ಯಡಿಯೂರಪ್ಪನವರ ಮುಂಗಡಪತ್ರಗಳು

ಯಡಿಯೂರಪ್ಪನವರು ರಕ್ಷಣಾತ್ಮಕವಾಗಿ ಆಡುವ ಮನಸ್ಥಿತಿಗೆ ಬಂದಿದ್ದಾರೆ. ಹೇಗಾದರೂ ಮಾಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವಆಡ್ಹಾಕ್ಡೇ ಟು ಡೇಆಟವಾಡುತ್ತಿದ್ದಾರೆ. ರಾಜ್ಯಕ್ಕೆ ಬೇಕಾದ ದೂರದೃಷ್ಟಿ ನಾಯಕತ್ವದ ಬದಲಿಗೆ ವ್ಯಾವಹಾರಿಕ ಮುಂದಾಳತ್ವದ ಆಡಳಿತ ನೀಡುತ್ತಿದ್ದಾರೆ.

ಮೋಹನದಾಸ್

ಕೋವಿಡ್ ನಂತರದ ದಿನಗಳಲ್ಲಿ ಆರ್ಥಿಕ ಹಿಂಜರಿತದ ಕಾರಣದಿಂದ ರಾಜ್ಯದ ಸಂಪನ್ಮೂಲ ಕ್ರೋಢೀಕರಣಕ್ಕೆ ಗುರುತರ ಹಿಂದೇಟು ಆಗಿರುವುದನ್ನು ನಿಮಗೆ ತಿಳಿಹೇಳಲು ಯಾವುದೇ ಅರ್ಥಶಾಸ್ತ್ರಜ್ಞನ ಅಗತ್ಯವಿಲ್ಲ. ಅದೇ ರೀತಿಯಲ್ಲಿ ಕೋವಿಡ್ ನಿರ್ಧಾರಿತ ವೈದ್ಯಕೀಯ ವೆಚ್ಚಗಳು ಮತ್ತು ಅತಿವೃಷ್ಟಿ ಸಂಬಂಧಿತ ಖರ್ಚುಗಳು ರಾಜ್ಯದ ಮುಂಗಡಪತ್ರದ ಸರಿದೂಗುವಿಕೆಗೆ ಸವಾಲಾಗಿರುವುದು ಕೂಡಾ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದಾಗ್ಯೂ ರಾಜ್ಯದ ಪ್ರಸಕ್ತ ಆರ್ಥಿಕ ಪರಿಸ್ಥಿತಿಯ ಗಂಭೀರತೆಯನ್ನು ಈ ನಾಲ್ಕು ಅಂಶಗಳಲ್ಲಿ ವಿವರಿಸಲು ಯತ್ನಿಸಿದೆ.

 1. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಒಟ್ಟು ರೆವಿನ್ಯೂ (ರಾಜಸ್ವ) ಜಮೆ ರೂ.1,64,878 ಕೋಟಿಯಿಂದ ರೂ.1,72,271 ಕೋಟಿಗಳವರೆಗೆ ಬೆಳೆದಿದ್ದರೆ ಅದೇ ಸಮಯದಲ್ಲಿ ರಾಜ್ಯದ ಒಟ್ಟು ಕ್ಯುಮುಲೇಟಿವ್ ಸಾಲ/ದಾಯಿತ್ವ ರೂ.2,33,057 ಕೋಟಿಯಿಂದ ರೂ.4,40,834 ಕ್ಕೆ ಏರಿದೆ.
 2. ಇದೇ ನಾಲ್ಕು ವರ್ಷಗಳಲ್ಲಿ ರಾಜ್ಯದ ಬಡ್ಡಿಯ ಹೊರೆ ರೂ.18,519 ಕೋಟಿಯಿಂದ ರೂ.27,161 ಕೋಟಿಗೆ ಏರಿದೆ. ಇದು ಒಟ್ಟು ಬಜೆಟ್‍ನ ಶೇಕಡಾ 9 ರಿಂದ ಶೇಕಡಾ 12 ಕ್ಕೆ ಏರಿದೆ.
 3. ಇದೇ ಸಮಯದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಬರುವ ತೆರಿಗೆ ಪಾಲು ಹಾಗೂ ಸಹಾಯಾನುದಾನ ರೂ.50,900 ಕೋಟಿಯಿಂದ ರೂ.39,810 ಕೋಟಿಗೆ ಇಳಿದಿದೆ.
 4. ಇದೇ ನಾಲ್ಕು ವರ್ಷಗಳಲ್ಲಿ ರಾಜ್ಯದ ರೆವಿನ್ಯೂ ಬಾಬ್ತಿನ ಖರ್ಚು ರೂ.1,64,300 ಕೋಟಿಯಿಂದ ರೂ.1,87,407 ಕೋಟಿಗೆ ಏರಿದ್ದರೆ ಆಸ್ತಿ ನಿರ್ಮಾಣದ ಸಾಧ್ಯತೆಯುಳ್ಳ ಕ್ಯಾಪಿಟಲ್ ಖರ್ಚು ಇತ್ಯಾದಿ ರೂ.39,146 ಕೋಟಿಯಿಂದ ಕೇವಲ ರೂ.44,237 ಕೋಟಿಗೆ ಏರಿದೆ. (ಈ ಕ್ಯಾಪಿಟಲ್ ಖರ್ಚಿನಲ್ಲಿ ಸಾಲ ಮನ್ನಾಗೆ ನೀಡುವ ಅನುದಾನದ ಬಾಬ್ತು ಕೂಡಾ ಸೇರಿದೆ.)

