ಮೇಕಿಂಗ್ ಆಫ್ ಆ್ಯನ್ ಆರ್ಟಿಸ್ಟ್

ಹಿಂದೂಸ್ತಾನೀ ಗಾಯಕ ಪಂ.ಗಣಪತಿ ಭಟ್ ಹಾಸಣಗಿ ಅವರ ಜೊತೆಯಲ್ಲಿ ಆಗಾಗ ನಡೆಸಿದ ಮಾತುಕತೆಯ ಕೆಲ ನೆನಪುಗಳ ಮೂಲಕ ಒಂದು ಕೊಲಾಜ್ ಚಿತ್ರಣವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಅವರ ಮಗ ವಸಂತ.

-ವಸಂತ

ಚಿತ್ರಗಳು: ಸಾಗ್ಗೆರೆ ರಾಧಾಕೃಷ್ಣ

ಆಗೆಲ್ಲ ಪತ್ರವ್ಯವಹಾರದ ಕಾಲ. ಪತ್ರಗಳು ಮತ್ತು ಟೆಲಿಗ್ರಾಂ ಮೂಲಕವೇ ಎಲ್ಲ ಸಂವಹನಗಳು. ಟ್ರಂಕ್ ಬುಕಿಂಗ್ ಟೆಲಿಫೋನ್ ಆಗಷ್ಟೇ ಹಳ್ಳಿ ಊರುಗಳಿಗೂ ಕಾಲಿಡುತ್ತಿದ್ದ ಕಾಲ. 1985ರ ಎಪ್ರಿಲ್ ಅಥವಾ ಮೇ ತಿಂಗಳ ಸಮಯವಿರಬಹುದು. ಕರ್ನಾಟಕದ ಚಿಕ್ಕ ಹಳ್ಳಿಯಲ್ಲಿ ವಾಸವಾಗಿದ್ದ ಯುವ ಸಂಗೀತ ಕಲಾವಿದರೊಬ್ಬರಿಗೆ ಪುಣೆಯಿಂದ ಒಂದು ಪತ್ರ ಬರುತ್ತದೆ. ಅಂತಾರಾಷ್ಟ್ರೀಯ ಖ್ಯಾತಿಯ ಸವಾಯಿ ಗಂಧರ್ವ ಸಂಗೀತ ಸಮ್ಮೇಳನವನ್ನು ಸಂಘಟಿಸುವ ಪಂ.ಭೀಮಸೇನ ಜೋಶಿಯವರು ಸ್ವತಃ ಆ ಪತ್ರ ಬರೆದು ಡಿಸೆಂಬರ್ ತಿಂಗಳಲ್ಲಿ ಆ ವರ್ಷದ ಸವಾಯಿ ಗಂಧರ್ವ ಸಂಗೀತ ಸಮ್ಮೇಳನದಲ್ಲಿ ಹಾಡಲು ಆಯ್ಕೆ ಮಾಡಿರುವುದಾಗಿಯೂ, ಅದಕ್ಕೆ ಒಪ್ಪಿಗೆ ಸೂಚಿಸಿ ಮರುಪತ್ರ ಬರೆಯುವಂತೆಯೂ ಅದರಲ್ಲಿ ಒಕ್ಕಣಿಸಿರುತ್ತಾರೆ. ಹೀಗೆ ಇಂದು ನಾಡಿನಾದ್ಯಂತವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತರಾಗಿರುವ ಪಂ.ಗಣಪತಿ ಭಟ್ ಹಾಸಣಗಿ ಅವರ ಕಲಾಜೀವನದ ಒಂದು ಹೊಸ ಅಧ್ಯಾಯ ತೆರೆದುಕೊಳ್ಳುತ್ತದೆ.

ಈ ಅವಕಾಶದ ಹಿಂದೆ ಒಂದು ಆಯ್ಕೆ ಪ್ರಕ್ರಿಯೆಯಿದ್ದದ್ದು ಮುಂದೆ ತಿಳಿದು ಬರುತ್ತದೆ. 1984ರಲ್ಲಿ ಪುಣೆಯಲ್ಲಿ ‘ಕಲ್ ಕೆ ಕಲಾಕಾರ್’ ಎಂಬ ಯುವ ಸಂಗೀತಗಾರರ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಅಯೋಜಿಸಲ್ಪಟ್ಟಿತ್ತು. ಪಂ.ವಸಂತರಾವ್ ದೇಶಪಾಂಡೆ, ಪಂ.ಕುಮಾರ ಗಂಧರ್ವ, ಪಂ.ಭೀಮಸೇನ ಜೋಷಿ, ಪಂ.ಜಸರಾಜ್, ಪಂ.ಜಿತೇಂದ್ರ ಅಭಿಶೇಕಿ ಮುಂತಾದ ಸಂಗೀತ ದಿಗ್ಗಜರೆಲ್ಲ ಮೂರೂ ದಿನಗಳ ಕಾಲ ಶ್ರೋತೃಗಳಾಗಿ ಅಲ್ಲಿ ಎಲ್ಲ ಯುವ ಕಲಾವಿದರ ಸಂಗೀತಕ್ಕೆ ಸಾಕ್ಷಿಯಾಗಿದ್ದಲ್ಲದೇ ಮೂರನೆಯ ದಿನದ ಕೊನೆಯಲ್ಲಿ ಅಪ್ರತಿಮ ಪ್ರದರ್ಶನ ನೀಡಿದ ಯುವ ಕಲಾವಿದರ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿ ಪ್ರಶಸ್ತಿ ನೀಡಿ ಪುರಸ್ಕರಿಸಿ ಪ್ರೋತ್ಸಾಹಿಸುತ್ತಿದ್ದ ವೇದಿಕೆ ಅದಾಗಿತ್ತು. ಆ ವರ್ಷ ಚಿಕ್ಕ ಪ್ರಾಯದ ಗಣಪತಿ ಭಟ್ ಅವರ ಗಾಯನದ ಕುರಿತು ಪಂ.ಜಸರಾಜ್ ಮೆಚ್ಚಿ ಮಾತನಾಡಿದ್ದೂ, ಶಾಲು ಹೊದೆಸಿ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದೂ ಆಗಿನ ಪತ್ರಿಕೆಗಳಲ್ಲಿ ವರದಿಯಾಗಿತ್ತು.

