ಮೈಸೂರು ವಿಶ್ವವಿದ್ಯಾಲಯ ಗುಣಮಟ್ಟಕ್ಕೆ ಮಾದರಿಯಾಗಿತ್ತು

-ಡಾ.ಎಂ.ಜಿ.ಬಸವರಾಜ

ಸರ್ಕಾರಿ ವಿಶ್ವವಿದ್ಯಾಲಯಗಳ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರಲು ಸಾಧ್ಯವಿದೆ. ಪ್ರತಿಭಾವಂತರು ಎಲ್ಲ ಜಾತಿಗಳಲ್ಲೂ ಇದ್ದಾರೆ. ಉನ್ನತ ಶೈಕ್ಷಣಿಕ ಪ್ರತಿಭೆಯ ಪ್ರಾಧ್ಯಾಪಕರನ್ನು ಮಾತ್ರ ವಿಶ್ವ ವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಪ್ರಗತಿ/ಪ್ರತಿಭೆ ಆಧಾರಗಳ ಮೇಲೆ ಸಂಶೋಧನಾ ಮಾರ್ಗದರ್ಶಕರನ್ನು ಆಯ್ಕೆ ಮಾಡಬೇಕು. ಸಂಶೋಧನಾ ವಿದ್ಯಾರ್ಥಿಗಳ ಆಯ್ಕೆಯಲ್ಲೂ ಇದನ್ನು ಅನುಸರಿಸಬೇಕು. ಸಂಶೋಧನಾ ಉತ್ಕೃಷ್ಟತೆಯಲ್ಲಿ ವಿಫಲರಾದವರನ್ನು ಖಾಲಿ ಮಾಡಿಸಬೇಕು.

ಕರ್ನಾಟಕ ಕುರಿತ ಜ್ಞಾನ ಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ? ಎಂಬ ಚರ್ಚೆಯ ವಿಷಯ ಸಮಕಾಲೀನ ಪ್ರಸ್ತುತತೆಯನ್ನು ಹೊಂದಿದೆ. ಕಾರಣ ಸ್ಪಷ್ಟ. ಇಂದಿನ ಸಂಶೋಧನಾ ಪ್ರಬಂಧಗಳನ್ನು ನೋಡಿದವರಿಗೆ ಬಹಳ ನಿರಾಸೆಯಾಗುತ್ತದೆ. ಎಲ್ಲ ಸಂಶೋಧನಾ ಪ್ರಬಂಧಗಳು ಉತ್ಕೃಷ್ಟತೆಯಲ್ಲಿ ಕಡಿಮೆಯಿರುತ್ತವೆ ಎಂದು ಹೇಳಲಾಗದು. ಉನ್ನತಗುಣಮಟ್ಟದ ಸಂಶೋಧನಾ ಪ್ರಬಂಧಗಳು ಬರುತ್ತಿವೆ, ಇಲ್ಲವೆಂದಲ್ಲ. ಯುಜಿಸಿ ಮತ್ತು ವಿಶ್ವವಿದ್ಯಾನಿಲಯಗಳ ಅಧ್ಯಯನ ಮಂಡಳಿಗಳು, ಸಂಶೋಧನಾ ವಿಭಾಗಗಳು ಕಟ್ಟುನಿಟ್ಟಿನ ಸಂಶೋಧನಾ ನಿಯಮಾವಳಿಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿವೆ. ಆದರೂ ಅನೇಕ ಸಂಶೋಧನಾ ಪ್ರಬಂಧಗಳು ಗುಣಮಟ್ಟದಲ್ಲಿ ಕಡಿಮೆಯಿರುತ್ತವೆ.

