ಮೋದಿಗೆ ಕೊನೆಯ ನಮಸ್ಕಾರ

ಮುಂದುವರೆದ ಚರ್ಚೆ

ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು 2014ರ ಚುನಾವಣೆಯಲ್ಲಿ ದೇಶದ ಜನತೆ ಹಿಂದೆಂದಿಗಿಂತಲೂ ಹೆಚ್ಚಿನ ಬಹುಮತದಿಂದ ಆರಿಸಿ ಕಳಿಸಿದ್ದರು. ಆ ಸಂದರ್ಭದಲ್ಲಿ ದೇಶದ ಜನರಿಗೆ ಅವರು ಮೂರು ಭರವಸೆಗಳನ್ನು ಕೊಟ್ಟಿದ್ದರು. ಅವುಗಳೆಂದರೆ: 1. ಅಭಿವೃದ್ಧಿ ಭಾರತ ಮಾಡುವುದು. 2. ಸ್ವಿಸ್ ಬ್ಯಾಂಕಿನ ಹಣವನ್ನು ದೇಶಕ್ಕೆ ವಾಪಸ್ಸು ತರಿಸಿ ಪ್ರತಿಯೊಬ್ಬ ಭಾರತೀಯ ಪ್ರಜೆಯ ಬ್ಯಾಂಕಿನ ಖಾತೆಗೆ ಹಾಕುವುದು. 3. ವರ್ಷವೊಂದಕ್ಕೆ 1 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿ ಯುವಕರಿಗೆ ಕೊಡುವುದು.

ಮನಮೋಹನ್ ಸಿಂಗ್ ಅವರ ಕೆಟ್ಟ ಆಡಳಿತದಿಂದ ದಿಕ್ಕು ಕಾಣದಂ ತಿದ್ದ ದೇಶದ ಜನರಿಗೆ ಮೋದಿಯವರು ಒಬ್ಬ ಭರವಸೆಯ ಪ್ರತೀಕವಾಗಿ, ರಕ್ಷಕನಾಗಿ ಕಾಣಿಸಿಕೊಂಡರು. ಜನತೆ ಅವರ ಆಶ್ವಾಸನೆಗಳನ್ನು ನಂಬಿ ಮತ ಹಾಕಿದರು. ಬಳಿಕ ಮೋದಿಯವರು ನಿರಾಂತಕವಾಗಿ ದೇಶದ ಪ್ರಧಾನಿಯೂ ಆದರು.

ಆದರೆ, ಮೋದಿಯುವರು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಗಳನ್ನು ಐದು ವರ್ಷ ಆಡಳಿತ ನಡೆಸಿದ್ದರೂ ನೆರವೇರಿಸಲಿಲ್ಲ. ಹಾಗಾಗಿ ಚುನಾವಣೆ ಸಂದರ್ಭದಲ್ಲಿ ಅವರು ಕೊಟ್ಟ ಮೂರು ಭರವಸೆಗಳು ಹಳ್ಳ ಹಿಡಿದವು. ಚುನಾವಣೆಯಲ್ಲಿ ಗೆದ್ದ ನಂತರ ಮೋದಿಯವರು ಆ ಭರವಸೆಗಳನ್ನು ಎಲ್ಲಿಯೂ ಪ್ರಸ್ತಾಪಿಸಿಯೂ ಇಲ್ಲ. ಆ ಬಗ್ಗೆ ಕೇಳುವ ಜನರಿಗೆ ಜಾಣ ಕುರುಡರಾಗುವುದರ ಜೊತೆಗೆ ದಿವ್ಯಮೌನ ತಾಳಿದರು. ಇದೊಂದು ಅವರ ಚಾಲಾಕಿತನವಲ್ಲದೇ ಮತ್ತೇನೂ ಅಲ್ಲ.

