ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!

ಎನ್.ರವಿಕುಮಾರ್ ಟೆಲೆಕ್ಸ್

ಕುಟುಂಬ ವ್ಯಾಮೋಹ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗದೆ ಹೋಗಿದ್ದಿದ್ದರೆ ಯಡಿಯೂರಪ್ಪನವರು ರಾಜ್ಯ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಕಂಗೊಳಿಸುತ್ತಿದ್ದರು. ತಾವೊಬ್ಬ ಮಾಸ್ ಲೀಡರ್ ಎಂಬ ಹೆಗ್ಗಳಿಕೆಗೆ ಚಿನ್ನದ ಗರಿ ಮೂಡಿರುತ್ತಿತ್ತು.

ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಸುದೀರ್ಘಕಾಲ ವಿರೋಧಪಕ್ಷದಲ್ಲಿದ್ದು ಹೋರಾಡಿಕೊಂಡು ಬಂದಿದ್ದ ಯಡಿಯೂರಪ್ಪನವರಿಗೆ ಮೊದಲ ಬಾರಿಗೆ ಅಧಿಕಾರ ದಕ್ಕಿದ ಸಂದರ್ಭವದು. ಆಂಗ್ಲ ದಿನಪತ್ರಿಕೆಯ ವರದಿಗಾರರೊಬ್ಬರು ಅವರ ಸಂದರ್ಶನ ನಡೆಸಿದ್ದರು. ಸಂದರ್ಶನದ ಭಾಗವಾಗಿ ವರದಿಗಾರ ಹಿಂದೂತ್ವ ಮತ್ತು ರಾಮಮಂದಿರ ಸಂಬಂಧಿತ ಪ್ರಶ್ನೆಯನ್ನು ಕೇಳಿದರು. ಪ್ರಶ್ನೆ ಮುಗಿಯುವುದರೊಳಗೆ ಅದನ್ನು ತುಂಡರಿಸಿದ ಯಡಿಯೂರಪ್ಪನವರು ವರದಿಗಾರನ ಕೈ ಹಿಡಿದು (ಆಫ್ ದಿ ರೆಕಾರ್ಡ್) ‘ನೋಡ್ರಿ ಜನ್ರಿಗೆ ಬೇಕಾಗಿರೋದು ಅನ್ನ. ಶಿಕ್ಷಣ, ರೈತರಿಗೆ ಆಗಬೇಕಾದ ಕೆಲಸಗಳು ಮುಖ್ಯ. ಕಡೆ ಗಮನ ಕೊಡೋಣಎಂದರು. ಯಡಿಯೂರಪ್ಪನವರ ಆಂತರ್ಯ ಅರಿತವರಿಗೆ ಮಾತುಗಳ ಬಗ್ಗೆ ಆಶ್ಚರ್ಯವೇನು ಎನಿಸುವುದಿಲ್ಲ. ಯಾಕೆಂದರೆ ಫ್ಯೂಡಲ್ ನಂತೆ ಕಾಣುವ ಯಡಿಯೂರಪ್ಪನವರೊಳಗೊಬ್ಬ ಡೆಮಾಕ್ರಟಿಕ್ ಯಡಿಯೂರಪ್ಪ ಇದ್ದಾರೆ.

ಒಬ್ಬ ನಾಯಕನಿಗೆ ಆತ ಪ್ರತಿನಿಧಿಸುವ ಪಕ್ಷದ ಅಜೆಂಡಾಗಳು ಸರ್ವಜನರ ಹಿತದ ವಿರೋಧಿಯಾಗಿವೆ ಎನಿಸಿದ್ದರೂ ರಾಜಕೀಯ ಕಾರಣಕ್ಕಾಗಿ ಅವುಗಳಿಗೆ ಬದ್ಧನಂತೆ ತೋರಿಸಿಕೊಳ್ಳುವುದು ಅನಿವಾರ್ಯವೆನಿಸಬಹುದು. ಆದರೆ ಆತನ ಕೈಲಿ ಅಧಿಕಾರ ದಂಡ ಸಿಕ್ಕಾಗ ನಡೆದುಕೊಳ್ಳುವ ನಡೆಯೇ ಬಹುಮುಖ್ಯವಾಗಿರುತ್ತವೆ. ಆಗ ಆತ ಪದ್ಮಪತ್ರೆಯ ಮೇಲಿನ ಜಲಬಿಂದುವಿನಂತೆಯೂ ಕಾಣಬಹುದು.