ಆ ಸಂದರ್ಭದಲ್ಲಿ ಅಲ್ಲಿ ಉಪಸ್ಥಿತರಿದ್ದ ಆರ್ಯ ಪ್ರಸಾರಕ ಮಂಡಳಿಯ ಸದಸ್ಯರೂ ಮುಂದಿನ ವರ್ಷದ ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವಕ್ಕೆ ಧಾರವಾಡದ ಪಂ.ಬಸವರಾಜ ರಾಜಗುರು ಅವರ ಶಿಷ್ಯ ಗಣಪತಿ ಭಟ್ ಅವರನ್ನು ಆಯ್ಕೆ ಮಾಡಲು ಅನುಮೋದನೆ ನೀಡಿದ್ದರು. ಮುಂದೆ 1985ರ ಡಿಸೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವದಲ್ಲಿ ಮಧುಕಂಸ್, ಭಾಗೇಶ್ರೀ ರಾಗಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ‘ಒನ್ ಮೋರ್’ ಆಗ್ರಹದ ಮೇರೆಗೆ ಮರಾಠೀ ನಾಟ್ಯಗೀತೆಯೊಂದನ್ನು ಹಾಡಿದ ಮರುದಿನ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಫೋಟೊದೊಂದಿಗೆ ‘ಗಣಪತಿ ಭಟ್ ಯಾನೇ ಶ್ರೋತ್ರಾನ್ನ ಝಿಂಕಲೇ’ ಎಂಬ ಹೆಡ್ಲೈನೊಂದಿಗೆ ಪ್ರಕಟವಾದ ವರದಿಗಳು, ಆ ನಂತರದ ನಾಕೈದು ವರ್ಷಗಳಲ್ಲಿ ಪುಣೆ, ಮುಂಬೈ ಅಲ್ಲದೇ ಇಡೀ ಮಹಾರಾಷ್ಟ್ರದ ಮೂಲೆ ಮೂಲೆಯಲ್ಲಿಯೂ ಪ್ರತಿ ತಿಂಗಳೂ ಒಂದೆರಡು ಕಾರ್ಯಕ್ರಮಗಳನ್ನು ನೀಡುತ್ತ ಮಹಾರಾಷ್ಟ್ರದಾದ್ಯಂತ ಮನೆಮಾತಾಗಿದ್ದೂ, ಕಾಲಾಂತರದಲ್ಲಿ ದೇಶದಾದ್ಯಂತದ ಪ್ರಮುಖ ವೇದಿಕೆಗಳಲ್ಲಿ ಹಾಡಿ ಮೆಚ್ಚುಗೆ ಪಡೆದದ್ದೂ ಸಹ ಒಂದು ಕನಸಿನಂತೆ ತೋರುತ್ತದೆ ಎಂದು ಈಗ ಎಪ್ಪತ್ತರ ಪ್ರಾಯದಲ್ಲಿ ಸ್ವತಃ ಪಂ.ಗಣಪತಿ ಭಟ್ಟರೇ ನೆನಪಿಸಿಕೊಳ್ಳುವಾಗ ಆಶ್ಚರ್ಯವಾಗದೇ ಇರದು.

ಈ ವಿದ್ಯಮಾನಕ್ಕೆ ಹೊರತಾಗಿ, ತೀರ ಈಚೆಗೆ ಎಂಬಂತೆ ಘಟಿಸಿದ, ಈ ಮುಂದೆ ವಿವರಿಸಲಾಗುವ ಒಂದು ಟೆಲಿಫೋನ್ ಸಂಭಾಷಣೆ ಕೂಡ ಬದಲಾಗುತ್ತಿರುವ ಈ ಕಾಲದ ಸಂಗೀತದ ಮೊಹಲ್‍ಗೆ ಒಂದು ನಿದರ್ಶನವಾಗಿ ತೋರುತ್ತದೆ. ಒಂದು ಮೌಲ್ಯವನ್ನು ನಂಬಿ ಬದುಕಿದ ಕಲಾವಿದರ ಕಣ್ಣೆದುರು ಕೀರ್ತಿ-ಪ್ರಾಪ್ತಿಗಾಗಿ ಸ್ಥಾನಪಲ್ಲಟಗೊಳ್ಳುತ್ತಿರುವ ವೃತ್ತಿಧರ್ಮ ಮತ್ತು ಮೌಲ್ಯಗಳ ಸಂಘರ್ಷಗಳನ್ನು ಎದುರಿಸಬೇಕಾದ ಸವಾಲನ್ನೂ ಇದು ತೆರೆದು ತೋರುತ್ತದೆ. ಭಾರತದ ಅತ್ಯಂತ ಪ್ರತಿಷ್ಠಿತ ಸಂಗೀತ ಸಮಾರೋಹಗಳಲ್ಲಿ ಒಂದು ಎಂದು ಹೆಸರಾದ ವೇದಿಕೆಯೊಂದರಲ್ಲಿ ಎರಡು ದಶಕಗಳ ಹಿಂದೆಯೇ ಎರಡೆರಡು ಸಾರಿ ಅಧಿಕೃತ ಆಹ್ವಾನದ ಮೇರೆಗೆ ಪಂ.ಗಣಪತಿ ಭಟ್ಟರು ಹಾಡಿ ಮನ್ನಣೆಗಳಿಸಿದ್ದು ಈಗ ಇತಿಹಾಸ.

ಎರಡು ವರ್ಷಗಳ ಹಿಂದೆ ಬಹುಶಃ 2019ರಲ್ಲಿರಬೇಕು, ದೂರವಾಣಿಯ ಮೂಲಕ ಅವರನ್ನು ಸಂಪರ್ಕಿಸಿದ ವ್ಯಕ್ತಿಯೋರ್ವ “ಪಂಡಿತ್ ಜೀ, ಇಸ್ ಸಾಲ್ ಕಾ ಸಮಾರೋಹ್ ಮೆ ಆಪ್ ಕಾ ಗಾಯನ್ ಪ್ರಸ್ತುತ್ ಕರನೇಕಾ ಮೌಕಾ ಹಂ ದಿಲವಾಯೇಂಗೆ, ಲೇಕಿನ್ ಏಕ್ ಕಂಡೀಶನ್ ಪರ್” ಎಂದಾಗ “ಮೈ ತೊ ದೋ ಬಾರ್ ಗಾ ಚುಕಾ ಹ್ಞೂ ಬಿನಾ ಕಂಡೀಷನ್ ಸೆ. ಫಿರ್ ಭಿ ಕ್ಯಾ ಹೈ ಆಪ್ ಕಾ ಕಂಡೀಶನ್?” ಎಂದು ಭಟ್ಟರು ಕೇಳಿದಾಗ ಆತ “ಕುಛ್ ಬಡೇ ಬಾತ್ ನಹೀ ಪಂಡಿತ್ ಜೀ, ಅಭಿ ತೋ ಸಬ್ ಜಗಹ ಇನ್ಫ್ಲುಯೆನ್ಸ್ ಚಲ್ ರಹಾ ಹೈ. ಯಹಾ ಪೆ ಭಿ ಐಸೇಹೀ ಹೋರಹಾಹೈ. ಆಪ್ ಕೊ ಕ್ಯಾ ಗೌರವ್ ಧನ್ ಮಿಲೇಗಾ ಉಸ್ಮೆ 50% ಹಮೆ ದೇನಾ ಹೈ, ಬಾಕಿ ಸಬ್ ಹಮ್ ದೇಖಲೇಂಗೆ” ಇದನ್ನು ಕೇಳಿ ದಂಗಾದ ಪಂ.ಗಣಪತಿ ಭಟ್ಟರು ನೇರವಾಗಿ “ದೇಖೋ ಭಾಯ್, ಹಮ್ ಸಂಗೀತ್ ಕೊ ನಹೀ ಬೇಚತೇ. ಮುಝೆ ಇಸ್ ತರಹಕೀ ವ್ಯವಹಾರ್ ಕರನಾ ನಹೀ ಹೈ. ಇಸ್ ಮೆ ಮೇರಾ ಇಂಟರೆಸ್ಟ್ ನಹೀ ಹೈ” ಎಂದು ಫೋನ್ ಕಟ್ ಮಾಡಿದ್ದರು. ಕೇವಲ ಮೂವತ್ತು ಮೂವತ್ತೈದು ವರ್ಷಗಳ ಅಂತರದಲ್ಲಿ ಬದಲಾಗುತ್ತಿರುವ ಕಲಾಕ್ಷೇತ್ರದ ಮೌಲ್ಯಗಳ ಸ್ಥಿತ್ಯಂತರಗಳ ಕುರಿತಾಗಿ ಬಹಳಷ್ಟು ಹೇಳುವ ಮೆಟಫರ್ ಆಗಿ ಮೇಲೆ ಉಲ್ಲೇಖಿಸಿದ ವಿದ್ಯಮಾನಗಳು ಕಾಣಿಸುತ್ತವೆ.

