ಯಡಿಯೂರಪ್ಪ ಅಧಿಕಾರದಲ್ಲಿರುವುದು ಬಿಜೆಪಿ ಹೈಕಮಾಂಡಿಗೆ “ಅಸಂತೋಷ”!

ಕರ್ನಾಟಕದಿದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ರಾಜ್ಯ ರಾಜಕೀಯದ ಮುಂದಿನ ಸ್ವರೂಪ ಹೇಗಿರಬಹುದು ಎಂಬುದಕ್ಕೆ ನಾಂದಿ ಹಾಡಿದೆಯೇ? ಹಾಗೆ ಅನಿಸಲು ಕಾರಣಗಳು ಇವೆ. ಬಿಜೆಪಿಯ ಹೈಕಮಾಂಡು ತನ್ನ ಈ ನಡೆಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸೇರಿದಂತೆ ರಾಜ್ಯದ ಯಾವ ನಾಯಕರಿಗೂ ಮೂರು ಕಾಸಿನ ಕಿಮ್ಮತ್ತು ಇಲ್ಲ ಎಂದು ಬಹಳ ಸ್ಪಷ್ಟವಾಗಿ, ಗೋಡೆಯ ಮೇಲಿನ ಬರಹದ ಹಾಗೆ, ಹೇಳಿದೆ.

ಯಡಿಯೂರಪ್ಪ ಅವರು ಬಿಜೆಪಿಗೆ ಈಗ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪ. ದೆಹಲಿಯ ನಾಯಕರಿಗೆ ಯಡಿಯೂರಪ್ಪ ಅವರ ಮಹತ್ವ ಗೊತ್ತಿದೆ. ಆದರೆ, ಅವರು ಮುಖ್ಯಮಂತ್ರಿಯಾಗಿ ಇರುವುದು ಇಷ್ಟವಿಲ್ಲ. ಏಕೆಂದರೆ ತಾನೇ ಹಾಕಿಕೊಂಡ ವಯೋಮಿತಿಯ ನಿಯಮವನ್ನು ಈ ಒಬ್ಬ ಪ್ರಾದೇಶಿಕ ನಾಯಕನಿಗಾಗಿ ಉಲ್ಲಂಘಿಸಬೇಕಾಗಿದೆ ಎಂಬುದು ಬಿಜೆಪಿಯ ಉನ್ನತ ನಾಯಕರಿಗೆ ಇರುವ ಮುಜುಗರ. ಹೀಗಾಗಿ ತನಗೆ ಆಗುತ್ತಿರುವ ಇಕ್ಕಟ್ಟನ್ನು ಬಚ್ಚಿಟ್ಟುಕೊಳ್ಳಲು ಆಗದೆ ಅದು ನಾನಾ ರೀತಿಯಲ್ಲಿ ವ್ಯಕ್ತ ಮಾಡುತ್ತಿದೆ.

