ಯಡಿಯೂರಪ್ಪ ಕುಟುಂಬ ರಾಜಕಾರಣ ರೇವಣ್ಣ ಪಾತ್ರದಲ್ಲಿ ವಿಜಯೇಂದ್ರ!

ಈಗ ಯಡಿಯೂರಪ್ಪ ಹೆಸರಿಗೆ ಮಾತ್ರ ಮುಖ್ಯಮಂತ್ರಿ; ಆಡಳಿತದ ಜುಟ್ಟು ಇರುವುದು ಅವರ ಪುತ್ರ ಬಿ.ವೈ.ವಿಜಯೇಂದ್ರ ಕೈಲಿ ಎಂಬ ಮಾತುಗಳು ಬಹಿರಂಗವಾಗಿಯೇ ಕೇಳಿಬರುತ್ತಿವೆ.

– ರವಿ ಮಾಳೇನಹಳ್ಳಿ

ಯಾವುದೇ ಹಸ್ತಕ್ಷೇಪ, ಪಕ್ಷಪಾತದ ನಿಲುವುಗಳಿಲ್ಲದ, ಒಂದು ಕೋಮಿಗೆ ಅಥವಾ ಸಮುದಾಯದ ಓಲೈಕೆ ಇಲ್ಲದೇ ಆಡಳಿತ ನಡೆದರೆ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳ್ಳಲು ಸಾಧ್ಯ. ಹೀಗಾದಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ಸಿಗಲು ಇದು ದಾರಿದೀಪವಾಗಬಲ್ಲದು. ಒಂದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ ಗಟ್ಟಿಗೊಳ್ಳಲು ಈ ಅಂಶಗಳು ಅತ್ಯಗತ್ಯವಾಗಿರುತ್ತವೆ.

ಆದರೆ, ಇಂದಿನ ನಮ್ಮ ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಸ್ವಲ್ಪ ಯೋಚನೆ ಮಾಡಿದಾಗ, ಪ್ರಜಾತಂತ್ರವೆಂಬುದು ಎತ್ತ ಸಾಗಿದೆ? ನಿಜಕ್ಕೂ ಈ ಪ್ರಜಾತಂತ್ರ ವ್ಯವಸ್ಥೆ ಪ್ರಜಾತಂತ್ರವಾಗಿ ಉಳಿದಿದೆಯೇ? ಈಗಿನ ರಾಜಕಾರಣ ಶೈಲಿಯಲ್ಲಿ ಪ್ರಜಾತಂತ್ರದ ಆಶೋತ್ತರಗಳು ಸಾಕಾರಗೊಳ್ಳುತ್ತಿವೆಯೇ? ಇಂತಹ ಹತ್ತು ಹಲವಾರು ಪ್ರಶ್ನೆಗಳು ಸಹಜವಾಗಿ ಎದುರಾಗುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ `ಇಲ್ಲ’ ಎಂಬ ಉತ್ತರವಂತೂ ಸ್ಫಟಿಕದಷ್ಟೇ ಸ್ಪಷ್ಟವಾಗಿದೆ.

ದೇಶದೆಲ್ಲೆಡೆ ಇರುವ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ, ಆಡಳಿತ ನಡೆಸಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿರುವ ಯಾವುದೇ ರಾಜಕೀಯ ಪಕ್ಷವನ್ನು ಪರಿಗಣಿಸಿದರೂ ಈ ಪ್ರಜಾತಂತ್ರ ಎಂಬ ವ್ಯವಸ್ಥೆಗೆ ಒಂದಿಲ್ಲೊಂದು ರೀತಿಯಲ್ಲಿ ಚ್ಯುತಿ ಉಂಟು ಮಾಡಿರುವವೇ ಆಗಿವೆ.

ಹೀಗೆ ಪ್ರಜಾತಂತ್ರ ಎಂಬ ಪದಕ್ಕೆ ಅಪಚಾರ ಎಸಗಲು ಪ್ರಮುಖ ಕಾರಣ ಸ್ವಜನ ಪಕ್ಷಪಾತ, ಸಮುದಾಯಗಳ ಓಲೈಕೆ ಇತ್ಯಾದಿಗಳು ಬಂದು ನಿಲ್ಲುತ್ತವೆ. ಈ ಅಂಶಗಳು ಪ್ರಜಾಪ್ರಭುತ್ವವನ್ನೇ ಹಾಳುಗೆಡವುತ್ತಿವೆ. ಆದರೆ, ಇವೆಲ್ಲಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವುದು ಕುಟುಂಬ ರಾಜಕಾರಣ.