ಮೇಕಿಂಗ್ ಆಫ್ ಆ್ಯನ್ ಆರ್ಟಿಸ್ಟ್ ಎನ್ನುವುದು ಹಲವು ಆಯಾಮಗಳನ್ನು ಒಳಗೊಂಡ ಒಂದು ಸುದೀರ್ಘ ಸಂಕೀರ್ಣ ಪ್ರಕ್ರಿಯೆ. ಕಲಿಕೆಯ ಹಂತ, ಕಲಾವಿದನಾಗಿ ರೂಪುಗೊಳ್ಳುವ ಹಂತ, ತದನಂತರದ ಇನ್ನೊಂದೇ ಆಗಿ ಕಾಣಲ್ಪಡುವ, ರೂಪಿತಗೊಳ್ಳುವ ಅಸ್ತಿತ್ವದ ನಿರೂಪಣೆ ಮತ್ತು ನಿರ್ವಹಣೆಯ ಹಂತ, ಅಲ್ಲಿ ಕಾಣುವ ಏಳು-ಬೀಳುಗಳು, ಕಲೆ-ಕಲಾವಿದ, ಸಂಸ್ಕøತಿ-ಸಮಾಜ, ಈ ಎಲ್ಲದರ ನಡುವೆ ಒಬ್ಬ ಮನುಷ್ಯನಾಗಿಯೂ ನಿರ್ವಹಿಸಬೇಕಾದÀ ಅನೇಕ ಪಾತ್ರಗಳು… ಹೀಗೆ ವಿವಿಧ ಸಂಕೀರ್ಣ ಸಂದರ್ಭಗಳನ್ನು ಎದುರುಗೊಳ್ಳುತ್ತಲೇ ಅವುಗಳನ್ನು ಮೀರುವ ಸವಾಲುಗಳನ್ನೂ ನಿರ್ವಹಿಸುವ ಸಾಮಥ್ರ್ಯದ ಮೇಲೆ ಕಲಾವಿದನೊಬ್ಬ ಬೆಳೆಯಬೇಕಾದ, ಅರಳಬೇಕಾದ ಅಂಶಗಳು ನಿರ್ಧರಿಸಲ್ಪಡುವ ಕಾಲವಿದು. ಅದರಲ್ಲೂ ಪ್ರದರ್ಶನ ಕಲೆಯಾಗಿಯೇ ಹೆಚ್ಚು ಪ್ರಾಧಾನ್ಯವನ್ನು ಪಡೆದುಕೊಂಡು ಬಂದಿರುವ ಭಾರತೀಯ ಶಾಸ್ತ್ರೀಯ ಸಂಗೀತದಂತಹ ವಿಷಯ ವೇದಿಕೆಯ ಮೇಲೆ ನೋಡಲು ಅನೇಕ ವಿಜೃಂಭಣೆಗಳಿಂದ ಕೂಡಿದ, ಬಣ್ಣಬಣ್ಣದ ಆದರ್ಶ, ಕಲ್ಪನೆಗಳ ಎಳೆಗಳಿಂದ ಹೆಣೆಯಲ್ಪಟ್ಟ ಆಕರ್ಷಕ ಬಲೆಯಾಗಿಯೇ ಕಾಣಬರುತ್ತದೆ.

ಆದರೆ ವಾಸ್ತವಿಕ ಜೀವನ ಎಂಬುದು ಬೇರೆಯದೇ ಆದ ನೆಲೆಯಲ್ಲಿ ಎದುರುಗೊಳ್ಳಬೇಕಾದ ತತ್ ಕ್ಷಣದ ವಿದ್ಯಮಾನಗಳ ಸಮುಚ್ಛಯ. ಬದುಕನ್ನು ಕಾಣುವ, ಜೀವಿಸುವ ಕ್ರಮಕ್ಕೆ ಒಂದು ಸಂಸ್ಕಾರವನ್ನು ಎಲ್ಲ ಕಲೆ, ಸಾಹಿತ್ಯಾದಿಗಳು ಒದಗಿಸುತ್ತವೆ ಎನ್ನುವುದು ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಕಲ್ಪಿತ ನಂಬಿಕೆ. ವರ್ತಮಾನ ಕಾಲದಲ್ಲಿ ಈ ನಂಬಿಕೆಯನ್ನು ಕೂಡ ಪ್ರಶ್ನಿಸಬಹುದು. ಆದರೆ ಅತಿ ದೀರ್ಘಕಾಲದಿಂದ ಆಚರಣೆಯಲ್ಲಿ ರೂಢಿಯಾಗಿ ಬಂದಿರುವ ನಂಬಿಕೆಯನ್ನು ಪ್ರಶ್ನೆಮಾಡುವುದನ್ನು ತಕ್ಷಣಕ್ಕೆ ಯಾರೂ ಒಪ್ಪಲಾರರು. ಮತ್ತು ಅದರಿಂದ ಉತ್ಪತ್ತಿಯಾಗುವ ವಾದಸರಣಿಯಿಂದ ತತ್‍ಕ್ಷಣದ ಪರಿಹಾರವೇನೂ ಸಿಗಲಾರದು. ಆದರೆ ಆಗಾಗ ಇಂಥ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುತ್ತಲೇ ಉತ್ತರವನ್ನು ಹುಡುಕಿಕೊಳ್ಳಬೇಕಾದ ಅವಶ್ಯಕತೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಖ್ಯಾತ ಹಿಂದೂಸ್ತಾನೀ ಗಾಯಕ ಪಂ.ಗಣಪತಿ ಭಟ್ ಹಾಸಣಗಿ ಅವರ ಜೊತೆಯಲ್ಲಿ ಆಗಾಗ ನಡೆಸಿದ ಮಾತುಕತೆಯ ಕೆಲ ನೆನಪುಗಳ ಮೂಲಕ ಒಂದು ಕೊಲಾಜ್ ಚಿತ್ರಣವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನವಷ್ಟೇ ಇದು.

