ಯಂತ್ರಯುಗದಲ್ಲಿ ಮನುಷ್ಯನೇ ಅಪ್ರಸ್ತುತ!

ಇನ್ನು ಮುಂದೆ ಮನುಷ್ಯರಿಗಾಗಿ ಉದ್ಯೋಗ ಸೃಷ್ಟಿಯಾಗುವುದಿಲ್ಲ; ತದ್ವಿರುದ್ಧವಾಗಿ, ಯಂತ್ರಗಳಿಗಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅಂದರೆ, ಯಂತ್ರಗಳನ್ನು ಸೃಷ್ಟಿಮಾಡಿ ನಾವು ನಿರುದ್ಯೋಗಿಗಳಾಗುತ್ತಿದ್ದೇವೆ!

ಪಾರ್ಲೆ-ಜಿ ಕಂಪನಿ ಹತ್ತು ಸಾವಿರ ನೌಕರರನ್ನು ವಜಾಗೊಳಿಸಿದ ಬೆನ್ನಲ್ಲೇ, ಪ್ರವಾಹದ್ವಾರ ತೆರೆದಂತೆ, ಒಂದೊಂದೇ ಕಂಪನಿಗಳು ಆರ್ಥಿಕ ಹಿನ್ನಡೆಯ ನೆವದಲ್ಲಿ ನೌಕರರನ್ನು ವಜಾಗೊಳಿಸುತ್ತಿದ್ದಾರೆ. ಇದರೊಂದಿಗೆ, ದೇಶದ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ವಿವಿಧ ವೇದಿಕೆಗಳಲ್ಲಿ ಸದ್ಯದ ಚರ್ಚಾವಿಷಯವಾಗಿದೆ. ಆರಂಭದಲ್ಲಿ ಇದನ್ನು ಒಪ್ಪಿಕೊಳ್ಳದ ‘ಅಚ್ಛೇ ದಿನ್’ ಕನಸು ಕೊಟ್ಟ ನಮ್ಮ ಕೇಂದ್ರ ಸರಕಾರ ಕೊನೆಗೂ ಎಚ್ಚೆತ್ತು, ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾಯಿಲೆಗೆ ಬ್ಯಾಂಡೇಜ್ ಮಾಡಿದಂತೆ ತೇಪೆಹಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದು, ಆದರದು ಸಂಪೂರ್ಣ ಫಲಕೊಡುವ ಸೂಚನೆ ಕಾಣಿಸುತ್ತಿಲ್ಲ. ಯಾಕೆಂದರೆ, ಪರಿಸ್ಥಿತಿ ತುಂಬಾ ಗಂಭೀರವಾಗಿದೆ.

ಸದ್ಯಕ್ಕೆ, ಮಂಜುಗಡ್ಡೆಯ ತುದಿಯಷ್ಟೇ ಗೋಚರಿಸುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ, ಬೃಹತ್ ಉದ್ಯಮಗಳ ಕುಸಿತ ಮತ್ತದರ ಫಲವಾದ ನಿರುದ್ಯೋಗ ಸಮಸ್ಯೆಯ ವಿಶ್ವರೂಪ ದರ್ಶನವಾಗಲಿದೆ. ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ, ಯಾವುದೇ ಸರಕಾರವಿದ್ದರೂ, (ಎಡಪಂಥೀಯ ಸೇರಿ) ಬೃಹತ್ ಉದ್ಯಮಗಳನ್ನು ಪ್ರೋತ್ಸಾಹಿಸಿಯೇ, ಅವುಗಳ ನೆರಳಲ್ಲೇ ಆಳುತ್ತವೆ ಮತ್ತು ಅವುಗಳನ್ನು ಪೋಷಿಸಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುತ್ತವೆ. ಇದು ಬರಿ ನಮ್ಮ ದೇಶದ ಸಮಸ್ಯೆ ಮಾತ್ರವಲ್ಲ, ಎಲ್ಲ ಅಭಿವೃದ್ಧಿ ಹೊಂದಿದ, ಅಭಿವೃದ್ಧಿಯ ಕನಸು ಕಾಣುವ ದೇಶಗಳ, ಒಂದು ಸಾರ್ವತ್ರಿಕ ಸಮಸ್ಯೆ. ಪ್ರಭಾವಿ ಕಾರ್ಪೊರೇಟ್ ವ್ಯವಸ್ಥೆಯ ಹಿಡಿತದಲ್ಲಿರುವ ಎಲ್ಲ ಸರಕಾರಗಳು, ತಮ್ಮ ನೀತಿಗಳನ್ನು ಅವುಗಳಿಗೆ ಅನುಕೂಲವಾಗುವಂತೆ ಜಾರಿಗೆ ತರುತ್ತವೆ. ಇದರಿಂದಾಗಿ ಮುಂದಿನ ಪೀಳಿಗೆ ಹಾಗು ಪರಿಸರ ಭಾರಿ ಬೆಲೆ ತೆರಬೇಕಾಗುತ್ತದೆ. ಪ್ರಸ್ತುತ ಮನುಷ್ಯನ ಈ ಸ್ಥಿತಿ, ತಾನೇ ತೋಡಿದ ಖೆಡ್ಡಾದಲ್ಲಿ ಬಿದ್ದಂತಾಗಿದೆ.

