ಮೋದಿ ಎನ್ನುವ ಒಗಟು

-ಪೃಥ್ವಿದತ್ತ ಚಂದ್ರಶೋಭಿ.

ನರೇಂದ್ರ ಮೋದಿಯವರು ಕಳೆದ ಎರಡು ದಶಕಗಳ ಭಾರತೀಯ ಸಾರ್ವಜನಿಕ ಜೀವನದ ಕೇಂದ್ರದಲ್ಲಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯ ಮಾತೇನಲ್ಲ. 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಮೋದಿಯವರು ಭಾರತದ ಮುಂದಿರುವ ಸವಾಲುಗಳಿಗೆ ತಮ್ಮ ಕ್ರಿಯೆ-ನಿಷ್ಕ್ರಿಯತೆಗಳಿಂದ ಮತ್ತು ವಿಚಾರಗಳು ಹಾಗೂ ತಮ್ಮ ಸರ್ಕಾರಗಳ ಸಾರ್ವಜನಿಕ ನೀತಿ ನಿರೂಪಣೆಗಳಿಂದ ಪ್ರತಿಕ್ರಿಯಿಸುತ್ತಲೆ ಇದ್ದಾರೆ. ಈ ಸವಾಲುಗಳು ಹಿಂದು ರಾಷ್ಟ್ರೀಯತೆ, ಆರ್ಥಿಕ ಅಭಿವೃದ್ಧಿ, ಆಡಳಿತ ವ್ಯವಸ್ಥೆ, ಸಾಮಾಜಿಕ ಬಿಕ್ಕಟ್ಟುಗಳು ಹೀಗೆ ಹಲವಾರು ವಿಷಯಗಳಿಗೆ ಸಂಬಂಧಿಸಿದ್ದರಬಹುದು. ವಿಷಯ ಯಾವುದೆ ಆಗಿದ್ದರೂ ಮೋದಿಯವರನ್ನು ನಿರ್ಲಕ್ಷಿಸಲು ಸಾಧ್ಯವಾಗಿಲ್ಲ.

2013ರ ಸೆಪ್ಟಂಬರ್ ತಿಂಗಳಿನಲ್ಲಿ ಭಾರತೀಯ ಜನತಾ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಮೋದಿಯವರು ಹೆಸರಿಸಲ್ಪಟ್ಟರು. ಆಗಿನಿಂದ ರಾಷ್ಟ್ರರಾಜಕಾರಣದ ಮುಖ್ಯವಾಹಿನಿಯನ್ನು ಅವರು ಅಧಿಕೃತವಾಗಿ ಪ್ರವೇಶಿಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಯಶಸ್ಸನ್ನು ಮೋದಿಯವರು ಗಳಿಸಿದರು. ನಂತರದ ಐದು ವರ್ಷಗಳಲ್ಲಿ ಅವರ ಸರ್ಕಾರ ಹಲವಾರು ಪ್ರಮುಖ ಮತ್ತು ವಿವಾದಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ.

2019ರ ಲೋಕಸಭಾ ಚುನಾವಣೆಯು ಮೋದಿಯವರ ಐದು ವರ್ಷಗಳ ಸಾಧನೆಗಳ ಕುರಿತಾದ ಮೊದಲ ಬಹುಮುಖ್ಯ ರಾಷ್ಟ್ರವ್ಯಾಪಿ ಪರೀಕ್ಷೆ. ಈ ಹಿನ್ನೆಲೆಯಲ್ಲಿ ಮೋದಿಯವರನ್ನು ವ್ಯಕ್ತಿಯಾಗಿ, ನಾಯಕನಾಗಿ, ರಾಜಕಾರಣಿಯಾಗಿ ಮತ್ತು ಭಾರತದ ಪ್ರಧಾನಿಯಾಗಿ ವಸ್ತುನಿಷ್ಠವಾಗಿ ವಿಮರ್ಶಿಸುವ ಪ್ರಯತ್ನ ಇಲ್ಲಿದೆ.

ಭಾರತದ ಪ್ರಜ್ಞಾವಂತ ನಾಗರಿಕರಿಗೆ ನರೇಂದ್ರ ಮೋದಿ ಹೊಸಬರಲ್ಲ, ಅಪರಿಚಿತರೂ ಅಲ್ಲ. ಆದರೆ ಅವರನ್ನು ಹೇಗೆ ಗ್ರಹಿಸಬೇಕು ಎನ್ನುವ ಮುಖ್ಯ ಪ್ರಶ್ನೆಗೆ ಒಳ್ಳೆಯ ಉತ್ತರಗಳು ದೊರಕುತ್ತಿವೆ ಎನ್ನಿಸುತ್ತಿಲ್ಲ. ಉತ್ತರಿಸುವವರು ಅವರ ವಿರೋಧಿಗಳಾದರೆ ಮೋದಿಯವರನ್ನು ಫ್ಯಾಸಿಸ್ಟ್ ಹಾಗೂ ಶ್ರೀಮಂತ ಉದ್ದಿಮೆದಾರರ ಬಾಲಂಗೋಚಿ ಎನ್ನುತ್ತಾರೆ. ಅವರ ಬೆಂಬಲಿಗರಾದರೆ ಮೋದಿಯವರನ್ನು ಸ್ವತಂತ್ರ ಭಾರತವು ಪಡೆದಿರುವ ಮೊದಲ ಶ್ರೇಷ್ಠ ನಾಯಕನೆಂದೂ, ಭಾರತೀಯ ನಾಗರಿಕತೆಯ ಹಿರಿಮೆಯನ್ನು ಪುನಃ ಸ್ಥಾಪಿಸಬಲ್ಲ ಮಾಂತ್ರಿಕನೆಂದೂ ಬಣ್ಣಿಸುತ್ತಾರೆ. ಈ ಉತ್ತರಗಳು ನೇರವಾದವು, ಸರಳವಾದವು. ಆದರೆ ಇವುಗಳು ವಸ್ತುನಿಷ್ಠತೆಯ ಪರೀಕ್ಷೆಯಲ್ಲಿ, ಉತ್ತಮ ಗುಣಮಟ್ಟದ ನಿರೀಕ್ಷೆಯನ್ನು ತಲುಪುವುದರಲ್ಲಿ ವಿಫಲವಾಗುತ್ತಿವೆ.

ದೈವೀಕರಣ ಇಲ್ಲವೆ ಅಸುರೀಕರಣಗಳಿಗೆ ಒಳಗಾಗಿರುವ ನಾಯಕರುಗಳ ಪಟ್ಟಿಯಲ್ಲಿ ಮೋದಿಯವರು ಮೊದಲಿಗರೂ ಅಲ್ಲ, ಕೊನೆಯವರೂ ಆಗುವುದಿಲ್ಲ. ತಮ್ಮ ರಾಜಕೀಯ ವಿರೋಧಿಗಳನ್ನು ದೇಶದ್ರೋಹಿಗಳೆಂದೆ ಬಣ್ಣಿಸುವ, ಅಸಲಿ ಭಿನ್ನಾಭಿಪ್ರಾಯಗಳನ್ನು ಸಹಿಸದ ಕಾಲವಿದು. ಈ ಬೆಳವಣಿಗೆಗೆ ಸ್ವತಃ ಮೋದಿಯವರೂ ಸಹ ಹೊರತಲ್ಲ.

ಸ್ವತಃ ಮೋದಿಯವರೂ 2001ರಿಂದ 2019ರ ನಡುವೆ ಸಾಕಷ್ಟು ಬದಲಾಗಿದ್ದಾರೆ. ಗೋಧ್ರಾ ನಂತರದ ಗಲಭೆಗಳ ತರುವಾಯದಲ್ಲಿ ಅಕಸ್ಮಾತ್ತಾಗಿ ಅಧಿಕಾರದಲ್ಲಿ ಮುಂದುವರೆಯುವ ಅವಕಾಶ ಪಡೆದ ಮೋದಿಯವರು ಮುಂದಿನ ದಶಕದಲ್ಲಿ ತಮ್ಮ ರಾಜಕೀಯ ವ್ಯಕ್ತಿತ್ವವನ್ನು ಮರುನಿರ್ಮಾಣ ಮಾಡಿಕೊಂಡರು. ಆರ್ಥಿಕ ಅಭಿವೃದ್ಧಿಯ ಸುತ್ತ ತಮ್ಮ ಹೊಸ ಇಮೇಜ್ ರೂಪಿಸಿಕೊಂಡರು. ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸಿದ ತರುವಾಯ ಹಿಂದುತ್ವದ ಭಾಷೆ ಅವರ ಮಾತುಗಳಲ್ಲಿ ಬರುವುದು ಅಪರೂಪವೆ. ಹಿಂದೂ ರಾಷ್ಟ್ರವಾದವು ಅವರ ಮತ್ತು ಇನ್ನೂ ಮುಖ್ಯವಾಗಿ ಅವರ ಪಕ್ಷದ ರಾಜಕಾರಣವನ್ನು ಈಗಲೂ ಪ್ರಭಾವಿಸುತ್ತಿರಬಹುದು. ಆದರೆ ವಿಭಿನ್ನವಾದ ರಾಜಕಾರಣದ ಭಾಷೆಯನ್ನು ಅವರು ಈಗ ಬಳಸುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ.