ಪಂ.ಹಾಸಣಗಿ ಗಣಪತಿ ಭಟ್ಟರು ತನ್ನ ಬದುಕಿನಲ್ಲಿ ಘಟಿಸಿದ್ದೆಲ್ಲವೂ ಆಕಸ್ಮಿಕ, ತಾನು ಒಬ್ಬ ಕಲಾವಿದನಾಗುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. “ಸಂಗೀತದ ಮೇಲಿನ ಆಕರ್ಷಣೆಯಿಂದ ಎಸ್.ಎಸ್.ಎಲ್.ಸಿ ಶಿಕ್ಷಣದ ನಂತರದ ಕಾಲೇಜು ಶಿಕ್ಷಣಕ್ಕಾಗಿ ಹಾಸಣಗಿ ಎಂಬ ಹಳ್ಳಿಯಿಂದ ಧಾರವಾಡಕ್ಕೆ ಹೋದೆ. ಅಲ್ಲಿ ಪಂ.ಬಸವರಾಜ ರಾಜಗುರು ಎಂಬ ಅದ್ಭುತ ಗುರುಗಳು ಸಿಕ್ಕರು. ಅವರು ಹೇಳಿದಂತೆ ಕೇಳಿದೆ. ಹತ್ತು ಹದಿನೈದು ವರ್ಷಗಳ ಕಾಲ ನಿರಂತರವಾಗಿ ಅವರೊಂದಿಗಿನ ತೀರ ಆಪ್ತವಾದ ಒಡನಾಟದಿಂದ ಕಲಾವಿದನಾಗಿ ರೂಪುಗೊಂಡೆ. ಮುಂದೆ ಅವಕಾಶಗಳು ತಾವೇ ತಾವಾಗಿ ಒದಗಿಬಂದವು. ಬಂದ ಅವಕಾಶಗಳನ್ನು ಯಶಸ್ವಿಯಾಗಿ ಪಾರುಮಾಡಿದ್ದು ಮಾತ್ರ ನನಗೇ ಗೊತ್ತಿಲ್ಲದ ಯಾವುದೋ ಶಕ್ತಿ. ಇವತ್ತಿಗೂ ಸಹ ನನಗೆ ಕಾರ್ಯಕ್ರಮಗಳನ್ನು ಒಪ್ಪಿಕೊಂಡ ಮೇಲೆ ಅದು ಮುಗಿಯುವವರೆಗೂ ಒಂದು ತರಹದ ಆತಂಕ, ಚಡಪಡಿಕೆ ಕಾಡುತ್ತದೆ” ಎಂದು ಹೇಳುತ್ತಾರೆ.

1980ರ ದಶಕದ ಉತ್ತರಾರ್ಧ ತರುಣ ಗಣಪತಿ ಭಟ್ಟರ ಕಲಾಜೀವನದಲ್ಲಿ ಅತ್ಯಂತ ಏರುಗತಿಯ ಅವಧಿ. ಆ ಅವಧಿಯಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚು ಇಡೀ ಮಹಾರಾಷ್ಟ್ರವನ್ನು ಆವರಿಸಿಕೊಳ್ಳುತ್ತ ಉತ್ತರ ಭಾರತದ ಹಲವು ಪ್ರಮುಖ ನಗರ ಪಟ್ಟಣಗಳಲ್ಲಿ ಖ್ಯಾತರಾಗಿ ಅಭಿಮಾನಿಗಳ ಮೆಚ್ಚುಗೆಯೊಂದಿಗೆ ಬೆಳೆಯುತ್ತಿದ್ದ ಸಂದರ್ಭ. ಕಾರ್ಯಕ್ರಮ ಮುಗಿದ ಕೂಡಲೇ ನೋಟಿನ ಹಾರ ಹಾಕುವವರು, ಹೊಸಹೊಸ ಬಟ್ಟೆ ನೀಡಿ ಗೌರವ-ಪ್ರೀತಿ ವ್ಯಕ್ತಪಡಿಸುವ ಅಪರಿಚಿತ ಅಭಿಮಾನಿಗಳು, ಮನೆಗೆ ಕರೆದೊಯ್ದು ಊಟ ಹಾಕಿ ತಮ್ಮವನೆಂದು ಉಪಚರಿಸುವ ಅಪರಿಚಿತ ಜನತೆ, ಸಾಲುಗಟ್ಟಲೆ ಕ್ಯೂದಲ್ಲಿ ನಿಂತು ಅಟೊಗ್ರಾಫ್ ಪಡೆಯುವವರು, ಕಾಲಿಗೆ ಬೀಳುವವರು… ಅದೊಂದು ಬೇರೆಯದೇ ಲೋಕ.

ಕಾರ್ಯಕ್ರಮಗಳು ಇಲ್ಲದ ದಿನಗಳಲ್ಲಿ ಹಾಸಣಗಿಗೆ ಮರಳಿ ಬಂದರೆ ಒಮ್ಮೆಲೇ ಎದುರಾಗುವ ಭಣಭಣ ಮೌನ! ಒಮ್ಮೊಮ್ಮೆ ಎಷ್ಟು ಅಸಹನೀಯ ಎಂದರೆ ಇದ್ದಕ್ಕಿದ್ದಂತೆ ಏಕಾಕಿತನ ಆವರಿಸಿ ಖಿನ್ನಗೊಳ್ಳುವ ಮಟ್ಟಿಗೆ. ಮುಂಬೈಯ ವೇಗ ಮತ್ತು ಹಾಸಣಗಿಯ ಅತಿ ನಿಧಾನ ಗತಿ! ಹೊರನಾಡಿನ ಜನಪ್ರಿಯತೆ ಮತ್ತು ಊರಲ್ಲಿ ಎಲ್ಲರಂತೇ ಇದ್ದೂ ಅಪರಿಚಿತನಾಗಿರಬೇಕಾದ ವಿಚಿತ್ರ ದ್ವಂದ್ವ ಮತ್ತು ಈ ಎರಡನ್ನೂ ಸಮನ್ವಯಗೊಳಿಸುವ ಕಸರತ್ತು! ಒಮ್ಮೊಮ್ಮೆ ಕನಿಷ್ಟ ಆಧುನಿಕ ಸಂವಹನಗಳ ಕೊರತೆಯಿಂದಾಗಿ ಕೈತಪ್ಪಿ ಹೋಗುವ ಅವಕಾಶಗಳು.