*

ಜೆ.ಹೆಚ್.ಪಟೇಲ್ರು ಮುಖ್ಯಮಂತ್ರಿಯಾಗಿದ್ದರು. ಕಾಲಕ್ಕೆ ಲಿಕ್ಕರ್ ಲಾಬಿ ಬಹಳ ಪ್ರಭಾವಶಾಲಿಯಾಗಿತ್ತು. ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಕರೆದು ತಮ್ಮ ಸಫಾರಿ ಅಂಗಿಯ ಜೇಬಿನಲ್ಲಿ ತುಂಬಿಕೊಂಡು ಬಂದಿದ್ದ ಅಬಕಾರಿ ಇಲಾಖೆಯ ಬಂಡಲ್ ಗಟ್ಟಲೆ ತೆರಿಗೆ ಸ್ಟಿಕರ್ ಗಳ ಸುರಳಿಯನ್ನು ಪತ್ರಕರ್ತರ ಮುಂದೆ ಉರುಳಿಸಿದರು. ಅಬಕಾರಿ ಇಲಾಖೆ ಸುಪರ್ದಿಯಲ್ಲಿರಬೇಕಾದ ಕೋಟ್ಯಂತರ ರೂಪಾಯಿಗಳ ತೆರಿಗೆ ಸ್ಟಿಕರ್ ಯಡಿಯೂರಪ್ಪನವರ ಕೈಗೆ ಸಿಕ್ಕಿಬಿಟ್ಟಿದ್ದವು. ಲಿಕ್ಕರ್ ಮಾಫಿಯಾ ನಕಲಿ ತೆರಿಗೆ ಸ್ಟಿಕರ್ ಬಳಸಿಕೊಂಡು ಸೆಕೆಂಡ್ಸ್, ಥಡ್ರ್ಸ್ ದಂಧೆ ನಡೆಸುತ್ತಾ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದೆ, ಇದಕ್ಕೆ ಅಧಿಕಾರದಲ್ಲಿರುವ ಮುಖ್ಯಮಂತ್ರಿ, ಸಚಿವರುಗಳೇ ಕಾರಣ ಎಂಬ ಯಡಿಯೂರಪ್ಪ ಅವರ ಸ್ಫೋಟಕ ಆರೋಪಕ್ಕೆ ಸರ್ಕಾರ ಮತ್ತು ಲಿಕ್ಕರ್ ಮಾಫಿಯಾ ನಡುಗಿಹೋಗಿತ್ತು.

*

ಮೆಕ್ಕೆಜೋಳದ ಬೆಲೆ ಕುಸಿದು ರೈತರು ಕಂಗಾಲಾದಾಗ ಸರ್ಕಾರವೇ ಅದನ್ನು ಖರೀದಿಸಿ ರೈತರ ನೆರವಿಗೆ ಬರಬೇಕೆಂದು ಅಂದಿನ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿವಮೊಗ್ಗದ ಎಪಿಎಂಸಿ ಅಂಗಳದಲ್ಲಿ ಯಡಿಯೂರಪ್ಪ ಅಹೋರಾತ್ರಿ ಧರಣಿ ಕುಳಿತರು. ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಖುದ್ದಾಗಿ ಬಂದು ಯಡಿಯೂರಪ್ಪ ಜೊತೆ ಕುಳಿತು ಬೇಡಿಕೆ ಈಡೇರಿಸಬೇಕಾಯಿತು. ಯಡಿಯೂರಪ್ಪನವರ ಇಂತಹ ಅನೇಕ ಹೋರಾಟಗಳನ್ನು ರಾಜ್ಯ ಕಂಡಿದೆ.

