ಮೊಂಗೊಲಿಯಾದಲ್ಲಿ ಮೂರು ದಿನಗಳು

15 ಆಗಸ್ಟ್ 2017ರಂದು ರಶ್ಯಾ, ಸೈಬೀರಿಯಾ ಮತ್ತು ಮೊಂಗೊಲಿಯಾದ ಸಂಚಾರಕ್ಕೆ, ತಿರುಗಾಟದ ಹುಚ್ಚಿಯರಾದ ಹೆಂಗಸರ ಗುಂಪಿನ ಜತೆ, ನಾನು ರಶ್ಯಾ ತಲುಪಿದೆ. ಆದರೆ, ನನ್ನ ಸಹ ಪ್ರಯಾಣಿಕರು ‘ಸೆಲ್ಫಿ’ ಸಂಸ್ಕೃಂತಿಯಿಂದಾಗಿ ಕಣ್ಣ ಮುಂದಿರುವ ಸಂಸ್ಕೃಂತಿಯನ್ನು ನೋಡಲು ಮರೆತಿದ್ದಂತೆ ಇತ್ತು.

ಕಮ್ಯುನಿಸ್ಟ್ ಪಾರ್ಟಿಯವರು ತಮ್ಮ ವಿಚಾರಧಾರೆಯನ್ನು ಹಬ್ಬಿಸಲು ಮೊದಲು ಇದ್ದ ಕಲೆ, ದೇಗುಲಗಳು, ಭಾಷೆಗಳನ್ನು ನಶಿಸಿದರು. ಹಳೆಯ ಸಂಸ್ಕೃಂತಿಯನ್ನು ನೋಡಲು ಹೊರಗಿನ ಜನ ಬರುವುದಿಲ್ಲ ಎಂದು ತಿಳಿದು ಈಗ ಮತ್ತೆ ಹಳೆಯ ಸಂಸ್ಕೃಂತಿಗೆ ಪುನರ್‍ಜೀವ ಕೊಡುತ್ತಿದ್ದಾರೆ. ಮಾಸ್ಕೊ ಮತ್ತು ಸೈಂಟ್ ಪೀಟರ್ಸ್‍ಬರ್ಗ್‍ದ ಎಲ್ಲಾ ಚರ್ಚುಗಳು ಹೊಸತಾಗಿ ಒಪ್ಪಕೊಟ್ಟಂತೆ ಇವೆ. ಆದರೆ ಮಾಸ್ಕೊದ ರಸ್ತೆಗಳು 2018 ವಲ್ರ್ಡ್ ಫುಟ್‍ಬಾಲ್‍ಕಪ್‍ಗೆ ಅನುಕೂಲವಾಗುವಂತೆ ಎಲ್ಲಾ ರಸ್ತೆಗಳನ್ನು ದುರಸ್ತಿ ಮಾಡುತ್ತಾ ಬೆಂಗಳೂರಿನ ರಸ್ತೆಗಳಂತೆ ಮಾಡಿದರು.

ಅಲ್ಲಿಯ ಜನ ಒರಟರು. ರಶ್ಯನ್ ಭಾಷೆ ಬಿಟ್ಟು ಯಾವ ಭಾಷೆಗಳೂ ಅಸಡ್ಡೆ. ಇದು ಸಂಕ್ಷಿಪ್ತ ವರ್ಣನೆ. ಏಕೆಂದರೆ ಮಂಗೋಲಿಯಾದಲ್ಲಿ ಕಳೆದ ಮೂರು ಮಹತ್ವದ ದಿನಗಳ ಬಗ್ಗೆ ಈ ಲೇಖನ.

-ಮಾಲವಿಕಾ ಕಪೂರ

 

ನಮ್ಮ ಗುಂಪು ಮೂರು ದಾರಿ ಹಿಡಿಯಿತು. Trans-Siberian Railway ಬಹಳ ಹೆಸರಾಗಿದ್ದು, ನಾವು ಅದನ್ನು ಹತ್ತಿ ಎರಡುವರೆ ದಿನ ರೈಲಿನಲ್ಲಿ ಹೋಗಿ, ಸೈಬೇರಿಯಾ ಸುತ್ತಾಡಿದೆವು. ಆಮೇಲೆ ಮತ್ತೆ ಅದೇ ರೈಲು ಹತ್ತಿ ಎರಡುವರೆ ದಿನದಲ್ಲಿ ಮೊಂಗೊಲಿಯಾದ ರಾಜಧಾನಿ ಉಲಾನ್‍ಬಟೋರವನ್ನು ತಲುಪಿದೆವು. ನಾವು 6 ಜನ ಉಲಾನ್‍ಬಟೋರನಲ್ಲಿ ಇದ್ದೆವು. ಉಳಿದವರು ಗೋಭಿ ಮರುಭೂಮಿ ಸಂಚಾರಕ್ಕೆ ಹೋದರು. ನಮ್ಮ ರೈಲುಬಂಡಿ ಲಕ್ಝುರಿ ಗಾಡಿಗಳಾಗಿರಲಿಲ್ಲ. ಬಹಳ ಸಾಮಾನ್ಯವಾದವು. ಆದರೆ ಕಿಟಕಿಯ ಹೊರಗಿನ ದೃಶ್ಯ ಬಲು ಅಪೂರ್ವ.

ಈ ಪಯಣವನ್ನು ನಾನು ತೇಪೆಚಿತ್ರಣ(ಕೊಲಾಜ್)ದಲ್ಲಿ ತೋರಿಸು ತ್ತೇನೆ. ಮೂರೇ ಚಿತ್ರಗಳಿದ್ದರೂ ಇವುಗಳಲ್ಲಿ 24 ಫೋಟೋಗಳಿವೆ. ಇವುಗಳ ವಿವರ ಈ ಕಥೆ ಮುಂದುವರಿಯುತ್ತಾ ನಿಮಗೆ ಸಿಗಲಿದೆ. ಮೊದಲನೆಯದು ‘ಬೈಕಲ್’ ಸರೋವರ. ಇದರ ತಟದಲ್ಲಿ ಚಕ್ರವರ್ತಿ ಚೆಂಗಿಸ್‍ಖಾನ್ 1162ರಲ್ಲಿ ಹುಟ್ಟಿದ ಎಂಬ ವದಂತಿ ಇದೆ. ಬೈಕಲ್ ಸರೋವರ ಸೈಬಿರಿಯಾ ಮತ್ತು ಮೊಂಗೊಲಿಯಾಕ್ಕೆ ಸೇರಿದೆ. ಇದು 25 ಮಿಲಿಯ ವರ್ಷ ಹಿಂದಿನದ್ದು. ಕೆಲವು ಕಡೆ 1700 ಮೀಟರ್ ಆಳವಿದೆ. ನೀರು ಎಷ್ಟು ಸ್ವಚ್ಛವೆಂದರೆ ಎಷ್ಟೋ ಕಡೆ ಬುಡದಲ್ಲಿ ಇರುವ ಜೀವಜಂತು, ಅಮೂಲ್ಯ ಕಲ್ಲುಗಳು, ಇತ್ಯಾದಿ ಕಂಡುಬರುತ್ತವೆ. ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುತ್ತದೆ. ಹವಾಮಾನ ಬದಲಾವಣೆಗೂ ಬೈಕಲ್ ಸರೋವರಕ್ಕೂ ನಿಕಟ ಸಂಬಂಧವಿದೆ. ಅದರ ಆಕಾರ ಜಪಾನಿನಂತೆ ಇದೆ. ಅಂದರೆ ಜಪಾನನ್ನು ಎತ್ತಿ, ಅದರಲ್ಲಿ ಇಟ್ಟರೆ, ಅದು ಅದರ ಒಳಗೆ ಸಮನಾಗಿ ಕೂಡಿ ಬರುತ್ತದೆ ಎಂದು ಅಲ್ಲಿಯವರ ಮಾತು. ನಿಜವೇ ಅಲ್ಲವೇ ಎಂದು ಗೊತ್ತಿಲ್ಲ. ಮೊದಲ ತೇಪೆಚಿತ್ರದಲ್ಲಿ ಬೈಕಲ್ ಸೌಂದರ್ಯ ಮತ್ತು ವಿಶಿಷ್ಟ ಕರಕೌಶಲದ ಸುವೆನಿಯರ್ ಅಂಗಡಿ ಇದೆ.

 ಎರಡನೇ ತೇಪೆಚಿತ್ರಣದಲ್ಲಿ ಚೆಂಗಿಸ್‍ಖಾನ್‍ನ ಚಿತ್ರ, ಮೊಂಗೊಲಿಯನ್ ಜಾನಪದ ಸಂಗೀತ, ನಾಟಕ, ಉಲಾನ್‍ಬಟೋರದ ಬೌದ್ಧ ದೇಗುಲಗಳು ಇವೆ. ಮೂರನೆಯದು ಚೆಂಗಿಸ್‍ಖಾನ್‍ನ ಮೂರ್ತಿ ಮತ್ತು ಕೆಲವು ಪರಿಸರದ ಚಿತ್ರಗಳು.