ನಮ್ಮೆಲ್ಲಾ ದೈಹಿಕ ಮತ್ತು ಮಾನಸಿಕ ಅಗತ್ಯಗಳ ಪೂರೈಸುತ್ತ, ಸಾಂಗತ್ಯ ನೀಡುತ್ತಾ ಯಂತ್ರಗಳು ನಮ್ಮನ್ನು ಸುತ್ತುವರಿದು ಮನುಷ್ಯರಿಂದ ದೂರಸರಿಸಿ ದ್ವೀಪಗಳನ್ನಾಗಿ ಪರಿವರ್ತಿಸಿವೆ. ನಿಜ ಅರ್ಥದಲ್ಲಿ ಯಂತ್ರಗಳು ನಮ್ಮ ಜೀವನದ ರಿಮೋಟ್ ಕಂಟ್ರೋಲ್.

ಇಂತಹ ಸಂದರ್ಭದಲ್ಲಿ, ವಿವಿಧ ಸರಕಾರಗಳ ಆರ್ಥಿಕ ನೀತಿಗಳ ವಿಮರ್ಶೆಗಷ್ಟೇ ನಮ್ಮ ಪ್ರತಿಕ್ರಿಯೆ ಸೀಮಿತಗೊಳಿಸದೆ ಸೂಕ್ಷ್ಮವಾಗಿ ಪರಿಸ್ಥಿತಿಯ ಪರ್ಯಾವಲೋಕನ ಮಾಡುವ ಅಗತ್ಯವಿದೆ. ಇದು ಪ್ರಕೃತಿಯ ಮೇಲೆ ಹಿಡಿತ ಸಾಧಿಸಿದೆ ಎನ್ನುವ ನಾಗರಿಕ ಮನುಷ್ಯನ ಅಹಂಕಾರದ ಸೋಲು. ಬೇರೆಲ್ಲಾ ಜೀವಿಗಳನ್ನು ಸೋಲಿಸಲು ಮತ್ತು ಪ್ರಕೃತಿಯ ಮೇಲೆ ಏಕಸ್ವಾಮ್ಯ ಗಳಿಸಲು, ತನ್ನ ಅದ್ಭುತ ಬುದ್ಧಿಶಕ್ತಿಯಿಂದ ಇನ್ನೂ ಸೃಷ್ಟಿಸುತ್ತಲೇ ಇರುವ ಯಂತ್ರಗಳಿಂದಾದ ಸೋಲು. ನಮ್ಮೆಲ್ಲಾ ಬೃಹತ್ ಉದ್ಯಮಗಳು ಯಂತ್ರಮಯವಾಗಿವೆ ಮತ್ತು ಹೊಸ ಅತ್ಯಾಧುನಿಕ ಯಂತ್ರಗಳ ಅನ್ವೇಷಣೆಯನ್ನು ಪೋಷಿಸುತ್ತವೆ. ಇನ್ನು ಮುಂದೆ ಮನುಷ್ಯರಿಗಾಗಿ ಉದ್ಯೋಗ ಸೃಷ್ಟಿಯಾಗುವುದಿಲ್ಲ; ತದ್ವಿರುದ್ಧವಾಗಿ, ಯಂತ್ರಗಳಿಗಾಗಿ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅಂದರೆ, ಯಂತ್ರಗಳನ್ನು ಸೃಷ್ಟಿಮಾಡಿ ನಾವು ನಿರುದ್ಯೋಗಿಗಳಾಗುತ್ತಿದ್ದೇವೆ. ಪ್ರಸ್ತುತ ಸ್ಥಿತಿ, ಪುರಾಣದ ಭಸ್ಮಾಸುರ ತನ್ನ ತಲೆಮೇಲೆ ತಾನೇ ಕೈಇಟ್ಟು ಭಸ್ಮವಾದ ಕಥೆ ನೆನಪಿಸುತ್ತದೆ.