ಈ ರೀತಿಯ ಪರಿಸ್ಥಿತಿಯಲ್ಲಿ ಮುಂಬೈ, ಪೂಣಾಗಳಲ್ಲಿರುವ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಅಲ್ಲಿಗೇ ಶಿಫ್ಟಾಗಿಬಿಡಬೇಕು ಎಂದು ಅಂದುಕೊಂಡರೂ ಹಾಸಣಗಿಯ ತನ್ನದೇ ಅಜ್ಜನ ಮನೆಗೆ ದತ್ತಕ ಮಗನಾಗಿ ಬಂದುದಕ್ಕೆ ಮೂಲವನ್ನು ಬಿಡಲಾಗದ ನೈತಿಕ ಸಂಘರ್ಷ. ಎಲ್ಲ ಹೊಯ್ದಾಟಗಳ ನಡುವೆಯೂ ಕೊನೆಗೆ ಹಾಸಣಗಿಯೇ ತನ್ನ ನಿಜದ ನೆಲೆ ಎಂದು ಗಟ್ಟಿಯಾಗಿ ನಿರ್ಧರಿಸಿದ್ದು. ಅಲ್ಲಿಯವನಾಗೇ ಬದುಕಿ ಎಲ್ಲರಂತವನಾಗದೇ ಭಿನ್ನವಾಗಿ ರೂಪುಗೊಂಡಿದ್ದು ಒಂದು ವಿಚಿತ್ರ. “ಮುಂಬೈ-ಪೂಣಾಗಳಂತಹ ನಗರಗಳಿಗೆ ಎಲ್ಲರನ್ನೂ ಒಳಗೊಳ್ಳುವ ತಾಕತ್ತಿರುವಂತೆ ಹಾಸಣಗಿಯಂತಹ ಹಳ್ಳಿಗಳಿಗೆ ಗಟ್ಟಿಯಾಗಿ ಬೇರೂರಿಸುವ ಶಕ್ತಿಯಿರುತ್ತದೆ. ಇಲ್ಲಿ ಬದುಕು ನಿಧಾನ ಎಂದೆನಿಸಿದರೂ ಅದು ಕಲ್ಪಿಸುವ ಬದುಕಿನ ವಿಭಿನ್ನ ಅವಕಾಶಗಳು, ಏಕಾಂತದಲ್ಲಿಯೇ ಸೂಕ್ಷ್ಮದರ್ಶನಗೊಂಡು ಅನುಭವಕ್ಕೆ ಪಕ್ಕಾಗುವ ಜೀವನ ದರ್ಶನದ ಕಾಣ್ಕೆ, ಇವೆಲ್ಲ ನನ್ನೊಳಗಿನ ಕಲಾವಿದನನ್ನು ಸೂಕ್ಷ್ಮಗೊಳಿಸುತ್ತ ಹೋದದ್ದಷ್ಟೇ ಅಲ್ಲ, ಒಬ್ಬ ಸಾಮಾನ್ಯನಾಗಿ ಇರುವ ಸುಖವನ್ನೂ ನೀಡಿದೆ. ನಾನು ಇಲ್ಲೇ ಇರಲು ನಿರ್ಧಾರ ಮಾಡಿದ್ದು ಯಾವ ವಿಧದಲ್ಲಿಯೂ ತಪ್ಪಲ್ಲ ಎಂಬ ಸಮಾಧಾನ ನನಗಿದೆ.” ಎಂದು ಗಣಪತಿ ಭಟ್ಟರು ಹೇಳುತ್ತಾರೆ.

“ವೃತ್ತಿನಿರತ ಕಲಾವಿದನಾಗಬೇಕೆಂದು ನನಗೆ ಯಾವತ್ತೂ ಅನಿಸಿಲ್ಲ. ಶಾಸ್ತ್ರೀಯ ಸಂಗೀತ ಒಂದು ಪ್ರದರ್ಶನಕಲೆಯಾಗಿದ್ದಾಗ್ಯೂ ನನಗೆ ಪ್ರತಿ ಕಾರ್ಯಕ್ರಮವೂ ಒಂದು ಸವಾಲಾಗಿಯೇ ಕಾಣುತ್ತದೆ. ಅದಕ್ಕೆ ನಾನು ನ್ಯಾಯ ಒದಗಿಸಬಲ್ಲೆನೇ ಎಂಬ ಅನುಮಾನವೂ ಕಾಡುತ್ತಿರುತ್ತದೆ. ಎಷ್ಟೇ ನುರಿತ ಕಲಾವಿದ ಎಂದರೂ ಅದು ಆ ಕ್ಷಣದ ಸೃಷ್ಟಿ. ಏನಾಗುತ್ತದೆ ಎಂಬುದರ ಚಿಕ್ಕ ಹೊಳಹೂ ಇರುವುದಿಲ್ಲ. ಹಾಗಾಗಿ ಒಂದು ರೀತಿಯ ಅವ್ಯಕ್ತ ತಳಮಳ, ಚಡಪಡಿಕೆ, ಅನಿಶ್ಚಿತತೆ ಯಾವಾಗಲೂ ಕಾಡುತ್ತಿರುತ್ತದೆ. ಸಂಗೀತ ನನಗೆ ಅಭಿವ್ಯಕ್ತಿಯ ಒಂದು ಮಾಧ್ಯಮವಷ್ಟೆ. ಆ ಕಾರಣಕ್ಕಾಗಿ ಒದಗಿಬಂದ ಜನಪ್ರಿಯತೆ, ಗೌರವ, ಸ್ಥಾನ-ಮಾನ ಎಲ್ಲವೂ ತಾತ್ಕಾಲಿಕ ಪ್ರೋತ್ಸಾಹಕಗಳು. ಇದೆಲ್ಲದರ ನಡುವೆಯೂ ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂದು ಅರಿತು ನಡೆಯುವುದೇ ನಿಜವಾದದ್ದು” ಎನ್ನುವುದು ಭಟ್ಟರ ಮಾತು.