ಮೊಂಗೊಲಿಯ ತಲುಪುವತನಕ ನಾನೂ ನಿಮ್ಮಂತೆ ಆ ಸಂಸ್ಕೃತಿಗೆ ಅಪರಿಚಿತೆ. ಆ ಮೂರು ದಿನಗಳಲ್ಲಿ ನನ್ನ ದೃಷ್ಟಿಕೋನ ಸಂಪೂರ್ಣ ಬದಲಾಯಿತು. ಅದರ ಮೊದಲು ಅವನು ಬಹುದೊಡ್ಡ ಚಕ್ರವರ್ತಿ. ದಾಳಿ, ಲೂಟಿ ಮಾಡಿ ರಕ್ತಸುರಿಸಿ ನಡೆದ ದಾರಿ- ಅವರನ್ನು ಬರ್ಬರ ಜನ ಎಂದು ತಿಳಿದಿದ್ದೆ. ಹೂಣರು, ಟಾರ್ಟಾರರು ಎಲ್ಲಾ ಹೆಸರುಗಳು ಈ ದಾಳಿಗಾರರಿಗೆ ಇತ್ತು. ಡೇರೆಯಲ್ಲಿ ಜೀವನ ಮಾಡಿ, ಸುತ್ತಾಡಿ ಪ್ರಾಣಿಗಳಿಗೆ ಮೇವು ಕೊಟ್ಟು, ದಾಳಿ ಮಾಡಿ ಮುಂದೆ ಹೋಗುವ ಬದುಕು ಅವರದು.

ಜಗತ್ತಿನಲ್ಲಿ ವಿಶಾಲವಾದ ಬಹು ದೊಡ್ಡರಾಜ್ಯ. ಚೆಂಗಿಸ್‍ಖಾನನ ಕಾಲ 11ನೇ ಶತಮಾನ. ಈಗಲೂ ಅವರ ಜನಸಂಖ್ಯೆ, ಅಂತಹ ವಿಸ್ತಾರ ಇದ್ದರೂ ಮೂರು ಬರೀ ಮಿಲಿಯ. ಅಲ್ಲಿ ಕಮ್ಯುನಿಸ್ಟರ ಸಮಯದಲ್ಲಿ ವಿದ್ಯೆ ಮತ್ತು ಆರೋಗ್ಯಕ್ಷೇತ್ರದಲ್ಲಿ ಬಹಳ ಉನ್ನತಿಯಾಯಿತು. ಬಹಳ ಹಿಂದಿನಿಂದಲೂ ಹೆಚ್ಚಿನ ಜನರು ಬೌದ್ಧ ಮತವನ್ನು ಮತ್ತು ಹಳೆಯ ಮಾಂತ್ರಿಕ ಸಂಸ್ಕೃಂತಿಯನ್ನು ಹೊಂದಿದ್ದಾರೆ.

ಟೆರಿಲಿಜ್ ಎಂಬಲ್ಲಿ ಚೆಂಗಿಸ್‍ಖಾನ್ ಕುದುರೆಯ ಮೇಲೆ ಕುಳಿತ ಮೂರ್ತಿ ಇದೆ. ಕೈಯಲ್ಲಿ ಖಡ್ಗವಿದೆ. ಈ ಮೂರ್ತಿ 131 ಅಡಿ ಎತ್ತರವಿದೆ. ಸೂರ್ಯಕಿರಣವು ಅದಕ್ಕೆ ಚಿನ್ನದ ಹೊಳಪು ಕೊಟ್ಟಿತ್ತು. ಬಹಳ ದೂರದಿಂದ ಕಾಣುವ ದೃಶ್ಯ ಇದು. ಅದರ ಕೆಳಗೆ 36 ಸ್ತಂಭಗಳು- ಅವನ ಪೀಳಿಗೆಯಲ್ಲಿ ರಾಜ್ಯವನ್ನು ಆಳಿದವರ ನೆನಪಿನಲ್ಲಿ ಅದರ ಒಳಗೆ ಚಿತ್ರ ಸಂಗ್ರಹಾಲಯಗಳು, ಸುವೆನಿಯರ್‍ಗಳು, ಅಂಗಡಿಗಳು. ಅಲ್ಲಿಂದ ಲಿಫ್ಟ್‍ನಲ್ಲಿ ಅಥವಾ ಮೆಟ್ಟಿಲು ಹತ್ತಿ ಅವನ ಮುಖದ ಹತ್ತಿರ ಹೋಗಿ ಸಮೀಪದಿಂದ ನೋಡಬಹುದು. ಈ ಕೆಳಗಿನದ್ದು ನಮ್ಮ ಮಾರ್ಗದರ್ಶಿ ಹೇಳಿದ ಕಥೆ.

ತೆಮುಜಿನ ಎಂಬ 14 ವರ್ಷದ ಹುಡುಗ ತನ್ನ ಸೋದರ ಮಾವನ ಡೇರೆಗಳಿಗೆ ಬಂದಿದ್ದಾಗ ಈ ಘಟನೆ ನಡೆಯಿತು. ಒಬ್ಬ ಮಾಂತ್ರಿಕನು ಈ ಹುಡುಗನ ಭವಿಷ್ಯವೇನು ಎಂದು ಹೇಳುತ್ತಾನೆ- ಆಕಾಶದೇವರನ್ನು ಕೇಳುತ್ತಾನೆ. ಆಗ ಅಶರೀರವಾಣಿಯು ಕೇಳಿ ಬರುತ್ತದೆ. ಮತ್ತು ಒಂದು ಖಡ್ಗ ಅಲ್ಲಿ ಉದ್ಭವ ಆಗುತ್ತದೆ. ಆ ಧ್ವನಿ ಹೇಳಿತು: “ಹೋಗು- ಜಗತ್ತನ್ನೇ ಗೆಲ್ಲು!”.

“ಹಾಗಾದರೆ ಚೆಂಗಿಸ್‍ಖಾನ್ ಮುಸ್ಲಿಂ ಅಲ್ಲವೇ?” ಎಂದು ಕೇಳಿದೆ ನಾನು.

“ಖಂಡಿತವಾಗಿಯೂ ಅಲ್ಲ- ಮೊಂಗೊಲರು ಆಕಾಶ ತಂದೆಯನ್ನು ದೇವರು ಎಂದು ತಿಳಿದಿದ್ದರು. ಪ್ರತಿ ಕುಲದಲ್ಲೂ ಮಾಂತ್ರಿಕರು ಇರುತ್ತಿದ್ದರು. ಆಮೇಲೆ ಇಲ್ಲಿಗೆ ಟಿಬೆಟ್‍ನಿಂದ ಬೌದ್ಧಧರ್ಮವೂ ಬಂತು.”

“ಅವನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೇಗೆ ಇಷ್ಟು ಶಕ್ತಿಶಾಲಿ ಆಗಿದ್ದ?”

“ಅವನು ಅಷ್ಟು ಚಿಕ್ಕ ವಯಸ್ಸಿನಲ್ಲಿ ಪರಸ್ಪರ ಯುದ್ಧ ಮಾಡುವ ಪಾಳೆಯಗಾರರಿಗೆ ಒಗ್ಗಟ್ಟಿನ ಅಗತ್ಯವಿದೆ. ಎಲ್ಲಾ ಮೊಂಗೊಲರು ಸೇರಿದರೆ ಈ ಜಗತ್ತನ್ನೇ ಗೆಲ್ಲಬಹುದು. ಅವನು ಅದನ್ನು ತನ್ನ ಜೀವನದ ಗುರಿಯಾಗಿ ಮಾಡಿದ. ಡೇರೆಗಳ ಪ್ರಾಕಾರಕ್ಕೆ ಹೋಗಿ ಹೇಳುತ್ತಿದ್ದ- ನೀವು ಶರಣಾದರೆ ನನ್ನ ಪ್ರಜೆಗಳನ್ನಾಗಿ ನೋಡಿಕೊಳ್ಳುತ್ತೇನೆ. ನೀವೇ ನನ್ನನ್ನು ಬಾಗಿಲು ತೆರೆದು ಆಹ್ವಾನಿಸಬೇಕು. ಇಲ್ಲವಾದರೆ ನಾವು ಯುದ್ಧ ಮಾಡಿ ಸೋಲಿಸುತ್ತೇವೆ. ನಿಮ್ಮ ಆಸ್ತಿಪಾಸ್ತಿ, ಯೋಧರು, ಹೆಂಗಸರು, ಗುಲಾಮರು ನಮಗೆ ಸೇರುತ್ತಾರೆ. ರಕ್ತಪಾತದ ಆಸೆ ನನಗಿಲ್ಲ, ನಿಮಗಿದ್ದರೆ ಯುದ್ಧ ಮಾಡಿ ಎಂದಾಗ, ಬಹಳ ಪಾಳೆಯಗಾರರು ಶಾಂತವಾಗಿ ಅವನಿಗೆ ಶರಣಾಗತರಾದರು”.

ಇಷ್ಟೆಲ್ಲ ತಿಳಿದ ನಿಮಗೆ ನಾನು ಸಂಕ್ಷಿಪ್ತವಾಗಿ ಚೆಂಗಿಸ್‍ಖಾನನ ಬಾಲ್ಯದ ಕಥೆಯನ್ನು ಹೇಳಲೇಬೇಕು. ಇದು ಅವನು 16 ವರ್ಷವಿರುವಾಗಿನ ಕಥೆ. ಇದರಿಂದ ಅವನನ್ನು ಅರ್ಥ ಮಾಡಿಕೊಳ್ಳಲು ಮತ್ತು ಮೊಂಗೊಲಿಯಾದ ಪುರಾತನ ಸಂಸ್ಕೃತಿಯನ್ನು ತಿಳಿಯಲು ಸಾಧ್ಯ. ಆ ಕಾಲದಲ್ಲಿಯೂ ಯುದ್ಧ ಮತ್ತು ಶಾಂತಿ ಇಂದಿನಂತೆ ಮುಖ್ಯವಾಗಿದ್ದವು. ಇದು ಖಾನ್ ಐಗುಲ್ಡೆನ್ ಎಂಬವರ ಚಾರಿತ್ರಿಕ ಕಾದಂಬರಿಯಲ್ಲಿ ಇದೆ.