ಕರ್ನಾಟಕದ ಬಿಜೆಪಿಯ ಕೋರ್ ಕಮಿಟಿ (ಅತ್ಯುನ್ನತ ಸಮಿತಿ?) ಸರ್ವಾನುಮತದಿಂದ ಕಳಿಸಿದ ಪಟ್ಟಿಯನ್ನು ನೇರವಾಗಿ ಕಸದ ಬುಟ್ಟಿಗೆ ಬಿಸಾಕಿ ಯಾರೋ ತಳಮಟ್ಟದ ಕಾರ್ಯಕರ್ತರು ಎಂದು ಇಬ್ಬರನ್ನು, ಅವರೇನು ಹೆಸರು ಮಾಡಿದವರಲ್ಲ, ನಾಮಕರಣ ಮಾಡಿ, ಇವರನ್ನು ಆರಿಸಿ ಕಳಿಸಿ ಎಂದು ಹೇಳುವುದನ್ನು ಯಡಿಯೂರಪ್ಪ ಅವರಂಥ ಪ್ರತಿಭಟನೆಯೇ ಮೈವೇತ್ತಂಥ ನಾಯಕ ಹೇಗೆ ಸಹಿಸಿಕೊಂಡಿದ್ದಾರೆಯೋ ತಿಳಿಯದು. ಈ ಕೋರ್ ಕಮಿಟಿಯಲ್ಲಿ ಇದ್ದ ಒಬ್ಬರಿಗೆ ತಾವೆಲ್ಲ ಸೇರಿ ಕಳಿಸುವ ಪಟ್ಟಿಗೆ ಯಾವ ಬೆಲೆಯೂ ಇರುವುದಿಲ್ಲ ಎಂದು ತಿಳಿದೂ ಅವರು ಸುಮ್ಮನಿದ್ದರು ಎಂದು ವರದಿಯಾಗಿದೆ. ಅಥವಾ ಅವರು ಮುಸಿ ಮುಸಿ ನಗುತ್ತ ಕುಳಿತಿದ್ದಿರಬಹುದು. ಅವರು ಮುಖ್ಯಮಂತ್ರಿಗೆ ಪರ್ಯಾಯ ನಾಯಕನಾಗಿ ತಮ್ಮನ್ನೇ ತಾವು ಬಿಂಬಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕದ ರಾಜಕೀಯ ಅಧಿಕಾರ ಮುಖ್ಯವಾಗಿ ಎರಡು ಸಮುದಾಯಗಳ ನಡುವೆ ಹಂಚಿ ಹೋಗುತ್ತಿದೆ. 1983 ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದಾಗ ಇಲ್ಲಿ ಮೊದಲ ಬಾರಿ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದು, ಅದುವರೆಗೆ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಒಬ್ಬ ಬ್ರಾಹ್ಮಣರ ಬದಲಿಗೆ ಮತ್ತೊಬ್ಬ ಬ್ರಾಹ್ಮಣರು ಮುಖ್ಯಮಂತ್ರಿಯಾದರು. ಕಾಂಗ್ರೆಸ್ಸಿನ ಮುಖ್ಯಮಂತ್ರಿಯಾಗಿ ಇದ್ದವರು, ಆರ್.ಗುಂಡೂರಾವ್ ಅವರು. ಅವರ ಉತ್ತರಾಧಿಕಾರಿಯಾಗಿ ಜನತಾ ಪಕ್ಷದ ಸರ್ಕಾರದ ಮುಖ್ಯಮಂತ್ರಿಯಾದವರು ರಾಮಕೃಷ್ಣ ಹೆಗಡೆಯವರು. ಹೆಗಡೆಯವರು ಜಾತಿಯಿಂದ ಬ್ರಾಹ್ಮಣರಾಗಿದ್ದರೂ ಅವರನ್ನು ಲಿಂಗಾಯತರು ತಮ್ಮ ಪ್ರಶ್ನಾತೀತ ನಾಯಕ ಎಂದು ತಿಳಿದುಕೊಂಡಿದ್ದರು. ಅವರನ್ನು ಆರಾಧಿಸಿದಷ್ಟು, ಲಿಂಗಾಯತ ಶಾಸಕರು ಮತ್ತೆ ಯಾವ ನಾಯಕನನ್ನೂ ಆರಾಧಿಸುತ್ತಿರಲಿಲ್ಲ.