ಮೇಲಿನ ಅಂಶಗಳಲ್ಲಿ ರಾಜ್ಯದ ಅಸಹಾಯಕತೆ ಹಾಗೂ ಕೇಂದ್ರದ ಮಲತಾಯಿ ಧೋರಣೆಗಳ ಜೊತೆಗೆ ಸರ್ಕಾರಗಳು ತಮ್ಮ ಅಳತೆಮೀರಿ ಮಾಡುತ್ತಿರುವ ಸಂಬಳ-ಸಾರಿಗೆಯ ರೆವಿನ್ಯೂ ಖರ್ಚು ಮತ್ತು ವರ್ಷದಿಂದ ವರ್ಷಕ್ಕೆ ಏರುತ್ತಿರುವ ಬಡ್ಡಿಯ ಪ್ರಮಾಣ ಮತ್ತು ಅನುಪಾತಗಳೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಡಿಸಿರುವ ಕಳೆದ ಮೂರು ಮುಂಗಡಪತ್ರಗಳನ್ನು ಈ ಲೇಖನ ಒಳಗೊಂಡಿರುವ 5 ಕೋಷ್ಠಕಗಳಲ್ಲಿ ಗಮನಿಸಬಹುದು.

ಜಾತಿ, ಮಠಮಾನ್ಯರಿಗೆ ಯಡಿಯೂರಪ್ಪನವರು ನೀಡಿರುವ ಅನುದಾನಗಳ ಪಟ್ಟಿಯೇ ಮುಂಗಡಪತ್ರಗಳಲ್ಲಿ ಅತಿ ಹೆಚ್ಚು ಪತ್ರಿಕಾ ಪ್ರಾಮುಖ್ಯ ಪಡೆದ ಅಂಶಗಳಾಗಿರುತ್ತವೆ. ಇವುಗಳ ಬಗ್ಗೆಯ ಚರ್ಚೆಯನ್ನು ನಮ್ಮ ದೈನಂದಿನ ಪತ್ರಿಕೆಗಳಿಗೆ ಬಿಟ್ಟು ಕಳೆದ ಎರಡೂವರೆ ವರ್ಷದಲ್ಲಿ ಮುಖ್ಯಮಂತ್ರಿಯು ಮಂಡಿಸಿದ ಮುಂಗಡಪತ್ರಗಳ ಸ್ಥೂಲ ವಿಶ್ಲೇಷಣೆಯನ್ನು ಈ ಕೆಳಕಂಡ ಪ್ರಮುಖ ವಿಚಾರಗಳಲ್ಲಿ ವರ್ಗೀಕರಿಸಿ ನೋಡೋಣ:

