ಮುಟ್ಟು…

ಪ್ರೀತಿ ಕೇವಲ ನಾಟಕೀಯ, ಹೃದಯಪೂರ್ವಕವಾದುದಲ್ಲ ಎಂದೆನಿಸಿತು. ಪ್ರೀತಿ ತೋರಿದಾಗ ಸಂತೋಷವಾಗುತ್ತಿರಲಿಲ್ಲ. ಬೇರೆಯವರ ಜೊತೆ ಕೂಡಿದಾಗ ದುಃಖವೂ ಆಗುತ್ತಿರಲಿಲ್ಲ. ಕೇವಲ ಯಾಂತ್ರಿಕ ಗೊಂಬೆಯಾದೆ. ನನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿತ್ತು. ಶಬರಿಮಲೆ ದೇವರ ಪಾದಗಳಿಗೆ ಮುಟ್ಟಿ ಕೃತಾರ್ಥಳಾಗುವುದು ಯಾವಾಗ…?

-ಕ್ಷಿತಿಜ್ ಬೀದರ್

ಸದಾ ಚಿಂತಿತಳಾಗಿರುವ ಕಲಾ ತನ್ನ ಸಹೊದ್ಯೋಗಿಗಳೊಂದಿಗೆ ನಗುತ್ತಾ ಕಾಲ ಕಳೆಯುತ್ತಿದ್ದಳಷ್ಟೆ. ಮನದ ನೋವು ಮಾತ್ರ ಯಾರಲ್ಲಿಯೂ ಹಂಚಿಕೊಂಡವಳಲ್ಲಾ. ಇತ್ತೀಚೆಗೆ ಬಹು ಚರ್ಚಿತವಾಗಿರುವ ಶಬರಿ ಮಲೆ ಪ್ರವೇಶವು ಅವಳಲ್ಲಿ ಚೂರು ಆಶಾಭಾವನೆ ಮೂಡಿಸಿದರೂ, ಅದು ತನ್ನ ಬದುಕಿನಲ್ಲಿ ಜಾರಿಗೊಳ್ಳಬಹುದೇ ಎನ್ನುವ ದ್ವಂದ್ವ, ಚಿಂತೆ ಅವಳನ್ನು ಸದಾ ಕಾಡುತ್ತಿತ್ತು..! ಜಯಮಾಲಾಳಂತೆ ಅಯ್ಯಪ್ಪಸ್ವಾಮಿಯ ದರ್ಶನಾಪೇಕ್ಷಿಯಾಗಿದ್ದಳು. ಒಮ್ಮೆ ಮುಟ್ಟಿ ನೋಡಬೇಕು… ಆದರೆ ಗಂಡ ಶಂಕರ ಮಾತ್ರ ಎಂದಿಗೂ ಒಪ್ಪದ ವ್ಯಕ್ತಿ ಎನ್ನುವ ಭಾವನೆ ತೇಲಿ ಬಂದಂತೆ ಮಂಕಾಗಿಬಿಟ್ಟಳು. ಹೆಣ್ಣಿಗೆ ಗಂಡನೇ ದೇವರಾಗಬೇಕು. ಗುಡಿಯ ದೇವರುಗಳಿಗೆ ಅವಳು ಆಸೆ ಪಡಲೇಬಾರದು ಎಂಬ ಪುರುಷ ಪ್ರಧಾನ ಸಮಾಜ ಧೋರಣೆ ಶಂಕರ್ ಹೊಂದಿದವನಾಗಿದ್ದ.

ತರಗತಿ ಕ್ಲಾಸ್ ಮುಗಿಸಿ ಮನೆಗೆ ಹೊರಡುತ್ತಿದ್ದಂತೆ ಸಹೋದ್ಯೋಗಿ ರಜನಿ ಜತೆಗೂಡಿದಳು.

“ದೇವಸ್ಥಾನ ಪ್ರವೇಶದ ಬಗ್ಗೆ ನೀನೇನು ಹೇಳ್ತಿ?”

ಪ್ರಶ್ನೆಗೆ ಕಲಾ ಕ್ಷಣಹೊತ್ತು ಮಂಕಾಗಿ ರಜನಿಯ ಮುಖವನ್ನೇ ಕೌತುಕದಲ್ಲಿ ದಿಟ್ಟಿಸಿದಳು.

“ಪುರುಷನಂತೆ ಮಹಿಳೆಯೂ ಪ್ರವೇಶಿಸಬಹುದು. ದೇವರನ್ನು ಮುಟ್ಟಬಹುದು ಎಂದು ಸುಪ್ರೀಮ್ ಕೋರ್ಟ್  ಆದೇಶ ನೀಡಿದೆಯಲ್ಲಾ… ಇನ್ನೇನು ಬೇಕು…?”

“ಈ ಮುಟ್ಟು ಗಂಡಸರಿಗೆ ಸಮಸ್ಯೆಯಾಗಿದೆಯಲ್ಲಾ…?”

“ಆದರೆ ದೇವಸ್ಥಾನದ ಸಮಿತಿಯವರು ಒಪ್ಪಬೇಕಲ್ಲಾ.. ಪುರುಷರ ಪರವಾದ ನ್ಯಾಯವೇ ಅವರಿಗೆ ಮುಖ್ಯವಾಗಿದೆ…” ಎಂದು ರಜನಿ ತನ್ನ ಮನೆ ಹಾದಿ ಹಿಡಿದಳು.

ಕಲಾ ತನ್ನ ಧೋರಣೆಗೆ ತಾನೇ ಚಕಿತಗೊಂಡು ಚಿಂತೆಯಲ್ಲಿ ಮುಳುಗಿದಳು. ಗಂಡನಿಗೆ ಸ್ತ್ರೀ ಅಧೀನಳಾಗಿರಬೇಕು ಎಂಬ ಪುರುಷ ಸಮಾಜದ ದಬ್ಬಾಳಿಕೆ ಅವಳಿಗೆ ಕೂಪಮಂಡೂಕತನವಾಗಿ ತೋರಿತು. ಅದು ಗಂಡಿನ ದೌರ್ಬಲ್ಯವಲ್ಲದೆ ಇನ್ನೇನು ಎಂದೆನಿಸಿದರೂ ವಾಸ್ತವ ಬದುಕಿನಲ್ಲಿ ಎದುರಿಸಲಾಗದ ನಿಸ್ಸಹಾಯಕತೆ ಅವಳ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿತು. ಹದಿಬದೆಯ ಧರ್ಮ ಎಂಬ ಕಟ್ಟಳೆಗೆ ಒಳಗಾಗಿದ್ದಳು. ಕೈ ತುಂಬಾ ಸಂಬಳ ಪಡೆಯುವ ಸ್ವಾವಲಂಬಿ ಹೆಣ್ಣಾಗಿದ್ದರೂ ಗೂಟಕ್ಕೆ ಕಟ್ಟಿದ ಆನೆಯಂತೆ ಗಂಡನ ಅಧೀನದಲ್ಲಿಯೇ ಜೀತದಾಳಾಗಿರುವುದರ ಅರಿವಿದ್ದರೂ ಸಿಡಿದೇಳುವ ಸ್ಥೈರ್ಯವಿಲ್ಲ. ತನ್ನದು ಇದೆಂಥ ಹೇಡಿ ಬದುಕು…!?  ಈ ನರಕ ಯಾತನೆಯಿಂದ ಪ್ರತ್ಯೇಕಗೊಳ್ಳಬೇಕು… ಹೆಂಗಸಿಗೇಕೆ ಯಾವುದೇ ಸ್ವಾತಂತ್ರ್ಯವಿಲ್ಲ… ಎಂದು ಕಲಾ ಹಲವಾರು ಬಾರಿ ತನ್ನಷ್ಟಕ್ಕೇ ಯೋಚಿಸಿದಳು. ಕಾರ್ಯತತ್ಪರಳಾಗದೆ ನಿಷ್ಕ್ರಿಯಳಾಗಿಯೇ ಉಳಿದಳು.