ಹೆಗಡೆ ಅವರನ್ನು ಬಿಟ್ಟರೆ 1988ರ ನಂತರ ಈಚೆಗೆ ಬ್ರಾಹ್ಮಣರು ಕರ್ನಾಟಕದ ಮುಖ್ಯಮಂತ್ರಿ ಗದ್ದುಗೆ ಏರಿಲ್ಲ. ನಂತರ ಆದವರೆಲ್ಲ ಒಂದೋ ಲಿಂಗಾಯತರು, ಇಲ್ಲವೇ ಒಕ್ಕಲಿಗರು. ಇಲ್ಲವೇ ಹಿಂದುಳಿದ ವರ್ಗಗಳ ಪ್ರಬಲ ನಾಯಕರು. ಹಿಂದುಳಿದ ವರ್ಗಗಳ ನಾಯಕರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿರುವುದಕ್ಕೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದುಕೊಂಡು ಈ ಸಮುದಾಯಗಳಲ್ಲಿ ನಿರ್ಮಿಸಿದ ಅಸ್ಮಿತೆಯು ಕಾರಣ. ಅರಸು ಅವರನ್ನು ಬಿಟ್ಟರೆ ಉಳಿದ ನಾಲ್ವರು ಹಿಂದುಳಿದ ನಾಯಕರು ಮುಖ್ಯಮಂತ್ರಿಯಾದವರು ಎಂದರೆ ಎಸ್.ಬಂಗಾರಪ್ಪ, ವೀರಪ್ಪ ಮೊಯಿಲಿ, ಧರಂಸಿಂಗ್ ಮತ್ತು ಸಿದ್ದರಾಮಯ್ಯ. ಇವರಲ್ಲಿ ಮೊದಲಿನ ಮೂವರು ಅಲ್ಪ ಅವಧಿಗೆ ಮುಖ್ಯಮಂತ್ರಿಗಳಾಗಿದ್ದರು ಎಂಬುದನ್ನು ಕೂಡ ಇಲ್ಲಿ ಉಲ್ಲೇಖಿಸಬೇಕು. ಮತ್ತು ಧರಂಸಿಂಗ್ ಅವರು ಸ್ವತಂತ್ರವಾಗಿ ಮುಖ್ಯಮಂತ್ರಿಯಾದವರಲ್ಲ; ಬೆಂಬಲಿತ ಪಕ್ಷದ ಆಯ್ಕೆಯಾಗಿ ಆದವರು.

1947 ರಲ್ಲಿ ಮೊದಲ ಮುಖ್ಯಮಂತ್ರಿಯಾಗಿದ್ದ ಚೆಂಗಲರಾಯರೆಡ್ಡಿ ಅವರಿಂದ ಹಿಡಿದು ಈಗ ಮುಖ್ಯಮಂತ್ರಿ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರ ವರೆಗೆ ಆದ ಮುಖ್ಯಮಂತ್ರಿಗಳಲ್ಲಿ ಲಿಂಗಾಯತರದು ಸಿಂಹಪಾಲು. ಯಡಿಯೂರಪ್ಪ ಅವರಂಥವರು ಮತ್ತೆ ಮತ್ತೆ ಮುಖ್ಯಮಂತ್ರಿಯಾಗಿರಬಹುದು. ಒಟ್ಟು 13 ಸಾರಿ ಲಿಂಗಾಯತರು ಮತ್ತು ಎಂಟು ಸಾರಿ ಒಕ್ಕಲಿಗರು ಈ ಹುದ್ದೆಗೆ ಬಂದಿದ್ದಾರೆ. ಅದರಲ್ಲಿಯೂ ಮೈಸೂರು ರಾಜ್ಯ ರಚನೆಯಾಗುವುದಕ್ಕಿಂತ ಮುಂಚೆ ಮೂವರು ಒಕ್ಕಲಿಗರು ಸತತವಾಗಿ ಮುಖ್ಯಮಂತ್ರಿಯಾಗಿದ್ದುದನ್ನು ಬಿಟ್ಟರೆ ನಂತರ ಅವರಿಗೆ ಹಾಗೆ ಸತತವಾಗಿ ಅಧಿಕಾರಕ್ಕೆ ಏರುವ ಅದೃಷ್ಟ ಸಿಗಲಿಲ್ಲ. ಆದರೆ, ಲಿಂಗಾಯತರು ಸತತವಾಗಿ ಮುಖ್ಯಮಂತ್ರಿ ಗದ್ದುಗೆ ಏರಿದ್ದಾರೆ. ನಡು ನಡುವೆ ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ! 

