ಮೂವರು ವೈದ್ಯರು ಎಂಟು ಪ್ರಶ್ನೆಗಳು!

ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಪಡೆಯಲು ‘ಸಮಾಜಮುಖಿ’ ಮೂವರು ತಜ್ಞ ವೈದ್ಯರನ್ನು ಸಂದರ್ಶಿಸಿತು. ತಮ್ಮ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಈ ವೈದ್ಯರು ತಮ್ಮೆದುರು ಇರಿಸಿದ ಎಂಟು ನಿರ್ದಿಷ್ಟ ಪ್ರಶ್ನೆಗಳಿಗೆ ಸಮಚಿತ್ತದಿಂದ ನೀಡಿದ ಉತ್ತರಗಳು ಇಲ್ಲಿವೆ.

ಡಾ.ಸಿ.ಎನ್.ಮಂಜುನಾಥ

1250 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸರಕಾರಿ ಹೃದ್ರೋಗ ಚಿಕಿತ್ಸಾ ಸಂಸ್ಥೆ. ಸ್ವತಃ ಹೃದಯರೋಗ ತಜ್ಞರಾಗಿರುವ ಡಾ.ಸಿ.ಎನ್.ಮಂಜುನಾಥ ಅವರು ಮುಖ್ಯಸ್ಥರಾಗಿ ಈ ಸಂಸ್ಥೆಯನ್ನು ಖಾಸಗಿ ಪಂಚತಾರಾ ಆಸ್ಪತ್ರೆಗಳಿಗಿಂತಲೂ ಉತ್ತಮವಾಗಿ ಮುನ್ನೆಡೆಸುತ್ತಿದ್ದಾರೆ. ಅವರು ಕೋವಿಡ್ ಕಾರ್ಯಪಡೆ ಸದಸ್ಯರೂ ಆಗಿದ್ದಾರೆ.

ಸಂದರ್ಶನ: ಪರಮೇಶ್ ಕೆ.ವಿ.

 

ಡಾ.ಗಣೇಶ್ ಪ್ರತಾಪ್

ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರಾದ ಡಾ.ಗಣೇಶ್ ಪ್ರತಾಪ್ ನಮ್ಮ ನಡುವಿನ ಅಪರೂಪದ  ಶ್ವಾಸಕೋಶ ತಜ್ಞರು (ಪಲ್ಮಲಾಜಿಸ್ಟ್). ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಇಂಟರ್ನಲ್ ಪಲ್ಮನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಕೆಲವೇ ತಜ್ಞರಲ್ಲಿ ಒಬ್ಬರು. ಕಳೆದ ನಾಲ್ಕೈದು ತಿಂಗಳಿನಿಂದ ಬೆಂಗಳೂರಿನಲ್ಲಿ ಕೋವಿಡ್ -19 ರೋಗ ನಿಯಂತ್ರಣ ಹಾಗೂ ಚಿಕಿತ್ಸೆ ನೀಡುವಲ್ಲಿ ಬಹು ಮುಖ್ಯ ಪಾತ್ರ ವಹಿಸಿ, ತಮ್ಮನ್ನು ತಾವು ಯೋಧರಂತೆ ತೊಡಗಿಸಿಕೊಂಡಿದ್ದಾರೆ. 

ಸಂದರ್ಶನ: ಬಿ.ಶ್ರೀನಿವಾಸ

 

ಡಾ.ಜಗದೀಶ್ ಹಿರೇಮಠ

ಹಿರಿಯ ವೈದ್ಯರು ಹಾಗೂ ತೀವ್ರ ನಿಗಾ ಘಟಕ ಸಲಕರಣೆಗಳ ವಿಶೇಷ ತಜ್ಞರು; ಮೂಲತಃ ಬೀದರಿನವರು, ಬೆಂಗಳೂರಿನ ಜಿಗಣಿಯಲ್ಲಿ ಏಸ್ ಸುಹಾಸ್ ಹೆಲ್ತ್ ಕೇರ್ ಸಂಸ್ಥಾಪಕರು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದಾರೆ. 

ಸಂದರ್ಶನ: ಪರಮೇಶ್ ಕೆ.ವಿ.

 

 

  1. ಕೋವಿಡ್-19 ರೋಗದ ತಿಳಿವಳಿಕೆ ಮತ್ತು ತೀವ್ರತೆಯ ಬಗ್ಗೆ ಇದುವರೆಗೆ ಭಾರತದಲ್ಲಿ ಲಭ್ಯವಿರುವ ಮಾಹಿತಿ ಸಮಾಧಾನಕರವಾಗಿದೆಯೇ..? ಇಲ್ಲವಾದಲ್ಲಿ ಈ ರೋಗಲಕ್ಷಣದ ಬಗ್ಗೆ ನಮ್ಮ ಅರಿವಿನಲ್ಲಿರುವ ಕೊರತೆಗಳಾವುವು..?

ಡಾ.ಸಿ.ಎನ್.ಮಂಜುನಾಥ: ನಮ್ಮಲ್ಲಿ ಯಾವುದೇ ರೋಗದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಆಸಕ್ತಿ ಕಡಿಮೆ. ಅದು ಕೊರೊನಾ ಅಥವಾ ಕೋವಿಡ್-19 ವಿಷಯಕ್ಕೂ ಅನ್ವಯ. ಅದೇ ಪ್ರಮುಖ ಹಿನ್ನಡೆಯಾಗಿದೆ. ಬೇರೆ ದೇಶಗಳಲ್ಲಿ ಕೋವಿಡ್ ಕುರಿತು ಅರಿಯುವ ಸಾಮರ್ಥ್ಯದಿಂದಾಗಿಯೇ ಬಹುತೇಕ ರಾಷ್ಟ್ರಗಳು ನಿಯಂತ್ರಣ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಭಾರತದಲ್ಲಿ “ನಿಧಾನವೇ ಪ್ರಧಾನ”ಎಂಬ ಮನಸ್ಥಿತಿ ರೋಗ ಉಲ್ಬಣಕ್ಕೆ ಕಾರಣ ಎನ್ನುವುದು ನಿಸ್ಸಂಶಯ. ಸದ್ಯದ ಸ್ಥಿತಿಯಂತೂ ಸಮಾಧಾನಕರ ಅಲ್ಲ. ಹಲವು ಬಾರಿ ಆಡಳಿತ ನಡೆಸುವವರು ನಾವು ಕೊಟ್ಟ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿರುವುದು ವ್ಯತಿರಿಕ್ತವಾಗಿ ಪರಿಣಮಿಸಿದೆ. ಇನ್ನು ಈ ರೋಗ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು ನಿರ್ದಿಷ್ಟ ಪತ್ತೆಗೆ ತೊಡಕಾಗಿದೆ. ಇದು ಆರಂಭದಲ್ಲಿ ಇತ್ತು. ಪ್ರಸ್ತುತ ಸುಧಾರಿಸಿದೆ ಎನ್ನುವುದು ಉಲ್ಲೇಖಾರ್ಹ.