ಆರ್ಥಿಕವಾಗಿ ಕೈಗೊಳುವ ಕೆಲಸಕಾರ್ಯಗಳಿಗೆ ಗಂಡನ ಅನುಮತಿಯ ಅಗತ್ಯವಿರುವುದು ಇನ್ನೂ ದುರಂತವೇ…!? ಭೌತಿಕ ನೋವಿಗಿಂತ ಮಾನಸಿಕ ಹಿಂಸೆ ಅಸಹನೀಯ. ಶಂಕರನ ಸ್ವೇಚ್ಛಾಚಾರ ನಡತೆಗೆ ಬೇಸತ್ತ ಕಲಾ ತನ್ನ ಮಾನಸಿಕ ನೋವಿನ ಪರಿಯನ್ನು ಬರೆದಿಡಲು ಯೋಚಿಸುತ್ತಾ ಮನೆಗೆ ಬಂದಳು. ಕೋಣೆಯ ಬಾಗಿಲು ಹಾಕಿಕೊಂಡು ಹಾಳೆ ತೆಗೆದಿರಿಸಿದಳು. ದೇವರ ಮುಂದೆ ದೀಪ ಬೆಳಗಿಸಿದಳು. ಸದ್ಯ ಶಂಕರ ಮನೆಯಲ್ಲಿರಲಿಲ್ಲ. ಯಾರ ಮನೆಯಲ್ಲಿ ಇಸ್ಪೀಟಾಟದಲ್ಲಿ ಮಗ್ನನಾಗಿದ್ದಾನೆಯೋ…? ಮಕ್ಕಳು ಅವರವರ ಗೂಡುಗಳಲ್ಲಿ ವಿಶ್ರಮಿಸಿದ್ದರಿಂದ ಮನೆ ಪ್ರಶಾಂತವಾಗಿತ್ತು. ಯಾರ ಗಲಾಟೆಯೂ ಇದ್ದಿರಲಿಲ್ಲ.

ಸಂಬಂಧಗಳ ವ್ಯಾಮೋಹದಿಂದ ಬಿಡಿಸಿಕೊಳ್ಳುವುದೆಂತು…? ಚಿಂತೆ ಅವಳನ್ನಾವರಿಸಿಬಿಟ್ಟಿತು. ಅಷ್ಟು ಗಟ್ಟಿ ಮನಸ್ಸು ಅವಳಿಗಿರಲಿಲ್ಲ. ಸ್ವತಂತ್ರ ವ್ಯಕ್ತಿತ್ವವೇ ಇಲ್ಲದವರಿಗೆ ಸಂಕಲ್ಪ ಶಕ್ತಿ ಬರಲು ಎಲ್ಲಿ ಸಾಧ್ಯ…? ಸಂಕಲ್ಪ ಶಕ್ತಿಯಿಂದಲೇ ವ್ಯಕ್ತಿ ಸ್ವಾಭಿಮಾನಿ..! ಸ್ವಾಭಿಮಾನಕ್ಕಾಗಿ ವ್ಯಕ್ತಿಯಲ್ಲಿ ಅಹಂಕಾರವಿರಬೇಕು. ಅದು ಇಲ್ಲದಿದ್ದರೆ ವ್ಯಕ್ತಿ ಹೇಡಿ ಎನಿಸಿಕೊಳ್ಳುತ್ತಾನೆ…! ದೇವರಲ್ಲಿ ಸಮರ್ಪಣೆ ಎಂಬ ಭಾವದಲ್ಲಿ ಎಷ್ಟು ಪೂಜೆ ಮಾಡಿದರೇನು? ದೇವರು ಹೇಡಿಗಳ ಸಹಾಯಕ್ಕೆ ಬರಲಾರನಲ್ಲಾ…! ಕಲಾ ಬರೀ ಹುಸಿ ಆವೇಶದಲ್ಲಿ ಗಂಡನ ನಡತೆಗಾಗಿ ದುಃಖವನ್ನು ತನ್ನ ಮೈ ಮೇಲೆ ಎಳೆದುಕೊಂಡು ವ್ಯಥೆ ಪಡುತ್ತಿದ್ದಳಷ್ಟೇ. ಅದರ ನಿಜವಾದ ಸ್ವರೂಪದ ಕಲ್ಪನೆಯೂ ಅವಳಿಗೆ ಇದ್ದಿರಲಿಲ್ಲ. ಸಮ್ಮೋಹಿನಿಗೊಳಗಾದ ಪರಿಯಲ್ಲಿ ತನ್ನ ದುಃಖದಿಂದ ಬಿಡುಗಡೆ ಪಡೆಯುವ ಭರವಸೆಯಲ್ಲಿ ಪೆನ್ನು ಕೈಗೆ ತೆಗೆದುಕೊಂಡಳು. ಮೊದಲ ಪ್ರಯತ್ನವಾಗಿ ಕಲಾ ಬರವಣಿಗೆ ಪ್ರಾರಂಭಿಸಿದಳು.

ಕಲಾಳ ಲಿಖಿತ:

ಅಲ್ಪ ಸ್ವಲ್ಪ ಬದುಕಿದ್ದ ನಾನು ಸಂಪೂರ್ಣವಾಗಿ ನಿಸ್ತೇಜಳಾಗಿದ್ದೆ. ಗಂಡ ಶಂಕರನ ಕೃತ್ಯದಿಂದಾಗಿ ಮನಸ್ಸಿನ ಮೇಲೆ ಆಘಾತವಾಗಿ ಶಾಂತಿ ನೆಮ್ಮದಿಯನ್ನೇ ಕಳೆದುಕೊಂಡೆನಲ್ಲಾ. ನೋವು ದಿನವೂ ಮನಸ್ಸಿನಲ್ಲಿ ಧಗಧಗಿಸುತ್ತಿತ್ತು. ಬುದ್ಧಿ ತನ್ನ ಸ್ಥಿಮಿತ ಕಳೆದುಕೊಂಡು ವಿಚಾರಶೂನ್ಯವಾಗುತ್ತಾ ಬಂತು. ಕಷ್ಟದಲ್ಲಿ ಇಂಗ್ಲಿಷ್ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇರಿಕೊಂಡೆ. ಕರ್ತವ್ಯ ಪ್ರಜ್ಞೆಯೂ ತಪ್ಪಿಹೋಯಿತು. ಜೀವನದಲ್ಲಿ ಜುಗುಪ್ಸೆ ಹುಟ್ಟಿ ಕೊಂಡಿತಲ್ಲಾ…! ಅಂತರಾಳದ ನೋವನ್ನು ಸಹೋದ್ಯೋಗಿಗಳ ಮುಂದೆ ಹೇಳಿಕೊಳ್ಳಬೇಕೆಂದರೆ ಗೌರವದ ಪ್ರಶ್ನೆ…!

ಮಲತಾಯಿಯ ಅಧೀನದಲ್ಲಿ ಬೆಳೆದ ನನಗೆ ಅಪ್ಪನ ಪ್ರೀತಿಗೆ ಕೊರತೆಯಾಗಲಿಲ್ಲ. ಮಲತಾಯಿಯ ಕಾಟ ಮಾತ್ರ ತಪ್ಪಲಿಲ್ಲ. `ತಾಯಿ ಇಲ್ಲದವರಿಗೆ ಬಾಯಿ ಇಲ್ಲ’ ಎಂಬ ಮಾತಿನಂತೆ ನನ್ನ ನೋವು ಸಂಕಟ ಬಾಯಿ ಬಿಟ್ಟು ಯಾರ ಮುಂದೆಯೂ ಹೇಳಿಕೊಳ್ಳುವಂತಿರಲಿಲ್ಲ. ‘ಸುಖ ಹೇಳಬೇಕು ಜನಕ, ದುಃಖ ಹೇಳಬೇಕು ಮನಕ’ ಎನ್ನುವ ಜಾನಪದ ನುಡಿ ನನಗೆ ದಾರಿದೀಪವಾಗಿತ್ತು.

ಇಂಥ ಸಂಸ್ಕೃತಿ ನೀಡಿ ಬೆಳೆಸಿದ ನನ್ನ ಅಪ್ಪನ ರಕ್ಷಾ ಕವಚದಲ್ಲಿ ನನಗೆ ದುಃಖವೆಲ್ಲಾ ಹಗುರ ಹೂವಿನಂತಾಗಿತ್ತು. ಅಮ್ಮ ಮನಸ್ಸಿಗೆ ನೋವಾಗುವಂತೆ ಸಿಡಿದೆದ್ದು ಬೈಯ್ಯುತ್ತಿದ್ದರೂ ಮೌನವಾಗಿ ಸ್ವೀಕರಿಸುತ್ತಿದ್ದೆ. ಮಲತಾಯಿ ಅಂದರೆ ಕೇಳಬೇಕೇ…! ಅಪ್ಪನ ಮುಂದೆ ಚಾಡಿ ಮಾತು ಹೇಳಿ ಹೊಡೆಸಲು ನೋಡುತ್ತಿದ್ದಳು. ಆದರೆ ಅಪ್ಪ “ಹ್ಞಂ…” ಎಂದಷ್ಟೆ ಹೇಳಿ ನನ್ನೆಡೆಗೆ ಕರುಣೆಯಿಂದ ನೋಡಿ ಮೌನವಾಗುತ್ತಿದ್ದರು. ನನ್ನ ನಿಷ್ಕಲ್ಮಶ ಭಾವದ ಮುಗ್ಧ ವ್ಯಕ್ತಿತ್ವವನ್ನು ಅರ್ಥೈಸಿಕೊಂಡಿದ್ದರು.