ರಾಜ್ಯದ ಏಕೀಕರಣ ಆಗುವಾಗ ಒಕ್ಕಲಿಗರು ಅದನ್ನು ವಿರೋಧಿಸಿದ್ದು ಇದೇ ಕಾರಣಕ್ಕಾಗಿ. ಏಕೆಂದರೆ ಏಕೀಕರಣವಾದರೆ ಕರ್ನಾಟಕವು ಪ್ರಮುಖವಾಗಿ ಲಿಂಗಾಯತ ಪ್ರಧಾನ ರಾಜಕಾರಣದ ನೆಲೆಬೀಡು ಆಗುತ್ತದೆ ಎಂಬುದು ಅವರಿಗೆ ಖಚಿತವಾಗಿ ತಿಳಿದಿತ್ತು. ಅವರ ಅಂಜಿಕೆ ನಿಜ ಎಂಬುದನ್ನು ಏಕೀಕರಣೋತ್ತರ ರಾಜಕೀಯ ಸಾರಿದೆ. ಬಿಜೆಪಿ ಹೈಕಮಾಂಡಿನ ಇಕ್ಕಟ್ಟು ಇರುವುದು ಇಲ್ಲಿ. ಅವರಿಗೆ, ಯಡಿಯೂರಪ್ಪ ಎಷ್ಟು ಮುಖ್ಯ ಎಂದು ಗೊತ್ತು, ಆದರೆ, ಅವರನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. “ಹೋಗು ಎನ್ನಲು ಆಗದೆ ಹೊಗೆ ಹಾಕಿದರು” ಎನ್ನುವಂತೆ ಅವರು ಯಡಿಯೂರಪ್ಪ ವಿಚಾರದಲ್ಲಿ ನಡೆದುಕೊಳ್ಳುತ್ತಿದ್ದಾರೆ. ಸಂಪುಟ ರಚನೆಯಲ್ಲಿ ಅವರ ಕೈ ಎಷ್ಟು ಕಟ್ಟಿ ಹಾಕಬೇಕೋ ಅಷ್ಟು ಕಟ್ಟಿ ಹಾಕಿರುವುದೂ ಈಚಿನ ಇತಿಹಾಸದ ಭಾಗ. ಅದಕ್ಕೆ ಉದಾಹರಣೆ ಎಂದರೆ, ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ÷್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಯಾಗಿ ಹೇರಿದ್ದು. ಬೆಂಗಳೂರಿನ ಮೇಯರ್ ಆಯ್ಕೆಯಲ್ಲಿ ಕೂಡ ಯಡಿಯೂರಪ್ಪ ಮಾತು ನಡೆಯಲಿಲ್ಲ.

ಇದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಮತ್ತೆ ರಾಜ್ಯಸಭೆ ಚುನಾವಣೆಗೆ ಬರುವುದಾದರೆ, ಒಬ್ಬ ಹೋಟೆಲ್ ಉದ್ಯಮಿಯನ್ನು ಕೋರ್ ಕಮಿಟಿಯು “ಸರ್ವಾನುಮತದಿಂದ” ಆರಿಸಿ ಹೈಕಮಾಂಡಿಗೆ ಶಿಫಾರಸು ಮಾಡಿತ್ತು. ಈ ಹೋಟೆಲ್ ಉದ್ಯಮಿ ಪಕ್ಷಕ್ಕೆ ಏನು ಕೆಲಸ ಮಾಡಿದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಅವರು, ಈಗಿನ ಸರ್ಕಾರ ಬರಲು ನಡೆದ “ಆಪರೇಷನ್ ಕಮಲ”ದಲ್ಲಿ ಹಿನ್ನೆಲೆಯಲ್ಲಿ ಇದ್ದಿರಬಹುದೇ? ಹಾಗಿದ್ದರೂ ಅವರ ಹೆಸರನ್ನು ತಿರಸ್ಕರಿಸುವ ಮೂಲಕ, ಆಪರೇಷನ್ ಕಮಲಕ್ಕೆ ಸಹಾಯ ಮಾಡಿದವರಿಗೆ ಋಣ ಸಂದಾಯ ಮಾಡಲು ಯಡಿಯೂರಪ್ಪನವರಿಗೆ ತಾನು ಸಹಾಯ ಮಾಡುವುದಿಲ್ಲ ಎಂದೂ ಹೈಕಮಾಡ್ ಸಂದೇಶ ಕೊಟ್ಟಂತಿದೆ.

