ಮುಗಿಲಿಗೊಂದು ಉಯ್ಯಾಲೆ ಕಟ್ಟಿ

-ಸ್ಮಿತಾ ಅಮೃತರಾಜ್

ಉಯ್ಯಾಲೆ ಆಡುತ್ತಿದ್ದ ಸಮಯದಲ್ಲಿ ಎರಡು ಹಗ್ಗವನ್ನು ಬಲವಾಗಿ ಹಿಡಿದುಕೊಂಡು, ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು, ಅದೆಷ್ಟು ರಭಸದಲ್ಲಿ ತೂಗಿಸಿಕೊಳ್ಳುತ್ತಿದ್ದೆವೆಂದರೆ ಮುಗಿಲಿಗೆ ಕಾಲು ತಾಕಲು ಸ್ವಲ್ಪವೇ ಕಡಿಮೆ ಅಂತ ನಿರಾಶೆಯಾಗಿ ಮತ್ತಷ್ಟು ರಭಸದಲಿ ಒಯ್ದು ಕಾಲನ್ನು ಮತ್ತಷ್ಟು ಏರಿಸಲು ಪ್ರಯತ್ನಿಸುತ್ತಿದ್ದೆವು

ನಮ್ಮ ತೋಟದಲ್ಲಿ ಮಂಗಗಳ ಕಾಟ ಜಾಸ್ತಿ. ಲೆಕ್ಕ ಹಾಕೋಕೆ ಸಾಧ್ಯವಾಗಿದ್ದರೆ ಬಹುಶಃ; ನಮ್ಮೂರಿನ ಜನಸಂಖ್ಯೆಗಿಂತ ಮಂಗಗಳ ಸಂಖ್ಯೆಗಳೇ ಜಾಸ್ತಿ ಸಿಗಬಹುದು ಅಂದುಕೊಂಡಿರುವೆ. ಮಂಗಗಳು ಎಷ್ಟಾದರೂ ಸಂಖ್ಯೆ ಏರಿಸಿಕೊಳ್ಳಲಿ, ಅದಕ್ಕೆ ನಮ್ಮ ತಕರಾರುಗಳೇನೂ ಇಲ್ಲ. ಆದರೆ ಅದರ ವಂಶಾವಳಿಯಿಂದ ನಮ್ಮ ಹೊಟ್ಟೆಗೆ ಧಕ್ಕೆಯುಂಟಾಗುವುದೇ ಆತಂಕದ ವಿಚಾರ.

ನಮ್ಮ ತೋಟದಲ್ಲಿ ಬೆಳೆಯುವ ಯಾವುದೇ ಹಣ್ಣು ಹಂಪಲುಗಳು, ಮಿಡಿಕಾಯಿ ಹೋಗಲಿ ಗಿಡದಲ್ಲಿ ಮೂಡಿದ ಹೊಸ ಚಿಗುರ ಕೂಡ ತಿಂದು ಮುಗಿಸಿಬಿಡುತ್ತದೆ ಅನ್ನುವುದೇ ಕಳವಳಕಾರಿ ಸಂಗತಿ. ಹಾಗಾಗಿ ಮಂಗಗಳನ್ನು ತೋಟದಿಂದ ಹೊರಗೋಡಿಸುವುದೇ ನಮ್ಮ ಬಹುದೊಡ್ಡ ಸಾಹಸದ ಕೆಲಸ. ಯಾರಿಗಾದರೂ ಒಬ್ಬರಿಗೆ ತೋಟದಲ್ಲಿ ಗಸ್ತು ತಿರುಗುವ ಕೆಲಸ, ಅರ್ಥಾತ್ ಕಾವಲು ಕಾಯುವ ಕೆಲಸ. ಇದು ಪ್ರತಿನಿತ್ಯ ಆಗುಹೋಗದ ಕಾರುಬಾರು. ಮಹಾ ಬೋರ್ ಹೊಡೆಸುವ ಕೆಲಸ. ಅದಕ್ಕಾಗಿ ಯಾವುದೋ ಒಂದು ದಿನ ಅಚಾನಕ್ ಆಗಿ ಮಂಡೆಗೆ ಹೊಳೆದ ಉಪಾಯವನ್ನು ಅನುಷ್ಠಾನ ಗೊಳಿಸಿಬಿಟ್ಟಿದ್ದೆವು.