ಓದಿನಲ್ಲಿ ನಾನು ಚುರುಕಾಗಿದ್ದೆ. ಅಪ್ಪನಿಗೆ ನನ್ನ ಓದಿನ ಮೇಲೆ ಅಭಿಮಾನವಿತ್ತು. ಕೇಳಿದ್ದನ್ನೆಲ್ಲಾ ಪ್ರೀತಿಯಲ್ಲಿ ಕೊಡಿಸುತ್ತಿದ್ದರು. 7ನೇ ಕ್ಲಾಸ್ ನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾದೆ. ಅಪ್ಪನಿಗಾದ ಖುಶಿ ಅಷ್ಟಿಷ್ಟಲ್ಲ. ಇಡೀ ಶಿಕ್ಷಕ ವೃಂದಕ್ಕೆ ಪಾರ್ಟಿ ಕೊಡಿಸಿದರು. ನನಗೆ ಶಾಲಾವತಿಯಿಂದ 500 ರೂ. ಬಹುಮಾನ ಬಂತು. ಅಷ್ಟರಲ್ಲಿ ನಾನು ಋತುಮತಿಯಾದೆ. ಋತುಮತಿಯಾದವರು ಮನೆ ಹೊರಗೆ ಓಡಾಡುವಂತಿರಲಿಲ್ಲ. ಶಾಲೆಯ ಓದು ನನಗೆ ಕನಸಿನ ಮಾತಾಯಿತು. ಅಪ್ಪ ಬೇಗ ನನ್ನ ಮದುವೆ ಮಾಡಲು ಮುಂದಾದರು.

ನಾನು ಹೇಳಿಕೊಳ್ಳುವಷ್ಟು ಸುಂದರಿಯಾಗಿರಲಿಲ್ಲ. ದುಂಡು ಮುಖ, ಅಗಲ ಹಣೆ, ನೀಟಾದ ಮೂಗು, ಬಣ್ಣ ಕಪ್ಪಾದರೂ ಲಕ್ಷಣವಾಗಿದ್ದೆ. ಕಾಂತಿ ಸೂಸುವ ಕಣ್ಣು, ಸದಾ ಹಸನ್ಮುಖಿ. ಅಪ್ಪ ಕೊನೆಗೂ ಹುಡುಗನನ್ನು ಹುಡುಕಿ ಮದುವೆ ನಿಗದಿಗೊಳಿಸಿದರು. ನೀಲಮ್ನಳ್ಳಿ ನಂಜುಂಡಯ್ಯನವರ ಮಗ ಶಂಕರ್ ಥೇಟ್ ಶಂಕರ್ ನಾಗ್ ಅವರಂತಿದ್ದರು. ದುಂಡು ಮುಖದ ವಿಶಾಲ ಹಣೆ ಬಟ್ಟಲುಗಣ್ಣುಗಳ ಸಂಪಿಗೆಯಂಥ ಮೂಗಿನ ಬಿಳಿ ಜಾಪಳ ಬಣ್ಣದ ಹುಡುಗನನ್ನು ನೋಡಿದ ಯಾವ ಹುಡುಗಿಯ ಮನಸ್ಸು ಬಯಸದೇ ಇರುತ್ತಿರಲಿಲ್ಲ. ಮುದ್ದಾದ ಮುಖದ ಕಣ್ಣಲ್ಲಿ ಕಾಮವು ತುಂಬಿ ತುಳುಕಾಡುತ್ತಿತ್ತು.

ಮದುವೆಯಲ್ಲಿ ನಮ್ಮ ಜೋಡಿ ನೋಡಿದವರು, “ಈ ಹುಡುಗ ಇವಳನ್ನು ಹೇಗೆ ಒಪ್ಪಿದ…? ರೂಪದಲ್ಲಿ ಅಜಗಜಾಂತರವಿದೆ. ಹುಡುಗನ ತಲೆ ಕೆಟ್ಟಿರಬೇಕು. ಲಕ್ಷಣವಾದ ಬಿಳಿ ಗಜ್ಜರಿಯಂಥ ಹುಡುಗಿಯನ್ನು ಯಾರು ಕೊಡ್ತಾ ಇರಲಿಲ್ಲವೇ…?” ಎಂದು ತಮ್ಮಲ್ಲಿಯೇ ಮಾತಾಡಿಕೊಂಡಿರುವುದುಂಟು. ಅಪ್ಪ ಒಣ ಪ್ರತಿಷ್ಠೆಗೆ ಒಳಗಾದರೇನೋ. ಹಳ್ಳಿಯಲ್ಲಿಯೇ ಗೌಡಕಿ ಮಾಡುವ ಪಟ್ಟದಿಂದ ಮಗಳು ಗೌಡ್ತಿಯಾಗಿ ಮೆರೆಯುತ್ತಾಳೆ ಎಂದು ಕೊಂಡರೇನೋ… ಹಾಳೂರಿಗೆ ಇದ್ದವನೇ ಗೌಡ ಎನ್ನುವುದು ಅವರಿಗೆ ತಿಳಿದಿರಲಿಲ್ಲ. ಹುಡುಗನಿಗೆ ಮನಸ್ಸಿಲ್ಲದಿದ್ದರೂ `ನೌಕರಿ ಕೊಡಿಸುವ, ಚಿನ್ನದ ಸರ ಕೊಡುವ’ ಆಸೆ ತೋರಿಸಿ ಸುಳ್ಳು ನೆಪದಲ್ಲಿ ಮದುವೆ ಕಾರ್ಯ ಮುಗಿಸಿದರು.

ಮದುವೆಯಾಗಿ ಗಂಡನ ಮನೆಗೆ ಕಾಲಿರಿಸಿದೆ. ಬದುಕಿನ ಬಗ್ಗೆ ನನಗೆ ತಿಳಿವಳಿಕೆಯೇ ಇರಲಿಲ್ಲ. ಗಂಡ ಅನ್ನೋ ಖುಷಿಯೂ ಇರಲಿಲ್ಲ. ಮದುವೆಯ ಹೊಸತರಲ್ಲಿ ತುಳಜಾಪುರಕ್ಕೆ ನನ್ನನ್ನು ಕರೆದುಕೊಂಡು ಹೋದರು. ತುಂಬಾ ಪ್ರೀತಿಯಿಂದ ಮನದಾಳದ ನೋವನ್ನು ತೋಡಿಕೊಂಡರು. ಅವರಪ್ಪನಿಗೂ ಇವರಿಗೂ ಆಗುವುದಿಲ್ಲವೆನ್ನುವುದು ಆಗಲೇ ನನಗೆ ತಿಳಿಯಿತು. ಇಬ್ಬರೇ ಏಕಾಂತದಲ್ಲಿ ಓಲಾಡಿದೆವು. ನಾನಿಲ್ಲದಿದ್ದರೆ ಒಂದು ಕ್ಷಣವು ಇರಲಾರರು ಎನ್ನುವಂತಾದರು. ಕ್ಷಣ ಕಾಣಿಸದಿದ್ದರೂ ತಳಮಳಿಸುತ್ತಿದ್ದರು. ಹೆಣ್ಣಿಗೆ ಇನ್ನೇನು ಬೇಕು…?