ವರ್ತಮಾನದ ಬೃಹತ್ ಉದ್ಯಮಗಳ ಕುಸಿತಕ್ಕೆ, ಮತ್ತದಕ್ಕೆ ಪೂರಕವಾಗಿ ಜನ ಉದ್ಯೋಗ ಕಳೆದುಕೊಳ್ಳುತ್ತಿರುವುದನ್ನು ಅರ್ಥೈಸಲು, ತಂತ್ರಜ್ಞಾನ ಯುಗದ ಪುನರ್ವಿಮರ್ಶೆಯಾಗಬೇಕಾಗಿದೆ. ಅತಿಯಾದ ಯಾಂತ್ರಿಕತೆಯ ಆರಂಭಿಕ ಪುಳಕ ಅನುಭವಿಸಿ ಮೈಮರೆತ ಮನುಷ್ಯನಿಗೆ, ನಿಜವಾದ ಸವಾಲು ಏದುರಾಗುತ್ತಿರುವುದು ಇವಾಗ. ಮನುಷ್ಯ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡಲು ಯಂತ್ರಗಳ ಸೃಷ್ಟಿಸಿಯಾಯಿತು. ಇನ್ನು ಮನುಷ್ಯನ ಅಗತ್ಯವಾದರೂ ಏನಿದೆ?