ನಮ್ಮ ಮನೆಯ ಅಂಗಳದ ಬದಿಯಲ್ಲಿರುವ ತೆಂಗಿನ ಮರದ ನಡುವಿಗೆ ತಂತಿ ಹಗ್ಗದ ಸೊಂಟಪಟ್ಟಿ ಬಿಗಿದು ಮತ್ತೊಂದು ತುದಿಯನ್ನು ತೋಟದ ಮತ್ತೊಂದು ಕಡೆಯಲ್ಲಿರುವ ಪೇರಳೆ ಮರಕ್ಕೆ ಬಿಗಿದು ಕಟ್ಟಿದ್ದೆವು. ನಮಗೆ ಕೈಗೆಟುಕುವ ಅಂತರದಲ್ಲಿ ಟಿನ್ ಡಬ್ಬಿಯನ್ನು ನೇತು ಹಾಕಿ, ಮಂಗ ತೋಟಕ್ಕೆ ನುಸುಳಿತು ಅಂತ ಗುಮಾನಿ ಸಿಕ್ಕ ತಕ್ಷಣ ಇಲ್ಲಿ ಬಿಗಿದ ಡಬ್ಬಿಗೆ ಕೋಲಿನಿಂದ ಜೋರಾಗಿ ಬಾರಿಸುತ್ತಿದ್ದೆವು. ದಾರಿಹೋಕರಿಗೆ ಇಲ್ಲಿ ಚೆಂಡೆ ಮದ್ದಲೆ ಶುರುವಾಗಿದೆಯೇನೋ ಅಂತ ಅನುಮಾನ ಬಂದರೆ ಅಚ್ಚರಿಯಿಲ್ಲ. ಕೊನೆಕೊನೆಗೆ ನಮ್ಮೂರಿನ ಹೆಚ್ಚಿನ ಮನೆಗಳಲ್ಲಿ ಬೇರೆ ಬೇರೆ ಸಮಯದಲ್ಲಿ ಈ ಚೆಂಡೆಯ ಶಬ್ದ ಕೇಳಿಸುವುದು ಮಾಮೂಲಿಯಾಗಿದೆ. ಏಕಾಏಕಿ ಉದ್ಭವಿಸಿದ ಈ ಸದ್ದಿಗೆ ಮಂಗಗಳೆಲ್ಲಾ ಜಿಗಿದು, ಹಾರಿ, ಸತ್ತೆವೋ ಬಿದ್ದೆವೋ ಅಂತ ಪಲಾಯನಗೈಯುತ್ತಿದ್ದವು.

ಮೊದಮೊದಲು ಸುಲಭದಲ್ಲಿ ಓಡಿಸಿಬಿಟ್ಟೆವು ಅಂತ ನಾವು ಹೆಮ್ಮೆಯಿಂದ ಬೀಗಿ ಯಾವುದೋ ಒಂದು ನಡು ಮಧ್ಯಾಹ್ನ ನಿಶ್ಚಿಂತೆಯಿಂದ ಸಣ್ಣಗೆ ಪದ ಗುನಿಗಿಕೊಂಡು ತೋಟಕ್ಕೆ ಇಳಿಯುವಾಗ ನಾವು ಬಿಗಿದ ಹಗ್ಗದ ಮೇಲೆಯೇ ಯಾರ ಖದರಿಲ್ಲದೆ ತಾಯಿ, ಮರಿ, ಗಂಡು, ಹೆಣ್ಣು ಎನ್ನದೆ ಜೋಕಾಲಿಯಾಡುತ್ತಿದ್ದನ್ನು ನೋಡಿ ಯಾಕೋ ಮರು ಕ್ಷಣ ಮಂಗಗಳನ್ನು ಓಡಿಸಲು ಮನಸಾಗದೆ ಹಾಗೇ ಸದ್ದು ಮಾಡದೆ ಅದು ಉಯ್ಯಾಲೆ ಆಡುವುದನ್ನು ನೋಡುತ್ತಾ ಮಂಕು ಬಡಿದಂತೆ ನಿಂತವಳಿಗೆ ಒಳಗೊಳಗೆ ಸಣ್ಣಗೆ ನಗು. ತಿನ್ನೋಕೆ, ಕುಡಿಯೋಕೆ, ವಾಸಿಸೋಕೆ ಸರಿಯಾದ ಜಾಗ ಕೊಡದೇ ಇದ್ದರೆ ಪಾಪ! ಅದು ತಾನೇ ಏನು ಮಾಡೀತು? ಕಾಡನ್ನೆಲ್ಲಾ ಕಡಿದು ನಾವು ಬಾಳೇ ಮಾಡಿದ್ದೇವೆ, ಕೊಕ್ಕೋ ಮಾಡಿದ್ದೇವೆ, ತೆಂಗು, ಕಂಗು, ರಬ್ಬರು ನೆಟ್ಟಿದ್ದೇವೆ. ಅದಕ್ಕೆ ಅದರ ಜಾಗದಲ್ಲಿಯೇ ತಿನ್ನೋಕೆ ಬೇಕಾದಷ್ಟು ಇದ್ದಿದ್ದರೆ ಅದು ಯಾಕೆ ತಾನೇ ಇಲ್ಲಿಗೆ ಬರುತ್ತಿತ್ತು?

ಆದರೆ ಸದ್ದಿಲ್ಲದೆ ನಮ್ಮ ತೋಟಕ್ಕೆ ಧಾಂಗುಡಿಯಿಡುವ ಕೋತಿಗಳು ತಮ್ಮ ಹೊಟ್ಟೆ ತುಂಬಿ ಆದ ಮೇಲೆ ಕೇಕೆ ಹಾಕುತ್ತಾ, ಅದನ್ನು ಓಡಿಸಲು ಬಿಗಿದ ತಂತಿಯ ಮೇಲೆಯೇ ಕೈಯನ್ನು ನೇತು ಹಾಕಿ ಉಯ್ಯಾಲೆ ಜೀಕುವುದು ನಿಜಕ್ಕೂ ತಮಾಷಿ ಅನ್ನಿಸಿತು. ಬದುಕೇ ನೆಲೆಯಿಲ್ಲದೆ ಅಭದ್ರತೆಯಿಂದ ಇರುವಾಗಲೂ, ಅತಂತ್ರವಾಗಿರುವಾಗಲೂ ಉಯ್ಯಾಲೆಯಲ್ಲಿ ಜೀಕಿ ಜೀಕಿ ಹಗುರವಾಗುವುದ ಕಂಡು ಮಂಗ ಬುದ್ಧಿ ಅಂದರೆ ಇದುವೇ ಅಂತ ಖಾತ್ರಿಯಾಗಿ ಬಿಟ್ಟಿತ್ತು. ಅರೆಕ್ಷಣ ಕೋತಿಗಳ ಮೇಲಿನ ಸಿಟ್ಟನ್ನು ಮರೆತು ನಿರ್ಜೀವ ಜೋಕಾಲಿಯ ಕುರಿತು ಅಪಾರ ಪ್ರೇಮ ಉಕ್ಕಿಹರಿದದ್ದು ಸುಳ್ಳಲ್ಲ.

