ಮೇಘಸಂದೇಶ ವಾಹಕ ಪಾರಿವಾಳ

ಬಯಲು ಸೀಮೆಯ ಆಟ ಎಂದೇ ಹೆಸರಾಗಿರುವ ಈ ಪಾರಿವಾಳ ಪಂದ್ಯ ಈಗೀಗ ಎಲ್ಲೆಡೆಯೂ ಕಾಣಸಿಗುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಕ್ರೀಡೆಗಳಿಗೇನೂ ಕೊರತೆಯಿಲ್ಲ. ಕೆಲವು ಪುರಾತನ ಕಾಲದಿಂದ ನಡೆಸಿಕೊಂಡು ಬರುತ್ತಿದ್ದರೆ ಮತ್ತೆ ಕೆಲವು ಸ್ವಯಂ ನಮ್ಮವರಿಂದಲೇ ಹುಟ್ಟಿಕೊಂಡ ಆಟಗಳು. ಅದರಲ್ಲೂ ಸಾಕು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವ ಕ್ರೀಡೆಗಳು ಹೆಚ್ಚು. ಇವು ಅತ್ಯಂತ ಹೆಚ್ಚಿನ ಮನರಂಜನೆಯೊಂದಿಗೆ ಕಡಿಮೆ ಖರ್ಚಿನ ಆಟಗಳು ಎನ್ನುವುದು ವಿಶೇಷ. ನಮ್ಮಲ್ಲಿರುವ ಎತ್ತು, ಕುರಿ, ಕೋಳಿ, ದನಗಳು ಅಷ್ಟೇ ಏಕೆ? ಪಕ್ಷಿಗಳ ಮೇಲೆಯೂ ಪಂದ್ಯಾಟ ನಡೆಸುವ ಖಯಾಲಿ ನಮ್ಮದು. ಇದು ಪ್ರಸ್ತುತ ವಿಶ್ವಪ್ರಸಿದ್ಧ ಕ್ರೀಡೆಗಳಿಗೂ ಪ್ರೇರಣೆಯಾಗಿದೆ ಎಂದರೆ ಅದು ನಮ್ಮವರ ಹೆಮ್ಮೆ.

ಬುದ್ಧಿವಂತ ಪಕ್ಷಿ
ಇದರಲ್ಲಿ ಪ್ರಮುಖವಾಗಿ ಉಲ್ಲೇಖಿಸಬಹು ದಾದ ಒಂದು ಪಂದ್ಯ ಅಂದರೆ ಅದು ಪಾರಿವಾಳ ಹಾರಿಸುವುದು. ನಿಜಕ್ಕೂ ಇದು ಅತ್ಯಂತ ಕುತೂಹಲಕಾರಿ ಆಟ. ಇದಕ್ಕೆ ಪಾರಿವಾಳಗಳನ್ನು ತರಬೇತುಗೊಳಿಸುವುದೇ ಬಹು ಕಠಿಣ ಕೆಲಸ. ಪಕ್ಷಿಗಳಲ್ಲಿಯೇ ಅತಿ ಬುದ್ಧಿವಂತ ಮತ್ತು ಚಾಣಾಕ್ಷಮತಿ ಎಂದು ಹೆಸರಾದ ಪಾರಿವಾಳಗಳನ್ನು ಇದಕ್ಕೆಂದೇ ಸಾಕುವುದಿದೆ. ಮೊದಲಿಗೆ ಅವುಗಳ ಬುದ್ಧಿಮತ್ತೆ ಪರೀಕ್ಷಿಸುವ ಈ ಪಂದ್ಯ, ಬಳಿಕ ಬಾಜಿಯಾಗಿ ಮಾರ್ಪಡುತ್ತದೆ. ಇಲ್ಲಿಯೂ ದೊಡ್ಡ ಪ್ರಮಾಣದಲ್ಲಿಯೇ ಬಾಜಿ ಕಟ್ಟುವುದು ವಿಶೇಷ. ಬಯಲು ಸೀಮೆಯ ಆಟ ಎಂದೇ ಹೆಸರಾಗಿರುವ ಈ ಪಾರಿವಾಳ ಪಂದ್ಯ ಈಗೀಗ ಎಲ್ಲೆಡೆಯೂ ಕಾಣಸಿಗುತ್ತದೆ.