ಕಲಾವಿದನಿಗಿಂತಲೂ ಕಲೆ ದೊಡ್ಡದು. ಕಲೆಗಿಂತಲೂ ಜೀವನ ದೊಡ್ಡದು ಎಂದೆನ್ನುವ ಭಟ್ಟರು ಇರುವುದು ಮತ್ತು ತೋರುವುದರ ದ್ವಂದ್ವಾತ್ಮಕ ನಿಲುವನ್ನು ಎದುರಿಸುತ್ತಲೇ ಅದನ್ನು ಮೀರಿ ಪಕ್ಕಾಗುತ್ತ ಹೋಗಬೇಕು ಎನ್ನುವ ಜಾಯಮಾನದವರು. ಸಂಗೀತದಂತಹ ಕಲೆಯನ್ನು ಅಧ್ಯಾತ್ಮಿಕ, ಅಲೌಕಿಕ ಅನುಭೂತಿಯನ್ನು ಕೊಡುವ ಅಪ್ರತಿಮ ಮಾಧ್ಯಮ ಎಂದು ಬಿಂಬಿಸಿ ಕ್ಲೀಷೆಯಾಗಿಸಿರುವುದನ್ನು ಪ್ರಶ್ನಿಸಿದಾಗ, ಒಂದೊಮ್ಮೆ ಹಾಗೇನಾದರೂ ಆಗಿದ್ದಿದ್ದರೆ ಮನುಷ್ಯ ಕ್ಷುಲ್ಲಕತನವನ್ನು ಮೀರಿ ಈ ಸಮಾಜದಲ್ಲಿ ಕ್ರಾಂತಿ ಉಂಟಾಗಬೇಕಾಗಿತ್ತಲ್ಲವೇ ಎಂಬ ತಕರಾರೆತ್ತಿದಾಗ ಅವೆಲ್ಲವೂ ಆಯಾ ಸಂದರ್ಭಕ್ಕೆ ತಕ್ಕಂತೆ ನಾವು ಸೃಷ್ಟಿಸಿಕೊಳ್ಳುವ ಮುಖವಾಡಗಳು ಎಂದೆನ್ನುತ್ತಾರೆ.

“ಮೂಲಭೂತವಾಗಿ ಸಂಗೀತ ಎನ್ನುವುದು ನಮ್ಮನ್ನು ನಾವು ಕಳೆದುಕೊಳ್ಳಲು ಇರುವ ತಾತ್ಕಾಲಿಕವಾದ ಮಾಧ್ಯಮ. ಹೆಚ್ಚುಹೆಚ್ಚು ಅದರಲ್ಲಿ ತೊಡಗಿದಂತೆಲ್ಲ ಮನುಷ್ಯ ಅಂತರ್ಮುಖಿಯಾಗುತ್ತ ಹೋಗುತ್ತಾನೆ. ಆದರೆ ಜೀವನಕ್ರಮ ಎನ್ನುವುದು ಮನುಷ್ಯನನ್ನು ಹೆಚ್ಚುಕಾಲ ಅಂತರ್ಮುಖಿಯಾಗಿಯೇ ಇರಲು ಬಿಡುವುದಿಲ್ಲ. ಬದುಕಿನ ನಿರ್ವಹಣೆಗೆ ತತ್ ಕ್ಷಣಕ್ಕೆ ಸ್ಪಂದಿಸಬೇಕಾದ ಅನೇಕ ಸಂಗತಿಗಳು ಎದುರಾಗುತ್ತಲೇ ಇರುತ್ತವೆ. ಹಾಗಿದ್ದಾಗ ಯೋಗ, ಧ್ಯಾನಗಳಂತೆಯೇ ಮನಸ್ಸನ್ನು ತತ್ಕಾಲಕ್ಕೆ ಸಮಾಧಾನಿಸುವ ಒಂದು ಸಾಧನವಾಗಿ ಮಾತ್ರ ಸಂಗೀತ ಎನ್ನುವ ಪರಿಕರ ಕೂಡ ಒದಗಿ ಬರಬಹುದು. ಅದೂ ಸಾರ್ವತ್ರಿಕವಾಗಿ ಹೀಗೆಯೇ ಆಗುತ್ತದೆ ಎಂದು ಹೇಳಲಾಗದು. ಹಾಗೆ ವೈಯಕ್ತಿಕ ಮಾನಸಿಕ ಸಮಾಧಾನವನ್ನು ಕಾಪಾಡಿಕೊಳ್ಳಲು ಅದೊಂದು ಪರಿಕರವಾಗಿ ಮಾತ್ರ ಒದಗಿಬರಬಲ್ಲುದೇ ಹೊರತು ಹೀಗೇ ಆಗುತ್ತದೆ ಎಂದು ಸಾರ್ವತ್ರಿಕ ಫರ್ಮಾನು ಹೊರಡಿಸಲಾಗದು.

ಯೋಗ, ಧ್ಯಾನ, ಸಂಗೀತದಂತಹ ವಿಷಯಗಳು ಕಾಲಕ್ರಮೇಣ ಒಂದು ಕಮಾಡಿಟಿಯಾಗಿ ರೂಪಾಂತರ ಹೊಂದುತ್ತಿರುವ ಕಾಲಘಟ್ಟದಲ್ಲಿ ವ್ಯಾಪಾರಕ್ಕೆ ತಕ್ಕಹಾಗೆ ಭೈರೂಪಗಳನ್ನೂ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿಬಿಡುತ್ತದೆ. ಮೂಲಭೂತವಾಗಿ ಸಂಗೀತ ಎನ್ನುವುದು ಕೆರಳಿಸುವ ಗುಣವನ್ನು ಹೊಂದಿರುವ ಮಾಧ್ಯಮ. ಆರಂಭದಲ್ಲಿ ಕೆರಳಿಸಿ ನಂತರ ಶಮನಗೊಳಿಸುವ ಅವಸ್ಥೆಯನ್ನು ಉಂಟುಮಾಡುವ ಶಕ್ತಿ ಸಂಗೀತಕ್ಕಿದೆ. ಅಧ್ಯಾತ್ಮಿಕ ಪರಿಭಾಷೆಯಲ್ಲಿ ಅದನ್ನು ಉನ್ಮನಿ ಎನ್ನುತ್ತಾರೆ. ಆದರೆ ಅದು ಸಾಧ್ಯವಾಗುವ ಸಂಭವನೀಯತೆ ಇರುವುದು ಹಲವಾರು ವರ್ಷಗಳ ನಿರಂತರ ಸಾಧನೆಯಿಂದ ಮಾತ್ರ. ಅದೂ ಸಹ ಸಂಭವಿಸಿಬಿಡುತ್ತದೆ ಎಂದು ನಿಖರವಾಗಿ ಹೇಳಲಾಗದು. ಅಂತಹ ಸ್ಥಿತಿಯನ್ನು ಯೋಗಿಗಳು ಮಾತ್ರ ಸಾಧ್ಯವಾಗಿಸಿಕೊಂಡಿರುತ್ತಾರೆ ಎಂದು ಬಲ್ಲವರು ಹೇಳುತ್ತಾರೆ. ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಮೊದಲು ಎಲ್ಲರಂತೆಯೇ ಸಾಮಾನ್ಯ ಮನುಷ್ಯ. ಸಂಗೀತಕಲೆ ಎನ್ನುವುದು ನನ್ನ ಅಭಿವ್ಯಕ್ತಿಯ ಮಾಧ್ಯಮ. ಅನೇಕ ಸಲ ಇದು ಶಾಮಕವಾಗಿಯೂ, ಹಲವು ಬಾರಿ ಕೆರಳಿಸುವ, ವಿಚಲಿತಗೊಳಿಸುವ, ವ್ಯಗ್ರಗೊಳಿಸುವ ಸಾಧನವಾಗಿಯೂ ಅನುಭವಕ್ಕೆ ಬಂದಿದ್ದುಂಟು.” ಎಂದು ಒಮ್ಮೆ ಹೇಳಿದ್ದರು.