 1. ಒಕ್ಕೂಟ ಸರ್ಕಾರದ ಹೊಣೆಗೇಡಿತನ ಹಾಗೂ ದುರಾಡಳಿತದ ಕಾರಣದಿಂದ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ. ಇದೇನೂ ಸಾಲದೆಂಬಂತೆ ಕಳೆದ ಒಂದು ವರ್ಷದಿಂದ ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಇನ್ನಷ್ಟು ಆರ್ಥಿಕ ಸಂಕಟದ ಪರಿಸ್ಥಿತಿ ಎದುರಾಗಿದೆ. ಇದರ ಜೊತೆಯಲ್ಲಿಯೇ ಅತಿವೃಷ್ಟಿಯ ಕರಿಛಾಯೆಯೂ ರಾಜ್ಯದ ಮೇಲೆ ಬಂದೊದಗಿದೆ. ಇವು ಯಾವುದಕ್ಕೂ ನಾವು ಯಡಿಯೂರಪ್ಪನವರನ್ನು ದೂಷಿಸುವಂತಿಲ್ಲ. ಈ ಕಾರಣದಿಂದಲೇ ರಾಜ್ಯದ ಬೊಕ್ಕಸಕ್ಕೆ ಶೇಕಡಾ 10 ರಿಂದ 20 ರಷ್ಟು ರಾಜಸ್ವ ನಷ್ಟವಾಗಿರಬಹುದು. ಸ್ಥೂಲ ಸಂಖ್ಯೆಯಲ್ಲಿ ಹೇಳಬೇಕೆಂದರೆ ಈ ಕಾರಣಗಳಿಂದ ರಾಜ್ಯದ ಖಜಾನೆಗೆ ರೂ.15,000 ಕೋಟಿಯಿಂದ ರೂ.20,000 ಕೋಟಿಯವರೆಗೆ ರೆವಿನ್ಯೂ ನಷ್ಟವಾಗಿರುವ ಸಾಧ್ಯತೆ ಇದೆ. ಈ ಹೆಚ್ಚಿನ ಹಣ ಇದ್ದಲ್ಲಿ ಮುಖ್ಯಮಂತ್ರಿಯು ಇನ್ನೂ ಕೆಲವಾರು ಅಭಿವೃದ್ಧಿಪರ ಕ್ಯಾಪಿಟಲ್ ಖರ್ಚು ಮಾಡಲು ಸಾಧ್ಯವಾಗುತ್ತಿತ್ತು.
 2. ಜನಪ್ರಿಯತೆಯ ಅಗ್ಗದ ಪ್ರಚಾರದ ಗೀಳಿಗೆ ಬಿದ್ದಿರುವ ಮುಖ್ಯಮಂತ್ರಿ ಮಠ-ಮಾನ್ಯರಿಗೆ ಹಾಗೂ ಜಾತಿ-ಧರ್ಮಕ್ಕೆಂದು ಇಲ್ಲದ ಹಣದಲ್ಲಿ ದುಂದುವೆಚ್ಚ ಮಾಡುತ್ತಿದ್ದಾರೆ. ಈ ಅನವಶ್ಯಕ ಬಾಬ್ತು ರಾಜ್ಯದ ಬೊಕ್ಕಸಕ್ಕೆ ರೂ.4,000 ಕೋಟಿಯಿಂದ ರೂ.5,000 ಕೋಟಿಯವರೆಗಿನ ಹೊರೆಯಾಗಿದೆ. ಇದಕ್ಕೆ ಹೊರತಾಗಿ ಹಿಂದಿನ ಸಮ್ಮಿಶ್ರ ಸರ್ಕಾರ ಬೇಜವಾಬ್ದಾರಿಯಿಂದ ಘೋಷಿಸಿದ ಸಾಲಮನ್ನಾ ಬಾಬ್ತು ಕೂಡಾ ರಾಜ್ಯದ ಜನತೆಯ ಮೇಲೆ ಹೊರಿಸಿದ ತಲೆಭಾರವಾಗಿದೆ. ಮುಂಗಡಪತ್ರ ಮಂಡಿಸುವುದೇ ಇಂತಹ ಅಗ್ಗದ ಜನಪ್ರಿಯ ಘೋಷಣೆಗಳಿಗೆ ಎಂದು ಅಭಿಪ್ರಾಯ ಮೂಡಿಸುವಷ್ಟರ ಮಟ್ಟಿಗೆ ಸರ್ಕಾರಗಳು ತಮ್ಮ ಅಲ್ಪಾವಧಿ ತಿಳಿವಳಿಕೆಯನ್ನು ತೋರಿವೆ.