ತರಬೇತಿಯೂ ಕಠಿಣ
ನಿರ್ದಿಷ್ಟ ಸ್ಥಳದಲ್ಲಿ ಬಾಕ್ಸ್‍ಗಳನ್ನು ಅಥವಾ ಪಂಜರಗಳನ್ನು ನಿರ್ಮಿಸಿ ಅವುಗಳಲ್ಲಿ ಪಾರಿವಾಳಗಳನ್ನು ಸಾಕಲಾಗುತ್ತದೆ. ಆರಂಭದಲ್ಲಿ ಕಾಲಿಗೆ ಬಹು ಉದ್ದದ ದಾರವನ್ನು ಕಟ್ಟಿ ಅನತಿ ದೂರಕ್ಕೆ ಹಾರಿಸಲಾಗುತ್ತದೆ. ಇದರಲ್ಲಿ ಯಶಸ್ವಿಯಾದ ಪಾರಿವಾಳವನ್ನು ದಾರಬಿಚ್ಚಿಯೂ ಹಾರಿಬಿಡಲಾಗುತ್ತದೆ. ಜೊತೆಗೆ ಈ ಪಾರಿವಾಳಗಳಿಗೆ ಮಾಲೀಕರು ಕೊಡುವ ಆಹಾರವೇ ಅವು ಮರಳಿ ಗೂಡಿಗೆ ಬರಲು ಕಾರಣ. ಹಾಗಾಗಿ ಪಂದ್ಯಾವಳಿಗೆಂದೇ ಪಾರಿವಾಳಗಳನ್ನು ಸಾಕಲಾಗುತ್ತದೆ. ಇದರಲ್ಲಿ ಅತ್ಯಂತ ಚಾಣಾಕ್ಷ ಪಕ್ಷಿಗಳನ್ನು ಆರಂಭದಲ್ಲಿಯೇ ಗುರುತಿಸಿ ಅವುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಮತ್ತು ಹಾರಾಟದ ಬಗ್ಗೆ ತರಬೇತಿ ನೀಡಲಾಗುತ್ತದೆ. ಇಂತಹ ತರಬೇತಿ ಪಡೆದ ಪಾರಿವಾಳಗಳ ಮೂಲಕವೇ ದೊಡ್ಡ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

ಯುದ್ಧ ಸಂದೇಶವಾಹಕ

ಕ್ರಿ.ಪೂ. 100ನೇ ಇಸವಿಯಲ್ಲಿಯೇ ಪಾರಿವಾಳಗಳ ಮುಖೇನ ಸಂದೇಶ ರವಾನಿಸುತ್ತಿದ್ದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಇಸ್ರೇಲಿ ರಾಜ ಸೋಲೋಮನ್ ಮತ್ತು ರಾಣಿ ಶಿಬಾದ್ ಪಾರಿವಾಳಗಳ ಮೂಲಕವೇ ಸಂದೇಶ ರವಾನಿಸಿದ್ದ ಬಗ್ಗೆ ತಿಳಿದುಬರುತ್ತದೆ. ಕಾರ್ಥೇಜಿನ ದಳಪತಿ ಕಾರ್ನಿವಾಲ್ ಕಾಲದಿಂದಲೂ ಯುದ್ಧ ಸಂದೇಶಗಳನ್ನು ಪಾರಿವಾಳಗಳ ಮುಖೇನ ಕಳುಹಿಸಿಕೊಡುತ್ತಿದ್ದ ಕುರಿತೂ ಮಾಹಿತಿ ಇದೆ. ಪಾರಿವಾಳವನ್ನು ಶಾಂತಿಯ ಸಂದೇಶವೆಂದೂ ಪರಿಗಣಿಸುವುದಿದೆ. ಜೊತೆಗೆ ನಮ್ಮಲ್ಲಿಯೂ ಶುಭ ಮಾರಂಭಗಳು ಅಥವಾ ಕ್ರೀಡಾಕೂಟಗಳ ಉದ್ಘಾಟನೆಗೆ ಇಂದಿಗೂ ಪಾರಿವಾಳಗಳನ್ನು ಬಳಸುವುದಿದೆ. ಇದನ್ನು ಶಾಂತಿಯೊಂದಿಗೆ ಆರಂಭದ ಸಂಕೇತವಾಗಿಯೂ ಬಳಲಾಗುತ್ತದೆ.

