ಯಡಿಯೂರಪ್ಪನವರ ಎರಡನೇ ಇನ್ನಿಂಗ್ಸ್ ಮಾಡಿದ್ದೇನು..? ಬಿಟ್ಟಿದ್ದೇನು..?

ಯಡಿಯೂರಪ್ಪನವರ ಸಾಧನೆಎಂಬುದು ಅಸಂಗತ ನಾಟಕದ ವಿಷಯವಸ್ತು ಮತ್ತು ಚರ್ಚೆಗೆ ಅನರ್ಹ ವಿಷಯವೆಂದು ನೀವು ಹೇಳಬಹುದು. ನಿಮ್ಮ ಮಾತಿನಲ್ಲಿ ಸಾಕಷ್ಟು ಸತ್ಯವೂ ಇರಬಹುದು. ಆದರೆ ಕರ್ನಾಟಕದ ಯಾವುದೇ ಮುಖ್ಯಮಂತ್ರಿಗೆ ವರ್ಷಕ್ಕೆ ಒಂದು ಸಾರಿಯಾದರೂ ನಿಮ್ಮ ಸಾಧನೆಯೇನು ಎಂದು ನಾವು ಕೇಳಬೇಕಾದ ಅನಿವಾರ್ಯ ಅಗತ್ಯವಿದೆ. ನಮ್ಮನ್ನು ಆಳುವವರ ಬಗ್ಗೆ ನಾವು ಅಲಕ್ಷ್ಯ, ಅಸಡ್ಡೆ ಅಥವಾ ಅನಾಸಕ್ತಿ ತೋರುವಂತಿಲ್ಲ. ಅಧಿಕಾರದಲ್ಲಿರುವವರನ್ನು ನಾವು ಪದೇಪದೇ ಲೆಕ್ಕಬಾಕಿ ಕೇಳಲೇಬೇಕು. ಇವರು ಸಾಧಿಸಿದ್ದೇನು, ಕಳೆದಿದ್ದೇನು ಎಂದು ಪ್ರಶ್ನಿಸಲೇಬೇಕು. ಇವರ ಕೆಲಸನೀತಿಯೋಜನೆಬಜೆಟ್ ಇತ್ಯಾದಿಗಳನ್ನು ಅಂಕಿಅಂಶದ ಹಾಗೂ ಸಾರ್ವಜನಿಕ ಒಳಿತಿನ ಒರೆಗಲ್ಲಿನ ಮೇಲೆ ಮೌಲ್ಯಮಾಪನ ಮಾಡಲೇಬೇಕು.

ಅತಿವೃಷ್ಟಿ, ಕೋವಿಡ್, ಭಿನ್ನಮತ ಮತ್ತಿತರ ವಿಕೋಪ ಪ್ರಕೋಪಗಳು ಯಡಿಯೂರಪ್ಪನವರನ್ನು ಕಾಡಿವೆ. ಜಾತೀಯತೆ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಯಡಿಯೂರಪ್ಪನವರೇ ಮೈಮೇಲೆ ಎಳೆದುಕೊಂಡ ಹಾಗಿದೆ. ಇದಕ್ಕೆ ಹೊರತಾಗಿಯೂ ಯಡಿಯೂರಪ್ಪನವರು ಪ್ರಶಂಸೆಗೆ ಅರ್ಹ ಆಡಳಿತ ನೀಡಿದ್ದಾರೆಯೇ..? ಕರ್ನಾಟಕದಲ್ಲಿ ನೆನೆಗುದಿಗೆ ಬಿದ್ದಿದ್ದ ಕೆಲವು ಆರ್ಥಿಕ ಸುಧಾರಣೆಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆಯೇ..? ಬೇರೆಯ ಬಿಜೆಪಿ ಮುಖ್ಯಮಂತ್ರಿಗಳಿಗೆ ಹೋಲಿಕೆಯಲ್ಲಿ ಯಾವುದೇ ಸಂಪ್ರದಾಯವಾದಿ ಉಗ್ರವಾದ ತಾಳದೆ ಸಂಯಮ ತೋರಿದ್ದಾರೆಯೇ..? ಬೇರೆಲ್ಲ ರಾಜ್ಯಗಳಂತೆ ಕೋವಿಡ್ ವಿಚಾರದಲ್ಲಿ ಅನಗತ್ಯ ಲಾಕ್ಡೌನ್ ಹೇರದೆ ರಾಜ್ಯದ ಆರ್ಥಿಕತೆ ಮತ್ತು ಜನಜೀವನ ಸಾಮಾನ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ..? ಭ್ರಷ್ಟಾಚಾರದ ನಡುವೆಯೂ ಕೆಲವಾರು ಇಲಾಖೆಗಳಲ್ಲಿ ಉತ್ತಮ ಸಾಧನೆಗೆ ಕಾರಣವಾಗಿದ್ದಾರೆಯೇ..? ಒಟ್ಟಾರೆಯಾಗಿ ಕಳೆದೆರೆಡು ವರ್ಷಗಳಲ್ಲಿ ಯಡಿಯೂರಪ್ಪನವರ ಸಾಧನೆಯೆಷ್ಟು..? ಯಡಿಯೂರಪ್ಪನವರು ಕಳೆದ ಅವಕಾಶಗಳು ಯಾವುವು..? ಮುಂದಿನ ವರ್ಷಗಳಲ್ಲಿ ಯಡಿಯೂರಪ್ಪನವರು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶಕ್ತರೇ.. ಇಲ್ಲವೇ..?

ಬಿಕ್ಕಟ್ಟು ತಂದಿಟ್ಟ ಅವಕಾಶ

ಕೈಬಿಟ್ಟು ಕುಳಿತ ಸರ್ಕಾರ!

ಮಹತ್ವಾಕಾಂಕ್ಷಿ ಯೋಜನೆಗಳು ಮತ್ತು ಸುಸಂಬದ್ಧ ಆಡಳಿತದ ಪರಿಕಲ್ಪನೆಗಳು ಒಬ್ಬ ರಾಜಕಾರಣಿಯ ಮೂಲ ನಂಬಿಕೆಗಳಿಂದ ಜನ್ಮಪಡೆಯುತ್ತವೆ. ಇಂದು ಯಡಿಯೂರಪ್ಪನವರಿಗೆ ಯಾವ ರಾಜಕೀಯ ನಂಬಿಕೆಗಳು ಮತ್ತು ಗುರಿಗಳು ಇವೆ ಎನ್ನುವುದು ಅಸ್ಪಷ್ಟ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಬೇಕು ಮತ್ತು ತಮ್ಮ ಪುತ್ರರ ರಾಜಕೀಯ ಭವಿಷ್ಯವನ್ನು ಗಟ್ಟಿಪಡಿಸಿಕೊಳ್ಳಬೇಕು ಎನ್ನುವುದರ ಆಚೆಗೆ ಅವರಿಗೆ ಯಾವ ಗುರಿಗಳೂ ಇರುವಂತೆ ತೋಚುವುದಿಲ್ಲ.