ನಮ್ಮ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳು ವೈಜ್ಞಾನಿಕ ಮತ್ತು ಕ್ರಮಬದ್ಧವಾದ ಅಧ್ಯಯನ, ಕ್ಷೇತ್ರಕಾರ್ಯ ಮಾಡಿರುವುದಿಲ್ಲ. ಸಂಶೋಧನಾ ವಿಧಾನಗಳ ಅಧ್ಯಯನ ಮಾಡಿರುವುದಿಲ್ಲ; ಮಾಡಿದರೂ ಸರಿಯಾಗಿ ಅರ್ಥೈಸಿಕೊಳ್ಳದೆ ಅನುಸರಣೆ ಮಾಡಿರುವುದಿಲ್ಲ. ಯಾವುದೋ ಒಂದು ಸಾಮಾಜಿಕ ಸಮಸ್ಯೆಗೆ ಸಂಬAಧಿಸಿದ ಅಧ್ಯಯನ ಮಾಡುವಾಗ ಸಮಸ್ಯೆಗೆ ಕಾರಣಗಳಾವವು ಎಂಬುದನ್ನು ಸ್ಪಷ್ಟವಾಗಿ ಗ್ರಹಿಸಬೇಕು. ಇಂತಹ ಸಮಸ್ಯೆಗಳಿಗೆ ಬೇರೆ ಬೇರೆ ಕಡೆ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ? ಆ ಪರಿಹಾರಗಳನ್ನು ಯಥಾವತ್ತಾಗಿ ನಮ್ಮಲ್ಲಿ ಅನುಸರಿಸಬಹುದೇ? ಏನಾದರೂ ಬದಲಾವಣೆಗಳ ಅಗತ್ಯವಿದೆಯೇ? ಎಂಬ ವಿಶ್ಲೇಷಣೆಯುಕ್ತವಾಗಿ ಮಾಡಿ ಉಪಯುಕ್ತ ಪರಿಹಾರ ಕ್ರಮಗಳನ್ನು ಸಂಶೋಧನಾ ಅಧ್ಯಯನಗಳು ನೀಡಬೇಕು. ಇಲ್ಲದಿದ್ದರೆ ಸಂಶೋಧನೆಗಳು ಅನುಪಯುಕ್ತವಾಗುತ್ತವೆ.

ಅನೇಕ ಸಂಶೋಧನಾ ಪ್ರಬಂಧಗಳನ್ನು ಮೌಲ್ಯಮಾಪಕರು ನಿರ್ದಾಕ್ಷಿಣ್ಯವಾಗಿ ಮೌಲ್ಯಮಾಪನ ಮಾಡದಿರಲು, ನಿರ್ದಾಕ್ಷಿಣ್ಯ ವಿಮರ್ಶೆ ಮಾಡದಿರಲು ವೈಯಕ್ತಿಕ ಹಿತಾಸಕ್ತಿಗಳು ಕಾರಣವಿರಬಹುದು. ಈ ರೀತಿ ಮಾಡಿದರೆ ಸಂಶೋಧನಾ ಪ್ರಬಂಧಗಳನ್ನು ಮುಂದಕ್ಕೆ ಆ ಪ್ರಾಧ್ಯಾಪಕನಿಗೆ ಮೌಲ್ಯಮಾಪನ ಮಾಡಲು ಕಳಿಸುವುದಿಲ್ಲ. ಒಂದು ರೀತಿಯ ಶೈಕ್ಷಣಿಕ ಬಹಿಷ್ಕಾರಕ್ಕೆ ಆ ಪ್ರಾಧ್ಯಾಪಕ ಒಳಗಾಗುತ್ತಾನೆ. ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರ ಸ್ನೇಹ-ಸಂಬಂಧಗಳು ಕಾರಣವಾಗುತ್ತವೆ. ಕಣ್ಣಿಗೆ ಕಾಣದ ರೀತಿಯಲ್ಲಿ, ಗೊತ್ತಾಗದಂತೆ ಭ್ರಷ್ಟಾಚಾರವೂ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತವೆ. ನೈತಿಕತೆ-ಅನೈತಿಕತೆ ಎಂಬ ವಿಷಯ ಬಂದಾಗ ಇದೊಂದು ಜಾಗತಿಕ ಶೈಕ್ಷಣಿಕ ಸಮಸ್ಯೆಯಾಗಿದೆ. ಪತ್ರಿಕೆಗಳಲ್ಲಿ ಈ ಬಗ್ಗೆ ಬೇಕಾದಷ್ಟು ವರದಿಗಳು ಬರುತ್ತಿರುತ್ತವೆ.