ಹಾಗೆ ನೋಡಿದರೆ ನಮಗೂ ಮಂಗಗಳಿಗೂ ಅದೇನು ವ್ಯತ್ಯಾಸವಿದೆ? ನಾವು ಅದರ ಒಂದಷ್ಟು ಪರಿಷ್ಕೃತ ತಳಿಗಳು ಅಷ್ಟೆ. ಮಂಗಗಳಿಗೆ ಮಾತ್ರ ಯಾಕೆ? ನಮಗೂ ಜೋಕಾಲಿಯ ಜೀಕಿನಲ್ಲಿ ಕಳೆದುಹೋಗುವ ಹುಚ್ಚು ಅದೆಷ್ಟಿಲ್ಲ ಹೇಳಿ? ಮಂಗಗಳು ಮರದ ಗೆಲ್ಲಿಗೆ ಕೈಯನ್ನು ಜೋತು ಬೀಳಿಸಿ ನೇತಾಡುತ್ತವೆ. ಮರದ ಒಂದು ಬಳ್ಳಿಯನ್ನು ಹಿಡಿದುಕೊಂಡು ಆಚೆಕಡೆಯಿಂದ ಈಚೆಕಡೆಗೆ ಜೀಕಿಕೊಳ್ಳುತ್ತವೆ. ಹೀಗೆ ಮಂಗಾಟ ಆಡುವವರು ಮಂಗಗಳು ಬಿಟ್ಟರೆ ಮನುಜರೆ. ಉಳಿದಂತೆ ಎಲ್ಲಾ ಜೀವಿಗಳು ಗಂಭೀರತೆ ಉಳ್ಳವರೆ. ಸದಾಕಾಲ ಯಾವುದಾದರು ಒಂದು ಕೆಲಸದಲ್ಲಿ ಗಹನವಾಗಿ ತೊಡಗಿಸಿಕೊಂಡಿರುತ್ತವೆ ಅನ್ನುವುದು ನನ್ನ ನಂಬುಗೆ. 

ಉಯ್ಯಾಲೆ ಅಂದಾಕ್ಷಣ ಮನಸು ಓಡುವುದೇ ಬಾಲ್ಯಕ್ಕೆ. ಉಯ್ಯಾಲೆ ಕಟ್ಟಿಸಿ ಅದರೊಳಗೆ ಕುಳಿತುಕೊಂಡು ಜೀಕಿಸಿಕೊಳ್ಳದ ಬಾಲ್ಯವೇ ಇರಲಿಕ್ಕಿಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಎಲ್ಲರೂ ಜೀಕಿಸಿಕೊಂಡು ತೂಗಿಸಿಕೊಂಡು ಬೆಳೆದು ದೊಡ್ಡವರಾದದ್ದೇ. ಎಳವೆಯಲ್ಲಿ ಮಕ್ಕಳಿಗೆ ಅಮ್ಮನ ತೋಳೆ ಭದ್ರವಾದ ಉಯ್ಯಾಲೆ. ಮಕ್ಕಳು ತೋಳಸೆರೆಯ ಅಪ್ಪುಗೆಯಲ್ಲಿ ತೂಗಿಸಿಕೊಂಡು ನಿದ್ದೆ ಹೋಗಿದ್ದೇ ಹೆಚ್ಚು. ನಂತರ ನಡೆಯುವುದು ಕಲಿಯುವವರೆಗೆ ಮಕ್ಕಳಿಗೆ ತೊಟ್ಟಿಲೇ ತೂಗುಯ್ಯಾಲೆ. ಜೋ..ಜೋ..ಲಾಲಿ ನಾ ಹಾಡುವೆ ಅಂತ  ತೊಟ್ಟಿಲ ತೂಗುತ್ತಾ ಹಾಡಿದರೆ ಹಾಡಿನ ಇಂಪು, ತೊಟ್ಟಿಲ ಜೀಕು ಎರಡೂ ಸೇರಿ ಮಕ್ಕಳು ಅದ್ಯಾವುದೋ ಗಳಿಗೆಯಲ್ಲಿ ಚಂದ್ರನೂರಿಗೆ ಪ್ರಯಾಣ ಬೆಳೆಸಿಬಿಟ್ಟಿರುತ್ತವೆ. ಬಹುಶಃ ಜೀಕಿಸಿಕೊಳ್ಳುತ್ತಾ ಗಾಳಿಯಲ್ಲಿ ತೇಲಿದಂತೆ ಹಗುರವಾಗಿ ಹಾರುತ್ತಾ ಕಲ್ಪನಾಲೋಕದಲ್ಲಿ ತೇಲುವ ಸುಖದ ಮುಂದೆ ಯಾವುದೂ ಸಮವಲ್ಲವೇನೋ. 