ತಿಂಗಳು ಕಳೆದಂತೆ ತವರು ಮನೆಗೆ ಬಂದೆ. ಅಪ್ಪನಿಗಾದ ಸಂತೋಷ ಅಷ್ಟಿಷ್ಟಲ್ಲ. “ಗೌಡ್ತಿ ಬಂದಿದ್ದಾಳೆ” ಎಂದು ಬಂದವರಿಗೆಲ್ಲ ಹೇಳಿಕೊಂಡು ಖುಷಿಪಟ್ಟರು. ಒಂದು ರೀತಿಯ ಧನ್ಯತಾ ಭಾವ ಅವರಲ್ಲಿ ತುಂಬಿತ್ತು. ಮೂರನೇ ದಿನಕ್ಕೆ ಮಾವ ಕರೆಯಲು ಬಂದರು. ಅಪ್ಪ ಮಂಕಾದರು. ಮಲತಾಯಿಗೆ ಯಾವುದು ಮುಖ್ಯವಾಗಿರಲಿಲ್ಲ. ಹೊರಡುವ ಸಿದ್ಧತೆ ನಡೆಯಿತು. `ತಾಯಿ ಇಲ್ಲದ ತಬ್ಬಲಿ’ ಎಂದು ಓಣಿಯ ಹೆಂಗಳೆಯರೆಲ್ಲಾ ಸೆರಗಿನ ಮರೆಯಲ್ಲಿ ಕಣ್ಣೀರು ಹಾಕುತ್ತಾ ಊರಾಚೆಯ ಅಗಸೆ ಬಾಗಿಲಿಗೆ ಬಂದು ಬೀಳ್ಕೊಟ್ಟರು. ಮಹಿಳಾ ಸಮೂಹವನ್ನು ನೋಡಿ ಮಾವ ಬೆರಗಾಗಿದ್ದರು. ಬಸ್ಸು ಊರು ದಾಟುತ್ತಿದ್ದಂತೆಯೇ ನನ್ನ ಹೃದಯದ ಕಟ್ಟೆ ಒಡೆದು ದುಃಖ ಉಮ್ಮಳಿಸಿ ಬಂತು. ಅಪ್ಪನ ಪ್ರೀತಿ ನೆನೆದು ಮುಳುಮುಳು ಅತ್ತೆ, ಮಾವನಿಗೂ ತಿಳಿಯದಂತೆ.

ಬಸ್ಸು ಮಂಗಲಗಿಗೆ ಬಂತು. ನೀಲಮ್ನಳ್ಳಿ ಇನ್ನು 5 ಕಿ.ಮೀ. ದೂರದಲ್ಲಿತ್ತು. ಅಲ್ಲಿಯೇ ಬಸ್ಸು ಹತ್ತಿದರು ಶಂಕರ! ಮಾವರಿಗೆ ದಿಗಿಲೋ ದಿಗಿಲು. `ಎಲಾ ಇವನ, ಒಂದು ದಿನ ತಡವಾಗಿದ್ದಕ್ಕೆ ಅರ್ಧ ದಾರಿಗೆ ಬಂದು ಬಿಟ್ಟಿದಾನಲ್ಲಾ…!” ಎಂದು ವಿಸ್ಮಿತರಾಗಿ ಮನದಲ್ಲಿ ನಕ್ಕಿರಲೂಬಹುದು.

ನಾನಿಲ್ಲದ ಮನೆ ಅವರಿಗೆ ಬಿಕೋ ಎನ್ನುತ್ತಿತ್ತು. ಆ ದಿನ ಸಂಜೆ ನನ್ನ ಜೊತೆ ಮಾತಾಡದೆ ಪೀಡಿಸಿದರು. ಅವರಿಗೆ ವಿರಹ ವೇದನೆ ನೀಡಿರುವುದಕ್ಕೆ ಹುಸಿ ಮುನಿಸು…

*

ಪ್ರಿಯ ಓದುಗರೇ, ಬರವಣಿಗೆಯ ಮಧ್ಯೆ ಬಂದಿರುವುದಕ್ಕೆ ಕ್ಷಮಿಸಿ. ಹೆಂಡತಿ ತವರಿಗೆ ಹೋದಾಗ ಗಂಡನಿಗೆ ಹೊಸದರಲ್ಲಿ ವಿರಹ ವೇದನೆ ಸಹಜವೇ. ನಂಬಿಕೆ ವಿಶ್ವಾಸ ತಳಹದಿಯ ಮೇಲೆಯೇ ಗಂಡ ಹೆಂಡತಿ ಸಂಬಂಧ ನಿಂತಿರುತ್ತದೆ ಎನ್ನುವುದು ಎಲ್ಲರೂ ತಿಳಿದ ವಿಷಯವೇ. ಹೆಣ್ಣಿಗೆ ಶೀಲ ಮುಖ್ಯವಾಗಿರುವಂತೆ ಗಂಡಿಗೂ ದೈಹಿಕ ಪಾವಿತ್ಯ್ರವೂ ಮುಖ್ಯವಾಗಿರುತ್ತದೆ. ದೈಹಿಕ ಮಿಲನವೇ ಆತ್ಮ ಸಂಯೋಗಕ್ಕೆ ಕಾರಣವಾಗುತ್ತದೆ. ಭಾವನೆಗಳು ಮಲಿನವಾಗದೆ ದೈಹಿಕವಾಗಿ ಶುದ್ಧವಾಗಿ ಉಳಿಯುವುದರಿಂದಲೇ ಗಂಡ ಹೆಂಡತಿ ಸಂಬಂಧ ಭದ್ರವಾಗಿ ನೆಲೆಯೂರಲು ಸಾಧ್ಯವಾಗಿರುತ್ತದೆ. ಶರೀರದ ಅತಿ ಕಾವಿಗೆ ಹಸ್ತ ಮೈಥುನ ಕೈಗೊಳ್ಳಬಹುದೇ ಹೊರತು ಕಾಮಕ್ಕಾಗಿ ಅನ್ಯ ಸ್ತ್ರೀ ಸಂಗ ಗಂಡನಾದವನು ಯಾವತ್ತೂ ಮಾಡಕೂಡದು. ಪರಸ್ತ್ರೀಯನ್ನು ಮುಟ್ಟುವ ಮೊದಲು ಸಾವಿರ ಸಲ ಯೋಚಿಸಬೇಕು. ಗಂಡಸರು ಪ್ರಾಥಮಿಕವಾಗಿ ತಿಳಿದುಕೊಳ್ಳಬೇಕಾದ ಬದುಕಿನ ಪಾಠ…! ನಾನು ಹೆಚ್ಚಿಗೆ ಹೇಳಬಾರದು. ಈಗ ನೀವು ಕಲಾಳ ಲಿಖಿತ ಓದು ಮುಂದುವರೆಸಬಹುದು…

*

ಕಲಾಳ ಲಿಖಿತ:

ನನ್ನನ್ನು ಅತಿಯಾಗಿ ಪ್ರೀತಿಸುವ ಇಂಥ ಗಂಡ ಸಿಕ್ಕ ಮೇಲೆ ನನಗಿನ್ನೇನು ಬೇಕು…?

“ಸಾರಿ, ಮುಂದಿನ ಸಲ ಬೇಗ ಬರ್ತೀನಿ. ಕಾಯಿಸೋದಿಲ್ಲ..” ಎಂದೆ.

“ನೋಡು ಚಿನ್ನಾ, ನೀನು ನನ್ನ ಬಳಿಯೇ ಇರಬೇಕು. ನೀನಿಲ್ಲದಿದ್ದರೆ ನನಗೆ ಊಟ ಬೇಡ, ನಿದ್ರೆಯಂತು ಸುಳಿಯುವುದೇ ಇಲ್ಲ. ನನಗೆ ವಿರಹ ವೇದನೆ ತಾಳಿಕೊಳ್ಳೋಕೆ ಆಗುವುದೇ ಇಲ್ಲ. ನಿನ್ನ ಗೈರುಹಾಜರಿಯಲ್ಲಿ ಏನು ಮಾಡಿದೆ ಗೊತ್ತಾ…? ನನ್ನ ಹಳೇ ಫ್ರೈಂಡ್ ಹತ್ತಿರ ಹೋಗಿದ್ದೆ…”

ನನಗೆ ವಿಚಿತ್ರವಾಯಿತು. ಇದೇನು ಈ ವ್ಯಕ್ತಿ ಹೀಗೆ..? ತಲೆ ತಿರುಗಿ ಬಿಟ್ಟಿತು. ಎಂಜಲು ವ್ಯಕ್ತಿ…! ಶುದ್ಧವಾಗಿಲ್ಲ. ಕೇವಲ ಕಾಮತೃಪ್ತಿಯೇ ಮುಖ್ಯವಾಯಿತಲ್ಲಾ! ಸಂಬಂಧಗಳಿಗೆ ಅರ್ಥವಿಲ್ಲವೇ…? ನನ್ನ ಯೋನಿಯನ್ನು ಅಪವಿತ್ರಗೊಳಿಸಿಬಿಟ್ಟನಲ್ಲಾ… ದೇವರೇ ಇದೇನಾಯಿತು…! ಹೇಸಿಕೆಯಾಯಿತು, ಆದರೂ ತೋರಗೊಡದೆ ನಗುತ್ತಾ ಹೇಳಿದೆ:

“ಹೌದಾ, ತುಂಬಾ ಒಳ್ಳೆಯದಾಯಿತು. ಇನ್ನೆರಡು ದಿನ ಹಾಗೆಯೇ ಮಾಡಿದರಾಗುತ್ತಿರಲಿಲ್ಲವೇ…!?” ಮೇಲಷ್ಟೇ ಹಾಸ್ಯವಾಗಿ ನುಡಿದೆ. ಆದರೆ ಹೃದಯಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಒಳಗಿನ ಲಾವಾರಸ ಶಾಂತಗೊಳಿಸುವ ಬಗೆ ಎಂತು…? ತಿಳಿಯಲಿಲ್ಲ.