ಉನ್ನತ ಶಿಕ್ಷಣದ ಕೋರ್ಸುಗಳಲ್ಲಿ ಸಂಶೋಧನಾ ವಿಧಾನಗಳ ಬಗೆಗೆ ಒಳ್ಳೆಯ ತರಬೇತಿಯಾಗುತ್ತಿಲ್ಲ.  ವಿದ್ಯಾರ್ಥಿಗಳಿಗೆ ಆದಷ್ಟು ಬೇಗನೆ ಪಿಎಚ್‌ಡಿ ಪದವಿ ದೊರೆಯಬೇಕು ಎಂಬ ತವಕ ಇರುತ್ತದೆ. ಇದು ಫೆಲೋಷಿಪ್ ಇರದ ವಿದ್ಯಾರ್ಥಿಗಳ ಬಯಕೆ. ಫೆಲೋಷಿಪ್ ಬರುವ ವಿದ್ಯಾರ್ಥಿಗಳು ಫೆಲೋಷಿಪ್ ಮುಗಿಯುವವರೆಗೂ ಪಿಎಚ್‌ಡಿ ಅಧ್ಯಯನದ ಬಗೆಗೆ ಗಂಭೀರವಾಗಿ ಅಧ್ಯಯನ ಮಾಡುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಉನ್ನತ ಶಿಕ್ಷಣದ ಕೋರ್ಸುಗಳ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಂಶೋಧನೆಯ ಗಂಭೀರತೆ, ಶೈಕ್ಷಣಿಕ ಶಿಸ್ತು, ಸಾಮಾಜಿಕ ಜವಾಬ್ದಾರಿ, ಶೈಕ್ಷಣಿಕ ಪಾವಿತ್ರ್ಯ/ಗುಣಮಟ್ಟದ ಬಗೆಗೆ ಯುಕ್ತ ಪ್ರೇರೇಪಣೆ ನೀಡಿದಿರುವುದು. ಉತ್ಕೃಷ್ಟ/ಗುಣಮಟ್ಟದ ಸಂಶೋಧನಾ ಮಾದರಿ/ವಿಧಾನಗಳನ್ನು ಕಲಿತಿದ್ದರೆ ಮಾತ್ರ ಪ್ರಾಧ್ಯಾಪಕರು ತಮ್ಮ ಸಂಶೋಧನಾ ವಿದ್ಯಾರ್ಥಿಗಳಿಗೆ ಹೇಳಿಕೊಡಲು ಸಾಧ್ಯವಾಗುತ್ತದೆ.

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ನಿಜಕ್ಕೂ ತರಲು ಸಾಧ್ಯವಿದೆ. ಪ್ರತಿಭಾವಂತರು ಎಲ್ಲ ಜಾತಿಗಳಲ್ಲೂ ಇದ್ದಾರೆ. ಉನ್ನತ ಶೈಕ್ಷಣಿಕ ಪ್ರತಿಭೆಯ ಪ್ರಾಧ್ಯಾಪಕರನ್ನು ಮಾತ್ರ ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಪ್ರಗತಿ/ಪ್ರತಿಭೆ ಆಧಾರಗಳ ಮೇಲೆ ಸಂಶೋಧನಾ ಮಾರ್ಗದರ್ಶಕರನ್ನು ಆಯ್ಕೆ ಮಾಡಬೇಕು. ಸಂಶೋಧನಾ ವಿದ್ಯಾರ್ಥಿಗಳ ಆಯ್ಕೆಯಲ್ಲೂ ಇದನ್ನು ಅನುಸರಿಸಬೇಕು. ಸಂಶೋಧನಾ ಉತ್ಕೃಷ್ಟತೆಯಲ್ಲಿ ವಿಫಲರಾದವರನ್ನು ಖಾಲಿ ಮಾಡಿಸಬೇಕು.

