ಮೊಬೈಲ್ ಎಂಬ ಬೇತಾಳ

ಎಲ್ಲರೂ ಮೊಬೈಲ್ ಫೋಟೋಗ್ರಾಫರುಗಳೇ! ಅದರಲ್ಲೂ ಸೆಲ್ಫೀ ಕ್ರೇಜಿಗಳೇ! ಬಟ್ಟೆ ಹಾಕಿಕೊಂಡು ತಯಾರಾಗುತ್ತಿದ್ದಂತೆ ಒಂದು ಫೋಟೋ ಅಥವಾ ಸೆಲ್ಫೀ ಕ್ಲಿಕ್ಕಾಗಲೇಬೇಕು. ಪ್ರತಿಯೊಂದು ಕ್ಷಣವನ್ನೂ ಸೆರೆ ಹಿಡಿಯುತ್ತಾ, ಅವುಗಳನ್ನು ಜಾಲತಾಣಗಳಿಗೆ ಅಪ್‍ಲೋಡ್ ಮಾಡುತ್ತಾ, ಲೈಕು, ಕಮೆಂಟಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಸಂಭ್ರಮ.

ನಳಿನಿ ಟಿ. ಭೀಮಪ್ಪ

ಮೊಬೈಲು ಬಂತೂ ಬಂತೂ ಒಳ್ಳೆ ಬೆಂಬಿಡದ ಬೇತಾಳ ಹೆಗಲಿಗೇರಿದಂತಾಯ್ತು ನೋಡಿ. ಪಾಪ ಯಾರಿಗೂ ಯಾರನ್ನು ಮಾತನಾಡಿಸಲೂ ಪುರುಸೊತ್ತಿಲ್ಲ, ಯಾರಿಗೆ ಯಾರೂ ಬೇಕಾಗಿಲ್ಲ, ಆದರೂ ಎಲ್ಲರೂ ಮೊಬೈಲಿನಲ್ಲಿ ಮಾತನಾಡುತ್ತಲೇ ಇರುತ್ತಾರೆ. ಅವರವರ ಲೋಕದಲ್ಲೇ ಮಗ್ನ. ಹತ್ತು ನಿಮಿಷಕ್ಕೊಮ್ಮೆ ಅದನ್ನು ತಡವದಿದ್ದರೆ ಏನೋ ಕಳೆದುಕೊಂಡಂತೆ ಚಡಪಡಿಸುವಂತಾಗುತ್ತದೆ. ಎಲ್ಲಿಗ್ಹೋದ್ರೂ, ಬಂದ್ರೂ ಮೊಬೈಲ್ ಸಮೇತವೇ!

ಬಚ್ಚಲು, ಸಂಡಾಸು ರೂಮುಗಳಿಗೂ ಸುತ್ತಾಡಿ ಬಂದು ಸ್ನಾನ ಮಾಡದೆಯೇ ಅಡುಗೆ ಮನೆ, ದೇವರ ಕೋಣೆಗೆ ಯಾವ ಮಡಿ ಮೈಲಿಗೆಗಳ ಜಂಜಾಟಗಳಿಲ್ಲದೆ ಮನುಜನ ಜೊತೆ ಪ್ರವೇಶ ಪಡೆದಿರುವ ಏಕೈಕ ಸಾಧನ ಈ ಮೊಬೈಲು. ಕೈಯ್ಯಲ್ಲಿ ಚೊಂಬು ಹಿಡಿದು ರಾಜಾರೋಷವಾಗಿ ಮಾತನಾಡುತ್ತಲೇ ಬಯಲು ಶೌಚ ಕ್ರಿಯೆ ಮುಗಿಸಿಬಿಡುವ ಹೈಕಳುಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ಹಾಕಿಕೊಳ್ಳೋ ಬಟ್ಟೆ ಮರೆತರೂ ಮೊಬೈಲ್ ಮರೆಯಲಾರರು. ಮುಖ ಒರೆಸುವುದನ್ನು ಮರೆತರೂ ಸ್ಮಾರ್ಟ್‍ಫೋನಿನ ಸ್ಕ್ರೀನ್ ಒರೆಸುವುದನ್ನು ಮರೆಯರು. ಹೊಟ್ಟೆಗೆ ಊಟ ಹಾಕಿಕೊಳ್ಳೋದು ಒಂದು ವೇಳೆ ನೆನಪಾಗದಿದ್ದರೂ ಮೊಬೈಲ್‍ಗೆ ಚಾರ್ಜ್ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಕರೆಂಟ್ ಬಿಲ್ ಕಟ್ಟುವುದು ನೆನಪಿರದಿದ್ದರೂ ಕರೆನ್ಸಿ ಹಾಕಿಸುವುದು ಮರೆಯುವುದಿಲ್ಲ. ನೆಟ್ಟಿನೊಳಗೆ ಇಣುಕಿ ಕಣ್ಣು ನೆಟ್ಟಿಕೊಂಡು ಕುಳಿತರೆ ಮುಗಿಯಿತು, ನೆಟ್ಟಗಿರುವ ತಲೆ ಕೆಟ್ಟು ಕೆರವಾಗುವ ತನಕ ಬಿಟ್ಟರೆ ಕೇಳಿ!

