ಮೋದಿಯಲ್ಲೂ ಒಳ್ಳೆಯ ಗುಣಗಳಿವೆ

ಮೋದಿ ಮರಳಿ ಅಧಿಕಾರಕ್ಕೆ ಬರಬಾರದು ಎಂದು ಹೇಳುತ್ತಿರುವವರು ಇತರೆ ಪಕ್ಷಗಳಿಗೆ ಸೇರಿದವರು, ಒಂದಿಷ್ಟು ಕೋಮುವಾದಕ್ಕೆ ಬೆಂಕಿ ಸುರಿಯುವವರು ಮಾತ್ರ. ಈ ಮಾತನ್ನು ಹೇಳುವ ನಾನು ಸಂಘ ಪರಿವಾರದ ಅನುಯಾಯಿಯೆಂದು ಯಾರೂ ಭಾವಿಸಬಾರದು.

ನಾನು ಯಾವುದೇ ಪಕ್ಷದ ನೀತಿಯನ್ನು ಕುರುಡು ದೃಷ್ಟಿಯಿಂದ, `ವ್ಹಾಹ್, ಭೇಷ್!’ ಎಂದು ಬೆಂಬಲಿಸುವುದಿಲ್ಲ. ಒಳ್ಳೆಯ ಗುಣಗಳು ಯಾವ ಪಕ್ಷದ ರಾಜಕಾರಣಿಯಲ್ಲಿದ್ದರೂ ಒಪ್ಪಿಕೊಳ್ಳುತ್ತೇನೆ. ಐದು ವರ್ಷ ಪ್ರಧಾನಿಯಾಗಿದ್ದುಕೊಂಡು ಮೋದಿ ಹೇಳಿದ್ದೆಲ್ಲವನ್ನೂ ಮಾಡಿದ್ದಾರೆ ಎಂಬ ತೃಪ್ತಿಯ ತೇಗು ಖಂಡಿತ ಇಲ್ಲ. ಮೋದಿಯಲ್ಲಿರುವ ದೌರ್ಬಲ್ಯಗಳನ್ನೇ ಪಟ್ಟಿ ಮಾಡಿ ಅವರು ಬೇಡ ಎಂದು ಹೇಳುವ ಮೊದಲು ಅವರಿಗಿಂತ ಸಮರ್ಥವಾಗಿ ಬೇರೆ ಯಾರು ಆಳಬಹುದು? ಎಂಬ ಪ್ರಶ್ನೆಗೆ ಸರಿಯಾದ ಉತ್ತರ ಕೊಡುವವರು ಇದ್ದರೆ ಒಳ್ಳೆಯದು.

ಸದ್ಯದ ಪರಿಸ್ಥಿತಿಯಲ್ಲಿ ಮೋದಿ ಮುಂದಿನ ಪ್ರಧಾನಿ ಆಗಬಹುದು ಎಂದು ಹೇಳುವುದಾದರೆ ಒಂದಿಷ್ಟು ಸಮರ್ಥನೆಗಳಿವೆ. ಮೋದಿ ತನ್ನ ವಂಶದವರನ್ನೇ ಗದ್ದುಗೆಯಲ್ಲಿ ಕೂರಿಸುವುದಿಲ್ಲ. ತನ್ನವರ ಹಿತಕ್ಕಾಗಿ ಅಧಿಕಾರ ದುರುಪಯೋಗ ಮಾಡಿಲ್ಲ. ಭ್ರಷ್ಟಾಚಾರ ಮಾಡಿ ಸಿಕ್ಕಿ ಬೀಳುವ ಮಂದಿ ಅವರ ಸಂಪುಟದಲ್ಲಿ ಇಲ್ಲ. ರೈತರಿಗೆ ಸಮಗ್ರವಾಗಿ ಸಾಲ ಮನ್ನಾ ಮಾಡಲು ಕರ್ನಾಟಕ ಸರಕಾರ ಮುಂದಾದಾಗಲೂ ಮೋದಿ ಖಂಡಿತ ಅದನ್ನು ಮಾಡುವುದಿಲ್ಲ ಎಂದರು.

