ಮುಳುಗುತ್ತಿರುವ ಧೋನಿ! ಬದಲಿ ಅಂಬಿಗನ ಶೋಧ

ಸದ್ಯದ ಮಟ್ಟಿಗೆ ಬಿಸಿಸಿಐಗೆ ಎಂ.ಎಸ್.ಧೋನಿ ಸೇವೆ ಸಾಕು ಎನಿಸಿರಬಹುದು. ಆದರೆ, ಮಾಜಿ ನಾಯಕ ಸೀಮಿತ ಓವರ್ ಪಂದ್ಯಗಳಲ್ಲಿ ನಿರ್ವಹಿಸಬೇಕಾದ ಹಲವು ಜವಾಬ್ದಾರಿಗಳು ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ಅವರ ಅಗತ್ಯ ಭಾರತಕ್ಕೆ ಇದೆ.

ಕೆ.ವಿ.ಪರಮೇಶ್

ಭಾರತ ಕ್ರಿಕೆಟ್ ತಂಡಕ್ಕೆ ಆಗಾಗ್ಗೆ ಕಾಡುವ ದೊಡ್ಡ ಸಮಸ್ಯೆ ವಿಕೆಟ್ ಕೀಪರ್ ಅರ್ಥಾತ್ ಗೂಟರಕ್ಷಕ. ದಶಕಕ್ಕೂ ಮೀರಿ ಕ್ರಿಕೆಟ್ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಮಹೇಂದ್ರಸಿಂಗ್ ಧೋನಿ ಇದೀಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಹಾಗಾಗಿ ಇವರಿಗೆ ಪರ್ಯಾಯ ಯಾರು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದ ಶ್ರೇಷ್ಠ ನಾಯಕರಲ್ಲಿ ಮುಂಚೂಣಿಯಲ್ಲಿರುವವರು ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ. ಆದರೆ ಅವರ ಕ್ರಿಕೆಟ್ ವೃತ್ತಿ ಜೀವನದ ಭವಿಷ್ಯ ಇನ್ನೂ ನಿಗೂಢವಾಗಿದೆ. ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ್ದ ರಾಷ್ಟ್ರೀಯ ತಂಡದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಮಾಜಿ ನಾಯಕ ಎಂ.ಎಸ್.ಧೋನಿ ಅವರನ್ನು ಕೈಬಿಟ್ಟಿದ್ದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಇದರ ನಡುವೆ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಹಸಿಬಿಸಿ ಚರ್ಚೆಗಳು ಮಾತ್ರ ದೊಡ್ಡ ಮಟ್ಟದಲ್ಲಿ ನಡೆಯುತ್ತಲೇ ಇವೆ.

ಸದ್ಯದ ಮಟ್ಟಿಗೆ ಇದೆಲ್ಲವನ್ನೂ ಗಮನಿಸುತ್ತಿದ್ದರೆ ಬಿಸಿಸಿಐಗೆ ಎಂ.ಎಸ್.ಧೋನಿ ಸೇವೆ ಸಾಕು ಎನಿಸಿರಬಹುದು. ಆದರೆ, ಮಾಜಿ ನಾಯಕ ಸೀಮಿತ ಓವರ್‍ಗಳ ಪಂದ್ಯಗಳಲ್ಲಿ ನಿರ್ವಹಿಸಬೇಕಾದ ಹಲವು ಜವಾಬ್ದಾರಿಗಳು ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ಅವರ ಅಗತ್ಯ ಭಾರತಕ್ಕೆ ಇದೆ ಎಂದರೆ ಅದು ಅತಿಶಯೋಕ್ತಿಯಲ್ಲ. ಇದರ ನಡುವೆ ತಮ್ಮ ಮುಂದಿನ ನಡೆ ಬಗ್ಗೆ ಮಾಜಿ ನಾಯಕ ಮೌನ ವಹಿಸಿರುವುದು ಮಾತ್ರ ಕಲ್ಪಿತ ಸುದ್ದಿಗಳಿಗೆ ದಾರಿ ಮಾಡಿಕೊಟ್ಟಿದೆ. ಒಮ್ಮೆ ಧೋನಿ ತನ್ನ ಮನಸ್ಸಿನಲ್ಲಿರುವ

ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನಕ್ಕೆ ಸಮರ್ಥ ಎಂದು ಬಿಂಬಿತವಾಗಿದ್ದ ಯುವಕ ರಿಷಭ್ ಪಂತ್ ಅವರು ಇನ್ನೂ ವಿಕೆಟ್ ಕೀಪಿಂಗ್‍ನಲ್ಲಿ ಪರಿಪಕ್ವತೆ ಸಾಧಿಸಿಲ್ಲ. ಅಷ್ಠೆ ಅಲ್ಲ ಅವರಿಂದ ಬ್ಯಾಟಿಂಗ್‍ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ಇನ್ನೂ ಮೂಡಿಬಂದಿಲ್ಲ. ಬಹುತೇಕ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ವೇಳೆ ಪಂತ್ ಎಸಗಿದ್ದ ಎಡವಟ್ಟುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಗುರಿಯಾಗಿದ್ದರು. ನಿರ್ಣಾಯಕ ಸಂದರ್ಭಗಳಲ್ಲಿ ಎಸಗುವ ತಪ್ಪುಗಳಿಂದ ತಂಡ ಭಾರೀ ಬೆಲೆ ತೆರಬೇಕಾದ ಸನ್ನಿವೇಶಗಳಿಗೂ ಪಂತ್ ಕಾರಣವಾಗಿರುವುದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಬೇಕಾಗಿದೆ.

ಇತ್ತೀಚೆಗೆ ಮುಕ್ತಾಯವಾದ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ರಿಷಭ್ ಪಂತ್ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಬದಲಿ ಆಟಗಾರನಾಗಿ ಬಂದ ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಮಾಡಿ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಎಂ.ಎಸ್.ಧೋನಿ ಸ್ಥಾನಕ್ಕೆ ಕೆ.ಎಲ್.ರಾಹುಲ್ ಸೂಕ್ತ ಎನ್ನಬಹುದಾದರೂ ಅಂತಿಮ ಅಭಿಪ್ರಾಯಕ್ಕೆ ಬರಲು ಇನ್ನೂ ಸಾಕಷ್ಟು ಸಮಯ ಅಗತ್ಯವಿದೆ ಎನ್ನುವುದು ನಿಸ್ಸಂಶಯ.

2020ರ ಅಕ್ಟೋಬರ್‍ನಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡಕ್ಕೆ ಅಗತ್ಯವಿದೆ. ಧೋನಿ ತಂಡದಲ್ಲಿದ್ದರೆ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡಕ್ಕೆ ಆನೆಬಲ ಸಿಕ್ಕಂತಾಗುತ್ತದೆ. ಅಷ್ಠೆ ಅಲ್ಲ 2007ರ ಐಸಿಸಿ ಟಿ-20 ವಿಶ್ವಕಪ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ತಂದುಕೊಟ್ಟ ರಾಂಚಿ ಆಟಗಾರನಿಗೆ ಗೌರವದ ವಿದಾಯ ನೀಡಲು ಕೂಡ ಈ ಟೂರ್ನಿ ಸೂಕ್ತ ವೇದಿಕೆಯಾಗಬಹುದು. ಇದು ಸಾಕಾರವಾದರೆ ಧೋನಿ ಭಾರತೀಯ ಕ್ರಿಕೆಟ್‍ಗೆ ಸಲ್ಲಿಸಿರುವ ಅಮೂಲ್ಯ ಸೇವೆಗೆ ಬೆಲೆ ಸಿಕ್ಕಂತಾಗುತ್ತದೆ.

ಧೋನಿ ಕ್ರಿಕೆಟ್ ಬದುಕಿನ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಮೇರು ಆಟಗಾರ ಧೋನಿ ತನ್ನ ಕ್ರೀಡಾಜೀವನದ ಬಗ್ಗೆ ನಿರ್ದಿಷ್ಟ ನಿಲುವು ಪ್ರಕಟಿಸುವ ಅಗತ್ಯ, ಅನಿವಾರ್ಯ ಎರಡೂ ಇದೆ.