ಡಾ.ಜಗದೀಶ್ ಹಿರೇಮಠ: ಕೋವಿಡ್ ಬಗ್ಗೆ ಸಮಾಜದಲ್ಲಿ ವ್ಯಾಪಕವಾದ ಮಾಹಿತಿ ಇದೆ. ಆದರೆ ನಮ್ಮ ಜನರು ಅದನ್ನು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ. ದಿನಕ್ಕೆರಡು ಸಿನಿಮಾ ನೋಡುವ ಆಸಕ್ತಿ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಬರದಿರುವುದು ದುರದೃಷ್ಟಕರ. ಕೊರೊನಾ ಹರಡಿರುವ ಅಥವಾ ಹರಡುತ್ತಿರುವ ತೀವ್ರತೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ಭಾರತ ಸುರಕ್ಷಿತ ಸ್ಥಾನದಲ್ಲಿದೆ. ನಮ್ಮಲ್ಲಿ ಮರಣ ಪ್ರಮಾಣ ಕನಿಷ್ಠ ದಾಖಲಾಗುತ್ತಿರುವಿದೇ ಇದಕ್ಕೆ ನಿದರ್ಶನ.

ಡಾ.ಗಣೇಶ್ ಪ್ರತಾಪ್: ಇಲ್ಲ, ಸಮಾಧಾನಕರವಾಗಿಲ್ಲ. ಮಾಹಿತಿ ಕೊರತೆ ಎನ್ನುವುದಕ್ಕಿಂತ ತಪ್ಪಾಗಿ ಅರ್ಥೈಸಲಾಗುತ್ತಿದೆ ಎನ್ನುವುದು ಸರಿಯಾದುದು. ತಪ್ಪು ತಿಳಿವಳಿಕೆಗಳೇ ಜನರಲ್ಲಿ ಮನೆ ಮಾಡಿಬಿಟ್ಟಿವೆ. ಆರಂಭ ಕಾಲದಲ್ಲಿ ತಜ್ಞ ವೈದ್ಯರ ಸಲಹೆಗಳನ್ನು ಕೇಳುವಷ್ಟೊತ್ತಿಗೆ ತುಂಬಾ ತಡವಾಗಿ ಹೋಗಿತ್ತು.

ನಮ್ಮ ಮೀಡಿಯಾಗಳು ಸಹ ಮಾಹಿತಿ ನೀಡುವ ಭರದಲ್ಲಿ ಸ್ವಲ್ಪಮಟ್ಟಿಗೆ ದೋಷಗಳುಂಟಾದುವು. ಮಹಾಮಾರಿ, ಹೆಮ್ಮಾರಿ ಬಂದೇ ಬಿಡ್ತು ಎಂಬಂತಹ ಪರಿಭಾಷೆಗಳಲ್ಲಿಯೇ ಮುಳುಗಿಹೋದವೇ ವಿನಾ ವೈಜ್ಞಾನಿಕವಾಗಿ ಆಲೋಚಿಸಲಿಲ್ಲ. ಸಹಜವಾಗಿ ಇಂತಹ ಸಾಂಕ್ರಾಮಿಕ ರೋಗಗಳು ಶೇ.85 ರಷ್ಟು ಜನರಿಗೆ ಬಂದು ಹೋಗಿದ್ದೇ ಗೊತ್ತಾಗುವುದಿಲ್ಲ. ಇನ್ನುಳಿದ ಶೇ 15ರಲ್ಲಿ ರೋಗಕ್ಕೆ ತುತ್ತಾದರೂ ಅದರಲ್ಲಿ ಕೇವಲ ಶೇ.5ರಷ್ಟು ಜನರು ಕ್ರಿಟಿಕಲ್ ಕಂಡೀಷನ್‌ಗೆ ಹೋಗ್ತಾರೆ. ಅದೂ ಸಕ್ಕರೆ ಕಾಯಿಲೆ, ಹೃದಯಸಂಬಂಧಿ ಚಿಕಿತ್ಸೆಗೊಳಪಟ್ಟವರು, ಕಿಡ್ನಿ ಫೇಲ್ಯೂರ್ ಆದಂತಹವರು. ಅದರಲ್ಲಿ ಶೇ.2 ರಿಂದ 3ರಷ್ಟು ಜನರು ಗಂಭೀರ ಸ್ಥಿತಿಗೆ ತಲುಪಬಹುದು.

ಇಲ್ಲಿರುವ ಸಮಸ್ಯೆಯೇನೆಂದರೆ… ಉದಾಹರಣೆಗೆ ಬೆಂಗಳೂರನ್ನೆ ನೋಡಿ. ಇಲ್ಲಿರುವ ಒಂದು ಕೋಟಿ ಮೂವತ್ತು ಲಕ್ಷ ಜನರ ಪೈಕಿ ಶೇ.2 ಅಥವಾ 3 ಅಂತಾ ಹಿಡಿದರೂ ಮೂರು-ನಾಲ್ಕು ಲಕ್ಷದಷ್ಟು ಜನರು ಗಂಭೀರ ಸ್ಥಿತಿಗೆ ತಲುಪ್ತಾರೆ. ಅಂದರೆ ಅಷ್ಟೂ ಜನರಿಗೆ ವೆಂಟಿಲೇಟರ್ ಬೆಡ್ ಮತ್ತು ತೀವ್ರ ನಿಗಾ ಘಟಕಗಳನ್ನು ವ್ಯವಸ್ಥೆ ಮಾಡಿಕೊಂಡಿಲ್ಲ.

ಈಗಾಗಲೇ ಕಮ್ಯುನಿಟಿ ಸ್ಪ್ರೆಡ್ ಆಗಿಬಿಟ್ಟಿರುವುದರಿಂದ ಹರಡುವಿಕೆ ತೀವ್ರವಾಗ್ತಿದೆ. ರೋಗ ಲಕ್ಷಣಗಳು ತೀವ್ರವಾಗಿ ಕಾಣಿಸಿಕೊಂಡ ರೋಗಿಗಳಿಗೆ ಗಂಟಲುದ್ರವ ಪರೀಕ್ಷೆಯ ಮೂಲಕವೇ ಖಚಿತಪಡಿಸಿಕೊಳ್ಳಬೇಕು. ರಾಪಿಡ್ ಕಿಟ್ ಎಕ್ಯುರೆಸಿ ಕೇವಲ ಶೇ.55 ಮಾತ್ರವಿರುತ್ತದೆ. ಈ ಪರೀಕ್ಷೆಯನ್ನು ಸರ್ವಿಲೆನ್ಸ ಅಧ್ಯಯನಕ್ಕೆ ಬಳಸಬಹುದಷ್ಟೆ ವಿನಾ ರೋಗ ಪತ್ತೆಗಾಗಿಯಲ್ಲ.

  1. ಕೋವಿಡ್-19 ರೋಗಕ್ಕೆ ನಮ್ಮ ಸರ್ಕಾರಗಳು 2020 ರ ಮಾರ್ಚ್ನಿಂದ ಜೂನ್‌ವರೆಗೆ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ನಿಮ್ಮ ಅನಿಸಿಕೆಯೇನು..?