ಇಂತಹ ಕಾಲದಲ್ಲಿ ನರೇಂದ್ರ ಮೋದಿಯವರನ್ನು ಹೇಗೆ ಮೌಲ್ಯಮಾಪನ ಮಾಡಬೇಕು?

ಅಪ್ರತಿಮ ರಾಜಕೀಯ ಪ್ರತಿಭೆ

ಮೊದಲಿಗೆ ಒಂದು ಸರಳ ಮಾತು. ನಮ್ಮ ಮಾನದಂಡ ಏನೆ ಇರಲಿ. ನರೇಂದ್ರ ಮೋದಿಯವರು ಸ್ವತಂತ್ರ ಭಾರತ ಕಂಡಿರುವ ಅತ್ಯುತ್ತಮ ರಾಜಕೀಯ ಪ್ರತಿಭೆಗಳಲ್ಲಿ ಒಬ್ಬರು ಎನ್ನುವುದು ನಿರ್ವಿವಾದ. ಅವರ ರಾಜ್ಯವಾದ ಗುಜರಾತ್ ರಾಷ್ಟ್ರ ರಾಜಕಾರಣದ ಶಕ್ತಿ ಕೇಂದ್ರಗಳಲ್ಲಿ ಒಂದಲ್ಲ. ಸ್ವತಃ ಮೋದಿಯವರು ಸಹ ರಾಜಕೀಯ ಕುಟುಂಬದ ಹಿನ್ನೆಲೆಯಿಂದಾಗಲಿ, ಪ್ರಬಲ ಜಾತಿಯೊಂದರ ಬೆಂಬಲದಿಂದಾಗಲಿ ರಾಜಕೀಯ ಅಧಿಕಾರವನ್ನು ಗಳಿಸಲಿಲ್ಲ. ಈ ಹಿನ್ನೆಲೆಯಿಂದ ನೋಡಿದಾಗ ಮೋದಿಯವರು ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಅಥವಾ ನವೀನ್ ಪಟ್ನಾಯಕರಂತಲ್ಲ. ಗುಜರಾತಿನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವಾಗ ಅವರಿಗೆ ಸಂಘ ಪರಿವಾರದ ಬೆಂಬಲ ಮುಖ್ಯವಾಗಿದ್ದಿರಬಹುದು. ಆದರೆ ಆ ನಂತರದಲ್ಲಿ ತನ್ನ ರಾಜಕೀಯ ಪ್ರಭಾವವನ್ನು ಮೋದಿಯವರು ಉಳಿಸಿಕೊಂಡಿರುವುದು ಮತ್ತು ರಾಷ್ಟ್ರೀಯ ನಾಯಕರಾಗಿ ಬೆಳೆದಿರುವುದು ತಮ್ಮ ಸ್ವಂತ ಪರಿಶ್ರಮದಿಂದ.

ರಾಜ್ಯಮಟ್ಟದಲ್ಲಿ ರಾಜಕೀಯ ಅಧಿಕಾರ ಪಡೆಯುವುದು ಮತ್ತು ಪ್ರಭಾವ ಸಾಧಿಸುವುದು ದೊಡ್ಡ ವಿಷಯವಲ್ಲ. ಆದರೆ ಮೋದಿಯವರು ಕಳೆದ ದಶಕದಲ್ಲಿ ತಮ್ಮ ಹೆಸರಿನಲ್ಲಿ ದೇಶಾದ್ಯಂತ ಮತ ಕೇಳುವ ರಾಜಕೀಯ ಶಕ್ತಿಯನ್ನು ಗಳಿಸಿಕೊಂಡಿದ್ದಾರೆ. ಬಹುಶಃ ಇಂದಿನ ಸಂದರ್ಭದಲ್ಲಿ ಆ ಸಾಮಥ್ರ್ಯವಿರುವ ಮತ್ತೋರ್ವ ನಾಯಕ ಭಾರತದ ರಾಜಕಾರಣದಲ್ಲಿಲ್ಲ. ಕಳೆದ ಮೂರು ದಶಕಗಳಲ್ಲಿ ಭಾರತೀಯ ರಾಜಕಾರಣದಲ್ಲಿ ಅಂತಹ ನಾಯಕನ ಅಭಾವವಿತ್ತು ಎಂದರೂ ತಪ್ಪಲ್ಲ.

ಹಣ ಮತ್ತು ಜಾತಿ-ಧರ್ಮಗಳ ಹೆಸರಿನಲ್ಲಿ ಮತ ಕೇಳುವುದೆ ಇಂದಿನ ರಾಜಕಾರಣದ ಗುಣಲಕ್ಷಣವಾಗಿದೆ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಮೋದಿಯವರು ಗುಜರಾತಿನ ರಾಜ್ಯ ರಾಜಕಾರಣದ ದಿನಗಳಿಂದಲೂ ಮಧ್ಯಮವರ್ಗಗಳ ನಾಯಕರಾಗಲು ಪ್ರಯತ್ನಿಸುತ್ತಿದ್ದಾರೆಯೆ ಹೊರತು ಜಾತಿ-ಧರ್ಮಗಳ ನಾಯಕನಾಗಲು ಅಲ್ಲ. ಮೋದಿಯವರೂ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತ, ‘ಹಿಂದೂ ಹೃದಯ ಸಾಮ್ರಾಟ’ನೆಂದು ಖ್ಯಾತಿ ಗಳಿಸಿ ರಾಷ್ಟ್ರನಾಯಕರಾಗಿದ್ದಾರೆ ಎನ್ನುವ ಅವರ ಟೀಕಾಕಾರರ ಮಾತುಗಳನ್ನು ನಾನು ಅಲಕ್ಷಿಸುತ್ತಿಲ್ಲ. ಹಿಂದೂ ಬೆಂಬಲ ಅವರಿಗೆ ಮುಖ್ಯವಾದರೂ ಅವರ ರಾಜಕಾರಣ ಮತ್ತು ಸಾರ್ವಜನಿಕ ನೀತಿ ಮಧ್ಯಮವರ್ಗ ಕೇಂದ್ರಿತವಾಗಿದೆ.

ಮಿಗಿಲಾಗಿ ಅಪಾರ ಹಣವಿಲ್ಲದೆ ಇಂದಿನ ದಿನ ಚುನಾವಣಾ ರಾಜಕಾರಣವನ್ನು ಮಾಡುವುದು ಅಸಾಧ್ಯವೆನ್ನುವುದು ಜಾಗತಿಕವಾಗಿ ಎಲ್ಲೆಡೆ ಸತ್ಯವಾದ ಮಾತು. ಈ ಮಾತಿಗೆ ಮೋದಿಯವರೂ ಹೊರತಲ್ಲ. ಅದಾನಿ-ಅಂಬಾನಿಗಳಂತಹ ದೇಶದ ದೊಡ್ಡ ಕೈಗಾರಿಕೋದ್ಯಮಿಗಳ ಬೆಂಬಲ ಅವರಿಗಿದೆ ಎನ್ನುವ ಆಧಾರರಹಿತವಲ್ಲದ ಮಾತು ಸಹ ಕೇಳುಬರುತ್ತದೆ.

ಇದೆಲ್ಲದರ ನಡುವೆಯೂ ಮೋದಿಯವರ ಯಶಸ್ಸು 21ನೆಯ ಶತಮಾನದ ಪ್ರಮುಖ ರಾಜಕೀಯ ಕಥನಗಳಲ್ಲಿ ಒಂದು.

