ಮೂರು ವರುಷ ನೂರು ಕನಸು

2017ನೇ ಇಸವಿ, ಡಿಸೆಂಬರ್ 25ನೇ ತಾರೀಖು ಬೆಂಗಳೂರಿನ ಗಾಂಧೀ ಭವನದಲ್ಲಿ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು. ಇನ್ಫೋಸಿಸ್ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪ್ರಸಿದ್ಧ ಸಾಹಿತಿ ಅರವಿಂದ ಮಾಲಗತ್ತಿ ವೇದಿಕೆ ಮೇಲಿದ್ದರು. ಮೂರು ವಿಭಿನ್ನ ಕ್ಷೇತ್ರಗಳ ದಿಗ್ಗಜರ ಸಮಾಗಮ ಆಗಿದ್ದರೂ ಅಲ್ಲಿ ಆಡಂಬರಕ್ಕೆ ಆಸ್ಪದವಿರಲಿಲ್ಲ; ಅರ್ಥವಂತಿಕೆ ತುಂಬಿ ತುಳುಕುತ್ತಿತ್ತು, ಸಮಾರಂಭದ ಆಶಯಗಳಿಗೆ ಮಿಡಿಯುವ ನೂರಾರು ಮುಕ್ತ ಮನಸ್ಸುಗಳು ನೆರೆದಿದ್ದವು.

ಅಂದು ಕ್ರಿಸ್ಮಸ್ ಹಬ್ಬ ಬೇರೆ. ಪ್ರೇಕ್ಷಕರ ಮಧ್ಯದಿಂದ ನಡೆದುಬಂದ ಪುಟ್ಟ ಸಾಂತಾ ಕ್ಲಾಸ್ ಅತಿಥಿಗಳ ಎದುರು ಒಂದು ಉಡುಗೊರೆ ಕಟ್ಟು ಹಿಡಿದ. ಸಭಾಂಗಣದ ತುಂಬ ಕುತೂಹಲದ ಕಲರವ. ಹತ್ತಿ ಬಟ್ಟೆಯ ಒಡಲಲ್ಲಿ ಅಡಗಿಕುಳಿತಿದ್ದ ಉಡುಗೊರೆಯನ್ನು ಬಿಡಿಸಿ ಬೆಳಕಿಗೆ ಹಿಡಿದರು ಅತಿಥಿಗಳು. ಅದು ‘ಸಮಾಜಮುಖಿ’ ಮೊದಲ ಸಂಚಿಕೆ ಲೋಕಾರ್ಪಣೆಗೊಂಡ ಘಳಿಗೆ.

ಇದೀಗ ನಿಮ್ಮ ಕೈಯಲ್ಲಿರುವ ಜನೆವರಿ ಸಂಚಿಕೆಯೊಂದಿಗೆ ಸಮಾಜಮುಖಿ ನಿರಂತರ ಪ್ರಕಟಣೆಯ ಮೂರು ವರ್ಷಗಳನ್ನು ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿರಿಸಿದೆ. ಒಂದು ಪತ್ರಿಕೆಗೆ ಮೂರು ವರ್ಷಗಳ ನಡಿಗೆ ಅಷ್ಟೇನೂ ದೀರ್ಘವಾದುದಲ್ಲ. ಆದರೆ ಈ ಅವಧಿ ನಮ್ಮ ಸಮಾಜಮುಖೀ ಚಿಂತನೆ-ವರ್ತನೆಗೆ ನಿಖರತೆ ತಂದುಕೊಳ್ಳಲು ಮತ್ತು ಮಾಧ್ಯಮಲೋಕದ ಈ ವಿಶಿಷ್ಟ ಪ್ರಯೋಗಕ್ಕೆ ಓದುಗರ ಸ್ಪಂದನೆ ಖಚಿತಪಡಿಸಿಕೊಳ್ಳಲು ಸಿಕ್ಕ ಅವಕಾಶವಂತೂ ಹೌದು.

ಈ ನಡುವೆ ಪತ್ರಿಕೆಯ ಸಂಪಾದಕೀಯ ಅಂತಃಸತ್ವ ಹೆಚ್ಚಿಸುವ ಸತತ ಪ್ರಯತ್ನವನ್ನೂ ನಿರಂತರ ಜಾರಿಯಲ್ಲಿಟ್ಟಿದ್ದೇವೆ. ಆ ಮೂಲಕ ಓದುಗರ ಮತ್ತು ನಮ್ಮ ಬೌದ್ಧಿಕ ನೆಲೆಯನ್ನು ಉದ್ದೀಪಿಸುವ, ವಿಸ್ತರಿಸುವ ಉದ್ದೇಶ ನಮ್ಮದು. ‘ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ’ ಪ್ರತಿಪಾದಿಸುವ ನಮ್ಮ ನಿಲುವು ಅಭಾದಿತ. ಇದನ್ನು ಪೂರ್ಣವಾಗಿ ಮನಗಂಡಿರುವ ಎಲ್ಲಾ ವಯೋಮಾನದ, ವಿವಿಧ ಹಿನ್ನೆಲೆಯ ನಿಮ್ಮಂತಹ ಗಂಭೀರ ಓದುಗರ ವಲಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಿರುವುದು ಈ ಸಣ್ಣ ಕಾಲಾವಧಿಯ ದೊಡ್ಡ ಸಾಧನೆ. ಪತ್ರಿಕೆಯ ಗುಣಮಟ್ಟ, ಸ್ವರೂಪ, ಒತ್ತಡ, ನಿರೀಕ್ಷೆಗಳಿಗೆ ಒಗ್ಗಿಕೊಂಡಿರುವ ನಮ್ಮ ಲೇಖಕರು, ವಿಷಯ ತಜ್ಞರು, ವಿಶ್ಲೇಷಕರು, ಅನುವಾದಕರು ಒಂದು ರೀತಿಯಲ್ಲಿ ಸಂಪಾದಕೀಯ ವಿಭಾಗದ ಪಾಲಿಗೆ ಸದಾ ಸನ್ನದ್ಧ ಪಡೆ.