ಡಾ.ಸಿ.ಎನ್.ಮಂಜುನಾಥ: ಕೋವಿಡ್ ಕಾಣಿಸಿಕೊಂಡು ಆರು ತಿಂಗಳು ಕಳೆಯುತ್ತಿದೆ. ಫೆಬ್ರವರಿ ಅಂತ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ಇಣುಕಿದ್ದ ಮಾರಕ ಹೆಮ್ಮಾರಿ ನೋಡು ನೋಡುತಿದ್ದಂತೆ ಬೃಹದಾಕಾರವಾಗಿ ಬೆಳೆಯಿತು. ಶುರುವಿನಲ್ಲಿ ಕೇಂದ್ರ ಅಥವಾ ಯಾವುದೇ ರಾಜ್ಯಸರ್ಕಾರಗಳು ಭವಿಷ್ಯದಲ್ಲಿ ಇಷ್ಟು ಭೀಕರತೆ ತಲುಪುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಆದರೆ ತಜ್ಞರು ಹರಡುವಿಕೆ ಪರಿಣಾಮದ ಬಗ್ಗೆ ಮುನ್ಸೂಚನೆ ಕೊಟ್ಟಿದ್ದೆವು. ರೋಗದ ಸೋಂಕು ಹೆಚ್ಚಾದಂತೆ ಸರ್ಕಾರಗಳು ಎಚ್ಚರವಹಿಸಿದವು. ಅಷ್ಟರಲ್ಲಿ ಕಾಲ ಮಿಂಚಿತ್ತು. ಹಾಗಿದ್ದೂ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ತೃಪ್ತಿಯಿದೆ. ಜನತಾ ಕರ್ಫ್ಯೂನಿಂದ ಹಿಡಿದು ಮೂರ್ನಾಲ್ಕು ಲಾಕ್ ಡೌನ್ ತೀರ್ಮಾನಗಳು ಉತ್ತಮವೇ ಆಗಿದ್ದರೂ ಆ ಅವಧಿಯಲ್ಲಿ ಮಾಡಿಕೊಳ್ಳಬೇಕಾಗಿದ್ದ ಸಿದ್ಧತೆಗಳು ಸಮರ್ಪಕವಾಗಿ ಆಗಲಿಲ್ಲ. ಹಾಗಾಗಿಯೇ ಪ್ರಸ್ತುತ ವಿಷಮಸ್ಥಿತಿಗೆ ಕಾರಣ ಎಂದರೆ ಅತಿಶಯೋಕ್ತಿ ಆಗಲಾರದು.

ಡಾ.ಜಗದೀಶ್ ಹಿರೇಮಠ: ಕೋವಿಡ್ ಬಂದ ಬಳಿಕ ಸರ್ಕಾರಗಳು ಎಚ್ಚೆತ್ತುಕೊಂಡು ಹಲವು ಪರಿಹಾರ ಕ್ರಮಗಳನ್ನು ಕೈಗೊಂಡಿವೆ. ಬಹುತೇಕ ಪ್ರಕ್ರಿಯೆಗಳು ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ನಡೆಯಬೇಕಾಗಿದ್ದರೂ ರಾಜ್ಯ ಸರ್ಕಾರ ಕೂಡಾ ಅಗತ್ಯ ಕ್ರಮಕ್ಕೆ ಮುಂದಾಗಿದೆ. ಹಾಗೆಂದು ಎಲ್ಲವೂ ತೃಪ್ತಿಕರವಾಗಿದೆ ಎನ್ನಲಾಗಲ್ಲ. ಕೊರೊನಾ ಸಲಕರಣೆ ಖರೀದಿ ಸೇರಿದಂತೆ ಹಲವು ವಿಷಯಗಳಲ್ಲಿ ಭ್ರಷ್ಟಾಚಾರದ ಅರೋಪ ಕೇಳಿಬರುತ್ತಿರುವುದು ಅವ್ಯವಸ್ಥೆಯ ಪ್ರತೀಕ. ಈ ನಡುವೆ ಸಕಾಲಕ್ಕೆ ಏನು ಮಾಡಬೇಕಿತ್ತು ಅದನ್ನು ಮಾಡಲಿಲ್ಲ. ಅನಗತ್ಯ ಸಮಯದಲ್ಲಿ ಲಾಕ್ಡೌನ್, ಸೀಲ್ಡೌನ್ ಮಾಡಿದ್ರು. ಅಗತ್ಯ ಸಿದ್ಧತೆ ಮಾಡಿಕೊಳ್ಳಲಿಲ್ಲ. ಈವಾಗ ಲಾಕ್ ಡೌನ್ ಅನಿವಾರ್ಯತೆ ಇದೆ. ಆದರೆ ಮಾಡಲಾಗ್ತಿಲ್ಲ. ಜನತೆ ಕೂಡಾ ಕೋವಿಡ್ ಬಗ್ಗೆ ತೀರಾ ನಿರ್ಲಕ್ಷ್ಯ ತೋರುತ್ತಿದ್ದಾರೆ.

ಡಾ.ಗಣೇಶ್ ಪ್ರತಾಪ್: ತುಂಬ ಒಳ್ಳೆಯ ನಿರ್ಧಾರಗಳನ್ನೆ ತೆಗೆದುಕೊಳ್ಳಲಾಗಿದೆ. ಲಾಕ್ ಡೌನ್ ಮಾಡಿದ್ದು, ರೋಗ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗಾದರೂ ಯಶಸ್ಸು ಕಾಣಲು ಸಾಧ್ಯವಾಯಿತು. ನಂತರದ ದಿನಗಳಲ್ಲಿ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಉಂಟಾದ ಆರ್ಥಿಕ ಕುಸಿತದ ಪ್ರಮಾಣ ಭಾರತದಲ್ಲಿ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಲಿಕ್ಕೆ ಸಾಧ್ಯವಾಯಿತು.

  1. ಕಳೆದ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ರೋಗದ ಪ್ರಸರಣ ಹೆಚ್ಚಿದ್ದರೂ ರೋಗದ ತೀವ್ರತೆ ಕಡಿಮೆಯಾಗಿದೆಯೇ..?

ಡಾ.ಸಿ.ಎನ್.ಮಂಜುನಾಥ: ವಿಶ್ವಸಂಸ್ಥೆ, ಅಮೆರಿಕಾ ಸೇರಿದಂತೆ ಹಲವು ದೇಶಗಳು ಭಾರತದಲ್ಲಿ ಕೋವಿಡ್ ನಿಯಂತ್ರಣ ಕಷ್ಟ ಎಂದು ಆರಂಭದಲ್ಲಿಯೇ ಎಚ್ಚರಿಸಿದ್ದವು. ಆದರೂ ಭಾರತ ಸರ್ಕಾರ ಮುಂಜಾಗ್ರತೆ ವಹಿಸಿತ್ತು. ಆದರೆ ನಿಯಮಮೀರಿ ಅನಿವಾಸಿ ಭಾರತೀಯರು ಆಗಮಿಸಿದ್ದು ಜೊತೆಗೆ ಸಕಾಲಿಕ ಕ್ರಮಗಳ ಬಗ್ಗೆ ವಹಿಸಿದ ನಿರ್ಲಕ್ಷ್ಯ ಕೂಡಾ ನಮ್ಮಲ್ಲಿ ಕೋವಿಡ್ ಹರಡುವಿಕೆ ಹೆಚ್ಚಿಸಿತು. ಜನಸಂಖ್ಯೆ ದುಪ್ಪಟ್ಟಿರುವ ಭಾರತದಂತಹ ದೇಶದಲ್ಲಿ ರೋಗ ನಿಯಂತ್ರಣ ಸಲೀಸಲ್ಲ. ಆದರೆ ಸರ್ಕಾರಗಳ ಸಾಮೂಹಿಕ ಪ್ರಯತ್ನದಿಂದ ಪ್ರಸರಣ ನಿರೀಕ್ಷಿತಮಟ್ಟಕ್ಕೆ ಹೋಗಿಲ್ಲ. ದಿನಕಳೆದಂತೆ ಕೋವಿಡ್ ತೀವ್ರತೆ ಕ್ಷೀಣಿಸುತ್ತಿದೆ. ಅಂದರೆ ನಮ್ಮ ಜನರಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತಿದೆ. ವಿಶೇಷವಾಗಿ ಹೆಮ್ಮಾರಿ ಗ್ರಾಮೀಣ ಭಾರತದಲ್ಲಿ ಅಷ್ಟಾಗಿ ಅಬ್ಬರಿಸಲಿಲ್ಲ ಅನ್ನೋದು ನೆಮ್ಮದಿ ಕೊಡುವ ಸಂಗತಿ.