ತನ್ನ ಹೆಂಡತಿ ಯಾವುದಕ್ಕೂ ಅಡ್ಡಿಪಡಿಸಲಾರಳು ಎನ್ನುವುದು ಅವರಿಗೆ ಖಚಿತವಾಯಿತು. ನನ್ನ ಸ್ವಭಾವವೇ ಹಾಗೆ. ಮಲತಾಯಿಯ ದಬ್ಬಾಳಿಕೆಯಲ್ಲಿ ಬೆಳೆದ ನನಗೆ  ಪ್ರತಿಭಟಿಸುವ ಶಕ್ತಿಯೇ ಕಳೆದು ಹೋಗಿತ್ತು.

ಅವರ ಗೆಳೆಯ ಶೇಖರನ ಮನೆಯಲ್ಲಿ ಎರಡು ದಿವಸಕ್ಕೊಮ್ಮೆ ತಮ್ಮ ಹಳೆಯ ಪ್ರೇಯಸಿಯರೊಂದಿಗೆ ಕೂಡಲು ಪ್ರಾರಂಭಿಸಿದರು. ಬಿಚ್ಚು ಮನಸ್ಸಿನಿಂದ ಅದನ್ನು ಬಂದು ಹೇಳುತ್ತಿದ್ದರು ಕೂಡಾ. ಅಷ್ಟೇ ಪ್ರೀತಿಯಿಂದ ಮುತ್ತಿಟ್ಟು ರಮಿಸುತ್ತಿದ್ದರು. ನಾನು ಯಾರ ಮುಂದೆಯೂ ಬಾಯಿ ಬಿಡುತ್ತಿರಲಿಲ್ಲ. ಶಂಕರ ಮೇಲೂ ಕೋಪಿಸಿಕೊಳ್ಳುತ್ತಿರಲಿಲ್ಲ. ನನಗೆ ಬಂದುದನ್ನು ಭೋಗಿಸಲೇಬೇಕು ಎಂದು ಮೂಕ ಹಕ್ಕಿಯಾದೆ.

ಅಂಗಡಿ ಸಾಮಾನು ತರಲು ಬೀದರ್ಹೋಗುತ್ತಿದ್ದವರು ರಾತ್ರಿ ಅಲ್ಲಿಂದ ಒಂದೊಂದು ಹೆಣ್ಣನ್ನು ತರಲು ಶುರು ಮಾಡಿದರು. ಅವಳನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದೆ. `ನಕ್ಕರೆ ನಗಲೆವ್ವ/ ನಗೆ ಮುಖದ ಕ್ಯಾದಿಗಿ/ ಅವಳೊಂದು ಘಳಿಗೆ ಮುಡಿಯಲಿ…’ ಎಂದು ತುಂಬು ಹೃದಯದಿಂದ “ಅತಿಥಿ ದೇವೋ ಭವ” ಭಾವದಲ್ಲಿ ಅಡುಗೆ ಮಾಡಿ ಊಟಕ್ಕಿಟ್ಟು ಅಂಗಡಿ ರೂಮಲ್ಲೇ ಹಾಸಿಗೆ ಸಿದ್ಧಪಡಿಸಿ ಕೊಡುತ್ತಿದ್ದೆ. ಆ ದಿನ ಅವರಿಗೆ ಹಬ್ಬದ ಊಟ. ರಾತ್ರಿಯಿಡೀ ಅವಳೊಂದಿಗೆ ಸರಸ ಸಲ್ಲಾಪ. ನಾನು ಈಚೆ ರೂಮಲ್ಲಿ ಬಿದ್ದಿರುತ್ತಿದ್ದೆ. ‘ನನ್ನ ದೇವರೇ, ಇದೇನು ಮಾಡಿದೆ… ಇನ್ನು ಏನೇನು ನೋಡುವ ಭಾಗ್ಯ ಬರೆದಿದ್ದಿಯಪ್ಪಾ…’ ದಿಂಬು ತೊಯ್ದು ಒಣಗುತ್ತಿತ್ತು. ಮಧ್ಯರಾತ್ರಿ ಸುಮಾರಿಗೆ ನನ್ನನ್ನು ಎಚ್ಚರಿಸಿ ಒಳಗಿನಿಂದಲೇ “ಒಲೆ ಮೇಲೆ ನೀರಿಡು, ಬಿಸಿಯಾಗಲಿ. ಬಟನ್ ಹಾಕು” ಎಂದು ಹೇಳಿ ಮತ್ತೆ ಅವಳೊಂದಿಗೆ ರತಿಕ್ರೀಡೆಯಲ್ಲಿ ತೊಡಗುತ್ತಿದ್ದರು. ನಾನು ನೀರು ಕಾಯಿಸಿ ಭಾಂಡೆ ತಿಕ್ಕಿ ಏನಾದರೂ ತಿಂಡಿ ಮಾಡಲು ತೊಡಗುತ್ತಿದ್ದೆ. 4:30 ಸುಮಾರಿಗೆ ಬಾಗಿಲು ತೆರೆದು ಬಚ್ಚಲಿಗೆ ಬಂದು ಇಬ್ಬರೂ ಸ್ನಾನ ಮಾಡುತ್ತಿದ್ದರು. ತಿಂಡಿ ತಿಂದು ಚಹಾ ಕುಡಿದು ಮನೆ ಹೊರಗಾಗುತ್ತಿರುವಾಗ ಆಝಾನ ಕೂಗು ಕೇಳಿ ಬರುತ್ತಿತ್ತು. ಆಕೆಯನ್ನು ಅಪರಿಚಿತ ಸ್ಥಳದಲ್ಲಿ ಬಸ್ಸು ಹತ್ತಿಸಿ ಮನೆಗೆ ಬಂದಾಗ ಬೆಳಗು ಹರಿಯುತ್ತಿತ್ತು.

ಯಥಾ ರೀತಿ ಏನೂ ನಡೆದಿಲ್ಲ ಎನ್ನುವಂತೆ ಬೆಳಗ್ಗೆ ಮುದ್ದು ಮುದ್ದಾಗಿ ನನ್ನೊಡನೆ ಮಾತಾಡುತ್ತಿದ್ದರು. ಮುತ್ತು ಕೊಡುತ್ತಿದ್ದರು.

“ನಿನ್ನ ಬಿಟ್ಟು ನನಗೆ ಮನಸ್ಸೇ ಬರಲ್ಲ ಕಲಾ… ನೀನೇ ನನ್ನ ಪ್ರಾಣ..” ಎಂದು ರಮಿಸುತ್ತಿದ್ದರು. ಇದೆಂಥ ನಡತೆ…!? ಹೇಸಿಗೆಯಾಗುತ್ತಿತ್ತು. ಸತ್ತುಬಿಡಬೇಕು ಎಂದೆನಿಸುತ್ತಿತ್ತು.

ಈ ಮಧ್ಯೆ ಅಪ್ಪ ಮಗನ ನಡುವೆ ಜಗಳ ಬಂತು. ಮಗನ ಕೆಟ್ಟ ನಡತೆಯ ವಾಸನೆ ಬಡೆಯಿತೇನೋ.. ಮಗನನ್ನು ಮನೆಯಾಚೆ ತಳ್ಳಿದರು. ಮನೆ ಹೊರಗಿನ ಜಗಲಿ ಕಟ್ಟೆಯೇ ನಮಗೆ ಮನೆಯಾಯಿತು. ಅದಕ್ಕೆ ಹುಲ್ಲಿನ ಛಾವಣಿ ಮಾಡಿಕೊಂಡು ಇದ್ದುದ್ದರಲ್ಲಿಯೇ ಅಂಗಡಿ ಇಟ್ಟುಕೊಂಡು ಉಪಜೀವನ ನಡೆಸತೊಡಗಿದೆವು. ಒಂದು ಹೆಣ್ಣು ಮಗುವಾಯಿತು. ಅಪ್ಪನ ಮನೆಯಿಂದ ವರದಕ್ಷಿಣೆ ತರಲು ನನಗೆ ಒತ್ತಾಯಿಸಿದರು.