ಮನುಷ್ಯ ಸೃಷ್ಟಿಯಾದ ಯಾಂತ್ರೀಕೃತ ಬೃಹತ್ ಉದ್ಯಮದ ಪರಿಣಾಮವಾಗಿ, ನಾವು ಕೆಲಸ ಕಳೆದುಕೊಳ್ಳುತ್ತಿದ್ದರೂ, ಪ್ರಾಕೃತಿಕ ವಿಕೋಪಗಳನ್ನು ಅನುಭವಿಸುತ್ತಿದ್ದರೂ, ಸೋಲೊಪ್ಪಿಕೊಳ್ಳಲು ಮತ್ತು ತಿದ್ದಿಕೊಳ್ಳಲು ನಾವಿನ್ನೂ ಸಿದ್ಧರಾಗಿಲ್ಲ. ಆಯಾ ಉದ್ಯಮದಲ್ಲಿ ನಂಬರ್ ಒನ್ ಆಗಬೇಕೆನ್ನುವ ಹಣಾಹಣಿಯಲ್ಲಿ, ನಿಷ್ಟುರ ಸ್ಪರ್ಧೆಯ ಜಂಜಾಟದಲ್ಲಿ, ಸ್ಪರ್ಧಿಗಳ ಹಿಮ್ಮೆಟ್ಟಿಸುವ ತರಾತುರಿಯಲ್ಲಿ, ದಿಢೀರ್ ಇನ್ನೊಬ್ಬ ‘ಅಂಬಾನಿ’ ಆಗಬೇಕೆಂಬ ಹುಚ್ಚಿನಲ್ಲಿ, ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ದುರುಪಯೋಗಿಸಿಕೊಂಡಿದ್ದೇವೆ. ಈ ‘ಅಭಿವೃದ್ಧಿ’ ಎನ್ನುವ ಕ್ರೌರ್ಯದ ಶರವೇಗದ ದಾರಿಯ ತುದಿಯಂಚಿನಲ್ಲಿರುವ ನಮ್ಮ ಮುಂದಿನ ದಾರಿ, ಮರಳಿ ಮಣ್ಣಿಗೆ ಮಾತ್ರ. ಇಲ್ಲಿ, ಆಂಗ್ಲ ಕವಿ ಡಿ.ಹೆಚ್.ಲಾರೆನ್ಸ್, ತಂತ್ರಜ್ಞಾನ ಜಗತ್ತು ಶೈಶವಾವಸ್ಥೆಯಲ್ಲಿರುವಾಗ ಬರೆದ ‘ವರ್ಕ್’ ಕವನ ಸಾಲುಗಳಲ್ಲಿರುವ, ‘ಯಂತ್ರಗಳನ್ನು ನಾಶಮಾಡೋಣ, ಪ್ರಕೃತಿಯತ್ತ ಮರಳೋಣ’ ಎನ್ನುವ ಸಂದೇಶ ಹೆಚ್ಚು ಸಾಂದರ್ಭಿಕ ಎನಿಸುತ್ತದೆ.

ತಂತ್ರಜ್ಞಾನದಿಂದ ಭೂಮಿಯನ್ನು ವಶಪಡಿಸಿ, ಕೇವಲ ಮನುಷ್ಯಯೋಗ್ಯ ಪ್ರಪಂಚ ನಿರ್ಮಿಸಿದ್ದೇವೆ. ಬಹಳ ಹಿಂದೆಯೇ ಚೀಫ್ ಸಿಯಾಟಲ್ ಹೇಳಿದಂತೆ, ಮನುಷ್ಯ ಪ್ರಕೃತಿಯ ಒಂದು ಭಾಗವಷ್ಟೇ, ಮಾಲೀಕನಲ್ಲ.

ಯಂತ್ರಯುಗದ ಆರಂಭದ ದಿನಗಳಲ್ಲಿ, ಸಿ.ಇ.ಎಂ. ಜೋಡ್ ಬರೆದ ಪ್ರಬಂಧ ‘ಅವರ್ ಓನ್ ಸಿವಿಲೈಝಷನ್’ನಲ್ಲಿ, ‘ಮಾನವಸೃಷ್ಟಿಯಾದ ಬುದ್ಧಿವಂತ ಯಂತ್ರಗಳು ಮನುಷ್ಯ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಮಾಡುವ ಈ ಕಾಲದಲ್ಲಿ, ಮನುಷ್ಯನಿಗೆ ಉಳಿದಿರುವ ಕೆಲಸ, ಬರೀ ಇನ್ನಷ್ಟು ಯಂತ್ರಗಳನ್ನು ಮಾಡುವುದೇ?’ ಎಂದು ಚರ್ಚಿಸುತ್ತಾನೆ. ಜಗತ್ತಿನ ಸೃಷ್ಟಿಯ ವಿಸ್ಮಯ, ತರ್ಕ, ಸಮನ್ವಯವನ್ನು ಅರಿಯದೆ ಮಾಡುವ ಯಾಂತ್ರೀಕರಣಯುಕ್ತ ‘ಅಭಿವೃದ್ಧಿ’ ವಿವೇಚನಾರಹಿತವಾದುದು. ತಂತ್ರಜ್ಞಾನದಿಂದ ಭೂಮಿಯನ್ನು ವಶಪಡಿಸಿ, ಕೇವಲ ಮನುಷ್ಯಯೋಗ್ಯ ಪ್ರಪಂಚ ನಿರ್ಮಿಸಿದ್ದೇವೆ. ಬಹಳ ಹಿಂದೆಯೇ ಚೀಫ್ ಸಿಯಾಟಲ್ ಹೇಳಿದಂತೆ, ಮನುಷ್ಯ ಪ್ರಕೃತಿಯ ಒಂದು ಭಾಗವಷ್ಟೇ, ಮಾಲೀಕನಲ್ಲ. ಯಂತ್ರಗಳ ಪ್ರಾಬಲ್ಯದಿಂದ, ಉಳಿದೆಲ್ಲ ಜೀವಿಗಳ ವಿನಾಶದ ಅಂಚಿಗೆ ತಳ್ಳಿದ ಮನುಷ್ಯ, ಮಾಲೀಕನಾಗಿದ್ದು ಮಾತ್ರ ಬರಿ ಬಂಜರುಭೂಮಿಗೆ.