1871ರಲ್ಲಿ ಇಂಗ್ಲೆಂಡ್‍ನ ಡಬ್ಲ್ಯು ಟಿ. ಗೇಟ್‍ವಿಯರ್ ಮೊದಲಿಗೆ ಯುದ್ಧ ಸಂದೇಶಗಳನ್ನು ಪಾರಿವಾಳಗಳ ಮುಖಾಂತರ ಸಂಸ್ಥಾನಕ್ಕೆ ರವಾನಿಸುತ್ತಿದ್ದ ಎನ್ನಲಾಗಿದೆ. ಬಳಿಕ 5ನೇ ಜಾರ್ಜ್ ಪ್ರಮುಖ ಘಟನಾವಳಿ ಅಥವಾ ತುರ್ತು ಕಾರ್ಯಗಳ ಸಂದೇಶಗಳನ್ನು ಮತ್ತೊಂದು ಪ್ರದೇಶಕ್ಕೆ ತಿಳಿಸಲೂ ಪರಿಣತಿ ಪಡೆದ ಪಾರಿವಾಳಗಳನ್ನು ಬಳಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಪ್ರತಿಷ್ಠಿತ ಪಂದ್ಯವೊಂದರಲ್ಲಿ ಬಾಜಿ ಕಟ್ಟಿದ್ದ ಪಾರಿವಾಳ 83 ಮೈಲಿ ಹಾರಿಹೋಗಿ ಯಶಸ್ವಿಯಗಿ ಹಿಂದಿರುಗಿದ ನಿದರ್ಶನವೂ ಇದೆ.

ವಿಶ್ವದಾಖಲೆ ಹಾರಾಟ
ಬ್ರೆಜಿಲ್‍ನಲ್ಲಿ ಜಾಕಾಯ್ ಎಂಬ ಹೆಸರಿನ ಪಾರಿವಾಳ ಪಂದ್ಯವೊಂದರಲ್ಲಿ 90 ಪಾರಿವಾಳಗಳ ಜೊತೆ ಸ್ಪರ್ಧಿಸಿತ್ತು. 1972 ರಲ್ಲಿ ನಡೆದಿದ್ದ ಈ ಪಂದ್ಯಾವಳಿಯಲ್ಲಿ 150 ಗ್ರಾಂ ತೂಗುತ್ತಿದ್ದ ಈ ಪಾರಿವಾಳ 14 ದಿನಗಳ ಕಾಲ ಸತತ ಹಾರಾಟ ನಡೆಸಿ 1700 ಕಿಲೋ ಮೀಟರ್ ಕ್ರಮಿಸಿದ್ದರ ಬಗ್ಗೆ ಇಂದಿಗೂ ವಿಶ್ವದಾಖಲೆ ಇದೆ. ಮಹಾಭಾರತದಲ್ಲಿಯೂ ಪಾರಿವಾಳಗಳ ಮೇಘಸಂದೇಶದ ಬಗ್ಗೆ ಉಲ್ಲೇಖವಿದೆ. ಗ್ರಾಮೀಣ ಹುಟ್ಟಿನ ಈ ಪಾರಿವಾಳ ಪಂದ್ಯ ಪ್ರಸ್ತುತ ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವುದು ವಿಶೇಷ.

ಪಕ್ಷಿಪ್ರಿಯರ ಮುದ್ದಿನ ಮಕ್ಕಳ ಸಾಲಿನಲ್ಲಿ ಈವತ್ತಿಗೂ ಗಿಣಿ ಮತ್ತು ಪಾರಿವಾಳಗಳಿಗೆ ಎಲ್ಲಿಲ್ಲದ ಮಹತ್ವ. ಮಕ್ಕಳಿಗೂ ಇವು ಮುದ್ದು. ಹಾಗಾಗಿಯೇ ಕೆಲವೆಡೆ ಅತ್ಯಂತ ಆಸಕ್ತಿಯಿಂದ ಈ ಪಕ್ಷಿಗಳನ್ನು ಸಾಕುವುದಿದೆ. ಪಕ್ಷಿಸಂಕುಲದ ಕೊಂಡಿ ಗಟ್ಟಿಗೊಂಡು ನಮ್ಮ ಪಾರಿವಾಳಗಳು ಸದಾಕಾಲ ಹಾರುವಂತಾಗಲಿ. ಪಂದ್ಯಾವಳಿ ಮೂಲಕ ಅವು ಮತ್ತಷ್ಟು ಎತ್ತರಕ್ಕೇರಲಿ ಎನ್ನುವುದು ನಮ್ಮೆಲ್ಲರ ಹಾರೈಕೆ.

Leave a Reply

Your email address will not be published.