-ಪೃಥ್ವಿದತ್ತ ಚಂದ್ರಶೋಭಿ

2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಮತ್ತು ಅವುಗಳಲ್ಲಿ ಅಡಕವಾಗಿದ್ದ ಸೈದ್ಧಾಂತಿಕ ಒಲವುಗಳು ಮತ್ತು ಅಭಿವೃದ್ಧಿಯ ಆದ್ಯತೆಗಳ ಬಗ್ಗೆ ಚರ್ಚೆಯೊಂದನ್ನು ಸಮಾಜಮುಖಿಯ ವತಿಯಿಂದ ಆಯೋಜಿಸಿದ್ದೆವು. ಆ ಸಂದರ್ಭದಲ್ಲಿ ಪ್ರತಿವರ್ಷವೂ ನಮ್ಮ ರಾಜ್ಯಸರ್ಕಾರದ ಸಾಧನೆಗಳು ಮತ್ತು ವೈಫಲ್ಯಗಳನ್ನು ಅವಲೋಕಿಸಬೇಕು ಎನ್ನುವ ಆಶಯವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ವ್ಯಕ್ತಪಡಿಸಿದ್ದರು. ತದನಂತರದ ಮೂರು ವರ್ಷಗಳಲ್ಲಿ ಯಡಿಯೂರಪ್ಪನವರ ನಾಯಕತ್ವದ ಎರಡು ಮತ್ತು ಕುಮಾರಸ್ವಾಮಿಯವರ ನೇತೃತ್ವದ ಸಮ್ಮಿಶ್ರ ಸರ್ಕಾರವು ಸೇರಿದಂತೆ ಮೂರು ಸರ್ಕಾರಗಳನ್ನು ಕರ್ನಾಟಕವು ಕಂಡಿದೆ.

ಚುನಾವಣೆಯಲ್ಲಿ ಯಾವುದೆ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕದೆ ಇದ್ದ ಹಿನ್ನೆಲೆಯಲ್ಲಿ, ಕರ್ನಾಟಕದ ಮೂರು ಮುಖ್ಯ ರಾಜಕೀಯ ಪಕ್ಷಗಳ ಗುರಿಯು ಅಧಿಕಾರವನ್ನು ಪಡೆಯುವುದು ಮತ್ತು ಉಳಿಸಿಕೊಳ್ಳುವುದು ಮಾತ್ರವಾಗಿದೆ. ಈ ಉದ್ದೇಶ ಸಾಧನೆಗಾಗಿ ನಡೆದಿರುವ ಎಲ್ಲ ಬಗೆಯ ರಾಜಕೀಯ ದೊಂಬರಾಟಗಳಿಗೆ ಕರ್ನಾಟಕದ ಜನರು ಸಾಕ್ಷಿಗಳಾಗಿದ್ದಾರೆ. ಈ ವಾಕ್ಯಗಳನ್ನು ಬರೆಯುತ್ತಿರುವ ಸಂದರ್ಭದಲ್ಲಿಯೂ ‘ಹನಿಟ್ರ್ಯಾಪ್ ಸಿಡಿ’ ಪ್ರಕರಣವೊಂದು ಕರ್ನಾಟಕದ ರಾಜಕಾರಣದ ಚರ್ಚೆಯನ್ನು ಪ್ರಭಾವಿಸುತ್ತಿದೆ. ಮಾರ್ಚ್ 8ರಂದು ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಆಗಲಿ ಅಥವಾ ಹೆಚ್ಚುತ್ತಿರುವ ಕೊರೊನಾ ಸೋಂಕು ಕುರಿತಾಗಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆಯಾಗಲಿ ಹೆಚ್ಚಿನ ಆಸಕ್ತಿ ಯಾರಿಗೂ ಇದ್ದಂತಿಲ್ಲ.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರದ ಕಳೆದ ಒಂದು ವರ್ಷದ ಸಾಧನೆಯನ್ನು ಅವಲೋಕಿಸಲು ನಾವು ಕೇಳಿಕೊಳ್ಳಬೇಕಾಗಿರುವ ಪ್ರಶ್ನೆಗಳು ಮತ್ತು ಬಳಸಬೇಕಿರುವ ಮಾನದಂಡಗಳಾದರೂ ಯಾವುವು? ಜುಲೈ 2019ರಲ್ಲಿ ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಗಳಾದ ಮೇಲೆ ಕಳೆದ 20 ತಿಂಗಳುಗಳಲ್ಲಿ ಅವರ ಸರ್ಕಾರದ ಆದ್ಯತೆಗಳು ಏನಾಗಿವೆ? ಈ ಅವಧಿಯಲ್ಲಿ ಮಂಡಿತವಾಗಿರುವ ಶಾಸನಗಳು ಮತ್ತು ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳು ಯಾವುವು?

ಒಂದೆಡೆ ಈ ರೀತಿಯ ಸಾಂಪ್ರದಾಯಿಕವಾದ ರಾಜಕೀಯಶಾಸ್ತ್ರದ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ಇದರ ಜೊತೆಗೆ ಮತ್ತು ಮಿಗಿಲಾಗಿ, ಕಳೆದ ಒಂದು ವರ್ಷದಿಂದಲೂ ಕೊರೋನಾ ಸೋಂಕಿನ ಐತಿಹಾಸಿಕ ಸಂದರ್ಭವನ್ನೂ ನಾವಿಲ್ಲಿ ನೆನಪಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರಕ್ಕಿದ್ದ ಸವಾಲುಗಳು ಮತ್ತು ಹೊಸಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಯಡಿಯೂರಪ್ಪನವರ ಮತ್ತು ಅವರ ಸಚಿವಸಂಪುಟದ ಸಾಧನೆಗಳನ್ನು ಚರ್ಚಿಸಬಹುದೆ?