ನಮ್ಮ ಯಾಂತ್ರಿಕ ಜಗತ್ತಿನ ಅತ್ಯಂತ ದೊಡ್ಡ ಚೋದ್ಯವೆಂದರೆ, ಜನಸಂಖ್ಯೆ ಜಾಸ್ತಿಯಾಗುತ್ತಿದೆ, ಆದರೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಮಾತ್ರವಲ್ಲದೆ, ನಾವು ಇನ್ನಷ್ಟು ಅತ್ಯಾಧುನಿಕ ಯಂತ್ರಗಳನ್ನು ಸೃಷ್ಟಿಸಿ ನಮ್ಮ ಕೆಲಸವನ್ನು ಅವುಗಳಿಂದ ಮಾಡಿಸಿ, ನಿರುದ್ಯೋಗಿಗಳನ್ನು ಹುಟ್ಟುಹಾಕುತ್ತಿದ್ದೇವೆ. ನಮ್ಮ ವೈಜ್ಞಾನಿಕ ಆವಿಷ್ಕಾರಗಳು ಹೇಗಿವೆಯೆಂದರೆ, ದೊರೆ ಈಡಿಪಸ್, ತನ್ನ ಹುಟ್ಟಿನ ಮೂಲ ಹುಡುಕುತ್ತ ಹುಡುಕುತ್ತ, ತನ್ನ ಅಂತ್ಯವನ್ನು ತಾನೇ ಕಂಡುಕೊಂಡ ಹಾಗೆ.

ಅಭಿವೃದ್ಧಿಯ ಉತ್ತುಂಗ ಶಿಖರದಲ್ಲಿರುವ, ತಂತ್ರಜ್ಞಾನಕ್ಕೆ ಸಂಪೂರ್ಣ ಶರಣಾಗಿರುವ ಪಾಶ್ಚಾತ್ಯ ದೇಶಗಳಿಗೆ ಈ ಸಮಸ್ಯೆ ಇಲ್ಲವೇ? ಅಲ್ಲಿ, ಮಾನವ ಸಂಪನ್ಮೂಲದ ಕೊರತೆ ನೀಗಿಸಲು ಯಂತ್ರಗಳ ಸಹಾಯ ಬೇಕಿದೆ. ಅದಕ್ಕೆ ಪೂರಕವಾಗಿ ಜನಸಂಖ್ಯೆ ಹೆಚ್ಚಿಸಲು, ದಂಪತಿಗಳಿಗೆ ಆಕರ್ಷಕ ಸರಕಾರೀ ಯೋಜನೆಗಳಿವೆ. ಆದರೆ ನಮ್ಮ ದೇಶದಲ್ಲಿ ಅಸಂಖ್ಯ ಜನರಿಗೆ ಉದ್ಯೋಗ ಖಾತ್ರಿಮಾಡುವುದೇ ದೊಡ್ಡ ಸಮಸ್ಯೆ.