ಮೋದಿಯವರನ್ನು ಭಾರತದ ಅತ್ಯುತ್ತಮ ರಾಜಕೀಯ ಪ್ರತಿಭೆಗಳ ಪಟ್ಟಿಯಲ್ಲಿಡಲು ಮತ್ತೊಂದು ಪ್ರಮುಖ ಕಾರಣವಿದೆ. ಅವರು ಭಾರತೀಯ ರಾಜಕಾರಣವು ಕಂಡಿರುವ ಅತ್ಯುತ್ತಮ ಸಂವಹನಕಾರರಲ್ಲಿ ಒಬ್ಬರು. ನಮ್ಮ ಕಾಲದಲ್ಲಿ ಅವರನ್ನು ಮೀರಿಸುವವರು ಮತ್ತಾರು ಇಲ್ಲ. ಮೋದಿಯವರ ವಿಶೇಷ ಪ್ರತಿಭೆಯೆಂದರೆ ನಮ್ಮ ಮುಂದಿರುವ ಸವಾಲುಗಳನ್ನು ಗುರುತಿಸುವ ಮತ್ತು ಅವುಗಳಿಗೆ ಪರಿಹಾರಗಳನ್ನು ಮುಂದಿಡುವ ಅವರ ಸಾಮಥ್ರ್ಯ. ಅವರು ಸೂಚಿಸುವ ಪರಿಹಾರಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯಗಳು ಇರಬಹುದು. ಅವು ದೇಶದ ಮತ್ತು ಸಮಾಜದ ಒಳಿತನ್ನು ಹೇಗೆ ಸಾಧಿಸಬಲ್ಲವು ಎನ್ನುವುದನ್ನು ತಮ್ಮ ಕೇಳುಗರಿಗೆ ತಲುಪಿಸುವಲ್ಲಿ ಅವರು ಅದ್ವಿತೀಯರು.

ಈ ಅಂಶವನ್ನು ಅರಿಯಲು ಉದಾಹರಣೆಯಾಗಿ ಕೆಳಗಿನ ಕೆಲವು ಉದಾಹರಣೆಗಳನ್ನು ಗಮನಿಸಿ.

ಮೊದಲಿಗೆ, ಮೋದಿಯವರು ಸ್ವಚ್ಛ ಭಾರತ ಯೋಜನೆಯನ್ನು 2014ರ ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಿದ ರೀತಿಯನ್ನು ಪರಿಗಣಿಸಿ. ಭಾರತದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡಬೇಕೆನ್ನುವುದರ ಬಗ್ಗೆ ಯಾವುದೆ ಭಿನ್ನಾಭಿಪ್ರಾಯಗಳು ಇರುವುದು ಸಾಧ್ಯವಿಲ್ಲ. ಇದನ್ನು ಒಂದು ಸರ್ಕಾರದ ಯೋಜನೆಯಾಗಿ ಘೋಷಿಸುವುದರು ಮಾತ್ರವಲ್ಲ. ಜೊತೆಗೆ ಸಾರ್ವಜನಿಕರೆಲ್ಲರೂ ತಮ್ಮ ನಾಗರಿಕ ಕರ್ತವ್ಯವೆನ್ನುವಂತೆ ಸ್ವಚ್ಛ ಭಾರತ ಯೋಜನೆಯಲ್ಲಿ ಭಾಗವಹಿಸಬೇಕು ಎನ್ನುತ್ತ, ಮಹಾತ್ಮ್ಮಾ ಗಾಂಧಿಯವರನ್ನು ಈ ಯೋಜನೆಗೆ ತಳುಕು ಹಾಕಿದರು. 2019ರಲ್ಲಿ ಗಾಂಧೀಜಿಯ 150ನೇ ಜನ್ಮದಿನಾಚರಣೆಯನ್ನು ಆಚರಿಸುವ ವೇಳೆಗೆ ಭಾರತವನ್ನು ಸ್ವಚ್ಛಗೊಳಿಸಬೇಕೆನ್ನುವ ಗುರಿಯನ್ನು ಮುಂದಿಟ್ಟರು.

ಈ ಗುರಿಯನ್ನು ತಲುಪಲು ಸರ್ಕಾರ ಮತ್ತು ನಾಗರಿಕ ಸಮಾಜಗಳು ಜೊತೆಯಾಗಿ ಕೆಲಸ ಮಾಡುತ್ತಿವೆಯೆ? ಆ ರೀತಿ ಮಾಡುವಂತೆ ಮೋದಿಯವರು ಪ್ರೇರೇಪಿಸಿದ್ದಾರೆಯೆ? ಈ ಪ್ರಶ್ನೆಗಳಿಗೆ ದೊರಕುವ ಉತ್ತರಗಳು ನಿರಾಶಾದಾಯಕ ಎನ್ನುವುದು ಸುಸ್ಪಷ್ಟ. ಮೋದಿಯವರೂ ಸೇರಿದಂತೆ ಬಹುತೇಕ ಎಲ್ಲರೂ ಕೇವಲ ಪ್ರಚಾರಕ್ಕಾಗಿ, ಪತ್ರಿಕೆಗಳಲ್ಲಿ ಛಾಯಾಚಿತ್ರಗಳನ್ನು ಛಾಪಿಸಿಕೊಳ್ಳಲು ಪೊರಕೆ ಹಿಡಿಯುತ್ತಾರೆ. ಆದರೆ ಇಂತಹ ಯೋಜನೆಗಳನ್ನು ಮುಂದಿಡುವಾಗ ಮೋದಿಯವರು ಬಳಸುವ ಭಾಷೆ ಮತ್ತು ಕಥನಚೌಕಟ್ಟುಗಳು ಭಾರತೀಯ ರಾಜಕಾರಣದಲ್ಲಿ ಇತ್ತೀಚಿನ ದಶಕಗಳಲ್ಲಿ ಹೊಸದು.

ಎರಡನೆಯ ಉದಾಹರಣೆ ಸಹ ಹೀಗೆಯೆ ಸಾರ್ವಜನಿಕ ಬಿಕ್ಕಟ್ಟು ಒಂದಕ್ಕೆ ಪರಿಹಾರವನ್ನು ಕೇವಲ ಸರ್ಕಾರ-ಪ್ರಭುತ್ವಗಳ ಮೂಲಕ ಮಾತ್ರವಲ್ಲ, ಸಾರ್ವಜನಿಕ ವಲಯದೊಳಗಿನಿಂದ ತರಲು ಪ್ರಯತ್ನಿಸುತ್ತಿರುವಂತಹುದು. ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿರುವ ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ-ಅತ್ಯಾಚಾರ ಪ್ರಕರಣಗಳ ಕುರಿತಾಗಿ ಮೋದಿಯವರ ಪ್ರತಿಕ್ರಿಯೆಯನ್ನು ಗಮನಿಸಿ. ಅವರು ಸಾಮಾನ್ಯವಾಗಿ ಕಾನೂನಿನ ಭಾಷೆಯನ್ನು ಬಳಸದೆ, ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನು ಭಾರತೀಯ ಕುಟುಂಬಗಳು ಎದುರಿಸುತ್ತಿರುವ ಸವಾಲಾಗಿ ಪರಿವರ್ತಿಸಿ ಮಾತನಾಡುತ್ತಾರೆ. ನಮ್ಮ ಮನೆಗಳಲ್ಲಿ ಬಾಲಕರನ್ನು ಬೆಳಸುವಾಗ, ಅವರಿಗೆ ಬಾಲಕಿಯರನ್ನು ಮತ್ತು ಮಹಿಳೆಯರ ಸ್ವಾತಂತ್ರ್ಯ-ಹಕ್ಕುಗಳನ್ನು ಗೌರವಿಸುವ ಶಿಕ್ಷಣವನ್ನು ನೀಡಬೇಕೆಂದು ವಾದಿಸುತ್ತಾರೆ. ಮೋದಿಯವರ ಪಕ್ಷದ ಬಹುತೇಕ ನಾಯಕರು ಮಹಿಳೆಯರನ್ನು ಮನೆಯಲ್ಲಿಯೆ ಇರಿಸಬೇಕೆಂದು ವಾದಿಸುವ ಸಂಪ್ರದಾಯವಾದಿ ಮನಸ್ಥಿತಿಯವರು ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ಮಹಿಳೆಯರ ಅವಕಾಶ-ಹಕ್ಕುಗಳನ್ನು ಸಂರಕ್ಷಿಸುವುದು ಹಾಗೂ ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯೆ ಸರಿ. ಆದರೆ ಮಹಿಳೆಯರ ಸುರಕ್ಷತೆ ಸಾಮಾಜಿಕ ಬದಲಾವಣೆಯ ಪ್ರಶ್ನೆಯೂ ಹೌದು ಎನ್ನುವುದನ್ನು ಮೋದಿ ಸರಿಯಾಗಿಯೆ ಗುರುತಿಸುತ್ತಾರೆ.