ಮೂರನೆಯ ಅಂಶವೊಂದನ್ನು ಸಹ ಈ ಚರ್ಚೆಯ ಸಂದರ್ಭದಲ್ಲಿ ಗುರುತಿಸಬೇಕು ಎಂದು ನನಗನ್ನಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ರಾಜಕಾರಣಕ್ಕೆ ಹೊಸದೊಂದು ತಿರುವು ದೊರಕಿದೆ. ಈ ಹಂತದಲ್ಲಿ ಉದ್ಯಮಿ-ರಾಜಕಾರಣಿಗಳು ನಮ್ಮ ರಾಜ್ಯದ ಸಾರ್ವಜನಿಕ ಬದುಕು ಮತ್ತು ಅದರ ಆದ್ಯತೆಗಳನ್ನು ಪ್ರಭಾವಿಸುತ್ತಿದ್ದಾರೆ. ಹಣಕೇಂದ್ರಿತ ಚುನಾವಣಾ ರಾಜಕಾರಣದ ಈ ಆಯಾಮದ ಹಿನ್ನೆಲೆಯಲ್ಲಿ ಸಹ ಯಡಿಯೂರಪ್ಪನವರನ್ನು ನೋಡಬೇಕಾದ ಅಗತ್ಯವಿದೆ.

ಈ ಮೂರು ಆಯಾಮಗಳ ಕುರಿತಾದ ಪರಸ್ಪರ ಸಂಬಂಧ ಹೊಂದಿರುವ ಮೂರು ಟಿಪ್ಪಣಿಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

1

ಕಳೆದ ಇಪ್ಪತ್ತು ತಿಂಗಳುಗಳಲ್ಲಿ ಯಡಿಯೂರಪ್ಪನವರ ಸರ್ಕಾರ ಮಾಡಿದ್ದೇನು?

ಈ ಪ್ರಶ್ನೆಗೆ ಉತ್ತರವಾಗಿ ಮುಖ್ಯಮಂತ್ರಿಗಳು ಮತ್ತು ಅವರ ಸರ್ಕಾರದ ವಕ್ತಾರರು ದೊಡ್ಡದೊಂದು ಪಟ್ಟಿಯನ್ನು ನೀಡುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಸರ್ಕಾರದ ವಿಶಿಷ್ಟ, ಅಂದರೆ ಈ ಸರ್ಕಾರದ ಐಡೆಂಟಿಟಿಯನ್ನು ನಿರ್ಧರಿಸುವ ಸಿಗ್ನೇಚರ್, ಸಾಧನೆಯೇನು? ಈ ಪ್ರಶ್ನೆಗೆ ಕರ್ನಾಟಕದ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಗಳನ್ನು ಹತ್ತಿರದಿಂದ ಗಮನಿಸುವವರ ಬಳಿ ಸಹ ಉತ್ತರವಿಲ್ಲ.

ನನ್ನ ಈ ವಾದಕ್ಕೆ ಹಿನ್ನೆಲೆಯಾಗಿ ಈ ವಿಶ್ಲೇಷಣೆಯನ್ನು ಗಮನಿಸಿ: 

ಸರ್ಕಾರ ಯಾವುದೆ ಪಕ್ಷದ್ದು ಇರಲಿ. ಅದರ ಪ್ರತಿನಿತ್ಯದ ಕೆಲಸ ಚಟುವಟಿಕೆಗಳು, ಖರ್ಚು ವೆಚ್ಚಗಳು ನಡೆಯುತ್ತಲೆ ಇರುತ್ತವೆ. ಸರ್ಕಾರಕ್ಕೆ ರಾಜಕೀಯ ನಾಯಕತ್ವವನ್ನು ಅಧಿಕಾರದಲ್ಲಿರುವ ಪಕ್ಷಗಳ ಪ್ರತಿನಿಧಿಗಳು ಒದಗಿಸುವುದಾದರೆ, ಅವರಲ್ಲದೆ ಅಧಿಕಾರಿಗಳು ಮತ್ತು ಇತರೆ ಸರ್ಕಾರಿ ನೌಕರರು ತಮ್ಮ ಕೆಲಸ ಕಾರ್ಯಗಳನ್ನು ಎಂದಿನಂತೆ ಯಾವುದೆ ಪಕ್ಷ ಅಧಿಕಾರದಲ್ಲಿದ್ದರೂ ಸಹ ಮುಂದುವರಿಸಿಕೊಂಡು ಹೋಗುತ್ತಿರುತ್ತಾರೆ. ಸರ್ಕಾರದ ದೈನಂದಿನ ಚಟುವಟಿಕೆಗಳು ಅಧಿಕಾರಿಗಳು ಮತ್ತು ನೌಕರರ ಮೇಲ್ವಿಚಾರಣೆ ಹಾಗೂ ಭಾಗವಹಿಸುವಿಕೆಯ ಮೂಲಕವೆ ನಡೆಯುತ್ತಿರುತ್ತದೆ. ಇಂತಹ ಕೆಲಸಗಳ ಮೊತ್ತವನ್ನು ಸರ್ಕಾರದ ಸಾಧನೆಯೆಂದು ಪರಿಗಣಿಸುವುದು ಅನಾವಶ್ಯಕ.

ಸರ್ಕಾರದ ನಾಯಕತ್ವವನ್ನು ವಹಿಸುವ ರಾಜಕೀಯ ಪ್ರತಿನಿಧಿಗಳ ಪಾತ್ರವೇನು ಎನ್ನುವುದನ್ನು ಅರಿತರೆ ಅವರ ಸಾಧನೆ ಮತ್ತು ವೈಫಲ್ಯಗಳನ್ನು ವಿಮರ್ಶಿಸುವುದು ಸಹ ಸುಲಭವಾಗುತ್ತದೆ.

ರಾಜಕೀಯ ನಾಯಕತ್ವವು ತನ್ನ ಆದ್ಯತೆಗಳನ್ನು ಗುರುತಿಸಿಕೊಂಡು, ಅದರ ಅನುಷ್ಠಾನಕ್ಕೆ ಸೂಕ್ತವಾದ ದಾರಿಗಳನ್ನು ಹುಡುಕುತ್ತದೆ. ಈ ಹಿನ್ನೆಲೆಯಲ್ಲಿಯೆ ಯಾವುದೆ ಮುಖ್ಯಮಂತ್ರಿಯ ಕಾರ್ಯಕ್ಷಮತೆಯನ್ನು ಚರ್ಚಿಸಬೇಕು. ಯಡಿಯೂರಪ್ಪನವರ ಸರ್ಕಾರದ ಆದ್ಯತೆಗಳನ್ನು ಗುರುತಿಸಲು ಈ ಪ್ರಶ್ನೆಯನ್ನು ಕೇಳಿಕೊಳ್ಳೋಣ: ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಸಾಧಿಸಲು ಬಯಸುವುದೇನು?

ಯಾವುವಾದರೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅಥವಾ ಬಹುದೊಡ್ಡ ಅಭಿವೃದ್ಧಿ ಯೋಜನೆಯ ಸುತ್ತ ಅಥವಾ ಅಭಿವೃದ್ಧಿಯ ಪಥದ ಜೊತೆಗೆ ಯಡಿಯೂರಪ್ಪನವರ ಹೆಸರು ತಳುಕು ಹಾಕಿಕೊಂಡಿದೆಯೆ? ಉದಾಹರಣೆಗೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ನರೇಂದ್ರ ಮೋದಿಯವರು ಗುಜರಾತ್ ಅಭಿವೃದ್ಧಿ ಮಾದರಿಯೆಂದು ಇಲ್ಲವೆ ಸರ್ದಾರ್ ಸರೋವರ್ ನೀರಾವರಿ ಯೋಜನೆಯ ಜೊತೆಗೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಇಂತಹ ಯಾವುದಾದರೂ ಸಿಗ್ನೇಚರ್ ಸಾಧನೆಯನ್ನು ಯಡಿಯೂರಪ್ಪನವರು ತಮ್ಮ ಗುರಿಯಾಗಿಟ್ಟುಕೊಂಡಿದ್ದಾರೆಯೆ?

ಇಲ್ಲವೆ ಯಾವುದಾದರೂ ಕಲ್ಯಾಣ ಕಾರ್ಯಕ್ರಮವನ್ನು ತಮ್ಮ ಬಹುಮುಖ್ಯ ಆದ್ಯತೆಯೆಂದು ಮುಖ್ಯಮಂತ್ರಿಗಳು ಗುರುತಿಸುತ್ತಿದ್ದಾರೆಯೆ? ಕರ್ನಾಟಕದ ಗುರುತನ್ನು ಬದಲಿಸಬಲ್ಲ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅವರು ಕಲ್ಪಿಸಿಕೊಂಡಿದ್ದಾರೆಯೆ?

ಈ ಯಾವ ಪ್ರಶ್ನೆಗಳಿಗೂ ನಮಗೆ ನೇರ ಉತ್ತರವೊಂದು ದೊರಕುವುದಿಲ್ಲ. ಮಹತ್ವಾಕಾಂಕ್ಷೆ ಮತ್ತು ದೂರದರ್ಶಿತ್ವಗಳು ಇಲ್ಲದಿದ್ದರೆ ಹೋಗಲಿ. ಬೆಂಗಳೂರಿನ ಮೆಟ್ರೊ, ಜಿಲ್ಲೆಯೊಂದರಲ್ಲಿ ಪುಡ್‍ಪಾರ್ಕ್ ಸ್ಥಾಪನೆ, ಹೆದ್ದಾರಿ ವಿಸ್ತರಣೆ ಮತ್ತು ಹಿಂದುಳಿದ ವರ್ಗಗಳಿಗೆ ಕೆಲವು ಸಾಲಸೌಲಭ್ಯಗಳಂತಹ ವಾಡಿಕೆಯ, ನಿತ್ಯಕ್ರಮದ ಯೋಜನೆಗಳು ಎಲ್ಲರ ಆಡಳಿತಾವಧಿಯಲ್ಲಿಯೂ ನಡೆಯುತ್ತವೆ. ಇಂತಹ ಯೋಜನೆಗಳನ್ನು ಸುಸಂಬದ್ಧವಾಗಿ ಸಂಯೋಜಿಸಿ, ಅವುಗಳಿಂದ ರಾಜ್ಯದ ಜನತೆಯ ಬದುಕಿನ ಮೇಲೆ ಗಣನೀಯವಾದ ಧನಾತ್ಮಕ ಪರಿಣಾಮವನ್ನು ಬೀರುವಂತೆ ಆಡಳಿತ ನಡೆಸಬಹುದು.

ಆದರೆ ಇಂತಹ ಕೆಲಸವನ್ನು ಮಾಡುವುದರಲ್ಲಿಯೂ ಅವರಿಗೆ ಯಶಸ್ಸು ದೊರಕಿದೆ ಎಂದು ಹೇಳಲು ಕಷ್ಟ. ಯಡಿಯೂರಪ್ಪನವರ ಇತ್ತೀಚಿನ ಬಜೆಟ್ಟುಗಳನ್ನು ನೋಡಿದರೆ, ವಿವಿಧ ಕ್ಷೇತ್ರಗಳಿಗೆ ಅನಿವಾರ್ಯವಾಗಿ ಕೊಡಲೇಬೇಕಿರುವ ಅನುದಾನಗಳನ್ನು ಕೊಡುವಂತೆ ಕಾಣುತ್ತದೆ. ಇದರ ಜೊತೆಗೆ ಮಠಮಾನ್ಯಗಳು, ಜಾತಿ ಸಂಘಟನೆಗಳು ತಮ್ಮ ಪಾಲುಗಳನ್ನು ಪಡೆಯುತ್ತಿವೆ. ಕೈಗೆತ್ತಿಕೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ, ಅಲ್ಲಿ ಸ್ಪಷ್ಟವಾಗುವ ಅಂಶವಿಷ್ಟೆ: ಯಾರಿಗೆ ಬಿಲ್ಲುಗಳನ್ನು ಪಡೆಯುವ ವಿಶ್ವಾಸ ಮತ್ತು ಸಾಮಥ್ರ್ಯಗಳಿವೆಯೊ ಅವರು ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಬಜೆಟ್ಟಿನ ನಿರೂಪಣೆ ಸಹ ಇಂತಹವರ ಪಾಲುದಾರಿಕೆಯಿಂದಲೆ ಆಗುತ್ತಿದೆ. ಭ್ರಷ್ಟಾಚಾರದ ಆರೋಪಗಳು ಈ ಕಾರಣಕ್ಕಾಗಿಯೆ ಪದೆಪದೆ ಕೇಳಿಬರುತ್ತಿರುವುದು.