ಅದೊಂದು ಕಾಲವಿತ್ತು. ಮೈಸೂರು ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರಬಂಧಗಳನ್ನು ವಿದೇಶದ ಒಬ್ಬ ಪ್ರಾಧ್ಯಾಪಕರು, ಹೊರ ರಾಜ್ಯದ ಒಬ್ಬ ಪ್ರಾಧ್ಯಾಪಕರು ಮತ್ತು ಪಿಎಚ್‌ಡಿ ಮಾರ್ಗದರ್ಶಕರು; ಹೀಗೆ ಮೂವರು ಮೌಲ್ಯಮಾಪನ ಮಾಡುತ್ತಿದ್ದರು. ಸೆಪ್ಟೆಂಬರ್ ೧೯೯೨ರಲ್ಲಿ, ನನ್ನ ಪಿಎಚ್‌ಡಿ ಪ್ರಬಂಧವು ಕೆನಡಾದ ಟೊರೊಂಟೋ ವಿಶ್ವವಿದ್ಯಾಲಯ, ಬಾಂಬೆ ವಿಶ್ವವಿದ್ಯಾಲಯ ಮತ್ತು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ಮೌಲ್ಯಮಾಪನವಾಗಿ ಬಂದ ನಂತರ ಪಿಎಚ್‌ಡಿ ಪದವಿಯನ್ನು ಮೈಸೂರು ವಿವಿ ನೀಡಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆಯುವುದು ಸುಲಭದ ವಿಷಯವಾಗಿರಲಿಲ್ಲ. ಅನೇಕರು ಫೆಲೋಷಿಪ್ ಪಡೆದುಕೊಂಡು ಸಂಶೋಧನೆ ಕೈಗೊಂಡರು; ಪಿಎಚ್‌ಡಿ ಪ್ರಬಂಧ ಬರೆದು ಮುಗಿಸದೆ ಬರಿಗೈಯಲ್ಲಿ ಹಿಂದಕ್ಕೆ ಹೋದರು. ಪಿಎಚ್‌ಡಿ ಪ್ರಬಂಧ ಬರೆದು ಸಲ್ಲಿಸಿದರೂ ಮೌಲ್ಯಮಾಪನದಲ್ಲಿ ಫೇಲಾಗುತ್ತಿದ್ದರು.

ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಹೊಂದಲು ದೊರೆಯುವ ಸರಕಾರೀ ಸಾಂಸ್ಥಿಕ ಸೌಲಭ್ಯಗಳು ಮತ್ತು ಉತ್ತೇಜನಗಳು ಎಂಬ ವಿಷಯದ ಮೇಲೆ ಪ್ರಬಂಧವನ್ನು ನಾನು ಪ್ರೊ.ಬಿ.ಎಸ್.ಶ್ರೀಕಂಠಾರಾಧ್ಯ ಅವರ ಮಾರ್ಗದರ್ಶನದಲ್ಲಿ ಬರೆದಿದ್ದೆ. ಪ್ರಬಂಧ ಬರೆದು ಪ್ರೊ.ಬಿ.ಎಸ್.ಎಸ್. ಅವರಿಗೆ ಸಲ್ಲಿಸಿದಾಗ ಅಲ್ಲಲ್ಲಿ ಮುದ್ರಣ ದೋಷಗಳು ಹಾಗೂ ಒಂದೋ ಎರಡೋ ಕಾಗುಣಿತ ದೋಷಗಳಿದ್ದವು. ಸರಿಪಡಿಸಲು ತಿಳಿಸಿದರು. ಎಲ್ಲಾದರೂ ಒಂದೇ ಒಂದು ತಪ್ಪಿದ್ದರೂ ನಾನು ಸಹಿ ಹಾಕುವುದಿಲ್ಲವೆಂದು ಬಹಳ ಕಟ್ಟುನಿಟ್ಟಾಗಿ ತಿಳಿಸಿದರು. ಅಂಕಿ-ಅಂಶ ಸಂಗ್ರಹಣೆಗಾಗಿ ಭಾರತ ರಿಸರ್ವ್ ಬ್ಯಾಂಕ್, ಬಾಂಬೆ ವಿಶ್ವವಿದ್ಯಾಲಯ, ಉಸ್ಮಾನಿಯಾ ವಿಶ್ವವಿದ್ಯಾಲಯ, ಭಾರತ ಸರ್ಕಾರದ ಸಣ್ಣ ಕೈಗಾರಿಕೆಗಳ ತರಬೇತಿ ಮತ್ತು ವಿಸ್ತರಣೆ ಸಂಸ್ಥೆ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ, ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಸ್ಟೇಟ್ ಲೆವೆಲ್ ಬ್ಯಾಂರ‍್ಸ್ ಕಮಿಟಿ, ಮುಂತಾದ ಲೈಬ್ರರಿಗಳಿಗೆ ಹೋಗಿದ್ದೆ.