ಮೂರನೆಯ ಮತ್ತು ಕಡೆಯ ಉದಾಹರಣೆಯಾಗಿ ಮೋದಿ ಸರ್ಕಾರದ ಆರ್ಥಿಕ ಕಾರ್ಯಕ್ರಮಗಳನ್ನು ಪರಿಗಣಿಸಬಹುದು. ಈ ಹಿನ್ನೆಲೆಯಲ್ಲಿ ಮೋದಿಯವರು ತರಲು ಬಯಸುತ್ತಿರುವ ಬಹುದೊಡ್ಡ ಬದಲಾವಣೆಯೆಂದರೆ ಎಲ್ಲ ಆರ್ಥಿಕ ಚಟುವಟಿಕೆಗಳನ್ನು ಔಪಚಾರಿಕ (ಫಾರ್ಮಲ್) ವಲಯಕ್ಕೆ ತರಲು ಪ್ರಯತ್ನಿಸುತ್ತಿರುವುದು. ಇದೊಂದು ಬಹಳ ಮಹತ್ವಾಕಾಂಕ್ಷಿ ಯೋಜನೆಯೆಂದರೆ ತಪ್ಪೇನಲ್ಲ. ಈ ಬದಲಾವಣೆಯನ್ನು ತರಲು ಅವರು ರೂಪಿಸಿರುವ ಕಾರ್ಯಕ್ರಮಗಳಲ್ಲಿ ಪ್ರಧಾನಮಂತ್ರಿ ಜನಧನ್ ಯೋಜನೆ ಮುಖ್ಯವಾದುದು. ಇದನ್ನು ಮೋದಿಯವರು ತಮ್ಮ ಭಾಷಣಗಳಲ್ಲಿ ಪದೆಪದೆ ಪ್ರಸ್ತಾಪಿಸುತ್ತಾರೆ. ದೇಶದ ಎಲ್ಲರಿಗೂ ಬ್ಯಾಂಕ್ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಟ್ಟು, ಆ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಹಾಗಾದಾಗ ಭಾರತದ ಕುಶಲಕರ್ಮಿಗಳು, ಸಣ್ಣ ಉದ್ಯಮಿಗಳು ಮತ್ತು ಅಂಗಡಿ ಮಾಲೀಕರು ಬ್ಯಾಂಕುಗಳಿಂದಲೇ ಸಾಲಸೌಲಭ್ಯಗಳನ್ನು ಪಡೆದು, ಅನೌಪಚಾರಿಕ ವಲಯದ ಸಾಲ ನೀಡುವ ಶೋಷಕರ ಬಾಧೆಯಿಂದ ಮುಕ್ತರಾಗಬಹುದು. ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಯೂ ಆಗುತ್ತದೆ ಎನ್ನುವ ಆಶಯ ಸೊಗಸಾದುದು. ಈ ಬದಲಾವಣೆಗಳ ಚಿತ್ರಣವನ್ನು ಮೋದಿಯವರು ಆಕರ್ಷಕವಾಗಿಯೆ ನಮ್ಮ ಮುಂದಿಡುತ್ತಾರೆ.

ನಾಯಕರಾಗಿ ಮೋದಿ

ಮೋದಿಯವರ ಸಾಧನೆಗಳನ್ನು ಅವರ ಸಂವಹನ ಶಕ್ತಿಯನ್ನು ಪರಿಗಣಿಸಿ ಮಾತ್ರ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಹೀಗಾಗಿ ನುಡಿಯ ಜೊತೆಗೆ ನಡೆ ಮತ್ತು ಕ್ರಿಯೆಗಳನ್ನೂ ಸಹ ಅವಲೋಕಿಸಬೇಕಾಗುತ್ತದೆ. ಆಗ ಮೋದಿಯವರ ಕೆಲವು ಮಿತಿಗಳು -ನಾಯಕನಾಗಿ ಮತ್ತು ಆಡಳಿತಗಾರನಾಗಿ- ಸ್ಪಷ್ಟವಾಗಿ ಗೋಚರವಾಗತೊಡಗುತ್ತವೆ.

ಮೋದಿಯವರಲ್ಲಿ ದಿಟ್ಟತೆ ಮತ್ತು ಮಹತ್ವಾಕಾಂಕ್ಷೆಗಳಿಗೆ ಕೊರತೆಯೇನಿಲ್ಲ. ಈ ಮಾತನ್ನು ಅವರ ಎದುರಾಳಿಗಳು ಸಹ ಒಪ್ಪುತ್ತಾರೆ. ತಮ್ಮ ಕಾಲದಲ್ಲಿ ಯಾವ ಬಗೆಯ ರಾಜಕೀಯ ಸಂಸ್ಕೃತಿಯನ್ನು ಅವರು ಹುಟ್ಟುಹಾಕಿದ್ದಾರೆ ಎಂದು ಕೇಳಿಕೊಂಡರೆ ಪ್ರಜಾಸತ್ತಾತ್ಮಕ ಸಂಸ್ಕೃತಿಯಲ್ಲಿ ನಂಬಿಕೆಯಿರುವವರಿಗೆ ತೃಪ್ತಿದಾಯಕ ಉತ್ತರ ದೊರಕುವುದಿಲ್ಲ. ಅವರ ಪಕ್ಷದೊಳಗೆ ಇರಬಹುದು ಅಥವಾ ಸರ್ಕಾರದಲ್ಲಿ ಇರಲಿ; ಮುಕ್ತ ಚರ್ಚೆಗಳಾಗುವ, ವಿಚಾರ ವಿನಿಮಯಗಳು ನಡೆಯುವ ಪ್ರಜಾಸತ್ತಾತ್ಮಕವಾದ ಸಂಸ್ಕೃತಿಯಿದೆ ಎಂದು ಮೋದಿಯವರ ಪಕ್ಕಾ ಸಮರ್ಥಕರು ಸಹ ವಾದಿಸುವುದಿಲ್ಲ.

ಮೋದಿಯವರ ಅತ್ಯಂತ ದೊಡ್ಡ ಯಶಸ್ಸುಗಳಲ್ಲಿ ಮುಖ್ಯವಾದುದು ಕಾಂಗ್ರೆಸ್ ಪಕ್ಷದ ಆಡಳಿತ ಮತ್ತು ನೀತಿಗಳ ವಿರುದ್ಧ ಅವರು ಮುಂದಿಟ್ಟಿರುವ ವಿಮರ್ಶೆ. ನೆಹರೂರಿಂದ ರಾಹುಲ್ ಗಾಂಧಿಯವರ ತನಕದ ಕಾಂಗ್ರೆಸ್ ನೇತಾರರು ಮತ್ತು ಸರ್ಕಾರಗಳು ಭಾರತದ ಅಭಿವೃದ್ಧಿಯನ್ನು ಸಾಧಿಸುವಲ್ಲಿ ವಿಫಲವಾಗಿವೆ ಎನ್ನುವ ಅವರ ವಾದವನ್ನು ಭಾರತದ ಮಧ್ಯಮ ವರ್ಗಗಳು ಮತ್ತು ನಗರವಾಸಿಗಳು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡುಬಿಟ್ಟಿದ್ದಾರೆ. ಮೋದಿಯವರ ಕಾಂಗ್ರೆಸ್ ಕುರಿತಾದ ಟೀಕೆ ಪರಿಣಾಮಕಾರಿಯಾಗಿರಬಹುದು. ಆದರೆ ಈ ಟೀಕೆಯಲ್ಲಿ ಉತ್ಪ್ರೇಕ್ಷೆಯಿದೆ ಮತ್ತು ಐತಿಹಾಸಿಕ ವಾಸ್ತವವನ್ನು ಅಲ್ಲಗಳೆಯುವ ಉತ್ಸುಕತೆಯೂ ಇದೆ ಎನ್ನುವುದನ್ನು ಗುರುತಿಸಲೇಬೇಕು. ಉದಾಹರಣೆಗೆ, ಭಾರತವನ್ನು ಆಧುನಿಕ ಪ್ರಜಾಸತ್ತಾತ್ಮಕ ದೇಶವಾಗಿ ರೂಪಿಸುವಲ್ಲಿ ನೆಹರೂರವರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಇದೊಂದೆ ನೆಹರೂರ ಏಕೈಕ ಸಾಧನೆಯೂ ಅಲ್ಲ.