ಮಹತ್ವಾಕಾಂಕ್ಷಿ ಯೋಜನೆಗಳು ಮತ್ತು ಸುಸಂಬದ್ಧ ಆಡಳಿತದ ಪರಿಕಲ್ಪನೆಗಳು ಒಬ್ಬ ರಾಜಕಾರಣಿಯ ಮೂಲ ನಂಬಿಕೆಗಳಿಂದ ಜನ್ಮಪಡೆಯುತ್ತವೆ. ಇಂದು ಯಡಿಯೂರಪ್ಪನವರಿಗೆ ಯಾವ ರಾಜಕೀಯ ನಂಬಿಕೆಗಳು ಮತ್ತು ಗುರಿಗಳು ಇವೆ ಎನ್ನುವುದು ಸಹ ಅಸ್ಪಷ್ಟ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಬೇಕು ಮತ್ತು ಬಹುಶಃ ತಮ್ಮ ಪುತ್ರರ ರಾಜಕೀಯ ಭವಿಷ್ಯವನ್ನು ಗಟ್ಟಿಪಡಿಸಿಕೊಳ್ಳಬೇಕು ಎನ್ನುವುದರ ಆಚೆಗೆ ಅವರಿಗೆ ಯಾವ ಗುರಿಗಳೂ ಇರುವಂತೆ ತೋಚುವುದಿಲ್ಲ. ತಮ್ಮ ಪಕ್ಷವಾದ ಭಾಜಪದ ರಾಜಕೀಯ ಭವಿಷ್ಯದ ಬಗ್ಗೆ ಸಹ ಅವರು ತಲೆಕೆಡಿಸಿಕೊಂಡು, ಅದರ ಸ್ಥಾನಮಾನ ಮತ್ತು ಇಮೇಜುಗಳನ್ನು ಬಲಪಡಿಸುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವರ ಆಪ್ತರೂ ಹೇಳರು. 1980-90ರ ದಶಕಗಳಲ್ಲಿ ಹೋರಾಟ ಮಾಡಿ, ರಾಜ್ಯದಲ್ಲಿ ಅವರು ಪಕ್ಷವನ್ನು ಕಟ್ಟಿರಬಹುದು. ಅದನ್ನು ಅಧಿಕಾರಕ್ಕೆ ತರಲು ಬೇಕಾದ ಸಾಮಾಜಿಕ ಮತ್ತು ಜಾತಿ ಸಮೀಕರಣಗಳನ್ನು ಸಾಧಿಸುವಲ್ಲಿ ಅವರು ಮುಖ್ಯ ಪಾತ್ರವೊಂದನ್ನು ವಹಿಸಿರಬಹುದು. ಆದರೆ ಇಂದು ಪಕ್ಷಬಲವರ್ಧನೆ ಅವರ ಗುರಿಯಾದಂತೆ ತೋರದು.

ಈ ಸಂದರ್ಭದಲ್ಲಿ ಗಮನಾರ್ಹವಾದ ವಿಷಯವೊಂದಿದೆ. ಯಡಿಯೂರಪ್ಪನವರು ಭಾಜಪದ ಇತರೆ ಮುಖ್ಯಮಂತ್ರಿಗಳಂತೆ ಉತ್ತರಪ್ರದೇಶದ ತಮ್ಮ ಸಹೋದ್ಯೋಗಿ ಯೋಗಿ ಆದಿತ್ಯನಾಥರನ್ನು ತಮ್ಮ ಮಾದರಿಯಾಗಿರಿಸಿಕೊಂಡು, ಆಕ್ರಮಣಕಾರಿ ಮಾತು-ನೀತಿಗಳನ್ನು ತಮ್ಮದಾಗಿಸಿಕೊಂಡಿಲ್ಲ. ಇದಕ್ಕೆ ಕರ್ನಾಟಕದ ಸಂಕೀರ್ಣ ಜಾತಿ ರಾಜಕಾರಣ ಒಂದು ಕಾರಣವಿರಬಹುದು. ಇಂತಹ ಮಾತುಗಳನ್ನು ಆಡಬಲ್ಲ ತೇಜಸ್ವಿ ಸೂರ್ಯನವರಂತಹ ಇತರೆ ಭಾಜಪದ ನಾಯಕರಿರುವುದೂ ಮತ್ತೊಂದು ಕಾರಣವಿರಬಹುದು. ಆದರೆ ಅವರ ಈ ಸಂಯಮವನ್ನೆ ಒಂದು ಸಾಧನೆಯೆಂದು ಹೇಳಲು ಸಾಧ್ಯವಿಲ್ಲ.

ಸಾಂದರ್ಭಿಕವಾಗಿ ಒಂದು ಮಾತು. ರಾಜಕೀಯಶಾಸ್ತ್ರಜ್ಞ ಜೇಮ್ಸ್ ಮೇನರ್ ಯಡಿಯೂರಪ್ಪನವರ ಬಗ್ಗೆ ಬರೆಯುತ್ತ ಹೇಳುತ್ತಾರೆ: ಕರ್ನಾಟಕದ ರಾಜಕಾರಣವನ್ನು ಕಳೆದ ಐವತ್ತು ವರ್ಷಗಳಿಂದ ಅಭ್ಯಸಿಸುತ್ತಿರುವ ಸಮಯದಲ್ಲಿ ಯಾವುದೆ ನಾಯಕನ ಅನುಯಾಯಿಗಳು ತಮ್ಮ ನಾಯಕನ ಬಗ್ಗೆ ಅಷ್ಟು ನಿರಾಸೆ ಮತ್ತು ಕಟುತ್ವದಿಂದ ಮಾತನಾಡಿದ್ದನ್ನು ತಾನು ನೋಡಿಲ್ಲ. ಮೇನರ್ ಅವರ ಈ ಅನಿಸಿಕೆ 1990ರ ದಶಕದ ಅವರ ಸಂಶೋಧನೆಗಳಿಂದ ಹೊರಬಂದುದು.

ಈ ಮೇಲಿನ ವಿಶ್ಲೇಷಣೆ ನಿರಾಶೆ ಮತ್ತು ಸಿನಿಕತನದ ನೆಲೆಗಳಿಂದ ರೂಪುಗೊಳ್ಳುತ್ತಿದೆ ಎಂದರೆ ಆ ಮಾತನ್ನು ನಾನು ಒಪ್ಪುತ್ತೇನೆ. ಕನಿಷ್ಠ ಪ್ರಮಾಣದಲ್ಲಿಯಾದರೂ ರಾಜಕೀಯ ದೂರದರ್ಶಿತ್ವ ಮತ್ತು ಜನಪರ ಚಿಂತನೆಗಳಿಂದ ರಾಜ್ಯದ ಆಡಳಿತ ರೂಪುಗೊಳ್ಳದಿರುವ ಕಾಲವಿದು.