ತೊಟ್ಟಿಲ ಜೀಕಿನಲ್ಲೇ ಬೆಳೆದ ಹಸುಗೂಸು ಅಂಬೆಗಾಲಿಕ್ಕಿ ಹೊಸಿಲು ದಾಟಲು ಪ್ರಯತ್ನಿಸುತ್ತಿರುವಾಗ ಅದಕ್ಕೆ ನಾಲ್ಕು ಗೋಡೆಯ ಮುಚ್ಚಿದ ಕದದ ಕೋಣೆಯೊಳಗಿನ ಜೋಕಾಲಿ ಇಷ್ಟವಾಗದೆ ಬಯಲಿಗೆ ಬಂದು ಜೀಕುವ, ಜೀಕಿಸಿಕೊಳ್ಳುವ ಕಾತರಕ್ಕೆ ಬೀಳುತ್ತದೆ. ಇದು ಸಹಜವೇ ಅನ್ನಿ. ಅದಕ್ಕೆ ಸರಿಯಾಗಿ ಮನುಷ್ಯನ ಮನಸ್ಸನ್ನು ಪೂರ್ಣ ಪ್ರಮಾಣದಲ್ಲಿ ಅರಿತವರಂತೆ ನಮ್ಮ ಮಾರುಕಟ್ಟೆಯ ಅಂಗಡಿಗಳಲ್ಲಿ ನಮೂನಿ ನಮೂನಿಯ ಅವರವರ ಕಿಸೆಯ ಭಾರಕ್ಕೆ ಅನುಗುಣವಾದ ಜೋಕಾಲಿಗಳು ಬಿಕರಿಗಿಟ್ಟುಕೊಂಡಿವೆ. ದೊಡ್ಡ ದೊಡ್ಡ ಮಹಡಿ ಮಹಲುಗಳ ಹಜಾರದಲ್ಲಿ ಚೆಂದದ ಉಯ್ಯಾಲೆಯೊಂದು ತನ್ನಷ್ಟಕ್ಕೆ ತಾನೇ ಗಾಳಿಯೊಂದಿಗೆ ಮಾತಾಡಿಕೊಂಡಂತೆ ಹಗುರವಾಗಿ ತೂಗಿಕೊಳ್ಳುತ್ತಿರುತ್ತದೆ. ಅಥವಾ ಮೆಲ್ಲಗೆ ತೂಗಿಸಿಕೊಂಡು ಕಾಫಿ ಹೀರುತ್ತಲೋ, ಪೇಪರ್ ಓದುತ್ತಲೋ ಕುಳಿತಿರಬಹುದಾದ ದೃಶ್ಯಕ್ಕೆ ನಾವೆಲ್ಲಾ ಕಣ್ಣಾಗಿದ್ದೇವೆ.

ಇನ್ನು ಕೂರಲಿ ಬಿಡಲಿ ಹೊರಗಿನ ವೆರಾಂಡಾದಲ್ಲಿ ಜೋಕಾಲಿಯೊಂದನ್ನು ಬಿಗಿದು ಕಟ್ಟಿರುವುದು ಇವತ್ತಿನ ಫ್ಯಾಷನ್ ಜಗತ್ತಿನ ಜರೂರು ಆಗಿ ಬಿಟ್ಟಿದೆ. ಅಸಲಿಗೆ ಹೀಗೇ ಜೋಕಾಲಿಯಲ್ಲಿ ಪವಡಿಸುತ್ತಾ ಹಗುರವಾಗಬೇಕೆನ್ನುವ ತವಕ ಎಲ್ಲರಿಗೂ ಇದ್ದದ್ದೇ. ಆದರೆ ಇಂತಹ ಸುಖ ಎಲ್ಲರಿಗೂ ಒದಗಿ ಬರುವುದಿಲ್ಲವೆಂಬುದು ಅಷ್ಟೇ ನಿಚ್ಚಳ ಸತ್ಯ. ಬಡತನದ ಉಯ್ಯಾಲೆ ತಳದಲ್ಲೇ ನಿಂತು, ಜಪ್ಪಯ್ಯ ಅಂದರೂ ತುಸು ಮೇಲೆಯೂ ಹೋಗದಂತಿರುವಾಗ ನಮ್ಮಂತಹ ಮಧ್ಯಮ ವರ್ಗದ ಕುಟುಂಬದವರಿಗೆ ಬದುಕೇ ಆಚೆಯಿಂದ ಈಚೆಗೆ ಜೀಕುತ್ತಾ ಆಯೋಮಯದ ಉಯ್ಯಾಲೆಯಾಗಿರುವಾಗ ಅವರಿಗೆ ಬೇರೊಂದು ಉಯ್ಯಾಲೆ ಕಟ್ಟಿ ಅದರಲ್ಲಿ ತೂಗುವಷ್ಟು ಪುರುಸೊತ್ತು ಮತ್ತು ವ್ಯವಧಾನವಿರುವುದಿಲ್ಲವೆನ್ನಿ.