ರಾಗಿ, ಟೊಮ್ಯಾಟೊ ಬೆಳೆಯುವ ರೈತನಿಗೆ ಬೆಳೆ ನಷ್ಟವಾದರೆ ಬದುಕಿಲ್ಲವೆಂಬುದು ಸತ್ಯ. ಅವನಿಗೆ ಸಾಲದ ಶೂಲದಿಂದ ಮುಕ್ತಿ ಸಿಗಬೇಕು. ಆದರೆ ಅಡಿಕೆಗೆ ಬೆಲೆ ಬರಲಿ ಎಂದು ಮೂಟೆ ಕಟ್ಟಿ ಇಟ್ಟ ರೈತನಿಗೂ ಸಾಲಮುಕ್ತಿ ನೀಡುವ ಚುನಾವಣಾ ಗಿಮಿಕ್ಸ್ ಮಾಡಿ ಸರಕಾರದ ಬೊಕ್ಕಸಕ್ಕೆ ಮೋದಿ ಕೊಳ್ಳೆ ಹೊಡೆಯಲಿಲ್ಲ. ಅಪಾತ್ರರಿಗೆ ಕೂಡ ಇಂತಹ ಲಾಭ ನೀಡಲು ಸರಕಾರ ಮುಂದಾದರೆ ಸಾಲ ಮಾಡು, ಮೋಸ ಮಾಡು ಎಂಬ ಪ್ರವೃತ್ತಿಗೆ ಹುರಿದುಂಬಿಸಿದಂತಾಗುವುದಿಲ್ಲವೆ? ರೈತನಿರಲಿ, ಉದ್ಯಮಿಯಿರಲಿ ಅವರವರ ಬದ್ಧತೆ ಅವರಿಗೆ ಖಂಡಿತ ಇರಬೇಕು. ಮೋದಿ ಸಾಮೂಹಿಕ ಸಾಲ ಮನ್ನಾ ಮಾಡಲು ಮುಂದಾದರೆ ದೇಶದ ಅಭಿವೃದ್ಧಿಗೆ ಬಳಕೆಯಾಗುವ ಸಾವಿರಾರು ಕೋಟಿಗಳು ಆ ಕಡೆಗೆ ಹೋಗುತ್ತಿದ್ದವು. ಈ ವಿಚಾರದಲ್ಲಿ ಮೋದಿಯದು ಜಾಣ ನಡೆ. ಆದರೆ ರೈತರ ಖಾತೆಗೆ ಆರು ಸಾವಿರ ಹಣ ತುಂಬುವುದು ಮುಂಗೈಗೆ ಬೆಲ್ಲ ಸವರಿ ನೆಕ್ಕುತ್ತ ಕೂತುಕೊಳ್ಳಲು ಹೇಳುವ ಚುನಾವಣಾ ಖರೀದಿಯ ಸಣ್ಣ ಹೆಜ್ಜೆ ಅಷ್ಟೆ.

ಮೋದಿಯಷ್ಟು ವಿದೇಶ ಪ್ರವಾಸಕ್ಕೆ ಹಣ ಮುಗಿಸಿದ ಪ್ರಧಾನಿಗಳಿಲ್ಲ ಎನ್ನುವ ಆರೋಪವಿದೆ. ಆದರೆ ಅವರು ಬಹಳಷ್ಟು ದೇಶಗಳ ಸ್ನೇಹ ಹಸ್ತ ಲಾಘವ ಸಂಪಾದಿಸಿದ್ದಾರೆ. ಇತ್ತೀಚಿನ ಪಾಕ್ ಭಯೋತ್ಪಾದನಾ ದಾಳಿಯಲ್ಲಿ ಭಯೋತ್ಪಾದನೆಯ ವಿರುದ್ಧ ಮುಸ್ಲಿಂ ರಾಷ್ಟ್ರವಾಗಿದ್ದರೂ ಇರಾನ್ ಭಾರತದ ಬೆನ್ನಿಗೆ ನಿಂತಿತು. ಸೌದಿ ಅರೇಬಿಯಾ ಪಾಕ್‍ಗೆ ನೆರವು ಕೊಡುತ್ತಿದ್ದರೂ ಈ ವಿಷಯದಲ್ಲಿ ಭಾರತವನ್ನು ಖಂಡಿಸಲಿಲ್ಲ. ಬಹುತೇಕ ರಾಷ್ಟ್ರಗಳು ಪಾಕ್ ನಡೆಯನ್ನು ವಿರೋಧಿಸಿದವು. ಮೋದಿಯ ವಿದೇಶ ಯಾನದಿಂದ ಸೌಹಾರ್ದ ಸಂಬಂಧ ಹೆಚ್ಚಿರುವುದನ್ನು ನಾವೇಕೆ ಅಲ್ಲಗಳೆಯಬೇಕು?