ಯಡಿಯೂರಪ್ಪನವರ ಇಂತಹ ಹೋರಾಟದ ಗುಣಗಳೇ ಅವರನ್ನು ಜನನಾಯಕನನ್ನಾಗಿಸಿದ್ದು, ಬಗರ್ ಹುಕುಂ, ಜೀತವಿಮಕ್ತಿ ಹೋರಾಟ, ರೈತಪರ ಹೋರಾಟ, ಆಡಳಿತ ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ಹೋರಾಟಗಳು ಅವರನ್ನು ಮುಂಚೂಣಿ ನಾಯಕನನ್ನಾಗಿ ನಿರ್ಮಿಸಿದವು; ಅವರು ಮುಖ್ಯಮಂತ್ರಿ ಪದವಿಗೆ ಬರುವವರೆಗೂ ಜಾತಿ ಆಧಾರಿತ, ಕೋಮು ಆಧಾರಿತ ಅಜೆಂಡಾಗಳು ಅವರ ನಾಯಕತ್ವಕ್ಕೆ ಅಂಟಿರಲಿಲ್ಲ. ಬಡವರ ಕಣ್ಣೀರಿಗೆ ಮಿಡಿದಿದ್ದೂ ಇದೆ ಎಂಬುದನ್ನು ಯಡಿಯೂರಪ್ಪ ಅವರನ್ನು ಓದಿಕೊಳ್ಳುವಾಗ ಕಾಣಸಿಗುತ್ತವೆ. ಮೂರೂವರೆ ದಶಕಗಳ ಕಾಲ ವಿಪಕ್ಷ ಸ್ಥಾನದಲ್ಲಿದ್ದು ದಣಿವಿಲ್ಲದೆ ಓಡಾಡಿದ, ಹೋರಾಡಿದ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಸಲ್ಲದ ಅರೋಪಗಳಿಗೆ ತುತ್ತಾಗಿ ಅರ್ಧದಲ್ಲೆ ನಿರ್ಗಮಿಸಬೇಕಾಗಿದ್ದು ಮಾತ್ರ ದೊಡ್ಡ ವಿಪರ್ಯಾಸ. ಹಠದ ವಿಷಯದಲ್ಲಿ ಯಡಿಯೂರಪ್ಪ ಅವರನ್ನು ಮೀರಿಸುವವರಿಲ್ಲ ಎಂಬುದು ಅನೇಕ ಸಂದರ್ಭಗಳಲ್ಲಿ ರಾಜ್ಯದ ಜನತೆ ನೋಡಿದೆ. ಇಂತಹ ಹಠಮಾರಿ ಧೋರಣೆಗಳೇ ಅವರಿಗೆ ಮುಳುವಾಗಿದ್ದನ್ನು ನೋಡಬೇಕಾಯಿತು ಕೂಡ.

ಯಡಿಯೂರಪ್ಪನವರು ಶಿಕಾರಿಪುರದ ಪುರಸಭೆಯಿಂದ ವಿಧಾನಸೌಧದ ಮೂರನೇ ಮಹಡಿವರೆಗೂ ಸವೆಸಿದ ಬದುಕು ಅಷ್ಟೊಂದು ಸುಲಭವಾಗಿರಲಿಲ್ಲ ಎಂಬುದನ್ನು ಅವರೇ ಮತ್ತೆ ಮತ್ತೆ ಹೇಳಿಕೊಳ್ಳುತ್ತಾರೆ. ಅದು ನಿಜವೂ ಕೂಡ. ಕರ್ನಾಟಕದಲ್ಲಿ ಅಂದರೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ತಂದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲತಕ್ಕದ್ದು. 2008ರಲ್ಲಿ ಜೆಡಿಎಸ್ ವಚನಭ್ರಷ್ಟತೆಯನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋದ ಯಡಿಯೂರಪ್ಪ ಅವರ ಛಲವನ್ನು ಇಡೀ ರಾಜ್ಯ ಮೆಚ್ಚಿತು. ಅನುಕಂಪ ಮತ್ತು ನೈತಿಕ ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ರಾಜ್ಯದ ಜನತೆ ಪಕ್ಷವನ್ನು ಮೀರಿ ಮತ ಹಾಕಿದ್ದು ಈಗ ಇತಿಹಾಸ.