ನಮ್ಮ ಬಾಲ್ಯ ಸುಖಾಸೀನದ ಉಯ್ಯಾಲೆಯಲ್ಲಿ ಕುಳಿತು ಜೀಕಿಸಿಕೊಳ್ಳಲಾಗದಿದ್ದರೂ ನಾವು ಉಯ್ಯಾಲೆ ಕಟ್ಟಿ ತೂಗಿಕೊಳ್ಳುವುದರಿಂದ ವಂಚಿತರಾಗಲಿಲ್ಲವೆಂಬುದೇ ಈ ಕ್ಷಣಕ್ಕೆ ಹಾದು ಹೋಗುವ ಖುಷಿ. ನಾವು ಅಕ್ಕಪಕ್ಕದ ಮಕ್ಕಳೆಲ್ಲಾ ಸೇರಿ ದೊಡ್ಡವರನ್ನು ಕಾಡಿ ಬೇಡಿ ಉಯ್ಯಾಲೆ ಕಟ್ಟಿಸಿಕೊಳ್ಳುವುದರಲ್ಲಿ ಸಫಲರಾಗುತ್ತಿದ್ದೆವು.  ಹಾಗಂತ ಮಕ್ಕಳ ಮಾತಿಗೆ ಮನ್ನಣೆಯಿತ್ತು ಮಾರುಕಟ್ಟೆಯಿಂದ ಖರೀದಿಸಿ ಹೊಸತೊಂದು ಉಯ್ಯಾಲೆ ಖುರ್ಚಿ ತಂದಿದ್ದಾರೆಂದು ನೀವು ಊಹಿಸಿದರೆ ತಪ್ಪು. ನಮ್ಮ ಕಡೆ ಅಡಿಕೆ ಮರ ಹತ್ತುವ ಮಣೆಯಂತಹ ಸಾಧನ ಇದೆ. ಆಚೆ ಈಚೆ ಕಾಲು ಇಳಿಬಿಟ್ಟು ಒಬ್ಬರು ಮಾತ್ರ ಕುಳಿತು ಕೊಳ್ಳಬಹುದಾದ ಮಣೆ ಇದು. ನಡುವಿನ ರಂಧ್ರಕ್ಕೆ ಹುರಿ ಹಗ್ಗ ನುಗ್ಗಿಸಿ ಚಿಕ್ಕು ಮರಕ್ಕೋ, ಗೇರು ಮರದ ಗೆಲ್ಲಿಗೋ ಬಿಗಿದು ಕಟ್ಟಿದರೆ, ನಾವು ಮಕ್ಕಳು ಊಟ ತಿಂಡಿ ಯಾವುದರ ಪರಿವೆಯೇ ಇಲ್ಲದಂತೆ ಬೆಳಗ್ಗಿನಿಂದ ಸಂಜೆಯವರೆಗೆ ಆಡುತ್ತಾ ಕಳೆಯುತ್ತಿದ್ದೆವು.

ಸರದಿ ಪ್ರಕಾರ ಒಬ್ಬರು ಕುಳಿತು ಕೊಂಡಾಗ ಮತ್ತೊಬ್ಬರು ಒತ್ತುವುದು, ಇದು ನಮಗೆ ನಾವೇ ಮಾಡಿಕೊಂಡ ಅಲಿಖಿತ ಒಪ್ಪಂದ. ಇದು ಮೊದ ಮೊದಲಿಗೆ ನಿಯತ್ತಾಗಿ ಸಾಗುತ್ತಿತ್ತು. ಕೊನೆ ಕೊನೆಗೆ ಕೂತವರು ಏಳದೆ, ಜೀಕುವವರು ಜೀಕುತ್ತಲೇ ಇರಬೇಕಾದ ಸಣ್ಣ ಕೊಕ್ಕೆಯೊಂದು ಅದರ ನಡುವಿಂದ ಹುಟ್ಟಿ, ಜಗಳ ಉಯ್ಯಾಲೆಯಷ್ಟೇ ಬಿರುಸಿನಲ್ಲಿ ಏರಿ, ಅದು ಅಪ್ಪನ ಕಿವಿಗೂ ತಾಕಿ, ಅಲ್ಲಿಂದಲೇ ಅಡಿಕೆ ಮಣೆ ಅಟ್ಟ ಸೇರಿ, ಮತ್ತೆ ಹಳೆ ಜಗಳ ಮರೆತು ನಮ್ಮ ಮುಸಿ ಮುಸಿ ಅಳು ಜೋರಾಗಿ, ಅಮ್ಮನ ಜೊತೆ ಕೊಸರಾಡಿಕೊಂಡು, ಅವರವರ ಮನೆಯ ಸೌದೆ ಕೊಟಗೆಯ ಮೂಲೆಯಲ್ಲಿ, ಅಟ್ಟದ ಬಿಟ್ಟದ ತೊಲೆಗೆ ಅಮ್ಮನ ಸೀರೆಯನ್ನು ಬಿಗಿಸಿಕೊಂಡು, ಅದರಲ್ಲಿ ತಮ್ಮಷ್ಟಕ್ಕೆ ತಾವೇ ಉಯ್ಯಾಲೆ ಆಡೋಣ ಬನ್ನಿರೋ..ಉಯ್ಯಾಲೆ ತೂಗೋಣ ಬನ್ನಿರೋ.. ಅಂತ ಮೆಲ್ಲಗೆ ಗುನುಗಿಕೊಂಡು ಜೀಕಿಕೊಳ್ಳುತ್ತಿದ್ದ ನೆನಪು ಈಗಲೂ ಹಸಿ ಹಸಿ.