ಇಲ್ಲಿ ನಾವು ಭ್ರಷ್ಟರಿಗೆ, ನೀಚರಿಗೆ, ಯಾವ ಅಭಿವೃದ್ಧಿಯನ್ನೂ ಮಾಡದೆ ಬೊಗಳೆ ಕೊಚ್ಚುವವರಿಗೆ, ಗಣಿ ಲಂಚವನ್ನು ಚೆಕ್ ಮೂಲಕ ಪಡೆದವರಿಗೆ, ಸದನದಲ್ಲಿ ಕುಳಿತು ಬ್ಲೂ ಫಿಲಂ ನೋಡಿದವರಿಗೆ, ನರ್ಸಮ್ಮನಿಗೆ ಮುತ್ತು ಕೊಟ್ಟು ಮುತ್ತುರಾಜ ಎನಿಸಿಕೊಂಡವರಿಗೆ, ಕೋಮು ವಿಷ ಬೀಜ ಬಿತ್ತುವವರಿಗೆ ನಮ್ಮ ಅಮೂಲ್ಯ ಮತ ನೀಡಬೇಕಾದ ಹೀನಾಯ ಸ್ಥಿತಿಯನ್ನು ಮೈಗೆಳೆದುಕೊಳ್ಳಬೇಕಲ್ಲವೆ!

ಒಂದು ಕಾಲದಲಿ ಮನಮೋಹನ ಸಿಂಗ್ ಗ್ಯಾಟ್ ಒಪ್ಪಂದ ಮಾಡಿಕೊಂಡಾಗ ದೇಶವೇ ಕೊಳ್ಳೆ ಹೋಯಿತೆಂದು ಬೊಬ್ಬರಿಸಿದವರ ಮನೆಗಳಿಗೆ ಮುಂದೆ ವಿದ್ಯುನ್ಮಾನ ಉಪಕರಣಗಳು ಸಲೀಸಾಗಿ ಬಂದವು. ಅವು ದೇಶದೊಳಗೆ ಬಂದು ಕೈಗೆಟುಕಿದಾಗಲೇ ಒಪ್ಪಂದದ ಮಹತ್ತ್ವ ಏನೆಂಬುದರ ಅರಿವಾದದ್ದು. ಅವರ ಕಾಲದಲ್ಲಿ ಆಧಾರ್ ಕಾರ್ಡ್ ಜಾರಿಗೆ ತಂದಾಗ ಮನೆಗೆ ಬೆಂಕಿ ಬಿದ್ದ ಹಾಗೆ ಒದ್ದಾಡಿದವರೇ ತಮಗೆ ಅಧಿಕಾರ ಸಿಕ್ಕಾಗ ಅದರ ಸತ್ತ್ವವೇನೆಂಬುದನ್ನು ತಿಳಿದು ತಾವೇ ಅದನ್ನು ಮಾಡಿದರಲ್ಲ!

ಹೀಗೆಯೇ ಮೋದಿ ನೋಟು ಬ್ಯಾನ್ ಮಾಡಿ, ಬಹುತೇಕ ಆರ್ಥಿಕ ವ್ಯವಹಾರವೂ ಬ್ಯಾಂಕ್ ಮೂಲಕವೇ ಆಗುವಂತೆ ಮಾಡಿದುದಕ್ಕೆ ತೆರಿಗೆ ಕದ್ದು ಬದುಕು ಸಾಗಿಸುತ್ತಿದ್ದವರಿಗೆ ಬೇಸರ ಬಂದಿರಬಹುದು. ಇದರಿಂದ ದೇಶದ ಬೊಕ್ಕಸಕ್ಕೆ ಹೆಚ್ಚು ಹಣ ಹರಿದು ಬರುವಂತಾದುದು ಸುಳ್ಳಲ್ಲವಷ್ಟೆ?