ಹೀಗೆಲ್ಲ ಸಂದೇಶ ಕೊಡುವಾಗ ಬಿಜೆಪಿ ಒಂದು ಸಂಗತಿಯನ್ನು ಮರೆತಿದೆ. ಅಥವಾ ಆಡಳಿತ ಪಕ್ಷವಾಗಿರುವ ಅದಕ್ಕೆ ಅದು ಮುಖ್ಯವಾಗಿಯೂ ಕಂಡಿರಲಿಕ್ಕಿಲ್ಲ. ರಾಜ್ಯಸಭೆಗೆ ಮೇಲ್ಮನೆ ಎಂದೂ ಹೆಸರು. ಅದು ಕೆಳಮನೆ ಅಥವಾ ಲೋಕಸಭೆಯಲ್ಲಿ ಮುಖ್ಯವಾಗಿ ಆಗುವ ಮಸೂದೆಗಳ ರಚನೆ, ಕಲಾಪ ಕುರಿತು ರಾಜ್ಯಸಭೆಯಲ್ಲಿ “ಪ್ರತಿಫಲನ” ಸ್ವರೂಪದ ಚರ್ಚೆ ನಡೆಸಬೇಕು. ಅಂದರೆ ರಾಜ್ಯಸಭೆಯಲ್ಲಿ ಇರುವ ಪರಿಣತರು, ಲೋಕಸಭೆಯಲ್ಲಿ ಆಗುವ ಲೋಪದೋಷಗಳನ್ನು ಸರಿಪಡಿಸಬೇಕು ಎಂಬುದು ಸಂವಿಧಾನ ಕರ್ತರ ಆಶಯ. ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಕಳಿಸಲು ಆಯ್ಕೆ ಮಾಡುವ ಮೂಲಕ ವಿರೋಧ ಪಕ್ಷಗಳು ತೋರಿಸಿದ ಮುತುವರ್ಜಿಯನ್ನು ಬಿಜೆಪಿ ತೋರಿಸಲಿಲ್ಲ.

ಮೇಲ್ಮನೆ, ಹೀಗೆ ಪುನರ್ವಸತಿ ಕೇಂದ್ರವಾಗಿ, ಅಥವಾ ಅವಕಾಶ ಕಲ್ಪಿಸುವ ಕೇಂದ್ರವಾಗಿ ಬಹಳ ಕಾಲವೇ ಆಯಿತು. ಯಾರು ಯಾರನ್ನೋ ಎಲ್ಲ ಪಕ್ಷಗಳು ಅಲ್ಲಿಗೆ ಕಳಿಸಿವೆ. ಈ ತಪ್ಪನ್ನು ಹಿಂದೆ, ಕಾಂಗ್ರೆಸ್ ಪಕ್ಷವೂ ಮಾಡಿದೆ, ಜನತಾದಳ (ಎಸ್) ಕೂಡ ಮಾಡಿದೆ. ಆದರೆ, ಈ ಸಾರಿ ಕಾಂಗ್ರೆಸ್ ಪಕ್ಷಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿ ಅಗತ್ಯವಾಗಿ ಇರಬೇಕಿತ್ತು. ಅದಕ್ಕೆ ಮುಖ್ಯವಾಗಿ ಎರಡು ಮೂರು ಕಾರಣಗಳು ಇದ್ದುವು. ಒಂದು, 2019 ರ ಲೋಕಸಭೆ ಚುನಾವಣೆಯಲ್ಲಿ ಖರ್ಗೆಯವರನ್ನು ಸೋಲಿಸಿಯೇ ತೀರಿಸಬೇಕು ಎಂದು ಬಿಜೆಪಿ ನಿರ್ಣಯಿಸಿ ಅದರಲ್ಲಿ ಯಶಸ್ವಿಯಾದುದಕ್ಕೆ ಉತ್ತರ ಕೊಡಬೇಕಿತ್ತು. “ನೀವು ಅವರನ್ನು ಸಂಸತ್ತಿನಿಂದ ಈಗ ಹೊರಗೆ ಇಡಲು ಪ್ರಯತ್ನಿಸಿದರೂ ನಾವು ಅವರನ್ನು ತಂದೇ ತರುತ್ತೇವೆ” ಎಂದು ಕಾಂಗ್ರೆಸ್ ಒಂದು ‘ರಾಜಕೀಯ ಹೇಳಿಕೆ’ ಮಾಡಬೇಕಿತ್ತು. ಅದನ್ನು ಅದು ಮಾಡಿದೆ. ಉಳಿದಂತೆ ಅವರ ವಾಗ್ಝರಿ, ಪಕ್ಷ ನಿಷ್ಠೆ, ಪರಿಶಿಷ್ಟ ಜಾತಿ ಇತ್ಯಾದಿಗಳೆಲ್ಲ (ದಲಿತರು ಎನ್ನುವ ಹಾಗೆ ಇಲ್ಲ ಎಂದು ಬಿಜೆಪಿ ಸರ್ಕಾರ ಫರ್ಮಾನು ಮಾಡಿದೆ!) ಅವರ ಬೆಂಬಲಕ್ಕೆ ಬಂದಿವೆ.