ನೋಟು ಅಮಾನ್ಯೀಕರಣ ಮಾಡಿದಾಗ, `ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ಸ್ವಲ್ಪದಿನ ತಾಳಿಕೊಳ್ಳಿ, ದೇಶದ ಕಳ್ಳ-ಖದೀಮರ, ಖೋಟಾನೋಟಿನ ಮಾಲೀಕರನ್ನು ಮತ್ತು ಉಗ್ರವಾದಿಗಳನ್ನು ಜೈಲಿಗೆ ಅಟ್ಟಿ ಕಂಬಿ ಎಣಿಸುವಂತೆ ಮಾಡುತ್ತೇನೆ. ಇಲ್ಲವಾದರೆ ನನ್ನನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಬೆಂಕಿ ಹಾಕಿ ಸುಟ್ಟುಬಿಡಿ’ ಎಂದರು. ಆಗ ಜನರು ಕಷ್ಟಗಳನ್ನು ಸಹಿಸಿಕೊಂಡರು. ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಕೂಲಿಕಾರರು ಬ್ಯಾಂಕ್ ಮುಂದಿನ ಸಾಲಿನಲ್ಲಿ ನಿಂತು 150 ಜನ ಪ್ರಾಣ ಕಳೆದುಕೊಂಡಿದ್ದು ಬಿಟ್ಟರೇ ಅದರಿಂದ ಈ ದೇಶಕ್ಕಾಗಲಿ, ಜನರಿಗಾಗಲಿ ಯಾವುದೇ ಪ್ರಯೋಜನವಾಗಲಿಲ್ಲ. ಬದಲಾಗಿ ಉದ್ಯೋಗಗಳು ಕಡಿಮೆಯಾಗುವುದರ ಜೊತೆಗೆ ಆರ್ಥಿಕತೆಯೂ ಅಧೋಗತಿಗೆ ಇಳಿಯಿತು.

ಮೋದಿಯವರ ಆಡಳಿತದಲ್ಲಿ ದಲಿತರ ಮೇಲೆ ಮತ್ತು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ಮತ್ತು ಹತ್ಯೆಗಳು ಹೆಚ್ಚಾದವು. ಮೋದಿಯವರ ಸರಕಾರ ಅವರ ದುರಾಡಳಿತವನ್ನು ಪ್ರಶ್ನಿಸಿದವರಿಗೆ ದೇಶದ್ರೋಹಿ ಪಟ್ಟಕಟ್ಟಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಿದರು.

ಒಂದು ಪೈಸೆಯೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಉದ್ಘೋಷಣೆ ಮಾಡಿದರು. ಆದರೆ ಆದದ್ದೇ ಬೇರೆ, ನೀರವ ಮೋದಿ, ಲಲಿತ್ ಮೋದಿ, ಮೆಹುಲ್ ಚೋಸ್ಕಿ ಹಾಗೂ ವಿಜಯ ಮಲ್ಯ ಮೋದಿಯವರ ಆಡಳಿತ ಕಾಲದಲ್ಲಿ ಈ ದೇಶದ ಹಣವನ್ನು ಹೊರದೇಶಕ್ಕೆ ಹೊತ್ತೊಯ್ದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟವರಾರು?