 3. ಯಡಿಯೂರಪ್ಪನವರು ತಮ್ಮ ಮೊದಲ 2008-11 ರ ಸರ್ಕಾರದಲ್ಲಿ ಹಲವು ಉಪಯುಕ್ತ ಯೋಜನೆಗಳನ್ನಾದರೂ ತಂದಿದ್ದರು. ಹೆಣ್ಣುಮಕ್ಕಳಿಗೆ ಸೈಕಲ್, ಭಾಗ್ಯಲಕ್ಷ್ಮಿ, ಸಂಧ್ಯಾಸುರಕ್ಷಾ, ಭೂಚೇತನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಬಡತನ ನಿವಾರಣೆ ಹಾಗೂ ಅತಿ ಹಿಂದುಳಿದವರ ಬೆನ್ನಿಗೆ ನಿಲ್ಲುವ ಭರವಸೆಯಿತ್ತು. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಯಡಿಯೂರಪ್ಪನವರು ಈ ತೆರನಾದ ಬಡತನ ನಿವಾರಣೆ – ದೀನ ಕಲ್ಯಾಣದ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಇದಕ್ಕೆ ಹೊರತಾಗಿ ಉದ್ಯೋಗ ಸೃಷ್ಟಿಸಬಲ್ಲ ಬೃಹತ್ ಯೋಜನೆಗಳು ಮತ್ತು ಮೂಲಭೂತ ಸೌಕರ್ಯದ ಯೋಜನೆಗಳು ಸಹಾ ಇಲ್ಲವಾಗಿವೆ. ಇದು ಮುಖ್ಯಮಂತ್ರಿ ಕಾರ್ಯಾಲಯದ ವೈಚಾರಿಕ ಬರಡುತನಕ್ಕೆ ಕನ್ನಡಿಯಾಗಿದೆ.
 4. ಮುಂಗಡಪತ್ರದ ಸೀಮಿತ ಪರಧಿಯಲ್ಲಿಯೇ ಹೆಚ್ಚೆಚ್ಚು ಕ್ಯಾಪಿಟಲ್ ಬಾಬ್ತಿನ ಆಸ್ತಿ ನಿರ್ಮಾಣದ ಖರ್ಚು ಮಾಡುವ ಹಾಗೂ ರಾಜ್ಯಕ್ಕೆ ಅಗತ್ಯ ನೀರಾವರಿ-ಮೂಲಭೂತ ಸೌಕರ್ಯದ ಯೋಜನೆಗಳೂ ಕಾಣೆಯಾಗಿವೆ. ಕೃಷ್ಣಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮೇಕೆದಾಟು ಯೋಜನೆಗೆ ಕಾಗದದ ಮೇಲಿನ ಒಪ್ಪಿಗೆಯೂ ಸಿಕ್ಕಿಲ್ಲ. ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ, ಸಬರ್ಬನ್ ರೈಲು ಯೋಜನೆಗಳು ಕೇವಲ ಕಾಟಾಚಾರದ ಅನುದಾನ ನೀಡಿಕೆಗೆ ಸೀಮಿತವಾಗಿವೆ. ಇದು ದುರದೃಷ್ಟಕರ.
 5. ರಾಜ್ಯ ಸರ್ಕಾರ ನಿರ್ಲಕ್ಷ ಸಾಲದೆಂಬಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಲತಾಯಿ ಧೋರಣೆಯ ಬರೆ ಹಾಕುತ್ತಿದೆ. ಏಳನೇ ಆರ್ಥಿಕ ಆಯೋಗವು ರಾಜ್ಯದ ತೆರಿಗೆ-ಅನುದಾನದ ಪಾಲನ್ನು ಶೇಕಡಾ 4.5 ರಿಂದ ಶೇಕಡಾ 3.5 ಕ್ಕೆ ಇಳಿಸಿದೆ. ರಾಷ್ಟ್ರದ ಒಟ್ಟು ಜಿಡಿಪಿಯಲ್ಲಿ ರಾಜ್ಯದ ಪಾಲು ಸರಿಸುಮಾರು ಶೇಕಡಾ 12 ರಷ್ಟಿದೆ. ಇದಕ್ಕೆ ಸಮನಾಗಿ ಕೇಂದ್ರದ ತೆರಿಗೆ ಪಾಲಿನಲ್ಲಿಯೂ ಸಹಾ ರಾಜ್ಯದ ಕೊಡುಗೆ ಶೇಕಡಾ 10 