ಮೊದಲಿನ ಕಾಲದ ಹಾಗೆ ಪಡ್ಡೆಹೈಕಳಿಗೆ ಈಗ ಹೆಣ್ಣುಮಕ್ಕಳನ್ನು ಚುಡಾಯಿಸುವಷ್ಟು ಪುರುಸೊತ್ತಿಲ್ಲ (ಹಾಗಂತ ಹೆಣ್ಣುಮಕ್ಕಳನ್ನು ನೋಡುವ ಚಪಲ ಇಲ್ಲವೆಂದಲ್ಲ, ಎಲ್ಲವನ್ನೂ ಮೊಬೈಲಿನಲ್ಲೇ ನೋಡಿ ಕಣ್ತಂಪಾಗಿಸಿಕೊಳ್ತಾರೆ). ಹೆಣ್ಣುಮಕ್ಕಳೂ ಸಹ ತಲೆತಗ್ಗಿಸಿ ಗಂಭೀರವಾಗಿ ಕಿವಿಯಲ್ಲಿ ಇಯರ್‍ಫೋನು ಚುಚ್ಚಿಕೊಂಡು, ಪರದೆಯನ್ನು ತೀಡುತ್ತಾ, ಯಾವನೇನಾದರೂ ಅಂದುಕೊಳ್ಳಲಿ, ಡೋಂಟ್‍ಕೇರ್ ಎನ್ನುವ ಮಟ್ಟತಲುಪಿಸಿದ ಮೊಬೈಲ್ ದೇವರಿಗೆ ಧನ್ಯವಾದ ಹೇಳಲೇಬೇಕು ಬಿಡಿ.

ಇನ್ನು ಯುವಜನತೆ ಹಾಗೂ ಹಿರಿಯರು ಫೇಸ್‍ಬುಕ್, ವಾಟ್ಸಪ್ಪು, ಇನಸ್ಟಾಗ್ರಾಂ ಮುಂತಾದ ಜಾಲತಾಣಗಳನ್ನು ಜಾಲಾಡುವ ಜಾಲದಲ್ಲಿ ಬಿದ್ದು ಒದ್ದಾಡುತ್ತಿರುತ್ತಾರೆ.

ಇಂದಿನ ಮಕ್ಕಳೂ ಸಹ ಗಲಾಟೆ ಮಾಡುವುದೇ ಮರೆತುಹೋಗಿದೆಯೇನೋ ಎಂಬಷ್ಟು ಮೊಬೈಲಿನಲ್ಲಿ ಗೇಮ್ಸು, ಯೂ ಟ್ಯೂಬು ನೋಡುವುದರಲ್ಲಿ ತಲ್ಲೀನ. ಅಮ್ಮಂದಿರಿಗೆ ಅವಕ್ಕೆ ಕಾಗೆ, ಗುಬ್ಬಿ, ಚಂದಮಾಮ ತೋರಿಸಿ ತುತ್ತಿಡುವ ಅಗತ್ಯವೇ ಇಲ್ಲ (ತೋರಿಸಲು ಕಾಂಕ್ರೀಟ್ ಕಾಡಿನ ನಡುವೆ ಕಂಡರೆ ತಾನೆ). ಮೊಬೈಲ್ ಕೈಗಿತ್ತು, ತಾವೂ ಟಿವಿ ಸೀರಿಯಲ್‍ಗಳಲ್ಲಿ ಮುಳುಗಿ ಯಾಂತ್ರಿಕವಾಗಿ ತಿನ್ನಿಸುತ್ತಿರುತ್ತಾರೆ. ಮಗುವೂ ರುಚಿ, ಗಿಚಿ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಬಾಯಿ ತೆರೆದು ನುಂಗುತ್ತಿರುತ್ತದೆ. ಹೊಟ್ಟೆ ತುಂಬಿತೋ ಇಲ್ಲವೋ ಇಬ್ಬರಿಗೂ ಗೊತ್ತಾಗುವುದು ಅಷ್ಟರಲ್ಲೇ ಇದೆ. ಇನ್ನು ಯುವಜನತೆ ಹಾಗೂ ಹಿರಿಯರು ಫೇಸ್‍ಬುಕ್, ವಾಟ್ಸಪ್ಪು, ಇನಸ್ಟಾಗ್ರಾಂ ಮುಂತಾದ ಜಾಲತಾಣಗಳನ್ನು ಜಾಲಾಡುವ ಜಾಲದಲ್ಲಿ ಬಿದ್ದು ಒದ್ದಾಡುತ್ತಿರುತ್ತಾರೆ. ಟಿವಿಯೂ ಮೂಲೆಗುಂಪಾಗುವ ಕಾಲ ಸನ್ನಿಹಿತವಾಗುತ್ತಿದೆ.