2

ಕಾಲಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಾತು. ಮನುಷ್ಯನ ಇತಿಹಾಸದಲ್ಲಿಯೆ ಒಂದು ಸಂಕ್ರಮಣದ ಕಾಲದಲ್ಲಿ ನಾವು ಇದ್ದೇವೆ. ಒಂದೆಡೆ ಮಾಹಿತಿ ಮತ್ತು ಜೀವಶಾಸ್ತ್ರೀಯ ತಂತ್ರಜ್ಞಾನಗಳಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳು ಮನುಷ್ಯನ ನಾಗರಿಕತೆಯ ದಿಕ್ಕನ್ನು ಅನಿರೀಕ್ಷಿತ ರೀತಿಗಳಲ್ಲಿ ಬದಲಿಸಬಹುದು ಎನ್ನುವ ಸ್ಪಷ್ಟ ನಿರೀಕ್ಷೆಯಿದೆ. ಬದುಕು ನಾವು ಅರಿತಿರುವಂತೆ ಮತ್ತು ಇದುವರೆಗೆ ಸಂಘಟಿಸಿಕೊಂಡಿರುವಂತೆ ಈ ಶತಮಾನದ ಮಧ್ಯಭಾಗದ ಹೊತ್ತಿಗೆ ಇರುವುದಿಲ್ಲ. ಈ ಅಸ್ಪಷ್ಟ ಭವಿಷ್ಯವನ್ನು ಮತ್ತಷ್ಟು ಕಲಕಿಬಿಡುತ್ತಿರುವುದು ಮನುಷ್ಯನ ಚಟುವಟಿಕೆಗಳಿಂದಲೆ ಆಗುತ್ತಿರುವ ಹವಾಮಾನ ಬದಲಾವಣೆ ಮತ್ತು ಅದರಿಂದ ಸಂಭವಿಸುವ ವೈಪರೀತ್ಯಗಳು. ಈ ಸಂಕ್ರಮಣ ಸ್ಥಿತಿಯ ಕಲ್ಪನೆ ಯಡಿಯೂರಪ್ಪನವರಿಗೆ ಅಥವಾ ಅವರ ಸಹೋದ್ಯೋಗಿಗಳಿಗೆ ಇದೆ ಎನ್ನುವುದು ಅವರ ಕಾರ್ಯಚಟುವಟಿಕೆಗಳಿಂದ ಗೋಚರಿಸುವುದಿಲ್ಲ. 

ಈ ಭವಿಷ್ಯವನ್ನು ಅರಿಯುವ ಸಾಮಥ್ರ್ಯವನ್ನು ರಾಜ್ಯಸರ್ಕಾರ ಹೊಂದಿಲ್ಲ ಎನ್ನುವುದನ್ನು ಕ್ಷಮಿಸಬಹುದೇನೊ. ಆದರೆ ನಮ್ಮ ಕಾಲದ ಅತಿದೊಡ್ಡ ಪ್ರಭಾವಿ ಘಟನೆಯಾಗಿ ಹೊರಹೊಮ್ಮಿರುವುದು ಕೊರೋನಾ ಸೋಂಕು. ಕಳೆದ ಒಂದು ವರ್ಷದಿಂದ ಪ್ರತಿನಿತ್ಯದ ದೈನಂದಿನ ಬದುಕನ್ನು ಬಹುಮಟ್ಟಿಗೆ ಈ ಸೋಂಕು ಬದಲಿಸಿಬಿಟ್ಟಿದೆ. ಕೊರೋನಾ ಸೋಂಕು ಉಂಟುಮಾಡಿದ ಬಿಕ್ಕಟ್ಟು ರಾಜ್ಯಸರ್ಕಾರಕ್ಕೊಂದು ಅವಕಾಶವಾಗಿತ್ತು ಎನ್ನುವುದನ್ನು ಇಲ್ಲಿ ಗುರುತಿಸಲೇಬೇಕು.

ಪ್ರತಿಯೊಂದು ಬಿಕ್ಕಟ್ಟೂ ಒಂದು ಅವಕಾಶ ಎನ್ನುವ ನಾಣ್ಣುಡಿಯೊಂದಿದೆ. ಕೊರೋನಾ ಸೃಷ್ಟಿಸಿದ ಬಿಕ್ಕಟ್ಟನ್ನು ಬಳಸಿಕೊಂಡು ಒಬ್ಬ ಸಮರ್ಥ, ದೂರದರ್ಶಿ ಮುಖ್ಯಮಂತ್ರಿಯು ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸಬಹುದಿತ್ತು. ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಕಳೆದ ಎರಡು-ಮೂರು ದಶಕಗಳಿಂದ ಹಲವಾರು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ ಎನ್ನುವುದು ಹೊಸಸುದ್ದಿಯೇನಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾ ಆಸ್ಪತ್ರೆಗಳು ಮತ್ತು ಜಯದೇವ ಹೃದ್ರೋಗ ಆಸ್ಪತ್ರೆಯಂತಹ ವಿಶೇಷ ಸೌಕರ್ಯಗಳನ್ನು ಒದಗಿಸುವ ಸಂಸ್ಥೆಗಳಿಗೆ ಹೆಚ್ಚುವರಿ ಮೂಲಸೌಕರ್ಯ ಬೇಕಿದೆ. ಸರ್ಕಾರಿ ಆಸ್ಪತ್ರೆಗಳಿಗೆ, ಅದರಲ್ಲಿಯೂ ಗ್ರಾಮೀಣ ಭಾಗಕ್ಕೆ, ವೈದ್ಯರು ಹೋಗಲು ಸಿದ್ಧರಿಲ್ಲ. ಅಪಾರ ಭ್ರಷ್ಟಾಚಾರದ ಆರೋಪಗಳು, ಸರ್ಕಾರದ ಇತರೆ ಇಲಾಖೆಗಳಲ್ಲಿ ಇರುವಂತೆ, ಆರೋಗ್ಯ ಕ್ಷೇತ್ರದಲ್ಲಿಯೂ ಕೇಳಿಬರುತ್ತವೆ.