ಒಟ್ಟಾರೆ, ನಮ್ಮೆಲ್ಲಾ ದೈಹಿಕ ಮತ್ತು ಮಾನಸಿಕ ಅಗತ್ಯಗಳ ಪೂರೈಸುತ್ತ, ಸಾಂಗತ್ಯ ನೀಡುತ್ತಾ ಯಂತ್ರಗಳು ನಮ್ಮನ್ನು ಸುತ್ತುವರಿದು ಮನುಷ್ಯರಿಂದ ದೂರಸರಿಸಿ ದ್ವೀಪಗಳನ್ನಾಗಿ ಪರಿವರ್ತಿಸಿವೆ. ನಿಜ ಅರ್ಥದಲ್ಲಿ ಯಂತ್ರಗಳು ನಮ್ಮ ಜೀವನದ ರಿಮೋಟ್ ಕಂಟ್ರೋಲ್.

ಯಂತ್ರಗಳು ನಮ್ಮ ಜೀವನವನ್ನು ಹೇಗೆ ಹತೋಟಿಯಲ್ಲಿ ಇಟ್ಟುಕೊಂಡಿವೆಯೆನ್ನುವುದಕ್ಕೆ ದಿನನಿತ್ಯದ ಬದುಕಿನಲ್ಲಿ ಹಲವಾರು ಸಾಕ್ಷ್ಯಗಳು ಸಿಗುತ್ತವೆ; ನಮ್ಮ ಸ್ವಂತ ಬಳಕೆಗೆ ಇಟ್ಟುಕೊಂಡಿರುವ ಯಾವುದೇ ಯಂತ್ರಗಳು ಕಳೆದುಹೋದರೆ ಅಥವಾ ಕೆಟ್ಟುಹೋದರೆ ನಮ್ಮ ಬದುಕೇ ನಿಂತುಹೋದಂತೆ ಭಾಸವಾಗುತ್ತದೆ. ನಮಗೆ ಆಫೀಸಿನಲ್ಲಿ ಬಾಸ್ ಗಿಂತ ಭಯವಿರುವುದು ಬಯೋಮೆಟ್ರಿಕ್ ಯಂತ್ರ ಮತ್ತು ಸಿಸಿಟಿವಿ ಮೇಲೆ.

ಹೆತ್ತವರು ಮೊಬೈಲ್ ಕಸಿದುಕೊಂಡು ಓದು ಎಂದು ಬುದ್ಧಿವಾದ ಹೇಳಿದ್ದಕ್ಕೆ ಮಕ್ಕಳು ಆತ್ಮಹತ್ಯೆಮಾಡಿಕೊಂಡ ಅಥವಾ ಹೆತ್ತವರನ್ನೇ ಕೊಂದ ಘಟನೆಗಳು ವರದಿಯಾಗುತ್ತಲೇ ಇವೆ. ಇತ್ತೀಚೆಗೆ ಅನಿಮೇಶನ್ ಸಿನಿಮಾಗಳು ಹೆಚ್ಚು ದುಡ್ಡು ಮಾಡುತ್ತಿವೆ ಮತ್ತು ಮುಂದೊಂದು ದಿನ ನಟನಟಿಯರ ಅಗತ್ಯ ಬೀಳದೆ ಇರಬಹುದು. ಯಂತ್ರಚಾಲಿತ ವಾಹನಗಳಿಂದ ಚಾಲಕರ ಅಗತ್ಯಬೀಳದಿರಬಹುದು. ಒಟ್ಟಾರೆ, ನಮ್ಮೆಲ್ಲಾ ದೈಹಿಕ ಮತ್ತು ಮಾನಸಿಕ ಅಗತ್ಯಗಳ ಪೂರೈಸುತ್ತ, ಸಾಂಗತ್ಯ ನೀಡುತ್ತಾ ಯಂತ್ರಗಳು ನಮ್ಮನ್ನು ಸುತ್ತುವರಿದು ಮನುಷ್ಯರಿಂದ ದೂರಸರಿಸಿ ದ್ವೀಪಗಳನ್ನಾಗಿ ಪರಿವರ್ತಿಸಿವೆ. ನಿಜ ಅರ್ಥದಲ್ಲಿ ಯಂತ್ರಗಳು ನಮ್ಮ ಜೀವನದ ರಿಮೋಟ್ ಕಂಟ್ರೋಲ್.