ದೇಶದಲ್ಲಿರುವ ನೂರಾರು ರಾಜಕೀಯ ಪಕ್ಷಗಳಲ್ಲಿ ಒಂದಿಲ್ಲೊಂದು ರೂಪದಲ್ಲಿ ಕುಟುಂಬ ರಾಜಕಾರಣವೇ ಮೇಳೈಸುತ್ತಿದೆ. ದುರ್ಬೀನು ಹಾಕಿ ಹುಡುಕಿದರೆ ಬೆರಳೆಣಿಕೆಯಷ್ಟು ಪಕ್ಷಗಳಲ್ಲಿ ಮಾತ್ರ ಕುಟುಂಬ ರಾಜಕಾರಣ ಕಂಡುಬರುವುದಿಲ್ಲ. ಆದರೆ, ಪಕ್ಷವನ್ನು ಮುನ್ನಡೆಸುವವನ ಪಟಾಲಂ ಹಿಡಿತ ಸಾಧಿಸುವ ಮೂಲಕ ಮತ್ತೊಂದು ರೂಪದಲ್ಲಿ ಓಲೈಕೆಯ ರಾಜಕಾರಣ ನಡೆಯುತ್ತಿದೆ.

ಒಂದು ಪಕ್ಷದ ಉನ್ನತಿ ಅಥವಾ ಅವನತಿಗೆ ಈ ಕುಟುಂಬ ರಾಜಕಾರಣವೇ ಪ್ರಮುಖ ಕಾರಣವಾಗುತ್ತದೆ. ಆದರೆ, ಪಕ್ಷಕ್ಕೆ ಸೀಮಿತವಾಗಿದ್ದ ಈ ಕುಟುಂಬ ರಾಜಕಾರಣದ ವ್ಯವಸ್ಥೆ ಆಡಳಿತ ನಡೆಸುವ ಸಂದರ್ಭದಲ್ಲಿ ತನ್ನ ಅಸ್ತಿತ್ವ ಸಾಧಿಸಲು ಹೊರಟರೆ ಅಲ್ಲಿಗೆ ಪ್ರಜಾತಂತ್ರ ವ್ಯವಸ್ಥೆಗೆ ಎಳ್ಳುನೀರು ಬಿಟ್ಟಂತೆ.

ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಎಂದರೆ ಸಾಕು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಕುಟುಂಬ ಕಣ್ಣಿಗೆ ಕಾಣುತ್ತಿತ್ತು. ಇದಕ್ಕೆ ಅನುಗುಣವಾಗಿ ದೇವೇಗೌಡರ ಕುಟುಂಬವೂ ವರ್ತಿಸುತ್ತಿತ್ತು, ಈಗಲೂ ಅದೇ ರೀತಿ ವರ್ತಿಸುತ್ತಿದೆ. ಹೀಗಾಗಿಯೇ ದೇವೇಗೌಡರದ್ದು ಕುಟುಂಬ ರಾಜಕಾರಣ, ಅವರ ಜಾತ್ಯತೀತ ಜನತಾದಳ ಅಪ್ಪ-ಮಕ್ಕಳ ಪಕ್ಷ. ಅವರು ಅಧಿಕಾರಕ್ಕೆ ಬಂದರೆ ಇಡೀ ಕುಟುಂಬವೇ ಆಡಳಿತ ನಡೆಸುತ್ತದೆ ಎಂದೆಲ್ಲಾ ಟೀಕೆಗಳನ್ನು ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವಾರು ರಾಜಕಾರಣಿಗಳು ಮಾಡುತ್ತಲೇ ಬಂದಿದ್ದರು.

