ಪ್ರತಿಬಿಂಬ

ಮೇಯರ್ ಸೇಟಣ್ಣ!

ಸಿ.ಎಸ್.ದ್ವಾರಕಾನಾಥ್ ಅವರ ‘ಆಗ ಮೇಯರ್ ಮುತ್ತಣ್ಣ ಈಗ ಮೇಯರ್ ಸೇಟಣ್ಣ’ ಲೇಖನ ಕುರಿತು ಎರಡು ಮಾತು. ಕನ್ನಡ ಸಾಂಸ್ಕøತಿಕ ಪರಂಪರೆಯ ಅರಿವು ಇಲ್ಲದ ವ್ಯಕ್ತಿಯೊಬ್ಬ ‘ಮಹಾಪೌರ’ ಆಗುವುದು ಎಷ್ಟು ಸರಿ? ಎಂಬುದನ್ನು ಲೇಖಕರು ತರ್ಕಬದ್ಧವಾಗಿ ಚರ್ಚಿಸಿದ್ದಾರೆ. ಬೆಂಗಳೂರಿನ ನಾಡಿಮಿಡಿತ ಸ್ಥಳೀಯರಿಗೆ ತಿಳಿದಿರುತ್ತದೆಯೇ ವಿನಾ, ಬೇರೆ ರಾಜ್ಯದಿಂದ ಬೆಂಗಳೂರಿಗೆ ವ್ಯಾಪಾರಕ್ಕಾಗಿ ಬಂದ ವ್ಯಕ್ತಿಗಳಿಗೆ ತಿಳಿದಿರಲು ಸಾಧ್ಯವಿಲ್ಲ. ಅಂಥ ವ್ಯಕ್ತಿಯನ್ನು ದೆಹಲಿಯ ಹೈಕಮಾಂಡ್ ಕನ್ನಡಿಗರ ಮೇಲೆ ಹೇರಿರುವುದು ಕನ್ನಡಿಗರ ದುರಾದೃಷ್ಟವೋ, ದೌರ್ಭಾಗ್ಯವೋ, ದೌರ್ಬಲ್ಯವೋ ಅರ್ಥವಾಗುತ್ತಿಲ್ಲ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು.


ಖಂಡನೀಯ ಲೇಖನ

ಈಗ ಮೇಯರ್ ಆಗಿರುವ ಗೌತಮ್ ಕುಮಾರ್ ಅವರಿಗೆ ಕನ್ನಡ ಬರುತ್ತದೆಯೋ ಇಲ್ಲವೋ ಅನ್ನುವುದು, ಅವರು ನಗರದ ಬಗ್ಗೆ, ನಗರದ ದುಡಿಯುವ ವರ್ಗ, ಕೂಲಿಕಾರರ ವರ್ಗ, ಮತ್ತು ಬಡವರ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದಾರೆಯೋ ಇಲ್ಲವೋ ಅನ್ನುವುದು, ಹಾಗೂ ಬಿಜೆಪಿಯ ತಮ್ಮ ಹಿನ್ನೆಲೆಯಿಂದಾಗಿ ಕೋಮುವಾದವನ್ನು ಉತ್ತೇಜಿಸದೆ ಸೆಕ್ಯುಲರ್ ಆಗಿ, ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಾರೆಯೋ ಇಲ್ಲವೋ ಅನ್ನುವುದು -ಇಂಥ ಪ್ರಶ್ನೆಗಳು ಮುಖ್ಯವಾಗಬೇಕೇ ಹೊರತು ಅವರು ಯಾವ ಸಮುದಾಯದವರು ಅನ್ನುವುದು ಮುಖ್ಯವಾಗಬಾರದು. ಅಂಥ ಒಲವು ಮತ್ತು ಕಾಳಜಿಗಳು ಅವರಿಗೆ ಇಲ್ಲದಿದ್ದರೆ, ಖಂಡಿತವಾಗಿಯೂ ಅವರನ್ನು ಟೀಕಿಸೋಣ, ವಿರೋಧಿಸೋಣ. ಆದರೆ, ಅವರನ್ನು  ‘ಮಾರ್ವಾಡಿ’ ‘ಮಾರ್ವಾಡಿ’ ಎಂದು ಹಂಗಿಸುವುದು ತರವಲ್ಲ. ದ್ವಾರಕಾನಾಥ್ ಅವರು ಯಾವಾಗಲೂ ಮತ್ತು ಮೊತ್ತಮೊದಲು ಹೀಗೆ ವ್ಯಕ್ತಿಯೊಬ್ಬರ ಜಾತಿ ಹಿನ್ನೆಲೆಯನ್ನು, ಜನಾಂಗ ಹಿನ್ನೆಲೆಯನ್ನು ನೋಡುತ್ತಾರೆ ಎನ್ನುವುದು ಬೇಸರ ಮತ್ತು ಆತಂಕದ ವಿಷಯ. ಆ ಲೇಖನದ ಶೀರ್ಷಿಕೆಯೇ ನೈತಿಕವಾಗಿ ಖಂಡನೀಯವಾದದ್ದು ಮತ್ತು ಕೀಳಭಿರುಚಿಯದ್ದು; ನಮ್ಮ ಈ ನೆಚ್ಚಿನ ಪತ್ರಿಕೆಯ ಘನತೆಯನ್ನು ಕುಂದಿಸುವಂಥದು.