“ಜೋರಾಗಿ ಹಿಮಪಾತವಾಗುತ್ತಿತ್ತು. ‘ನೀಲಿ ತೋಳ’ಕುಲದ ನಾಯಕ ಏಸುಗಾಯಿ. ದೂರದ ಬೆಟ್ಟದಿಂದ ತನ್ನ ಸೈನಿಕರು ಟಾರ್ಟರ ವೈರಿಗಳನ್ನು ಸೋಲಿಸುವ ಪ್ರಯತ್ನದಲ್ಲಿ ಇದ್ದರು ಎಂದು ನೋಡಿದರೂ ಯುದ್ಧ, ಕುದುರೆಯ ಮೇಲೆ ಕುಳಿತು ಬಿಲ್ಲು ಬಾಣಗಳಿಂದ ನಡೆಯುತ್ತಿತ್ತು. ಏಸುಗಾಯಿಯ ಸೇನಾನಿಗಳು ವೈರಿಗಳ ಸೇನೆಯನ್ನು ಚದುರಿಸಲು ಸಫಲರಾದರು. ನಡುವಿನಲ್ಲಿ ಒಬ್ಬ ಯುವಕ ವೀರ ಬಹಳ ಚೆನ್ನಾಗಿ ಯುದ್ಧ ಮಾಡುತ್ತಿದ್ದ. ಅವರ ರಾಜಕುಮಾರ ಇರಬೇಕು ಎಂದು ಏಸುಗಾಯಿ ತನ್ನ ಕುದುರೆಯನ್ನು ಓಡಿಸಿಕೊಂಡು, ಖಡ್ಗವನ್ನು ಎತ್ತಿ ಅವನ ಹತ್ತಿರ ಬಂದ. ಯುವಕ ಅವರ ಎಲ್ಲಾ ಸೈನಿಕರಂತೆ ಎದೆಕವಚ ಧರಿಸಿದ್ದ. ಏಸುಗಾಯಿಯ ಸೈನಿಕರ ಬರಿ ಕವಚಗಳಿರಲಿಲ್ಲ. ಏಸುಗಾಯಿ ಹೇಳಿದ- “ಬಾ ಬಾಲಕ- ನನ್ನನ್ನು ಎದುರಿಸು”. ಯುವಕ ಅವನ ಕಣ್ಣಿನಲ್ಲಿ ತನ್ನ ಕೊನೆಯನ್ನು ಕಂಡಿರಬೇಕು! ಅವನು ಹೇಳಿದ- “ನನ್ನ ಸಾವಿನ ಸೇಡು ನಮ್ಮವರು ತೀರಿಸುತ್ತಾರೆ!”.

“ನಿನ್ನ ಹೆಸರೇನು?”

“ತೆಮಜಿನ-ಉಗೆ”

“ಎಲ್ಲಾ ಕಳ್ಳರು ಸಾಯಲೇ ಬೇಕು” ಎಂದು ಖಡ್ಗದಿಂದ ಅವನನ್ನು ತಿವಿದ. ಅವನ ಖಡ್ಗ 47 ಟಾರ್ಟ್‍ರರನ್ನು ಕೊಂದ ಖಡ್ಗ, ಶಿರಸ್ತ್ರಾಣ, ಎದೆಕವಚವನ್ನು ಧರಿಸಿ ತನ್ನ ಡೇರೆಯ ಕಡೆ ತೆರಳಿದ. ಅಲ್ಲಿ ಅವನ ಹೆಂಡತಿ ಹೊಯಲಿನ ಹೆರಿಗೆಯ ನೋವಿನಲ್ಲಿ ಕೂಗಾಡುತ್ತಿದ್ದಳು. ಅವನಿಗೆ ಒಬ್ಬ ಚಿಕ್ಕ ಮಗನಿದ್ದ. ಆದರೆ, ಖಾನ್‍ಗೆ ತುಂಬಾ ಮಕ್ಕಳು ಬೇಕು. ಅವನು ಹೊಯಿಲಿನಳ ದಣಿದ ಆದರೆ ನಗುಮುಖವನ್ನು ಕಂಡು ಸಂತೋಷಪಟ್ಟನು. ಸೂಲಗಿತ್ತಿಯಿಂದ ಗಂಡು ಮಗುವನ್ನು ತನ್ನ ಕೈಗೆ ಕೊಡಲು ಹೇಳಿದ. ಕೂಸು ಕಿರುಚಿತು. “ಅವನಿಗೆ ನನ್ನ ಗುರುತು ಸಿಕ್ಕಿತು” ಎಂದು ಹೇಳಿ ಏಸುಗಾಯಿ ನಕ್ಕ.

“ಅವನ ಮುಷ್ಟಿಯಲ್ಲಿ ಏನು?” ಎಂದು ಕೇಳಿದ.

ಅವಳು ಮುಷ್ಟಿ ಬಿಡಿಸಿ ನೋಡಿದರೆ, ಅದರಲ್ಲಿ ಹೆಪ್ಪು ಕಟ್ಟಿದ ರಕ್ತ- ಕಣ್ಣಿನಷ್ಟು ಗಾತ್ರ. ಸೂಲಗಿತ್ತಿ ನಡುಗಿದಳು. ತಾಯಿ ದುಃಖಿತಳಾಗಿ ನರಳಿದಳು. “ಅವನ ಬಲಗೈಯಲ್ಲಿ ರಕ್ತ. ಅವನು ಯಾವಾಗಲೂ ಸಾವಿನ ಜತೆ ನಡೆಯುತ್ತಾನೆ” ಎಂದು ಏಸುಗಾಯಿ ಸೂಲಗಿತ್ತಿಗೆ ಹೇಳಿದ. “ಅವನು ಯೋಧನಾಗುತ್ತಾನೆ. ನಮ್ಮ ಕ್ರಮದಂತೆ ಕುರಿಕಾಲಿನ ಎಲುಬುಗಳನ್ನು ಎಸೆದು, ಅದರಿಂದ ಭವಿಷ್ಯ ಕೇಳು” ಎಂದ. ಅದರಲ್ಲಿ ನಾಲ್ಕು ಕುದುರೆಗಳ ಲಕ್ಷಣಗಳು ಬಂದುವು. ಮಗು ಏಸುಗಾಯಿಯಂತೆ ತೋಳದ ಕಣ್ಣು-ಹಳದಿ ಬಣ್ಣ. ಅವನಂತೆಯೇ ಶ್ವೇತ ವರ್ಣ, ತಾಯಿಗೆಅದನ್ನು ಕೇಳಿ ಸಮಾಧಾನವಾಯಿತು. ಸೂಲಗಿತ್ತಿ ಕೇಳಿದಳು- “ಮಗುವಿನ ಹೆಸರೇನು?” ಎಂದು. ಏಸುಗಾಯಿ ಹೇಳಿದ- “ತೆಮುಜಿನ”. ಅಂದರೆ ಅವನು ಕಬ್ಬಿಣದಂತೆ! ಅವನ ಅಣ್ಣ ಬೆಕ್ಟರ್. ತಮ್ಮಂದಿರುಖಾಸರ, ಖಾಚಈನ, ತೆಮುಗರು ಆಮೇಲೆ ಹುಟ್ಟಿದರು.

ತೆಮುಜಿನ್‍ಗೆ 12 ವರ್ಷ ಇರುವಾಗ ನಡೆದ ಘಟನೆ ಇದು. ಹೊಯಿಲಿನ್‍ಳಿಗೆ ಮತ್ತೊಂದು ಪ್ರಸವದ ಸಮಯ. ಏಸುಗಾಯಿ ಐದು ಹುಡುಗರನ್ನೂ “ಕುದುರೆ ಏರಿ ಅವಳಿ ಬೆಟ್ಟಗಳಿಗೆ ಹೋಗಿ, ಸಂಜೆ ವಾಪಸ್ ಬನ್ನಿ” ಎಂದು ಕಳುಹಿಸಿದ. ಹುಡುಗರು ಖುಶಿಯಲ್ಲಿ ಹೊರಟರು. ತೆಮುಗ ದಪ್ಪ ಮತ್ತು ನಡಿಗೆ ನಿಧಾನ. ಬೆಕ್ಟರ ಒಬ್ಬನೇ ಮುಂದೆ ಹೋಗುತ್ತಿದ್ದ. ತೆಮುಜಿನನಿಗೆ ತಮ್ಮಂದಿರೆಂದರೆ ಬಹಳ ಪ್ರೀತಿ. ತೆಮುಗ ಕುದುರೆಯಿಂದ ಬಿದ್ದ. ಅವನ ಮೂವರೂ ಅಣ್ಣಂದಿರೂ ಅವನ ಕಡೆ ಧಾವಿಸಿ ಬಂದು ಎತ್ತಿದರು. ಅವನು ಹತ್ತು ನಿಮಿಷ ಕಾಲ ಮೂರ್ಛೆ ಹೋದ. ನಂತರ ಎಚ್ಚತ್ತು ಹೇಳಿದ. “ನಾನು ಬೆಟ್ಟದ ಮೇಲೆ ಗಿಡುಗ ಸುತ್ತುವುದನ್ನು ನೋಡಿದೆ!”. “ಸುಳ್ಳು, ಸುಳ್ಳು” ಎಂದರು ಅಣ್ಣಂದಿರು.