ಜನತಾದಳ (ಎಸ್) ಪಕ್ಷಕ್ಕೆ ದೇವೇಗೌಡರನ್ನು ಆಯ್ಕೆ ಮಾಡುವುದು ಬಿಟ್ಟು ಬೇರೆ ದಾರಿ ಇರಲಿಲ್ಲ. ಆದರೆ, ಚುನಾವಣೆ ನಡೆದಿದ್ದರೆ ದೇವೇಗೌಡರು ಕಣಕ್ಕೆ ಇಳಿಯುತ್ತಿರಲಿಲ್ಲ. ಅವರಿಗೆ ತಮ್ಮ ಪಕ್ಷದ ಶಾಸಕರ ಮೇಲೆಯೇ ನಂಬಿಕೆ ಇರಲಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷಗಳು ಧನಿಕರನ್ನು ಕಣಕ್ಕೆ ಇಳಿಸುವ ಉದ್ದೇಶವೇ ಬೇರೆ. ಪಕ್ಷದ ಥೈಲಿಯನ್ನು ತುಂಬಿಸಿಕೊಳ್ಳಲು ಇದು ಒಂದು ಅವಕಾಶ. ಹಾಗೆಯೇ ಶಾಸಕರಿಗೆ “ಲಾಟರಿ ಹೊಡೆಯುವುದೂ” ಇಂಥ ಚುನಾವಣೆಗಳಲ್ಲಿಯೇ. ಅವಿರೊಧ ಆಯ್ಕೆ ನಡೆದರೆ ಅವರಿಗೆಲ್ಲ ನಿರಾಸೆ! ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಕಣಕ್ಕೆ ಇಳಿದರೆ ಸಣ್ಣ ಪಕ್ಷದ ಸದಸ್ಯನ್ನು “ಬೇಟೆಯಾಡುವುದು” ಶತಃಸಿದ್ಧ ಎಂದೇ ಅರ್ಥ. ಕೆ.ಸಿ.ರಾಮಮೂರ್ತಿಯವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಾಗ ಜನತಾದಳ (ಎಸ್)ನ ಸದಸ್ಯರು ಹೇಗೆ ಅಡ್ಡ ಮತದಾನ ಮಾಡಿದರು ಎಂಬುದು ಈಚಿನ ಇತಿಹಾಸ. ಏಕೆ ಮಾಡಿದರು ಎಂಬುದನ್ನು ಅವರಿಗೇ ಕೇಳಬೇಕು.

2002 ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ವಿಜಯ ಮಲ್ಯ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಾಗ ಬಿಜೆಪಿಯ ಮತ್ತು  ಜನತಾದಳ  (ಎಸ್) ಪಕ್ಷದ ಶಾಸಕರಲ್ಲಿ ಕೆಲವರು ಹೇಗೆ “ಮಾರಾಟ” ವಾಗಿದ್ದರು ಎಂಬುದಕ್ಕೆ ಈ ಲೇಖಕ ಸಾಕ್ಷಿ. ಕಾಂಗ್ರೆಸ್ ಮತ್ತು ಜನತಾದಳ (ಎಸ್) ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮಲ್ಯ ಅವರಿಗೆ ಬಿಜೆಪಿಯ ಆರು ಜನ ಶಾಸಕರು ಅಡ್ಡ ಮತದಾನ ಮಾಡಿದ್ದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಆ ಆರು ಜನರನ್ನು ಬಿಜೆಪಿಯು ಪಕ್ಷದಿಂದ ಉಚ್ಚಾಟಿಸಿತ್ತು. ಆ ಇತಿಹಾಸ ಇದ್ದಾಗಲೂ 2010ರ ರಾಜ್ಯಸಭೆ ಚುನಾವಣೆಯಲ್ಲಿ ಮಲ್ಯ ಅವರಿಗೆ ಬಿಜೆಪಿಯೇ ಅಧಿಕೃತವಾಗಿ ಬೆಂಬಲ ನೀಡಿತು. ಧನಿಕರು ಎಲ್ಲ ಪಕ್ಷಗಳಿಗೂ ಇಷ್ಟ! ಹೀಗೆ ಯಾವ ಯಾವ ರಾಜ್ಯಸಭೆ ಚುನಾವಣೆಯಲ್ಲಿ ಏನೆಲ್ಲ ಆಯಿತು ಎಂಬುದು ಗೌಡರಿಗೆ ತಿಳಿಯದೇ ಇರುತ್ತದೆಯೇ? ಅವರ “ಮನವೊಲಿಸಲು ಬಹಳ ಕಷ್ಟಪಡಬೇಕಾಯಿತು” ಎಂದು ಕುಮಾರಸ್ವಾಮಿಯವರು ಹೇಳಿರುವುದನ್ನು ಹೇಗೆ ಬೇಕಾದರೂ ಅರ್ಥ ಮಾಡಿಕೊಳ್ಳಬಹುದು!