ತಾವು ಅಧಿಕಾರಕ್ಕೆ ಬಂದರೆ ಮುಸ್ಲಿಂರೊಬ್ಬರು ತಮ್ಮ ಸಂಪುಟದಲ್ಲಿರುತ್ತಾರೆ ಎಂದು ಪ್ರಮಾಣ ಮಾಡಿದರು. ಅದರಂತೆಯೇ ನಡೆದುಕೊಂಡರೂ ಕೂಡ. ಯಡಿಯೂರಪ್ಪ ಅಲ್ಪಸಂಖ್ಯಾತರಿಗೆ ಎಂದಿಗೂ ಅಪಥ್ಯವಾಗಿಲ್ಲ ಎನ್ನುವುದಕ್ಕೆ ಅವರು ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರದ ಗಂಭೀರ ಆರೋಪಗಳಿಗೆ ತುತ್ತಾಗಿ ಅಧಿಕಾರ ಕಳೆದುಕೊಂಡು ಬಿಜೆಪಿಯನ್ನು ತೊರೆದು ಕೆಜೆಪಿ ಕಟ್ಟಿದಾಗ ಅವರಿಗೆ ಸಿಕ್ಕ ಅಲ್ಪಸಂಖ್ಯಾತರ ಬೆಂಬಲವೇ ಸಾಕ್ಷಿ. ಅಂದರೆ ಯಡಿಯೂರಪ್ಪ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಮೊದಲ ಅವಧಿಯಲ್ಲಿ ಮೂರುಕಾಲು ವರ್ಷಗಳ ನಂತರ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಬಂದಾಗ ತಮ್ಮ ಉತ್ತರಾಧಿಕಾರಿಯನ್ನಾಗಿ ಹಠ ಹಿಡಿದು ಸದಾನಂದಗೌಡರನ್ನು, ನಂತರದ ದಿನಗಳಲ್ಲಿ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿ ಹೈಕಮಾಂಡ್ಗೆ ತಮ್ಮ ಶಕ್ತಿಯನ್ನು ತೋರಿಸಿದ್ದರು. ಇಂತಹ ಅನೇಕ ಉದಾಹರಣೆಗಳಿವೆ.

2018 ವಿಧಾನ ಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕನಿಷ್ಠ ಸಂಖ್ಯೆ ಶಾಸಕರ ಕೊರತೆ ಬಿದ್ದರೂ ಸುಮ್ಮನೆ ಕೂರಲಿಲ್ಲ. ಒಂದೇ ವರ್ಷಕ್ಕೆ ಕಾಂಗ್ರೆಸ್ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿದರು. ತಮ್ಮ ನೇತೃತ್ವದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತಂದರು. 2008 ಅವಧಿಯಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಿದ್ದ ಯಡಿಯೂರಪ್ಪನವರ ರಾಜಕೀಯ ಅಧ್ಯಾಯವೇ ಮುಗಿದುಹೋಯಿತು ಎಂದು ಭಾವಿಸಿದ್ದವರಿಗೆ ಯಡಿಯೂರಪ್ಪ ಅವರು ಮತ್ತೆ ಫೀನಿಕ್ಸ್ನಂತೆ ಚಿಮ್ಮಿಬಂದಿದ್ದು ಓರ್ವ ಜನನಾಯಕನಿಗಿರಬಹುದಾದ ತಾಕತ್ತು ಎನ್ನಬಹುದು.