ಗಿಡುಗ ಮೊಂಗೊಲಿಯಾದವರಿಗೆ ಬಹಳ ಮುಖ್ಯ ಪಕ್ಷಿ. ಅದನ್ನು ಬೇಟೆಗೆ ಮತ್ತು ಹಾರಿಸಲು ಮುಖ್ಯವಾಗಿ ಬಳಸುತ್ತಾರೆ. ತೆಮುಜಿನ ಹೇಳಿದ- “ತೆಮುಗ ಹೇಳಿದ್ದು ನಿಜವಿರಬಹುದು. ಅವಳಿ ಪರ್ವತದಲ್ಲಿ ಗೂಡು ಇರುತ್ತದೆ ಮತ್ತು ಮರಿಗಳೂ ಇರುತ್ತವೆ. ಬೆಕ್ಟರ ಮತ್ತು ಒಬ್ಬ ತಮ್ಮ ಒಂದು ಬೆಟ್ಟತುದಿ ಹತ್ತಿದರು. ತೆಮುಜಿನ ಮತ್ತು ಇನ್ನೊಬ್ಬ ತಮ್ಮ ಇನ್ನೊಂದು ಶ್ರೇಣಿ ಹತ್ತಿದರು. ಬಹಳ ಕಷ್ಟದ ಹಾದಿ. ಸತ್ತರೂ ಪರವಾಗಿಲ್ಲ. ಗಿಡುಗದ ಮರಿಗಳನ್ನು ತಂದು ತಂದೆಗೆ ಕೊಡಲೇ ಬೇಕು ಎಂದು ನಿರ್ಧಾರ ಮಾಡಿದರು. ಕೊನೆಗೂ ಎರಡು ಮರಿಗಳು ಗೂಡಲ್ಲಿ ಸಿಕ್ಕಿದವು. ಮೇಲೆ ಹಾರಿ ಸುತ್ತುವ ತಾಯಿಗೆ ಕಲ್ಲು ಹೊಡೆದು, ಅದರ ಕಣ್ಣು ತಪ್ಪಿಸಿ ತೆಮುಜಿನ ಎರಡು ಮರಿಗಳನ್ನು ಬಟ್ಟೆಯಲ್ಲಿ ಸುತ್ತಿ, ತನ್ನ ಎದೆಗೆ ಕಟ್ಟಿಕೊಂಡು ಇಳಿಯುತ್ತಿರುವಂತೆಯೇ ಭಯಂಕರ ಬಿರುಗಾಳಿ ಬಂತು. ಅವರು ಒಂದು ಗವಿಯಲ್ಲಿ ರಾತ್ರಿ ಕಳೆಯಬೇಕಾಯಿತು.

ಬೆಳಗ್ಗೆ ಡೇರೆಯ ಕಡೆಗೆ ನಡೆಯುವಾಗ ಅವರನ್ನು ಹುಡುಕಿಕೊಂಡು ಗುಲಾಮರು ಬರುತ್ತಿದ್ದರು. ಏಟು ಬೀಳುವುದು ಖಂಡಿತ! ನಂತರ ಮನೆಗೆ ಹೋದಾಗ, “ನಿಮಗೆ ತಂಗಿ ಹುಟ್ಟಿದ್ದಾಳೆ. ನಿಮ್ಮ ತಾಯಿಗೆ ನಿಮ್ಮ ಬಗ್ಗೆ ಹೆದರಿಕೆಯಾಗಿತ್ತು, ನಿಮಗೆ ಏನು ಶಿಕ್ಷೆ ಕೊಡಲಿ?” ಎಂದು ಏಸುಗಾಯಿ ಕೇಳಿದ. ಕೂಡಲೇ ತೆಮುಜಿನ ಬಟ್ಟೆಯಲ್ಲಿ ಸುತ್ತಿದ ಗಿಡುಗನ ಮರಿಗಳನ್ನು ಏಸುಗಾಯಿ ಕೈಯಲ್ಲಿ ಇಟ್ಟ. ಏಸುಗಾಯಿ ಬಹಳ ಸಂತೋಷ ಪಟ್ಟ. ಕೂಡಲೇ, ತೆಮುಜಿನ ತನಗೆ ಬೇಕು ಎಂದು ಆಸೆ ಇಟ್ಟ. ಕೆಂಪುಗರಿಯ ಮರಿಯನ್ನು ತೇಲುಕ ಎಂಬ ಅಂಗರಕ್ಷಕ ಮತ್ತು ಗುಲಾಮನಿಗೆ ಕೊಟ್ಟ. ತೆಮುಜಿನನಿಗೆ ಬಹಳ ಸಿಟ್ಟು ಬಂತು ಮತ್ತು ದುಃಖವಾಯಿತು. ಆದರೂ ಶಿಕ್ಷೆಗಳು ತಪ್ಪಿದವು. ಆ ರಾತ್ರಿ ಮಾಂತ್ರಿಕರಿಂದ ಈ ಘಟನೆ ಮತ್ತು ಹೆಣ್ಣು ಮಗು ಹುಟ್ಟಿದ ಘಟನೆಗಳನ್ನು ವಿವರವಾಗಿ ಹೇಳಲಾಯಿತು. ಮತ್ತು ಭೋಜನ, ಹೆಂಡ, ಕುಣಿತ ವಿಜೃಂಭಣೆಯಿಂದ ನಡೆಯಿತು.

ಮರುದಿನ ಏಸುಗಾಯಿ ಹೇಳಿದ. “ತೆಮುಜಿನ, ನೀನು ಧೈರ್ಯಶಾಲಿ ಯುವಕನಾಗಿದ್ದಿ. ನಿನ್ನ ಸೋದರಮಾವನ ಕಡೆಗೆ ಹೋಗಿ, ಒಂದು ವರ್ಷ ಬೆಕ್ಟರ ಇದ್ದಂತೆ ಇದ್ದು, ಒಂದು ಹೆಣ್ಣು ನಿಶ್ಚಯ ಮಾಡಿ ಬಾ. ನಿನ್ನ ತಾಯಿಯನ್ನು ಕರೆದುಕೊಂಡು ಬರುವಾಗ ನಿನ್ನ ಸೋದರಮಾವನನ್ನು ಖಡ್ಗಯುದ್ಧದಲ್ಲಿ ಬಹಳ ಗಾಯ ಮಾಡಿ ನಿನ್ನ ತಾಯಿಯನ್ನು ಕರೆದುಕೊಂಡು ಬಂದೆ. ಆದರೂ ನಮ್ಮ ಎರಡು ಕುಲಗಳಲ್ಲಿ ಪರಸ್ಪರ ಮದುವೆ ಮಾಡುವುದು ಅಗತ್ಯ” ಎಂದ.

ಏಸುಗಾಯಿ ಮತ್ತು ತೆಮುಜಿನ ‘ಓಲ್ಕು ಹನೂಟ್’ ಎಂಬ ಸಮುದಾಯದ ಕಡೆ ಕುದುರೆ ಏರಿ ಹೊರಟರು. ಅಲ್ಲಿ ತಲುಪಿದ ಮೇಲೆ ಅವರ ಜತೆಯಾರೂ ಸ್ನೇಹಪೂರ್ಣವಾಗಿ ನಡೆದುಕೊಳ್ಳಲಿಲ್ಲ. ಅವರು ತೋರಿಸಿದ ಹುಡುಗಿ ಭೋರ್ಟೆ ಇವರನ್ನು ಕಂಡು ಓಡಿಯೇ ಹೋದಳು. ಅವಳು ಮುಂದೆ ತೆಮುಜಿನನ ಮೊದಲ ಹೆಂಡತಿಯಾಗುತ್ತಾಳೆ. ಏಸುಗಾಯಿ ವಾಪಸ್ಸು ಬರುತ್ತಾನೆ. ಮೂರು ದಿನದ ಬಳಿಕ, ಏಸುಗಾಯಿಯ ಗುಲಾಮನು ಬಂದು ತೆಮುಜಿನನ್ನು ಮನೆಗೆ ಕರೆದೊಯ್ಯುತ್ತಾನೆ. ಹಿಂತಿರುಗಿ ಮನೆಗೆ ಬರುವ ವೇಳೆ ಏಸುಗಾಯಿಯನ್ನು ಐವರು ಟಾರ್ಟರು ಕೊಲ್ಲುವ ಪ್ರಯತ್ನ ಮಾಡಿದಾಗ, ಏಸುಗಾಯಿ ಅವರೆಲ್ಲರನ್ನೂ ಕೊಂದು ವಾಪಸ್ಸು ಬಂದು ಮನೆಯಲ್ಲಿ ಮೃತ್ಯುವಿನ ದಾರಿ ಕಾಯುತ್ತಿರುತ್ತಾನೆ.