ಈ ದೇಶದ ಪ್ರತಿಯೊಬ್ಬ ಪ್ರಜೆಯ ಪ್ರತಿ ಪೈಸೆ ಮತ್ತು ದೇಶದ ಖಜಾನೆಗೆ ಕಾವಲಾಗಿರುತ್ತೇನೆ, ಅದಕ್ಕಾಗಿ ನಾನು ಚೌಕಿದಾರ್ ಎಂದರು ಮೋದಿ. ಒಂದು ಪೈಸೆಯೂ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಉದ್ಘೋಷಣೆ ಮಾಡಿದರು. ಆದರೆ ಆದದ್ದೇ ಬೇರೆ, ನೀರವ ಮೋದಿ, ಲಲಿತ್ ಮೋದಿ, ಮೆಹುಲ್ ಚೋಸ್ಕಿ ಹಾಗೂ ವಿಜಯ ಮಲ್ಯ ಮೋದಿಯವರ ಆಡಳಿತ ಕಾಲದಲ್ಲಿ ಈ ದೇಶದ ಹಣವನ್ನು ಹೊರದೇಶಕ್ಕೆ ಹೊತ್ತೊಯ್ದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟವರಾರು? ಅಂದಿನ ದಿನಗಳಲ್ಲಿ ಮೋದಿಯವರು ನಿದ್ರೆಗೆ ಜಾರಿದ್ದರೆ? ಇದಕ್ಕೆಲ್ಲ ಮೋದಿಯವರ ಮೌನ ಏನನ್ನು ತಿಳಿಸುತ್ತದೆ? 

ದೇಶಾದ್ಯಂತ ರೈತರು ತಾವು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದಿದ್ದ ಕಾರಣದಿಂದಾಗಿ ಆತ್ಮಹತ್ಯೆಗಳು ಎಲ್ಲ ಕಾಲಕ್ಕಿಂತಲೂ ಮೋದಿಯವರ ಕಾಲದಲ್ಲಿಯೇ ಹೆಚ್ಚಾದವು. ಆದ್ದರಿಂದ ಮೋದಿ ಸರಕಾರ ದೇಶದ ರೈತರು, ಬಡವರು, ಕೃಷಿಕಾರ್ಮಿಕರು, ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಕಡೆಗಣಿಸಿದೆ. ಬದಲಾಗಿ ಅದಾನಿ, ಅಂಬಾನಿಗಳ ಕೈಚೀಲ ತುಂಬುವಂತೆ ಕೆಲಸ ಮಾಡಿದ್ದೇ ಹೆಚ್ಚು.

ಮೋದಿಯವರ ಬಂಡವಾಳವೇ ಮಾತು. ಸಮಯಕ್ಕೆ, ಸಂದರ್ಭಕ್ಕೆ ತಕ್ಕಂತೆ ಮಾತನ್ನಾಡಿ ಈ ದೇಶದ ಜನರನ್ನು ತಮ್ಮ ಮಾತಿನ ಮೋಡಿಯ ಭ್ರಮೆಗೆ ತಳ್ಳುತ್ತಿದ್ದಾರೆ. ಇದಕ್ಕೆ ಸರ್ವಜ್ಞನ ಒಂದು ತ್ರಿಪದಿ ಹೀಗೆ ಹೇಳುತ್ತದೆ. `ಆಡದೇ ಮಾಡುವವನು ರೂಢಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮ, ಆಡಿಯೂ ಮಾಡದವನು ಅಧಮನೆಂದ ಸರ್ವಜ್ಞ’.

ಸನ್ನಿವೇಶಕ್ಕೆ ತಕ್ಕಂತೆ ಒಂದು ಸುಳ್ಳನ್ನು ಸತ್ಯವೆಂಬಂತೆ ಹರಿಯಬಿಟ್ಟು ಜನರನ್ನು ನಂಬಿಸುವುದೇ ಅವರ ಕಾಯಕವಾಗಿದೆಯಲ್ಲವೇ? ಈಬಗ್ಗೆ ಹೇಳುವುದಾದರೆ ಮೋದಿಯವರು ಸುಳ್ಳಿನ ಸರದಾರ ಎಂದರೆ ತಪ್ಪಾದೀತೆ? ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾರಂಭದಿಂದಲೇ ಅಪಸ್ವರ ಕೇಳಿಬಂದಿತ್ತು. ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿತು. ಎಲ್ಲರಿಗೂ ಗೊತ್ತಿರುವಂತೆ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಈ ಬಗ್ಗೆ ಸುಳ್ಳು ವರದಿ ನೀಡಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಹಗರಣಕ್ಕೆ ಸಂಬಂಧಪಟ್ಟ ಕಡತವು ಕಳುವಾಗಿದೆ ಎಂಬುದಾಗಿ ಅಟಾರ್ನಿ ಜನರಲ್ ಮಾಹಿತಿ ಕೊಟ್ಟಿದ್ದರು. ಇದಕ್ಕಾಗಿ ಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಈ ಹಗರಣದ ಇತಿಹಾಸವನ್ನೆಲ್ಲ ಹಿಂದೂ ಪತ್ರಿಕೆಯ ಎನ್.ರಾಮ್ ಅವರು ಬಯಲು ಮಾಡಿದ್ದಾರೆ.