ಇಂತಹ ಯಡಿಯೂರಪ್ಪನವರು ಮುಖ್ಯಮಂತ್ರಿ ಕುರ್ಚಿಯಿಂದ ಅವಧಿಗೆ ಮುಂಚೆಯೇ ಇಳಿದು ಹೋಗಿದ್ದಾರೆ ಎನ್ನುವುದಕ್ಕಿಂತ ಅವರನ್ನು ಅಧಿಕಾರದಿಂದ ಇಳಿಸಲಾಗಿದೆ ಎನ್ನುವುದೇ ಸತ್ಯ. ಅದಕ್ಕೆ ಇರಬಹುದಾದ ಕಾರಣಗಳನ್ನು ಬಿಜೆಪಿ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲವಾದರೂ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ಅವರ ವಯಸ್ಸು ಕಾರಣ ಎನ್ನಲಾಗುತ್ತಿದೆ. ರಾಜೀನಾಮೆಗೆ ಎರಡು ದಿನ ಇರುವಾಗಲೇ ಯಡಿಯೂರಪ್ಪ ಅವರು ನೆರೆ ಪೀಡಿತ ಪ್ರದೇಶಗಳಲ್ಲಿ ಓಡಾಡಿದರು. ಬೆಂಗಳೂರು ನಗರದ ಅಭಿವೃದ್ಧಿಯನ್ನು ಪರಿಶೀಲಿಸಿದರು. ಅಧಿಕಾರದ ಕೊನೆಯ ಕ್ಷಣದ ವರೆಗೂ ನಾನು ಜನರ ಹಿತಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಘೋಷಿಸಿಕೊಂಡಂತೆ ತಮಗಿನ್ನೂ ದಣಿವಾಗಿಲ್ಲ, ಕೆಲಸ ಮಾಡುವ ಶಕ್ತಿ ಕುಂದಿಲ್ಲ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದರು. ಆದರೆ ಪಕ್ಷದ ಹೈಕಮಂಡ್ ಅವರನ್ನು ಅಧಿಕಾರದಿಂದ ನಿರ್ಗಮಿಸುವ ಅನಿವಾರ್ಯತೆಯ ಬಲೆಯನ್ನು ಹೆಣೆದು ಕುಳಿತಿತ್ತು.

ಪದಚ್ಯುತಿಗೆ ಯಡಿಯೂರಪ್ಪನವರ ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ಎಂಬುದೇ ಬಹುಮುಖ್ಯ ಕಾರಣ ಎನ್ನಲಾಗುತ್ತಿದ್ದರೂ ಆಂತರ್ಯದಲ್ಲಿ ಯಡಿಯೂರಪ್ಪ ಅವರು ಬಿಜೆಪಿಯಲ್ಲಿದ್ದರೂ ಅದರ ಸೈದ್ಧಾಂತಿಕ ನೀತಿಗಳಿಂದ ದೂರ ಸರಿದಿದ್ದರು, ಕೆಲವೊಮ್ಮೆ ಸಿದ್ಧಾಂತಗಳ ವಿರುದ್ಧವೇ ಕೆಲಸ ಮಾಡುತ್ತಿದ್ದರು ಎಂಬ ಗುರುತರ ಆರೋಪವೂ ಸಂಘಪರಿವಾರದ್ದಾಗಿದೆ.

ತಬ್ಲಿಘಿಗಳಿಂದಲೇ ಕೊರೊನಾ ಸೋಂಕು ಹರಡಿತು ಎಂಬ ಕೂಗು ಎಬ್ಬಿಸಿದ ಕೋಮುವಾದಿಗಳಿಗೆ ರಾಜ್ಯದಲ್ಲಿ ಯಡಿಯೂರಪ್ಪ ಮಣೆ ಹಾಕಲಿಲ್ಲ. ರಾಜ್ಯದಲ್ಲಿ ಮುಸ್ಲಿಂ ವಿರೋಧಿ ಹಿಂಸೆಗೆ ಅವಕಾಶ ಕೊಡಲಿಲ್ಲ. ಸ್ವತಃ ತಮ್ಮ ಸ್ವಕ್ಷೇತ್ರ ಶಿಕಾರಿಪುರದ ತಬ್ಲಿಘಿಗಳನ್ನು ವಿಶೇಷ ಅಸಕ್ತಿಯಿಂದ ಗುಜರಾತಿನಿಂದ ಮಹಾರಾಷ್ಟ್ರ ಮೂಲಕ ಸುರಕ್ಷಿತವಾಗಿ ಕರೆಯಿಸಿಕೊಂಡರು. ಗೋಹತ್ಯೆ ನಿಷೇಧ ಕಾಯ್ದೆಯ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆಗಳು ನಡೆದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಓರ್ವ ಮುಖ್ಯಮಂತ್ರಿಯಾಗಿ ಅಲ್ಪಸಂಖ್ಯಾತರ ರಕ್ಷಣೆಗೆ ಕಟ್ಟಪ್ಪಣೆ ಹೊರಡಿಸಿದರು. ಇದರಿಂದ ಸಂಘಪರಿವಾರ ಪ್ರೇಣಿತ ಕೋಮುಶಕ್ತಿಗಳು ಅಸಹನೆಯಿಂದ ಕುದಿಯುವಂತಾಯಿತು.