ತೆಮುಜಿನನ ದುಃಖಕ್ಕೆ ಪಾರವಿಲ್ಲ. ಅವನ ತಂದೆ ಅವನ ಕೈ ಹಿಡಿದು ಒಂದೇ ಮಾತು “ಟಾರ್ಟರ” ಎನ್ನುವಾಗ ಅವನ ಪ್ರಾಣ ಹಾರಿ ಹೋಯಿತು. ಹೊಯಿಲಿನಳ ಹತ್ತಿರ ಈಲುಕ ಬಂದು ಹೇಳಿದ. “ಏಸುಗಾಯಿ ಜೀವಂತ ಇರುವಾಗ ನಾನು ಅವನ ಗುಲಾಮ. ಅವನು ತೀರಿ ಹೋದ ಮೇಲೆ ನನಗೂ ನಿಮಗೂ ಏನೂ ಸಂಬಂಧವಿಲ್ಲ”. ಹೊಯೆಲಿನ ತಟಸ್ಥಳಾದಳು. ಆರು ಮಕ್ಕಳು ಮತ್ತು ಅವಳು ಏನು ಮಾಡಬೇಕು? ಏಸುಗಾಯಿಯನ್ನು ಸಮಾಧಿ ಮಾಡಲು ಡೇರೆಯ ಮುಂದೆ ಇಟ್ಟರು. ಮಾಂತ್ರಿಕ ಚಟಗಾಯಿ ಹೇಳಿದ ಏಸುಗಾಯಿಯ ಜೀವನದ ಕಥೆಯನ್ನು ಕೇಳಿ ಎಲ್ಲರೂ ದುಃಖ ಮತ್ತು ಪ್ರೀತಿ ತೋರಿಸುತ್ತಾರೆ.

ಎಲ್ಲಾ ಮುಗಿದ ಮೇಲೆ, ಈಲುಕ ಹೇಳುತ್ತಾನೆ: “ಏಸುಗಾಯಿ ತೀರಿ ಹೋದ. ಇನ್ನು ಮೇಲೆ ನಾನು ಈ ತಂಡದ ಯಜಮಾನ”. ಎಲ್ಲರೂ ಸ್ತಬ್ಧರಾದರು. ಚಟಗಾಯಿ ಕ್ರೋಧ ಕೆದರಿ, “ನೀನು ಹೇಗಾಗುತ್ತಿ? ಬೆಕ್ಟರ ಈ ತಂಡದ ನಿಜವಾದ ಯಜಮಾನ” ಎಂದು ಈಲುಕನ ಮುಖ ಪರಚಿದನು. ಈಲುಕ ತನ್ನ ಖಡ್ಗದಿಂದ ಅವನನ್ನು ಕೊಂದೇ ಬಿಟ್ಟ. ಆಮೇಲೆ ಮಕ್ಕಳ ಕಡೆ ನಡೆದ. ಆಗ ಹೊಯಲಿನ ಕಿರುಚಿದಳು. “ನಿಲ್ಲು, ನಿಲ್ಲು” ಅವನು ನಿಂತ. ಮತ್ತೆ ಹೇಳಿದ. “ನಾಳೆ ನಾವೆಲ್ಲ ಈ ಡೇರೆ ಸಮೇತಎಲ್ಲರೂ ಹೊರಟು ಹೋಗುತ್ತೇವೆ”. ಮರುದಿನ ಏಸುಗಾಯಿಯ ಅನಾಥ ಮಕ್ಕಳು ಮತ್ತು ಹೊಯೆಲಿನ ಏನೂ ಇಲ್ಲದ ಮರಭೂಮಿಯಲ್ಲಿ ಕುಳಿತಿದ್ದರು. ಹೊಯೆಲಿನ ಹೇಳಿದಳು, “ನಾವು ಹತ್ತಿರದ ಕಾಡಿಗೆ ಹೋಗಿ, ಅಲ್ಲಿ ಗುಡಿಸಲು ಕಟ್ಟಿ, ಕಾಡಿನ ಪ್ರಾಣಿಗಳು ಮತ್ತು ಹಣ್ಣುಹಂಪಲು ತಿಂದು ಬದುಕೋಣ. ನಾವು ಜತೆಯಲ್ಲಿ ಇದ್ದರೆ ಸಮರ್ಥರಾಗುತ್ತೇವೆ”.

ಬಾಣಂತಿತಾಯಿ, ಐದು ಹುಡುಗರು, ಒಂದು ಹಸುಳೆ. ಬೆಕ್ಟರನ ಕೈಯಲ್ಲಿ ಒಂದು ಚಿಕ್ಕ ಚಾಕು. ಅವರು ಧರಿಸಿದ ಬಟ್ಟೆಯಲ್ಲದೇ ಇನ್ನೇನೂ ಇರಲಿಲ್ಲ. ಗೆಲ್ಲು ಕೊಂಬೆ ಕತ್ತರಿಸಿ ಒಂದು ಚಿಕ್ಕ ಗುಡಿಸಲು ಕಟ್ಟಿದರು. ಹರಿಯುವ ನೀರನ್ನು ಎಲೆಯ ತಟ್ಟೆಯಲ್ಲಿ ತಂದರು. ಬೆಣಚುಕಲ್ಲು, ಬಿಲ್ಲು ಬಾಣ ಮಾಡಿದರು. ಬೆಕ್ಟರÀ ಒಬ್ಬನೇ ಹೋಗಿ, ಬರೀಕೈಯಲ್ಲಿ ವಾಪಸ್ಸು ಬರುತ್ತಿದ್ದ. ತೆಮುಜಿನ ತಾಯಿ ಮತ್ತು ತಂಗಿಯ ಜತೆ ಇರುತ್ತಿದ್ದನು. ತೆಮುಜಿನ ಮತ್ತು ತಮ್ಮಂದಿರು ಆದಷ್ಟು ಪ್ರಯತ್ನ ಮಾಡಿ ಮಾರ್ಮಾಟ (ಇಲಿ) ಮತ್ತು ಅಳಿಲು ಕೊಂದು ತರುತ್ತಿದ್ದರು. ಕಾಡುಹಣ್ಣು, ಬೇರು, ಗಡ್ಡೆಗಳನ್ನು ತರುತ್ತಿದ್ದರು. ಆ ಆಹಾರ ಸಾಕಾಗುತ್ತಿರಲಿಲ್ಲ. ತಾಯಿಯ ಎದೆ ಹಾಲು ಇಲ್ಲದ ಹಸುಳೆ ಹಗಲು ರಾತ್ರಿ ಅಳುತ್ತಿತ್ತು. ಬೆಣಚುಕಲ್ಲಿನಲ್ಲಿ ಬೆಂಕಿ ಮಾಡಿ ಮಾಂಸ, ಸಿಕ್ಕಿದಾಗ ಮೀನು ಎಲ್ಲರೂ ತಿನ್ನುವಾಗ ಯಾರಿಗೂ ಹೊಟ್ಟೆ ತುಂಬುತ್ತಿರಲಿಲ್ಲ. ತೆಮುಜಿನ ತಮ್ಮಂದಿರನ್ನು ಕೇಳಿದ: “ಬೆಕ್ಟರ ಯಾಕೆ ಏನೂ ತರುವುದಿಲ್ಲ? ಅವನ ಹತ್ತಿರ ಚಾಕು ಕೂಡಾ ಇದೆ!”.

ತಮ್ಮಂದಿರು ಅವನನ್ನು ಹಿಂಬಾಲಿಸಿ ನೋಡಿದರು. ಅವನಿಗೆ ಸಿಕ್ಕಿದ್ದನ್ನೆಲ್ಲಾ ಅವನೇ ತಿನ್ನುತ್ತಿದ್ದ. ಮತ್ತು ಹೆಚ್ಚಾದದ್ದನ್ನು ಅಡಗಿಸಿ ಇಡುತ್ತಿದ್ದುದು ತಿಳಿಯಿತು. ತೆಮುಜಿನ ಸಿಟ್ಟಿಗೆ ಪಾರವಿಲ್ಲದಾಯಿತು. “ಈ ರೀತಿಯೇ ಆದರೆ ತಾಯಿ ಮತ್ತು ತಂಗಿ ಸೇರಿ ನಾವೆಲ್ಲರೂ ಇನ್ನೊಂದು ವಾರದಲ್ಲಿ ಸಾಯುತ್ತೇವೆ. ಬೆಕ್ಟರನಿಗೆ ಅದು ಗೊತ್ತು. ನಾನು ಅವನನ್ನು ಕೊಲ್ಲುತ್ತೇನೆ. ಅವನು ಒಬ್ಬ ಬದುಕುವುದು, ತಾಯಿ ಮತ್ತು ನಾವೆಲ್ಲರೂ ಸಾಯುವುದು ಸರಿಯಲ್ಲ” ಎಂದನು. ತಮ್ಮನ ಸಹಾಯದಿಂದ ತೆಮುಜಿನ ಅಣ್ಣನನ್ನು ಕೊಂದನು. ಆಮೇಲೆ ತಾಯಿ ಹತ್ತಿರ ನಿಜ ಹೇಳಿ ಶಿಕ್ಷೆ ಕೇಳಿಕೊಂಡನು. ತಾಯಿಯ ದುಃಖಕ್ಕೆ ಮಿತಿ ಇಲ್ಲದಾಯಿತು. ಅವಳು ತೆಮುಜಿನ್‍ನನ್ನು ಮನೆಯಿಂದ ಹೊರ ಹಾಕಿದಳು. ಆದರೂ ಅವನು ಬೆಕ್ಟರನ ಚಾಕು ತೆಗೆದುಕೊಂಡು ಬೇಟೆಯಾಡಿ ಆಹಾರವನ್ನು ಗುಡಿಸಲ ಬಾಗಿಲಲ್ಲಿ ತಂದು ಇಡುತ್ತಿದ್ದ. ಮನೆಯ ಹೊರ ಬಂದಾಗ ತಮ್ಮಂದಿರು ಅವನ ಜತೆ ಇರುತ್ತಿದ್ದರು. ಹೇಗೋ ತಾಯಿ ಅಣ್ಣನನ್ನು ಕ್ಷಮಿಸುವಂತೆ ಮಾಡಿದರು.