ಡಾ.ಜಗದೀಶ್ ಹಿರೇಮಠ: ಇಲ್ಲ. ನಮ್ಮಲ್ಲಿ ರೋಗ ಹರಡುವಿಕೆಯ ತೀವ್ರತೆ ಕ್ಷೀಣಿಸಿಲ್ಲ. ದಿನಗಳೆದಂತೆ ನಿರೀಕ್ಷೆಗೂ ಮೀರಿ ವ್ಯಾಪಿಸುತ್ತಿರುವ ಬಗ್ಗೆ ನಿತ್ಯದ ಅಂಕಿಅಂಶಗಳು ದೃಢಪಡಿಸುತ್ತಿವೆ. ಆದರೆ ಕೋವಿಡ್ ಪ್ರಾಣ ತೆಗೆಯುವಷ್ಟು ಭೀಕರ ಪ್ರಭಾವ ಅಥವಾ ಪರಿಣಾಮಕಾರಿ ಆಗಿಲ್ಲ ಅನ್ನುವುದು ಉಲ್ಲೇಖಾರ್ಹ. ನಮ್ಮಲ್ಲಿ ಮರಣ ಪ್ರಮಾಣ ಶೇ 1.5 ರಿಂದ 1.7ರಷ್ಟಿದೆ. ಹಾಗಾಗಿ ಕೋವಿಡ್ ಎಂಬ ಭಯ ಬೇಡ. ಆದರೆ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಅಗತ್ಯ ಇದೆ.

ಡಾ.ಗಣೇಶ್ ಪ್ರತಾಪ್: ….ಏನಿಲ್ಲ. ಈ ಪ್ರಶ್ನೆಯನ್ನು ಇನ್ನೊಂದು ಕೋನದಲ್ಲಿ ಯೋಚಿಸುವುದಾದರೆ, ಶೇ.85ಜನರಿಗೆ ರೋಗ ಬಂದು ಹೋದದ್ದೆ ಗೊತ್ತಾಗಿರುವುದಿಲ್ಲ. ಇನ್ನುಳಿದವರು ಚಿಕಿತ್ಸೆಯಿಂದ ಗುಣಮುಖರಾಗಬಹುದು. ಶೇಕಡಾ ಎರಡು-ಮೂರರಷ್ಟು ಸಾವುಗಳುಂಟಾಗಬಹುದು. ನಂತರ ರೋಗ ತೀವ್ರತೆಯ ಪ್ರಶ್ನೆಯೇ ಅಪ್ರಸ್ತುತ. ಯಾಕೆಂದರೆ, ಒಮ್ಮೆ ರೋಗ ಬಂದು ಹೋದವರ ದೇಹದಲ್ಲಿ, ಮತ್ತೆ ರಿಇನ್ಫೆಕ್ಟ್ ಆಗಿಲ್ಲ. ಈಗಾಗಲೇ ಕಮ್ಯುನಿಟಿ ಸ್ಪ್ರೆಡ್ ಆಗಿರುವುದರಿಂದ ಬಹುತೇಕ ಜನರಿಗೆ ರೋಗ ಬಂದು ಹೋಗಿರುವುದರಿಂದ, ರೋಗ ಹರಡುವಿಕೆಗೆ ಜನರೇ ಇರಲ್ಲ. ಹೀಗಾಗಿ ರೋಗ ತೀವ್ರತೆ ಸಹಜವಾಗಿಯೆ ಕಡಿಮೆಯಾಗುತ್ತೆ.

  1. ಈ ರೋಗದ ಚಿಕಿತ್ಸೆಯಲ್ಲಿ ಇದುವರೆಗೆ ನಾವು ಮಾಡಿರುವ ತಪ್ಪುಗಳು ಹಾಗೂ ಸರಿಗಳೇನು..?

ಡಾ.ಸಿ.ಎನ್.ಮಂಜುನಾಥ: ಕೋವಿಡ್ ಚಿಕಿತ್ಸೆ ನಮ್ಮಲ್ಲಿ ಸಾಂಪ್ರದಾಯಿಕ ಪದ್ಧತಿಗೆ ಒಗ್ಗುತ್ತಿದೆ. ಇದು ಅಸಲಿಗೆ ಒಳ್ಳೆಯ ಸುದ್ದಿ. ಚಿಕಿತ್ಸೆಗಿಂತಲೂ ನಾವು ತಪಾಸಣೆಯ ವಿಷಯದಲ್ಲಿ ಹಿಂದೆ ಬಿದ್ದಿದ್ದೇವೆ. ಮೊದಲಿನಿಂದಲೂ ಪರೀಕ್ಷೆ ಹೆಚ್ಚಿಸಿ ಅದರಲ್ಲೂ ಸಮುದಾಯದ ತಪಾಸಣೆಗೆ ಅದ್ಯತೆ ಕೊಡಿ ಎಂದು ಸಾಕಷ್ಟು ಬಾರಿ ಸಲಹೆ ನೀಡಿದ್ದರೂ ಅದು ಜಾರಿಯಾಗಲಿಲ್ಲ. ಮತ್ತೆ ಇದಕ್ಕೆ ನಿರ್ದಿಷ್ಟ ಔಷಧಿ ಲಭ್ಯವಿರದ ಕಾರಣಕ್ಕಾಗಿ ಚಿಕಿತ್ಸಾ ಕ್ರಮಗಳಲ್ಲಿ ಲೋಪ ಕಂಡಿಲ್ಲ. ನಮ್ಮ ವೈದ್ಯರು ಕೋವಿಡ್ ಕೇರ್ ಸೆಂಟರ್ ಇಲ್ಲವೇ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ನೀಡಿದ್ದಾರೆ. ಅದರಲ್ಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳು ಸಕಾಲಿಕವಾಗಿದ್ದವು. ಇತರೆ ಮಾರಕ ರೋಗಗಳಿದ್ದ ಕಾರಣ ಕೆಲವು ಪಾಸಿಟಿವ್ ಪೇಷಂಟ್ಸ್ ಸಫರ್ ಅಗಿದ್ದನ್ನು ಬಿಟ್ಟರೆ ಉಳಿದಂತೆ ಕೊರೊನಾ ನಾವಂದುಕೊಂಡಷ್ಟು ಪ್ರಬಲತೆ ತೋರಲಿಲ್ಲ.

