ಪೆರಿಫೆರಲ್ ರಿಂಗ್ ರಸ್ತೆಯ ತುರ್ತು ಅಗತ್ಯವಿದೆ. ಈ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದ ಎಲ್ಲಾ ವಾಹನಗಳು ಸದ್ಯ ಬೆಂಗಳೂರು ಪ್ರವೇಶಿಸಿ ಅನಗತ್ಯ ದಟ್ಟಣೆ ಉಂಟು ಮಾಡುತ್ತಿವೆ. ರಾಜ್ಯ ಸರ್ಕಾರವು ಅತ್ಯಂತ ಜರೂರಾಗಿ ಜಾರಿಗೆ ತರಬೇಕಾದ ಯೋಜನೆಗಳಲ್ಲಿ ಇದು ಒಂದಾಗಿದೆ.

11. ಬೆಂಗಳೂರು ಕೇಂದ್ರ ವ್ಯಾಪಾರ ಜಿಲ್ಲೆ (ಸಿಬಿಡಿ) ಯ ಒಳಗೆ ಎಲಿವೇಟೆಡ್ ಹಗುರ ಮೆಟ್ರೋ ಜಾಲವನ್ನು ನಿರ್ಮಿಸಬೇಕಿದೆ. ಮೆಟ್ರೋ ಹೋಲಿಕೆಯಲ್ಲಿ ಶೇಕಡಾ 25ರಷ್ಟು ವೆಚ್ಚದಲ್ಲಿ ನಿರ್ಮಿಸಬಹುದಾದ ಈ ಲೈಟ್ ಮೆಟ್ರೋ ಜಾಲ ಮೆಟ್ರೋ ನಿಲ್ದಾಣಗಳ ಮಧ್ಯೆ ಹಾಗೂ ಎಲ್ಲಾ ಪ್ರಮುಖ ವಾಣಿಜ್ಯ ತಾಣಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದು ಮೆಟ್ರೋ ಹಾಗೂ ಬಸ್ ಜಾಲಕ್ಕೆ ಪೂರಕವಾಗಿ ಕೆಲಸಮಾಡುತ್ತದೆ. ಇದನ್ನು ಕರಡು ಸಮಗ್ರ ಸಂಚಾರ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.

12. ಬೆಂಗಳೂರಿನ ಹೊರಗಡೆಯಿಂದ ಬರುವ ಬಸ್‍ಗಳಿಗೆ ಎಲ್ಲಾ ಪ್ರಮುಖ ಪ್ರವೇಶ ದ್ವಾರಗಳ ಬಳಿಯಲ್ಲಿ ನಿಲ್ದಾಣಗಳನ್ನು ನಿರ್ಮಿಸುವ ಅಗತ್ಯವಿದೆ. ಬಳ್ಳಾರಿ ರಸ್ತೆ, ಹಳೆ ಮದ್ರಾಸು ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ ಹಾಗೂ ತುಮಕೂರು ರಸ್ತೆಯ ಎರಡೂ ಬದಿಗಳಲ್ಲಿ ಮೇಲ್ಛಾವಣಿಯುಳ್ಳ ಬೃಹತ್ ಬಸ್ ನಿಲ್ದಾಣಗಳ ಅಗತ್ಯವಿದೆ. ಬಸ್‍ಗಳಲ್ಲಿ ಪರ ಊರಿಗೆ ತೆರಳುವ ಜನರ ಬವಣೆ ನೀಗಿಸಿ ಅವರಿಗೆ ಮಾನವಯೋಗ್ಯ ಸೌಕರ್ಯ ಕಲ್ಪಿಸಬೇಕಾಗಿದೆ. ಸದ್ಯಕ್ಕೆ ಇವರೆಲ್ಲರೂ ರಸ್ತೆಗಳ ಇಕ್ಕೆಲಗಳಲ್ಲಿ ನಿಂತು ಪಡುವ ಬವಣೆಯನ್ನು ನೋಡಲಾಗುತ್ತಿಲ್ಲ. ಸರ್ಕಾರವು ಈ ಅಮಾನವೀಯ ಪರಿಸ್ಥಿತಿಯನ್ನು ತುರ್ತಾಗಿ ಹೋಗಲಾಡಿಸಬೇಕಿದೆ.

13. ರೈಲು ನಿಲ್ದಾಣ, ಮೆಟ್ರೋ ಹಾಗೂ ಬಸ್ ನಿಲ್ದಾಣಗಳು ಒಟ್ಟಿಗೆ ಸೇರುವ ಕಡೆಗಳಲ್ಲಿ ಸರ್ಕಾರವು ಮೇಲ್ಛಾವಣಿಯುಳ್ಳ ಬೃಹತ್ ನಿಲ್ದಾಣಗಳ ವ್ಯವಸ್ಥೆ ಮಾಡಬೇಕು. ಈ ನಿಲ್ದಾಣಗಳಲ್ಲಿ ಭಿಕ್ಷುಕರು ಮತ್ತು ಬೀದಿ ವ್ಯಾಪಾರಿಗಳ ಹಾವಳಿ ನಿಲ್ಲಿಸಿ ಪ್ರಯಾಣಿಕರು ಗೌರವಯುತವಾಗಿ ಸಂಚರಿಸುವಂತೆ ಸೌಲಭ್ಯ ನೀಡಬೇಕು.

14. ಅಲ್ಲಲ್ಲಿ ರಸ್ತೆ ವಿಸ್ತರಣೆ ಹಾಗೂ ‘ಬಾಟಲ್‍ನೆಕ್’ಗಳ ನಿವಾರಣೆಯ ಅಗತ್ಯವಿದೆ. ದೊಡ್ಡ ಸಂಖ್ಯೆಯಲ್ಲಿ ರಸ್ತೆ ವಿಸ್ತರಣೆ ಅಸಾಧ್ಯವಾದರೂ ಕೆಲವು ಅತ್ಯಗತ್ಯ ಪ್ರದೇಶಗಳಲ್ಲಿ 10 ರಿಂದ 20 ಅಡಿಗಳವರೆಗೆ ರಸ್ತೆ ವಿಸ್ತರಣೆ ಮಾಡಿ ಸಂಚಾರಿ ಚೌಕ-ಜಂಕ್ಷನ್‍ಗಳ ಸುತ್ತಮುತ್ತ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟಬೇಕು. ಕೇಂದ್ರದ ರಕ್ಷಣಾ ಇಲಾಖೆಯ ಬಳಿ ಒಡಂಬಡಿಕೆ ಮಾಡಿಕೊಂಡು ಅಗತ್ಯ ಜಾಗಗಳಲ್ಲಿ ಭೂಮಿ ಪಡೆದು ಈ ‘ಬಾಟಲ್‍ನೆಕ್’ಗಳನ್ನು ಸುಲಭವಾಗಿ ನಿವಾರಣೆ ಮಾಡಬಹುದು.

Leave a Reply

Your email address will not be published.