ಒಟ್ಟಾಗಿ ನಾವು ಉಯ್ಯಾಲೆ ಆಡುತ್ತಿದ್ದ ಸಮಯದಲ್ಲಿ ಎರಡು ಹಗ್ಗವನ್ನು ಬಲವಾಗಿ ಹಿಡಿದುಕೊಂಡು, ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು, ಅದೆಷ್ಟು ರಭಸದಲ್ಲಿ ತೂಗಿಸಿಕೊಳ್ಳುತ್ತಿದ್ದೆವೆಂದರೆ ಮುಗಿಲಿಗೆ ಕಾಲು ತಾಕಲು ಸ್ವಲ್ಪವೇ ಕಡಿಮೆ ಅಂತ ನಿರಾಶೆಯಾಗಿ ಮತ್ತಷ್ಟು ರಭಸದಲಿ ಒಯ್ದು ಕಾಲನ್ನು ಮತ್ತಷ್ಟು ಏರಿಸಲು ಪ್ರಯತ್ನಿಸುತ್ತಿದ್ದೆವು. ಮುಗಿಲು ಮುಟ್ಟುವ ತವಕದಲಿ ಹೆದರಿಕೆಯ ಸಂಗತಿಯೇ ಇರಲಿಲ್ಲ. ಸದÀ್ಯ! ಮರದ ಗೆಲ್ಲು ತುಂಡಾಗುವುದು ಹೋಗಲಿ, ತೂಗಿಸಿಕೊಂಡ ರಭಸಕ್ಕೆ ಜೋಲಿ ಹೊಡೆದು ಬಿದ್ದದ್ದಾಗಲಿ, ಯಾವುದೇ ಅನಾಹುತಗಳಾಗಲಿ ಆಗಲೇ ಇಲ್ಲ ಎನ್ನುವುದು ಆ ಹೊತ್ತಿನ ಪವಾಡ. ನಿಜಕ್ಕೂ ಬಾಲ್ಯದ ಹುಡುಗಾಟಕ್ಕೆ ಅದೃಶ್ಯ ಕೈಗಳು ಬಿಡದೇ ಕಾಯುತ್ತಿದ್ದವು ಅಂತ ಬಲವಾಗಿ ಅನ್ನಿಸುತ್ತಿದೆ.

ಎಳವೆಯಲ್ಲಿ ನನ್ನ ಮಗಳಿಗೆ ತೊಟ್ಟಿಲು ತೂಗಿಸಿಕೊಳ್ಳುವುದು ಬೇಜಾರು ಬಂದ ಹೊತ್ತಲ್ಲಿ, ನಿದ್ರಾ ದ್ವೇಷಿಯಾದ ಆಕೆಯನ್ನು ನಿದ್ರಿಸಲು ನಾನೆಷ್ಟು ನಿದ್ದೆಗೆಟ್ಟು ಇದ್ದಬದ್ದ ಬುದ್ಧಿಯನ್ನೆಲ್ಲಾ ಪ್ರಯೋಗಿಸಿದೆನೋ ನನಗೂ ಮತ್ತು ಆ ದೇವರಿಗಷ್ಟೇ ಗೊತ್ತಿರಬಹುದಾದ ಸತ್ಯ. ಹಾಗಾಗಿ ಕೊನೆಯ ಉಪಾಯವೆಂಬಂತೆ ತೋಳನ್ನೇ ಜೋಕಾಲಿ ಮಾಡಿ ಅವಳನ್ನು ಅತ್ತಿಂದಿತ್ತ ಜೀಕಿಸುತ್ತಾ ನಿದ್ರೆ ಹೋಗಿಸಿದ್ದೆ. ನಾನು ಪಟ್ಟ ಪ್ರಯತ್ನಗಳಲ್ಲಿ ಅದು ಬಹು ದೊಡ್ಡದು ಅಂತನ್ನಿಸುತ್ತದೆ.

ಇದೆಲ್ಲಾ ಮಕ್ಕಳ ಕತೆಯಾಯಿತು. ನಾವು ದೊಡ್ಡವರಾದರೂ ಜೋಕಾಲಿಯಾಡುವ ಆಸೆ ಅದೆಷ್ಟಿಲ್ಲ ಹೇಳಿ?  ನಾನು ಮದುವೆಯಾಗಿ ಬಂದಾಗ ನನ್ನ ಗಂಡನ ಮನೆಯಲ್ಲಿ ದೊಡ್ಡದೊಂದು ಉಯ್ಯಾಲೆಯಿತ್ತು. ನನಗೆ ಅದರಲ್ಲಿ ಕುಳಿತುಕೊಂಡು ಜೀಕಬೇಕೆನ್ನುವ ಮಹಾದಾಸೆ. ಆದರೆ ಮನೆ ತುಂಬಾ ಜನರಿದ್ದ ಕಾರಣ ಹಿಂಜರಿಕೆಯಿಂದ ಅದರಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಲೇ ಇರಲಿಲ್ಲ. ಅದು ಚೆಂದದ ಬೆತ್ತದ ಉಯ್ಯಾಲೆ ಬೇರೆ. ಒಮ್ಮೆ ನಮ್ಮ ಮನೆಗೆಂದು ಬಂದ ಪರಿಚಿತರು ಉಯ್ಯಾಲೆ ನೋಡಿ ಆಸೆ ಪಟ್ಟು ಅದರಲ್ಲಿ ಓಡಿ ಕುಳಿತು ಎರಡು ಬಾರಿ ಜೀಕಿಕೊಂಡಿದ್ದರಷ್ಟೆ. ಈ ಕ್ಷಣಕ್ಕೇ ಕಾಯುತ್ತಿತ್ತೇನೋ ಅನ್ನುವಂತೆ ಟಪ್ಪನೆ ಹಗ್ಗ ತುಂಡಾಗಿ ಮುರಿದು ಬಿತ್ತು. ಅಯ್ಯೋ, ನಮ್ಮ ಮನೆಯ ಉಯ್ಯಾಲೆ ಮೇಲೆ ಕುಳಿತು ಹೀಗಾಗಬೇಕೇ? ತುಂಬಾ ಪೆಟ್ಟಾಯಿತೇನೋ ಅನ್ನೋ ಆತಂಕ ನಮ್ಮದಾದರೆ, ಅವರಿಗೋ ಇವರ ಮನೆಯ ಚೆಂದದ ಉಯ್ಯಾಲೆ ಮುರಿದು ಹಾಕಿದೆನೇನೋ ಅನ್ನೋ ಕಸಿವಿಸಿ.