12 ಮಂದಿ ಸದಸ್ಯರ ನಾಮಕರಣಕ್ಕೆ ಅವಕಾಶ ಇರುವ ರಾಜ್ಯಸಭೆಯ 245 ಸದಸ್ಯ ಬಲದಲ್ಲಿ ಈಗ ಕೇವಲ 24 ಮಂದಿ ಮಾತ್ರ ಮಹಿಳೆಯರು ಇದ್ದಾರೆ. ಅವರಲ್ಲಿ ಬಿಜೆಪಿಯವರು ಆರು ಮಂದಿ ಮಾತ್ರ. ಮಹಿಳಾ ಸದಸ್ಯರಲ್ಲಿ ಬಿಜೆಪಿಯ ಪಾಲು ಕೇವಲ ಕಾಲು ಭಾಗ ಮಾತ್ರ. ಈ ಸಾರಿ ಕರ್ನಾಟಕದಿಂದ ಇಬ್ಬರನ್ನು ಆರಿಸಿ ಕಳಿಸುವಾಗ ಒಬ್ಬ ಮಹಿಳೆಗೆ ಅವಕಾಶ ಕೊಡಬೇಕಿತ್ತು. ಅದು ತೇಜಸ್ವಿನಿ ಅನಂತಕುಮಾರ್ ಆಗಿರಬಹುದಿತ್ತು. ಲೋಕಸಭಾ ಚುನಾವಣೆಯಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಆದರೆ, ಯಡಿಯೂರಪ್ಪ ಅವರ ಬಗೆಗೆ ಇರುವ “ಅಸಂತೋಷ” ತೇಜಸ್ವಿನಿಯವರ ಬಗೆಗೂ ಇದ್ದಂತಿದೆ.

ಈಚೆಗೆ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳು ಪುರುಷರಿಗೇ ಹೋಗಿರುವುದು ಹೆಣ್ಣು ಮಕ್ಕಳ ಬಗೆಗೆ ಎಲ್ಲ ಪಕ್ಷಗಳಿಗೆ ಇರುವ ತಾತ್ಸಾರ ಭಾವನೆಯ ಮುಂದುವರಿಕೆಯಂತೆ ಇದೆ. ಇನ್ನೇನು ರಾಜ್ಯ ಸಂಪುಟದ ವಿಸ್ತರಣೆ, ಪುನರ್ ರಚನೆ ಆಗಲಿದ್ದು ಆಗಲೂ ಹೆಣ್ಣು ಮಗಳ ತ್ಯಾಗವನ್ನೇ ಕೇಳಿದರೆ ಆಶ್ಚರ್ಯವಿಲ್ಲ! ಕೆರೆಗೆ ಹಾರವಾದವರು ಪುರುಷರು ಅಲ್ಲವಲ್ಲ?

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕರು; ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ದೇವದತ್ತ ಪಟ್ಟನಾಯಕರ ಇಂಗ್ಲಿಷ್ ಕೃತಿ “ಸೀತಾ ರಾಮಾಯಣ” ವನ್ನು ಕನ್ನಡಕ್ಕೆ ತಂದಿದ್ದಾರೆ.

 

 

 

Leave a Reply

Your email address will not be published.