“ನೌಕರಿ ಕೊಡಿಸುತ್ತೇನಂತಿದ್ದನಲ್ಲಾ… ಎಲ್ಲಿ..? ಬಂಗಾರದ ಸರವು ಇಲ್ಲ.. ನಿಮ್ಮಪ್ಪ ಮೋಸಗಾರ…” ಎಂದು ಸಿಟ್ಟು ಕಾರುತ್ತಿದ್ದರು. ಒಮ್ಮೆ ಮನೆಗೆ ಬಂದಾಗ “ಹಂದಿಗಳು ನೀವು. ನಮ್ಮ ಮನೆಗೆ ಇನ್ಮೇಲೆ ಬರಬೇಡಿ. ಬೇಶರ್ಮ…” ಎಂದು ಆದರಿಸದೇ ಹೊರಗಟ್ಟಿದರು. ನಾನು ಏನೂ ಮಾತಾಡದ ಸ್ಥಿತಿಯಲ್ಲಿದ್ದೆ. ಅಪ್ಪನ ಮುಖ ನೋಡಲಾಗದೇ ಒಳಗೆ ಓಡಿ ಬಂದು ದೇವರಿಗೆ ಬಯ್ಯೂತ್ತಾ ಕಣ್ಣೀರು ಧಾರೆ ಹರಿಸಿದೆ. ಕಾಲ ಕಳೆದಂತೆ ಒಂದು ಹೊತ್ತಿನ ಗಂಜಿಗೂ ತೊಂದರೆ ಅನುಭವಿಸುವ ಸ್ಥಿತಿ ಬಂತು. ಕನ್ನಡ ಪಠ್ಯದ ಓದಿನತ್ತ ಗಮನ ಹರಿಸಿದೆ. ಇವರಿಗೆ ತಿಳಿಯದಂತೆ ಪದವಿ ಗಳಿಸಿದೆ. ಟಪಾಲಿನಲ್ಲಿ ಕೋರ್ಸ್ ಪಠ್ಯ ಬರುತ್ತಿರುವುದು ಶಂಕರನಿಗೆ ತಿಳಿಯಲೇ ಇಲ್ಲ. ಸ್ನೇಹಿತೆ ರಜನಿಯಿಂದ ಖಾಲಿ ಹುದ್ದೆಯ ಮಾಹಿತಿ ಪಡೆದು ಇಂಗ್ಲಿಷ್ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾದೆ. ಮುಟ್ಟು ನಿಂತಿತು.

ಅಂಗಡಿ ಮುಚ್ಚುವ ಕಾಲ ಬಂತು. “ಕಂಡಕ್ಟರ್ ನೌಕರಿಗಾಗಿ ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳುತ್ತಾ ಎಲ್ಲಿಗೆ ಹೋಗ್ತಾ ಇದ್ದರೋ ತಿಳಿಯುತ್ತಿರಲಿಲ್ಲ. ತುಂಬು ಬಸುರಿ. ಯಾವ ಗಳಿಗೆಯಲ್ಲಿ ಏನಾಗುವುದೋ ಎಂಬ ಆತಂಕ. ಅವರ ಗೆಳೆಯ ಶೇಖರನೇ ಮನೆಯ ಆಗುಹೋಗುಗಳಿಗೆ ಜವಾಬ್ದಾರನಾಗಿದ್ದ.

ರಾತ್ರಿ 11 ಗಂಟೆಗೆ ಹೆರಿಗೆ ನೋವು ಶುರುವಾಯಿತು. ಶಂಕರನ ಪತ್ತೆಯೇ ಇಲ್ಲ. ಶೇಖರನ ಮನೆಯಲ್ಲಿಯೇ ಹೆರಿಗೆಯಾಯಿತು. ಮತ್ತೆ ಹೆಣ್ಣು ಮಗು…! ಮಗುವಿಗೆ ಶೇಖರಣ್ಣನೇ ನೀರು ಹೊಯ್ಯುತ್ತಿರುವಾಗ ಶಂಕರನ ಆಗಮನವಾಯಿತು. ತನ್ನ ಪಾಡಿಗೆ ತಾನು ಊಟ ಮಾಡಿ ಮಲಗಿಬಿಟ್ಟರು.

ಕೆಲಸವಿಲ್ಲದೆ ಹೀಗೆಯೇ ದಿನ ಕಳೆದರು. ವರ್ಷಗಳು ಉರುಳಿದವು. ನೀಲಮ್ನಳ್ಳಿಯ ಮಲ್ಲಣ್ಣ ಎಂಬುವವರು ಬಸಲಾಪೂರಕ್ಕೆ ಮನೆ ಅಳಿಯನಾಗಿ ಹೋಗಿದ್ದರು. ಈತನ ಹೆಂಡತಿ ಕಮಲಾ ಆಗಾಗ ಗಂಡನ ತಮ್ಮಂದಿರ ಕುಶಲ ವಿಚಾರಿಸಲು ನೀಲಮ್ನಳ್ಳಿಗೆ ಬರುತ್ತಿದ್ದಳು. ಬಂದಾಗ ಶಂಕರನ ಹತ್ತಿರ ಬಂದು ಮಾತಾಡಿ ಹೋಗುತ್ತಿದ್ದಳು. ಆ ದಿನ ಬೆಳಗ್ಗೆ 9 ಗಂಟೆಗೆ ಬಂದವಳು ಅಂಗಡಿಯಲ್ಲಿ ಶಂಕರನೊಂದಿಗೆ ಮಾತಾಡುತ್ತಿದ್ದಳು. ನಾನು ಅಂಗಡಿಯ ಒಳಕೋಣೆಯಲ್ಲಿದ್ದೆ. ಇದ್ದಕ್ಕಿದ್ದಂತೆ ನಡುವಿನ ಬಾಗಿಲು ಮುಚ್ಚಿಕೊಂಡಿತು. ಬೆಳಗ್ಗೆಯೇ ಒಳಗೆ ಇಬ್ಬರ ರತಿಕ್ರೀಡೆ ಶುರುವಾಯಿತು. ‘ಕಾಮಾತುರನಾಂ ನ ಭಯ ನ ಲಜ್ಜಂ’ ಎಂಬಂತೆ ಅವರಿಗೆ ಭಯ ಭೀತಿ ನಾಚಿಕೆ ಯಾವುದೂ ಇರಲಿಲ್ಲ. ಕಲಾ ವಿರೋಧಿಸುವುದಿಲ್ಲ ಎಂದು ಅವರಿಗೆಲ್ಲಾ ತಿಳಿಸಿರಬೇಕು. ಯಾವ ಸೂಳೆಯೂ ಯಾವಾಗ ಬೇಕಾದರೂ ಬಂದು ಕಾಮದಾಹ ತೀರಿಸಿಕೊಂಡು ಹೋಗಬಹುದಾದ ಮನೆ ಕೋಠಿ ತಾಣವಾದಂತಾಯಿತು. ಅಂಥ ಸಮಯದಲ್ಲಿ ನನಗೆ “ನೀನು ಸಂಡಾಸ್ ಗೆ ಹೋಗು” ಎಂದು ಕಣ್ಸನ್ನೆ ಮಾಡುತ್ತಿದ್ದರು. ಅವರ ಸಮಾಗಮ ಮುಗಿಯುವವರೆಗೂ ನಾನು ಹಳ್ಳಿಯ ಆ ಸಂಡಾಸಗೇರಿಯಲ್ಲಿ ಹೊಲಸು ವಾಸನೆಯ ಮಧ್ಯವೇ ಕಳೆಯಬೇಕಾಗುತ್ತಿತ್ತು. ಇದು ನಾನು ನನ್ನ ಪತಿ ದೇವರ ಸೇವೆಗೆ ಸಹಕರಿಸಿದ ಸತಿಧರ್ಮದ ರೀತಿ!