2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಂಡ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಎಂ.ಎಸ್. ಧೋನಿ ತಮ್ಮ ಕೋರಿಕೆಯಂತೆ ಎರಡು ತಿಂಗಳ ಕಾಲ ಸೇನೆಯ ಜತೆ ಕಾಲ ಕಳೆದಿದ್ದರು. ಬಳಿಕ ಭಾರತ ತಂಡಕ್ಕೆ ಮರಳಲೇ ಇಲ್ಲ. ವಿಶ್ವಕಪ್ ಬಳಿಕ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಿಗೆ ಧೋನಿಯನ್ನು ಆಯ್ಕೆ ಮಾಡಿರಲಿಲ್ಲ. ಹಾಗಾಗಿ ಕುಟುಂಬದ ಜತೆ ಹಾಯಾಗಿದ್ದ ಧೋನಿ ಇದೀಗ ರಾಷ್ಟ್ರೀಯ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿರುವುದು ಮಹಾ(ಹಿ) ಪತನಕ್ಕೆ ಕಾರಣವಾಗಬಹುದು ಎನ್ನಬಹುದು.

ಭಾರತ ತಂಡಕ್ಕೆ ಹಿಂತಿರುಗಲು ಧೋನಿಗೆ ಆಸಕ್ತಿ ಇದೆಯೋ ಅಥವಾ ಇಲ್ಲವೋ ಎಂಬುದು ನಿಗೂಢವಾಗಿದೆ. ಧೋನಿ ನಿವೃತ್ತಿ ಅಂಚಿನಲ್ಲಿದ್ದು, ಸದ್ಯ ಫಾರ್ಮ್ ಕೂಡ ಕಳೆದುಕೊಂಡಿರುವುದರಿಂದ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಹಿಂದೇಟು ಹಾಕುತ್ತಿದೆಯೇ ಎಂಬ ಅನುಮಾನಗಳು ಸಹಜವಾಗಿಯೇ ಕಾಡುತ್ತಿವೆ. ಆದರೆ, ಧೋನಿ ಕ್ರಿಕೆಟ್ ಬದುಕಿನ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಮೇರು ಆಟಗಾರ ಧೋನಿ ತನ್ನ ಕ್ರೀಡಾಜೀವನದ ಬಗ್ಗೆ ನಿರ್ದಿಷ್ಟ ನಿಲುವು ಪ್ರಕಟಿಸುವ ಅಗತ್ಯ, ಅನಿವಾರ್ಯ ಎರಡೂ ಇದೆ.

ಇಲ್ಲಿ ಉಲ್ಲೇಖಿಸಬಹುದಾದ ಮತ್ತೊಂದು ಪ್ರಮುಖಾಂಶ ಎಂದರೆ ಆಟಗಾರರು ನಿವೃತ್ತಿಗೇಕೆ ಮೀನಮೇಷ ಎಣಿಸುತ್ತಾರೆ ಎಂಬುದು. ಬೆರಳೆಣಿಕೆ ಆಟಗಾರರನ್ನು ಬಿಟ್ಟರೆ ಉಳಿದಂತೆ ಬಹುತೇಕರು ದೂಡಿಸಲ್ಪಟ್ಟು ತಂಡದಿಂದ ಹೊರ ಹೋಗಿದ್ದೇ ಹೆಚ್ಚು. ಅಷ್ಠೆ ಏಕೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಕೂಡಾ ಇದಕ್ಕೆ ಹೊರತಾಗಲಿಲ್ಲ ಎನ್ನುವುದು ಗಮನೀಯ ಸಂಗತಿ. ಪ್ರಸ್ತುತ ಬಿಸಿಸಿಐ ಅಧ್ಯಕ್ಷ ಮಾಜಿ ನಾಯಕ ಸೌರವ್ ಗಂಗೂಲಿ ಮಾತ್ರ ಇದಕ್ಕೆ ವ್ಯತಿರಿಕ್ತ ಎನಿಸಿದವರು. ಕನ್ನಡಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಕೂಡಾ ಸಭ್ಯ ಸಮಯದಲ್ಲೇ ವೃತ್ತಿಬದುಕಿಗೆ ವಿದಾಯ ಘೋಷಿಸಿದವರು.

Leave a Reply

Your email address will not be published.