ಆಗ ವೈ.ಕೆ.ಪುಟ್ಟಸ್ವಾಮಿಗೌಡರು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ)ಯ ಚೇರ್‌ಮನ್ ಮತ್ತು ಮ್ಯಾನೇಜಿಂಗ್ ಡೈರಕ್ಟರ್ ಆಗಿದ್ದರು. ಆ ಹಣಕಾಸು ಸಂಸ್ಥೆಯ ವಾರ್ಷಿಕ ವರದಿಗಳನ್ನು ಅವರು ನನಗೆ ನೀಡುವಾಗ, “ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿಯು ಬೆಂಗಳೂರು ಮತ್ತು ಮೈಸೂರಿಗೆ ಹೆಚ್ಚು ಸೀಮಿತವಾಗಿದೆ. ರಾಜ್ಯದ ಹಿಂದುಳಿದ ತಾಲ್ಲೂಕು, ಜಿಲ್ಲೆಗಳು ಪ್ರದೇಶಗಳಲ್ಲಿಯೂ ಅಭಿವೃದ್ಧಿಗೊಂಡು, ಅದರ ಫಲ ರಾಜ್ಯದ ಎಲ್ಲರಿಗೂ ದೊರೆಯಬೇಕು. ನೀವು ಪ್ರಾಧ್ಯಾಪಕರು, ನಿಮ್ಮಿಂದ ನಮಗೆ ಒಳ್ಳೆಯ ಸಲಹೆಗಳು ಸಿಗುತ್ತವೆ ಎಂದು ನಂಬಿದ್ದೇನೆ” ಎಂದರು. ಯಾರೋ ಕೆಎಸ್‌ಎಫ್‌ಸಿಯ ಫಲಾನುಭವಿ ಯಶಸ್ವಿ ಉದ್ಯಮಿ ಕೃತಜ್ಞತೆಯ ದ್ಯೋತಕವಾಗಿ ಕೆಎಸ್‌ಎಫ್‌ಸಿ ಸಿಬ್ಬಂದಿಗೆ “ಹೈ ಟೀ’ ವ್ಯವಸ್ಥೆ ಮಾಡಿದ್ದರು. ಪುಟ್ಟಸ್ವಾಮಿ ಗೌಡರು, “ನೀವೂ ಬನ್ರಿ” ಎಂದು ಆಹ್ವಾನಿಸಿದರು. ಎಲ್ಲ ಆದ ನಂತರ ಕೆಎಸ್‌ಎಫ್‌ಸಿಯಿಂದ ಬೇಕಾದ ಅಂಕಿ-ಅಂಶ ನೀಡಿದರು. ಸಂಶೋಧಕರಿಗೆ ಆಗ ಬಹಳಷ್ಟು ಮನ್ನಣೆಯಿತ್ತು.