ಹೀಗೆಯೇ ಒಮ್ಮೆ ಮಾತನಾಡುತ್ತ ಸಂಗೀತ ಕ್ಷೇತ್ರದ ಗುರುಶಿಷ್ಯ ಪರಂಪರೆ, ಶಿಷ್ಯವೃತ್ತಿ ಎಂಬ ಪರಿಕಲ್ಪನೆಗಳೆಲ್ಲ ಅತಿವಿಜೃಂಭಣೆಗೆ ಒಳಗಾದಂತೆ ಅನ್ನಿಸುವುದಿಲ್ಲವೇ? ಎಂದು ಕೇಳಿದ್ದೆ. ಇದಕ್ಕೆ ಕಾರಣವೂ ಇತ್ತು. ಅವರಲ್ಲೇ ಕಲಿತ ಕೆಲ ವಿದ್ಯಾರ್ಥಿಗಳು ಸಣ್ಣಪುಟ್ಟ ಕಲಾವಿದರೆಂದು ಗುರುತಿಸಲ್ಪಟ್ಟು ನವ ಮಾಧ್ಯಮಗಳನ್ನು ಬಳಸಿಕೊಂಡು ಸಂದರ್ಶನ ನೀಡಲು ಆರಂಭಿಸಿದಾಗ ನಿಜವಾಗಿಯೂ ತಮ್ಮದಾಗಿರದ ಅನುಭವಗಳನ್ನು ಕಥೆಕಟ್ಟುವ ರೀತಿಯಲ್ಲಿ ತಮ್ಮ ಶಿಷ್ಯವೃತ್ತಿಯ ಕುರಿತು ಹೇಳಿದ ಒಂದೆರಡು ವಿಡಿಯೋ ತುಣುಕುಗಳನ್ನು ನಾವಿಬ್ಬರೂ ಒಟ್ಟಾಗಿ ಕುಳಿತು ನೋಡಿದಾಗ ಈ ಪ್ರಶ್ನೆ ಕೇಳಿದ್ದೆ.