ತೆಮುಜಿನ ನೋಡುವಂತೆಯೇ ಇಬ್ಬರು ಗೋಮಾಳರು ದೂರದಲ್ಲಿ ಅವರ ಡೇರೆ ಹಾಕಿದರು. ಅವರ ಹತ್ತಿರ ಕುದುರೆಗಳು, ಹಸುಗಳು ಎಲ್ಲಾಇದ್ದವು. ತೆಮುಜಿನ ಹೇಳಿದ, “ಚಳಿಗಾಲ ಬರುತ್ತಿದೆ. ನಾವು ಪುಟ್ಟ ತಂಗಿಯ ಜತೆ ಹೆಚ್ಚು ಕಾಲ ಬದುಕಿ ಇರಲು ಸಾಧ್ಯವಿಲ್ಲ. ಅವರು ಇಬ್ಬರು. ನಾವು ಇಷ್ಟು ಜನ. ನಾನೂ, ತಮ್ಮಂದಿರೂ ರಾತ್ರಿ ಹೋಗಿ ಆ ಇಬ್ಬರು ವಯಸ್ಕರನ್ನು ಅವರಿಗೆ ನೋವಾಗದಂತೆ, ತಿಳಿಯದಂತೆ ಕೊಲ್ಲುತ್ತೇವೆ’’. ತಾಯಿ ಒಪ್ಪಿದಳು. ಆ ಮೇಲೆ ತೆಮುಜಿನ ಚಳಿಗಾಲವನ್ನು ಗೋಮಾಳರಂತೆ ಕಳೆಯಲು ಸಾಧ್ಯವಾಯಿತು. 12 ವರ್ಷದ ಹುಡುಗ ಎರಡು ಕೊಲೆಗಳನ್ನು ಮಾಡಿದ್ದು ಅನುಚಿತವೇ?

ಟಾರ್ಟರರು ದಾಳಿ ಮಾಡಿ ಗೋಮಾಳರನ್ನು ಕೊಲ್ಲುತ್ತಿದ್ದರು. ಪಾಳೆಯಗಾರರನ್ನು ಸೋಲಿಸಿ ಅವರ ಸಂಪತ್ತನ್ನು ದೋಚುತ್ತಿದ್ದರು. ಚಿಕ್ಕ ಚಿಕ್ಕ ಪಾಳೆಯಗಾರರು ಮತ್ತು ಗೋಮಾಳರು ಅವರ ಸುಲಭದ ಗುರಿಯಾಗಿದ್ದರು. ತೆಮುಜಿನ ಹೇಳುತ್ತಾನೆ, “ನಾವೆಲ್ಲರೂ ಮೊಂಗೊಲರು. ನಾವೆಲ್ಲರೂ ಜತೆ ಸೇರಿದರೆ ಟಾರ್ಟರರನ್ನು ನಿರ್ಮೂಲ ಮಾಡಿ, ಸುಖ ಮತ್ತು ಶಾಂತಿಯಿಂದ ಇರಬಹುದು. ನಾನು ತೆಲುಕನ ಸೇಡು ತೀರಿಸಿ, ನನ್ನ ಜನರನ್ನು ವಾಪಸ್ಸು ಕರೆದುಕೊಳ್ಳಬೇಕು. ಅದರ ನಡುವೆ, ಸೋದರ ಮಾವನಲ್ಲಿ ನಿಶ್ಚಯ ಮಾಡಿದ, ಭೋರ್ಟಿಯನ್ನು ಕರೆದುಕೊಂಡು ಬಂದು ಮದುವೆಯಾಗಬೇಕು”. ಅವನ ಮಾತಿಗೆ ತಮ್ಮಂದಿರು ಮತ್ತು ತಾಯಿ ಪೂರ್ತಿ ವಿಶ್ವಾಸ ಮತ್ತು ಸಹಕಾರ ನೀಡಿದರು.

ಅವನು ಟಾರ್ಟರರನ್ನು ಸೋಲಿಸಿ, ಯೋಧರನ್ನು ಕೇಳಿಕೊಂಡು ಮೊಂಗೊಲರ ಒಗ್ಗಟ್ಟಿನ ಅಗತ್ಯ ಇದೆ ಎಂದು ತೋರಿಸಿಕೊಟ್ಟನು. ಆ ಸಮಯದಲ್ಲಿ ಒಬ್ಬ ಪಾಳೆಯಗಾರನ ಯೋಧ, “ಏಸುಗಾಯಿ ಆ ದಿನ ಒಬ್ಬನೇ ಹಿಂದಿರುಗುತ್ತಿದ್ದಾನೆ ಎಂದು ತೆಮುಜಿನನ ಸೋದರಮಾವನೇ ಟಾರ್ಟರರಿಗೆ ತಿಳಿಸಿದ್ದ. ಅವನೇ ಏಸುಗಾಯಿ ಮರಣಕ್ಕೆ ಕಾರಣ” ಎಂದ. ತೆಮುಜಿನನ ಸಿಟ್ಟು ನೆತ್ತಿಗೇರಿತು. ತಾಯಿಗೆ ತಿಳಿಸಿ, ತಮ್ಮಂದಿರ ಜತೆ ಅವಳ ತವರಿಗೆ ತೆರಳಿ ಸೋದರಮಾವನನ್ನು ಭೇಟಿ ಮಾಡುತ್ತಾನೆ. ಅವನ ಸಮೀಪ ಹೋಗಿ ಅವನನ್ನು ಕತ್ತಿಯಿಂದ ತಿವಿದು ಕೊಲ್ಲುತ್ತಾನೆ. ಅವನನ್ನು ಹಿಡಿಯಲು ಅಂಗರಕ್ಷರು ಬಂದಾಗ, ತೆಮುಜಿನ ಆಕ್ರೋಶದಿಂದ ನಿಜವನ್ನು ಹೇಳುತ್ತಾನೆ ಮತ್ತು ಸೋದರಮಾವನ ಮಗನನ್ನು ಖಡ್ಗಯುದ್ಧದಲ್ಲಿ ಸೋಲಿಸುತ್ತಾನೆ. ನಾನು ಈಗ ನಮ್ಮ ತಾಯಿಯ ಕಡೆಯ ಒಲ್ಕು ಹನೂಟ ಯಜಮಾನ ಎನ್ನುತ್ತಾನೆ. ಅವರ ಮಾಂತ್ರಿಕನೂ ಅದನ್ನು ಒಪ್ಪುತ್ತಾನೆ.

ಅವನು ಅಲ್ಲಿಯ ಡೇರೆಗಳು, ಸಂಪತ್ತು, ಯೋಧರು ಎಲ್ಲಕ್ಕೂ ಮುಖಂಡನಾಗುತ್ತಾನೆ. ಅವನು ಮೂರು ಸೇನೆಗಳನ್ನು ಒಟ್ಟು ಮಾಡುವಾಗ ಈಲುಕ ಬಂದು, “ನಾನೂ ಸೇರುತ್ತೇನೆ” ಎನ್ನುತ್ತಾನೆ. ಆದರೆ, ನನಗೆ ಕಾಲು ಭಾಗ ಟಾರ್ಟರ ಸಂಪತ್ತು ಕೊಡಬೇಕು ಎನ್ನುತ್ತಾನೆ. ತೆಮುಜಿನ ಒಪ್ಪುತ್ತಾನೆ. ಒಂದು ಶರತ್ತು. “ನಾವು ಗೆದ್ದರೆ, ನೀನೂ ನಾನು ಖಡ್ಗಯುದ್ಧ ಮಾಡಿ, ಗೆದ್ದವನಿಗೆ ನನ್ನ ತಂದೆಯ ಕುಲದವರು ಮತ್ತು ನನ್ನ ತಂದೆಯ ಖಡ್ಗ ಸಿಗಬೇಕು”. ಈಲಕು ಒಪ್ಪುತ್ತಾನೆ. ಟಾರ್ಟರರನ್ನು ಗೆದ್ದ ಮೇಲೆ, ತೆಮುಜಿನ ಈಲಕನನ್ನು ಯುದ್ಧದಲ್ಲಿ ಸೋಲಿಸಿ, ತನ್ನ ಸ್ವಂತ ತಂಡದ ನಾಯಕನಾಗುತ್ತಾನೆ. ಆಮೇಲೆ ಬೇರೆ ಬೇರೆ ಪಾಳೆಯಗಾರರಿಗೆ ಹೇಳುತ್ತಾನೆ- “ಯುದ್ಧ ಮಾಡಿದರೆ ನಿಮ್ಮನ್ನು ಧ್ವಂಸ ಮಾಡಿ, ನಿಮ್ಮ ಸಂಪತ್ತನ್ನು ತೆಗೆದುಕೊಳ್ಳುತ್ತೇವೆ”. ಟಾರ್ಟರನ್ನು ನಾಲ್ಕು ಪಾಳೆಯಗಾರರು ಧ್ವಂಸ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರ. ಹಾಗಾಗಿ ಬಹಳ ಪಾಳೆಯಗಾರರು ಅವನಿಗೆ ಶರಣಾಗತರಾಗಿ ಅವನ ಪ್ರಜೆಗಳಾಗಿ ಸುಖವಾಗಿದ್ದರು. ಎಷ್ಟು ಚಕ್ರವರ್ತಿಗಳು ಇಂತಹ ಗೌರವಯುಕ್ತ ನಡೆವಳಿಕೆ ತೋರಿಸುತ್ತಾರೆ?