ಇನ್ನೊಂದು ದಿನ ಕಮಲಾ ರಾತ್ರಿ 12 ಗಂಟೆಗೆ ಮನೆಗೆ ಬಂದಳು. ಒಮ್ಮೆಗೆ ಭುಸುಕ್ ಎಂದು ಒಳ ನುಗ್ಗಿದಳು. ನನ್ನೆದೆ ಧಸಕ್ಕೆಂದಿತು. ಶಂಕರನಿಗಾಗಿ ಬಂದವಳನ್ನು ಈಕೆಯ ಮೈದುನರು ನೋಡಿದರೆ…? ಇಬ್ಬರನ್ನು ಹಿಡಿದು ಹೊಡೆಯದೆ ಬಿಡುತ್ತಾರೆಯೇ…? ಕೈ ಕಾಲು ನಡುಗಲು ಶುರುವಾಯಿತು.

“ಶಂಕರಗೌಡ್ರು ಎಲ್ಲಿದ್ದಾರೀ…?” ಎಂದಳು.

“ಇರು ಕಮಲಾ, ಕರೆದುಕೊಂಡು ಬರುತ್ತೀನಿ..” ಎಂದವಳೇ ಮಧ್ಯೆರಾತ್ರಿಯಲ್ಲಿಯೇ ಕುಲಕರ್ಣಿ ಮನೆಗೆ ಹೋದೆ. ಆಟದಲ್ಲಿ ಮಗ್ನರಾಗಿದ್ದರು. ಯಾರೋ ನನ್ನೆಡೆಗೆ ನೋಡಿದರು.

“ಧೊರಿ, ನಿಮ್ಮ ಮನೆಯವರು” ಎಂದು ಸನ್ನೆ ಮಾಡಿದರು. ಅವರಿಗೆ ಅರ್ಥವಾಯಿತು. ನಾನು ಮನೆಗೆ ವಾಪಸ್ಸಾದೆ. ಆಟ ಮುಗಿಸಿ ಮನೆಗೆ ಬಂದು ಅಂಗಡಿಯಲ್ಲಿ ಪವಡಿಸಿದ ಅವಳೊಂದಿಗೆ ಸೇರಿಕೊಂಡರು. “ಇಷ್ಟೊತ್ತಿನಲ್ಲಿ ಯಾಕೆ ಬಂದೀ..!” ಎನ್ನುತ್ತಾ ಅವಳ ಮೈ ಕೈ ಸವರಿ ಮುದ್ದಿಸಿದರು. ರಾಜಾರೋಷವಾಗಿ ಅವರ ಜೊತೆ ರತಿಕ್ರೀಡೆಯಾಡಿದಳು. ಆಲಿಂಗನದ ಸ್ವರ್ಗ ಸುಖ ಎರಡು ಗಂಟೆವರೆಗೆ ಕಾಮ ತಣಿಸಿಕೊಂಡು ಮೇಲೆದ್ದಳು. ರಾತ್ರಿ ಎರಡು ಗಂಟೆಗೆ ಅವಳನ್ನು ಕಳುಹಿಸಿಕೊಟ್ಟರು. ಅವಳು ಹೋದ ನಂತರ ಮತ್ತೆ ನನ್ನ ಹತ್ತಿರ ಬಂದು ತಲೆ ಸವರಿ ಮುತ್ತಿನ ಮಳೆಗರೆದಾಗ `ಹೃದಯ’ ಅನ್ನೋ ವಸ್ತುವಿನ ಬೆಲೆ ಏನು ಎಂದು ಪ್ರಶ್ನಿಸುವಂತಾಯಿತು.

ಈ ಪ್ರೀತಿ ಕೇವಲ ನಾಟಕೀಯ, ಹೃದಯಪೂರ್ವಕವಾದುದಲ್ಲ ಎಂದೆನಿಸಿತು. ಪ್ರೀತಿ ತೋರಿದಾಗ ಸಂತೋಷವಾಗುತ್ತಿರಲಿಲ್ಲ. ಬೇರೆಯವರ ಜೊತೆ ಕೂಡಿದಾಗ ದುಃಖವೂ ಆಗುತ್ತಿರಲಿಲ್ಲ. ಕೇವಲ ಯಾಂತ್ರಿಕ ಗೊಂಬೆಯಾದೆ. ನನ್ನ ಅಸ್ತಿತ್ವಕ್ಕೆ ಬೆಲೆಯೇ ಇಲ್ಲದಂತಾಗಿತ್ತು. ಶಬರಿಮಲೆ ದೇವರ ಪಾದಗಳಿಗೆ ಮುಟ್ಟಿ ಕೃತಾರ್ಥಳಾಗುವುದು ಯಾವಾಗ…? ಮುಟ್ಟು ಇಲ್ಲದ ಸ್ಥಿತಿಗೆ ಬಲಿಯಾಗಿ ಬದುಕಿನಲ್ಲಿ ವಿಶ್ರಾಂತಿಯೇ ಕಳೆದು ಹೋಯಿತಲ್ಲಾ… ಎಲ್ಲವೂ ಮುಗಿದುಹೋಯಿತೇ…?

ನಾನೀಗ ಒಂಬತ್ತು ಮಕ್ಕಳ ತಾಯಿ. ಎಲ್ಲಾ ಹೆಣ್ಣುಮಕ್ಕಳೇ…! ಗಂಡು ಮಗುವಿನ ಹೋರಾಟದಲ್ಲಿ ನನ್ನ ಶರೀರ ಕುಗ್ಗಿ ಹೋಗಿದೆ. ಜೀವಂತ ಶವವಾಗಿಬಿಟ್ಟಿದ್ದೇನೆ. ಅವರ ರತಿಕ್ರೀಡೆಗೆ ಸ್ಪಂದಿಸದ ಶರೀರ ಇದ್ದರೆಷ್ಟು ಬಿಟ್ಟರೆಷ್ಟು…? ಗಂಡು ಮಗುವಿನ ಗುರಿ ಮುಟ್ಟಲು ಸಾಧ್ಯವೇ ಇಲ್ಲ… ನನಗೆ ಅಂತ್ಯ ಬೇಕು…

*

ಪ್ರಿಯ ಓದುಗರೇ ಕ್ಷಮಿಸಿ. ಮತ್ತೆ ಮಧ್ಯೆ ಪ್ರವೇಶಿಸಿಬಿಟ್ಟೆ. ಈ ಕಲಾಳಿಗೇನಾಗಿದೆ…? ಒಳ್ಳೆ ನೌಕರಿ ಇದ್ದರೂ ಅಂತ್ಯ ಬಯಸುವುದೇಕೆ…? ಇದೆಂಥ ಮಾನಸಿಕ ರೋಗ…? ಅವಳ ಚಲನವಲನ ಗಮನಿಸಿದರೆ ಅನುಮಾನವಾಗುತ್ತದೆ..! ಗಂಡು ಮಗುವಿಗೆ ಅವಳು ಹೇಗೆ ಕಾರಣೀಕರ್ತಳು…? ಗಂಡನ `ವೈ’ ಕ್ರೋಮೊಜೋಮ್ ಮುಖ್ಯವಲ್ಲವೇ…? ವಿಜ್ಞಾನ ತಿಳಿದವಳಾಗಿಯೂ ಆರೋಪಿಸಿಕೊಳ್ಳುವ ಬಗೆ ಅಚ್ಚರಿ ಮೂಡಿಸುವುದಿಲ್ಲವೇ…?