ಎಳವೆಯಲ್ಲಿ ಉಯ್ಯಾಲೆಯ ಹಗ್ಗವನ್ನು ಸಡಿಲಗೊಳಿಸಿ, ಬಂದು ಕುಳಿತುಕೊಂಡಾಗ ದೊಪ್ಪನೆ ಬೀಳಲೆಂದು ಮಂಗಾಟ ಮಾಡಿದ ಅದೆಷ್ಟೋ ಉದಾಹರಣೆಗಳಿವೆ. ಆದರೆ ಬಾಲ್ಯದಲ್ಲಿ ಎದ್ದದ್ದು ಬಿದ್ದದ್ದಕ್ಕೆ ನೋವು ಅಪಮಾನಗಳು ಬಾಧಿಸುತ್ತಲೇ ಇರಲಿಲ್ಲ. ಆದರೆ ಬೆಳೆದು ದೊಡ್ದವರಾದಂತೆ ಅದೆಷ್ಟು ನೋವು ಅಪಮಾನ? ಅದಿರಲಿ, ಇದೆಲ್ಲಾ ನಾವು ಬಿಗಿದು ಕಟ್ಟಿದ ಉಯ್ಯಾಲೆಯ ಕಥೆಯಾಯಿತು. ಕೆಲವೊಮ್ಮೆ ನಮ್ಮ ಬದುಕೇ ಉಯ್ಯಾಲೆಯಂತೆ ಯಾರ್ಯಾರಿಂದಲೋ ಜೀಕಿಸಿಕೊಳ್ಳುತ್ತಲೇ ಅತಂತ್ರವಾಗುವುದಿಲ್ಲ? ಉಯ್ಯಾಲೆಯೆಂದರೆ ಬದುಕಿನ ರೂಪಕದಂತೆ ಅನ್ನಿಸುತ್ತದೆ. ಎಷ್ಟೇ ದುಡಿದರೂ ಹೊಟ್ಟೆಗೆ ಸಾಕಾದರೆ ಬಟ್ಟೆಗೆ ಸಾಕಾಗುವುದಿಲ್ಲ. ಒಮ್ಮೊಮ್ಮೆ ಆರಕ್ಕೇರಿದರೆ ಮತ್ತೊಮ್ಮೆ ಪರಿಸ್ಥಿತಿ ಜೀಕಿಸಿಕೊಂಡ ರಭಸಕ್ಕೆ ಅದೇ ಖುಷಿಯ ಗುಂಗಿನಲ್ಲಿರುವಾಗಲೇ ರೊಯ್ಯನೆ ತಂದು ಮೂರಕ್ಕಿಳಿಸಿ ಬಿಡುತ್ತದೆ. ಬಹುಶಃ ಬಾಲ್ಯದ ಉಯ್ಯಾಲೆ ಆಟ ಕೆಲವರ ಬದುಕಿನಲ್ಲಂತೂ ನಿರಂತರವಾಗಿರುವುದನ್ನು ಖುಷಿಯಿಂದ ಸ್ವೀಕರಿಸಬೇಕೋ, ದುಃಖಿಸಬೇಕೋ ಅಥವಾ ಸಮಚಿತ್ತದ ವೇದಾಂತವನ್ನು ಆವಾಹಿಸಿಕೊಳ್ಳಬೇಕೋ ಎಂಬ ಗೊಂದಲದಲ್ಲೇ ಬದುಕಿನ ಉಯ್ಯಾಲೆ ಆಟ ಮುಗಿದೇಬಿಟ್ಟಿರುತ್ತದೆ.