ಅವನು ತನ್ನ ಚಿತ್ರಗಳನ್ನು ಮಾಡಬಾರದು ಎಂದಿದ್ದ. ನನ್ನ ಸಮಾಧಿ ಎಲ್ಲಿ ಎಂದು ತಿಳಿಯಬಾರದು ಎಂದಿದ್ದ. ಹಾಗಾಗಿ ಅವನ ಚಿತ್ರಗಳಲ್ಲೇ ಎಲ್ಲಿಯ ಜನರು ಮಾಡಿದ್ದರೂ ಅಲ್ಲಿಯವರ ಹಾಗೆ ಇದ್ದ. ಅವನ ಮೊಮ್ಮಗ ಕುಬ್ಲಾಖಾನ್ ಅಜ್ಜ ತೀರಿದ ಬಳಿಕ ಚೈನಾದಚಕ್ರವರ್ತಿ ಎಂದು ಹೇಳಿ ಬೇರೆಯ ಚೈನೀಸ್ ಮೂಲಕ ಚಕ್ರವರ್ತಿ ಎಂದ. ಆದರೆ, ಮೊಂಗೊಲಿಯಾದ ಸೇನೆಯನ್ನು ತಡೆಯಲು ಚೀನಾದ ಮಹಾಗೋಡೆ ನಿರ್ಮಿಸಿದರು ಎಂದು ಪ್ರತೀತಿ ಇದೆ. ಆದರೆ, ಅವನ ವರ್ಣನೆಗಳು ಅವನು ಏಸುಗಾಯಿಯಂತೆ ಎತ್ತರ ಮತ್ತು ದೃಢಕಾಯ. ತೋಳನ ಕಣ್ಣು (ನಾವು ಬೆಕ್ಕಿನ ಕಣ್ಣುಎಂದಂತೆ), ಶ್ವೇತ ವರ್ಣ ಮತ್ತು ಕೆಂಚು ಕೂದಲು ಎನ್ನುತ್ತಾರೆ.

ಮೊಂಗೊಲಿಯಾ 1990ರಲ್ಲಿ ತಮ್ಮದೇ ಶಾಂತಿಯುತ ಪ್ರಜಾಪ್ರಭುತ್ವ ಹೊಂದಿದೆ. ಇದು ಹೇಗೆ ಸಾಧ್ಯವಾಯಿತು?

ಅಲ್ಲಿಯ ಜನರು ಊಲನ್‍ಬಟೋರನಂತಹ ಪಟ್ಟಣದಲ್ಲಿ ಇರುವವರೆಲ್ಲರನ್ನೂ ಬಿಟ್ಟು ಇನ್ನೂ ಹೆಚ್ಚಿನವರು ಗೋಮಾಳರಾಗಿಯೇ ಇದ್ದಾರೆ. ತೇಪೆಚಿತ್ರದಲ್ಲಿ ಇರುವ ಕುದುರೆಯ ಮೇಲೆ ಕುಳಿತ ಹುಡುಗನನ್ನು ನಾವು ಮಾತನಾಡಿಸಿದೆವು. ಅವನು ಸರಳವಾಗಿ ಇಂಗ್ಲಿಷಿನಲ್ಲಿ ನಮಗೆ ಉತ್ತರಕೊಟ್ಟ. ಅವನು ಹೇಳಿದ; “ನಾನು ಶಾಲೆಗೆ ಹೋಗುತ್ತೇನೆ. ಇಂಗ್ಲಿಷ್ ಕಲಿತಿದ್ದೇನೆ. ಆದರೆ ರಜೆ ಬಂದೊಡನೆ ನನ್ನ ಕುಟುಂಬದವರ ಜತೆ ಗೋಚಾಕರಿ ಮಾಡುತ್ತೇನೆ. ಇದು ನನಗೆ ಇಷ್ಟ”. ಇಂತಹ ವಿಚಿತ್ರ ನಮ್ಮ ಹಳ್ಳಿಗಳಲ್ಲಿ ಕಾಣಲು ಸಾಧ್ಯವೆ?

ತೆಮುಜಿನ (ಚೆಂಗಿಸ್‍ಖಾನ್). ಮೊಂಗೊಲಿಯಾ ಒಂದು ಸಾಮ್ರಾಜ್ಯ ಮತ್ತು ಒಂದು ಜನರನ್ನಾಗಿ ಮಾಡುತ್ತೇನೆ ಎಂದು ತನ್ನ 16ನೇ ವಯಸ್ಸಿನಲ್ಲಿ ಸಾಧಿಸಲು ಹೊರಟನು. ಅದಕ್ಕೆ ಅವನ ತಮ್ಮಂದಿರೂ ಸಹಾಯ ಮಾಡಿದರು. ಅವನ ಹಿಂದೆ ನೀಲಿ ತೋಳದ ಪೀಳಿಗೆ ವದಂತಿಯಂತೆ 17 ಪೀಳಿಗೆ ಇದೆ. ಅವನ ಬಳಿಕ 36 ಪೀಳಿಗೆಗಳು ಇವೆ. ಅವನು ಗೆಲ್ಲುವ ವಿಧಾನವನ್ನು ಮಾರ್ಗದರ್ಶಿ ನಮಗೆ ಹೇಳಿದ್ದರು.

ಮೊಂಗೋಲರ ಜನಜೀವನ ಸಂಸ್ಕøತಿ

ಅವರ ಮೊದಲ ನಂಬಿಕೆ ಆಕಾಶ ತಂದೆಯದ್ದು ಮತ್ತು ಅವರ ಮಾಂತ್ರಿಕರಲ್ಲಿ. ಅವರಲ್ಲಿ ಹೆಚ್ಚಿನ ಜನರು ಪಾಳೆಯಗಾರರು, ಗೋಮಾಳರು ಆಗಿದ್ದರು. ಅವರ ಕಥೆಗಳು, ನೃತ್ಯ, ಭವಿಷ್ಯವಾಣಿ, ಶಕುನ ಎಲ್ಲವನ್ನೂ ಮಾಂತ್ರಿಕರು ಮಾಡುತ್ತಿದ್ದರು. 5ನೇ ಶತಮಾನದ ಚೀನಾದ ಮೊಂಗೊಲ ಆಸ್ಥಾನದಲ್ಲಿ ಬೌದ್ಧಧರ್ಮದ ಪರಿಚಯವಾಯಿತು. ಬೌದ್ಧಧರ್ಮವು ಮೊಂಗೊಲಿಯಾದಲ್ಲಿ ಹರಡಿತು. ಆದರೂ ಮಾಟಮಂತ್ರಗಳು ಮುಖ್ಯವಾಗಿದ್ದವು.

ತೆಮುಜಿನ “ನಾನು ಚೆಂಗಿಸ್‍ಖಾನ ಮೊಂಗೊಲರನ್ನು ಒಂದುಗೂಡಿಸಿ ಬಹಳ ದೊಡ್ಡ ಸಾಮ್ರಾಜ್ಯ ಮಾಡುತ್ತೇನೆ” ಎಂದು ಪಣತೊಟ್ಟಿದ್ದು ನಿಜವಾಯಿತು. ಆಮೇಲೆ ಮೊಂಗೊಲ ಲಿಪಿಯನ್ನು ಪ್ರಚಲಿತ ಮಾಡಿದ. ಅದರ ಮೊದಲು ಎಲ್ಲವೂ ಬಾಯಿಯಿಂದ ಹೇಳಿ, ಕಿವಿಯಿಂದ ಕೇಳುವ ಮಾತುಗಳು. 3ನೇ ತೇಪೆಚಿತ್ರದಲ್ಲಿ ಅಲ್ಲಿಯ ಚಿತ್ರಲಿಪಿಯನ್ನು ಕಾಣಬಹುದು. ಲಿಪಿಗಾರ ಬರೆದಿರುವುದು ತನ್ನ ಹೆಸರು ಮತ್ತು ನನ್ನ ಹೆಸರು.

ಕಾಡು ಕುದುರೆಗಳು (3ನೇ ತೇಪೆಚಿತ್ರದಲ್ಲಿ ದೂರದಿಂದ ಕಾಣಬಹುದು.) ಬಹಳ ಸಾವಿರ ವರ್ಷಗಳಿಂದಲೂ ಮೊಂಗೊಲಿಯಾದಲ್ಲಿ ಇದ್ದುವು. ಅವು ಕುಳ್ಳ, ಆದರೆ, ಶಕ್ತಿಶಾಲಿ ಕುದುರೆಗಳು. ಅವು ನೀರು ಮತ್ತು ಕುರುಚಲು ಗಿಡ ತಿಂದು ತಿಂಗಳುಗಟ್ಟಲೇ ಮರಭೂಮಿಯಲ್ಲಿ ಓಡಬಲ್ಲವು. ಬೇರೆ ಬೇರೆಯವರು ಅಲ್ಲಿಗೆ ಬಂದು ಅವುಗಳನ್ನು ತಮ್ಮ ಊರಿಗೆ ಒಯ್ದರು. 1970ರಲ್ಲಿ ಅಲ್ಲಿ ಕಾಡುಕುದುರೆಗಳೇ ಇಲ್ಲವಾದವು.