ಆದರೆ, ತಮ್ಮ ಮಕ್ಕಳು ಪ್ರವರ್ಧಮಾನಕ್ಕೆ ಬಂದು ರಾಜಕೀಯ ಘಮಲನ್ನು ಸವಿಯಲು ಆರಂಭವಾಗುತ್ತಿದ್ದಂತೆಯೇ ಇದೇ ಯಡಿಯೂರಪ್ಪ, ಸಿದ್ಧರಾಮಯ್ಯ ಅವರಂತಹ ನಾಯಕರೆಲ್ಲಾ ದೇವೇಗೌಡರ ಕುಟುಂಬ ರಾಜಕಾರಣದ ತಂಟೆಗೆ ಹೋಗಲೇ ಇಲ್ಲ. ಏಕೆಂದರೆ, ತಮ್ಮ ಬುಡದಲ್ಲಿಯೇ ತಮ್ಮ ಮಕ್ಕಳು ಒಂದಿಲ್ಲಾ ಒಂದು ರೀತಿಯಲ್ಲಿ ರಾಜಕೀಯ ಮಾಡುತ್ತಿದ್ದಾರಲ್ಲಾ!

ಹೀಗಾಗಿ ಒಂದು ಕಾಲದಲ್ಲಿ ಆಕಾಶವೇ ತಲೆ ಮೇಲೆ ಬಿದ್ದವರಂತೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದವರಿಗೆ ಈಗ ತಾವು ಗಾಜಿನ ಮನೆಯಲ್ಲಿ ಕುಳಿತಿದ್ದೇವೆಂಬ ಅರಿವಾಗಿ ನಾನೂ ಕಲ್ಲು ಹೊಡೆಯುವುದಿಲ್ಲ, ನೀನೂ ಕಲ್ಲು ಹೊಡೆಯಬೇಡ ಎಂಬ ಒಪ್ಪಂದಕ್ಕೆ ಬಂದವರಂತೆ ರಾಜಕೀಯ ಮಾಡುತ್ತಿದ್ದಾರೆ.

ರಾಜಕಾರಣವನ್ನೇ ಉಸಿರಾಗಿಸಿಕೊಂಡು ಅದರಲ್ಲೇ ಮುಳುಗಿ ಹೋಗಿರುವವರಿಗೆ ತಮ್ಮ ಮಕ್ಕಳು ಅಥವಾ ಮೊಮ್ಮಕ್ಕಳು ಸಹ ರಾಜಕಾರಣ ಮಾಡಲಿ ಎಂಬ ಮಮಕಾರ ಇರುತ್ತದೆ. ಹೀಗಾಗಿಯೇ ಅವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಲು ಹರಸಾಹಸಪಡುತ್ತಾರೆ. ಹಾಗಂತ ಕುಟುಂಬ ರಾಜಕಾರಣ ಮಾಡಲೇಬಾರದು ಎಂಬ ಯಾವುದೇ ನಿಯಮವಿಲ್ಲ. ಆದರೆ, ರಾಜ್ಯದ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದವರ ಮಕ್ಕಳು ಅಥವಾ ಕುಟುಂಬದ ಸದಸ್ಯರು ಇಡೀ ಆಡಳಿತದ ಹಿಡಿತವನ್ನು ತಮ್ಮ ಕೈಲಿಟ್ಟುಕೊಳ್ಳುವುದು ಮಾತ್ರ ಅತ್ಯಂತ ಅಪಾಯಕಾರಿಯಾಗಿದೆ.

ಮುಖ್ಯಮಂತ್ರಿ ಅಥವಾ ಮಂತ್ರಿಯಾದವರ ಕುಟುಂಬ ಸದಸ್ಯರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದು ಹೊಸದೇನಲ್ಲ. ಹಲವು ದಶಕಗಳಿಂದಲೂ ತೆರೆಮರೆಯಲ್ಲಿ ಮುಖ್ಯಮಂತ್ರಿಯಾಗಿದ್ದವರ ಕುಟುಂಬ ಸದಸ್ಯರು ಕೆಲಸ ಮಾಡುತ್ತಿದ್ದರು. ಆದರೆ, ಅದು ಹೊರ ಜಗತ್ತಿಗೆ ಅಷ್ಟೇನೂ ಕಾಣಿಸುತ್ತಿರಲಿಲ್ಲ. ಹಿಂದೆಲ್ಲಾ ಮಂತ್ರಿಯಾಗಿದ್ದವರು, ಶಾಸಕರು ತಮಗೆ ಏನಾದರೂ ಕೆಲಸ ಆಗಬೇಕೆಂದರೆ ನೇರವಾಗಿ ಮುಖ್ಯಮಂತ್ರಿಗಳ ಮನೆಗೆ ಹೋಗಿ ಮುಖ್ಯಮಂತ್ರಿ `ಅರ್ಧಾಂಗಿ’ ಗೆ ಅಕ್ಕಾವ್ರೇ, ಅಮ್ಮಾವ್ರೇ ಅಂತ ಹೇಳಿಕೊಂಡು ಅವರ ಮೂಲಕ ಕೆಲಸ ಆಗುವಂತೆ ನೋಡಿಕೊಳ್ಳುತ್ತಿದ್ದರು.

ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೇವಣ್ಣ ಮುಖ್ಯಮಂತ್ರಿ ಬಳಿ ಇದ್ದ ಖಾತೆಗಳಲ್ಲದೆ ಉಳಿದೆಲ್ಲಾ ಸಚಿವರ ಖಾತೆಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದರು;

ಆದರೆ, ಕಾಲ ಬದಲಾದಂತೆ ಮುಖ್ಯಮಂತ್ರಿ ಕುಟುಂಬ ಸದಸ್ಯರೇ ನೇರವಾಗಿ ಆಡಳಿತದ `ಅಖಾಡ’ಕ್ಕೆ ಇಳಿಯುತ್ತಿದ್ದಾರೆ. ದೇವೇಗೌಡರು ಪ್ರಧಾನಮಂತ್ರಿ ಆಗುವ ಮುನ್ನ ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರ ಎಚ್.ಡಿ.ರೇವಣ್ಣ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಛೇಂಬರ್‍ನಲ್ಲಿನ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಭಾರೀ ವಿವಾದಕ್ಕೆ ಕಾರಣರಾಗಿದ್ದರು.

ದೇವೇಗೌಡರ ಕುಟುಂಬ ಅಧಿಕಾರಕ್ಕೆ ಬಂದಾಗಲೆಲ್ಲಾ ಇದೇ ರೇವಣ್ಣ ಖಳನಾಯಕನಾಗುತ್ತಾರೆ. ಎಚ್.ಡಿ.ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೇವಣ್ಣ ಮುಖ್ಯಮಂತ್ರಿ ಬಳಿ ಇದ್ದ ಖಾತೆಗಳಲ್ಲದೆ ಉಳಿದೆಲ್ಲಾ ಸಚಿವರ ಖಾತೆಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದರು; ಸಚಿವರು ಯಾರೇ ಇದ್ದರೂ ಮುಖ್ಯಮಂತ್ರಿಯಾಗಿದ್ದ ಸಹೋದರ ಕುಮಾರಸ್ವಾಮಿ ಮೇಲೆ ಒತ್ತಡ ತಂದು ತಮಗೆ ಬೇಕಾದಂತೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸೇರಿದಂತೆ ಹಲವಾರು ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು.

ಕುಮಾರಸ್ವಾಮಿ ಇತ್ತೀಚೆಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ರೇವಣ್ಣರ ಹಸ್ತಕ್ಷೇಪದಿಂದ ಸ್ವಪಕ್ಷ ಜೆಡಿಎಸ್ ಶಾಸಕರಲ್ಲದೆ ಸಹಭಾಗಿ ಕಾಂಗ್ರೆಸ್ ಶಾಸಕರೂ ದೂರು ನೀಡಲು ಆರಂಭಿಸಿದರು. ಅಷ್ಟೇ ಅಲ್ಲ, ಪಕ್ಷ ತೊರೆದು ಕುಮಾರಸ್ವಾಮಿ ಸರ್ಕಾರವನ್ನೇ ಪತನಗೊಳಿಸಿದರು.