ಈ ಎಲ್ಲ ಸವಾಲುಗಳನ್ನು ಎದುರಿಸಲು ಕಳೆದ 12 ತಿಂಗಳು ಸರಿಯಾದ ಕಾಲವಾಗಿತ್ತು. ಮಹತ್ವಾಕಾಂಕ್ಷಿ ಮುಖ್ಯಮಂತ್ರಿಯೊಬ್ಬರು ಈ ಬಿಕ್ಕಟ್ಟನ್ನು ಬಳಸಿಕೊಂಡು ಮುಂದಿನ ಮೂರು ದಶಕಗಳಲ್ಲಿ ಕರ್ನಾಟಕದ ಸಾರ್ವಜನಿಕ ಕ್ಷೇತ್ರದ ಆರೋಗ್ಯ ಸೌಲಭ್ಯಗಳನ್ನು ಸೃಷ್ಟಿಸುವ ಸಂಕಲ್ಪ ತೊಡುತ್ತಿದ್ದರು. ಇದಕ್ಕೆ ವೈದ್ಯಕೀಯ ಹಿನ್ನೆಲೆಯ ಸಮರ್ಥ ಆಡಳಿತಗಾರರೊಬ್ಬರಿಗೆ ಈ ಜವಾಬ್ದಾರಿ ನೀಡಿ, ಅದಕ್ಕಾಗಿ 2020ರಿಂದ 2023 ರವರೆಗಿನ ಮೂರು ಬಜೆಟುಗಳ ನಾಲ್ಕನೆಯ ಒಂದು ಭಾಗ ಹಣವನ್ನು ಮೀಸಲಿಡಬಹುದಿತ್ತು. ಇಂತಹ ಜವಾಬ್ದಾರಿಯನ್ನು ಹೊರಲು ಸಾಕಷ್ಟು ಅನುಭವಿ ವೈದ್ಯರು ನಮ್ಮ ನಡುವೆಯಿದ್ದರು.

ಯುದ್ಧೋಪಾದಿಯಲ್ಲಿ ಅಗತ್ಯವಿರುವ ಪ್ರಾಥಮಿಕ ಕೇಂದ್ರಗಳ ಕಟ್ಟಡಗಳು, ಸಲಕರಣೆಗಳು ಮತ್ತು ಇತರೆ ಮೂಲಸೌಕರ್ಯಗಳನ್ನು ಸೃಷ್ಟಿಸಬಹುದಿತ್ತು. ಕೊರೋನಾ ಕಾರಣದಿಂದ ವೈದ್ಯರಲ್ಲಿ ಮೂಡಿದ ಜನಪರ ಕಾಳಜಿಗಳನ್ನು ಬಳಸಿಕೊಂಡು, ಹೊಸವೈದ್ಯರನ್ನು ನೇಮಿಸಿಕೊಳ್ಳಬಹುದಿತ್ತು ಮತ್ತು ಅವರಿಗೆ ಇಂದಿನ ಕಾಲಕ್ಕೆ ಕೊಡಬೇಕಿರುವ ಸಂಬಳ-ಭತ್ಯೆಗಳು, ಉನ್ನತವ್ಯಾಸಂಗದ ಸೌಲಭ್ಯಗಳು ಇತ್ಯಾದಿಗಳನ್ನು ನೀಡಬಹುದಿತ್ತು. ಇತರೆ ಸಮಯಗಳಿಗಿಂತ, ಬಿಕ್ಕಟ್ಟುಗಳು ಇರುವಾಗ ಜನಪರ ಒಮ್ಮತವನ್ನು ಮತ್ತು ಆಳವಾದ ನೈತಿಕ ಪ್ರಜ್ಞೆಯನ್ನು ಮೂಡಿಸುವುದು ಸುಲಭ. 

ಇಂತಹ ಮಹತ್ವಾಕಾಂಕ್ಷೆ ಯಡಿಯೂರಪ್ಪನವರಲ್ಲಿ ಮೂಡಲಿಲ್ಲ. ಬಿಕ್ಕಟ್ಟುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡಾಗಲೆ ನಿಜನಾಯಕತ್ವ ಹೊರಹೊಮ್ಮುವುದು. ಅದರಲ್ಲಿಯೂ ಜನಪರವಾದ ಮಹತ್ವಾಕಾಂಕ್ಷಿ ಕೆಲಸಗಳನ್ನು ಮಾಡುವ ಅವಕಾಶವನ್ನು ಯಡಿಯೂರಪ್ಪನವರು ಕಳೆದುಕೊಂಡರು.

3

‘ನೈತಿಕತೆಯಂತೆ ನೈತಿಕತೆ’ ಎಂದ ಯಡಿಯೂರಪ್ಪನವರ ಭತ್ರ್ಸನೆ ನಮ್ಮ ಕಾಲದ ರಾಜಕಾರಣಕ್ಕೆ ಸೂಕ್ತವಾದ ರೂಪಕ. ಮುಖ್ಯಮಂತ್ರಿಗಳು ಹೀಗೆ ಅಂದದ್ದು ಸಿಡಿ ಹಗರಣವು 2021ರ ಬಜೆಟ್ ಅಧಿವೇಶನವನ್ನು ಆಪೋಶನ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ. ಪ್ರತಿಪಕ್ಷಗಳ ನಾಯಕರು ನೈತಿಕತೆಯ ನೆಲೆಯಲ್ಲಿ ಅವರ ಸಚಿವಸಂಪುಟದ ಮಾಜಿ ಸಹೋದ್ಯೋಗಿಯೊಬ್ಬರನ್ನು ಟೀಕಿಸಿದಾಗ ಅದಕ್ಕೆ ಮುಖ್ಯಮಂತ್ರಿಗಳ ಪ್ರತಿಕ್ರಿಯೆಯಿದು. ಎಲ್ಲರೂ ಬೆತ್ತಲೆಯಿರುವಾಗ, ನೈತಿಕತೆಯ ಮಾತೇಕೆ? ಯಾವ ಮಾರ್ಗದಲ್ಲಿಯಾದರೂ ಸರಿ, ಚುನಾವಣೆಗಳನ್ನು ಗೆಲ್ಲುವುದು ಹಾಗೂ ಬಹುಮತವನ್ನು ಗಳಿಸುವುದು ಸಮರ್ಥನೀಯ ಎನ್ನುವುದನ್ನು ಕರ್ನಾಟಕದ ಜನರು ಸ್ವೀಕರಿಸಿಬಿಟ್ಟಿದ್ದಾರೆ.