ಮೋದಿಯವರ `ಅಚ್ಚೇದಿನ್’ ಅವರಿಗೆ ಬಂದದ್ದೇ ವಿನಾ ದೇಶದ ಜನರಿಗೆ ಇನ್ನೂ ಕಗ್ಗಂಟಾಗಿದೆ. ಆದ್ದರಿಂದ ಈ ದೇಶದ ರೈತರು, ಬಡವರು, ದೀನ-ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಲಿಂಗಾಯಿತರು 2019ರ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತ ಚಲಾಯಿಸಿ ಮೋದಿಯವರನ್ನು ಮನೆಗೆ ಕಳಿಸುತ್ತಾರೆ. ಆ ಮೂಲಕ ಜನರನ್ನು, ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ಬಹುಮುಖ್ಯವಾಗಿ ಜನರ ನೆಮ್ಮದಿಯನ್ನು ಕಾಪಾಡುವುದು ಹಿಂದೆಂದಿಗಿಂತಲೂ ಬಹುಮುಖ್ಯವಾಗಿದೆ. 2019ರ ಚುನಾವಣೆಯಲ್ಲಿ ಮೋದಿಯವರಿಗೊಂದು ಕೊನೆಯ ನಮಸ್ಕಾರ.

ಸರ್ವನಾಶವೇ ಆದರ್ಶ

ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ ಎಂದೆನ್ನುತ್ತ ಸಾರ್ವಭೌಮ ಅಧಿಕಾರದ ಗದ್ದುಗೆ ಏರುವ ಹವಣಿಕೆಯಲ್ಲಿದ್ದಾರೆ ಮೋದಿ ಬಂಟರು. ಅದಕ್ಕೆ ಈಗಲೇ ಜಯದ ತ್ರಿಶೂಲದಿಂದ ತಿವಿದು ಘಾಸಿಗೊಳಿಸುತ್ತಿರುವುದು. ಗೋಮುಖ ವ್ಯಾಘ್ರನಂತೆ ಗೋರಕ್ಷಕ ರಂಗಿನಾಟದಿಂದ ಮರುಳು ಮಾಡುವುದರಲ್ಲಿ ಇವರು ಸಿದ್ಧಹಸ್ತರು. ಗಜಕೋರೆಯ ಬಿಳುಪು ತೋರಿ ಸುತ್ತ ಸರ್ವನಾಶವೇ ಆದರ್ಶ ಎನ್ನುವ ಹುನ್ನಾರ ಅವರ ಬಳಗದಲ್ಲಿದೆ. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎಂಬಂತೆ ಬರೀ ಮಾತಿನ ಜಲಧಾರೆ ಕುಡಿಸುತ್ತ ಹಿಂಬಾಲಕರಿಗೆ ಧನಧಾರೆ ಒದಗಿಸುತ್ತಿರುವುದು ಜಗಜ್ಜಾಹೀರ. ಅಭಿವೃದ್ಧಿ ಎಂದರೆ ಪ್ರವಾಹ, ಭ್ರಷ್ಟಾಚಾರದ ವಿಕೋಪ. ಜಾತಿಯತೆಯ ಪ್ರಹಾರ. ಇದರಿಂದ ದೇಶದ ಮಗ್ಗುಲನ್ನೇ ಮುರಿದ ಬಡಾಯಿ ವೀರ. ಮೋದಿಯವರಿಗೆ ಬುದ್ಧಿವಂತರು ಬೇಕಿಲ್ಲ, ಜಾಣರೆಂದರೆ ಅಲರ್ಜಿ. ಬರೀ ಕುಹುಕ ಬುದ್ಧಿಯ ನೇತಾರ. ಎಲ್ಲರೊಂದಿಗೆ ಬೆರೆತು ಸಹಯೋಗದಿಂದ, ಸಹಕಾರದಿಂದ ಹೋಗುವ ನಾಟಕ ಆಡುತ್ತ ಬೆಂಕಿ ಹಚ್ಚುವ ರಾಜಾಧಿರಾಜ. ಸಕ್ಕರೆ ಲೇಪಿತ ಮಾತ್ರೆಗಳನ್ನು ಮತದಾರರಿಗೆ ನೀಡುತ್ತ ಮೂರ್ಛೆಗೊಳಿಸುತ್ತ ತನ್ನ ಕಾರ್ಯ ಸಾಧಿಸುವ ಧೂರ್ತ.