ಆದರೆ ಮೋದಿಯವರ ಮಾತುಗಳನ್ನು ಕೇಳಿದಾಗ, ಭಾರತದ ಅಭಿವೃದ್ಧಿ ಪರ್ವವು ಅವರು ಅಧಿಕಾರಕ್ಕೆ ಬಂದ ನಂತರ ಮಾತ್ರ ಪ್ರಾರಂಭವಾಯಿತು ಎನ್ನುವ ದನಿಯೆ ಪ್ರಧಾನವಾಗಿ ಕೇಳಿಬರುತ್ತದೆ. ಅವರ ಮಾತುಗಳಲ್ಲಿ ಎದುರಾಳಿಗಳನ್ನು ಅಲ್ಲಗಳೆಯುವುದು ಮಾತ್ರವಲ್ಲ, ಅಸುರೀಕರಣವೂ ಆಗಾಗ ಆಗುತ್ತದೆ. ಇದಕ್ಕಿಂತ ಮುಖ್ಯವಾಗಿ ತಾವು ತರಬಯಸುವ ಬದಲಾವಣೆಗಳ ಬಗ್ಗೆ ಸಹ ಉತ್ಪ್ರೇಕ್ಷಿತ ದನಿಯಲ್ಲಿ ಮೋದಿಯವರು ಮಾತನಾಡುತ್ತಾರೆ. ಇದರಿಂದ ಒಂದೆಡೆ ತಮ್ಮ ದೇಶವಾಸಿಗಳಲ್ಲಿ ಅವಾಸ್ತವಿಕ ನಿರೀಕ್ಷೆಗಳನ್ನು ಹುಟ್ಟುಹಾಕುವ ಅಪಾಯವೂ ಸಹ ಮೋದಿಯವರ ನುಡಿಗಳೊಳಗಿದೆ. ಮತ್ತೊಂದೆಡೆ ಅವರ ನೀತಿಗಳ ಫಲವಾಗಿ ಆಗಿರುವ ಬದಲಾವಣೆಗಳ ಬಗ್ಗೆಯೂ ಉತ್ಪ್ರೇಕ್ಷಿತ ಮತ್ತು ಅವಾಸ್ತವಿಕ ವಾದಗಳು ಸಹ ಕೇಳಿಬರುತ್ತವೆ.

ಈ ಮೇಲಿನ ಮಾತಿಗೆ ಉದಾಹರಣೆಯಾಗಿ ನೋಟುಗಳ ಅಮಾನ್ಯೀಕರಣವನ್ನು ಪರಿಗಣಿಸಿ. ನೋಟುಗಳ ಅಮಾನ್ಯೀಕರಣವು ದಿಟ್ಟ ನಡೆಯಾಗಿರಬಹುದು. ಆದರೆ ಅದರಿಂದ ಮೋದಿಯವರು ಮತ್ತು ಅವರ ಸಚಿವರು ವಾದಿಸಿದಂತೆ ಭ್ರಷ್ಟಾಚಾರವು ಕಡಿಮೆಯಾಗಲಿಲ್ಲ ಮತ್ತು ಭಯೋತ್ಪಾದಕರಿಗೆ ಹಿನ್ನೆಡೆಯಾಗಲಿಲ್ಲ. ಬದಲಿಗೆ ಆರ್ಥಿಕ ಅಭಿವೃದ್ಧಿಯ ದರದಲ್ಲಿ ಕಡಿತವಾಯಿತು. ಆದರೆ ವಾಸ್ತವಕ್ಕೆ ದೂರವಾದ ವಾದಗಳನ್ನು ಬಹಳ ಕಾಲ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿಯೇ ಎದುರಾಳಿಗಳನ್ನು ಹಳಿಯುವ, ಅವರ ದೇಶಪ್ರೇಮವನ್ನು ಪ್ರಶ್ನಿಸುವ ಮತ್ತು ಅವರ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಪಾಯವು ಎದುರಾಗುತ್ತದೆ.

ನಾಯಕತ್ವ ಯಾವ ಬಗೆಯದಿರಬೇಕು?
ನಾಯಕತ್ವದ ಸ್ವರೂಪದ ಬಗ್ಗೆ ಯೋಚಿಸುವುದು ಸುಲಭವೇನಲ್ಲ. ಇತಿಹಾಸದ ಪುಟಗಳಲ್ಲಿ ಹಲವು ಬಗೆಯ ನಾಯಕತ್ವದ ಮಾದರಿಗಳು ಕಂಡುಬರುತ್ತವೆ. ಲಿಂಕನ್ ಅಥವಾ ಗಾಂಧೀಜಿಯಂತಹವರು ನಾಯಕತ್ವದ ಗುಣಗಳಲ್ಲಿ ಹೊಂದಿ ಜನಿಸಿದವರಲ್ಲ ಅಥವಾ ಚಿಕ್ಕಂದಿನಿಂದಲೇ ನಾಯಕತ್ವದ ಮಹತ್ವಾಕಾಂಕ್ಷೆಯನ್ನು ಹೊಂದಿದ್ದವರಲ್ಲ. ಗಾಂಧೀಜಿ ಭಾರತ ರಾಷ್ಟ್ರೀಯ ಚಳವಳಿಯ ನಾಯಕರಾಗಿದ್ದು ಅಥವಾ ಲಿಂಕನ್ ಅಮೆರಿಕದ ಅಧ್ಯಕ್ಷ ಪದವಿಯನ್ನು ಬಿಕ್ಕಟ್ಟಿನ ದಶಕವೊಂದರಲ್ಲಿ ಗಳಿಸಿದ್ದು ಐತಿಹಾಸಿಕ ಆಕಸ್ಮಿಕವೆ.
ಸ್ವತಂತ್ರ ಭಾರತದಲ್ಲಿ ಮಹತ್ವಪೂರ್ಣ ಬದಲಾವಣೆಗಳು ನೆಹರೂ ಮತ್ತು ಇಂದಿರಾ ಗಾಂಧಿಯವರಂತಹ ಶಕ್ತಿಶಾಲಿ ನಾಯಕರ ಕಾಲದಲ್ಲಿಯೂ ಆಗಿವೆ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗರಂತಹ ರಾಜಕೀಯವಾಗಿ ದುರ್ಬಲರಾಗಿದ್ದ ನಾಯಕರ ಕಾಲದಲ್ಲಿಯೂ ಆಗಿವೆ. ಬದಲಾವಣೆಗಳು ಬಹುಮಟ್ಟಿಗೆ ಸಂದರ್ಭದ ಅಗತ್ಯ-ಅನಿವಾರ್ಯತೆಗಳಿಂದಲೂ ಆಗುತ್ತವೆ. ಇಂತಹ ಸನ್ನಿವೇಶಗಳಲ್ಲಿ ನಾಯಕರು ನಿಮಿತ್ತವಾಗಿ, ಸಾಧನಗಳಾಗಿ ಕಾಣಬರುತ್ತಾರೆ.
ಮೋದಿಯವರು ನರಸಿಂಹರಾವ್ ಮತ್ತು ಮನಮೋಹನ ಸಿಂಗರ ಸಾಲಿಗೆ ಸೇರುವ ನಾಯಕರಲ್ಲ. ಅವರ ರಾಜಕೀಯ ಪ್ರತಿಭೆ, ಪರಿಶ್ರಮ ಮತ್ತು ಸಾಧನೆಗಳು ಮೋದಿಯವರನ್ನು ನೆಹರೂ ಮತ್ತು ಇಂದಿರಾರಿಗಿದ್ದ ಅಧಿಕಾರ ಹಾಗೂ ಪ್ರಭಾವವನ್ನು ಗಳಿಸಿಕೊಟ್ಟಿವೆ. ಕಳೆದ ಐದು ವರ್ಷಗಳ ನಾಯಕತ್ವ ಮತ್ತು ಆಡಳಿತದ ವೈಖರಿಯನ್ನು ಗಮನಿಸಿದರೆ, ಅವರು ನೆಹರೂರಂತಹ ಉದಾರವಾದಿ ಪ್ರಜಾಸತ್ತಾತ್ಮಕ ನಾಯಕನೆಂದು, ಸಂಸ್ಥೆಗಳನ್ನು ಕಟ್ಟುವ ಉತ್ಸುಕತೆಯುಳ್ಳವರು ಎನಿಸುತ್ತಿಲ್ಲ. ಬದಲಿಗೆ ನೆಹರೂ ಪುತ್ರಿ ಇಂದಿರಾರಂತೆ ಅಧಿಕಾರವನ್ನು ತಮ್ಮಲ್ಲಿಯೆ ಕೇಂದ್ರೀಕರಿಸಿಕೊಳ್ಳುವವರಾಗಿ ಗೋಚರಿಸುತ್ತಾರೆ. ಇಂತಹ ನಾಯಕತ್ವ ಭಾರತಕ್ಕೆ ಅಗತ್ಯ ಎನ್ನುವ ದೊಡ್ಡ ವರ್ಗವೂ ನಮ್ಮಲ್ಲಿದೆ.
ಈ ಹಿನ್ನೆಲೆಯಲ್ಲಿ ನಾಯಕತ್ವ ಯಾವ ಬಗೆಯದಿರಬೇಕು ಎನ್ನುವ ಪ್ರಶ್ನೆ ಸೌಂದರ್ಯದ ಬಗೆಗಿನ ಪ್ರಶ್ನೆಯಂತೆ ಎಂದು ನನಗೆ ಅನ್ನಿಸುತ್ತದೆ. ಸೌಂದರ್ಯ ನೋಡುಗರ ಕಣ್ಣಿನ ಮೇಲೆ ನಿರ್ಭರವಾಗಿರುವಂತೆ ನಾಯಕತ್ವವೂ ಸಹ.