ಇನ್ನು ಆನ್‍ಲೈನ್ ಗೇಮುಗಳು ಮಕ್ಕಳು ಹಾಗೂ ಯುವಜನತೆಯನ್ನು ಹಿಡಿದಿಟ್ಟುಕೊಂಡಿವೆ. ಪಬ್‍ಜಿ ಇರಬಹುದು, ಬ್ಲೂವೇಲ್ ಇರಬಹುದು, ಆಟಗಳ ಒಳಗೆ ತಲ್ಲೀನರಾಗಿ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡು ಮಾನಸಿಕರಾಗಿರುವವರು ಎಷ್ತೋ ಜನ. ತಡೆಯಲು ಹೋದ ತಂದೆ ತಾಯಿಯ ಮೇಲೇ ಹಲ್ಲೆಗಳು ನಡೆದ ಘಟನೆಗಳು ಎಷ್ತೋ. ಮತ್ತೆಷ್ತೋ ಮಕ್ಕಳು ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಕಂಡುಬರುತ್ತಿವೆ. ಮೊಬೈಲ್‍ನಿಂದಾಗಿ ಓದಿನಲ್ಲಿ ಹಿಂದುಳಿದ ಮಕ್ಕಳೂ ಇದ್ದಾರೆ, ಅದರಿಂದ ಮಾಹಿತಿಯ ಕಣಜವನ್ನೇ ಹೆಕ್ಕಿಕೊಂಡು ಜೀವನವನ್ನು ಮತ್ತಷ್ಟು ಸುಂದರವಾಗಿ ರೂಪಿಸಿಕೊಂಡವರ ದಂಡೇ ಇದೆ.

ಪ್ರತಿಯೊಂದು ಮಾಹಿತಿಗೂ ಗೂಗಲ್, ಪ್ರತಿ ಚಟುವಟಿಕೆಗೂ ಯೂಟ್ಯೂಬ್‍ನ ಸಹಾಯ ಇಲ್ಲದೆ ಜೀವನವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಓದಲು ಕುಳಿತರೆ ಪುಸ್ತಕದ ಮುಂದೆ ಸ್ವಲ್ಪ ಹೊತ್ತಿನಲ್ಲೇ ತೂಕಡಿಸುವ ಮಕ್ಕಳು, ಅದೇ ಮೊಬೈಲಿನಲ್ಲಿ ಸರಿರಾತ್ರಿಯವರೆಗೂ, ಖುಷಿಯಾಗಿ ನಿಚ್ಚಳವಾಗಿ ತೊಡಗಿಕೊಳ್ಳುವುದು ನೋಡಿದರೆ ಗೊತ್ತಾಗುತ್ತದೆ ಇದರ ಮಹಿಮೆ, ಹಿರಿಮೆ.

ಇನ್ನು ಇಂದಿನ ಟಿಕ್ ಟಾಕ್ ಆಪ್‍ನ ಭಕ್ತರು ಬಹಳಷ್ಟು ಜನರು. ಸದ್ಯ ವಾಟ್ಸಪ್ಪು ಸ್ಟೇಟಸ್ ನಲ್ಲಿ ಇವುಗಳ ಹಾವಳಿ ಅದೆಷ್ಟು ಹೆಚ್ಚಾಗಿದೆಯೆಂದರೆ ಸ್ಟೇಟಸ್ ಓಪನ್ ಮಾಡಿ ನೋಡುವುದಕ್ಕೇ ಭಯವಾಗುತ್ತದೆ.