-ಧೋತ್ರೆ ಮತಿ , ಗುಲಬರ್ಗಾ.


ನರೇಂದ್ರ ಮೋದಿ ಅನಿವಾರ್ಯ

ಭಾರತದ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಇಂದು ರಾಜಕೀಯ ಪಕ್ಷಗಳಲ್ಲಿ ಬೆಳೆದು ಬರುತ್ತಿರುವ ದುರಾಡಳಿತ ಪದ್ಧತಿಯನ್ನು ನಾವು ಛಿದ್ರಗೊಳಿಸಬೇಕಾಗಿದೆ. ಐದು ವರ್ಷ ಪೂರ್ಣಾವಧಿಯನ್ನು ಆಳುವ ಸುಭದ್ರ ಕೇಂದ್ರ ಸರಕಾರ ಇಂದಿನ ಅವಶ್ಯಕತೆಯಾಗಿದೆ. ಬೇರೂರಿದ ಭ್ರಷ್ಟಾಚಾರವನ್ನು ತೊಡೆದುಹಾಕಲು ಪ್ರಯತ್ನಿಸುವ ವೈಯಕ್ತಿಕವಾಗಿ ಚಾರಿತ್ರ್ಯಶುದ್ಧಿಯುಳ್ಳ ವ್ಯಕ್ತಿಯೇ ಕೇಂದ್ರದ ಆಡಳಿತ ಸೂತ್ರವನ್ನು ಹಿಡಿಯಬೇಕಿದೆ. ಹೆಂಡತಿ-ಮಕ್ಕಳು, ಬಂಧು-ಬಳಗ, ಸ್ನೇಹಿತರು, ಅಪ್ತರು ಎಂದು ಮೋದಿ ಅವರ ಹಿತರಕ್ಷಣೆ ಮಾಡಿದ್ದು ಗೋಚರಿಸುವುದಿಲ್ಲ. ಮತಬ್ಯಾಂಕ್ ರಾಜಕೀಯಕ್ಕೆ ಅವರು ಆಸ್ಪದ ನೀಡಿಲ್ಲ. ಪ್ರಪಂಚದ ರಾಷ್ಟ್ರಗಳನ್ನು ದಣಿ 