ಈಗ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತು ಅಪ್ಪ-ಮಕ್ಕಳ ರಾಜ್ಯಭಾರದಲ್ಲಿ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ, ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದೆಲ್ಲಾ ಅಬ್ಬರಿಸಿದ್ದರು. ಹೇಳಿಕೇಳಿ ಅವರು ಪ್ರತಿನಿಧಿಸುತ್ತಿರುವ ಭಾರತೀಯ ಜನತಾಪಕ್ಷ ಕುಟುಂಬ ರಾಜಕಾರಣ ಅಥವಾ ಆಡಳಿತದಲ್ಲಿ ಕುಟುಂಬ ಸದಸ್ಯರ ಹಸ್ತಕ್ಷೇಪವನ್ನು ಸಹಿಸದಿರುವ ಪಕ್ಷ. ಈಗ ಯಡಿಯೂರಪ್ಪ ಹೆಸರಿಗೆ ಮಾತ್ರ ಮುಖ್ಯಮಂತ್ರಿ; ಆಡಳಿತ ನಡೆಸುತ್ತಿರುವವರು ಅಥವಾ ಆಡಳಿತದ ಜುಟ್ಟು ಇರುವುದು ಅವರ ಪುತ್ರ ಬಿ.ವೈ.ವಿಜಯೇಂದ್ರ ಕೈಲಿ ಎಂಬ ಮಾತುಗಳು ಬಹಿರಂಗವಾಗಿಯೇ ಕೇಳಿಬರುತ್ತಿವೆ.

ಇಂತಹ ಬಹುಪಾಲು ಅಧಿಕಾರಿಗಳು ರಾಜಕಾರಣಿಗಳ ಮಾತನ್ನು ಕೇಳುತ್ತಾರೆ, ಕೇಳಲೇ ಬೇಕು. ಇಲ್ಲವಾದರೆ ಅವರಿಗೆ ವರ್ಗಾವಣೆ ಸೇರಿದಂತೆ ಇನ್ನಿತರೆ ರೂಪದ ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ಕಾರಣದಿಂದಲೇ ಕೆಲವು ಅಧಿಕಾರಿಗಳು, ಸರ್ಕಾರಿ ನೌಕರರು ಇಂತಹ ತೆರೆಮರೆಯ `ಸೂಪರ್ ಪವರ್’ಗಳ ಮುಂದೆ ಕೈಕಟ್ಟಿ ನಿಲ್ಲುತ್ತಾರೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಯಡಿಯೂರಪ್ಪ ಅವರ ಸುತ್ತಮುತ್ತ ಇರದಷ್ಟು ಸಂಖ್ಯೆಯ ಜನರು ಮತ್ತು ಜನಪ್ರತಿನಿಧಿಗಳು ವಿಜಯೇಂದ್ರ ಸುತ್ತ ಆವರಿಸಿರುತ್ತಾರೆ. ಏಕೆಂದರೆ, ಯಡಿಯೂರಪ್ಪ ಅವರಿಂದ ಆಗದ ಕೆಲಸ ವಿಜಯೇಂದ್ರರಿಂದ ಆಗುತ್ತದೆ ಎಂಬ ಭಾವನೆ ಬಂದಿರುವುದು ಅಥವಾ ವಿಜಯೇಂದ್ರ ಮೂಲಕ ಯಡಿಯೂರಪ್ಪ ಮೇಲೆ ಪ್ರಭಾವ ಬೀರಿ ತಮ್ಮ ಕೆಲಸವನ್ನು ಮಾಡಿಸಿಕೊಳ್ಳುವುದು ಸುಲಭ ಎಂಬ ಸತ್ಯ ಅರಿವಾಗಿರುವುದು.