ಎಲ್ಲರೂ ಮೊಬೈಲ್ ಫೋಟೋಗ್ರಾಫರ್‍ಗಳೇ! ಅದರಲ್ಲೂ ಸೆಲ್ಫೀ ಕ್ರೇಜಿಗಳೇ! ಬಟ್ಟೆ ಹಾಕಿಕೊಂಡು ತಯಾರಾಗುತ್ತಿದ್ದಂತೆ ಒಂದು ಫೋಟೋ ಅಥವಾ ಸೆಲ್ಫೀ ಕ್ಲಿಕ್ಕಾಗಲೇಬೇಕು. ಪ್ರತಿಯೊಂದು ಕ್ಷಣವನ್ನೂ ಸೆರೆ ಹಿಡಿಯುತ್ತಾ, ಅವುಗಳನ್ನು ಜಾಲತಾಣಗಳಿಗೆ ಅಪ್‍ಲೋಡ್ ಮಾಡುತ್ತಾ, ಲೈಕು, ಕಮೆಂಟಿಗಾಗಿ ಕಾಯುತ್ತಾ ಕುಳಿತುಕೊಳ್ಳುವ ಸಂಭ್ರಮ. ಅದಕ್ಕಾಗಿ ಎಂಥೆಂಥ ಸಾಹಸ ಮಾಡುವವರೂ ಇದ್ದಾರೆ, ಎಷ್ತೋ ಜನಕ್ಕೆ ಪ್ರಾಣಕ್ಕೆ ಎರವಾದದ್ದೂ ಇದೆ. ಇತ್ತೀಚೆಗೆ ಪ್ರವಾಹ ಪರಿಸ್ಥಿತಿಯಲ್ಲೂ ಜನರ ಸೆಲ್ಫೀ ಕ್ರೇಜ್ ಪೊಲೀಸರಿಗೆ ತಲೆನೋವಾಗಿತ್ತು ಎಂಬ ಸುದ್ದಿ ಆತಂಕ ಹುಟ್ಟಿಸುತ್ತದೆ. ಇನ್ನು ಇಂದಿನ ಟಿಕ್ ಟಾಕ್ ಆಪ್‍ನ ಭಕ್ತರು ಬಹಳಷ್ಟು ಜನರು. ಸದ್ಯ ವಾಟ್ಸಪ್ಪು ಸ್ಟೇಟಸ್ ನಲ್ಲಿ ಇವುಗಳ ಹಾವಳಿ ಅದೆಷ್ಟು ಹೆಚ್ಚಾಗಿದೆಯೆಂದರೆ ಸ್ಟೇಟಸ್ ಓಪನ್ ಮಾಡಿ ನೋಡುವುದಕ್ಕೇ ಭಯವಾಗುತ್ತದೆ.

ಮೊಬೈಲ್ ಕರೆಗಳು ಮಾತ್ರ ಸಂದಿಗ್ಧ ಪರಿಸ್ಥಿತಿಯಲ್ಲೇ ಬರುತ್ತವೆ ನೋಡಿ. ಯಾವ ಸ್ಥಳದಲ್ಲಿ ಮೊಬೈಲ್ ಬಳಸಬೇಡಿ ಎಂದಿರುತ್ತದೆಯೋ ಅಲ್ಲಿ ಇದ್ದಾಗಲೇ ಹೆಚ್ಚು ಕರೆಗಳು ಬರುತ್ತವೆ. ಹಾಗೆಯೇ ಡ್ರೈವ್ ಮಾಡುವಾಗ, ಬಾತ್‍ರೂಮ್, ಸಂಡಾಸಿಗೆ ಹೋದಾಗ, ಗಾಢನಿದ್ರೆಯಲ್ಲಿದ್ದಾಗ, ಎರಡೂ ಕೈಗಳು ಬಿಡುವಿಲ್ಲದಿರುವಾಗ ತುಂಬಾ ಡಿಸ್ಟರ್ಬ್ ಮಾಡುತ್ತವೆ. ಹಾಗಂತ ಯಾರೂ ಫೋನು ಎತ್ತುವುದಿಲ್ಲ ಎಂದುಕೊಳ್ಳಬೇಡಿ!