ವರಿಯದೆ ಸುತ್ತುತ್ತ ವಿವಿಧ ದೇಶಗಳಲ್ಲಿ ಭಾರತದ ಬಗೆಗೆ ಸದಭಿಪ್ರಾಯ, ಸ್ನೇಹ ಉಂಟಾಗುವಂತೆ ಸೃಜನಶೀಲ ಸಂಬಂಧಗಳನ್ನು ಮೋದಿ ತಮ್ಮ ಸಕಾರಾತ್ಮಕ ಧೋರಣೆಗಳಿಂದ ಸೃಷ್ಟಿಸಿದ್ದಾರೆ. ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕವಾಗಿ ಬೇರೂರುತ್ತಿರುವ ಜಾತಿ, ವ್ಯಕ್ತಿ ಆಧಾರಿತ ಪಕ್ಷಧುರೀಣತ್ವವನ್ನು ಶಿಥಿಲಗೊಳಿಸಲು ಕೇಂದ್ರದಲ್ಲಿ ಏಕಪಕ್ಷ ಪ್ರಾಬಲ್ಯ ಹೊಂದಿದ ಮಿಶ್ರ ಸರಕಾರ ಇಂದಿನ ಅವಶ್ಯಕತೆಯಾಗಿದೆ. ಭಾರತಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈ ರೀತಿ ಮೂರು ರಾಷ್ಟ್ರೀಯ ಪಕ್ಷಗಳು ಸಾಕೆನಿಸುತ್ತದೆ. ಪ್ರಾದೇಶಿಕ ಪಕ್ಷಗಳು ರಾಜ್ಯದ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಪೋಷಿಸದೇ ವೈಯಕ್ತಿಕ ಹಿತಾಸಕ್ತಿಗಳನ್ನು ಬೆಳೆಸುತ್ತಿವೆ. ರಾಜ್ಯವೊಂದಕ್ಕೆ ಮಾತ್ರ ಸೀತಮಿತವಾಗಿರುವ ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಜಾತಿ ಮತ್ತು ಕುಟುಂಬ ಮುಖಂಡತ್ವ ಹೊಂದಿರುವ ಅಧಿಕಾರ ಲಾಲಸೆಯ ಈ ಪಕ್ಷಗಳು ಅಳಿಯಬೇಕು. ಇಲ್ಲವೇ ಇನ್ನೊಂದು ಪಕ್ಷದಲ್ಲಿ ವಿಲೀನ ಹೊಂದಬೇಕು. ಬಿಜೆಪಿಗೆ ಸಮಬಲ ಹೊಂದಿದ ಮತ್ತೊಂದು ರಾಷ್ಟ್ರೀಯ ಪಕ್ಷ ಎಲ್ಲ ರಾಜ್ಯಗಳಲ್ಲಿ ಬೆಳೆದುಬರಬೇಕಾಗಿದೆ.

-ಶಿವಶಂಕರ ಹಿರೇಮಠ, ಧಾರವಾಡ


ಅಭಿವೃದ್ಧಿಯ ಹರಿಕಾರ

‘ನಮೋ’ ರವರ ಸರಕಾರವನ್ನು ಕಳೆದ ಐದು ವರ್ಷಗಳಲ್ಲಿ ಅವಲೋಕಿಸಿದಾಗ ಅವರು ಒಂದು ಬಲಿಷ್ಟ ಸರಕಾರವನ್ನು ಕೊಟ್ಟಿದ್ದಾರೆಂದು ಹೇಳಬಹುದು. ಪಾಕಿಸ್ತಾನದ ಕೂಡ ನಮೋ ಸರಕಾರದ ವರ್ತನೆ ಇದನ್ನು ಎತ್ತಿ ತೋರಿಸುತ್ತದೆ. ವಿದೇಶಗಳಲ್ಲಿ ಭಾರತವನ್ನು ಎತ್ತರದ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.