ಮೋದಿಯವರ ಮೇಲಿರುವ ಬಹುಮುಖ್ಯ ಆಪಾದನೆಗಳಲ್ಲಿ ಒಂದು ಹೀಗಿದೆ: ಬಲಪಂಥೀಯ ಗುಂಪುಗಳು ತಮ್ಮ ಎದುರಾಳಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವಾಗ ಮೋದಿಯವರು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳನ್ನು ರಕ್ಷಿಸುವ ತಮ್ಮ ಸಾಂವಿಧಾನಾತ್ಮಕ ಮತ್ತು ರಾಜಕೀಯ ನೈತಿಕ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವುದಿಲ್ಲ. ಬದಲಿಗೆ ಮೌನಕ್ಕೆ ಶರಣಾಗುತ್ತಾರೆ. ಇಲ್ಲದಿದ್ದರೆ ಗಿರಿರಾಜ್ ಕಿಶೋರ್ ಅಥವಾ ಅನಂತಕುಮಾರ್ ಹೆಗಡೆ ಅವರಂತಹ ತಮ್ಮ ಸಹೋದ್ಯೋಗಿಗಳ ಪ್ರಚೋದನಕಾರಿ ಹೇಳಿಕೆಗಳನ್ನು ಅವರು ಸಹಿಸಿಕೊಳ್ಳುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಮೋದಿಯವರು ನೆಹರೂರಂತೆ ಪ್ರಜಾಸತ್ತಾತ್ಮಕ ಸಂಸ್ಕೃತಿಯೊಂದನ್ನು ಪೋಷಿಸುವ ನಾಯಕರಾಗಿ ಕಂಡುಬರುವುದಿಲ್ಲ. ಅವರ ಕಾರ್ಯವೈಖರಿ ಮತ್ತು ನಾಯಕತ್ವಗಳು ನೆಹರೂ ಪುತ್ರಿ ಇಂದಿರಾ ಗಾಂಧಿಯವರನ್ನು ನೆನಪಿಸುತ್ತವೆ. ಶ್ರೀಮತಿ ಗಾಂಧಿಯವರಂತೆ ಮೋದಿಯವರು ಸಹ ಅಧಿಕಾರ ಮತ್ತು ರಾಜಕೀಯ ನಿರ್ಧಾರ ಮಾಡುವ ಪ್ರಕ್ರಿಯೆಗಳನ್ನು ತಮ್ಮ ಕಛೇರಿಯಲ್ಲಿ ಕೇಂದ್ರೀಕರಿಸಿಕೊಂಡಿದ್ದಾರೆ.

ಇಂತಹ ಗಡಸು ನಾಯಕತ್ವ ಶೈಲಿಯೆ ಭಾರತಕ್ಕೆ ಅಗತ್ಯವಿದೆ, ಪ್ರಜಾಸತ್ತಾತ್ಮಕವಾದ ವಿಕೇಂದ್ರೀಕೃತ ನಾಯಕತ್ವವಲ್ಲ ಎನ್ನುವ ದೊಡ್ಡ ವರ್ಗವೂ ಭಾರತದಲ್ಲಿದೆ. ಈ ವರ್ಗವು ಮೋದಿಯವರ ನಾಯಕತ್ವವು ಭಾರತಕ್ಕೆ ಅನಿವಾರ್ಯವೆನ್ನುವ ವಾದವನ್ನು ಮುಂದಿಡುತ್ತದೆ. ಮೋದಿಯವರೂ ಇಂತಹ ನಾಯಕತ್ವ ಶೈಲಿಯನ್ನೆ ಸಾಂಸ್ಥೀಕರಿಸಿದ್ದಾರೆ. ಅವರ ಈ ಶೈಲಿಯ ಕಾರ್ಯವೈಖರಿಯ ಅಪಾಯವೆಂದರೆ ಮೋದಿಯವರದೆ ಆದ ಕಾರ್ಯಸೂಚಿ (ಅಜೆಂಡಾ)ಯನ್ನು ಅನುಷ್ಠಾನಗೊಳಿಸಬಲ್ಲ ಸಮರ್ಥರ ತಂಡವೊಂದನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಇಂತಹದೊಂದು ಕೊರತೆಯನ್ನು ಇಂದು ಭಾರತೀಯ ಜನತಾ ಪಕ್ಷವು ಎದುರಿಸುತ್ತಿದೆ. ಹಾಗಾಗಿ ಮೋದಿ ಸರ್ಕಾರವು ಮಂತ್ರಿಗಳಾಗಿರುವ ಸಮರ್ಥ ಆಡಳಿತಗಾರರ ಅಭಾವ ಎದ್ದುಕಾಣುತ್ತದೆ.

ನಾಯಕನಾಗಿ ಮೋದಿಯವರ ಮೌಲ್ಯಮಾಪನ ಮಾಡಲು ನಮಗಿರುವ ಮಾನದಂಡಗಳು ಈ ಕೆಳಗಿನವು:

ಅವರನ್ನು ಉದಾರ ನಾಯಕನೆಂದು, ಪ್ರಜಾಸತ್ತಾತ್ಮಕ ನಡವಳಿಕೆಗಳನ್ನು ಪ್ರೋತ್ಸಾಹಿಸುವ ನಾಯಕನೆಂದು ಬಣ್ಣಿಸಬಹುದೆ? ತಮ್ಮ ಎದುರಾಳಿಗಳು ತನ್ನೊಡನೆ ಭಿನ್ನಾಭಿಪ್ರಾಯ ಹೊಂದಿರಬಹುದು, ಆದರೆ ಅವರು ಸಹ ದೇಶಪ್ರೇಮಿಗಳು ಎಂದು ಅವರು ನಂಬುತ್ತಾರೆಯೆ? ಇಲ್ಲವೆ ಇಂಗ್ಲಿಷಿನ ನಾಣ್ಣುಡಿಯಂತೆ ‘ನನ್ನ ದಾರಿ ಇಲ್ಲವೆ ಹೆದ್ದಾರಿ’ ಎನ್ನುತ್ತ ತಮ್ಮ ಪಥವೊಂದೆ ಸರಿಯಾದ ದಾರಿಯೆಂದು ವಾದಿಸುತ್ತಾರೆಯೆ? ಆಡಳಿತಗಾರನಾಗಿ ದಿಟ್ಟ ನಿರ್ಧಾರಗಳನ್ನು ಮೋದಿಯವರು ತೆಗೆದುಕೊಂಡಿದ್ದಾರೆ, ನಿಜ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರಲು ಬೇಕಾದ ತಾಳ್ಮೆ, ಆಡಳಿತಾತ್ಮಕ ದಕ್ಷತೆ ಮತ್ತು ತಮ್ಮ ಮಂತ್ರಿಗಳ ತಂಡದ ಮೂಲಕ ಕೆಲಸ ಮಾಡಿಸುವ ಸಾಮಥ್ರ್ಯವನ್ನು ಅವರು ಹೊಂದಿದ್ದಾರೆಯೆ?

2014ರ ಚುನಾವಣೆಯಲ್ಲಿ ಭರವಸೆಗಳ ಮಹಾಪೂರವನ್ನೆ ಮೋದಿಯವರು ಹರಿಸಿದರು. ಅವರ ವಾಕ್ಚಾತುರ್ಯವು ಚುನಾವಣೆಗಳಲ್ಲಿ ಕಾವ್ಯದಂತೆ ಕೆಲಸ ಮಾಡಿತು. ಆದರೆ ಸರ್ಕಾರವನ್ನು ನಡೆಸುವುದು ಗದ್ಯದಲ್ಲಿ ನಡೆಸುವ ಕೆಲಸ. ಇಲ್ಲಿ ಕಾವ್ಯೋಕ್ತಿ ನಡೆಯುವುದಿಲ್ಲ. ಇಂದು ಐದು ವರ್ಷಗಳ ನಂತರ ಮೋದಿಯವರು ಎದುರಿಸುವ ಸವಾಲು ಇದು: ಇಂದು ಮತದಾರನಿಗೆ ಕಳೆದ ಐದು ವರ್ಷಗಳಲ್ಲಿ ಮೋದಿಯವರು ಏನು ಮಾಡಿದರು ಎನ್ನುವ ಸಾಧನೆಗಳ ಪಟ್ಟಿ ದೊರಕುತ್ತದೆ.