ಇದ್ದಕ್ಕಿದ್ದಂತೆ ಕಲಾ ಲಿಖಿತ ನಿಲ್ಲಿಸಿದಳು. ಲೇಖನಿ ಬಿಸಾಡಿ ಮನೆ ಹೊರಗೆ ಬಂದು ಆಕಾಶ ನೋಡಿದಳು. ಯಾಕೆ…? ದೇವರನ್ನು ನೆನೆದಳೇ..? ಲೈಂಗಿಕ ಕ್ರಿಯೆಗೆ ತನ್ನ ಶರೀರ ನಿರುಪಯುಕ್ತವಾಯಿತಲ್ಲೋ…? ನನ್ನ ಶಂಕರ… ನನನ್ನ ಪ್ರೀತಿಯ ದೊರೆ… ನನ್ನನ್ನು ಕ್ಷಮಿಸು.. ಗಂಡು ಮಗುವನ್ನು ಹೆರದವಳಾದೆ… ಎಂದು ದುಃಖಿಸಿದಳು. ಇದೆಂಥ ಬಯಕೆ…! ಮನೆಯ ಪಕ್ಕದಲ್ಲಿರುವ ನೆಲ ಸಮದ ಹಳೆಯ ಬಾವಿಯ ಹತ್ತಿರ ಬಂದಳು. ಹಿಂದು ಮುಂದು ಯೋಚಿಸದೇ ಬಾವಿಗೆ ಹಾರಿಯೇ ಬಿಟ್ಟಳು. ಇದೆಂಥ ಕೃತ್ಯ…? ನೇರವಾಗಿ ಬಿದ್ದ ಪ್ರಯುಕ್ತ ಭುಜಗಳಿಗೆ ಸ್ವಲ್ಪ ಮಾತ್ರ ತರಚಿಕೊಂಡಿತು. ಆಳದ ಬಾವಿಗೆ ಬಿದ್ದಂತೆ ಫಸ್ ಎಂಬ ಸದ್ದು ಆಳ ಗುಹೆಯಿಂದ ಎಂಬಂತೆ ಕೇಳಿಬಂತು. ನಿಶ್ಶಬ್ದ ರಾತ್ರಿ…! ಹಳ್ಳಿಗಳಲ್ಲಿ ಬೇಗ ಮಲಗುವುದು ಸಾಮಾನ್ಯ ರೂಡಿ.

ಕಲಾ ಬಾವಿಗೆ ಬಿದ್ದು ಅರ್ಧ ಗಂಟೆ ಕಳೆದರೂ ನೀರಿನ ಗುಳ್ಳೆಯ, ಟುಳುಕಾಡುವ ಸದ್ದು ಕೇಳಿಸಲೇ ಇಲ್ಲ. ಒಳಗೇನಾಯಿತು…? ಪ್ರಜ್ಞೆ ತಪ್ಪಿದ ಕಲಾ ನಿಧಾನಕ್ಕೆ ಕಣ್ಣು ಬಿಟ್ಟಳು. ಗವ್ವನೆ ಕವಿದ ಕತ್ತಲು. ತಾನೆಲ್ಲಿರುವೆ ಎನ್ನುವ ಪ್ರಜ್ಞೆ ಬರಲು ಸುಮಾರು ಹೊತ್ತು ಹಿಡಿಯಿತು. ಕಾಲು ಜೋಮು ಹಿಡಿದಿರುವುದು ಅನುಭವಕ್ಕೆ ಬಂದು ಅಲ್ಲಾಡಿಸಲು ನೋಡಿದಳು. ಮೊಳಕಾಲುವರೆಗೆ ಎರಡು ಕಾಲುಗಳು ಕೆಸರಲ್ಲಿ ಹೂತು ಹೋಗಿದ್ದವು. ಅಂದರೆ ತಾನಿನ್ನು ಸತ್ತಿಲ್ಲವೇ…?

ಮನಸ್ಸು ಜಾಗೃತಗೊಂಡಿತು. ಬಾವಿಯಲ್ಲಿ ನೀರಿದ್ದರೆ ಸಾಯುತ್ತಿದ್ದಳೇನೋ…! ಕಣ್ಣ ಸುತ್ತಲು ಕವಿದ ಕತ್ತಲೆ. ತಾನೇಕೆ ಸಾಯಬೇಕಾಗಿತ್ತು…? ಶಂಕರನಿಗಾಗಿಯೇ…? ತನ್ನ ನಿಃಶಕ್ತ ದೇಹಕ್ಕಾಗಿಯೇ…? ತಾನು ಸತ್ತರೆ ಮಕ್ಕಳ ಗತಿ…? ಅವಳಿಗೆ ಒಂಟಿತನದ ಭಯವಾಗಿ ಮೇಲೆ ನೋಡಿದಳು. ಬಾವಿಯಷ್ಟೇ ಕಾಣುವ ಆಕಾಶದಲ್ಲಿ ನಕ್ಷತ್ರಗಳ ಮಿನುಗುವಿಕೆ ಕಂಡಳು. ಏನೋ ಆಶಾ ಭಾವನೆ ಮೂಡಿದಂತೆ “ಜ್ಯೋತಿ… ಜ್ಯೋತಿ” ಎಂದು ಮಗಳನ್ನು ಕೂಗಿದಳು. ಯಾರ ಪ್ರತಿಕ್ರಿಯೆಯೂ ಕಾಣದೆ ನಿಶ್ಯಕ್ತಳಾದಳು. ಕೆಸರಲ್ಲಿ ಹೂತ ಕಾಲನ್ನು ಅಲುಗಾಡಿಸಿ ಸಡಿಲುಪಡಿಸಿದಳು. ಕಲಾ ಮೊದಲ ಬಾರಿಗೆ ಮೃತ್ಯುವನ್ನು ಮುಟ್ಟಿ ಬಂದ ಅನುಭವ ಪಡೆದಳು. ಬದುಕಿನ ನಿಜವಾದ ಅರ್ಥ ಅವಳ ಅರಿವಿಗೆ ಬಂತು.

“ಅಮ್ಮ… ಅಮ್ಮಾ… ಎಲ್ಲಿದ್ದಿಯಮ್ಮಾ…?” ದೂರದಲ್ಲಿ ಮಾತಾಡಿದ ಧ್ವನಿ ಕೇಳಿಸಿಕೊಂಡಳು. ಕಲಾ ಜೋರಾಗಿ “ಜ್ಯೋತೀ…” ಎಂದು ಪುನಃ ಧ್ವನಿ ಎತ್ತರಿಸಿ ಕೂಗಿದಳು. ಬಾವಿಯಿಂದ ಬರುತ್ತಿರುವ ಧ್ವನಿ ಕೇಳಿ ಓಡಿ ಬಂದು ನೋಡಿ ಮಗಳು ಬೊಬ್ಬೆ ಹಾಕಿದಳು. ಅಕ್ಕಪಕ್ಕದ ಜನ ಎದ್ದು ಹಗ್ಗ ಬುಟ್ಟಿ ತಂದರು. ಟಾರ್ಚ್ ಬೆಳಕು ಹರಿಸಿ ಕೆಳಗಿಳಿದು ಬುಟ್ಟಿಯಲ್ಲಿ ಕೂಡಿಸಿ ಮೇಲೆಳೆದರು.

“ನಿದ್ದೆಗಣ್ಣಲ್ಲಿ ಮೂತ್ರಕ್ಕೆ ಹೋದಾಗ ಮುಗ್ಗರಿಸಿ ಬಿದ್ದಳಂತೆ…” ಎಂಬ ಮಾತೇ ಊರಲ್ಲಿ ಹರಡಿತು. ನಿಜವಾದ ಕಾರಣ ಮಾತ್ರ ಯಾರಿಗೂ ತಿಳಿಯಲಿಲ್ಲ.

ಕಲಾ ಮಾತ್ರ ಜ್ಞಾನೋದಯವಾದಂತೆ, “ನನ್ನ ಹೆಣ್ಣು ಮಕ್ಕಳು ಗಂಡಿಗಿಂತ ಕಡಿಮೆ ಇಲ್ಲ. ಗಂಡು ಯಾಕೆ ಬೇಕು…? ಹೆಣ್ಣುಮಕ್ಕಳೇ ನನ್ನ ಅಮ್ಮಂದಿರು.. ಅವರೇ ನನ್ನ ಶಬರಿಮಲೆ…” ಎಂದು ವಿಚಿತ್ರವಾಗಿ  ತನ್ನಷ್ಟಕ್ಕೇ ತಾನು ಬಡಬಡಿಸತೊಡಗಿದಳು.

ಓದುಗರ ಮತ್ತು ಕತೆಗಾರರ ಬಹುಕಾಲದ ಬೇಡಿಕೆಯಂತೆ ಸಮಾಜಮುಖಿ ಪ್ರತೀ ತಿಂಗಳು ಒಂದು ಸಣ್ಣಕತೆ ಹೊತ್ತು ತರುತ್ತಿದೆ. ಹೆಸರಾಂತರ ಜೊತೆಗೆ ಉದಯೋನ್ಮುಖ ಕತೆಗಾರರಿಗೂ ಸಮಾನ ಅವಕಾಶ. ಯಾವ ಮಾಧ್ಯಮದಲ್ಲೂ ಪ್ರಕಟವಾಗದ 2000 ಪದಮಿತಿಯ ಕತೆಗಳನ್ನು ನೀವೂ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ, ಕಿರುಪರಿಚಯ ಇರಲಿ.

samajamukhi2017@gmail.com

Leave a Reply

Your email address will not be published.