-ರಘುನಂದನ, ಬೆಂಗಳೂರು.


ಹೊಸ ದಿಕ್ಕಿನೆಡೆಗೆ…

ಲೇಖಕರು ಮತ್ತು ಲೇಖನಗಳನ್ನು ಸದ್ಯದ ಕಾಲದಲ್ಲಿ ಹುಡುಕಿ ಆಯ್ಕೆ ಮಾಡಬೇಕಾಗುತ್ತದೆ; ತನ್ನಿಂದ ತಾನೇ ಸುಲಭವಾಗಿ ನಮಗೆ ಬೇಕಾದ, ಗುಣಮಟ್ಟದ ಲೇಖನಗಳು ಸಿಗುವುದಿಲ್ಲ. ಪತ್ರಿಕೆಯ ಗುರಿ ನೆಲದಲ್ಲಿ ಬೀಜ ಬಿಟ್ಟು ಆಕಾಶವನ್ನೇ ಮುಟ್ಟುವಂತಿದೆ. ಅದರ ಆಳ, ಅಗಲ, ಎತ್ತರ ವಿಶ್ವತೋಮುಖವಾದುದು; ರೇಡಿಯೋ ಜಾಕಿಗಳಿಂದ ಹಿಡಿದು ನೊಬೆಲ್ ಪ್ರಶಸ್ತಿಗಳವರೆಗೂ ಚಾಚಿದೆ. ಹಳಗನ್ನಡ ಅಂಕಣ, ಕವನ, ಸ್ವರ್ಗವಾಸಿ ಸಾಹಿತಿಗಳ ‘ರಾಜ್ಯೋತ್ಸವ ಸಿದ್ಧತೆ’ ವಿಡಂಬನೆ ಹಿಡಿಸಿದವು.

ಒಂದೊಂದು ಕಾಲದಲ್ಲಿ ಒಂದೊಂದು ಪತ್ರಿಕೆಗಳು ಕನ್ನಡಿಗರಿ ಗೆ ಕ್ಷಿತಿಜವನ್ನು ಕಾಣಿಸುತ್ತಿದ್ದವು (‘ಋಜುವಾತು’ ‘ಸಂಕ್ರಮಣ’, ‘ಶೂದ್ರ’, ’ಲಂಕೇಶ್’ ಇತ್ಯಾದಿ). ಈಗ ಕನ್ನಡಿಗರನ್ನು ಹೊಸದಿಕ್ಕಿನೆಡೆಗೆ ಕೊಂಡೊಯ್ಯುವ ಪತ್ರಿಕೆ ಎಂದರೆ ‘ಸಮಾಜಮುಖಿ’.

-ಡಾ.ಜಿ.ಬಿ.ವಿಸಾಜಿ. ಭಾಲ್ಕಿ.


ಪ್ರಾಮಾಣಿಕತೆ ಯುಗಮಂತ್ರ

ಡಾ.ಬಸವರಾಜ ಸಾದರ ಅವರು ‘ನ್ಯಾಯದಾನಕ್ಕೆ ಬೆನ್ನು ತೋರಿಸುವುದೇಕೆ?’ ಎಂಬ ಲೇಖನದಲ್ಲಿ ಅಮಲ್ದಾರ್ ಎಂ.ಎಸ್.ಪುಟ್ಟಣ್ಣನವರ ಬದುಕಿನ ಪ್ರಸಂಗವೊಂದನ್ನು ಪ್ರಸ್ತಾಪಿಸಿದ್ದಾರೆ. ಥಟ್ಟನೆ ಗಾಂಧೀಜಿ ನೆನಪಾದರು. ಅವರ ಬದುಕಿನ ಪ್ರಸಂಗವೊಂದು ಈ ಸಂದರ್ಭದಲ್ಲಿ ಉಲ್ಲೇಖನೀಯವಾಗಿದೆ.

ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮೇಲೂ ಅಲ್ಲಿನಂತೆ ತಮ್ಮ ಕುಟುಂಬದೊಡನೆ ಆಶ್ರಮ ಜೀವನವನ್ನು ಮುಂದುವರಿ ಸಿದರು; ಅವರು ರೂಪಿಸಿದ ನಿಯಮಗಳನ್ನು ಆಶ್ರಮದ ಸದಸ್ಯರು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿತ್ತು. ಗಾಂಧೀಜಿ ತಮ್ಮನ್ನು ಸಂಪೂರ್ಣವಾಗಿಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಂಡದ್ದರಿಂದ ಆಶ್ರಮದ ಖರ್ಚಿಗೆ ದಾನಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ಒಮ್ಮೆ ದಾನಿಯೊಬ್ಬರು ಸ್ವಲ್ಪ ಹಣದೊಂದಿಗೆ ಆಶ್ರಮಕ್ಕೆ ಬಂದರು. ಗಾಂಧೀಜಿ ಆಶ್ರಮದಲ್ಲಿರಲಿಲ್ಲ. ಅವರು ಹಣವನ್ನು ಕಸ್ತೂರ ಬಾಗೆ ಕೊಟ್ಟು ಹೋದರು.

ಹಣವನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡು ಆಪತ್ ಧನವಾಗಿ ಬಳಸಿಕೊಳ್ಳಬಹುದಲ್ಲಾ ಎಂದು ಯೋಚಿಸಿದ ಬಾ ಅದನ್ನು ತಮ್ಮ ಪೆಟ್ಟಿಗೆಯಲ್ಲಿಟ್ಟರು. ಗಾಂಧೀಜಿಗೆ ತಿಳಿಸಲಿಲ್ಲ. ದುರದೃಷ್ಟವಶಾತ್ ಆ ಹಣವನ್ನು ಯಾರೋ ಕದ್ದರು. ಗಾಬರಿಗೊಂಡ ಕಸ್ತೂರ ಬಾ ಎಲ್ಲ ವಿಷಯವನ್ನು ಗಾಂಧೀಜಿಗೆ ತಿಳಿಸಿದರು.

ಗಾಂಧೀಜಿ ಕೆಂಡಾಮಂಡಲವಾದರು. ಆಶ್ರಮದ ನಿಯಮದ ಪ್ರಕಾರ ಯಾರೂ ಹಣವನ್ನು ಮುಚ್ಚಿಟ್ಟುಕೊಳ್ಳುವಂತಿರಲಿಲ್ಲ. ತಮ್ಮ ಪತ್ನಿ, ಅದೂ ದೇಣಿಗೆ ಹಣವನ್ನು ಬಚ್ಚಿಡುವುದೆಂದರೇನು? ಆಶ್ರಮದ ಸರ್ವಸದಸ್ಯರ ಸಭೆಯನ್ನು ಕರೆದು ಗಾಂಧೀಜಿವಿಷಯವನ್ನು ಪ್ರಸ್ತಾಪಿಸಿದರು. ನಿಯಮ ಪ್ರಕಾರ ಕಸ್ತೂರ ಬಾ ಆಶ್ರಮವನ್ನು ಬಿಟ್ಟು ಹೋಗಬೇಕೆಂದು ಠರಾವು ಮಂಡಿಸಿದರು. ಕಸ್ತೂರ ಬಾ ಆ ಹಣವನ್ನು ತಮ್ಮ ಸ್ವಂತ ಖರ್ಚಿಗಾಗಿ ಮುಚ್ಚಿಟ್ಟಿದ್ದಲ್ಲವೆಂದೂ, ಕಷ್ಟಕಾಲದಲ್ಲಿ ಬಳಸಲು ಇಟ್ಟುಕೊಂಡಿದ್ದಾಗಿಯೂ, ಇಂಥ ತಪ್ಪು ಮಾಡುವುದಿಲ್ಲವೆಂದೂ ಪರಿಪರಿಯಾಗಿ ಬೇಡಿಕೊಂಡರು.

ಆಶ್ರಮವಾಸಿಗಳೆಲ್ಲ ಕಸ್ತೂರ ಬಾ ಪರವಾಗಿ ವಾದ ಮಂಡಿಸಿದರು.ವಾದ ವಿವಾದಗಳ ನಂತರ ಇಂಥ ಘಟನೆಗಳು ಮರುಕಳಿಸಬಾರದೆಂದು ಮನವಿ ಮಾಡಿದ ಗಾಂಧೀಜಿ ಕಸ್ತೂರ ಬಾ ಅವರನ್ನು ಕ್ಷಮಿಸಿದರು. ಮರುದಿನ ಹರಿಜನ ಪತ್ರಿಕೆಯಲ್ಲಿ ಲೇಖನ ಬರೆದು ತಮ್ಮ ಪತ್ನಿ ಮಾಡಿದ ಅಪರಾಧವನ್ನು ಜಗತ್ತಿನ ಗಮನಕ್ಕೆ ತಂದರು.

ಪ್ರಾಮಾಣಿಕತೆಯ ಪರಮಾವಧಿಯ ಇಂಥ ಪ್ರಸಂಗಗಳನ್ನು ದಂತ ಕತೆಗಳಂತೆ ಪರಿಗಣಿಸದೆ ನಮ್ಮ ಮನದಾಳಕ್ಕೆ ತಂದುಕೊಳ್ಳುವ ಅನಿವಾರ್ಯತೆ ಇಂದಿನ ಸಮಾಜಕ್ಕಿದೆ.

ಎಚ್.ಜೆ.ಸರಸ್ವತಿ, ಮೈಸೂರು.

Leave a Reply

Your email address will not be published.