ಇಂದಿನ ಮೌಲ್ಯಮಾಪನ ಮಾಡುವಾಗ ಮೋದಿಯವರ ವಾಕ್ಚಾತುರ್ಯಕ್ಕಿಂತಲೂ ಮಿಗಿಲಾದ ಅಂಶವೊಂದಿದೆ. ಅದೇನೆಂದರೆ ಮತದಾರನು ಕೇಳಿಕೊಳ್ಳುವ ಸರಳ ಪ್ರಶ್ನೆಯೊಂದು: ಐದು ವರ್ಷಗಳ ನಂತರ ತನ್ನ ಮತ್ತು ತನ್ನ ಕುಟುಂಬದ ಜೀವನ ಉತ್ತಮವಾಗಿದೆಯೆ, ಹೆಚ್ಚು ಸುಭದ್ರವಾಗಿದೆಯೆ? ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮತದಾರನು ಕಳೆದ ಐದು ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಅವಲೋಕಿಸಿ, ಅವುಗಳಿಂದ ತನ್ನ ಬದುಕಿನಲ್ಲಿ ಆಗಿರುವ ಬದಲಾವಣೆಗಳನ್ನು ವಿಮರ್ಶಿಸುತ್ತಾನೆ. 2014ರ ಚುನಾವಣೆಗಳಿಗಿಂತ ಇಂದಿನ ಪರಿಸ್ಥಿತಿ ಭಿನ್ನವಾದುದು. 2019ರಲ್ಲಿ ಕೇವಲ ಅತಿಶಯೋಕ್ತಿಗಳ ಮೂಲಕ ಮತದಾರನನ್ನು ಸೆಳೆಯುವ ಪ್ರಯತ್ನಗಳು ಸೀಮಿತ ಫಲವನ್ನು ಮಾತ್ರ ನೀಡುತ್ತವೆ.

ಆಡಳಿತಗಾರನಾಗಿ ಮೋದಿ

ಆಡಳಿತಗಾರನಾಗಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅನುಸರಿಸಿದ ಮಾದರಿಯನ್ನೆ ಮುಂದುವರಿಸಿದ್ದಾರೆ. ಅಂದರೆ ಎಲ್ಲ ಅಧಿಕಾರವೂ ಕೇಂದ್ರೀಕೃತವಾಗಿರುವ ಮತ್ತು ಎಲ್ಲ ನಿರ್ಧಾರಗಳನ್ನೂ ಮಾಡುವ ಪ್ರಧಾನಮಂತ್ರಿಗಳ ಕಾರ್ಯಾಲಯವೆ ಆಡಳಿತ ನರಮಂಡಳವಾಗಿದೆ. ಈ ಮಾದರಿ ಮಧ್ಯಮ ಗಾತ್ರದ ರಾಜ್ಯವೊಂದರಲ್ಲಿ ಯಶಸ್ವಿಯಾಗಬಹುದು. ಆದರೆ ಭಾರತದಂತಹ ದೊಡ್ಡ ಮತ್ತು ಸಂಕೀರ್ಣ ಪ್ರಜಾಪ್ರಭುತ್ವದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಕಷ್ಟ. ಪ್ರಧಾನಮಂತ್ರಿಯೊಬ್ಬರು ತಮ್ಮ ಸರ್ಕಾರದ ಆದ್ಯತೆಗಳನ್ನು ಸಿದ್ಧಪಡಿಸಿ, ದೇಶದ ಮುಂದಿಡಬಹುದು. ಆದರೆ ಈ ಆದ್ಯತೆಗಳ ವಿವರಗಳನ್ನು, ಅನುಷ್ಠಾನಗೊಳ್ಳುವ ಯೋಜನೆಗಳ ಮಾದರಿಗಳನ್ನು ಸಚಿವಾಲಯಗಳಲ್ಲಿ ತಯಾರಿಸಬೇಕು ಮತ್ತು ಅವುಗಳ ಮೂಲಕವೆ ಜಾರಿಗೊಳ್ಳಬೇಕು. ಆದರೆ ಮೋದಿಯವರ ಸರ್ಕಾರದಲ್ಲಿ ಸಣ್ಣಪುಟ್ಟ ನಿರ್ಧಾರಗಳನ್ನು ಸಹ ಪ್ರಧಾನಿಗಳ ಕಾರ್ಯಾಲಯದಲ್ಲಿಯೆ ತೆಗೆದುಕೊಳ್ಳಲಾಗುತ್ತಿದೆ ಎನ್ನುವ ಮಾತು ದೆಹಲಿಯಲ್ಲಿ ಕೇಳಿಬರುತ್ತದೆ. ಕೆಲವೆ ಸಚಿವರನ್ನು ಬಿಟ್ಟರೆ, ಮಿಕ್ಕವರು ಲೆಕ್ಕಕ್ಕಿದ್ದಾರೆ ಹೊರತು, ಆಟಕ್ಕಿಲ್ಲ. ಇದರಿಂದ ಮೋದಿ ಸರ್ಕಾರದ ಕಾರ್ಯಸಾಧನೆಗಳು, ದಕ್ಷತೆಗಳು ಕುಸಿದಿವೆ ಎಂದರೆ ಉತ್ಪ್ರೇಕ್ಷೆಯಲ್ಲ.

ಇದಕ್ಕೆ ಸರಿಯಾಗುವಂತೆ ಮೇಲೆಯೂ ಗುರುತಿಸಿದಂತೆ ಭಾರತೀಯ ಜನತಾ ಪಕ್ಷದಲ್ಲಿ ಆಡಳಿತದ ಅನುಭವವಿರುವ, ವಿಭಿನ್ನ ಹಿನ್ನೆಲೆಯ ಉತ್ತಮ ಆಡಳಿತಗಾರರು ಇದ್ದಾರೆ ಎಂದು ಹೇಳುವುದು ಕಷ್ಟ. ಈ ಅಲಭ್ಯತೆಯನ್ನು ಎದುರಿಸಿ, ಸಮರ್ಥ ಆಡಳಿತಗಾರರ ತಂಡವನ್ನು ಮೋದಿಯವರು ವ್ಯವಸ್ಥಿತವಾಗಿ ರೂಪಿಸಿದ್ದಾರೆ ಎನ್ನಲಾಗುತ್ತಿಲ್ಲ. ಧರ್ಮೇಂದ್ರ ಪ್ರಧಾನ್, ಪೀಯೂಶ್ ಗೋಯಲ್, ನಿರ್ಮಲಾ ಸೀತಾರಾಮನ್ ಮತ್ತು ಪ್ರಕಾಶ್ ಜಾವಡೇಕರ್ ಮೊದಲಾದವರನ್ನು ಮುಂಚೂಣಿಗೆ ಮೋದಿಯವರು ತಂದಿದ್ದರೂ ಕೇಂದ್ರ ಮಂತ್ರಿಮಂಡಳಕ್ಕೆ ಇಂತಹವರು ನಲವತ್ತು-ಐವತ್ತರ ಸಂಖ್ಯೆಯಲ್ಲಿ ಬೇಕು.

ಗ್ರಾಮೀಣ ಅಸಂತುಷ್ಟಿ ಭಾರತೀಯ ಜನತಾ ಪಕ್ಷವು 2019ರಲ್ಲಿ ದೇಶಾದ್ಯಂತ ಎದುರಿಸುತ್ತಿರುವ ಅತಿಮುಖ್ಯ ಸವಾಲುಗಳಲ್ಲಿ ಒಂದು. ಇದನ್ನು ವ್ಯವಸ್ಥಿತವಾಗಿ ಎದುರಿಸುವ ಪ್ರಯತ್ನ ಮೋದಿ ಸರ್ಕಾರದಿಂದ ಆಗಿದೆ ಎನ್ನಲಾಗುತ್ತಿಲ್ಲ.

ಹೀಗಾಗಿಯೆ ಮೋದಿ ಸರ್ಕಾರದ ಕೃಷಿ ಸಚಿವರು ಯಾರು ಎಂದರೆ ಥಟ್ ಎಂದು ಯಾರಿಗೂ ನೆನಪಾಗುವುದಿಲ್ಲ. ಗ್ರಾಮೀಣ ಅಸಂತುಷ್ಟಿ ಭಾರತೀಯ ಜನತಾ ಪಕ್ಷವು 2019ರಲ್ಲಿ ದೇಶಾದ್ಯಂತ ಎದುರಿಸುತ್ತಿರುವ ಅತಿಮುಖ್ಯ ಸವಾಲುಗಳಲ್ಲಿ ಒಂದು. ಇದನ್ನು ವ್ಯವಸ್ಥಿತವಾಗಿ ಎದುರಿಸುವ ಪ್ರಯತ್ನ ಮೋದಿ ಸರ್ಕಾರದಿಂದ ಆಗಿದೆ ಎನ್ನಲಾಗುತ್ತಿಲ್ಲ. ರೈತರ ಆದಾಯವನ್ನು ಎರಡರಷ್ಟು ಹೆಚ್ಚಿಸುವುದು ತಮ್ಮ ಆದ್ಯತೆಯೆಂದು ಸ್ವತಃ ಮೋದಿಯವರೆ ಹೇಳಿದ್ದಾರೆ.