ಯಡಿಯೂರಪ್ಪನವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳ ಮಾದರಿಯಲ್ಲಿ ಸಂಘಪರಿವಾರದ ಸೈದ್ಧಾಂತಿಕ ನಿಲುವುಗಳಿಗೆ ಪೂರಕವಾಗಿ ಆಡಳಿತವನ್ನು ನಡೆಸಲಿಲ್ಲ ಎಂಬ ಅಸಮಾಧಾನ ಸಂಘಪರಿವಾರ ಮತ್ತು ಬಿಜೆಪಿಯ ವರಿಷ್ಠ ಮಂಡಳಿಯದ್ದಾಗಿತ್ತು.

ಎಂತಹುದ್ದೇ ಪರಿಸ್ಥಿತಿಯಲ್ಲೂ ಯಡಿಯೂರಪ್ಪ ಅವರು ಕೋಮುಪ್ರಚೋದನೆಗಿಳಿದ ಗುರುತರ ಆರೋಪಗಳಿಲ್ಲ ಎನ್ನಬಹುದು. ಅವರೋರ್ವ ಜಾತಿವಾದಿ ಎನ್ನಲು ಸಾಕ್ಷಿಗಳು ಸಿಗುತ್ತವೆ ನಿಜ, ಆದರೆ ಅವರೋರ್ವ ಕೋಮುವಾದಿ ಎನ್ನಲು ಸಕಾರಣಗಳು ಕಾಣುಸುವುದಿಲ್ಲ. ಎಷ್ಟೇ ರಾಜಕೀಯ ಹಗೆತನವಿದ್ದರೂ ವಿಪಕ್ಷಗಳೊಂದಿಗೆ ಮತ್ತು ಅವುಗಳ ನಾಯಕರೊಂದಿಗೆ ಒಂದು ಸೌಹಾರ್ದ ವೈಯುಕ್ತಿಕ ಸ್ನೇಹವನ್ನು ಕಾಯ್ದುಕೊಂಡ ಮುತ್ಸದ್ದಿತನವನ್ನು ವಿಪಕ್ಷಗಳು

ಒಪ್ಪುತ್ತವೆ.

ಹಾಗೆಂದ ಮಾತ್ರಕ್ಕೆ ಯಡಿಯೂರಪ್ಪನವರ ಆಡಳಿತ ಕಾಲವೇನು ಸತ್ಯಹರಿಶ್ಚಂದ್ರನ ಕಾಲವಾಗಿರಲಿಲ್ಲ. ಕೊರೊನಾ ಸಂಕಟದ ನೆಪದಲ್ಲಿ ಆಡಳಿತದ ವಿಫಲತೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದ್ದರೂ ಕೊರೊನಾ ಪರಿಹಾರಕ ಕ್ರಮಗಳಲ್ಲಿ ಭ್ರಷ್ಟಾಚಾರದ ವಾಸನೆ ಹೊಡೆಯಿತು. ಸಚಿವರು ತಮ್ಮ ತಮ್ಮ ಇಲಾಖೆಯಲ್ಲಿ ಲಜ್ಜೆಗೆಟ್ಟು ಅವ್ಯವಹಾರಗಳನ್ನು ನಡೆಸಿದರು. ಇನ್ನೂ ಕೆಲವರು ಅತ್ಯಂತ ನಿಷ್ಪ್ರಯೋಜಕರಂತೆ ತಲೆಮರೆಸಿಕೊಂಡರು.

ಆಡಳಿತದಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರನ ಹಸ್ತಕ್ಷೇಪ ಎಗ್ಗಿಲ್ಲದೆ ನಡೆಯತೊಡಗಿತು. ಹಿರಿಯ ಶಾಸಕರು, ಸಚಿವರು ವಿಜಯೇಂದ್ರನ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ದಿನೇ ದಿನೇ ಯಡಿಯೂರಪ್ಪನವರು ದೈಹಿಕವಾಗಿ, ಮಾನಸಿಕವಾಗಿ ದುರ್ಬಲರಾಗುತ್ತಾ ಹೋದರು. ಸಚಿವರ ಮೇಲಿನ ಹಿಡಿತ ಸಡಿಲಗೊಂಡಿತು.

ಯಡಿಯೂರಪ್ಪನವರು ಮುಖ್ಯಮಂತ್ರಿ ಗಾದಿಗೇರಿದ್ದು ಸುಲಭದ ಹಾದಿಯಾಗಿರಲಿಲ್ಲ ನಿಜ, ಆದರೆ ಅಧಿಕಾರ ಹಿಡಿಯುವ ರಭಸದಲ್ಲಿ ನೈತಿಕತೆ, ಅನೈತಿಕತೆ ನಡುವಿನ ಗೆರೆಗಳನ್ನು ಅಳಿಸಿ ಹಾಕಿಬಿಟ್ಟರು. ಮಠಮಾನ್ಯಗಳನ್ನು ರಾಜಕೀಯ ಜಗುಲಿಗೆ ಎಳೆದುತಂದು ಧಾರ್ಮಿಕ ಮತ್ತು ಬೌದ್ಧಿಕ ಭ್ರಷ್ಟತೆಗೊಳಪಡಿಸಿದರು. ಕುಟುಂಬ ವ್ಯಾಮೋಹ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗದೆ ಹೋಗಿದ್ದಿದ್ದರೆ ಯಡಿಯೂರಪ್ಪನವರು ರಾಜ್ಯ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಕಂಗೊಳಿಸುತ್ತಿದ್ದರು. ತಾವೊಬ್ಬ ಮಾಸ್ ಲೀಡರ್ ಎಂಬ ಹೆಗ್ಗಳಿಕೆಗೆ ಚಿನ್ನದ ಗರಿ ಮೂಡಿರುತ್ತಿತ್ತು.

ಆದರೆಯಡಿಯೂರಪ್ಪ ಅವರು ತಮ್ಮದೆ ಸ್ವಯಂ ಕೃತ್ಯಗಳಿಂದ ಸಿ.ಎಂ. ಪದವಿ ಕಳೆದುಕೊಂಡಿದ್ದಾರೆ ಎನ್ನುವುದು ಎಷ್ಟೋ ಸತ್ಯವೋಕಟ್ಟರ್ ಕೋಮುಸಿದ್ಧಾಂತದ ಬಿಜೆಪಿಯಲ್ಲಿದ್ದೂ ಬಿಜೆಪಿಯಂತಾಗದ ಜನನಾಯಕ ಯಡಿಯೂರಪ್ಪ ಅವರ ರಾಜಕೀಯ ಹೋರಾಟವನ್ನು ಬ್ರಾಹ್ಮಣ್ಯ ಪ್ರೇಣಿತ ಸಂಘಪರಿವಾರವೇ ಕೊನೆಗೊಳಿಸುತ್ತಿದೆ ಎನ್ನುವುದು ಕೂಡ ಅಷ್ಟೇ ಸತ್ಯ.

ಸಂಘಪರಿವಾರ ಅಂದುಕೊಂಡಂತೆ ಎಲ್ಲವೂ ನಡೆದುಹೋಗಿದೆ.

ಜನನಾಯಕನೋರ್ವನ ಪತನ ಪರ್ವವೊಂದು ಇತಿಹಾಸ ಸೇರುತ್ತಿದೆ.

*ಲೇಖಕರು ಸೃಜನಶೀಲ ಪತ್ರಕರ್ತರು; ‘ಶಿವಮೊಗ್ಗ ಟೆಲೆಕ್ಸ್ದಿನಪತ್ರಿಕೆ ಸಂಪಾದಕರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಂದಿದೆ. ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

Leave a Reply

Your email address will not be published.