ಭಟ್ಟರ ಮನೆಯಲ್ಲಿ ಅನೇಕ ವಿದ್ಯಾರ್ಥಿಗಳು ಇದ್ದು ಕಲಿತು ಹೋಗಿದ್ದಾರೆ. ಇವತ್ತಿನವರೆಗೂ ಯಾರಲ್ಲಿಯೂ ಫೀಸು ಅಥವಾ ಕಾಣಿಕೆ ಇತ್ಯಾದಿಗಳನ್ನೆಲ್ಲ ಸ್ವೀಕರಿಸಿ ಅವರು ಪಾಠಮಾಡಿದ್ದಿಲ್ಲ. ಹಾಗೆ ಕೆಲಕಾಲ ಅವರ ಮನೆಯಲ್ಲಿ ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಕೆಲಸಗಳಲ್ಲಿ ಸಹಕರಿಸುತ್ತಿದ್ದುದನ್ನೇ ತಾವು ಏನೆಲ್ಲ ಗುರುಸೇವೆ ಮಾಡಿ ವಿದ್ಯೆಯನ್ನು ಪಡೆದುಕೊಂಡಿದ್ದೇವೆ ಎಂಬುದನ್ನು ನಾಟಕೀಯವಾಗಿ ಹೇಳತೊಡಗಿದ್ದನ್ನು ಕೇಳುವಾಗ ಹೇಳಿದ್ದೆಂದರೆ, “ನಿಜವಾದ ಸಂಗತಿ ಎಂದರೆ ಯಾವುದೇ ವಿದ್ಯೆಯನ್ನಾಗಲಿ ಇನ್ನೊಬ್ಬರಿಗೆ ಕಲಿಸಿದಾಗ ಕಲಿಸುವವ ಹೊಸತಾಗಿ ಕಲಿಯುತ್ತ ಬೆಳೆಯುತ್ತಾನೆ. ನಾನು ಮೊದಮೊದಲು ಈ ಊರಿನಲ್ಲೇ ಇರಬೇಕು ಎಂದು ನಿರ್ಧಾರ ಮಾಡಿದಾಗ ಆಸಕ್ತರಿಗೆ ಸಂಗೀತವನ್ನು ಕಲಿಸುವ ಮತ್ತು ಆ ಮೂಲಕ ತೀರಾ ಅಪರಿಚಿತವಾಗಿದ್ದ ವಿಷಯವೊಂದರಲ್ಲಿ ರುಚಿಯನ್ನು ಹುಟ್ಟಿಸುವ ಏಕಮಾತ್ರ ಉದ್ದೇಶದಿಂದ ಬಿಡುವಿನ ವೇಳೆಯಲ್ಲಿ ಪಾಠ ಮಾಡುತ್ತಿದ್ದೆ. ಅದು ಹಾಗೇ ಮುಂದುವರೆದುಕೊಂಡು ಬಂತು. ಕೆಲವೊಮ್ಮೆ ದೂರದ ಊರುಗಳಿಂದ ಬಂದವರು ನಮ್ಮನೆಯಲ್ಲಿಯೇ ಉಳಿದುಕೊಂಡು ಕಲಿತು ಹೋದವರಿದ್ದಾರೆ. ನೂರಾರು ಜನ ವಿದ್ಯಾರ್ಥಿಗಳು ಕಲಿತು ಹೋಗಿದ್ದಾರೆ. ಅವರವರ ಸಾಮಥ್ರ್ಯಕ್ಕೆ ಅನುಗುಣವಾಗಿ ಕಲಿತು ಹೋಗಿದ್ದಾರೆ. ಹಾಗಂತ ನಾನು ಯಾರಿಂದಲೂ ಯಾವುದೇ ರೀತಿಯ ಪ್ರತಿಫಲವನ್ನು ನಿರೀಕ್ಷೆ ಮಾಡಿದವನಲ್ಲ. ಇವತ್ತಿನ ಕಾಲಕ್ಕೆತಕ್ಕ ಹಾಗೆ ಅವರವರ ದಾರಿಗಳನ್ನು ಅವರವರ ಸಾಮಥ್ರ್ಯಕ್ಕೆ ಅನುಗುಣವಾಗಿ ಹುಡುಕಿಕೊಂಡಿದ್ದಾರೆ. ಗುರು ಎನ್ನುವುದು ಅವರವರ ಭಾವನೆಗೆ ಸಂಬಂಧಿಸಿದ ವಿಷಯ. ನಿಜವಾಗಿಯೂ ಗುರುವಾದವನು ಏನನ್ನೂ ನಿರೀಕ್ಷಿಸುವುದಿಲ್ಲ. ನಾನು ಕಲಿತದ್ದು ಸಹ ಹಾಗೆಯೇ. ಅಲಂಕಾರ ಸ್ವರಗಳಿಂದ ಆರಂಭಿಸಿ ನಾನು ಪಂ.ಬಸವರಾಜ ರಾಜಗುರುಗಳಲ್ಲಿ ಕಲಿತಿದ್ದು. ಹಲವಾರು ವರ್ಷಗಳ ಕಾಲದ ಅವರ ನಿರಂತರ ಒಡನಾಟದ ಕಾರಣದಿಂದ ಒಂದು ಅವಿನಾಭಾವ ಸಂಬಂಧ ಏರ್ಪಟ್ಟಿತು. ಮುಂದೆ ಮಹಾರಾಷ್ಟ್ರದಲ್ಲಿ ಹೆಚ್ಚು ಕಾರ್ಯಕ್ರಮಗಳು ಬರತೊಡಗಿದ ಮೇಲೆ ಅಲ್ಲೇ ವಾರಗಟ್ಟಲೆ ಇರಬೇಕಾದ ಸಂದರ್ಭ ಇದ್ದಾಗ ಖಾಲಿ ಇದ್ದ ವೇಳೆಯ ಸದುಪಯೋಗಕ್ಕಾಗಿ ಇನ್ನೋರ್ವ ಸದ್ಗುಣೀ ಕಲಾವಿದರೂ, ಉತ್ತಮ ಗುರುಗಳೂ ಮತ್ತು ನಿಷ್ಕಲ್ಮಶ ಹೃದಯದ ಮನುಷ್ಯರೂ ಆದ ಪಂ.ಸಿ.ಆರ್.ವ್ಯಾಸ್ ಅವರಲ್ಲಿ ಮಾರ್ಗದರ್ಶನ ಪಡೆಯುವಾಗಲೂ ರಾಜಗುರುಗಳ ಒಪ್ಪಿಗೆಯನ್ನು ಪಡೆದೇ ಹೋಗಿದ್ದೆ. ಅದೇ ರೀತಿಯಲ್ಲೇ ನಾನು ಮುಂದುವರೆದು ವಿದ್ಯಾದಾನ ಮಾಡುತ್ತ ಬಂದಿದ್ದೇನೆ. ಅದರ ಉಪಯೋಗ ಮತ್ತು ದುರುಪಯೋಗ ಎರಡೂ ಆಗುತ್ತಿರುತ್ತದೆ. ಶಿಷ್ಯನನ್ನು ತಯಾರು ಮಾಡುವುದು ಗುರುವಿನ ಕೆಲಸವಲ್ಲ. ಗುರು ಕೇವಲ ದಾರಿ ತೋರಿಸಬಲ್ಲ. ನಡೆಯುವುದು ಅವರವರ ಸಾಮಥ್ರ್ಯಕ್ಕೆ ಬಿಟ್ಟ ವಿಷಯ. ಪ್ರಾಮಾಣಿಕ ನಡೆ ತಂತಾನೇ ಸರಿದಾರಿಯನ್ನು ಕಂಡುಕೊಳ್ಳುತ್ತ ಸಾಗುತ್ತದೆ. ಕಲಾವಿದನೊಬ್ಬ ಹೆಚ್ಚು ಮಾತನಾಡತೊಡಗುತ್ತಾನೆ ಎಂದರೆ ಅವನ ಕಲೆ ಹಿನ್ನೆಲೆಗೆ ಸರಿಯುತ್ತಿದೆ ಎಂದರ್ಥ. ಎಲ್ಲವನ್ನೂ ಆಲಿಸಬೇಕು, ಗಮನಿಸಬೇಕು. ಬಹಳಷ್ಟಕ್ಕೆ ಪ್ರತಿಕ್ರಿಯೆ ನೀಡಬಾರದು.”

ಆಯಾ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗುವ ಜೀವನಶೈಲಿಗೆ ಅನುಗುಣವಾಗಿ ವಿವಿಧ ಕಲಾಪ್ರಕಾರಗಳೂ ಬದಲಾವಣೆಗೆ ಒಳಗಾಗುತ್ತ ಹೋಗುತ್ತವೆ. ಅದಕ್ಕೆ ಸಂಗೀತವೂ ಹೊರತಾಗಿಲ್ಲ. ಆದರೆ ಅದರ ಮೂಲಭೂತ ಸ್ವರೂಪ ಸಂಪೂರ್ಣವಾಗಿ ಬದಲಾಗಲು ಸಾಧ್ಯವಿಲ್ಲ. ತನ್ನ ದಾರಿಯನ್ನು ತಾನೇ ಕಂಡುಕೊಂಡು ಹರಿಯುವ ಸ್ವಯಂ ಚಲನಾಶಕ್ತಿ ಸಂಗೀತಕ್ಕೂ ಇದ್ದೇ ಇದೆ. ಅದೊಂದು ನಿರಂತರ ಹರಿವು. ಯುವ ತಲೆಮಾರಿನಲ್ಲಿ ವಿಪುಲ ಸಂಖ್ಯೆಯ ಪ್ರತಿಭೆಗಳು ಕಾಣುತ್ತಿವೆ. ಅಂತರ್ ಶಿಸ್ತೀಯ ಜ್ಞಾನಗಳ ಅನುಭವವುಳ್ಳ ಹೊಸ ತಲೆಮಾರಿನ ಯುವಕಲಾವಿದರು ಯಶಸ್ವಿಯಾಗಿ ಅದನ್ನು ದುಡಿಸಿಕೊಂಡು ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಭರವಸೆ ಯಾವಾಗಲೂ ಇದ್ದೇ ಇದೆ ಎನ್ನುವ ಅಭಿಪ್ರಾಯ ಪಂ.ಗಣಪತಿ ಭಟ್ ಹಾಸಣಗಿ ಅವರದ್ದು.

*ಲೇಖಕರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ.; ಪ್ರಸ್ತುತ ಕೌಟುಂಬಿಕ ಹಿನ್ನೆಲೆಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published.