ಆದ್ಯತೆಗಳನ್ನು ಗುರುತಿಸುವಲ್ಲಿ ಮತ್ತು ಯೋಜನೆಗಳನ್ನು ರೂಪಿಸುವಲ್ಲಿ ನರೇಂದ್ರ ಮೋದಿಯವರು ಪರಿಣತರು. ಇದಕ್ಕೆ ಉದಾಹರಣೆಯಾಗಿ ಆಯುಷ್ಮಾನ್ ಭಾರತದಂತಹ ಸಾರ್ವತ್ರಿಕ ಆರೋಗ್ಯ ಸೇವೆ ಒದಗಿಸುವ ಯೋಜನೆಯನ್ನು ಗಮನಿಸಿ. ಈ ಯೋಜನೆಯ ಆಶಯ ಹಿರಿದಾದುದು ಮತ್ತು ಕನಿಷ್ಟ ಒಂದು ಲಕ್ಷ ಕೋಟಿ ರೂಪಾಯಿಗಳು ಬೇಕಾಗುತ್ತದೆ. ಆದರೆ ಇದಕ್ಕೆ ಒದಗಿಸಿರುವ ಸಂಪನ್ಮೂಲಗಳು ಕೇವಲ 6,400 ಕೋಟಿ ರೂಪಾಯಿಗಳು. ಆಶಯ, ಗುರಿ ಮತ್ತು ಸಂಪನ್ಮೂಲಗಳು ಇವುಗಳನ್ನು ಅವಲೋಕಿಸಿದಾಗ, ಈ ಯೋಜನೆಯು ಏನನ್ನು ಸಾಧಿಸಬಹುದು ಎನ್ನುವ ಅನುಮಾನ ಮೂಡತೊಡಗುತ್ತದೆ.

ಇಂತಹುದೆ ಗಂಭೀರ ಪ್ರಶ್ನೆಗಳನ್ನು ಮೋದಿ ಸರ್ಕಾರದ ಕಾರ್ಯಸೂಚಿಗೆ ಒಡ್ಡಿದಾಗ, ಈ ಸರ್ಕಾರವು ಏನನ್ನು ಸಾಧಿಸಿದೆ ಎನ್ನುವ ಪ್ರಶ್ನೆ ಮೂಡುತ್ತದೆ. ಉದಾಹರಣೆಗೆ, ಜಿ.ಎಸ್.ಟಿ. ಅನುಷ್ಠಾನ ಸರಿಯಾಗಿ ಆಗಲಿಲ್ಲ ಮತ್ತು ಇದರಿಂದ ಆರ್ಥಿಕ ಅಭಿವೃದ್ಧಿ ಕುಂಠಿತವಾಯಿತು ಎನ್ನುವ ಗಂಭೀರವಾದ ಮತ್ತು ಆಧಾರಸಹಿತವಾದ ಆರೋಪವು ಇದೆ. ಕಾಶ್ಮೀರದಲ್ಲಿ ಭಾಜಪವೂ ಭಾಗವಹಿಸಿದ್ದ ಸರ್ಕಾರವಿದ್ದರೂ, ಐದು ವರ್ಷಗಳ ನಂತರ ಅಲ್ಲಿನ ಪರಿಸ್ಥಿತಿ ಸುಧಾರಿಸಿದೆ ಎಂದು ಮೋದಿಯವರು ವಿಶ್ವಾಸದಿಂದ ಹೇಳಲಾಗುವುದಿಲ್ಲ.

ಇಂತಹ ಉದಾಹರಣೆಗಳನ್ನು ವಿಶ್ಲೇಷಿಸಿದಾಗ, ನಮ್ಮೊಳಗೆ ಮೂಡುವ ಅನುಮಾನವಿದು: ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಬೇಕಾಗಿರುವ ನಿಧಾನವಾದ, ತಾಳ್ಮೆಯ ಆಡಳಿತ ವ್ಯವಸ್ಥೆಯನ್ನು ಕಟ್ಟುವ ವ್ಯವಧಾನ ಮೋದಿಯವರಿಗಿದೆಯೆ? ಮೇಲೆ ಪ್ರಸ್ತಾಪಿತವಾದ ಸ್ವಚ್ಛ ಭಾರತದಿಂದ ಆಯುಷ್ಮಾನ್ ಭಾರತದ ತನಕ ಎಲ್ಲೆಡೆಯೂ ಒಳ್ಳೆಯ ಆಶಯಗಳು, ಒಳ್ಳೆಯ ಹಣೆಪಟ್ಟಿಗಳಿರುವ ಯೋಜನೆಗಳು ಕಾಣಬರುತ್ತವೆ. ಆದರೆ ಅವು ಹೆಸರಿನಲ್ಲಿ ಮಾತ್ರ ಇರುತ್ತವೆಯೆ ಅಥವಾ ಅನುಷ್ಠಾನಗೊಂಡು ದೇಶದ ಸಾಮಾನ್ಯಜನರ ಬದುಕಿನಲ್ಲಿ ಬದಲಾವಣೆಯನ್ನು ತರುತ್ತಿವೆಯೆ?

ಮೋದಿಯವರ ಆಡಳಿತ ವೈಖರಿಯು ಸ್ಪಷ್ಟವಾಗುವುದು ಅವರ ವಿದೇಶಾಂಗ ನೀತಿಯನ್ನು ಗಮನಿಸಿದಾಗ. ಅಪಾರ ಅನುಭವವುಳ್ಳ ಸುಷ್ಮಾ ಸ್ವರಾಜರಂತಹ ಹಿರಿಯ ನಾಯಕಿ ವಿದೇಶಾಂಗ ಸಚಿವರಾಗಿದ್ದರೂ, ಮೋದಿಯವರೆ ರಾಜತಾಂತ್ರಿಕ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರು ನಲವತ್ತೊಂದು ಬಾರಿ ವಿದೇಶಯಾತ್ರೆಯನ್ನು ಮಾಡಿ, 59 ದೇಶಗಳಿಗೆ ಭೇಟಿ ನೀಡಿದ್ದಾರೆ. ಚೀನಾ ಮತ್ತು ಅಮೆರಿಕಾಗಳಿಗೆ ತಲಾ ಐದು ಬಾರಿ ಭೇಟಿ ಕೊಟ್ಟಿದ್ದಾರೆ. ಹೀಗೆ ವೈಯಕ್ತಿಕ ನೆಲೆಯಲ್ಲಿಯೆ ರಾಜತಾಂತ್ರಿಕ ವ್ಯವಹಾರಗಳನ್ನು ನಿರ್ವಹಿಸುವಾಗ ಮತ್ತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ, ಇದಕ್ಕೆ ಅಗತ್ಯವಿರುವ ತಯಾರಿಯನ್ನು ಮಾಡುವುದು ಕಷ್ಟ ಎನ್ನಲಾಗುತ್ತದೆ. ಇಂತಹ ಹಿನ್ನೆಲೆಯಲ್ಲಿ ವಿದೇಶಿ ನಾಯಕರು ಸಹ ಭಾರತವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎನ್ನುವ ಮಾತನ್ನು ವಿಶ್ಲೇಷಕರು ಮುಂದಿಡುತ್ತಿದ್ದಾರೆ.

ಮೋದಿಕೇಂದ್ರಿತ ವಿದೇಶಾಂಗ ನೀತಿ ನಿರೂಪಣಾ ಶೈಲಿಯು ಅವರ ಅವಧಿಯ ಅತಿದೊಡ್ಡ ವಿವಾದವಾದ ರಪೈಲ್ ಯುದ್ಧವಿಮಾನ ಖರೀದಿ ಸಮಸ್ಯೆಯನ್ನು ಸೃಷ್ಟಿಸಿದೆ. ಹಲವಾರು ವಿಶ್ವಾಸಾರ್ಹ ದೆಹಲಿ ಮೂಲದ ವಿಶ್ಲೇಷಕರು ಈ ವಿವಾದದ ಮೂಲದಲ್ಲಿರುವುದು ಭ್ರಷ್ಟಾಚಾರಕ್ಕಿಂತ ಮೋದಿ ಕೇಂದ್ರಿತ ವಿದೇಶಾಂಗ ನೀತಿ ಎನ್ನುತ್ತಾರೆ.

ಪ್ರಧಾನಿಯವರ ಸಮರ್ಥಕರು ಭಾರತಕ್ಕೆ ಹಿಂದೆಂದೂ ಇಲ್ಲದಷ್ಟು ಗೌರವ, ಮನ್ನಣೆಗಳು ಜಾಗತಿಕ ವೇದಿಕೆಗಳಲ್ಲಿ ದೊರಕುತ್ತಿದೆ ಮತ್ತು ಇದಕ್ಕೆ %A