1992ರಲ್ಲಿ ಒಂದು ಡಚ್‍ಎನ್‍ಜಿಒ ಕಾಡುಕುದುರೆಗಳ ಒಂದು ಗುಂಪನ್ನು ಮೊಂಗೊಲಿಯಾದಲ್ಲಿ ಪುನಃ ತಂದು ಕಾಡಿನಲ್ಲಿ ಬಿಟ್ಟರು. ಈ ಪುನರ್‍ಸ್ಥಾಪನೆಯಿಂದ ಕಾಡುಕುದುರೆಗಳು ಈಗ ದೂರದಲ್ಲೆಲ್ಲೋ ಕಾಣಲು ಸಿಗುತ್ತವೆ. ಇವುಗಳನ್ನು ‘ಪ್ರೆಜೆವಾಲಸ್ಕಿ’ ಕುದುರೆಗಳು ಎನ್ನುತ್ತಾರೆ. ಇವು ನಮ್ಮ ಗುಜರಾತಿನ ರಾನ್‍ನ ಕಾಡುಕತ್ತೆಗಳಂತೆ.

ಅಲ್ಲಿಯ ಗಿಡುಗಗಳು

ಇಲ್ಲಿಯ ಜನರಿಗೆ ಗಿಡುಗಗಳನ್ನು ಬೇಟೆಯಾಡುವುದು, ಸಾಕುವುದು, ಪಂದ್ಯ ಏರ್ಪಡಿಸುವುದು ಬಹಳ ಇಷ್ಟ ಮತ್ತು ದೊಡ್ಡ ಹವ್ಯಾಸ. ಇದು ಬಹಳ ಗೌರವಾನ್ವಿತ ಹವ್ಯಾಸ. ತೆಮುಜಿನ ಶೌರ್ಯ ಗಿಡುಗದ ಮರಿಗಳನ್ನು ತರುವುದರಲ್ಲಿ ಇತ್ತು.

ಮೊಂಗೊಲಿಯಾದ ಗಂಟಲ ಸಂಗೀತ

ಅವರಲ್ಲಿ ಮಾಂತ್ರಿಕರ ಕಥೆಗಳು, ಹಾಡುಗಳು ಅವರ ಜಾನಪದ ಪರಂಪರೆಯನ್ನು ಅಮೂಲ್ಯವಾಗಿಸಿದೆ. ತೇಪೆಚಿತ್ರದಲ್ಲಿ ನಾನು ನೋಡಿದ ನಾಟಕ, ನೃತ್ಯ ಮತ್ತು ಹಾಡುಗಳು ಅಮೋಘವಾಗಿದ್ದವು. ಅವರ ಗಂಟಲ ಹಾಡು ಬಹಳ ವಿಚಿತ್ರ. ಅವು ಬಹಳ ಕೆಳಗಿನ ಸಪ್ತಕ ಮತ್ತು ಮೇಲಿನ ಸಪ್ತಕಕ್ಕೆ ಹೋಗುವ ರಾಗಗಳು. ಆದರೆ, ಆ ರಾಗಗಳು, ಧ್ವನಿಗಳು ನಮ್ಮ ದಕ್ಷಿಣಾದಿ, ಉತ್ತರಾದಿ ಅಥವಾ ಪಾಶ್ಚಾತ್ಯ ಹಾಡುಗಳಂತೆ ಇಲ್ಲ. ಅದನ್ನು ಕೇಳಿದರೆ ತಿಳಿಯುತ್ತದೆ. ಆ ತೆರನ ಸ್ವರ ಬರಲು ಎಷ್ಟು ಸ್ವರಾಭ್ಯಾಸ ಬೇಕು ಎಂದು. ಇದನ್ನು ಅವರು ‘ಪರ್ವತಗಳ ಹಾಡು’ ಎನ್ನುತ್ತಾರೆ.

ಎರಡು ಡುಬ್ಬಗಳ ಒಂಟೆಗಳು

ಅವರು ಒಂಟೆಗಳನ್ನು ಡೇರೆಗಳು, ಸರಕುಗಳನ್ನು ಸಾಗಿಸಲು ಉಪಯೋಗಿಸುತ್ತಾರೆ. ಕುದುರೆಗಳ, ಒಂಟೆಗಳ ಕೂದಲನ್ನು ಉಣ್ಣೆ ಮಾಡಲು ಉಪಯೋಗಿಸುತ್ತಾರೆ. ಚೆಂಗಿಸಖಾನರ ಅನನ್ಯ ಬಳುವಳಿ. 2015ರ ಒಂದು genealogy ಪ್ರಕಾರ ಸುಮಾರು 16 ಮಿಲಿಯ ಗಂಡಸರು ಅವರಿಂದ ಮೊಂಗೊಲ geಟಿesನ್ನು ಪಡೆದಿದ್ದಾರೆ. ಹಾಗೇ ಇನ್ನೂ ಕೆಲವರು ಇರಬಹುದು.

ಚೆಂಗಿಸ್ ಖಾನನ ಮೊದಲು 21 ಪೀಳಿಗೆಯವರು ಇದ್ದರು. ಅವನ ತಂದೆ ಏಸುಗಾಯಿ ತೆಮುಜಿನನ ತಂದೆ. 15ನೇ ಶತಮಾನದತನಕ ಮುಂದೆ 13 ಪೀಳಿಗೆಗಳು ಇದ್ದುವು. ಕುಬ್ಲಾಖಾನ್ ಚೈನಾದ ಕಡೆ ಹೋಗಿದ್ದಾನೆ. ತೈಮೂರನು ಮುಸ್ಲಿಂ ಮತ ಸ್ವೀಕರಿಸಿ ಮೊಘಲರಾಗಿ ಭಾರತಕ್ಕೆ ಬಂದನು. ಅವನಿಗೆ ಬಹಳ ಹೆಂಡತಿಯರು. ಮೊದಲ ಹೆಂಡತಿಯಲ್ಲಿ 14 ಮಕ್ಕಳು ಇದ್ದರು. ಮದುವೆಯ ಹೊರಗೆ ಬಹಳ ಹೆಂಗಸರು ಮತ್ತು ಮಕ್ಕಳು ಇದ್ದರು. ಅವನು ಜನಿಸಿದ್ದು 1158 ಮರಣ ಹೊಂದಿದ್ದು 1227ರಲ್ಲಿ. ಅವನ ಸಾಮ್ರಾಜ್ಯ ಬಹಳ ವಿಸ್ತಾರವಾಗಿತ್ತು. ಅವನ ಕ್ರೂರತೆ ಮತ್ತು ಬಹಳ ಮದುವೆಗಳ ಬಗ್ಗೆ ಕೇಳುವವರು ನಾವು ಯಾರು? ನಮ್ಮ ಪುರಾತನ ಯುದ್ಧಗಳಿಂದ ರಾಮಾಯಣ, ಮಹಾಭಾರತಗಳಲ್ಲಿ ಏನು ಸಾಧಿಸಿದರು? ಅರ್ಜುನನಿಗೆ ಎಷ್ಟು ಹೆಂಡತಿಯರಿದ್ದರು? ಶ್ರೀಕೃಷ್ಣನಿಗೆ ಎಷ್ಟು ಹೆಂಡತಿಯರು? ಎಷ್ಟು ಗೋಪಿಕೆಯರು ಇದ್ದರು? ಕೃಷ್ಣ ಕಂಸನನ್ನು ಏಕೆ ಕೊಂದ? ಹೀಗೆ ಕೇಳಿದರೆ ಉತ್ತರವಿಲ್ಲದ ಪ್ರಶ್ನೆಗಳು.

ನಾನು ಮೊಂಗೊಲಿಯಾದಲ್ಲಿ ತಿಳಿದ ವಿಷಯ ತೆಮುಜಿನ ಎಂಬ ಅಮೋಘ ಹುಡುಗನ ಬಗ್ಗೆ. ಅವನು ಬಾಲ್ಯದಲ್ಲೇ ತಿಳಿದಿದ್ದ. “ನಾವು ನಮ್ಮವರು ಬದುಕಬೇಕಾದರೆ ಕೊಲ್ಲಲೇ ಬೇಕು. ಆದರೆ ಸುಮ್ಮನೆ ಯಾರನ್ನೂ ಕೊಲ್ಲಬಾರದು. ಎಲ್ಲರೂ ಒಗ್ಗಟ್ಟು, ಪ್ರೀತಿ ವಿಶ್ವಾಸದಲ್ಲಿ, ಶಾಂತಿಯಲ್ಲಿ ಇರಬೇಕು” ಎಂದು ಕಮ್ಯುನಿಸ್ಟರ ಎದುರು ಮೊಂಗೊಲಿಯಾ ಕ್ರಾಂತಿ ಮಾಡಿ 1990ರಲ್ಲಿ ಶಾಂತಿಪೂರ್ಣವಾಗಿ ಪ್ರಜಾಪ್ರಭುತ್ವವನ್ನು ಪಡೆದಿದೆ.

ಮಾಲವಿಕಾ ಕಪೂರ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ ಸ್ಟಡೀಸ್ (ನಿಯಾಸ್) ನಲ್ಲಿ ಸಂದರ್ಶಕ ಪ್ರಾಧ್ಯಾಪಕರು; ನಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಾಜಿ ವಿಭಾಗದ ಮುಖ್ಯಸ್ಥರಾಗಿದ್ದರು. ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ವಿಷಯದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿ. 15ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಡಾ.ಶಿವರಾಮ ಕಾರಂತರ ಮಗಳು.

Leave a Reply

Your email address will not be published.