ಪಾಕಿಸ್ತಾನದ ಉಗ್ರಗಾಮಿಗಳ ಉಪಟಳವನ್ನು ಏರ್ ಸ್ಟ್ರೈಕ್ ಮೂಲಕ ನಿಯಂತ್ರಿಸಲಾಗಿದೆ. ಜೊತೆಗೆ ಚೀನಾ ಪೋಷಿತ ಮಯನ್ಮಾರ್ ಉಗ್ರಗಾಮಿ ಕೇಂದ್ರಗಳ ಮೇಲೂ ಏರ್ ಸ್ಟ್ರೈಕ್ ಮಾಡಲಾಗಿದೆ ಎಂದು ಸುದ್ದಿ. ಭ್ರಷ್ಟಾಚಾರದ ನಿವಾರನೆಗೆ ನಮೋ ಸರಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ನೋಟುಗಳ ರದ್ದತಿ, ಜಿ.ಎಸ್.ಟಿ. ತೆರಿಗೆ ಪದ್ದತಿ ಜಾರಿ ಇತ್ಯಾದಿಗಳ ಮೂಲಕ ನರೇಂದ್ರ ಮೋದಿಯವರು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆಂದು ನನ್ನ ಅನಿಸಿಕೆ. ಎಂದೋ ಆಗಬೇಕಿದ್ದ ಲೋಕಪಾಲರ ನೇಮಕ ಈಗಲಾದರೂ ಆಗಿ ನಮೋ ಸರಕಾರ ಸರಿ ದಾರಿಯಲ್ಲಿ ಹೊರಟಿದೆ.

ನಿರುದ್ಯೋಗ ನಿವಾರನೆಗೆ ‘ಉದ್ಯೋಗ ನಿರ್ಮಾಣ ಯೋಜನೆ’ ಹಾಕಿಕೊಂಡು ಕೇವಲ 27 ಲಕ್ಷ ಜನರಿಗೆ ಉದ್ಯೋಗ ನಿರ್ಮಿಸಲಾಗಿದೆ. ಈ ದೆಸೆಯಲ್ಲಿ ಇನ್ನೂ ಸಾಕಷ್ಟು ಪ್ರಯತ್ನಗಳನ್ನು ನಡೆಸಬೇಕಾಗಿದೆ. ಸ್ವಯಂ ಉದ್ಯೋಗ ಯೋಜನೆಗೆ ಹೆಚ್ಚು ಪ್ರೋತ್ಸಾಹ ಕೊಡಬೇಕಾಗಿದೆ. ಬ್ಯಾಂಕುಗಳ ಹಗರಣದ ದೃಷ್ಟಿಯಿಂದ ನಮೋ ಎಡವಿದ್ದಾರೆಂದು ಅನಿಸಿದರೂ ಸರಕಾರಕ್ಕೆ ಇದರ ಬಗ್ಗೆ ನಂತರ ತಿಳಿಯುತ್ತದೆ. ಆದರೂ ಸರಕಾರ ಎಚ್ಚೆತ್ತುಕೊಂಡಿದೆ.

ನಮೋ ಇನ್ನೂ ಸರಿಯಾಗಿ ಕೆಲಸ ಮಾಡಲು ಅವಕಾಶವಿದೆ. ಕಾಂಗ್ರೆಸ್ ಇತರ ಪಕ್ಷಗಳೊಂದಿಗೆ ಅರ್ಥಪೂರ್ಣ ಮೈತ್ರಿ ಮಾಡಿಕೊಂಡಿಲ್ಲ. ಅನೇಕ ಪಕ್ಷಗಳು ಕಾಂಗ್ರೆಸ್ಸಿನ ಮೈತ್ರಿಯನ್ನು ಮುರಿಯುತ್ತಿವೆ. ಕಾರಣ ‘ರಾಗಾ’ ಅಷ್ಟೊಂದು ಪ್ರಬುದ್ಧರಾಗಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಮೋ ಅನಿವಾರ್ಯ ಆಗಿದ್ದಾರೆ. ಅವರು ಬೇಕೆಬೇಕು. ಅವರನ್ನು ಅಭಿವೃದ್ಧಿಯ ಹರಿಕಾರ ಎನ್ನಲೇಬೇಕು.

-ಬಿ.ಬಿ.ನಾಗನೂರ, ನಿಪ್ಪಾಣಿ.

Leave a Reply

Your email address will not be published.