ನೈತಿಕತೆಯ ಅಭಾವದ ಚರ್ಚೆಗೆ ಹಲವು ಆಯಾಮಗಳಿವೆ. ಮತ್ತೆ ತೀವ್ರಗೊಳ್ಳುತ್ತಿರುವ ಜಾತಿನಿಷ್ಠೆಯು ಭಾರತೀಯ ಸಮಾಜವೆನ್ನುವುದನ್ನೆ ಒಂದು ಭ್ರಮೆಯಾಗಿಸುತ್ತಿದೆ ಎಂದು ಫೆಬ್ರವರಿ ತಿಂಗಳ ಮುಖ್ಯಚರ್ಚೆಯಲ್ಲಿ ಗುರುತಿಸಿದ್ದೆ. ಎಲ್ಲ ಜಾತಿಗಳಿಗೂ ಒಂದೊಂದು ಅಭಿವೃದ್ಧಿ ನಿಗಮ, ಬಜೆಟಿನಲ್ಲಿ ಜಾತಿ ಸಂಸ್ಥೆಗಳು ಮತ್ತು ಮಠಗಳಿಗೆ ಪಾಲು ನೀಡುವ ಪ್ರತೀತಿ ಗಟ್ಟಿಯಾಗುತ್ತಿದೆ. ಗಾಬರಿ ಹುಟ್ಟಿಸುವ ವಿಷಯವಿದು: ಈ ಬೆಳವಣಿಗೆಯನ್ನು ಮುಖ್ಯಮಂತ್ರಿಗಳ ಪುತ್ರನೂ ಸೇರಿದಂತೆ ಹಲವರು, ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕವಿ ಕುವೆಂಪುರನ್ನು ಅವರ ಚಿರನಿದ್ದೆಯಿಂದಲೂ ಎಬ್ಬಿಸಿಬಿಡುವ ಅಪಚಾರವಿದು.

ಜಾತಿವ್ಯವಸ್ಥೆಯ ಸಂಕುಚಿತತೆಯನ್ನು, ನಮ್ಮ ವೈಯಕ್ತಿಕ ಬದುಕಿನ ಸ್ವಾರ್ಥಗಳನ್ನು ಮೀರುವ ನವಯುಗದ ಆಶಯ-ಆದರ್ಶಗಳನ್ನು ಕವಿವಾಣಿ ನೆನಪಿಸುತ್ತಿದೆ. ಒಕ್ಕಲಿಗ, ಲಿಂಗಾಯತ ಮತ್ತಿತರ ಜಾತಿ ಆಧಾರಿತ ಅಭಿವೃದ್ಧಿ ಮಂಡಳಿಗಳ ಸ್ಥಾಪನೆ ಮತ್ತು ಅವುಗಳಿಗೆ ಬಜೆಟ್ ಅನುದಾನವನ್ನು ನೀಡುವುದನ್ನು ಸಮರ್ಥಿಸುತ್ತಿಲ್ಲ. ಭಾಷೆ ಮತ್ತು ಪದಗಳು ತಮ್ಮ ಅರ್ಥವನ್ನೆ ಕಳೆದುಕೊಳ್ಳುತ್ತಿವೆಯೇನೊ ಎಂದು ನಾವೆಲ್ಲರೂ ಗಾಬರಿಗೊಳ್ಳಬೇಕಾಗಿರುವ ಕಾಲವಿದು.

ಇಂತಹ ಕಾಲದಲ್ಲಿ ನೈತಿಕತೆ ಎಲ್ಲಿದೆ ಎಂದ ಮುಖ್ಯಮಂತ್ರಿಗಳ ಮಾತು ಸತ್ಯ. ಅವರ ಉದ್ದೇಶ ನಮ್ಮ ಕಾಲದ ಸತ್ಯವನ್ನು ಹೇಳುವುದು ಆಗಿರಲಿಲ್ಲ. ಆದರೆ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿ ದೊಡ್ಡ ಸತ್ಯಗಳನ್ನು ನಾವು ಸಾಕ್ಷಾತ್ಕರಿಸಿಕೊಳ್ಳುತ್ತೇವೆ. ಯಡಿಯೂರಪ್ಪನವರು ಮಾಡಿರುವುದು ಅದನ್ನೆ. ‘ಸಿಡಿ ಹಗರಣ’ದ ಸಾಕ್ಷ್ಯವಿಲ್ಲದಿದ್ದರೂ, ಕರ್ನಾಟಕದ ಸಾರ್ವಜನಿಕ ಜೀವನವನ್ನು ಅವಲೋಕಿಸುತ್ತಿರುವವರಿಗೆ ಒಂದು ಸರಳ ಸತ್ಯ ಈಗಾಗಲೆ ಅರಿವಾಗಿದೆ: ಬಹುತೇಕ ಮಟ್ಟಿಗೆ ರಾಜಕಾರಣದ ಬದುಕು ಭ್ರಷ್ಟತೆ ಮತ್ತು ಲಂಪಟತನದ್ದು ಆಗಿದೆ. ಇದು ತುಂಬ ವ್ಯಥೆಯಿಂದ ಹೇಳಬೇಕಿರುವ ಮಾತು. ಇದು ಕೇವಲ ನಾಯಕರಿಗೆ ಮಾತ್ರ ಅನ್ವಯವಾಗುವ ಮಾತಲ್ಲ. ಇಂದು ಸ್ವಾರ್ಥ ಮತ್ತು ಭೋಗರಹಿತ ಬದುಕು ಸಾರ್ವಜನಿಕ ಜೀವನದ ಆದರ್ಶಗಳಾಗಿ ಉಳಿದಿಲ್ಲ.

ಭ್ರಷ್ಟತೆಯ ಆರೋಪದಿಂದ ಮುಕ್ತರಾದವರು ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಬೆರಳಣಿಕೆಯಷ್ಟು ಜನರು ಮಾತ್ರ. ಮಿಕ್ಕವರು ತಮ್ಮ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದು ಹೀಗೆ: ಭ್ರಷ್ಟರಾಗದಿದ್ದರೆ ಚುನಾವಣೆಗಳನ್ನು ಗೆಲ್ಲಲು, ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಅವರ ಹೊಟ್ಟೆಬಾಕತನಕ್ಕೆ ಮಿತಿಯಿಲ್ಲ ಎಂದು ಮಾತ್ರ ಇಂದು ಹೇಳಿದರೆ ಸಾಲದು. ಆದರೆ ಹೊಟ್ಟೆಬಾಕತನ ಅಂತಹ ದೊಡ್ಡ ನೈತಿಕ ಸಮಸ್ಯೆಯೇನಲ್ಲ ಎನ್ನುವ ಕಾಲದಲ್ಲಿ ನಾವಿದ್ದೇವೆ. ಈ ಕಾಲದಲ್ಲಿ ಯಡಿಯೂರಪ್ಪನವರು ರಾಜ್ಯಸರ್ಕಾರದ ಚುಕ್ಕಾಣಿ ಹಿಡಿದಿದ್ದಾರೆ ಎನ್ನುವುದೆ ಅವರ ಸಾಧನೆ ಮತ್ತು ಅಧಃಪತನಗಳೆರಡನ್ನೂ ಏಕಕಾಲಕ್ಕೆ ಹಿಡಿದಿಡುವ ಅಂಶ.

Leave a Reply

Your email address will not be published.