ಬೈಕ್ ರೈಡ್ ಅಥವಾ ಕಾರ್ ಡ್ರೈವ್ ಮಾಡುತ್ತಲೇ ಸೊಟ್ಟದಾಗಿ ತಲೆ ವಾಲಿಸಿಕೊಂಡು, ಕಿವಿ, ಭುಜದ ನಡುವೆ ಮೊಬೈಲ್ ಸಿಲುಕಿಸಿ ಕಿವಿಗಾನಿಸಿಕೊಂಡೋ, ಇಲ್ಲವಾದರೆ ಬ್ಲೂ ಟೂಥ್ ಕನೆಕ್ಟ್ ಮಾಡಿಕೊಂಡೋ ಮಾತು ಶುರು ಹಚ್ಚಿಕೊಳ್ಳುತ್ತಾರೆ. ಟ್ರಾಫಿಕ್ ಪೊಲೀಸರು ಹಿಡಿದು ಫೈನ್ ಹಾಕಿದರೂ ಪದೇ ಪದೇ ಅದೇ ತಪ್ಪು ಎಸಗುತ್ತಾರೆ. ಕಾರಣ ಫೈನ್ ತಾನೆ ಕಟ್ಟಿದರಾಯಿತು ಎಂಬ ಹಣದ ಬಗ್ಗೆ ದಿವ್ಯ ಉದಾಸೀನ. ಕೆಲವರು ಕರೆಗಳನ್ನು ಫಾರ್ವರ್ಡ್ ಮಾಡಿಕೊಂಡಿರುತ್ತಾರೆ, ಅವರಿಗೆ ಸ್ವೀಕರಿಸಲಾಗದಿದ್ದರೆ ಮತ್ತೊಬ್ಬರಿಗೆ ಹೋಗುವ ಹಾಗೆ. ಇನ್ನು ಆ ಫೋನ್ ಅಂತೂ… ತಲೆಯ ಹೇರ್ ಡೈ, ಎಣ್ಣೆ ಮಸಾಜ್, ಮುಖಕ್ಕೆ ಹಚ್ಚಿದ ಶೇವಿಂಗ್ ಕ್ರೀಮ್, ಫೇಸ್ ಪ್ಯಾಕ್, ಅದೂ, ಇದೂ ಎಲ್ಲವನ್ನು ಸ್ಕ್ರೀನಿಗೆ ಮೆತ್ತಿಸಿಕೊಂಡು ರುಚಿ ನೋಡಬೇಕಾದ ಕರ್ಮ ಅದರದು.

ತಮ್ಮ ಆರೋಗ್ಯ ಕೆಟ್ಟರೂ ಪರವಾಗಿಲ್ಲ, ಮೊಬೈಲ್ ಕೆಟ್ಟರೆ ಮಾತ್ರ ಜನರ ತಲೆ ಕೆಟ್ಟಂತೆ ಆಗಿಬಿಡುತ್ತದೆ. ಅದರಲ್ಲೂ ನೆಟ್ಟು ಕೈಕೊಟ್ಟುಬಿಟ್ಟರೆ, ಗರಗರ ತಿರುಗುವ ಅದರ ವರ್ತುಲ ಸುತ್ತುವುದು ನಿಲ್ಲುವ ತನಕ ಇವರ ಉಸಿರು ಸಿಕ್ಕಿಹಾಕಿಕೊಂಡಿರುತ್ತದೆ. ಇದರ ಮಾಯಾಜಾಲದಲ್ಲಿ ಸದ್ಯಕ್ಕೆ ಬಹುತೇಕ ಮಂದಿ ಬಂಧಿ. ಇದರಿಂದ ಧನಾತ್ಮಕ ಅಂಶಗಳು ಎಷ್ಟು ಇವೆಯೋ, ಋಣಾತ್ಮಕ ಅಂಶಗಳೂ ಅಷ್ಠೆ ಇವೆ. ಹಾಗಾಗಿ ವಿಕ್ರಮನಿಗೆ ಬೇತಾಳದಿಂದ ಮುಕ್ತಿಯಿಲ್ಲದೆ ಇರುವ ಹಾಗೆ ಮನುಜನಿಗೆ ಮೊಬೈಲಿನಿಂದ ದೂರವಿರುವ ಶಕ್ತಿಯಿಲ್ಲದಂತಾಗಿದೆ.

* ಲೇಖಕಿ ಧಾರವಾಡದವರು; ಬಿಎಸ್‍ಸಿ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಹವ್ಯಾಸಿ ಬರಹಗಾರ್ತಿ,ಗೃಹಿಣಿ. ‘ಲಹರಿ’ ದೀಪಾವಳಿ  ವಿಶೇಷೆoಕ ಕಥಾಸ್ಪರ್ಧೆ-2019ರಲ್ಲಿ ಮೊದಲ ಬಹುಮಾನ, ‘ಪ್ರಜಾವಾಣಿ’ ಭೂಮಿಕಾ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. 

Leave a Reply

Your email address will not be published.