ಡಾ.ಜಗದೀಶ್ ಹಿರೇಮಠ: ಕೋವಿಡ್ ಚಿಕಿತ್ಸೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಲೋಪ ಆಗಿಲ್ಲ. ನಮ್ಮ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಇದು ಸಹಜವಾಗಿಯೇ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಕಾರಿ ಎನಿಸಿದೆ. ಆದರೆ ದೆಹಲಿಯಲ್ಲಿ ತಬ್ಲಿಘಿ ಜಮಾತ್ ಸಮಾವೇಶಕ್ಕೆ ಅವಕಾಶ ಕೊಟ್ಟಿದ್ದು ಮತ್ತು ಬಳಿಕ ದೇಶಾದ್ಯಂತ ಇತರೆ ಹಬ್ಬ, ಆಚರಣೆಗಳಿಗೆ ಅವಕಾಶ ಒದಗಿಸಿದ್ದೂ ಕೂಡಾ ರೋಗ ಸಮುದಾಯದ ವ್ಯಾಪ್ತಿಯಲ್ಲಿ ಹೆಚ್ಚು ಹರಡುವುದಕ್ಕೆ ಕಾರಣವಾಯಿತು. ಜೊತೆಗೆ ವಿದೇಶಗಳಿಂದ ವಿಶೇಷ ವಿಮಾನಗಳಲ್ಲಿ ಸರ್ಕಾರವೇ ಕರೆಸಿಕೊಂಡ ಅನಿವಾಸಿ ಭಾರತೀಯರನ್ನು ಸುರಕ್ಷಿತವಾಗಿ ಕ್ವಾರಂಟೈನ್ ಮಾಡಿದ್ದರೆ ಹಾಗೂ ಹೊರರಾಜ್ಯಗಳಿಂದ ಬಂದವರನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸಿದ್ದರೆ ಪ್ರಸ್ತುತ ಸನ್ನಿವೇಶ ನಿರ್ಮಾಣ ಆಗುತ್ತಿರಲಿಲ್ಲ.

ಡಾ.ಗಣೇಶ್ ಪ್ರತಾಪ್: ಆರಂಭದಲ್ಲಿ ಬಹಳ ದೊಡ್ಡ ಸಮಸ್ಯೆಯನ್ನೆ ಎದುರಿಸಬೇಕಾಯಿತು. ಐ.ಸಿ.ಯು. ಬೆಡ್ ಗಳಿರಲಿಲ್ಲ, ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಇಂತಹ ಪರಿಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲವೆಂಬುದು ನಿಜ. ಆದರೆ ಆಡಳಿತಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆಯಾ ಇಲಾಖಾ ನಿರ್ಧಾರಗಳಿಗಿಂತ ಕೊರೋನಾ ವಿಚಾರದಲ್ಲಿ ಪಲ್ಮಲಾಜಿಸ್ಟರ, ಆಯಾ ತಜ್ಞ ವೈದ್ಯರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸದೆ ಲೋಪದೋಷಗಳುಂಟಾದುವು. ಆಗ ಗ್ರೌಂಡ್ ಲೆವೆಲ್ನಲ್ಲಿ ನಿಯಂತ್ರಣದ ಕೆಲಸಗಳಾಗಲಿಲ್ಲ. ಎಲ್ಲ ವೈರಸ್ಸೂ ಕೊರೋನಾ ಅಲ್ಲ, ಮತ್ತೆ ಎಲ್ಲಾ ಕೊರೋನಾ ಒಂದೇ ರೀತಿಯದು ಆಗಿರುವುದಿಲ್ಲ. ತದನಂತರದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ತೃಪ್ತಿಯಿದೆಯಾದರೂ, ಇನ್ನು ಮುಂದೆ ಸರಕಾರಗಳು “ಆರೋಗ್ಯ ಬಜೆಟ್” ಎಂದು ಪ್ರತ್ಯೇಕವಾಗಿ ಮಂಡಿಸುವುದರ ಮೂಲಕವಾದರೂ ಜನರ ಆರೋಗ್ಯಕ್ಕೆ ಆದ್ಯತೆ ನೀಡಬೇಕಿದೆ.

  1. ಮುಂದಿನ ಕೆಲವು ತಿಂಗಳುಗಳಲ್ಲಿ ಸಿಗುವ ಲಸಿಕೆಗಳು ಎಷ್ಟುಮಟ್ಟಿಗೆ ಪರಿಣಾಮಕಾರಿಯಾಗಬಲ್ಲುವು..? ಲಸಿಕೆಯು ರೋಗವನ್ನು ಅಂತ್ಯಗೊಳಿಸುವುದೇ..?

ಡಾ.ಸಿ.ಎನ್.ಮಂಜುನಾಥ: ವೈದ್ಯಕೀಯ ಜಗತ್ತು ಹಿಂದಿನAತಲ್ಲ. ನಿತ್ಯವೂ ನೂತನ ಸಂಶೋಧನೆಯತ್ತ ದಾಪುಗಾಲಿಟ್ಟಿದೆ. ಹಾಗಾಗಿ ಖಂಡಿತವಾಗಿ ನಮಗೂ ಶೀಘ್ರವಾಗಿ ಲಸಿಕೆ ಲಭಿಸುವ ವಿಶ್ವಾಸವಿದೆ. ಪ್ರಭಾವ-ಪರಿಣಾಮ ಇನ್ನಷ್ಟೇ ಗೊತ್ತಾಗಬೇಕಿದೆ. ದೇಶ, ಜನ, ಹವಾಗುಣ, ರೋಗಿಯ ಸ್ಪಂದನೆ ಇವೆಲ್ಲವೂ ಒಂದು ಲಸಿಕೆಯ ಯಶಸ್ಸು ಇಲ್ಲವೇ ವೈಫಲ್ಯ ನಿರ್ಧರಿಸುತ್ತದೆ. ನಮ್ಮಲ್ಲಿ ತಯಾರಾಗುತ್ತಿರುವ ಮತ್ತು ಈಗಾಗಲೇ ಕ್ಲಿನಿಕಲ್ ಪ್ರಯೋಗಗಳಲ್ಲಿ ಸಕಾರಾತ್ಮಕ ಫಲಿತಾಂಶ ನೀಡಿರುವ “ಕೋವ್ಯಾಕ್ಸಿನ್” ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಇದು ಭಾರತದ್ದೇ ಉತ್ಪಾದನೆ ಎನ್ನುವುದು ನಮಗೆ ಹೆಚ್ಚಿನ ನೆರವಿನ ಭರವಸೆ ತಂದಿದೆ. ಕೋವಿಡ್ ಹೆಮ್ಮಾರಿಯನ್ನು ಲಸಿಕೆ ಇನ್ನಿಲ್ಲದಂತೆ ಮಾಡಲಿದೆಯೇ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟಸಾಧ್ಯ. ಆಯಾ ಕಾಲಘಟ್ಟ ಫಲಿತಾಂಶ ನಿರ್ಧರಿಸಲಿದೆ. ಇಷ್ಟಂತೂ ಹೇಳಬಲ್ಲೆ ಭವಿಷ್ಯದಲ್ಲಿ ನಾವು ಕೊರೊನಾ ಅಲಿಯಾಸ್ ಕೋವಿಡ್ ಜೊತೆಗೇ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾದರೂ ಅಚ್ಚರಿಪಡಬೇಕಿಲ್ಲ.