ಇಡೀ ಪ್ರಪಂಚವನ್ನು ತಂತ್ರಜ್ಞಾನದ ಸಹಾಯದಿಂದ ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿದ ಮನುಷ್ಯನೇ ಈಗ, ಅದೇ ಯಂತ್ರಗಳ ಮುಂದೆ ಅಪ್ರಸ್ತುತನಾದುದು ವಿಪರ್ಯಾಸ. ಮನುಷ್ಯನೀಗ ಉದ್ಯೋಗಕ್ಕಾಗಿ ಸ್ಪರ್ಧಿಸಬೇಕಾದುದು ಯಂತ್ರಗಳೊಂದಿಗೆ. ಇನ್ನೊಬ್ಬ ಮನುಷ್ಯನೊಂದಿಗೆ ಸ್ಪರ್ಧಿಸುವುದಕ್ಕೂ, ಯಂತ್ರಗಳೊಂದಿಗೆ ಪೈಪೋಟಿ ನೀಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಮನುಷ್ಯನ ಕೆಲಸಕ್ಕೆ ತನ್ನದೇ ಆದ ಶಾರೀರಿಕ ಮತ್ತು ಮಾನಸಿಕ ಇತಿಮಿತಿಗಳಿರುತ್ತವೆ. ಆದರೆ ಯಂತ್ರಗಳು ಇವೆಲ್ಲವನ್ನೂ ಮೀರಿ ಕೆಲಸಮಾಡುವ ಸಾಮಥ್ರ್ಯ ಹೊಂದಿವೆ. ಹೀಗೆ ಮುಂದುವರಿದರೆ, ಮನುಷ್ಯನಿಗೆ ಉಳಿದಿರುವ ಉದ್ಯೋಗ ಅವಕಾಶಗಳು ಎರಡೇ: ಒಂದನೆಯದು, ಯಂತ್ರಗಳಿಂದಾಗಿ ಕೆಲಸ ಕಳೆದುಕೊಳ್ಳುತ್ತಾ ತನ್ನತನ ಕಳೆದುಕೊಂಡು ಬದುಕು ಅರ್ಥಹೀನವೆನಿಸುತ್ತಿರುವ, ಆದರೆ ಯಂತ್ರಗಳ ವ್ಯಾಮೋಹದಲ್ಲಿ ಇನ್ನು ಮೈಮರೆತಿರುವ ಮನುಷ್ಯನ ಮಾನಸಿಕ ಸ್ಥಿತಿಯನ್ನು ಸರಿಪಡಿಸಲು, ಮನೋವೈದ್ಯರ ಅಗತ್ಯಬೇಕಾಗುತ್ತದೆ. ಇನ್ನೊಂದು, ಈ ಯಂತ್ರಗಳನ್ನು ಸಿದ್ಧಪಡಿಸುವ ಮತ್ತು ಸುಸ್ಥಿತಿಯಲ್ಲಿಡುವ ಕೆಲಸ. ಆದಷ್ಟು ಬೇಗ ಎಚ್ಚೆತ್ತುಕೊಂಡರೆ, ಮನುಷ್ಯನ ಚಲನಶೀಲತೆ ಮತ್ತು ಉದ್ಯೋಗ ಎರಡೂ ಉಳಿದೀತು. ರಜನಿಕಾಂತರ ‘ರೋಬೋಟ್’ ಸಿನಿಮಾವನ್ನು ಮನರಂಜನೆಯಾಗಿ ಸ್ವೀಕರಿಸಿದ ನಮಗೆ, ಅದೇ ವಾಸ್ತವಸ್ಥಿತಿವಾಗುತ್ತಿರುವ ಕಾಲಘಟ್ಟದಲ್ಲಿದ್ದೇವೆ.

*ಲೇಖಕರು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಆಂಗ್ಲ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.