ಹಾಗಾದರೆ, ಆಡಳಿತದ ಯಾವುದೇ ವಿಭಾಗದಲ್ಲಿ ವಿಜಯೇಂದ್ರ ಪಾಲುದಾರನಲ್ಲದಿದ್ದರೂ ಅವರ ಮಾತನ್ನೇಕೆ ಅಧಿಕಾರಿಗಳು ಕೇಳುತ್ತಾರೆ? ಹೊಣೆಗೇಡಿ ಅಧಿಕಾರಿಗಳು ಕೇಳಿಯೇ ಕೇಳುತ್ತಾರೆ. ಏಕೆಂದರೆ, ಯಾವುದೋ ಒಂದು ವಿಧದಲ್ಲಿ ಇದೇ ರಾಜಕಾರಣಿಗಳಿಂದ ಲಾಭ ಪಡೆದುಕೊಂಡಿರುತ್ತಾರೆ. ಇಂತಹ ಬಹುಪಾಲು ಅಧಿಕಾರಿಗಳು ರಾಜಕಾರಣಿಗಳ ಮಾತನ್ನು ಕೇಳುತ್ತಾರೆ, ಕೇಳಲೇ ಬೇಕು. ಇಲ್ಲವಾದರೆ ಅವರಿಗೆ ವರ್ಗಾವಣೆ ಸೇರಿದಂತೆ ಇನ್ನಿತರೆ ರೂಪದ ಶಿಕ್ಷೆ ಕಟ್ಟಿಟ್ಟ ಬುತ್ತಿ. ಈ ಕಾರಣದಿಂದಲೇ ಕೆಲವು ಅಧಿಕಾರಿಗಳು, ಸರ್ಕಾರಿ ನೌಕರರು ಇಂತಹ ತೆರೆಮರೆಯ `ಸೂಪರ್ ಪವರ್’ಗಳ ಮುಂದೆ ಕೈಕಟ್ಟಿ ನಿಲ್ಲುತ್ತಾರೆ.

ಈ ಕುಟುಂಬ ರಾಜಕಾರಣ ಅಥವಾ ಆಡಳಿತದಲ್ಲಿ ಒಂದು ಕುಟುಂಬದ ಹಸ್ತಕ್ಷೇಪವೆಂಬುದು ದೇಶದ ಅಭಿವೃದ್ಧಿಗೆ ಅಂಟಿದ ಶಾಪವಾಗಿದೆ. ಇದನ್ನು ಬೇರುಸಹಿತವಾಗಿ ನಿರ್ಮೂಲನೆ ಮಾಡಬೇಕಾದ ಅಗತ್ಯವಿದೆ. ಇವರು ಇಂದು ಇದ್ದು ನಾಳೆ ಹೋಗುತ್ತಾರೆ. ಆದರೆ, ಕುಟುಂಬದ ಪ್ರಭಾವದಂತಹ ವಿಷವರ್ತುಲವನ್ನು ಆಡಳಿತದ ಮೇಲೆ ಬಿಟ್ಟು ಹೋಗುತ್ತಾರೆ. ಮುಂದೆ ಬರುವ ವ್ಯಕ್ತಿಯೂ ಇದೇ ಪರಿಪಾಠವನ್ನು ಬೆಳೆಸಿಕೊಂಡು ಮುಂದುವರಿದರೆ ಸಂವಿಧಾನದ ಆಶಯ, ಪ್ರಜಾತಂತ್ರ ವ್ಯವಸ್ಥೆಗೇನು ಕಿಮ್ಮತ್ತಿರುತ್ತದೆ. ಕೆಲವೊಂದಿಷ್ಟು ನಿರ್ದಿಷ್ಟ ಕುಟುಂಬಗಳ ಸದಸ್ಯರು ಮುಖ್ಯಮಂತ್ರಿ, ಸಚಿವರಾಗಿ ಅವರ ಕುಟುಂಬ ಸದಸ್ಯರು ಇಲಾಖೆಗಳನ್ನು ನಿಭಾಯಿಸುವ ಮೂಲಕ ಪ್ರಜಾತಂತ್ರದ ಕತ್ತನ್ನೇ ಹಿಸುಕಿದಂತಾಗುತ್ತದೆ.