ಡಾ.ಜಗದೀಶ್ ಹಿರೇಮಠ: ಒಮ್ಮೆ ಲಸಿಕೆ ಲಭ್ಯವಾದಲ್ಲಿ ಖಂಡಿತವಾಗಿ ಅದು ಸಕಾರಾತ್ಮಕ ವಿಷಯ. ಜನರಲ್ಲೂ ಸಹಜವಾಗಿಯೇ ಅದು ಆತಂಕವನ್ನು ದೂರ ಮಾಡಲಿದೆ. ಆದರೆ ನನ್ನ ತಿಳಿವಳಿಕೆ ಪ್ರಕಾರ ಇನ್ನೂ ಏಳೆಂಟು ತಿಂಗಳು ಲಸಿಕೆ ಬರುವುದು ಸಂಶಯ. ವಿವಿಧ ಹಂತಗಳಲ್ಲಿ ಅದು ಪ್ರಯೋಗಕ್ಕೆ ಒಳಗಾಗಿದೆ. ಭಾರತ ಸರ್ಕಾರ ಈ ಬಗ್ಗೆ ಒಂದಷ್ಟು ತುರ್ತು ಕಾಳಜಿ ವಹಿಸಿದಲ್ಲಿ ಮೂರ್ನಾಲ್ಕು ಬರಬಹುದು. ಲಸಿಕೆ ಬಂದರೆ ಖಂಡಿತವಾಗಿ ಕೋವಿಡ್ ನಿಗ್ರಹ ಸಾಧ್ಯವಿದೆ. ಆದರೆ ಅಲ್ಲಿಯವರೆಗೆ ಮುಂಜಾಗ್ರತೆ ಒಂದೇ ಮದ್ದು. ಮಾಸ್ಕ್ ಕಡ್ಡಾಯ. ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡಲ್ಲಿ ಕೋವಿಡ್ ನಿಂದ ರಕ್ಷಣೆ ಸಾಧ್ಯವಿದೆ.

ಡಾ.ಗಣೇಶ್ ಪ್ರತಾಪ್: ವೈರಸ್ ತನ್ನ ರಚನೆಯನ್ನು ಪದೇಪದೇ ಬದಲಾಯಿಸುತ್ತಿರುವುದರಿಂದಾಗಿ ವ್ಯಾಕ್ಸಿನ್ ಸಂಶೋಧನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಬಹುಶಃ ಲಸಿಕೆ ಬರುವಷ್ಟೊತ್ತಿಗೆ ಸಾಂಕ್ರಾಮಿಕತೆ ಬಹುತೇಕ ಜನರಿಗೆ ಬಂದು ಹೋಗಿಬಿಟ್ಟಿರುತ್ತದೆ. ಹರ್ಡ್ ಇಮ್ಯುನಿಟಿ ಬಂದುಬಿಟ್ಟಿರುತ್ತದೆ. ಆದರೆ ಈ ರೋಗಾಣು ಸಂಪೂರ್ಣವಾಗಿ ಎರಾಡಿಕೇಟ್ ಆಗಲಿಕ್ಕೆ ಸಾಧ್ಯವಿಲ್ಲ. ಇದುವರೆಗೆ ಹಾಗೆ ಆದದ್ದು ಸ್ಮಾಲ್ ಪಾಕ್ಸ್ ಮಾತ್ರ. ಅದಕ್ಕೂ ನೂರು-ನೂರೈವತ್ತು ವರುಷಗಳೇ ಬೇಕಾಯ್ತು. ಆದರೆ ಕುಷ್ಟರೋಗದ ಹಾಗೆ ಎಲಿಮಿನೇಟ್ ಮಾಡಬಹುದು ಅಷ್ಟೆ. ಲಸಿಕೆಯೊಂದರಿAದ ರೋಗವನ್ನೆ ಅಂತ್ಯಗೊಳಿಸಬಹುದು ಎಂದು ಹೇಳಲಾಗದು.

  1. ಕಳೆದ ನಾಲ್ಕು ತಿಂಗಳಲ್ಲಿ ರೋಗನಿರೋಧಕ ಪ್ರತಿಕ್ರಿಯೆ (ಇಮ್ಯೂನ್ ರೆಸ್ಪಾನ್ಸ್) ವೃದ್ಧಿಸುವ ಹಳೇ ಚಿಕಿತ್ಸೆ/ಲಸಿಕೆಗಳನ್ನು ( ಹೆಚ್‌ಸಿಕ್ಯು, ಬಿಸಿಜಿ, ಎಂಎAಆರ್ ಇತ್ಯಾದಿ) ಬಳಸಿದ್ದರೆ ರೋಗದಿಂದ ಜನಜೀವನಕ್ಕೆ ಆಗಿರುವ ಹಾನಿಯನ್ನು ತಡೆಯಬಹುದಿತ್ತೇ..?

ಡಾ.ಸಿ.ಎನ್.ಮಂಜುನಾಥ: ಒಬ್ಬ ವೈದ್ಯನಾಗಿ ಇದನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲ್ಲ. ಈಗಾಗಲೇ ನಮ್ಮಲ್ಲಿ ಆರಂಭದಿAದಲೂ ಇಮ್ಯೂನ್ ರೆಸ್ಪಾನ್ಸ್ ವರ್ಧಿಸುವ ಹಳೆಯ ಲಸಿಕೆಗಳನ್ನು ನೀಡಲಾಗಿದೆ. ನಿರೀಕ್ಷಿತ ರಿಸಲ್ಟ್ ಬರದಿದ್ದರೂ ಸಾಕಷ್ಟು ಮಂದಿ ಕೊರೊನಾ ಪೀಡಿತರು ಚೇತರಿಸಿಕೊಂಡಿದ್ದಾರೆ. ಕೆಲವರಲ್ಲಿ ಹೆಚ್.ಸಿ.ಕ್ಯೂ. ವ್ಯತಿರಿಕ್ತವಾಗಿ ವರ್ತಿಸಿದ ನಿದರ್ಶನಗಳು ಇದೆ. ಆರಂಭದಲ್ಲಿ ಈ ಎಲ್ಲ ಲಸಿಕೆ ಪ್ರಯೋಗ ನಡೆದಿದೆ. ಇದರಿಂದಲೇ ಜೀವಹಾನಿ ತಪ್ಪಿಸಬಹುದಿತ್ತು ಎಂಬುದು ಸರಿಯಲ್ಲ. ಆ ಕಾರಣಕ್ಕಾಗಿ ನಾವು ಇಮ್ಯುನಿಟಿ ಪವರ್ ಹೆಚ್ಚಿಸುವತ್ತ ಗಮನಹರಿಸಲು ಸೂಚಿಸಿದ್ದೆವು.

ಡಾ.ಜಗದೀಶ್ ಹಿರೇಮಠ: ಇಮ್ಯೂನ್ ರೆಸ್ಪಾನ್ಸ್ ಹೆಚ್ಚಿಸುವ ಹೆಚ್.ಸಿ.ಕ್ಯೂ., ಬಿಸಿಜಿ ರೀತಿಯ ಲಸಿಕೆಗಳನ್ನು ಪ್ರಯೋಗಿಸುತ್ತಿದ್ದರೂ ಅದು  ಸೋಂಕಿನ ವಿರುದ್ಧ ಕೆಲಸ ಮಾಡುತ್ತಿಲ್ಲ. ನಮ್ಮಲ್ಲಿ ಶೇ.7 ರಿಂದ 8 ರಷ್ಟು ಮಂದಿ ಮಾತ್ರ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಮೇಲಿನ ಯಾವುದೇ ಲಸಿಕೆಗಳು ನಿರೀಕ್ಷಿತ ಪ್ರಭಾವ ಉಂಟು ಮಾಡುತ್ತಿಲ್ಲ. ಹಾಗಾಗಿ ನಿರ್ದಿಷ್ಟ ಲಸಿಕೆಯತ್ತ ಎಲ್ಲರೂ ನೋಡುವಂತಾಗಿದೆ. ಇನ್ನೊಂದು ಸಂಗತಿ ಅಂದರೆ ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಪತ್ತೆ ವಿಳಂಬವಾಗುತ್ತಿದೆ. ಇದೂ ಸಹ ಒಂದು ಹಿನ್ನಡೆ ಅಂಶವಾಗಿದೆ.

