ಮುಖ್ಯಚರ್ಚೆಗೆ ಪ್ರವೇಶ

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..?

ನಾವು ಬೇಕು-ಬೇಡವೆಂದರೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಧ್ಯಕ್ಷೀಯ ಮಾದರಿಯ ಆಯ್ಕೆಗೆ ವೇದಿಕೆ ಸಜ್ಜಾಗಿದೆ. 2014ರಿಂದ 2019ರವರೆಗಿನ ಎನ್‍ಡಿಎ ಸರ್ಕಾರದ ಸಫಲತೆ-ವಿಫಲತೆಗಳನ್ನು ಅಳೆಯುವ ಮತ್ತು ಮುಂದಿನ ಐದು ವರ್ಷಗಳಲ್ಲಿ ನಮಗೆ ಯಾವ ಕೇಂದ್ರ ಸರ್ಕಾರ ಬೇಕೆನ್ನುವ ಚರ್ಚೆಗಿಂತಲೂ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೋ ಬೇಡವೋ ಎಂಬುದೇ ಚುನಾವಣೆಯ ವಿಷಯವಸ್ತುವಾಗಿದೆ. 2019ರ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತ ಸ್ಪರ್ಧೆಯಾಗಿ ಮಾಡುವಲ್ಲಿಯೇ ಆಡಳಿತ ಪಕ್ಷ ತನ್ನ ಸಫಲತೆಯನ್ನು ಕಾಣಬಯಸಿದರೆ, ಮೋದಿ ವಿರೋಧಿ ಒಕ್ಕೂಟ ರಚನೆಯಲ್ಲಿ ವಿರೋಧ ಪಕ್ಷಗಳು ತಮ್ಮ ಯಶಸ್ಸು ಕಾಣಬಯಸಿವೆ.

ನರೇಂದ್ರ ಮೋದಿ ಬೇಕೆ..? ಬೇಡವೆ..?
ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..?
ನರೇಂದ್ರ ಮೋದಿ ಅಭಿವೃದ್ಧಿಯ ಹರಿಕಾರನೇ..? ಕೇವಲ ಬಡಾಯಿ ವೀರನೇ..?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವಲ್ಲಿ ಕಳೆದ ಐದು ವರ್ಷಗಳ ಕೇಂದ್ರ ಸರ್ಕಾರದ ವಿಮರ್ಶೆ ಹಾಗೂ ಮುಂದಿನ ಐದು ವರ್ಷಗಳಲ್ಲಿ ನಾವು ಬಯಸುವ ಆಡಳಿತದ ರೂಪರೇಷೆಗಳಿವೆ. ದೇಶದ ಮುಂದಿನ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವ ಚರ್ಚೆಯಿದ್ದರೆ, ದೇಶದ ಸಮುದಾಯಗಳನ್ನು ಮುಖ್ಯಧಾರೆಯಲ್ಲಿ ಕೊಂಡೊಯ್ಯುವ ನಡೆಯಲ್ಲಿನ ವಿವಾದಗಳಿವೆ. ಯಾವುದು ಬೇಕು? ಯಾವುದು ಬೇಡವೆನ್ನುವ ಜಿಜ್ಞಾಸೆಯಿದೆ. ಸಾಂವಿಧಾನಿಕ ಹಕ್ಕು-ಕರ್ತವ್ಯಗಳ ಪ್ರಶ್ನೆಗಳೂ ನಮ್ಮ ಮುಂದಿವೆ. ಕೆಲವರು ಬಲಾಢ್ಯ ಸರ್ಕಾರ ಬೇಕೆಂದರೆ ಮತ್ತೆ ಕೆಲವರು ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ಬಯಸುತ್ತಿದ್ದಾರೆ. ಯಾವುದು ಸರಿ, ಯಾವುದು ಬೆಸವೆಂಬುದರ ನಿರ್ಣಯ ಆಗಬೇಕಿದೆ. ಮುಂದಿನ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರದ ಚುಕ್ಕಾಣಿ ಯಾರ ಕೈಗೆ ನೀಡಬೇಕೆಂಬುದರ ಆಯ್ಕೆ ಆಗಬೇಕಿದೆ.

ಈ ಹಿನ್ನೆಲೆಯಲ್ಲಿ ಓದುಗರು/ಮತದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಅನುವಾಗುವಂತೆ ನರೇಂದ್ರ ಮೋದಿ ಅವರನ್ನು ಹಲವು ದೃಷ್ಟಿಕೋನಗಳಿಂದ ಅವಲೋಕಿಸುವ, ಅನೇಕ ಮಾನದಂಡಗಳಿಂದ ಅಳೆಯುವ ಹೊಣೆಯನ್ನಿಲ್ಲಿ ನಿರ್ವಹಿಸಿದ್ದೇವೆ. ನಾಡಿನ ಪ್ರಮುಖ ರಾಜಕೀಯ ವಿಶ್ಲೇಷಕರ ಜೊತೆಗೆ ಮೂರೂ ಮುಖ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಚರ್ಚೆಯಲ್ಲಿ ತಮ್ಮ ವಾದ ಮಂಡಿಸಿದ್ದಾರೆ; ಓದುಗರ ಅನ್ನಿಸಿಕೆಗಳೂ ಇವೆ.

Leave a Reply

Your email address will not be published.