ನಮ್ಮಲ್ಲಿ ಬಹು ಪ್ರಚಲಿತದಲ್ಲಿರುವ ನಾಗರ ಪಂಚಮಿ ಹಬ್ಬದ ಮರುದಿನ ಕೆಲವು ಊರುಗಳಲ್ಲಿ ಬಯಲಲ್ಲಿ ಉಯ್ಯಾಲೆ ತೂಗುವುದೇ ವಿಶೇಷ ಕಾರ್ಯಕ್ರಮ. ಮದುವೆ ಮಾಡಿ ಕೊಟ್ಟ ಹೆಣ್ಣು ಮಕ್ಕಳಿಗಾಗಿಯೇ ಇರುವ ಆಟವಿದು. ಆ ಊರಿನ ಬಯಲಿನಲ್ಲಿ ಹೊಸದಾಗಿ ಮದುವೆಯಾಗಿ ಹೋದ ಹೆಣ್ಣು ಮಕ್ಕಳೆಲ್ಲಾ ತವರಿಗೆ ಬಂದು ಅಲ್ಲಿ ಉಯ್ಯಾಲೆ ಆಡಿ ಸಂಭ್ರಮಿಸುತ್ತಾರಂತೆ. ಬಹುಶಃ ಯಾವುದೋ ಕಟ್ಟುಪಾಡಿನಲ್ಲಿ ಇರಬಹುದಾದ ಹೆಣ್ಣುಮಗಳಿಗೆ ಆ ದಿನವೊಂದು ಬಿಡುಗಡೆಯ ಸಮಯ ಅಂತ ಪರಿಭಾವಿಸಬಹುದು. ಉಯ್ಯಾಲೆ ಕಟ್ಟಿ ಊರ ಹೆಮ್ಮಕ್ಕಳೆಲ್ಲಾ ಜತೆ ಸೇರಿ ಜೋಕಾಲಿ ಆಡುತ್ತಾ ಆ ಕ್ಷಣದಲ್ಲಿ ಮನದ ದುಗುಡಗಳನ್ನೆಲ್ಲಾ ಎತ್ತಿ ಆಗಸಕ್ಕೆಸೆದು ಎಷ್ಟು ಹಗುರವಾಗಿ ಹಾರುತ್ತಾ ಮನಸು ಹಕ್ಕಿಯಂತೆ ಆದದ್ದು. ಇಡೀ ವರುಷಕ್ಕಾಗುವಷ್ಟು ಉಲ್ಲಾಸವನ್ನು, ಚೈತನ್ಯವನ್ನು ಜೋಕಾಲಿ ಕಟ್ಟಿ ಕೊಡುತ್ತಿತ್ತು.

ವಿಷಯ ಕೋತಿಯಂತೆ ಎಲ್ಲಿಂದ ಎಲ್ಲಿಗೋ ನೆಗೆದು ಜೀಕಾಡಿತು ನೋಡಿ. ಅಂದಹಾಗೆ ನಮ್ಮ ತೋಟದ ಕಪಿ ಸಂಕುಲಗಳನ್ನ ನಮ್ಮಿಂದ ಹತೋಟಿಗೆ ತರಲಾಗದಿದ್ದರೂ ಉಯ್ಯಾಲೆ ಕಟ್ಟಿಕೊಡುವ ಅಗಾಧ ವಿಸ್ಮಯವನ್ನ ನನ್ನೆದಿರು ಬಿಚ್ಚಿಟ್ಟಿದೆ. ಈಗೀಗ ಉಯ್ಯಾಲೆ ಕಟ್ಟಿ ಜೀಕಬೇಕೆಂಬ ಆಸೆಯೇನೋ ಬೆಟ್ಟದಷ್ಟಿದೆ. ಅಡರಿಕೊಳ್ಳುವ ನೂರೆಂಟು ಕೆಲಸಗಳ ನಡುವೆ ನಗೆಪಾಟಲಿಗೀಡಬಹುದೇನೋ ಎಂಬ ದೂರದ ಶಂಕೆಯಿಂದಲೂ, ಸುತ್ತಮುತ್ತಾ ಗಟ್ಟಿಯಾದ ಮರವಿಲ್ಲದೆ, ಸಿಕ್ಕ ರೆಂಬೆ ಕೊಂಬೆಗೆ ಕಟ್ಟಿ ಎಲ್ಲಾದಾರೂ ಎಡವಟ್ಟು ಆದರೆ ಕಣ್ಣು ಮುಂದೆ ಬರುವ ಗಾಲಿ ಕುರ್ಚಿಯ ಆತಂಕದಲ್ಲಿಯೂ ಯಾವುದರ ಉಸಾಬರಿ ಬೇಡವೆಂದು ನಾನೋ ಮುಗಿಲಿಗೆ ಉಯ್ಯಾಲೆ ಕಟ್ಟಿ ಜೀಕಿಕೊಳ್ಳುತ್ತಾ ಏಕಾಂತದ ಧ್ಯಾನಕ್ಕೆ ನನ್ನೊಳಗೆ ಏರಿ ಇಳಿದು ಹಗುರವಾಗುತ್ತಿರುವೆ. ಎದೆಯೊಳಗಿಂದ ಹಕ್ಕಿಯಂತಹ ಕವಿತೆಯೊಂದು ಹೊರ ಹಾರಿ ಎಟುಕದ ಮುಗಿಲಿಗೂ ನನಗೂ ಕಾರಣವೇ ಇಲ್ಲದ ಬಂಧವೊಂದ ಬೆಸೆಯುತ್ತಿದೆ.

3 Responses to " ಮುಗಿಲಿಗೊಂದು ಉಯ್ಯಾಲೆ ಕಟ್ಟಿ

-ಸ್ಮಿತಾ ಅಮೃತರಾಜ್

"

Leave a Reply

Your email address will not be published.