ಡಾ.ಗಣೇಶ್ ಪ್ರತಾಪ್: ಇಲ್ಲ, ಇಲ್ಲ… ಉಪಯೋಗವಿಲ್ಲ. ಈಗ ನೋಡಿ ಬಿ.ಸಿ.ಜಿ.ಯ ವೈರಸ್ಸು, ಟಿ.ಬಿ. ಬ್ಯಾಕ್ಟೇರಿಯಾ ಒಂದೇ ಆಗಿರುವುದಿಲ್ಲ. ಇವೆಲ್ಲ ತಪ್ಪುಕಲ್ಪನೆಗಳು. ಗ್ರಾಮ ಚಿಂತನೆಗಳು ಅಂತೇನಿದ್ದುವಲ್ಲ, ಅಂದರೆ ತಾವೇ ಕೃಷಿ ಮಾಡಿ ದುಡಿದು, ಹೈನುಗಾರಿಕೆ, ಹಸಿರು ಸೊಪ್ಪು, ತರಕಾರಿ ಬೆಳೆದುಣ್ಣುವ ಆ ಮೂಲಕ ಇಮ್ಯೂನಿಟಿ ಹೆಚ್ಚಿಸಿಕೊಳ್ಳುವ ಗಾಂಧಿ ಪ್ರಕ್ರಿಯೆ ನಮಗೆ ಮಾದರಿಯಾಗಬೇಕು. ಆಗ ಮಾತ್ರ ರೋಗದಿಂದ ಉಂಟಾಗುವ ಆರ್ಥಿಕ, ದೈಹಿಕ ಹಾನಿಗಳನ್ನೂ ತಡೆಗಟ್ಟಬಹುದು.

  1. ಚಿಕಿತ್ಸೆ ಮತ್ತು ಲಸಿಕೆಯ ಮೊದಲೇ ನಮ್ಮ ನಗರಗಳಲ್ಲಿ ಸಮೂಹ ರೋಗನಿರೋಧಕ ಶಕ್ತಿ (ಹರ್ಡ್ ಇಮ್ಯುನಿಟಿ) ವ್ಯಾಪಕವಾಗಿ ಬೆಳೆದು ರೋಗ ನಿಯಂತ್ರಣಕ್ಕೆ ಬರಬಹುದೇ..? ಇದಕ್ಕೆ ಇರುವ ಅಡೆತಡೆಗಳೇನು..?

ಡಾ.ಸಿ.ಎನ್.ಮಂಜುನಾಥ: ಭಾರತದ ನಗರ ಪ್ರದೇಶಗಳಲ್ಲಿ ಈಗಾಗಲೇ ರೋಗ ನಿರೋಧಕ ಶಕ್ತಿ ಸಾಕಷ್ಟು ಪ್ರಮಾಣದಲ್ಲಿ ವರ್ಧಿಸಿದೆ. ಚಿಕಿತ್ಸೆ ಹಂತಕ್ಕೂ ಮುನ್ನವೇ ಬಲಗೊಂಡಿರುವುದು ಒಳ್ಳೆಯ ಬೆಳವಣಿಗೆ. ಲಸಿಕೆ ಬಂದರೆ ಕೊರೊನಾ ಬಗ್ಗೆ ಇರುವ ಅನವಶ್ಯಕ ಭೀತಿಯನ್ನು ಕಡಿಮೆ ಮಾಡಲಿದೆ. ಕೋವಿಡ್ ವೈರಸ್ ರೂಪಾಂತರ ಆಗದಿದ್ದಲ್ಲಿ ಏನೇನೂ ಭಯಪಡಬೇಕಿಲ್ಲ. ಒಂದು ವೇಳೆ ಅದು ರೂಪಾಂತರ ಆದಲ್ಲಿ ನಿಯಂತ್ರಣ ಸ್ವಲ್ಪಮಟ್ಟಿಗೆ ಕಷ್ಟ ಅಥವಾ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕೋವಿಡ್ ನಿಯಂತ್ರಣ ಸಂಬಂಧಿಸಿದಂತೆ ಇರುವ ಮಾರ್ಗಸೂಚಿಗಳನ್ನು ಜನರು ಕಡ್ಡಾಯವಾಗಿ ಪಾಲಿಸಲೇಬೇಕು. ನಮ್ಮಲ್ಲಿ ಜಾಗೃತಿ ಮೂಡಿದಲ್ಲಿ ಹೆಮ್ಮಾರಿ ಅಟ್ಟಹಾಸ ತನ್ನಿಂತಾನೆ ಕಡಿಮೆಯಾಗಲಿದೆ. ಒಂದು ಅಂದಾಜಿನAತೆ ಈಗಾಗಲೇ ದೇಶದ ಶೇ.48ಕ್ಕೂ ಅಧಿಕ ಜನರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ. ಬಹುತೇಕ ಮಂದಿ ಅಪಾಯಕಾರಿ ಹಂತ ದಾಟಿದ್ದಾರೆ.

ಡಾ.ಜಗದೀಶ್ ಹಿರೇಮಠ: ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಕೋವಿಡ್ ನಿಯಂತ್ರಣಕ್ಕೆ ಬರಬಹುದು ಎನ್ನುವುದು ಅಷ್ಟು ಸುಲಭವಲ್ಲ. ಹಾಗಿದ್ದೂ ಭಾರತೀಯರಲ್ಲಿ ಹರ್ಡ್ ಇಮ್ಯುನಿಟಿ ರಕ್ತಗತವಾಗಿ ಬಂದಿದೆ. ಇದೇ ನಮ್ಮಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತಿದೆ. ಆದರೆ ಇದನ್ನೇ ನಂಬಿ ಕೂರುವಂತಿಲ್ಲ. ಚಿಕಿತ್ಸೆ, ಮುಂಜಾಗ್ರತೆ ಅಗತ್ಯ ಮತ್ತು ಅನಿವಾರ್ಯ.

ಡಾ.ಗಣೇಶ್ ಪ್ರತಾಪ್: ಖಂಡಿತ ಬಂದೇ ಬರುತ್ತೆ. ಈಗಾಗಲೇ ಹರ್ಡ್ ಇಮ್ಯುನಿಟಿ ಸ್ಟೇಜ್ ಬಂದಾಗಿದೆ. ರೋಗ ನಿಯಂತ್ರಣಕ್ಕೆ ಮತ್ತ್ಯಾವ ಅಡೆತಡೆಗಳೂ ಇಲ್ಲ.

  1. ಈ ಕೋವಿಡ್-19 ಕ್ಕೆ ಅಂತ್ಯ ಹೇಗೆ..? ಚಿಕಿತ್ಸೆಯೇ, ಲಸಿಕೆಯೇ ಅಥವಾ ಸಮೂಹ ರೋಗನಿರೋಧಕ ಶಕ್ತಿಯೇ..?