ಮೋದಿ ಅಭಿವೃದ್ಧಿಯ ಹರಿಕಾರನೆಂಬುದನ್ನು ಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ದೇಶವಿಡೀ ಸ್ಥಾಪಿಸಿರುವ ಜೆನರಿಕ್ ಔಷಧ ಕೇಂದ್ರಗಳು ಅದೆಷ್ಟೋ ರೋಗಿಗಳ ಪಾಲಿಗೆ ಕಲ್ಪತರುವೇ ಆಗಿದೆ. ದೇಶ ರಕ್ಷಣೆಯ ವಿಷಯದಲ್ಲಿಯೂ ಮೋದಿ ತೆಗೆದುಕೊಳ್ಳುವ ನಿರ್ಧಾರಗಳು ಈ ಹಿಂದೆ ಯಾವ ಪ್ರಧಾನಿಯೂ ಕೈಗೊಂಡಿರಲಿಲ್ಲ. ಸೇನಾನಾಯಕರಿಗೆ ಮರುದಾಳಿಯ ಪೂರ್ಣ ಅಧಿಕಾರ ಕೊಟ್ಟವರಿಲ್ಲ.

ಆದರೆ ಒಂದೇ ಒಂದು ವ್ಯಥೆಯೆಂದರೆ ಮೋದಿ ಬೇಕು ಎಂದರೆ ‘ಗಿಣಿಯನ್ನು ಕೊಳ್ಳಬೇಕಿದ್ದರೆ ಗಿಡುಗನನ್ನೂ ಖರೀದಿಸಬೇಕು’ ಎನ್ನುವ ಪರಿಸ್ಥಿತಿ ನಮ್ಮದಾಗಿದೆ. ಪಕ್ಷಕ್ಕೆ ಬಹುಮತ ಬರದಿದ್ದರೆ ಮೋದಿಗೆ ಅಧಿಕಾರ ಸಿಗುವುದಿಲ್ಲ. ಅದಕ್ಕಾಗಿ ಇಲ್ಲಿ ನಾವು ಭ್ರಷ್ಟರಿಗೆ, ನೀಚರಿಗೆ, ಯಾವ ಅಭಿವೃದ್ಧಿಯನ್ನೂ ಮಾಡದೆ ಬೊಗಳೆ ಕೊಚ್ಚುವವರಿಗೆ, ಗಣಿ ಲಂಚವನ್ನು ಚೆಕ್ ಮೂಲಕ ಪಡೆದವರಿಗೆ, ಸದನದಲ್ಲಿ ಕುಳಿತು ಬ್ಲೂ ಫಿಲಂ ನೋಡಿದವರಿಗೆ, ನರ್ಸಮ್ಮನಿಗೆ ಮುತ್ತು ಕೊಟ್ಟು ಮುತ್ತುರಾಜ ಎನಿಸಿಕೊಂಡವರಿಗೆ, ಕೋಮು ವಿಷ ಬೀಜ ಬಿತ್ತುವವರಿಗೆ ನಮ್ಮ ಅಮೂಲ್ಯ ಮತ ನೀಡಬೇಕಾದ ಹೀನಾಯ ಸ್ಥಿತಿಯನ್ನು ಮೈಗೆಳೆದುಕೊಳ್ಳಬೇಕಲ್ಲವೆ! ಹೀಗೆಂದು ಮೋದಿಯನ್ನು ಬಿಟ್ಟರೆ ಅವರಷ್ಟಾದರೂ ಉತ್ತಮ ಆಡಳಿತ ನೀಡಬಲ್ಲ ಇನ್ನೊಬ್ಬ ಎಲ್ಲಿ?

Leave a Reply

Your email address will not be published.