ರಿಂದ 12 ರಷ್ಟಿದೆ. ರಾಜ್ಯದ ಆರ್ಥಿಕತೆಯಿಂದ ಇಷ್ಟೆಲ್ಲಾ ಫಲ ಅನುಭವಿಸಿರುವ ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲನ್ನು ಕೇವಲ ಶೇಕಡಾ 3.5 ಕ್ಕೆ ಇಳಿಸಿದೆ. ಇದು ಅನ್ಯಾಯದ ಪರಮಾವಧಿ. ಕೇಂದ್ರ ಸರ್ಕಾರದ ಮುಂದೆ ದನಿಯೆತ್ತಲು ಅಶಕ್ತರಾಗಿರುವ ಯಡಿಯೂರಪ್ಪನವರು ಈ ಘೋರ ಅನ್ಯಾಯವನ್ನು ಮಂಡಿಯೂರಿ ಸ್ವೀಕರಿಸಿದ್ದಾರೆ.
 6. ಇದಕ್ಕೆ ಹೊರತಾಗಿಯೂ ಯಡಿಯೂರಪ್ಪ ಸರ್ಕಾರದ ಕೋವಿಡ್ ನಿರ್ವಹಣೆ ಬೇರೆಲ್ಲಾ ರಾಜ್ಯಗಳಿಗೆ ಹೋಲಿಕೆಯಲ್ಲಿ ಉತ್ತಮವಾಗಿಯೇ ಇದೆ. ಯಡಿಯೂರಪ್ಪನವರು ತಮ್ಮ ‘ಕಾಮನ್ ಸೆನ್ಸಿಕಲ್’ ವಿಧಾನದಿಂದ ಅನಗತ್ಯ ಲಾಕ್‍ಡೌನ್ ಹೇರಿಕೆ ಮಾಡದೆ ತಮ್ಮ ಆರೋಗ್ಯ-ಕಂದಾಯ ಮಂತ್ರಿಗಳ ಮೂಗುದಾರ ಹಿಡಿದು ಎಳೆದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಭೂ ಒಡೆತನ, ಕೈಗಾರಿಕೆ ಹಾಗೂ ಲೇಬರ್ ಇಲಾಖೆಗಳಲ್ಲಿ ಕೆಲವು ಸುಧಾರಣೆಗೆ ಕಾರಣರಾಗಿದ್ದಾರೆ. ಗೃಹ ಸಚಿವರ ನೇತೃತ್ವದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆಯೂ ಮೆಚ್ಚುಗೆಗೆ ಒಳಗಾಗಿದೆ.
 7. ತಮ್ಮ ಎರಡನೇ ಇನ್ನಿಂಗ್ಸ್‍ನಲ್ಲಿ ಯಡಿಯೂರಪ್ಪನವರು ಆಕ್ರಾಮಿಕ ಬ್ಯಾಟಿಂಗ್ ಪ್ರದರ್ಶನ ನೀಡುವ ಎಣಿಕೆಯಿತ್ತು. ದೊಡ್ಡ ಯೋಜನೆಗಳ ಹಾಗೂ ಮೂಲಭೂತ ಸೌಕರ್ಯ ಸೃಷ್ಟಿಸುವ ಸಿಕ್ಸರ್‍ಗಳನ್ನು ಸಿಡಿಸುವ ಅಪೇಕ್ಷೆಯಿತ್ತು. ಆದರೆ ನಮ್ಮ ದುರಾದೃಷ್ಟಕ್ಕೆ ಯಡಿಯೂರಪ್ಪನವರು ರಕ್ಷಣಾತ್ಮಕವಾಗಿ ಆಡುವ ಮನಸ್ಥಿತಿಗೆ ಬಂದಿದ್ದಾರೆ. ಹೇಗಾದರೂ ಮಾಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ‘ಆಡ್‍ಹಾಕ್ – ಡೇ ಟು ಡೇ’ ಆಟವಾಡುತ್ತಿದ್ದಾರೆ. ರಾಜ್ಯಕ್ಕೆ ಬೇಕಾದ ದೂರದೃಷ್ಟಿ ನಾಯಕತ್ವದ ಬದಲಿಗೆ ವ್ಯಾವಹಾರಿಕ ಮುಂದಾಳತ್ವದ ಆಡಳಿತ ನೀಡುತ್ತಿದ್ದಾರೆ.

Leave a Reply

Your email address will not be published.