ಡಾ.ಸಿ.ಎನ್.ಮಂಜುನಾಥ: ಹ..ಹಹ.. (ಜೋರಾಗಿ ನಗುತ್ತಾ..) ಸದ್ಯಕ್ಕೆ ನನ್ನ ಬಳಿಯೂ ಪಕ್ಕಾ ಉತ್ತರ ಇಲ್ಲ. ಆದರೆ ಭಾರತ ಹಲವು ಮಾರಕ ರೋಗಗಳನ್ನು ಗೆದ್ದು ವಿಶ್ವಕ್ಕೆ ಮಾದರಿ ಎನಿಸಿದೆ. ಇದೇ ನಮ್ಮ ಶಕ್ತಿ. ಕೊರೊನಾ ವಿಷಯದಲ್ಲೂ ನಾವು ಮೇಲುಗೈ ಸಾಧಿಸಲಿದ್ದೇವೆ. ಚಿಕಿತ್ಸೆ ನಡೆದಿದೆ. ಲಸಿಕೆ ಸಂಶೋಧನೆ ಹಂತ ದಾಟಿದೆ. ಕಾದು ನೋಡೋಣ. ರೋಗನಿರೋಧಕ ಶಕ್ತಿ ಜನರಲ್ಲಿ ವೃದ್ಧಿಯಾದಲ್ಲಿ ಕೊರೊನಾ ಮಾತ್ರವಲ್ಲ ಯಾವುದೇ ರೋಗವನ್ನೂ ಹಿಮ್ಮೆಟ್ಟಿಸುವ ದೊಡ್ಡ ಶಕ್ತಿ ಸೃಷ್ಟಿಯಾಗುತ್ತದೆ. ಈ ಮೂರರಲ್ಲಿ ಯಾವುದೇ ಮುಂಚೂಣಿಗೆ ಬಂದರೂ ಭಾರತಕ್ಕೆ ಬಲ ಬಂದಂತೆ. ಒಟ್ಟಾರೆ ಕೋವಿಡ್ ಗೆಲ್ಲುವ ನಮ್ಮ ಪ್ರಯತ್ನ ಖಂಡಿತವಾಗಿ ಸಕ್ಸಸ್ ಕಾಣಲಿದೆ. ಜನರು ಮುಂಜಾಗ್ರತೆ ವಹಿಸಬೇಕೆಂಬುದು ನನ್ನ ಕಳಕಳಿಯ ಸಲಹೆ.

ಡಾ.ಜಗದೀಶ್ ಹಿರೇಮಠ: ಕೋವಿಡ್ ನಿಗ್ರಹ ತಕ್ಷಣಕ್ಕೆ ಅಸಾಧ್ಯ. ಇದು ಇಡೀ ಜಗತ್ತಿಗೆ ಗೊತ್ತಿರುವ ವಿಷಯ. ಸೋಂಕಿತರ ಪತ್ತೆ, ತಪಾಸಣೆ ಹಾಗೂ ಸಕಾಲಿಕ ಚಿಕಿತ್ಸೆಯೊಂದೇ ಈಗಿನ ಪರಿಹಾರ. ವ್ಯವಸ್ಥೆಯಲ್ಲಿ ಕೆಲವು ಲೋಪಗಳಾಗಿವೆ. ಅದನ್ನೇ ಬೊಟ್ಟು ಮಾಡುವ ಬದಲು ಸರಿಪಡಿಸಿಕೊಂಡು ಮುನ್ನಡೆಯುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿದ್ದರೂ ದೇಶದ ಜನರ ಆರೋಗ್ಯ ಕಾಪಾಡುವ ಒಂದು ವ್ಯವಸ್ಥೆ ರೂಪಿಸಲು ಆಡಳಿತ ನಡೆಸಿದವರಿಗೆ ಆಗಿಲ್ಲ. ಇದನ್ನು ಖಾಸಗಿ ಆಸ್ಪತ್ರೆಗಳು ಮಾಡುತ್ತಿವೆ. ನಮಗೆ ಸಹಕರಿಸಿ ಎನ್ನುವುದು ಸರ್ಕಾರಕ್ಕೆ ನಮ್ಮ ಆಗ್ರಹ. ನಿಮ್ಮ ಕೈಲಾಗದ್ದನ್ನು ನಾವು ಮಾಡುತ್ತಿದ್ದೇವೆ. ಜನರ ಹಿತದೃಷ್ಟಿಯಿಂದ ಬೆಂಬಲಿಸುವ ಅಗತ್ಯವಿದೆ. ಕೊರೊನಾ ವೇಳೆಯಲ್ಲಿ ಸಂಘರ್ಷಕ್ಕೆ ಬದಲು ಸೌಹಾರ್ದ ಮಾರ್ಗ ಅನುಸರಿಸಿ ಎಂಬುದು ವೈದ್ಯರ ಕಿವಿಮಾತು.

ಡಾ.ಗಣೇಶ್ ಪ್ರತಾಪ್: ಮಾಸ್ಕ್ ಧರಿಸಿಕೊಳ್ಳಬೇಕು, ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಬೇಕು. ಒಂದು ಹಂತದವರೆಗೂ ಹರಡುವಿಕೆಯನ್ನು ನಿಯಂತ್ರಣದಲ್ಲಿಟ್ಟು ನಿಭಾಯಿಸಬಹುದೇನೋ. ಆದರೆ ಅಂತಿಮವಾಗಿ ರೋಗದ ವಿರುದ್ಧ ಹೋರಾಡುವುದೇ ಮಾರ್ಗ. ಹೇಗೆಂದರೆ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲದೆ ಹೋದರೆ, ರೋಗ ನಿಯಂತ್ರಣಕ್ಕೆಂದು ಲಾಕ್ ಡೌನ್ ಮಾಡಿದರೆ ಫೈನಾನ್ಷಿಯಲ್ ಬರ್ಡನ್ ಉಂಟಾಗಿ ಶ್ರೀಸಾಮಾನ್ಯ ತೊಂದರೆಗೊಳಗಾಗ್ತಾನೆ. ಅದಕ್ಕೆ ಸಾಮಾನ್ಯರಿಂದ ಹಿಡಿದು ಸಿರಿವಂತರೂ ಕೂಡ ಸೇವಿಸುವ ಆಹಾರದಲ್ಲಿ ಸಾಕಷ್ಟು ಪ್ರೊಟೀನ್, ವಿಟಮಿನ್ನುಗಳಿರುವಂತೆ ನೋಡಿಕೊಳ್ಳಬೇಕು. ಕಿತ್ತಳೆ, ಮೂಸಂಬಿಯಂತಹ ಹಣ್ಣುಗಳು, ಹಾಲು, ಮೊಟ್ಟೆ, ರಾಗಿ ಮಾಲ್ಟ್ ಗಳಂತಹ ರೈತರ ಉತ್ಪನ್ನಗಳನ್ನೆ ನೇರವಾಗಿ ಬಳಸುವುದರಿಂದ ಎರಡು ರೀತಿಯ ಅನುಕೂಲಗಳುಂಟಾಗುತ್ತವೆ. ಇದೇ ದೇಸಿ ಚಿಂತನೆ; ಹೊಸದೇನೂ ಅಲ್ಲ, ಗಾಂಧಿಯವರು ಇದನ್ನು ಆವತ್ತೇ ಹೇಳಿದ್ದರಲ್ಲ. ಜನರ ಆರೋಗ್ಯದ ಜೊತೆಗೆ ರಾಷ್ಟ್ರದ ಆರ್ಥಿಕತೆ ಕೂಡ ಸದೃಢವಾಗಿರುತ್ತದೆ. ಅದನ್ನೆ ಮೊನ್ನೆ ದಿನ ನಮ್ಮ ಪ್ರಧಾನಿಗಳು ವೋಕಲ್ ಫಾರ್ ಲೋಕಲ್ ಅಂತ ಹೇಳಿದ್ದು.

 

Leave a Reply

Your email address will not be published.