ಇವರಾರೂ ತಮ್ಮ ಆಡಳಿತದಲ್ಲಿ ಪತ್ನಿ ಅಥವಾ ಮಕ್ಕಳನ್ನು ಹಸ್ತಕ್ಷೇಪ ಮಾಡಲು ಬಿಡಲೇ ಇಲ್ಲ. ಹೀಗಾಗಿಯೇ ಇವರೆಲ್ಲಾ ಯಶಸ್ವಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಎಸ್.ಆರ್.ಬೊಮ್ಮಾಯಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಸೇರಿದಂತೆ ಹಲವಾರು ಮಂದಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಇವರಾರೂ ತಮ್ಮ ಆಡಳಿತದಲ್ಲಿ ಪತ್ನಿ ಅಥವಾ ಮಕ್ಕಳನ್ನು ಹಸ್ತಕ್ಷೇಪ ಮಾಡಲು ಬಿಡಲೇ ಇಲ್ಲ. ಹೀಗಾಗಿಯೇ ಇವರೆಲ್ಲಾ ಯಶಸ್ವಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಅಣ್ಣನ ವಿರುದ್ಧ ಅಕ್ಕಿ ಕಳ್ಳ ಸಾಗಣೆ ಆರೋಪ ಕೇಳಿ ಬಂದು ವಿವಾದಕ್ಕೆ ಕಾರಣವಾಗಿತ್ತು. ಅವರು ತಡ ಮಾಡದೇ ಪ್ರಕರಣವನ್ನು ತನಿಖೆಗೆ ಒಪ್ಪಿಸಿದ್ದಷ್ಟೇ ಅಲ್ಲ, ಒಂದು ವೇಳೆ ಅಣ್ಣನ ವಿರುದ್ಧದ ಆರೋಪ ಸಾಬೀತಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದಾಗಿ ಘೋಷಿಸಿದ್ದರು. ತನಿಖೆ ನಂತರ ಅಣ್ಣ ನಿರ್ದೋಷಿ ಎಂದು ಸಾಬೀತಾಗಿತ್ತು. ಇನ್ನು ಜೆ.ಎಚ್.ಪಟೇಲರು ಮುಖ್ಯಮಂತ್ರಿಯಾಗಿರುವಷ್ಟು ವರ್ಷಗಳ ಕಾಲ ತಮ್ಮ ಮಕ್ಕಳನ್ನು ಆಡಳಿತದ ವಿಚಾರದಲ್ಲಿ ಮೂಗು ತೂರಿಸಲು ಬಿಡಲೇ ಇಲ್ಲ ಮತ್ತು ಅವರಾರೂ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲಿಲ್ಲ.

ಹೀಗೆ ಹಿಂದಿನವರು ಹಾಕಿಕೊಟ್ಟ ಆಡಳಿತದ ಮಾರ್ಗವನ್ನು ತುಳಿದರೆ ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ ಸೇರಿದಂತೆ ಇನ್ನೂ ಹಲವಾರು ಮಂದಿ ರಾಜಕಾರಣಿಗಳು ತಮ್ಮ ಕುಟುಂಬ ಸದಸ್ಯರನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಧಿಕಾರ ನಡೆಸುವುದರಿಂದ ದೂರವಿಟ್ಟರೆ ತಮಗೆ ಅಂಟಿಕೊಳ್ಳಬಹುದಾದ ಕಳಂಕದಿಂದ ದೂರವಾಗಬಹುದು. ಅಧಿಕಾರ ಮತ್ತು ಆದಾಯ ಎಂಬುದು ಒಂದು ರೀತಿಯ ಮಾಯೆಯಿದ್ದಂತೆ. ಇದು ಯಾರನ್ನೇ ಆಗಲಿ ಯಾವಾಗ ಬೇಕಾದರೂ ಸ್ವಾಹ ಮಾಡಿಕೊಳ್ಳಬಹುದು. ಅಂದರೆ, ಅಧಿಕಾರಕ್ಕೆ ಮುಳುಗುನೀರಾಗಬಹುದು. ಹೀಗಾಗಿ, ಜನಪರ ಕೆಲಸ ಮಾಡುತ್ತೇವೆ ಎಂದು ಜನರ ಎದುರು ವಾಗ್ದಾನ ಮಾಡಿ ಬಂದಿರುವ ಜನಪ್ರತಿನಿಧಿಗಳು ತಮ್ಮ ಅಭಿವೃದ್ಧಿಯನ್ನು ಬದಿಗಿಟ್ಟು ಜನರ ಸೇವೆಯನ್ನು ಮಾಡಿದರೆ ರಾಜ್ಯವೂ ಸುಭಿಕ್ಷವಾಗಿರುತ್ತದೆ, ನಿಷ್ಕಳಂಕ ಎಂಬ ಪದವಿಯೂ ಸಿಗುತ್ತದೆ.

Leave a Reply

Your email address will not be published.