ಇಷ್ಟಾಗಿಯೂ ನಾವು ಕೆಲವೆಡೆ ಎಡವಿರುವುದನ್ನು ಮುಲಾಜಿಲ್ಲದೇ ಒಪ್ಪಿಕೊಳ್ಳುತ್ತೇವೆ. ಮೊದಲನೆಯದಾಗಿ ನಮ್ಮ ಪ್ರಸರಣ ವಿಭಾಗವನ್ನು ಇನ್ನಷ್ಟು ದಕ್ಷತೆ, ಕ್ರಿಯಾಶೀಲತೆಯಿಂದ ಮುನ್ನುಗ್ಗಿಸಬೇಕಿದೆ. ಇತ್ತೀಚೆಗೆ ಸಮಾಜಮುಖಿಯ ಸಂಪರ್ಕಕ್ಕೆ ಬಂದ ಅನೇಕರು ಹೇಳುವುದು: ‘ಅಯ್ಯೋ… ನಮಗೆ ಇಂತಹದೊಂದು ಸಂಗ್ರಾಹ್ಯ ಪತ್ರಿಕೆ ಪ್ರಕಟವಾಗುತ್ತಿರುವುದು ಗೊತ್ತೇ ಇರಲಿಲ್ಲ!’. ಇಂತಹ ಹೊಸ ಓದುಗರ ಹಾಗೂ ಭವಿಷ್ಯದಲ್ಲಿ ಪತ್ರಿಕೆಗೆ ಒಲಿಯುವವರ ಸಂಖ್ಯೆ ಕಡಿಮೆಯೇನಲ್ಲ. ಇವರನ್ನು ಈವರೆಗೂ ತಲುಪಲು ಸಾಧ್ಯವಾಗದ ನಮ್ಮ ಅಸಹಾಯಕತೆ, ದೌರ್ಬಲ್ಯ ಅಥವಾ ವೈಫಲ್ಯದೆಡೆ ಗಮನಹರಿಸಬೇಕಿದೆ. ಸಂಭಾವ್ಯ ಓದುಗರನ್ನು ಮುಟ್ಟುವ ನಿಟ್ಟಿನಲ್ಲಿ ಹಾಲಿ ಓದುಗರಾದ ನೀವೂ ನೆರವಾಗಬಹುದು. ಈ ನಿಮ್ಮ ಪತ್ರಿಕೆಯನ್ನು ನಿಮ್ಮ ಸಂಪರ್ಕದಲ್ಲಿರುವ ಇನ್ನೊಬ್ಬ ಆಸಕ್ತರಿಗೆ ಪರಿಚಯಿಸಲು ಸಾಧ್ಯವಾದರೆ ಪ್ರಸಾರ ತನ್ನಷ್ಟಕ್ಕೆ ತಾನೇ ಹಿಗ್ಗುತ್ತದೆ. ಇಷ್ಟು ಕಷ್ಟಪಟ್ಟು ರೂಪಿಸುವ ಪತ್ರಿಕೆಯ ಆಶಯಗಳು ಇನ್ನಷ್ಟು ಓದುರನ್ನು ತಲುಪಲಿ ಎಂಬುದಷ್ಟೇ ನಮ್ಮ ಕಳಕಳಿ.

ಹೊಸ ವರ್ಷದ ಮೊದಲ ಸಂಚಿಕೆಯನ್ನು ನಿಮ್ಮೆಲ್ಲರ ಕನಸುಗಳಿಗೆ ಕಣ್ಣಾಗುವಂತೆ ರೂಪಿಸಲು ಪ್ರಯತ್ನಿಸಿದ್ದೇವೆ. ನಿರಾಶಾದಾಯಕ ನಿನ್ನೆ ಮರೆಯಾಗಿ ನಿಮ್ಮೆಲ್ಲರ ಕಾಗದದ ಮೇಲಿನ ನಾಳೆಯ ಆಶಯಗಳು ನಿಜದಲ್ಲಿ ಜೀವತಳೆಯಲೆಂದು ಹಾರೈಸುವೆ.

Leave a Reply

Your email address will not be published.