ಆಗ ಪಿಎಚ್‌ಡಿ ಪದವಿ ಪಡೆದವರ ಭಾವಚಿತ್ರ ಮತ್ತು ಪಿಎಚ್‌ಡಿ ವಿಷಯ ಸಂಕ್ಷಿಪ್ತ ವಿವರಣೆಗಳನ್ನು ದಿನಪತ್ರಿಕೆಗಳು ರಾಜ್ಯಮಟ್ಟದಲ್ಲಿ ಪ್ರಕಟಿಸುತ್ತಿದ್ದವು. ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆಯಿತ್ತು. ಪಿಎಚ್‌ಡಿ ಪಡೆಯುವವರ ಸಂಖ್ಯೆಯೂ ಬಹಳ ಕಡಿಮೆಯಿರುತ್ತಿತ್ತು. ನನಗೆ ಪಿಎಚ್‌ಡಿ ಪದವಿ ಬಂದ ನಂತರ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಅಧಿಕಾರಿಯೊಬ್ಬರು ಬಂದು ನನ್ನ ಸಂಶೋಧನಾ ಪ್ರಬಂಧವನ್ನು ಓದಿ ಚರ್ಚಿಸಿದರು. ಸಲಹೆಗಳನ್ನು ಬರೆದುಕೊಂಡರು. ಕೆಎಸ್‌ಎಫ್‌ಸಿ ತಜ್ಞರ ಮಂಡಳಿಯಲ್ಲಿ ಸಲಹೆಗಳ ಸಾಧಕ-ಬಾಧಕಗಳ ಬಗೆಗೆ ಚರ್ಚಿಸಿ ನನ್ನ ಸಲಹೆಗಳನ್ನು ಅಂಗೀಕರಿಸಿದ ಬಗೆಗೆ ನನಗೆ ತಿಳಿಸಿದರು. ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪ್ರೇಮ್ ಡಿವಿಜನ್ (PREMDIVISION) ಸಹ ನನ್ನ ಸಂಶೋಧನಾ ಯೋಜನೆ ಮತ್ತು ಅಲ್ಲಿನ ವರದಿಗಳನ್ನು, ಸಲಹೆಗಳನ್ನು ಅಂಗೀಕರಿಸಿದ್ದೇವೆ ಎಂಬ ಪತ್ರ  ಕಳಿಸಿದರು. ಆ ಅಂಗೀಕಾರ ಪತ್ರ ಈಗಲೂ ನನ್ನ ಬಳಿಯಲ್ಲಿದೆ.

ಗಂಭೀರ ಅಧ್ಯಯನ, ಕ್ಷೇತ್ರ ಕಾರ್ಯ, ತಜ್ಞರ ಜೊತೆ ಚರ್ಚೆ, ಈ ಮೊದಲಿನ ಬರಹಗಳ ಅಧ್ಯಯನ, ಸಂಶೋಧನಾ ಪ್ರಬಂಧ/ವರದಿಗಳನ್ನು ಸುಲಭವಾಗಿ ಓದುವ ರೀತಿಯಲ್ಲಿ, ಸಂಬಂಧಿಸಿದ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುವುದು ಹೀಗೆ ಪ್ರತಿ ಹಂತದಲ್ಲಿಯೂ ಸಂಶೋಧನಾ ಗಾಢಪ್ರಜ್ಞೆ ಜಾಗೃತವಾಗಿದ್ದಲ್ಲಿ ಸಂಶೋಧನಾ ಗುಣಮಟ್ಟ/ಉತ್ಕೃಷ್ಟತೆಗಳಿರುತ್ತವೆ.

*ಲೇಖಕರು ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತç ಪ್ರಾಧ್ಯಾಪಕರು; ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಮತ್ತು ಗಾಂಧಿ ಭವನದ ನಿವೃತ್ತ ನಿರ್ದೇಶಕರು.

Leave a Reply

Your email address will not be published.